April 1, 2025
ಲೇಖನ

ಕರೆದಲ್ಲಿ ಬರುವ, ಕೇಳಿದ ವರ ಕೊಡುವ ಮೆಟ್ಕಲ್ ಗುಡ್ಡ ಗಣಪತಿ

( ಕೃಪೆ : ಚಂದ್ರಹಾಸ್ ಮೆಂಡನ್, ತುಳುನಾಡ್ ಲೈಫ್ )

ಒಂದಿಷ್ಟು ನಡಿಗೆ, ಅದೂ ಕೂಡ ಏರುಮುಖ ಕಡಿದಾದ ರಸ್ತೆಯ ಮೇಲೆ, ಅಲ್ಲಲ್ಲಿ ಸುಂದರವಾಗಿ ಮರವನ್ನು ಅಪ್ಪಿಕೊಂಡಿರುವ ಬಳ್ಳಿಗಳು, ಆ ಬಳ್ಳಿಗಳಿಗೆ ಆಸರೆ ನೀಡಿರುವ ಬೃಹತ್ ಆಕಾರದ ಮರಗಳು, ತಾವೇನೂ ಕಡಿಮೆ ಇಲ್ಲವೆನ್ನುವಂತೆ ಮೈ ಕೊಡವಿ ನಿಂತಿರುವ ಸಣ್ಣ ಸಣ್ಣ ವಿವಿಧ ತಳಿಯ ಸಸಿಗಳು, ಆ ಸಸಿಗಳೂ ನಾಚುವಂತೆ ಎದ್ದು ನಿಂತಿರುವ ಹುಲ್ಲುಗಳು.. ಹೀಗೆ ರಸ್ತೆಯ ಅಲ್ಲಲ್ಲ ರಸ್ತೆಯ ಮೂಲಕ ಸುಮಾರು 2 .5 ಕಿಲೋ ಮೀಟರ್ ದೂರ ನಡೆದುಕೊಂಡು ಸಾಗಿದರೆ  (ಬೈಕ್ ಹಾಗೂ ಇತರ ವಾಹನವನ್ನು ಕಷ್ಟದಲ್ಲಿ ಮೇಲೆ  ಓಡಿಸಿಸಿಕೊಂಡು ಹೋಗಬೇಕು) ಸಿಗುವ ರಮ್ಯ ರಮಣೀಯ ತಾಣವೇ ಮೆಟ್ಕಲ್ ಗುಡ್ಡ.

ಹೌದು, ಇದೀಗ ನಾನು ಹೇಳ ಹೊರಟಿರುವುದು ಮೆಟ್ಕಲ್ ಗುಡ್ಡ ಮಹಾ ಗಣಪತಿಯ ಮಹಿಮೆಯ ಬಗ್ಗೆ. 

ಯೂಟ್ಯೂಬ್ ಗಾಗಿ ಏನಾದರೊಂದು ಕಂಟೆಂಟ್ (ವಿಷಯ) ಬೇಕೆಂದು ಸದಾ ಹುಡುಕಾಡುತ್ತಿರುವ ನನಗೆ, ಅಂತರ್ ಜಾಲದಲ್ಲಿ ಮೆಟ್ಕಲ್ ಗುಡ್ಡ ಎಂಬ ಚಿತ್ರಣ ಕಣ್ಣಿಗೆ ಬಿತ್ತು. ಗುಡ್ಡದ ಮೇಲೆ ಗಣಪತಿ, ಕಲ್ಲು ಸಂಧಿಯಲ್ಲಿ ಹೋಗಲು ದಾರಿ, ಮೇಲೆ ನಿಂತು ಸುತ್ತ ಕಣ್ಣಾಡಿಸಿದರೆ ಎಲ್ಲೆಲ್ಲೂ ಕಾಣುವ ಸುಂದರ ಪ್ರಕೃತಿ ಹೀಗೆ….. ಇಂಟೆರ್ ನೆಟ್ ನಲ್ಲಿ ನಾನು ನೋಡಿದ ಹಾಗೂ ಮನದಲ್ಲಿ ಚಿತ್ರಿಸಿಕೊಂಡ ಚಿತ್ರಣ. ವಿಶೇಷವಾದುದೇನೋ ಇಲ್ಲಿ ಇದೆ ಎಂದು  ಸುಮಾರು ತಿಂಗಳ ಹಿಂದೆಯೇ ಇಲ್ಲಿಗೆ ಹೋಗಲು ಪ್ಲಾನ್ ಮಾಡಿದ್ದ ನನಗೆ ಅದಕ್ಕೆ ಸರಿಯಾದ ಸಮಯಾವಕಾಶ ದೊರೆಯಲಿಲ್ಲ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ  https://www.youtube.com/watch?v=vQ2Xf0JdR1c

ನ. 26 ರಂದು ಕೊನೆಗೂ ಮುಹೂರ್ತ ಕೂಡಿ ಬಂತು ನೋಡಿ !

