April 2, 2025
ಧಾರಾವಾಹಿ

ವಿವಶ…..

⭕ ಧಾರವಾಹಿ ಭಾಗ 19


ಧಾರವಾಹಿ 20



ಪ್ರೇಮ ತನ್ನ ಪ್ರಿಯಕರ ತೋಮನಿಂದ ಬಸುರಿಯಾದ ವಿಷಯವು ಅವಳ ಸಹೋದರ ಅಶೋಕನಿಗೆ ತಿಳಿದು ಅವನು ಕುಪಿತನಾಗಿ ಅವಳನ್ನು ಯದ್ವಾತದ್ವ ಹೊಡೆದುದರಿಂದ ಅರೆಜೀವವಾಗಿ ಅಂಗಳದಲ್ಲಿ ಬಿದ್ದಿದ್ದ ಅವಳು ಬಳಿಕ ಕಷ್ಟಪಟ್ಟು ಎದ್ದು ಹೋಗಿ ತನ್ನ ಕೋಣೆ ಸೇರಿದಳು. ಆದರೆ ಅವಳು ಅದಾಗಲೇ ತನ್ನ ಮತ್ತು ತೋಮನ ಸಂಬoಧವನ್ನು ಮನೆಯವರಿಗೆ ತಿಳಿಸಿ, ತಾನು ಅವನನ್ನೇ ಮದುವೆಯಾಗುತ್ತೇನೆಂದು ಅವರನ್ನು ಒಪ್ಪಿಸಿ ಸಮಸ್ಯೆಯನ್ನು ಪರಿಹರಿಸಬೇಕು ಎಂದುಕೊoಡಿದ್ದವಳಿಗೆ ವಿಧಿಯಾಟದ ಆಕಸ್ಮಿಕ ತಿರುವು ಅರಿವಿಗೆ ಬರಲೇಇಲ್ಲ. ಹಾಗಾಗಿ ಇನ್ನಷ್ಟು ದುಃಖಿತಳಾದವಳನ್ನು ಏನೇನೋ ಯೋಚನೆಗಳು ಮುತ್ತಿಕೊಂಡವು. ತಾನು ತೋಮನೊಂದಿಗಿನ ಸಂಬoಧದಲ್ಲಿ ಇಷ್ಟು ಬೇಗನೇ ಎಡವಬಾರದಿತ್ತೇನೋ? ಹೀಗೇಕಾಗಿ ಹೋಯಿತು? ತಪ್ಪು ನಡೆದ ಮೇಲಾದರೂ ತಾನು ಜಾಗ್ರತೆವಹಿಸಬೇಕಿತ್ತು. ಅದನ್ನೂ ಮಾಡದೆ ಸುಮ್ಮನಿದ್ದುಬಿಟ್ಟೆನೇಕೆ? ಒಂದೆರಡು ಗಳಿಗೆಯ ದೇಹ ಸುಖಕ್ಕಾಗಿ ತನ್ನ ಮಾನವನ್ನೂ, ಮನೆ ಮರ್ಯಾದೆಯನ್ನೂ ಕೈಯಾರೆ ಹಾಳು ಮಾಡಿಬಿಟ್ಟೆನಲ್ಲ! ಹೊಟ್ಟೆಯಲ್ಲಿರುವ ಕುಡಿಯನ್ನು ಉಳಿಸಿಕೊಳ್ಳುವುದಕ್ಕಾದರೂ ತಾನು ಅಪ್ಪ, ಅಮ್ಮನಿಗೆ ಸತ್ಯವನ್ನು ಹೇಳಬೇಕಿತ್ತು. ಇದ್ಯಾವುದನ್ನೂ ಯೋಚಿಸದೆ ಬರೇ ಅವನ ಸಂಗಸುಖದಲ್ಲೇ ಮೈಮರೆತೆನೇಕೆ? ಎಂದು ಬಹಳವೇ ಕೊರಗಿದಳು. ಮರಳಿ ಅವಳನ್ನು