23.5 C
Karnataka
April 4, 2025
ಲೇಖನ

ಸಾವಿಗೆ ಹೆದರದವರು….!!



ಸಾವಿಗೆ ಹೆದರದವರು….!!

ಶಾರದಾ ಅಂಚನ್, ನವಿ ಮುಂಬಯಿ


ಹನ್ನೊಂದು ತಿಂಗಳ ಮಗು ಅಪೂರ್ವನನ್ನು ಅಪ್ಪಿಕೊಂಡು ಶ್ವೇತ ಬೊಬ್ಬೆ ಹಾಕಲಾರಂಭಿಸಿದಳು.ಅಯ್ಯೋ ದೇವರೇ ಹೀಗೇಕಾಯಿತು ?ನನ್ನ ಮಗುವಿಗೇಕೆ ಈ ಕಾಯಿಲೆ ಬಂತು? ಛೆ ! ಈ ಥಾಲಸೆಮಿಯಾ ಪರೀಕ್ಷೆಯನ್ನುನಾವ್ಯಾಕೆ ಮೊದಲೇ ಮಾಡಿಕೊಂಡಿಲ್ಲ ?ಮುಂದೆ ಮಗುವಿನ ಭವಿಷ್ಯದ ಗತಿಯೇನು?ನನ್ನ ಮಗು ಎಷ್ಟು ವರುಷ ಬದುಕೀತು? ಈ ಮಗು ಪಡುವ ಕಷ್ಟವನ್ನು ನೋಡಿ ನಾನು ಸಹಿಸಿಕೊಂಡಿರುವುದಾದರೂ ಏನು? ಎನ್ನುತ್ತ್ತ ಒಂದೇ ಸಮನೆ ರೋಧಿಸಲಾರಂಭಿಸಿದಳು .ಪತಿ ನಿರಂಜನ್ ಪತ್ನಿಯ ದುಃಖ ತಾಳಲಾರದೆ ಆಕೆಯ ಹೆಗಲ ಮೇಲೆ ಕೈಯಿಟ್ಟು ಆಕೆಯನ್ನು ಸಂತೈಸಲಾರಂಭಿಸುತ್ತಾನೆ. “ಶ್ವೇತ ಕಣ್ಣೀರು ಹಾಕಬೇಡ, ಬಂದದ್ದನ್ನೆಲ್ಲ ಅನುಭವಿಸುವ ಧೈರ್ಯ ಬೇಕು,ನಮ್ಮ ಹಾಗು ಮಗುವಿನ ಹಣೆಯಲ್ಲಿ ಏನೆಲ್ಲಾ ಬರೆದಿದೆಯೋ ಅದೆಲ್ಲ ಆಗಲೇಬೇಕು. ನೀನು ಹೀಗೆ ಕಣ್ಣೀರು ಹಾಕುತ್ತ ಕುಬ್ಜಳಾದರೆ ಮುಂದೆ ಮಗುವನ್ನು ನೋಡಿಕೊಳ್ಳುವವರು ಯಾರು? ಅದಕ್ಕೆ ಎಷ್ಟು ಆಯಸ್ಸು ದೇವರು ಕೊಟ್ಟಿದ್ದಾನೋ ಅಷ್ಟು ವರುಷ ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು ತಾನೇ ? ನೀನು ಕಣ್ಣೀರು ಹಾಕಬೇಡ,ಜೀವನವನ್ನು ದೈರ್ಯವಾಗಿ ಎದುರಿಸೋಣ, ಮಗುವನ್ನು ಚೆನ್ನಾಗಿ ನೋಡಿಕೊಳ್ಳುವ ಪ್ರಯತ್ನ ಮಾಡೋಣ ,ಅದಲ್ಲದೆ ದೇವರಿಗೆ ನಾವು ಧನ್ಯವಾದ ಸಲ್ಲಿಸಬೇಕು ,ಇನ್ನೊಬ್ಬ ಮಗ ಸುಧೀರ್ ನಾರ್ಮಲ್ ಆಗಿದ್ದಾನೆ ಅದುವೇ ನಮ್ಮ ಪುಣ್ಯ ” ಎಂದಾಗ ಆತನ ಮಾತಿನಿಂದ ಸ್ವಲ್ಪ ಧೈರ್ಯ ತಂದುಕೊಂಡ ಶ್ವೇತ ಪತಿಯತ್ತ ನೋಡುತ್ತಾ'” ನೀವು ಹೇಳುವುದು ಸರಿ ,ದೇವರು ನಮಗೆ ಒಂದು ಮಗುವನ್ನಾದರೂ ಒಳ್ಳೆಯ ರೀತಿಯಿಂದ ಕರುಣಿಸಿದ್ದಾನೆ ,ಎರಡು ಮಕ್ಕಳಿಗೆ ಈ ಕಾಯಿಲೆ ಬಂದಿದ್ದರೆ ಏನು ಮಾಡಬೇಕಿತ್ತು ನಾವು ?”ಎನ್ನುತ್ತಾ ತನ್ನ ಕಣ್ಣೇರು ಒರೆಸಿಕೊಂಡು ,ತನ್ನ ಮಡಿಲಲ್ಲಿ ಮಲಗಿ ತಂದೆ ತಾಯಿಯರ ನ್ನು ಪಿಳಿಪಿಳಿ ನೋಡುತಿದ್ದ ಪುಟ್ಟ ಅಪೂರ್ವ ನನ್ನು ಅಪ್ಪಿ ಮುದ್ದಿಸಿದಳು .