ಅಂದು ಸ್ನೇಹಿತ, ತಮ್ಮ ನೊಂದಿಗೆ ಹೊರಟೆ… 

ಮುನ್ನಾ ದಿನ ಅಂದರೆ (ಅಂದು ಶನಿವಾರ, ನ. 25) ತಮ್ಮನಿಗೆ ಕರೆ ಮೂಲಕ ತಿಳಿಸಿದ್ದೆ. ಅವನೋ ಸದಾ ಬ್ಯುಸಿ ಮನುಷ್ಯ…. ಶೋ ರೂಮ್ ಒಂದರಲ್ಲಿ ಮ್ಯಾನೇಜರ್ ಬೇರೆ. ಜವಾಬ್ದಾರಿ ಇರುತ್ತೆ ತಾನೇ. ಟ್ಯಾಲೆಂಟೆಡ್ ಹುಡುಗ. ಬೆಳಿಗ್ಗೆ ಸುಮಾರು 9 ಗಂಟೆಗೆ ಕಣಜಾರು (ನಮ್ಮೂರ ಹೆಸರು) ಹಿರಿಯಡ್ಕ ಮಾರ್ಗವಾಗಿ ಬಜೆ (ಹಿರಿಯಡ್ಕ ದ ಸಮೀಪ ಇರುವ ಊರು, ಉಡುಪಿ ಜಿಲ್ಲೆಯಲ್ಲಿದೆ) ಸಂಕ (ಸೇತುವೆ) ದ ಮೂಲಕ ಹಾದು ಹೋದೆ. ಈ ಮೊದಲೇ ತಮ್ಮ ಹೇಳಿದ್ದ. ನಾನು ಮೇಲ್ ಬಜೆ (ಮಿತ್ತ ಬಜೆ) ಯ ಬಬ್ಬು ಸ್ವಾಮಿ ದೈವ ಸ್ಥಾನದ ಹತ್ತಿರ ನಿಲ್ಲುವೆ ಎಂದು. ಅಲ್ಲೇ ಕಾದು ನಿಂತಿದ್ದ ಆತನನ್ನು ಪಿಕಪ್ ಮಾಡಿದೆ. 

