
ಮಗಳೂರು: ಸಂಘಟನೆಯಲ್ಲಿ ಉತ್ತಮ ನಾಯಕತ್ವ ಉಳ್ಳ ನಾಯಕರು ಇದ್ದಾಗ ಅಬಿವೃದ್ದಿ ಮತ್ತು ಎಲ್ಲವೂ ಸುಸಾಂಗವಾಗಿ ಶ್ರೇಷ್ಠ ಮಾರ್ಗದಲ್ಲಿ ಮುಂದೆ ಸಾಗಲು ಸಾಧ್ಯವಾಗುತ್ತದೆ ಎಂದು ಮುಂಬಯಿ ಉದ್ಯಮಿ ತೋನ್ಸೆ ಆನಂದ ಶೆಟ್ಟಿ ಅವರು ಹೇಳಿದರು.
ಮುಲ್ಕಿಯ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನೂತನವಾಗಿ ನಿರ್ಮಿಸಲಾಗುವ ತೋನ್ಸೆ ಆನಂದ ಶೆಟ್ಟಿ ಓಪನ್ ಏರ್ ಗಾರ್ಡನ್ ಗೆ ಶಿಲಾನ್ಯಾಸ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶಾಲ ಹೃದಯದ ಕನ್ಯಾನ ಸದಾಶಿವ ಶೆಟ್ಟಿ ಮತ್ತು ಕೆ ಪ್ರಕಾಶ್ ಶೆಟ್ಟಿ ಬಂಟ ಸಮಾಜದ ಸ್ತಂಬಗಳು. ವಿಶಾಲ ಹೃದಯದ ಅವರಿಬ್ಬರೂ ಯುಗ ಪುರುಷರು. ಸಮಾಜದ ಅಭಿವೃದ್ದಿಯಲ್ಲಿ ಅವರಿಬ್ಬರ ಕೊಡುಗೆ ದೊಡ್ಡದಿದೆ. ಐಕಳ ಹರೀಶ್ ಶೆಟ್ಟಿ ಅವರಿಗೆ ಕನಸಿದೆ. ತಾನು ಕೈಗೊಳ್ಳುವ ಕೆಲಸ ಇದೇ ರೀತಿ ಆಗಬೇಕೆಂದು, ಆ ನಿಟ್ಟಿನಲ್ಲಿ ಅವರು ಕಾರ್ಯ ಪ್ರವೃತ್ತರಾಗುತ್ತಾರೆ. ಐಕಳ ಬಂಟ ಸಮಾಜದ ಓರ್ವ ಶ್ರೇಷ್ಠ ನಾಯಕರಾಗಿದ್ದಾರೆ ಎಂದರು.
ಶಿಲಾನ್ಯಾಸದ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮವನ್ನು ಬಪ್ಪನಾಡು ದೇಗುಲದ ಅರ್ಚಕ ಶ್ರೀಪತಿ ಉಪಾಧ್ಯಾಯ ಮತ್ತು ಗೋಪಾಲಕೃಷ್ಣ ಉಪಾಧ್ಯಾಯ ಅವರು ನೆರವೇರಿಸಿದರು.

ಒಕ್ಕೂಟದ ಮಹಾದಾನಿ, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ ಐಕಳ ಹರೀಶ್ ಶೆಟ್ಟಿ ಅವರ ನಾಯಕತ್ವದಡಿ ಬಂಟ ಸಮುದಾಯಕ್ಕೆ ವಿಶೇಷವಾದ ಶಕ್ತಿ ಬಂದಿದೆ. ಮಾತ್ರವಲ್ಲ ಸಮಾಜದಲ್ಲಿ ಬಂಟರು ಬಡವರಾಗಿ ಯಾರೂ ಇಲ್ಲ ಎಂಬ ಇತಿಹಾಸ ದಾಖಲಿಸುವ ನಿಟ್ಟಿನಲ್ಲಿ ವಿವಿಧ ಆಯಾಮಗಳ ಮೂಲಕ ಕೆಲಸ ನಡೆಯಲಿದೆ ಎಂದರು.
