
ಮಂಗಳೂರು: ‘ಊರಿನ ಕಷ್ಟ – ಕಾರ್ಪಣ್ಯಗಳ ನಿವಾರಣೆಗಾಗಿ ಶ್ರೀದೇವಿಯ ಹರಕೆ ರೂಪದಲ್ಲಿ ಹಿರಿಯರು ಆರಂಭಿಸಿದ್ದ ಕಟೀಲು ಮೇಳದ ಬಯಲಾಟ ಸೇವೆಗೆ ಐವತ್ತು ವರ್ಷ ತುಂಬಿದೆ. ಈ ಸುವರ್ಣ ಸಂಭ್ರಮವನ್ನು ಊರವರೆಲ್ಲ ಶ್ರದ್ದಾಭಕ್ತಿಗಳಿಂದ ಆಚರಿಸೋಣ’ ಎಂದು ಬೊಂಡಾಲ ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿಯ ಗೌರವಾಧ್ಯಕ್ಷ ಬಿ.ಸೀತಾರಾಮ ಶೆಟ್ಟಿ ಕರೆ ನೀಡಿದ್ದಾರೆ. ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ 2024 ಫೆಬ್ರವರಿ 14 ರಿಂದ 16 ರವರೆಗೆ ನಡೆಯುವ ಯಕ್ಷಗಾನ ಬಯಲಾಟ ಸುವರ್ಣ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸುವರ್ಣ ಸಂಭ್ರಮದ ಸಂಚಾಲಕ ಪ್ರೊ.ಭಾಸ್ಕರ ರೈ ಕುಕುವಳ್ಳಿ ಮಾತನಾಡಿ ‘ಪ್ರತಿ ವರ್ಷ ಊರಿನ ಹಬ್ಬದ ಸ್ವರೂಪದಲ್ಲಿ ಜರುಗುತ್ತಿರುವ ಬೊಂಡಾಲದ ಯಕ್ಷೋತ್ಸವ ಶಂಭೂರು ಗ್ರಾಮಸ್ಥರ ಒಂದು ಮಾದರಿ ಕಾರ್ಯಕ್ರಮವಾಗಿ ಗಮನ ಸೆಳೆದಿದೆ. ದೇವರ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ, ಹಿರಿಯ ಕಲಾವಿದರಿಗೆ ಸನ್ಮಾನ – ಪ್ರಶಸ್ತಿ ಪ್ರದಾನಗಳ ಮೂಲಕ ಇದನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ಸಮಿತಿಯ ಈ ಸೇವೆ ಸಾರ್ಥಕ’ ಎಂದು ನುಡಿದರು.
ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿಯ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಸುಪ್ರೀತ್ ಶೆಟ್ಟಿ ಬೊಂಡಾಲ ಅಂತರಗುತ್ತು ವಂದಿಸಿದರು. ಕೋಶಾಧಿಕಾರಿ ಸುನಾದ್ ರಾಜ್ ಶೆಟ್ಟಿ ನಿರೂಪಿಸಿದರು. ಸುವರ್ಣ ಸಂಭ್ರಮದ ಕಾರ್ಯಾಧ್ಯಕ್ಷ ಪದ್ಮನಾಭ ಮಯ್ಯ ಏಲಬೆ ಅವರ ನೇತೃತ್ವದಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು. ಶರತ್ ಶೆಟ್ಟಿ ಕಕ್ಕೆಮಜಲು, ನಾಗೇಶ್ ಶೆಟ್ಟಿ ಹೊಸಮನೆ, ಸತೀಶ್ ಪಕ್ಕಳ, ದೇವಿಪ್ರಸಾದ್ ಶೆಟ್ಟಿ ಬೊಂಡಾಲ, ಕೇಶವ ಮೊಂಟಪಾಲು, ರಾಕೇಶ್ ಮಾರ್ಲಾ ಬೊಂಡಾಲ ಅಂತರಗುತ್ತು, ಯಶೋಧರ ಬಂಗೇರ ಕೊಲ್ಲೂರು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಮಹಿಳಾ ವಿಭಾಗದ ಪ್ರಮುಖರು ಉಪಸ್ಥಿತರಿದ್ದರು.