
ಭವ್ಯ ಇತಿಹಾಸ ಇರುವ ಬಿಲ್ಲವ ಸಮಾಜದಿಂದ ಒಂದು ಇಂಜಿನಿಯರಿಂಗ್ ಕಾಲೇಜು ಕೂಡ ಸ್ಥಾಪನೆ ಮಾಡಲು ಆಗದೆ ಇರುವುದು ಬೇಸರದ ಸಂಗತಿ : ಅಧ್ಯಕ್ಷ ಹರೀಶ್ ಜಿ ಅಮೀನ್
ಚಿತ್ರ: ಉಮೇಶ್ ಅಮೀನ್, ವರದಿ : ಇನ್ನಂಜೆ ಜಯರಾಮ್
ಬಿಲ್ಲವರ ಅಸೋಸಿಯೇಶನ್ ಗೆ 92 ವರ್ಷದ ಇತಿಹಾಸವಿದೆ ಇಷ್ಟರವರೆಗೆ 27 ಅಧ್ಯಕ್ಷರುಗಳು ಅಸೋಸಿಯೇಶನ್ ನನ್ನು ಮುನ್ನಡೆಸಿದ್ದಾರೆ ಅದರಲ್ಲೂ ಜಯ ಸುವರ್ಣರ ಕಾಲಾವಧಿ ಯಾರು ಮರೆಯುವಂತಿಲ್ಲ, ನಾನೀಗ 28 ನೇಯ ಅಧ್ಯಕ್ಷನಾಗಿ ನನ್ನಿಂದ ಸಾಧ್ಯವಿದ್ದಷ್ಟು ಸಮಾಜಕ್ಕೆ ಸೇವೆಯನ್ನು ಸಲ್ಲಿಸುತ್ತಿದ್ದೇನೆ, ಎಂದು ಬಿಲ್ಲವರ ಅಸೋಸಿಯೇಶನ್ ನ ಅಧ್ಯಕ್ಷ ಹರೀಶ್ ಜಿ ಅಮೀನ್ ಅವರು ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ಈ ಸಂಸ್ಥೆ ನಮ್ಮ ಪರಿವಾರದ ಆಸ್ತಿ ಅಲ್ಲ ಸಮಾಜದ ಆಸ್ತಿ, ನಮ್ಮ ಒಗ್ಗಟ್ಟಿನ ಕೊರತೆಯಿಂದ ಭವ್ಯ ಇತಿಹಾಸ ಇರುವ ಬಿಲ್ಲವ ಸಮಾಜದಿಂದ ಒಂದು ಇಂಜಿನಿಯರಿಂಗ್ ಕಾಲೇಜು ಕೂಡ ಸ್ಥಾಪನೆ ಮಾಡಲು ಆಗದೆ ಇರುವುದು ಬೇಸರದ ಸಂಗತಿ ಎಂದು ನುಡಿದರು. ಅವರು ಮುಂಬೈಯ ಪ್ರತಿಷ್ಠಿತ ಜಾತಿಯ ಸಂಘಟನೆಗಳಲ್ಲಿ ಒಂದಾದ ಬಿಲ್ಲವರ ಅಸೋಸಿಯೇಶನ್ ಮುಂಬೈ ಇದರ ಭಾಂಡುಪ್ ಸ್ಥಳೀಯ ಕಚೇರಿಯ ಸಂಯೋಜನೆಯಲ್ಲಿ ಜನವರಿ 7ರ ಆದಿತ್ಯವಾರ ಮುಲೂಂಡ್ ಪಶ್ಚಿಮದ ಮಹಾಕವಿ ಕಾಳಿದಾಸ ಸಭಾಗ್ರಹದಲ್ಲಿ ನಡೆದ ಬಿಲ್ಲವರು ಒಂದು ಇತಿಹಾಸ ಚಿಂತನ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಧಾನ ಸಂಶೋಧಕರು ಆದ ಬಾಬು ಶಿವ ಪೂಜಾರಿ ಅವರ “ಬಿಲ್ಲವರ ಗುತ್ತು” ಗ್ರಂಥದ ಮುಂಬಯಿ ಅವೃತಿ ಬಿಡುಗಡೆಗೊಳಿಸಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.
ಮೊದಲಿಗೆ ವೇದಿಕೆಯ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಬಾಂಡುಪ್ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷರಾದ ಜನಾರ್ಧನ್ ಆರ್ ಪೂಜಾರಿ ಅತಿಥಿಗಳನ್ನು ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡುತ್ತ. ನಮ್ಮ ಯುವ ಜನತೆ ತಿಳಿದುಕೊಂಡು, ನಾವೆಲ್ಲರೂ ಒಗ್ಗಟ್ಟಿನಿಂದ ಒಂದೇ ತಾಯಿಯ ಮಕ್ಕಳಂತೆ ಇರಬೇಕು ಎನ್ನುವ ದೃಷ್ಠಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದರು.