ಮೂಲತಃ ಉತ್ತರಾಖಂಡದ ನಿವಾಸಿಗಳಾದ ನಿರಂಜನ್ ಹಾಗೂ ಶ್ವೇತ ಪ್ರೀತಿಸಿ ಮದುವೆಯಾಗಿದ್ದರು.ನಿರಂಜನ್ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಇಂಜೀನಿಯರ್ ಆಗಿದ್ದರೆ ಸುಮಿತ್ರಾ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದಳು. ನಿರಂಜನ್ ಥಾಲಸೆಮಿಯಾ ಮೈನರ್ ರೋಗಿಯಾಗಿದ್ದ. ಶ್ವೇತ ಕೂಡ ಥಾಲಸೆಮಿಯಾ ಮೈನರ್ ಆಗಿದ್ದಳು. ಇಬ್ಬರಿಗೂ ತಾವು ಥಾಲಸೆಮಿಯಾ ಮೈನರ್ ಎಂದು ಗೊತ್ತಾದದ್ದು ಮಗು ಅಪೂರ್ವ ಥಾಲಸೆಮಿಯಾ ಮೇಜರ್ ಎಂದು ಗೊತ್ತಾದ ನಂತರವೇ. ಗಂಡಸರು ಹಾಗು ಹೆಂಗಸರಲ್ಲಿ ಸಂತಾನಕ್ಕೆ ಪೂರಕವಾಗುವ ೨ ಜೀನ್ ಗಳಿದ್ದು ಅವುಗಳಲ್ಲಿ ತಂದೆಯ ಒಂದು ಜೀನ್ ಹಾಗೂ ತಾಯಿಯ ಒಂದು ಜೀನ್ ನನ್ನು ಹುಟ್ಟುವ ಮಗು ಪಡೆದುಕೊಂಡು ಬರುತ್ತದೆ. ಥಾಲಸೆಮಿಯಾ ಮೈನರ್ ದಂಪತಿಗಳಲ್ಲಿರುವ ಪ್ರತಿ ೨ ಜೀ ನ್ ನಲ್ಲಿ ಒಂದು ಜೀ ನ್ ನಾರ್ಮಲ್ ಆಗಿದ್ದರೆ ಮತ್ತೊಂದು ಜೀ ನ್ ಥಾಲಸೆಮಿಯಾ ಜೀ ನ್ ಆಗಿರುತ್ತದೆ.ಹುಟ್ಟುವ ಮಗು ತಂದೆ ತಾಯಿಯಿಬ್ಬರ ನಾರ್ಮಲ್ ಜೀನ್ ನನ್ನೇ ಪಡೆದುಕೊಂಡು ಬಂದರೆ ಹುಟ್ಟುವ ಮಗು ನಾರ್ಮಲ್ ಆಗಿರುತ್ತದೆ. ಹಾಗೆಯೇ ತಂದೆ- ತಾಯಿ ಇಬ್ಬರ ಥಾಲಸೆಮಿಯಾ ಜೀ ನ್ ನನ್ನು ಪಡೆದುಕೊಂಡರೆ ಹುಟ್ಟುವ ಮಗು ಥಾಲಸೆಮಿಯಾ ಮೇಜರ್ ಆಗಿರುತ್ತದೆ. ಹೀಗೆ ನಿರಂಜನ್-ಸುಮಿತ್ರಾ ದಂಪತಿಗಳ ಒಬ್ಬ ಮಗ ಹೆತ್ತವರ ನಾರ್ಮಲ್ ಜೀ ನ್ ನನ್ನೇ ಪಡೆದುದರಿಂದ ನಾರ್ಮಲ್ ಆಗಿದ್ದ ಹಾಗೆಯೇ ದುರದೃಷ್ಟವಶಾತ್ ಇನ್ನೊಂದು ಮಗು ಅಪೂರ್ವ ಥಾಲಸೆಮಿಯಾ ಮೇಜರ್ ಆಗಿದ್ದ..ಮಗು ೧೦ ತಿಂಗಳಾಗುವಾಗಲೇ ಅದರ ಆರೋಗ್ಯದಲ್ಲಿ ಏರು ಪೇರಾಗತೊಡಗಿತ್ತು .ಮಗು ಬಿಳುಚಿಕೊಳ್ಳುತಿತ್ತು.ಮೈಬಣ್ಣ ಹಳದಿ ರೂಪಕ್ಕೆ ಬಂದಿತ್ತು ,ಹೆದರಿದ ದಂಪತಿಗಳು ಮಗುವನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದರು. ಮಗುವಿನ ತಪಾಸಣೆಗಾಗಿ ರಕ್ತ -ಮೂತ್ರವೆಲ್ಲವನ್ನು ಪರಿಶೀಲಿಸಿದ ವೈದ್ಯರು ಮಗುವಿನ ಎಚ್ .ಬಿ ಇಲೆಕ್ಟ್ರೊಫೋರೆಸಿಸ್ ಟೆಸ್ಟ್ ಮಾಡುವುದರ ಮುಖಾಂತರ ಮಗು ಥಾಲಸೆಮಿಯಾ ಮೇಜರ್ ಕಾಯಿಲೆಯಿಂದ ಬಳಲುತ್ತಿರುವುದನ್ನು ತಿಳಿಸಿದರು .ಹಾಗೆಯೆ ನಿರಂಜನ್ – ಸುಮಿತ್ರಾಳ ಎಚ್ .ಬಿ ಇಲೆಕ್ಟ್ರೊಫೋರೆಸಿಸ್ ಟೆಸ್ಟ್ ಮಾಡಿಸಿದಾಗ ಇಬ್ಬರೂ ಥಾಲಸೆಮಿಯಾ ಮೈನರ್ ಆಗಿರುವುದು ದೃಢಪಟ್ಟಿತ್ತು. ಥಾಲಸೆಮಿಯಾ ಮೈನರ್ ನಲ್ಲಿ ಸ್ವಲ್ಪ ರಕ್ತಹೀನತೆ ಕಂಡುಬಂದರೂ ಜೀವಕ್ಕೇನೂ ಅಪಾಯವಿಲ್ಲ .ಹಾಗಾಗಿ ನಿರಂಜನ್ -ಶ್ವೇತ ಯಾವುದೇ ಮಹತ್ತರ ಅರೋಗ್ಯದ ತೊಂದರೆಯಿಲ್ಲದೆ ಬೆಳೆದು ಬಂದಿದ್ದರು. ಥಾಲಸೆಮಿಯಾ ಮೇಜರ್ ನಲ್ಲಿ, ಮಗು ವಿನಲ್ಲಿ ಆರೋಗ್ಯವಂತ ರಕ್ತಕಣಗಳು ಉತ್ಪತ್ತಿಯಾಗದಿರಬಹುದು ಅಥವಾ ರಕ್ತಕಣಗಳೇ ಉತ್ಪತ್ತಿಯಾಗದಿರಬಹುದು ಹೀಗಾಗಿ ಮಗುವನ್ನು ಉಳಿಸಿಕೊಳ್ಳಲು ಮಗುವಿಗೆ ಹೊರಗಿನಿಂದ ರಕ್ತ ನೀಡ ಬೇಕಾಗುತ್ತದೆ.. ಅಲ್ಲದೆ ನಿರಂತರ ರಕ್ತವರ್ಗಾವಣೆಯಿಂದಾಗಿ ಮಗುವಿನ ದೇಹದಲ್ಲಿ ಕಬ್ಬಿಣದ ಅಂಶ ವಿಪರೀತ ಹೆಚ್ಚಾಗಿ ಅದು ಮೂತ್ರಪಿಂಡ .ರಕ್ತನಾಳ,ಹಾಗು ಹೃದಯಕ್ಕೆ ತೊಂದರೆ ಕೊಡಬಲ್ಲುದು.ಇದರಿಂದಾಗಿ ಮಗುವಿನ ಆಯುಷ್ಯ ಕುಂಠಿತಗೊಳ್ಳುವುದು. ಈ ಎಲ್ಲ ವಿಚಾರಗಳನ್ನು ತಿಳಿದೂ ಮನಸ್ಸನ್ನು ಗಟ್ಟಿಮಾಡಿಕೊಂಡ ನಿರಂಜನ್ -ಶ್ವೇತ ದಂಪತಿಗಳು ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಲಾರಂಭಿಸಿದ್ದರು. ಅಗತ್ಯ ಬಿದ್ದಂತೆ ಮಗುವಿಗೆ ರಕ್ತ ವರ್ಗಾವಣೆ ಮಾಡುತ್ತ ಬರುತಿದ್ದರು.