ನಂತರ ಅಲ್ಲಿಂದ ನಮ್ಮ ಪಯಣ. ಕುಕ್ಕೆಹಳ್ಳಿ ಮೂಲಕ ಬ್ರಹ್ಮಾವರ, ಬಾರ್ಕೂರು,  ಹಾಲಾಡಿ, ಸಿದ್ದಾಪುರ,  ಎಡ್ತಾಡಿ, ಶಂಕರನಾರಾಯಣ, ಕಮಲಶಿಲೆ ಹೀಗೆ ಸಿಗುವ ಊರುಗಳ ನಡುವೆ ಪಯಣ. ಈ ನಡುವೆ ಹಸಿವು ನಿಧಾನವಾಗಿ ಜೋರಾಗುತ್ತಿತ್ತು. ಹೀಗೆ ಸಣ್ಣ ಹಾಗೂ ಚೊಕ್ಕದಾದ ಹೋಟೆಲೊಂದನ್ನು ದಾರಿಯುದ್ದಕ್ಕೂ ಕತ್ತು ಉದ್ದ ಮಾಡಿ ನೋಡುತ್ತಾ, (ಭಾನುವಾರ ವಾದ್ದರಿಂದ ಅಂದು ಕೆಲವು ಹೋಟೆಲ್ ಗಳಿಗೆ ವಿಶ್ರಾಂತಿ) ಬಂದ್ ಇದ್ದರೆ ನಿರಾಶೆಯ ಮುಖ ಮಾಡುತ್ತಾ ಸಾಗುತ್ತಿದ್ದೆವು . ಬಾರ್ಕೂರು ಪೇಟೆಗಿಂತ ಮೊದಲು ನಮ್ಮನ್ನು ಕೊಂಡೊಯ್ಯುವ ಪ್ರೀತಿಯ ಎನ್ ಎಸ್ (ಬೈಕ್) ನ ಹೊಟ್ಟೆಯನ್ನೂ ತುಂಬಿಸಬೇಕಲ್ಲ.  ಹಾಗೆಯೆ ಎನ್ ಎಸ್ ಗೂ ಖುಷಿಯಾಗುವಂತೆ ಹೊಟ್ಟೆ ತುಂಬಿಸಿ ನಮ್ಮ ಹೊಟ್ಟೆ ತುಂಬಿಸಲು ಹೋಟೆಲನ್ನು ತಡಕಾಡುತ್ತಾ (ಹುಡುಕಾಡುತ್ತಾ) ಸಾಗಿದಾಗ ಹಳೆ ಕಾಲದ ಹಂಚಿನ ಹೋಟೆಲೊಂದು ಕಣ್ಣಿಗೆ ಬಿತ್ತು. ತಮ್ಮನ ಹತ್ತಿರ ಇಲ್ಲಿಗೆ ಹೋಗೋಣ ಎಂದಾಗ ಅವನೂ ಸೈ ಎಂದ. ಒಳಗೆ ಹೋದಾಗ ಒಂದು ಮೂರ್ನಾಲ್ಕು ಟೇಬಲ್ ವುಳ್ಳ ಚೊಕ್ಕವಾದ  ಹೋಟೆಲ್. ನೋಡಿ ಖುಷಿಯಾದರೂ ತಿಂಡಿ ಏನಿದೆಯೆಂದು ಕೇಳಿದಾಗ ಕೇವಲ ಅಂಬಡೆ, ಇಡ್ಲಿ ಮಾತ್ರ ಎಂದಾಗ ಮತ್ತೆ ನಿರಾಸೆ. ತಮ್ಮನ ಮೋರೆ ಸಪ್ಪೆಯಿಂದ ಕೂಡಿದ್ದು ಕಂಡು ಅವನಿಗೆ ಅಂಬೊಡೆ ಕೊಡಿ ಅಂದೆ. ನಾನು ತಟ್ಟೆಗೆ ಹಾಕಿದ ಸಣ್ಣ ಮೂರು ಇಡ್ಲಿಗಳನ್ನು ಗುಳುಂ ಎಂದು ನುಂಗಿ ಚಹಾ ಕುಡಿದರೆ ಆತ ಮಾಲ್ಟ್ ಆರ್ಡರ್ ಮಾಡಿದ್ದ. ಇಬ್ಬರೂ ಬ್ರೇಕ್ ಫಾಸ್ಟ್ ಮುಗಿಸಿ ಎದ್ದಾಗ ಎದುರುಗಡೆ ಕಪ್ಪು ಕನ್ನಡಕ ಹಾಕಿ ತಿಂಡಿಯನ್ನು ಮೆಲ್ಲುತ್ತಿದ್ದ ಅಜ್ಜನನ್ನು ನೋಡಿ ನಗು ಬಂತು. ಫೋಟೋ ತೆಗೆಯಲು ಧೈರ್ಯ ಬರಲಿಲ್ಲ. ಏನಾದರೂ ಹೇಳಿದರೆ ಎಂದು. ಕೊನೆಗೆ ಅಲ್ಲಿಂದ ಮುಂದರಿದೆವು… ಕಮಲ ಶಿಲೆಗಿಂತ ಮುಂಚೆ ಒಂದು ಹಣ್ಣಿನ  ಅಂಗಡಿಯ ಹತ್ತಿರ ಗಾಡಿ ನಿಲ್ಲಿಸಿ ತಮ್ಮನ ಹತ್ತಿರ ಹೇಳಿದೆ. ಮೊದಲೇ ನಾವು ಬೆಟ್ಟ ಹತ್ತಿ ಹೋಗಬೇಕು. ಉರಿ ಬಿಸಿಲು ಬೇರೆ. ಮಧ್ಯಾನ್ಹ ಸುಮಾರು ಹನ್ನೆರಡೂವರೆ ಗಂಟೆಯಾಗಿರಬಹುದು. ಕಿತ್ತಳೆಯನ್ನು ತೆಗೆದುಕೊಂಡು ಹೋಗೋಣ … ಅದಿದ್ದರೆ ಮಾತ್ರ ನಮಗೆ ಆಯಾಸ ವಾಗಲಾರದು. ಎಂದೆ. ತಮ್ಮ ಆಗಬಹದು ಎಂದ. ಒಂದು ಬಾಟಲಿ ನೀರನ್ನೂ ಕೊಂಡೆವು. ಅಂಗಡಿಯಾಕೆಯಲ್ಲಿ ಮೆಟ್ಕಲ್ ಗುಡ್ಡೆ ಗೆ ಎಷ್ಟು ದೂರ ಉಂಟು ಇಲ್ಲಿಂದ ಎಂದು ಕೇಳಿದಾಗ. ಒಂದು ಆರೇಳು ಕಿಲೋಮೀಟರ್ ಅಷ್ಟೇ ಅಂದಳು. ಭಟ್ರು ಇರ್ತಾರ ಅಲ್ಲಿ ಆಕೆಯನ್ನು ಕೇಳಿದಾಗ ಇಲ್ಲ.. ಇಷ್ಟೊತ್ತಿಗೆ ಇರಲ್ಲ .. ನಂಗೂ ಹೆಚ್ಚು ಅಲ್ಲಿನ ಬಗ್ಗೆ ಗೊತ್ತಿಲ್ಲ ಅಂದ್ಲು. ಓಕೆ ಅಂತ ಆಕೆಗೆ ಥ್ಯಾಂಕ್ಸ್ ಹೇಳಿ ಬೈಕ್ ಹತ್ತಿದೆವು.