ಅಧ್ಯಕ್ಷ ಹರೀಶ್ ಜಿ ಅಮೀನ್ ಅವರು ವೇದಿಕೆಯ ಗಣ್ಯರೊಂದಿಗೆ ಸಂಶೋಧಕ ಬಾಬು ಶಿವ ಪೂಜಾರಿ ಅವರು ಬರೆದ “ಬಿಲ್ಲವರ ಗುತ್ತು” ಸಂಶೋಧನಾ ಗ್ರಂಥದ ಮುಂಬೈ ಆವೃತ್ತಿಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸಂಶೋಧನಾ ಲೇಖಕ ಬಾಬು ಶಿವ ಪೂಜಾರಿ ಹಾಗೂ ಧರ್ಮಪತ್ನಿ ಪ್ರೇಮ ಪೂಜಾರಿ ಅವರನ್ನು ಸನ್ಮಾನಿಸಲಾಯಿತು ಹಾಗೂ ಸ್ಥಳೀಯ ಸಮಿತಿಯ ಉಪಕಾರ್ಯಧ್ಯಕ್ಷರಾದ ಎಂ. ಬಿ. ಸನಿಲ್, ಗುಣವತಿ ಸನಿಲ್ ದಂಪತಿಗಳನ್ನು ಸತ್ಕರಿಸಲಾಯಿತು.

ಬಿಲ್ಲವರು ಒಂದು ಇತಿಹಾಸ ಉಪನ್ಯಾಸವನ್ನು ಮಂಡಿಸಿದ ಹಿರಿಯ ಪತ್ರಕರ್ತ, ಲೇಖಕ, ವಾಗ್ಮಿ, ದಿನೇಶ್ ಅಮೀನ್ ಮಟ್ಟು ಹಾಗೂ ಗುರು ನಾರಾಯಣ ಅಧ್ಯಯನ ಪೀಠ ಮಂಗಳೂರು ಇದರ ನಿರ್ದೇಶಕ, ತುಳು ವಿದ್ವಾಂಸಕರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಅವರನ್ನು ಗೌರವಿಸಲಾಯಿತು.
ಪುರಸ್ಕಾರವನ್ನು ಸ್ವೀಕರಿಸಿದ ಎಂ ಬೀ ಸನಿಲ್ ಪುರಸ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಹಿರಿಯ ಪತ್ರಕರ್ತ, ಲೇಖಕ, ವಾಗ್ಮಿ, ದಿನೇಶ್ ಅಮೀನ್ ಮಟ್ಟು “ಬಿಲ್ಲವರು ಒಂದು ಇತಿಹಾಸ” ಉಪನ್ಯಾಸವನ್ನು ಮಂಡಿಸಿ. ನಾವು ನಾರಾಯಣ ಗುರುಗಳ ಸಂದೇಶವನ್ನು ಮರೆತು ಕೇವಲ ಮೂರ್ತಿ ಪೂಜೆ ಹಾಗೂ ಸಂಘ ಗಳನ್ನ ಕಟ್ಟಿದ್ದೇವೆಯೆ ಹೊರತು ಸಂಘಟಿತರಾಗಲಿಲ್ಲ, ವಿದ್ಯೆಯಿಂದ ಸ್ವತಂತ್ರರಾಗಿ ಎಂದಿದ್ದರು ಆದರೆ ನಮ್ಮಲ್ಲಿ ನಮ್ಮದೇ ಅದ ಒಂದೇ ಒಂದು ಮೆಡಿಕಲ್ ಅಥವಾ ಇಂಜಿನಿಯರ್ ಕಾಲೇಜ್ ಇಲ್ಲ, ನಮ್ಮ ಎಲ್ಲಾ ಸಮಸ್ಯೆಗಳಿಗೆ ನಾರಾಯಣ ಗುರುಗಳ ಸಂದೇಶದಲ್ಲಿ ಉತ್ತರವಿದೆ. ಗುರುಗಳ ತತ್ವವನ್ನು ನೋಡಬೇಕಿದ್ದರೆ ಕೇರಳದಲ್ಲಿ ನೋಡಬೇಕು. ಭೂ ಸುಧಾರಣೆ ಯಲ್ಲಿ ಭೂಮಿ ಕಳೆದು ಕೊಂಡವರು ಎಲ್ಲಿದ್ದಾರೆ ಹಾಗೂ ಭೂಮಿ ಪಡೆದು ಕೊಂಡ ಬಿಲ್ಲವರು ಎಲ್ಲಿದ್ದೇವೆ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಗುರು ನಾರಾಯಣ ಅಧ್ಯಯನ ಪೀಠ ಮಂಗಳೂರು ಇದರ ನಿರ್ದೇಶಕ, ತುಳು ವಿದ್ವಾಂಸಕರಾದ ಡಾಕ್ಟರ್ ಗಣೇಶ್ ಅಮೀನ್ ಸಂಕಮಾರ್ ಬಿಲ್ಲವರ ಇತಿಹಾಸದ ಬಗ್ಗೆ ಉಪನ್ಯಾಸ ನೀಡುತ್ತಾ ಈ ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದ್ದಿರಿ, ಕೋಟಿ ಚೆನ್ನಯರಂತೆ ವೀರರಾಗಿದ್ದ ಮುಲ್ಕಿ ಸೀಮೆಯ ಕಾಂತಬಾರೆ, ಬೂದಾಬಾರೆ ಯಂತ ವೀರ ಪುರುಷರನ್ನು ನಾವು ಮರೆತಿದ್ದೇವೆ, ಜಗತ್ತಿನ ಇತಿಹಾಸ ತಿಳಿಯುವ ಮೊದಲು ನಮ್ಮನ್ನು, ನಮ್ಮ ಇತಿಹಾಸ, ನಮ್ಮ ಮನೆತನದ ಬಗ್ಗೆ ತಿಳಿಯಬೇಕು, ಮಕ್ಕಳಿಗೆ ನಮ್ಮ ಬಗ್ಗೆ, ನಮ್ಮ ಸಂಸ್ಕೃತಿಯ ಬಗ್ಗೆ ಕಲಿಸಬೇಕು, ಎಂದರು.