ಮಗುವಾಗಿದ್ದಾಗ ಪ್ರತೀ ಒಂದೆರಡು ತಿಂಗಳಿಗೊಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಗುವಿಗೆ ರಕ್ತ ವರ್ಗಾಯಿಸಿ ಬರುತ್ತಿದ್ದರು . ಪುಟ್ಟ ಮಗುವಿನ ದೇಹಕ್ಕೆ ದೊಡ್ಡ ಸೂಜಿ ಚುಚ್ಚಿ ದಾನಿಯ ರಕ್ತದ ಹನಿಗಳು ,ಹನಿ ಹನಿಯಾಗಿ ಮಗುವಿನ ದೇಹಕ್ಕೆ ಸೇರುವುದನ್ನು ನೋಡಿ ಅದೆಷ್ಟೋ ಭಾರಿ ಗೋಳೆಂದು ಅತ್ತಿದ್ದಳು ಶ್ವೇತ..ಇದೂ ಒಂದು ಕಾಯಿಲೆಯೇ?, ದೇವರೇ ಇನ್ಯಾವ ಮಗುವಿಗೂ ಇಂತಹ ಕಷ್ಟ ಕೊಡದಿರು ಎಂದು ಪ್ರಾರ್ಥಿಸುತಿದ್ದಳು. ಮೊದ ಮೊದಲು ಅಪೂರ್ವ ಸೂಜಿ ಚುಚ್ಚುವಾಗ ಜೋರಾಗಿ ಅಳುತ್ತಿದ್ದರೆ ನಂತರದ ದಿನಗಳಲ್ಲಿ ಅವನೇ ತನ್ನ ಕೈ ಮುಂದೆ ಒಡ್ಡುತ್ತಿದ್ದ.ಅವನಿಗೂ ಗೊತ್ತಾಗಿತ್ತು ತನಗೆ ಬದುಕಬೇಕಿದ್ದರೆ ಈ ರಕ್ತವೊಂದೇ ಆಧಾರ ಎಂದು.ಅಪೂರ್ವ ಬೆಳೆಯುತ್ತಿದ್ದಂತೆ ಅವನಿಗೆ ರಕ್ತ ದ ಅವಶ್ಯಕತೆ ಹೆಚ್ಚುತ್ತಿತ್ತು. ಪ್ರತೀ ೧೫-೨೦ ದಿನಗಳಿಗೊಮ್ಮೆ ಅವನಿಗೆ ರಕ್ತ ವರ್ಗಾವಣೆ ಬೇಕಿತ್ತು.ಇದನ್ನು ನೋಡಿ – ನೋಡಿ ಶ್ವೇತ ಸೋತರೂ ಅಪೂರ್ವ ಸೋಲಲಿಲ್ಲ.ಆತ ದೈರ್ಯದಿಂದ ಇದ್ದ , ಸಾಮಾನ್ಯ ಮಕ್ಕಳಂತೆಯೇ ಬೆಳೆಯುತ್ತಿದ್ದ. ಆಟೋಟದಲ್ಲಿ ಭಾಗಿಯಾಗುತಿದ್ದ. ಕೆಲವೊಮ್ಮೆ ಆತನಲ್ಲಿ ಅಶಕ್ತತೆ ಬರುತ್ತಿತ್ತು, ತಾನು ಥಾಲಸೆಮಿಯಾ ಮೇಜರ್ ತನ್ನ ಭವಿಷ್ಯ ಸುಧೀರ್ಘವಾದುದಲ್ಲ ಎಂದು ತಿಳಿದಿದ್ದರೂ ನಿರಾಶನಾಗದೇ ಮನಸ್ಸಿನಲ್ಲಿ ಧೈರ್ಯ ತಂದುಕೊಂಡು ತಾನು ಈ ಭೂಮಿಯ ಮೇಲೆ ಎಷ್ಟು ದಿನ ಬದುಕಿರುತ್ತೇನೋ ಅಷ್ಟು ದಿನದಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕು, ಸಾಧನೆ ಮಾಡಬೇಕು,ಹೆತ್ತವರಿಗೆ ತಾನೊಬ್ಬ ಕೆಲಸಕ್ಕೆ ಬಾರದ ಮಗನೆಂಬ ಭಾವನೆ ಬರಬಾರದು ಎಂದುಕೊಂಡು ಬಹಳ ಉತ್ಸಾಹದಿಂದ ಅಭ್ಯಾಸ ಮಾಡುತಿದ್ದ, ಅಪೂರ್ವ ಪೋಸ್ಟ್ ಗ್ರಾಜುಯೇಷನ್ ಕೂಡ ಮುಗಿಸಿ , ಒಂದು ಒಳ್ಳೆಯ ಕಂಪನಿ ಯಲ್ಲಿ ಕೆಲಸಕ್ಕೆ ಕೂಡ ಸೇರಿಕೊಂಡ .ಈಗ ಆತ ತನಗೆ ರಕ್ತದ ಅವಶ್ಯಕತೆ ಬಿದ್ದಾಗ ತಾನೇ ಸ್ವತಃ ಆಸ್ಪತ್ರೆಗೆ ಹೋಗಿ ಅಡ್ಮಿಟ್ ಆಗಿ ರಕ್ತ ವರ್ಗಾಯಿಸಿಕೊಂಡು ಬರುತಿದ್ದ. ತಾಯಿ ಒಟ್ಟಿಗೆ ಬರುತ್ತೇನೆಂದರೂ ಬೇಡ ಎಂದು ಆಕೆಯನ್ನು ಸಮಾಧಾನಿಸಿ ತಾನೊಬ್ಬನೇ ಹೋಗುತಿದ್ದ. ಯಾವ ಸಂಧರ್ಭದಲ್ಲಿ ಯಾವ ರೀತಿ ಇರಬೇಕು,ಏನೆಲ್ಲ ಶುಶ್ರೂ ಷೆ ಮಾಡಿಸಿ ಕೊಳ್ಳಬೇಕು ಎಂಬುದನ್ನು ಆತ ಅಧ್ಯಯನವನ್ನೇ ಮಾಡಿದ್ದ.ಜೊತೆಗೆ “ಯೂಥ್ ಥಾಲಸೆಮಿ ಕ್ ಏಲಿಯೆನ್ಸ್ “ಎನ್ನುವ ಸಂಸ್ಥೆಗೆ ಕೂಡಾ ಸೇರಿಕೊಂಡ .ಥಾಲಸೆಮಿಯಾ ರೋಗಿಗಳಿಗಾಗಿಯೇ ಇರುವ ಸಂಸ್ಥೆ ಅದಾಗಿದ್ದು ಥಾಲಸೆಮಿಯಾ ದೊಂದಿಗೆ ಹೇಗೆ ಬದುಕಬೇಕು, ಥಾಲಸೆಮಿಯಾವನ್ನು ಹೇಗೆ ಎದುರಿಸಬೇಕು, ಇದು ಬರದಂತೆ ಏನೆಲ್ಲ ಎಚ್ಚರಿಕೆ ವಹಿಸಬೇಕು ಎಂಬೆಲ್ಲ ವಿಚಾರಗಳನ್ನು ತಿಳಿಸುವ ಏನ್ .ಜಿ.ಓ ಅದಾಗಿತ್ತು .ಅಪೂರ್ವ ಅದರಲ್ಲಿ ತನ್ನಂತೆಯೇ ಥಾಲಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ನೋವು ನಲಿವಿನಲ್ಲಿ ಭಾಗಿಯಾಗುತಿದ್ದ.ಅಲ್ಲಿ ತಿಳಿಯಪಡಿಸುವ ಮೆಡಿಕೇಷನ್ಸ್.ವ್ಯಾಯಾಮ,ವಿಹಾರ,ಎಲ್ಲದಲ್ಲೂ ಪಾಲುಗೊಂಡು ಬದುಕಿನಲ್ಲಿ ಉತ್ಸಾಹ ತುಂಬಿಕೊಳ್ಳುತಿದ್ದ .


ಈ ಏನ್ .ಜಿ.ಓ ದಲ್ಲಿರುವ ಎಲ್ಲ ಮಕ್ಕಳು,ಯುವಕ-ಯುವತಿಯರು ಸಮಾನ ದುಃಖಿಗಳಾಗಿದ್ದರು. ಹೀಗೆ ಅದೇ ಸಂಸ್ಥೆಯ ಸದಸ್ಯೆ ಆಗಿದ್ದು ತನ್ನಂತೆಯೇ ಥಾಲಸೆಮಿಯಾ ಮೇಜರ್ ಆಗಿರುವ ಆಸ್ತಾ ಎನ್ನುವ ಹುಡುಗಿಯ ಪರಿಚಯವಾಗಿತ್ತು ಅಪೂರ್ವನಿಗೆ. ಆಸ್ತಾ ಹೆತ್ತವರಿಗೆ ಒಬ್ಬಳೇ ಮಗಳಾಗಿದ್ದಳು.ತಮ್ಮ ಮಗಳು ಥಾಲ ಸೇಮಿಯಾ ಮೇಜರ್ ಎಂದು ತಿಳಿದು ಎದೆಯೊಡೆಕೊಂಡು ಅತ್ತರು ಆಕೆಯ ತಂದೆತಾಯಿ. ಆದರೆ ಅಪೂರ್ವನ ಹೆತ್ತವರಂತೆ ಮತ್ತೆ ವಿಧಿಯಿಲ್ಲದೇ ಬದುಕಿನ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಆಸ್ತಾಳ ಬದುಕನ್ನು ಮುನ್ನಡೆಸುವಲ್ಲಿ ಅವಿರತ ಪ್ರಯತ್ನ ಪಡುತ್ತಿದ್ದರು ..ಆಕೆಗೆ ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಆಹಾರ,ಚಿಕಿತ್ಸೆ ಕೊಡಲು ಪ್ರಯತ್ನಿಸುತ್ತಿದ್ದರು. ಆಸ್ತಾ ಕೂಡ ತಾನು ಥಾಲ ಸೇಮಿಯಾ ರೋಗಿ ಎಂದು ಗೊತ್ತಾದ ಮೇಲೆ ಬದುಕಿನಲ್ಲಿ ಸೋಲದೆ ಗೆಲುವನ್ನು ಸಾಧಿಸಿಕೊಳ್ಳಲು ಮುಂದಾಗಿದ್ದಳು.ತನ್ನೆಲ್ಲ ಅಶಕ್ತತೆ,ಅರೋಗ್ಯ ಸಮಸ್ಯೆಗಳನ್ನು ಬದುಕಿನ ಸವಾಲಾಗಿಸಿಕೊಂಡು ಮುಂದೆ ಬರಲು ಪ್ರಯತ್ನಿಸುತ್ತಿದ್ದಳು. ಬಿ .ಏ .ಎಂ .ಯಸ್ ಡಿಗ್ರಿ ಮುಗಿಸಿದ ಆಸ್ತಾ ತನ್ನ ಸ್ವಂತ ಪ್ರಾಕ್ಟೀಸ್ ಪ್ರಾರಂಭಿಸಿದ್ದಳು .