ಸಾಗಿದಷ್ಟೂ ದೂರ ರಸ್ತೆ… ಮುಂದೆ ಸಾಗುವಾಗ ವಾರಾಹಿ ಜಲವಿದ್ಯುತ್ ಯೋಜನೆ ಅಂತ ಕಮಾನು ಕಾಣುತ್ತೆ. ಅದರ ಒಳಗಿಂದ ಸಾಗಬೇಕು. ಮತ್ತೆ ಮುಂದೆ ಸಾಗಿದಾಗ ದೂರದಿಂದಲೇ ದೊಡ್ಡದಾದ ಬೆಟ್ಟ ಕಂಡು ಬಂತು. ಆ ಬೆಟ್ಟದಲ್ಲಿ ಪುಟ್ಟದಾದ ದೇಗುಲವಿದೆ ಎಂಬಂತೆ ಭಾಸವಾಗುತ್ತಿತ್ತು.

ಹೇಗೂ ಕೊನೆಗೆ ಮುಂದೆ ಹೋದಾಗ ಮೆಟ್ಕಲ್ ಗುಡ್ಡೆ ಗಣಪತಿ ದೇವಸ್ಥಾನಕ್ಕೆ ದಾರಿ ಎಂಬ ಬೋರ್ಡ್ ಕಾಣಿಸಿತು. ಅಲ್ಲಿಂದ ಮತ್ತೆ ಎರಡೂವರೆ ಕಿಲೋ ಮೀಟರ್ ದೇವಸ್ಥಾನಕ್ಕೆ ರಸ್ತೆ. ಅಲ್ಲಿಂದ ಮತ್ತೆ ಪಯಣ. ಮುಂದೆ ಸಾಗಿದಾಗ ಮಣ್ಣಿನ ರಸ್ತೆ ಸಿಕ್ಕಿತು. ದೇವಸ್ಥಾನಕ್ಕೆ ಹೋಗುವ ರಸ್ತೆ ಅದು. ನೋಡಿದರೆ ಕಾಡಿನ ನಡುವೆ ಇರುವ ಏರುಮುಖ ರಸ್ತೆ. ಮುಂದೆ ಹೋಗಲು ಹೆದರಿಕೆಯಾಯಿತು. ಕಾಡು ಪ್ರಾಣಿ ಯೇನಾದರೋ ಇದ್ದರೆ ಅಂತ… ಕೊನೆಗೆ ಅಲ್ಲೇ ಹತ್ತಿರ ಇದ್ದ ಮನೆಯೊಂದರತ್ತ ಸಾಗಿದೆವು. ಮನೆಯ ಬದಿಯಲ್ಲೇ ಅಡಿಕೆ ಗಿಡದ ತೋಟ. ಗಿಡಗಳಿಗೆ ನೀರುಣಿಸಲು ಸ್ಪ್ರಿಂಕ್ಲರ್ ಅಳವಡಿಸಿದ್ದು ಅದು ಗಿಡಗಳಿಗೆ ಚೆಲ್ಲುತ್ತಿತ್ತು. ಗಿಡಗಳ ಮಧ್ಯೆ ಇದ್ದ ವ್ಯಕ್ತಿಯನ್ನು ಕೊನೆಗೂ ನಾವು ಗುರುತಿಸಿದೆವು. “ಅಣ್ಣ ಇಲ್ಲಿ ದೇವಸ್ಥಾನಕ್ಕೆ ಮೇಲೆ ಈಗ ಹೋಗಬಹುದೇ ?” ಎಂದು ಕೇಳಿದೆ. ಅದಕ್ಕೆ ಅವರು ಹಾ! ಹೋಗಬಹುದು ಅಂದರು. ಮೇಲೆ ಈಗಾಗಲೇ ಕೆಲವರು ಹೋಗಿದ್ದಾರೆ. ನೀವು ಹೋಗಬಹುದು ಎಂದು ಹೇಳಿದ್ದನ್ನು ಕೇಳಿ ಖುಷಿಯಾಯಿತು.

