
ಪ್ರತಿಫಲಾಪೇಕ್ಷೆ ಇಲ್ಲದೆ ನಿರಂತರ ನಿಸ್ವಾರ್ಥ ಸೇವೆಯಿಂದ ದುಡಿಯುತ್ತಿರುವ ಚಿಣ್ಣರ ಬಿಂಬ ಸಂಸ್ಥೆ – ಜಯರಾಮ್ ಶೆಟ್ಟಿ ಅಜಂತ
ಮುಂಬಯಿ ನ 1.ಚಿಣ್ಣರ ಬಿಂಬ ಮುಂಬೈ ವತಿಯಿಂದ 2023- 24 ನೆ ಸಾಲಿನ ನೈರುತ್ಯ ವಲಯ ಮಟ್ಟದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮ ನವೆಂಬರ್ 26 ರ ರವಿವಾರದಂದು ಬೆಳಿಗ್ಗೆ ಸಮಯ 8:30 ರಿಂದ ಸಂತಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ನಡೆಯಿತು.

ಮಕ್ಕಳ ಉತ್ಸವವನ್ನು ಅವೆನ್ಯೂ ಹೋಟೆಲ್ನ ಮಾಲಕರಾದ ಬೋಳ ರಘುರಾಮ್ ಶೆಟ್ಟಿಯವರು ಅತಿಥಿ ಗಣ್ಯರೊಡಗೂಡಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.ಜೊತೆಗೆ ಮೀರಾ ರೋಡ್ ಶಿಬಿರದ ಚಿಣ್ಣರು ಪ್ರಾರ್ಥನೆಗೈದರು.

ಪೇಜಾವರ ಮಠದ ರಾಮದಾಸ್ ಉಪಾಧ್ಯಾಯ ಇವರು ಮಾತನಾಡುತ್ತಾ ಇಪ್ಪತ್ತು ವರ್ಷಗಳ ಹಿಂದೆ ಈ ಮರಾಠಿ ಮಣ್ಣಿನಲ್ಲಿ, ನೆಟ್ಟ ಗಿಡ ಮರಾಠಿ, ತುಳು, ಕನ್ನಡ ಹೀಗೆ ಮೂರು ರೀತಿಯ ಹಣ್ಣುಗಳನ್ನು ಕೊಡುತ್ತಿದೆ. ಈ ಚಿಣ್ಣರ ಬಿಂಬಕ್ಕೆ ಬಿಂಬದಂತಿರುವ ಪ್ರಕಾಶ್ ಭಂಡಾರಿ ಅವರಿಗೆ ಮತ್ತು ಸಮಸ್ತ ಪರಿವಾರದವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಅಭಿನಂದನೆಗಳನ್ನು ಸಲ್ಲಿಸುತ್ತಾ ಈ ಸಂಸ್ಥೆಯು ಇನ್ನಷ್ಟು ಅಭಿವೃದ್ಧಿಯನ್ನು ಕಾಣಲಿ ಎಂದು ಆಶೀರ್ವಚನ ನೀಡಿದರು.
ದೀಪ ಪ್ರಜ್ವಲನೆಗೈದ ಬೋಳ ರಘುರಾಮ್ ಶೆಟ್ಟಿಯವರು ಚಿಣ್ಣರ ಪ್ರತಿಭಾನ್ವೇಷಣೆಗೆ ಶುಭ ಹಾರೈಸಿ ಚಿಣ್ಣರನ್ನು ಆಶೀರ್ವದಿಸಿದರು.

ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ ರೈ ಸುಮತಿ ಎಜುಕೇಶನಲ್ ಟ್ರಸ್ಟ್ ಇದರ ಕಾರ್ಯಧ್ಯಕ್ಷರಾಗಿರುವ ಅರುಣೋದಯ ರೈ ಚಿಣ್ಣರ ಬಿಂಬ ಸಂಸ್ಥೆ ತನ್ನ ಶಿಸ್ತುಬದ್ಧ ಪರಿಶ್ರಮ ಮತ್ತು ಸಾಧನೆಯಿಂದಾಗಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದೆಯೇ ಹೊರತು ಯಾರದೇ ಪ್ರಭಾವದಿಂದಾಗಿ ಅಲ್ಲ. ಈ ಸಂಸ್ಥೆಯ ಮಕ್ಕಳಿಗೆ ಕಲಿಯಲು ಅಥವಾ ಯಾವುದೇ ರೀತಿಯ ಅಭ್ಯಾಸ ನಡೆಸಲು ಸ್ಥಳಾವಕಾಶವನ್ನು ನಮ್ಮ ಶಾಲೆಯಲ್ಲಿ ನೀಡಿರುವುದು ನನಗೆ ತುಂಬಾ ಸಂತೋಷ ನೀಡಿದೆ. ಇಲ್ಲಿ ಕಲಿಸುವಂತಹ ಶಿಸ್ತನ್ನು ಭವಿಷ್ಯದಲ್ಲಿಯೂ ಪಾಲಿಸುವಂತೆ ಮಕ್ಕಳಿಗೆ ಸಲಹೆ ನೀಡಿದರು.
ಗೌರವಾನ್ವಿತ ಅತಿಥಿಯಾಗಿ ಆಗಮಿಸಿದ ಮೆಟ್ರೋ ಪೊಲಿಸ್ ಇನ್ ಹೋಟೆಲಿನ ಆಡಳಿತ ನಿರ್ದೇಶಕರಾಗಿರುವ ಪ್ರವೀಣ್ ಶೆಟ್ಟಿ ಅವರು ಮಾತನಾಡಿ ಚಿಣ್ಣರ ಬಿಂಬ ಉತ್ತರೋತ್ತರ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಜಂತ ಕ್ಯಾಟರಸ್ ನ ಮಾಲಕರಾದ ಜಯರಾಮ್ ಶೆಟ್ಟಿ ಅವರು ಮಾತನಾಡಿ
ಇಪ್ಪತ್ತೊಂದು ವರ್ಷಗಳಿಂದ ಸರ್ವ ಧರ್ಮಗಳ ಮಕ್ಕಳನ್ನು ಒಗ್ಗೂಡಿಸಿಕೊಂಡು ಅವರಿಗೆ ಸಂಸ್ಕಾರ ಸಂಸ್ಕೃತಿಯನ್ನು ಕಲಿಸಿ ಕೊಡುತ್ತಾ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಈ ಚಿಣ್ಣರ ಬಿಂಬ ಸಂಸ್ಥೆ ಕ್ರಾಂತಿಯನ್ನೇ ಮಾಡಿದೆ. ಯಾವುದೇ ಶುಲ್ಕವಿಲ್ಲದ ನಿರಂತರ ನಿಸ್ವಾರ್ಥ ಸೇವೆಯಿಂದ ದುಡಿಯುತ್ತಿರುವ ಪ್ರಕಾಶ್ ಭಂಡಾರಿ ಮತ್ತು ಅವರ ತಂಡ ವನ್ನು ಕೊಂಡಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಚಿಣ್ಣರ ಬಿಂಬದ ರೂವಾರಿಯಾಗಿರುವ ಪ್ರಕಾಶ್ ಭಂಡಾರಿ ಅವರು ಮಾತನಾಡುತ್ತಾ ಪೇಜಾವರ ಮಠದಲ್ಲಿ ಪ್ರಾರಂಭವಾದ ಚಿಣ್ಣರ ಬಿಂಬ ಸಂಸ್ಥೆಯ ಸ್ಥಾಪನಾ ದಿನವನ್ನು ನೆನೆಯುತ್ತಾ ನಾವು ತಂದು ಕೊಟ್ಟ ಚಿಣ್ಣರಬಿಂಬವೆಂಬ ಗಿಡವನ್ನು ನಮ್ಮ ವಿಶ್ವೇಶ ತೀರ್ಥ ಸ್ವಾಮೀಜಿ ಗಳು ನೆಟ್ಟು ಆಶೀರ್ವದಿಸಿರುವಂಥದ್ದು, ಇಂದು ಅದು ಹೆಮ್ಮರವಾಗಿ ಬೆಳೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದರ ಭಾಗವಾಗಿರುವ ಪಾಲಕರು ಒಳ್ಳೆಯ ಮನಸ್ಸಿನವ ರಾಗಿದ್ದರಿಂದಾಗಿ ಯಶಸ್ಸು ಸಾಧ್ಯವಾಯಿತು ಎಂದು ಅಭಿಪ್ರಾಯ ಪಟ್ಟರು.
“ಕಾರ್ಯಕ್ರಮದ ಮುಖ್ಯ ಆಕರ್ಷಣೆ ಎಂಬಂತೆ ಆಗಮಿಸಿದ ಪ್ರತಿಯೊಬ್ಬ ಅತಿಥಿ ಗಣ್ಯರು ಚಿಣ್ಣರ ಬಿಂಬಕ್ಕೆ ದೊರೆತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅಭಿನಂದನೆಗಳ ಸುರಿಮಳೆಗೈದರು”
ಪ್ರಾದೇಶಿಕ ಮುಖ್ಯಸ್ಥೆ ಜಯಲಕ್ಷ್ಮಿ ಶೆಟ್ಟಿ ಅವರು ಎಲ್ಲರನ್ನು
ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಸ್ವರ್ಣಲತಾ ಅರುಣೋದಯ ರೈ , ಚಿಣ್ಣರ ಬಿಂಬದ ಮುಖ್ಯ ಸಮನ್ವಯಕಿ ಗೀತಾ ಹೇರಳ,ಕೇಂದ್ರ ಸಮಿತಿಯ ಸದಸ್ಯರಾದ ಸುಮಿತ್ರಾ ದೇವಾಡಿಗ, ಜಗದೀಶ್ ರಾವ್, ಉಷಾ ಸಪಲಿಗ ಪ್ರಾದೇಶಿಕ ಮುಖ್ಯಸ್ಥೆ ವಿನಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.