
ಗೋರೆಗಾವ್ :ಗೋರೆಗಾವ್ ಪಶ್ಚಿಮದ ಮೋತಿಲಾಲ್ ನಗರದ ಕೈವಲ್ಯ ಶ್ಯಾಮಾನಂದ ಸ್ವಾಮೀಜಿಯವರು ಮಾರ್ಗದರ್ಶನದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ,ಬ್ರಹ್ಮಕಳಸೋತ್ಸವದ ಸಂಭ್ರಮದಲ್ಲಿದ್ದು ಆ ಪ್ರಯುಕ್ತ ಪ್ರತಿ ಮಂಗಳವಾರ ಸಂಜೆ ನಗರದ ವಿವಿಧ ಭಜನಾ ಮಂಡಳಿಗಳಿಂದ. ಮಂಡಲ ಭಜನಾ ಸಂಧ್ಯಾ ಕಾರ್ಯಕ್ರಮವು ನಡೆಯುತ್ತಿದ್ದು ಅದರ ಅಂತಿಮ ಮಂಗಳವಾರದ ಮಂಡಲ ಭಜನೆಯು ನ 14 ರಂದು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ,ಮೀರಾಗಾಂವ್, ಮೀರಾರೋಡ್ ನ ಸದಸ್ಯರ ಭಜನೆಯ ಮೂಲಕ ಸಂಪನ್ನಗೊಂಡಿದೆ.

ಕಾರ್ಯಕ್ರಮದ ನಂತರ ಭಜನಾ ಸಂಧ್ಯಾ ಮಂಡಲೋತ್ಸವದ ಪ್ರಯುಕ್ತ ಕುರಾರ್ ವಿಲೇಜ್ ಮಲಾಡ್ ನ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಯುವ ವಿಭಾಗದ ಸದಸ್ಯರಿಂದ ಕುಣಿತ ಭಜನೆ ಏರ್ಪಟ್ಟಿತ್ತು. ಬಳಿಕ ವಾರದ ಮಹಾಪೂಜೆ ಹಾಗೂ ಮಂಗಳಾರತಿ ದೇವಸ್ಥಾನದ ಆಡಳಿತ ಟ್ರಸ್ಟ್ ಉದಯ ಯಸ್ ಸಾಲಿಯಾನ್ ರವರ ನೇತೃತ್ವದಲ್ಲಿ ಜರಗಿತು.

ಬ್ರಹ್ಮಕಳಸೋತ್ಸವ ಸಮಿತಿಯ ಅಧ್ಯಕ್ಷ ಕಾಂದಿವಲಿ ರಘುನಾಥ್ ಏನ್ ಶೆಟ್ಟಿಯವರು ಭಜನಾ ತಂಡದ ಸದಸ್ಯರನ್ನು ಹಾಗೂ ನೆರೆದ ಭಕ್ತರನ್ನು ಸ್ವಾಗತಿಸಿ, ಕ್ಷೇತ್ರದಲ್ಲಿ ಡಿ 22 ರಿಂದ ಡಿ 29 ರ ತನಕ ಜರಗಲಿರುವ ಬ್ರಹ್ಮಕಳಸೋತ್ಸವದ ಸಂಕ್ಷಿಪ್ತ ವಿವರಗಳನ್ನು ನೀಡಿ ಎಲ್ಲರೂ ಈ ಪುಣ್ಯಕಾರ್ಯದಲ್ಲಿ ಪಾಲುಗೊಂಡು ಸಹಕರಿಸಬೇಕೆಂದರು. ಕೊನೆಯಲ್ಲಿ ಭಜನಾ ಕಾರ್ಯಕ್ರಮವನ್ನು ಸಾದರಪಡಿಸಿದ ಸದಸ್ಯರಿಗೆ ದೇವಸ್ಥಾನದ ಆಡಳಿತ ವಿಶ್ವಸ್ಥರು ಹಾಗೂ ಬ್ರಹ್ಮಕಳಸೋತ್ಸವ ಸಮಿತಿಯ ಸದಸ್ಯರು ಸಾಲು ಹೊದಿಸಿ ದೇವರ ಪ್ರಸಾದವನ್ನಿತ್ತು ಗೌರವಿಸಿದರು.
ದೀಪಾವಳಿಹಬ್ಬದ ಶುಭಾಶಯಗಳು