
ಪರಿಹಾರ
ಸೋಮನಾಥ ಎಸ್. ಕರ್ಕೇರ, ಫೋನ್: 9819321186
ಶಿಂಗ ಜೀವನದಲ್ಲಿ ಬಹಳ ನೊಂದಿದ್ದು ಅವನಿಗೆ ಜೀವನವೇ ಬೇಡ ಅನಿಸುತಿತ್ತು. ಯಾವುದರಲ್ಲೂ ಆಸಕ್ತಿ ಉಳಿದಿರಲಿಲ್ಲ. ಆತ್ಮಹತ್ಯೆ ಮಾಡಿ ಬದುಕನ್ನು
ಕೊನೆಗೊಳಿಸಬೇಕೆನ್ನುವಷ್ಟರ ಮಟ್ಟಿಗೆ ಅವನ ಯೋಚನೆ ಮುಂದುವರಿದಿತ್ತು. ಒಂದು ದಿನ ಶಿಂಗ ತನ್ನ ಅಳಲನ್ನು ಆತ್ಮೀಯ ಮಿತ್ರ ಕಲ್ಲೇಶಿಯೊಂದಿಗೆ
ತೋಡಿಕೊಂಡ. ಶಿಂಗನ ಕಣ್ಣೀರ ಕತೆಯನ್ನು ತಾಳ್ಮೆಯಿಂದಲೇ ಆಲಿಸಿದ ಕಲ್ಲೇಶಿ, ಶಿಂಗನಿಗೆ ಧೈರ್ಯ ಹೇಳುತ್ತಾ “ನೀನೇನೂ ಚಿಂತಿಸಬೇಡ. ನನ್ನ ಗುರುಗಳ ಬಳಿ
ಹೋಗೋಣ . ಅವರು ಖಂಡಿತವಾಗಿಯೂ ನಿನ್ನ ಸಂಕಷ್ಟಗಳಿಗೆ ಸಮಾಧಾನವನ್ನು ಸೂಚಿಸುತ್ತಾರೆ” ಎಂದು ಶಿಂಗನನ್ನು ತನ್ನ ಗುರುಗಳ ಸಮ್ಮುಖದಲ್ಲಿ
ಹಾಜರುಪಡಿಸಿದ. ಶಿಂಗನನ್ನೊಮ್ಮೆ ಆಪಾದ ಮಸ್ತಕದ ತನಕ ನೋಡಿದ ಗುರುಗಳು
“ ನಿನ್ನ ಗ್ರಹಗತಿ ಚೆನ್ನಾಗಿಲ್ಲ. “ ಎಂದರು.
“ ನನಗೂ ಹಾಗನ್ನಿಸುತ್ತಿದೆ ಗುರುಗಳೇ, ನನ್ನ ಶತ್ರುಗಳಿಂದಾಗಿ ನಾನು ನಿರಂತರವಾಗಿ ಕಷ್ಟನಷ್ಟಗಳನ್ನು ಎದುರಿಸುತ್ತಿದ್ದೇನೆ. ಬದುಕೇ ಬೇಡ ಅನ್ನಿಸುತ್ತಿದೆ.”
ಎಂದ ಶಿಂಗ.
“ಭಯ ಪಡಬೇಡ ಮಗೂ, ನೀನೂ ಕಲ್ಲೇಶಿಯಂತೆ ನನ್ನ ಅನುಯಾಯಿಯಾಗು. ಶತ್ರುಗಳ ಕಪಿಮುಷ್ಟಿಯಿಂದ ನಿನ್ನನ್ನು ಮುಕ್ತಗೊಳಿಸುವೆ “ ಗರುಗಳು ಶಿಂಗನಿಗೆ
ಅಭಯ ನೀಡಿದರು.