ಎಂಆರ್ ಜಿ ಗ್ರೂಪ್ ನ ಚೆಯರ್ ಮೆನ್, ಉದ್ಯಮಿ ಕೆ ಪ್ರಕಾಶ್ ಶೆಟ್ಟಿ ಮಾತನಾಡಿ, ಒಕ್ಕೂಟದ ಸಾಧನೆ ಬಂಟ ಸಮುದಾಯದ ಅಭಿವೃದ್ದಿ ಹಾಗೂ ಹೊಸ ಅಧ್ಯಾಯವನ್ನು ರೂಪಿಸುವ ಯೋಜನೆಗಳನ್ನು ಮತ್ತಷ್ಟು ಯಶಸ್ಸು ಕಾಣಲಿ. ನಾಲ್ಕೈದು ವರ್ಷಗಳಿಂದ ಐಕಳರ ನೇತೃತ್ವದಲ್ಲಿ ಒಕ್ಕೂಟ ದಾನಿಗಳಿಂದ ಹಣ ಪಡೆದು ಅದನ್ನು ಬಡವರಿಗೆ ವಿನೊಯೋಗಿಸುವ ಕೆಲಸ ಮಾಡುತ್ತಿದೆ. ಒಕ್ಕೂಟದ ಜನಪರ ಕೆಲಸಗಳಿಗೆ ದೈವ ದೇವರುಗಳ ಕೃಪೆ ಆಶೀರ್ವಾದ ಇರಲಿ ಎಂದು ಅವರು ಹೇಳಿದರು.
ದಾನಿ ತೋನ್ಸೆ ಆನಂದ ಶೆಟ್ಟಿ ಹಾಗೂ ಶಶಿರೇಖಾ ಶೆಟ್ಟಿ ದಂಪತಿಗಳನ್ನು ಸಮಾರಂಭದಲ್ಲಿ ವಿಶೇಷವಾಗಿ ಗೌರವಿಸಲಾಯಿತು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಬಪ್ಪನಾಡು ದೇಗುಲದ ಆಡಳಿತ ಮೊಕ್ತೇಸರ ಎನ್ ಎಸ್ ಮನೋಹರ ಶೆಟ್ಟಿ, ಪೂನಾ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಮುಂಬೈ ಬಂಟರ ಸಂಘದ ಪ್ರಾದೇಶಿಕ ಸಮಿತಿಗಳ ಸೆಂಟ್ರಲ್ ವಿಭಾಗದ ಸಮನ್ವಯಕ ರವೀಂದ್ರನಾಥ. ಎಮ್ ಭಂಡಾರಿ,ನಾಗೇಶ್ ಹೆಗ್ಡೆ, ಸುಧಾಕರ ಪೂಂಜ, ಲೋಕಯ್ಯ ಶೆಟ್ಟಿ ಮುಂಚೂರು, ನವೀನ್ ಚಂದ್ರ ಜೆ ಶೆಟ್ಟಿ ಪಡುಬಿದ್ರೆ, ಮನೋಹರ ಶೆಟ್ಟಿ ತೋನ್ಸೆ, ಹಾಗೂ ದಕ, ಉಡುಪಿ ಜಿಲ್ಲೆಯ ವಿವಿಧ ಬಂಟರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಅನೂಪ್ ಶೆಟ್ಟಿ ಸುರತ್ಕಲ್ ಪ್ರಾರ್ಥಿಸಿದರು.ಪತ್ರಕರ್ತ ಶರತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು
—————-
ಇತರ ಸಮಾಜದ ಜನರ ನೋವುಗಳನ್ನು ಅರಿತು ಸಹಕರಿಸುತಿದ್ದೇವೆ :ಐಕಳ ಹರೀಶ್ ಶೆಟ್ಟಿ
.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ ಸಮುದಾಯದ ಜನರಿಗೆ ಮಾತ್ರವಲ್ಲದೆ ನಮ್ಮ ಪರಿಸರದಲ್ಲಿ ಇರುವ ಇತರ ಸಮಾಜದ ಜನರ ನೋವುಗಳನ್ನು ಅರಿತು ಅವರಿಗೆ ಸಹಕರಿಸುವ ಜತೆಗೆ ಸಮಾಜದ ಜನರ ಏಳಿಗೆಯನ್ನು ಬಯಸುವಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟವು ನಿರಂತರ ಕಾರ್ಯಕ್ರಮಗಳ ಮೂಲಕ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.