ಹೀಗೆ ಪರಿಚಯವಾದ ಆಸ್ತಾ – ಅಪೂರ್ವ ಬದುಕಿನ ಈ ಯಾನದಲ್ಲಿ ಎಷ್ಟು ದಿನ ಈ ಜಗತ್ತಿನಲ್ಲಿ ಇರುತ್ತೇವೋ , ಗೊತ್ತಿಲ್ಲ ,ಆದರೆ ಇದ್ದಷ್ಟು ದಿನ ತಾವು ಜೀವನ ಸಂಗಾತಿಗಳಾಗಿರೋಣ ,ಎಂದು ನಿರ್ಧರಿಸಿದ ಇವರು ತಮ್ಮ ಹೆತ್ತವರ ಒಪ್ಪಿಗೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಆಸ್ತಾ- ಅಪೂರ್ವ ದಾಂಪತ್ಯ ಜೀವನ ಮುಂದುವರೆಯುತ್ತಿತ್ತು. ಒಬ್ಬ ರೋಗಿ ಇನ್ನೊಬ್ಬ ರೋಗಿಯ ಬಾಳು ಬೆಳಗಿಸುವ ಕಾರ್ಯಕ್ಕೆ ಮುಂದಾಗಿದ್ದರು.ತಮಗೇನಾದರೂ ಅರೋಗ್ಯ ಸಮಸ್ಯೆಗಳು ಬಂದರೆ ಒಬ್ಬರಿಗೊಬ್ಬರು ಆಶ್ರಯವಾಗುತಿದ್ದರು.
ಇಬ್ಬರೂ ಒಟ್ಟಿಗೆ ತೆರಳಿ ರಕ್ತ ವರ್ಗಾಯಿಸಿಕೊಂಡು ಬರುತಿದ್ದರು.ಕೆಲವು ಸಲ ಅಪೂರ್ವನಿಗಿಂತ ಮೊದಲೇ ಆಸ್ಥಾಳಿಗೆ
ರಕ್ತದ ಅಗತ್ಯ ಬಿದ್ದರೆ ಅಪೂರ್ವನೇ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತಿದ್ದ.ಇವರಿಬ್ಬರ ಅನ್ಯೋನ್ಯತೆ ,ಧೈರ್ಯ, ಉತ್ಸಾಹಗಳಿಂದಾಗಿ ಆಸ್ಪತ್ರೆಯ ಎಲ್ಲ ಉದ್ಯೋಗಿಗಳ ಅಚ್ಚುಮೆಚ್ಚಿನ ಜೋಡಿಯಾಗಿದ್ದರು .ಸಾವಿಗೆ ಹೆದರದೆ ದೈರ್ಯವಾಗಿದ್ದು ,ಸತ್ತರೂ ಒಟ್ಟಿಗೆ ಸಾಯುತ್ತೇವೆ ಎಂಬ ಇವರ ನಿರ್ಧಾರ ಆರೋಗ್ಯವಂತರಾಗಿಯೂ ವಿನಾಕಾರಣ ಕೊರಗುವವರಿಗೆ ಪಾಠವಾಗಿತ್ತು.