ಸರಿ ಎಂದು ಮತ್ತೆ ಹೊರಟೆವು. ಬೈಕ್ ನ್ನು ಕೊಂಡು ಹೋಗಲು ಕಷ್ಟ. ಮೇಲಿನ ಹಾದಿ ದುರ್ಗಮ. ಸ್ವಲ್ಪ ಮೇಲೆ ಬೈಕ್ ಕೊಂಡು ಹೋಗೋಣ ಎಂದು ಅಂದಾಜು ಮಾಡಿಯಾಯಿತು. ಕಷ್ಟದಲ್ಲಿ ಒಂದಷ್ಟು ದೂರ ಕಲ್ಲುಗಳ ನಡುವೆ ಬೈಕ್ ಮೇಲೆ ಹೋಯಿತು. ಮೇಲೆ ಒಂದೆಡೆ ಸಮತಟ್ಟಾದ ಜಗದಲ್ಲಿ ಮೂರ್ನಾಲ್ಕು ಬೈಕ್ ಗಳನ್ನು ನಿಲ್ಲಿಸಿದ್ದು ನೋಡಿ ಸಮಾಧಾನವಾಗಿ ಅಲ್ಲೇ ನಾವು ಬೈಕ್ ಪಾರ್ಕ್ ಮಾಡಿದೆವು. ಅಲ್ಲಿಂದ ಮತ್ತೆ ಮೇಲೆ ಹೋಗಲು ಅನುವಾದಾಗ ಈ ಮೊದಲೇ ಬೈಕ್ ನಿಲ್ಲಿಸಿದ್ದವರು ಬಂದರು. ಅವರಲ್ಲಿ ಮೇಲೆ ಎಷ್ಟು ದೂರ ಇದೆ… ಬೈಕ್ ಮೇಲೇರಬಹುದಾ ಎಂದು ಕೇಳಿದಾಗ.. ಇಲ್ಲ ಹೋಗೋಲ್ಲ ಕಷ್ಟ ಇದೆ ಅಂತ ಅಂದ್ರು. ಹಾ ಅಂತ ಹೇಳಿ ಮತ್ತೆ ನಡೆದುಕೊಂಡು ಸಾಗಿದೆವು. ನಡೆಯುತ್ತಾ ಹೋದ ಹಾಗೆ ಆಯಾಸವಾಗುತ್ತ ಬಂತು. ನಡುವೆ ವಿಡಿಯೋ ಮಾಡೋದು ಬೇರೆ… ಬಿಸಿಲು ಏರುತ್ತಲೇ ಇತ್ತು. ಆದರೆ ಮರದ ನಡುವೆ ಸಾಗುವ ಕಾರಣ ಅಷ್ಟೇನೂ ಗೊತ್ತಾಗಲ್ಲ.

ಆಯಾಸ ಪರಿಹರಿಸಲೆಂದು ಒಂದೆಡೆ ನಿಂತು ಅಂಗಡಿಯಿಂದ ತಂದ ಕಿತ್ತಳೆಯನ್ನು ಸವಿದೆವು. ಅಬ್ಬಾ ಅಂತಂದಾಗಿ ಮತ್ತೆ ಮೇಲೇರುತ್ತಲೇ ಸಾಗಿದೆವು…. ಅಂತೂ ಇಂತೂ ಮೆಟ್ಕಲ್ ಗುಡ್ಡದೆಡೆ ಬಂದಾಗ ಸಮಾಧಾನ. ದೂರದಿಂದಲೇ ಪುಟ್ಟದಾದದ ಸುಂದರ ದೇಗುಲ ಕಣ್ಣಿಗೆ ಮುದ ನೀಡಿತು. ದೇವಸ್ಥಾನದ ಮೆಟ್ಟಿಲು ಏರುವದಿಕ್ಕಿಂತ ಮೊದಲು ಒಂದು ಸಣ್ಣ ಕೆರೆ. ಅದರ ಮೇಲೆ ಕಬ್ಬಿಣದ ಜಾಲಿಯ ಹಾಸು ಹಾಕಿದ್ದಾರೆ. ಅಷ್ಟು ಎತ್ತರದಲ್ಲಿ ನೀರಿರುವುದು ವಿಶೇಷ.