ಸಂಶೋಧನಾ ಗ್ರಂಥದ ಲೇಖಕ ಬಾಬು ಶಿವ ಪೂಜಾರಿ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತ ನಮ್ಮ ಇತಿಹಾಸದಲ್ಲಿ ಬಿಲ್ಲವರು ವೀರರು, ಯೋದರು, ಸೈನಿಕರಾಗಿ, ದಂಡ ನಾಯಕರಾಗಿ ಹೋರಾಡಿದವರು, ತುಳುನಾಡಿನ ಇತಿಹಾಸದ ನಾಯಕರು ಎಂದು ಉಲ್ಲೇಖಿಸಲ್ಪಟ್ಟಿದೆ, ಆದರೆ ಅದನ್ನು ನಾವು ತಿಳಿಯದಾಗಿದ್ದೇವೆ. ವಿಜಯನಗರದ ಅರಸರು ತುಳುವರು, ಬಿಲ್ಲವರು ಆಗಿದ್ದರು ಎಂಬುದಕ್ಕೆ ಹಲವಾರು ಶಾಸನಗಳು ಸಾಕ್ಷಿಯಾಗಿವೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು
ಸ್ಥಳೀಯ ಸಮಿತಿಯ ಕಾರ್ಯದರ್ಶಿ ಸದಾನಂದ ಪೂಜಾರಿ ಧನ್ಯವಾದ ಸಮರ್ಪಿಸಿದರು.
ಲೇಖಕ ಪತ್ರಕರ್ತ ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಜ್ಯೋತಿಕಾ ಕೋಟ್ಯಾನ್ ನಿರ್ವಹಿಸಿದರು. ಶುಭಂ ಸುವರ್ಣ ಪ್ರಾರ್ಥಿಸಿದರು ಶಂಭು ಕೆ ಸನಿಲ್, ಸದಾನಂದ ಪೂಜಾರಿ ಹರೀಶ್ ಹೆಜಮಾಡಿ ಸನ್ಮಾನ ಪತ್ರ ವಾಚಿಸಿದರು.
ಕಾರ್ಯಕ್ರಮದ ಮೊದಲು ಮತ್ತು ಮಧ್ಯಾಂತರದಲ್ಲಿ ಸ್ಥಳೀಯ ಸಮಿತಿಯ ಸದಸ್ಯೆಯರು ಮತ್ತು ಮಕ್ಕಳಿಂದ ನೃತ್ಯ ಕಾರ್ಯಕ್ರಮ ಹಾಗೂ ರಂಗ ಪೂಜಾರಿಯವರ ಪರಿಕಲ್ಪನೆಯಲ್ಲಿ “ಜಾಂಬವತಿ ಕಲ್ಯಾಣ” ಕಿರು ಯಕ್ಷಗಾನ ನಡೆಯಿತು.

ನಮ್ಮ ಇತಿಹಾಸವನ್ನು ನಾವು ತಿಳಿದುಕೊಂಡು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು, ನಮ್ಮ ಇತಿಹಾಸ ನಮಗೆ ತಿಳಿದಿಲ್ಲ ಎಂದಾದರೆ ಭವಿಷ್ಯದ ನಿರ್ಮಾಣ ಸಾಧ್ಯವಿಲ್ಲ, ಕೇವಲ ಗುರು ನಾರಾಯಣ ಪೂಜೆ ಮಾತ್ರವಲ್ಲ ಅವರ ಸಂದೇಶವನ್ನು ಪಾಲಿಸಬೇಕು, ನಮ್ಮಲ್ಲಿ ಒಗ್ಗಟ್ಟಿದ್ದರೆ ಗತ ಇತಿಹಾಸವನ್ನು ಪುನರ್ ನಿರ್ಮಿಸಬಹುದು ಎಂಬಿತ್ಯಾಗಿ ಸಂದೇಶವನ್ನು ಒಳಗೊಂಡ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಆಯೋಜಿಸಿದ ಬಿಲ್ಲವರ ಎಸೋಷಿಯೇಷನ್ ಭಾಂಡೂಪ್ ಸ್ಥಳೀಯ ಕಚೇರಿಯ ಕಾರ್ಯದ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಅಭಿನಂದನಾರ್ಹರು.