ಆಸ್ತಾ ಅನಾರೋಗ್ಯ ,ಅನೀಮಿಯಾ ದಿಂದ ತೊಂದರೆಅನುಭವಿಸಿದರೆ ಅಪೂರ್ವ ಅವಳ ಸೇವೆ ಮಾಡುತಿದ್ದ, ತಲೆ ನೇವರಿಸಿ ಆಕೆಯಲ್ಲಿ ಧೈರ್ಯ ತುಂಬುತಿದ್ದ, ಅಪೂರ್ವ ಏನಾದರೂ ಅನಾರೋಗ್ಯ ಪೀಡಿತನಾದರೆ ಆಸ್ತಾ ಅವನನ್ನು ತನ್ನ ತೊಡೆ ಮೇಲೆ ಮಲಗಿಸಿ ಸಂತೈಸುತ್ತಿದ್ದಳು. ಹೀಗೆಯೇ ಮುಂದುವರೆಯುತ್ತಿತ್ತು ಇವರ ಅನ್ಯೋನ್ಯ ಜೀವನ,ಬದುಕು ಎಲ್ಲಿಯವರೆಗೆ ಎಂದು ಇಬ್ಬರಿಗೂ ಗೊತ್ತಿಲ್ಲ, ಎಂದಾದರೂ ಒಂದು ದಿನ ಯಕೃ ತ್,ಮೂತ್ರಪಿಂಡ ,ಹೃದಯ ಕೈಕೊಟ್ಟು ಉಸಿರಾಟ ನಿಲ್ಲಬಹುದು, ಅಥವಾ ಅಂಗಾಂಗಗಳಲ್ಲಿ ರಕ್ತ ವಿರದೆ ಇದ್ದಲ್ಲಿಯೇ ಬಿದ್ದು ಜೀವ ಮರ ಕಟ್ಟಿ ಹೋಗಬಹುದು ಎಂದು ತಿಳಿದಿದ್ದರೂ ಇಬ್ಬರೂ ಸಮಾಧಾನದಿಂದ ಇದ್ದರು. ಇವರ ಹೆತ್ತವರು ಸಂಬಂಧಿಗಳು ,ಗೆಳೆಯರು,ಸಹೋದ್ಯೋಗಿಗಳು ಇವರಿಬ್ಬರ ಸುಧೀರ್ಘ ಜೀವನಕ್ಕಾಗಿ ಹಾರೈಸುತಿದ್ದರು .ತಮಗೆ ಮಕ್ಕಳನ್ನು ಪಡೆಯುವ ಅವಕಾಶ ಇಲ್ಲ ಎಂದು ಗ್ರಹಿಸಿದ ದಂಪತಿಗಳು ಅನಾಥಾಶ್ರಮವೊಂದರಿಂದ ಮಗುವನ್ನು ದತ್ತು ಸ್ವೀಕರಿಸಿ ಆ ಮಗುವಿನ ಎಲ್ಲ ಖರ್ಚನ್ನು ತಾವೇ ನೋಡಿಕೊಳ್ಳುವ ನಿರ್ಧಾರಕ್ಕೆ ಬಂದರು, ತಮ್ಮ ಆಯುಷ್ಯ ತಮ್ಮ ಕೈಯಲ್ಲಿ ಇಲ್ಲ ಎಂದು ಗ್ರಹಿಸಿದ ದಂಪತಿಗಳು ಮಗುವನ್ನು ಆಶ್ರಮದಲ್ಲಿಯೇ ಬಿಟ್ಟು ಸಮಯ ಸಿಕ್ಕಾಗಲೆಲ್ಲ ಆಶ್ರಮಕ್ಕೆ ಹೋಗಿ ಮಗುವನ್ನು ನೋಡಿಕೊಂಡು ,ಮಗುವಿಗೆ ಬೇಕು ಬೇಕಾದ್ದನ್ನೆಲ್ಲ ಕೊಡಿಸಿ ಬರುತಿದ್ದರು..