“ಅದೇ ವಿಶ್ವಾಸದಿಂದ ನಾನು ನಿಮ್ಮ ಆಶ್ರಮಕ್ಕೆ ಬಂದಿದ್ದೇನೆ“
“ ನೀನು ಸರಿಯಾದ ಜಾಗಕ್ಕೆ ಬಂದಿರುವೆ ಮಗೂ. ನಾನು ನಿನ್ನಂತಹ ಸಾವಿರಾರು ಜನರನ್ನು ದು:ಖದ ಕಡಲಿನಿಂದ ಮೇಲೆತ್ತಿ ಅವರು ಜೀವನದಲ್ಲಿ ಪುನ: ನಗು
ನಗುತ್ತಾ ಇರುವಂತೆ ಮಾಡಿದ್ದೇನೆ “
“ ಹಾಗಾದರೆ ನನ್ನ ಜೀವನದಲ್ಲೂ ಮೊದಲಿನ ಸುಖ ಶಾಂತಿ ಮರಳಿ ಬರುವುದೇ ?”
“ ಖಂಡಿತವಾಗಿಯೂ. ಅದಕ್ಕೆ ಅನುಮಾನವಿಲ್ಲ..”
“ ಅದಕ್ಕಾಗಿ ನಾನೇನು ಮಾಡಬೇಕು ಗುರುಗಳೇ?”
“ ಬೇರೇನು ಮಾಡಬೇಕಾಗಿಲ್ಲ. ನನ್ನ ಉಪದೇಶಗಳನ್ನು ಚಾಚೂ ತಪ್ಪದೆ ಪಾಲಿಸು. ನಿನ್ನ ಜೀವನ ಪಾವನವಾಗುತ್ತದೆ “
“ ಸರಿ ಹಾಗೆಯೇ ಮಾಡುತ್ತೇನೆ” ಎಂದು ಶಿಂಗ ಗುರುಗಳ ಪಾದವನ್ನು ಸ್ಪರ್ಶಿಸಿದ.
“ಹುಟ್ಟಿದ ಎಲ್ಲಾ ಮನುಷ್ಯನಿಗೂ ಶತ್ರುಗಳು ಇರುತ್ತಾರೆ, ಶತ್ರುಗಳೇ ಇಲ್ಲದ ಯಾವ ಪ್ರಾಣಿಯೂ ಈ ಲೋಕದಲ್ಲಿಲ್ಲ. “
“ ನಿಮ್ಮ ಮಾತು ನಿಜ ಗುರುಗಳೇ”
“ಶತ್ರುಗಳಿರುವರೆಂದು ಭಯ ಪಡಬಾರದು. ಆ ಶತ್ರುಗಳನ್ನು ಮಿತ್ರರಂತೆಯೇ ಪ್ರೀತಿಸಬೇಕು. ಆಗ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತವೆ. “
“ಸರಿ ಗುರುಗಳೇ . ಇಂದಿನಿಂದ ನಾನೂ ನನ್ನ ಶತ್ರುಗಳನ್ನು ಮಿತ್ರರಂತೆಯೇ ಪ್ರೀತಿಸಲು ಆರಂಭಿಸುತ್ತೇನೆ “ ಶಿಂಗ ಗುರುಗಳಿಗೆ ವಚನವಿತ್ತ.
“ ಅಂದ ಹಾಗೆ ನಿನ್ನ ಶತ್ರುಗಳು ಯಾರೆಂದು ಹೇಳಿಲ್ಲವಲ್ಲ .” ಗುರುಗಳ ಪ್ರಶ್ನೆ.
“ ನನ್ನ ಶತ್ರುಗಳು ಬೇರಾರೂ ಅಲ್ಲ, ಹೆಂಡ, ಸಿಗರೇಟು, ಜೂಜಾಟ, ಸ್ತ್ರೀ ಸಂಗ……..” ಎಂದು ಶಿಂಗ ತನ್ನ ಶತ್ರುಗಳನ್ನು ಹೆಸರಿಸುವಂತೆಯೇ ಗುರುಗಳು
ಕುಳಿತಲ್ಲೇ ಮೂರ್ಛೆ ಹೋದರು.
.
.
.
.
.
.
.