ದೇಗುಲದ ಮೆಟ್ಟಿಲೇರಿದೆವು. ಬಾಗಿಲು ಮುಚ್ಚಿದ್ದರೂ ಹೊರಗಡೆ ದೇವರ ಫೋಟೋ ಹಾಕಿದ್ದಾರೆ. ಆ ಗಣಪನಿಗೆ ನಮಸ್ಕರಿಸಿದೆವು. ಬಳಿಕ ಅಲ್ಲಿಂದ ಪ್ರಕೃತಿ ವೀಕ್ಷಣೆ…. ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸ. ಎತ್ತ ನೋಡಿದರೂ ಹಸುರು. ಗದ್ದೆ, ತೋಟ, ಗುಡ್ಡ, ನೀರಿನ ತೊರೆ, ಜಲಪಾತ… ದೇಗುಲದ ಬದಿಯಲ್ಲೇ ಕೋಟೆಯ ರೀತಿಯಲ್ಲಿ ಕಟ್ಟಿದ ಗೋಡೆಗಳು. ಹಿಂದಿನ ಕಾಲದಲ್ಲಿ ಏನೋ ಅದು ಇದ್ದಿರಬಹುದೇನೋ. ಈಗ ಮಾತ್ರ ಗೋಡೆಗಳು ಮಾತ್ರ ಉಳಿದುಕೊಂಡಿವೆ….

ಬಂಡೆಯ ಮೇಲೆ ಕುಳಿತು ಕೆಳಗೆ ನೋಡಿದರೆ ನಿಮ್ಮ ನೋವುಗಳೆಲ್ಲವೂ ಒಂದು ಕ್ಷಣ ಮರೆತು ಹೋಗುತ್ತದೆ. ಇನ್ನು ಅದರ ಚಿತ್ರಣವನ್ನು ನೀವು ವಿಡಿಯೋ ದಲ್ಲಿಯೇ ನೋಡಿದರೆ ಚೆಂದ. ಯು ಟ್ಯೂಬ್ ಲಿಂಕ್ ಇಲ್ಲಿದೆ ನೋಡಿ. 

ಇಷ್ಟೆಲ್ಲಾ ನಮ್ಮ ಸ್ಟೋರಿ..

ಇದೀಗ ದೇವಸ್ಥಾನದ ಬಗ್ಗೆ…. 

ಸಾವಿರಾರು ವರ್ಷಗಳ ಹಿಂದೆಯೇ ಅಗಸ್ತ್ಯ ಮುನಿ ತಪವನ್ನು ಗೈದ ಪುಣ್ಯ ಕ್ಷೇತ್ರ. ತಪಸ್ಸಿಗೆ ಒಲಿದ ಶಿವನು ವನದುರ್ಗೆ ಸಹಿತ ನಾಗದೇವರ ಜೊತೆಗೆ ಈ ಪುಣ್ಯ ಕ್ಷೇತ್ರದಲ್ಲಿ ನೆಲೆಸಿ ಅಗಸ್ತ್ಯ ಮುನಿಗಳಿಂದ ಪೂಜಿಸಲ್ಪಟ್ಟ ಬಗ್ಗೆ ಅಷ್ಟ ಮಂಗಳದಲ್ಲಿ ಪುರಾವೆಗಳು ದೊರೆತಿದ್ದು ಇದೊಂದು ತಪೋಭೂಮಿ ಅನ್ನುವುದು ಸಾಕ್ಷಿ ಸಮೇತ ಸಾಬೀತಾಗಿದೆ. ನಂತರ ಯಾವುದೋ ಒಂದು ಕಠಿಣ ಪರಿಸ್ಥಿತಿಯಲ್ಲಿ ಶಿವ ಲಿಂಗಕ್ಕೆ ಹಾನಿಯಾಗುವ ಭೀತಿಯಲ್ಲಿ ಶಿವಲಿಂಗವನ್ನು ಬೆಟ್ಟದ ಮೇಲಿರುವ ಕೆರೆಗೆ ಹಾಕಿರುವ ಬಗ್ಗೆ ಸ್ಥಳದ ಮಹಿಮೆ ಹೇಳುತ್ತಿದ್ದು, ಮುಂದಿನ ದಿನಗಳಲ್ಲಿ ಪುನಃ ಶಿವಾಲಯ ನಿರ್ಮಾಣ ಮಾಡಿ ಶಿವನ ಆರಾಧನೆ ಮಾಡುವ ತನಕ ಅಗಸ್ತ್ಯ ಮುನಿಗಳ ಆತ್ಮ ಆ ಒಂದು ಸುಸಂದರ್ಭಕ್ಕಾಗಿ ಕಾಯುತ್ತಿರುವ ಬಗ್ಗೆಯೂ ಸಾಕ್ಷಿ ಸಮೇತ ಪುರಾವೆ ದೊರೆತಿದೆ. 