.ಬದುಕಿನ ಮೂವತ್ತು ವಸಂತಗಳನ್ನು ದಾಟಿದರೂ ಇನ್ನು ಆರೋಗ್ಯವಂತರಾಗಿಯೇ ಇರುವುದನ್ನು ತಿಳಿದ ಕೆಲವರು ಇವರ ಒಳ್ಳೆಯ ಗುಣವೇ ಇವರ ಆರೋಗ್ಯವನ್ನು ಹೆಚ್ಚಿಸಿತು ಎಂದು ಕೊಂಡಾಡುತಿದ್ದಾರೆ . ಇಂದು ಆಸ್ತಾ – ಅಪೂರ್ವ ಥಾಲಸೆಮಿಯಾ ಮಕ್ಕಳಿಗಾಗಿ ಏನ್ .ಜಿ.ಓ ಒಂದನ್ನು ಪ್ರಾರಂಭಿಸಿ ತಮ್ಮಿಂದಾದಷ್ಟು ಸಹಾಯವನ್ನೂ ಮಾಡುತ್ತ ಬರುತಿದ್ದಾರೆ. ಅಪೂರ್ವ -ಆಸ್ತಾ ಸಾವಿಗಾಗಿ ಕಾಯುತ್ತಿಲ್ಲ,.ಆದರೆ ಸಾವು ಎದುರಾದರೆ ಸಂತೋಷದಿಂದ ಸ್ವೀಕರಿಸಲು ಇಬ್ಬರೂ ತಯಾರಾಗಿದ್ದಾರೆ.ತಾವು ಇಂತಹ ಕಠಿಣ ಸನ್ನಿವೇಶದಲ್ಲೂ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದೆವು ಎನ್ನುವ ಆತ್ಮತೃಪ್ತಿ ಅವರಿಗಿದೆ..ಮನಸ್ಸಿನ ಹುಮ್ಮಸ್ಸಿಗೆ ದೇಹ ಸಹಕಾರ ಕೊಡದೆ ಇಬ್ಬರೂ ಒಂದಷ್ಟು ದೈಹಿಕ ಒತ್ತಡಕ್ಕೆ ಬೀಳುತ್ತಾರೆ.ಆದರೂ ಉಸಿರಿರಿವ ತನಕ ಸೋಲಬಾರದು ಇದುವೇ ಈ ಸುಂದರ ದಂಪತಿಗಳ ಕನಸು ,ಉತ್ಸಾಹ,ನಿರ್ಧಾರ.