ಅಂದಾಜು 700-800 ವರ್ಷಗಳ ಹಿಂದೆ ಈ ಜಾಗದಲ್ಲಿ ರಾಜ ಮನೆತನದ ಗೂಢಾಚಾರ್ಯ ಕಾವಲು ಕೋಟೆಯಾಗಿ ಆಂತರಿಕ ಭದ್ರತೆಗೆ ಕಾವಲುಗಾರರು ಬಂದು ತಮ್ಮ ಕರ್ತವ್ಯ ಪಾಲನೆ ಮಾಡುವಾಗ ತಮ್ಮ ಹಿತ ರಕ್ಷಣೆಗಾಗಿ ಜೀವ ಭಯದಿಂದ ಒಂದು ಸಣ್ಣ ಗಣಪತಿ ವಿಗ್ರಹವನ್ನು ಪೂಜಿಸುತ್ತ ಬಂದಿದ್ದು (ಈಗಿರುವ ನಾಗ ಸಾನಿಧ್ಯದಲ್ಲಿ) ಕಾಲ ಕ್ರಮೇಣ ಅದು ಅರಣ್ಯ ಇಲಾಖೆಯ ಹಾಗೂ ಸ್ಥಳೀಯರ ಶ್ರಮದಿಂದ ಒಂದು ಗುಡಿಯಾಗಿ ಮಾರ್ಪಟ್ಟು ಗಣಪತಿ ಹಾಗೂ ನಾಗ ದೇವರ ವಿಷಯ ಶಕ್ತಿಯುತವಾಗಿ ಸಾನಿಧ್ಯವಾಗಿ ಪೂಜಿಸಲ್ಪಟ್ಟಿದೆ.

ಈ ಗಣಪತಿ ದೇವರು ಶಿವನ ಶಕ್ತಿಯನ್ನು ಒಳಗೊಂಡು ಕರೆದಲ್ಲಿ ಬರುವ ಕೇಳಿದ ವರ ಕೊಡುವ ಗಣಪತಿ. ಅಂಷ್ಟಮಂಗಲದಲ್ಲಿ ತಿಳಿಸಿರುವಂತೆ ಈ ಒಂದು ಕ್ಷೇತ್ರದಲ್ಲಿ ಧ್ಯಾನಕ್ಕೆ ಹೆಚ್ಚಿನ ಅನುಗ್ರಹವಿದ್ದು ಒಂದು ಧ್ಯಾನ ಕೇಂದ್ರ ಅಥವಾ ಒಮ್ಮೆ ಒಂದು ದಿನ 3 -4  ತಾಸು ಧ್ಯಾನ ಮಾಡುವುದರಿಂದ ವರ್ಷಪೂರ್ತಿ ಪೂಜೆ ಮಾಡಿದ ಫಲ ಸಿಗುವುದಾಗಿ ತೋರಿಸಿದೆ. 

ಆಡಳಿತ ಮಂಡಳಿ ಮುಂದಿನ 5  ವರ್ಷಗಳಲ್ಲಿ ಒಂದು ಸುಂದರವಾದ ಶಿವಾಲಯ ಮಾಡುವ ಸಂಕಲ್ಪದೊಂದಿಗೆ ಅದರ ರೂಪು ರೇಷೆಗಳನ್ನು ಸಿದ್ಧಪಡಿಸುತ್ತಿದೆ. (ಇದಿಷ್ಟು ದೇಗುಲದಲ್ಲಿ ಹಾಕಿದ ಫಲಕದಲ್ಲಿ ಕಂಡು ಬಂದಿದ್ದು)…

ಇದೆ ವೇಳೆ ಇನ್ನೊಂದು ಫಲಕದಲ್ಲಿ ಜೀರ್ಣೋದ್ಧಾರದ ಬಗ್ಗೆ ಫಲಕದಲ್ಲಿ ಹಾಕಲಾಗಿದ್ದು ಆ ಫಲಕದ ಫೋಟೋವನ್ನು ಅಪ್ಲೋಡ್ ಮಾಡಿದ್ದೇವೆ…

ಇವಿಷ್ಟು ಮೆಟ್ಕಲ್ ಗುಡ್ಡದ ಕಥೆ..

ಅಂದರೆ ನಾವು ನೋಡಿದ, ಅನುಭವಿಸಿದ ಕಥೆ… ನೀವು ಹೋಗಿ ಬನ್ನಿ… ಟ್ರೆಕ್ಕಿಂಗ್ ಬಗ್ಗೆ ಆಸಕ್ತಿಯಿರುವವರಿಗೆ ಇದೊಂದು ಅಚ್ಚು ಮೆಚ್ಚಿನ ತಾಣ. ಬೆಳಿಗ್ಗೆ ಬೇಗ ಹೋದರೆ ಮತ್ತಷ್ಟು ಚೆನ್ನ. ಅಥವಾ ಸಂಜೆಯೂ ಆದೀತು. ಮಧ್ಯಾನ್ಹ ಬಿಸಿಲಿಗೆ ನಮ್ಮನ್ನು ಸಂಭಾಳಿಸುವುದು ಕಷ್ಟ… ಈ ನಡುವೆ ದೇಗುಲದಕ್ಕೆ ಬಂದ ಸ್ನೇಹಿತನೋರ್ವ ನನ್ನನ್ನು ಕರೆದು ಸ್ಯಾಡ್ ಫೀಲಿಂಗ್ ವುಳ್ಳ ಒಂದು ವಿಡಿಯೋ ಮಾಡಿ ಎಂದು ಕೇಳಿಕೊಂಡ.. ಅವನಿಗೂ ಓಕೆ ಅಂದು ವಿಡಿಯೋ ತೆಗೆದು ಕೊಟ್ಟೆ… ಖುಷಿಯಲ್ಲಿ ಆತ ಅಣ್ಣ, ಇಲ್ಲೇ ಹತ್ತಿರ ಬೆಳ್ಕಲ್ ತೀರ್ಥ ಅಂತ ಇದೆ. ಒಳ್ಳೆ ಪ್ಲೇಸ್.. ಅಲ್ಲಿಗೆ ಬನ್ನಿ. ನಾವು ಬರ್ತೀವಿ ಹೋಗೋಣ ಅಂದ.. ಓಕೆ ಎಂದು ಹೇಳಿ ನಾವು ತಂದಿದ್ದ ಕಿತ್ತಳೆಯೊಂದನ್ನು ಆತನಿಗೂ ನೀಡಿ ಅಲ್ಲಿಂದ ಹಿಂದಿರುಗಿದೆವು…. 

Related posts

ಮೈಸಂದಾಯೆ

Mumbai News Desk

ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಜೆರಿಮರಿ – ತಿರುಪತಿಯಲ್ಲಿ ಹತ್ತು ವರ್ಷಗಳಿಂದ ನಿರಂತರ ಭಜನಾ ಸೇವೆ.

Mumbai News Desk

ರಾಜಪ್ರಭುತ್ವದ ಕನ್ನಡಿಯಲ್ಲಿ ಕಂಡ ‘ಕಾಮಾಗ್ನಿಮಿತ್ರ’

Chandrahas

ಮೊಗವೀರ ವ್ಯವಸ್ಥಾಪಕ ಮಂಡಳಿ 123ನೇ ವರ್ಷಕ್ಕೆ ಪಾದಾರ್ಪಣೆ

Mumbai News Desk

ಮನೆ ಮನಗಳ ಬೆಳಗಿಸುವ ದೀಪಾವಳಿ

Mumbai News Desk

“ಜ್ಞಾನ ವಿಕಾಸ ಮಂಡಳದ ಮೆಹತಾ ಕಾಲೇಜಿನ ನಲ್ಲಿ ಕನ್ನಡ ನಾಟಕ ಚಾಮ ಚಲುವೆ ಮತ್ತು ಸೋಲಿಗರ ಬಾಲೆ ಯಶಸ್ವಿ ಪ್ರದರ್ಶನ.”

Mumbai News Desk