Related posts

ಜನಪದ ಲೋಕದ ಕಲಾ ದಿಗ್ಗಜ – ಬಹುಮುಖ ಪ್ರತಿಭೆಯ ಗುರುಚರಣ್ ಪೊಲಿಪು

Mumbai News Desk

ದೇವಾಡಿಗ ಸಂಘ ಮುಂಬಯಿಯ ಶತಮಾನೋತ್ಸವ: ನಡೆದು ಬಂದ ದಾರಿ, ಒಂದು ಅವಲೋಕನ

Mumbai News Desk

ಭಿಕ್ಷುಕ,ಬೀದಿ ಮಗು ಮತ್ತು ಬದುಕು

Mumbai News Desk

ಮುಂಬಯಿಯಲ್ಲಿ ಆಗಸ್ಟ್ 15ರಿಂದ ನಾಗಶ್ರೀ ಜಿ ಎಸ್ ತಂಡ ಮತ್ತು ಬಡಗುತಿಟ್ಟಿನ ಖ್ಯಾತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರದರ್ಶನ

Mumbai News Desk

ಭಾರತ – ಚೀನಾ 62 ರ ಯುದ್ಧದನೆನಪುಗಳ ಅರುಣಾಚಲಕ್ಕೊಂದು ಸುತ್ತು

Mumbai News Desk

ಹನಿ ಕತೆ: ಪರಿಹಾರ

Vani Prasad