ಮುಗಿಯದ ಪ್ರಶ್ನೆಗಳು ಕಾಡಿದವು. ಆದ್ದರಿಂದ, ಇಂಥ ಪ್ರಮಾದಕ್ಕೆ ತಾನೊಬ್ಬಳೇ ಕಾರಣಳಾ…? ಮಗಳು ಮೈನೆರೆದು ಹದಿಮೂರು ವರ್ಷ ಕಳೆದಿದ್ದರೂ ಅವಳಿಗೊಂದು ಮದುವೆ ಮಾಡಬೇಕೆಂದು ಅಪ್ಪ, ಅಮ್ಮನಿಗ್ಯಾಕೆ ಅನ್ನಿಸಲಿಲ್ಲ? ಪ್ರಾಯಕ್ಕೆ ಬಂದ ಹೆಣ್ಣಿನ ಆಸೆ ಆಕಾಂಕ್ಷೆಗಳೇನೆoಬುದು ಅಮ್ಮನಿಗಾದರೂ ತಿಳಿಯಬೇಕಿತ್ತಲ್ಲ! ಮಗಳೆಂಬ ಅಧಿಕಾರದಿಂದ ಇಷ್ಟು ವರ್ಷ ಜೀತದಾಳಿನಂತೆ ದುಡಿಸಿಕೊಂಡರೇ ಹೊರತು ಅವಳ ಜೀವನದ ಬಗ್ಗೆ ಯಾರೂ ಏನನ್ನೂ ಯೋಚಿಸಲಿಲ್ಲ ಯಾಕೆ! ಎಂದುಕೊoಡವಳಿಗೆ ಮತ್ತೆ ದುಃಖ ಒತ್ತರಿಸಿತು. ಜೊತೆಗೆ ಅಂದಿನ ಜಗಳದ ನಡುವೆ ತೋಮನು ಆಡಿ ಹೋದ ಆ ಒಂದು ಅಸಹ್ಯಕರ ಮಾತೂ ಅವಳ ಮುನ್ನೆಲೆಗೆ ಬಂತು.


ಥೂ! ನನ್ನ ತೋಮ ಅದೆಂಥ ಮಾತಾಡಿ ಹೋದ! ಅಂದರೆ ಅವನು ನನ್ನನ್ನು ಒಬ್ಬಳು ಸೂಳೆಯೆಂದು ಭಾವಿಸಿದ್ದಾನಾ…! ಬಹುಶಃ ಹಾಗೆಯೇ ಇರಬೇಕು. ಇಲ್ಲವಾದರೆ ಅವನ ಆ ಮಾತಿನ ಅರ್ಥವೇನು? ಹಾಗಾದರೆ ಅವನು ಇಷ್ಟರವರೆಗೆ ನನ್ನ ದೇಹ ಸುಖಕ್ಕಾಗಿಯೇ ಅಷ್ಟೆಲ್ಲ ರಮಿಸುವ, ಪ್ರೀತಿಸುವ ನಾಟಕವಾಡಿದನಾ? ಎಂದು ಯೋಚಿಸಿದವಳಿಗೆ ಜಿಗುಪ್ಸೆ ಹುಟ್ಟಿತು. ಆದರೂ ಅವಳ ಮನಸ್ಸು ಅದನ್ನು ಅಷ್ಟು ಬೇಗ ಒಪ್ಪಲಿಲ್ಲ. ಆದ್ದರಿಂದ, ಇಲ್ಲ, ಇಲ್ಲ! ನನ್ನ ತೋಮ ಖಂಡಿತಾ ಅಂಥವನಲ್ಲ. ಅವನೂ ನನ್ನನ್ನು ತುಂಬಾ ಪ್ರೀತಿಸುತ್ತಾನೆ ಮತ್ತು ನನ್ನೊಂದಿಗೆ ಬಾಳಲು ತುಡಿಯುತ್ತಿರುವುದೂ ಅವನ ನಿಶ್ಕಲ್ಮಶ ಪ್ರೀತಿಯಿಂದಲೇ ಅರ್ಥವಾಗುತ್ತದೆ. ಹಾಗಾಗಿಯೇ ಅವನ ಮೇಲಿನ ಪ್ರೀತಿ ಮತ್ತು ಭರವಸೆಯು ತಾನು ಮೈಮರೆಯುವಂತೆ ಮಾಡಿರಬಹುದು. ಒಂದು ಹೆಣ್ಣಿಗೆ ಗಂಡೊಬ್ಬನ ನಿರ್ಮಲ ಪ್ರೀತಿ, ವಿಶ್ವಾಸಕ್ಕಿಂತ ಬೇರೇನು ಬೇಕು! ಎಂದುಕೊoಡು ತುಸು ಹಗುರವಾದಳು. ಆದರೆ ಮರುಕ್ಷಣ ಮತ್ತೆ ಚಿಂತೆ ಕಾಡಿತು. ಏನಿದ್ದರೂ ಈಗ ಪರಿಸ್ಥಿತಿಯೇ ಕೈಮೀರಿಬಿಟ್ಟಿದೆಯಲ್ಲ ಇನ್ನೇನು ಮಾಡಲು ಸಾಧ್ಯ? ಎಂದು ಅತ್ತಳು. ಆ ಅಳುವಿನ ನಡುವೆ ಇನ್ನೊಂದು ಯೋಚನೆಯೂ ಬಂತು. ತೋಮ ಅದೇನೇ ಅಂದಿದ್ದರೂ ಅದು ಅವನು ಕೋಪದ ಬರದಲ್ಲಿ ಆಡಿದ ಮಾತಿರಬಹುದು. ತಾನು ಮದುವೆ ಎಂದಾಗುವುದಿದ್ದರೆ ಅವನನ್ನೇ! ಅವನು ತಿರಸ್ಕರಿಸಿದನೆಂದರೆ ಅವನ ಕಣ್ಣಮುಂದೆಯೇ ನೇಣು ಬಿಗಿದು ಸಾಯುವುದು ಖಂಡಿತ! ಎಂದು ನಿರ್ಧರಿಸಿದವಳು ಮೆಲ್ಲನೇ ನಿದ್ರೆಗೆ ಜಾರಿದಳು..


*
ಅಶೋಕನಿಂದ ಏಟು ತಿಂದ ತೋಮ ಅವನಿಗೂ ತಿರುಗೇಟು ಕೊಟ್ಟು ಗಂಡಸುತನವನ್ನು ಸಾಬೀತುಪಡಿಸಿ ಹಿಂದಿರುಗಿದವನು ತನ್ನ ಶೆಡ್ಡಿಗೆ ಬಂದು ರೋಷದಿಂದ ಬಾಗಿಲು ಹಾಕಿಕೊಂಡ. ರಪ್ಪನೆ ಗೋಡೆಗೊರಗಿ ಕುಳಿತು ಸಿಮೆಂಟು ಶೀಟಿನ ಸೂರು ದಿಟ್ಟಿಸುತ್ತ ಯೋಚಿಸತೊಡಗಿದ. ಆಗ ಪ್ರೇಮಾಳಿಗೆ ತನ್ನಿಂದಾದ ಅನ್ಯಾಯದ ಕುರಿತು ಅವನಲ್ಲಿ ಪಶ್ಚಾತ್ತಾಪ ಮೂಡುವ ಬದಲಿಗೆ ಅವಳ ಮನೆಯಲ್ಲಿ ನಡೆದ ಘಟನೆಯಿಂದಾಗಿ ಅವನ ಪುರುಷ ಪ್ರಧಾನ ರೋಷವೇ ಕುಣಿಯತೊಡಗಿತು. ಥೂ! ಆ ಮೂರುಕಾಸಿನವ ಎಂಥ ಅನಾಹುತ ಮಾಡಿಬಿಟ್ಟ! ನಾನು ಮನಸಾರೆ ಆಸೆಪಟ್ಟ ಹೆಣ್ಣಿಗೆ ನನ್ನಿಂದಲೇ ಅನ್ಯಾಯವಾಯಿತಲ್ಲ ಎಂಬ ಕೊರಗಿನಿಂದಲೇ ಅವಳ ಮನೆಯವರಲ್ಲಿ ಕ್ಷಮೆ ಕೇಳಿ, ಅವಳನ್ನು ನನಗೇ ಕೊಟ್ಟು ಮದುವೆ ಮಾಡುವಂತೆ ಕೇಳಲು ತಾನು ಅವನ ಮನೆ ಬಾಗಿಲಿಗೆ ಹೋದದ್ದು. ಆದರೆ ನಾನು ಬಂದ ವಿಷಯವನ್ನೇ ಹೇಳಲು ಅವಕಾಶ ಕೊಡದೆ ಎಲ್ಲವನ್ನೂ ಕೆಡಿಸಿಬಿಟ್ಟನಲ್ಲ ನಾಯಿ! ಇನ್ನು ನಾನೇಕೆ ಸುಮ್ಮನಿರಬೇಕು. ಅವರಿಗೆ ಬೇಡವಾದ ಮಾನ ಮರ್ಯಾದೆ ನನಗ್ಯಾಕೆ? ಥೂ! ಬೋಳಿಮಗ ಹೇಗೆ ಓಡಿ ಬಂದು ಮುಖ ಮೂತಿ ನೋಡದೆ ಹೊಡೆದುಬಿಟ್ಟ! ಇಲ್ಲ ಅವನನ್ನು ಸುಮ್ಮನೆ ಬಿಡಲಿಕ್ಕಿಲ್ಲ. ಒಂದು ಗತಿ ಕಾಣಿಸಿಯೇ ಶುದ್ಧ! ಎಂದು ಕಟಕಟ ಹಲ್ಲು ಕಡಿದವನ ಮನಸ್ಸು ಇನ್ನಷ್ಟು ರೊಚ್ಚಿಗೆದ್ದಿತು. ಕೂಡಲೇ ಎದ್ದು ಅಡುಗೆ ಕೋಣೆಗೆ ಹೋದ. ಅಂದು ಬೆಳಿಗ್ಗೆ ಹೆಲನಾಬಾಯಿ ಭಟ್ಟಿ ಇಳಿಸುತ್ತಲೇ ಬಸಿದು ಕೊಟ್ಟಿದ್ದ ಸಾರಾಯಿ ಚೊಂಬಿನಲ್ಲಿತ್ತು. ಅದರಲ್ಲಿ ಅರ್ಧದಷ್ಟನ್ನು ಬೆಳಿಗ್ಗೆಯೇ ಕುಡಿದು ಉಳಿದದ್ದನ್ನು ಸಂಜೆಗಾದೀತೆoದುಕೊoಡು ಇಟ್ಟಿದ್ದ. ಈಗ ಅದನ್ನು ಕಾಣುತ್ತಲೇ ಸೋರಿ ಹೋಗಿದ್ದ ಚೈತನ್ಯವು ಮರಳಿ ಹೆಡೆಯೆತ್ತಿತು. ಚೊಂಬನ್ನೆತ್ತಿ ಹೊರಗೆ ತಂದ. ನಂಜಿಕೊಳ್ಳಲು ಶಂಕರನ ಗೂಡಂಗಡಿಯ ಒಣ ಸಿಗಡಿ ಮೀನಿನ ಚಟ್ನಿ ಇತ್ತು. ಅರ್ಧ ಚೊಂಬನ್ನು ಅರ್ಧ ಗಂಟೆಯಲ್ಲಿ ಹೊಟ್ಟೆಗಿಳಿಸಿದ. ಹೊಟ್ಟೆ ಮೊದಲೇ ಹಸಿದಿತ್ತು. ಆದರೆ ಅದಕ್ಕಾಗಿಯೇ ಪ್ರೇಮಾಳ ಮನೆಯತ್ತ ಹೋಗಿದ್ದ. ಅಲ್ಲಿ ಹೊಟ್ಟೆಗೆ ಬೀಳುವ ಬದಲು ಬೆನ್ನು ಮತ್ತು ಮೂತಿಗೆ ಬಿದ್ದಿತ್ತು. ಈಗ ಮತ್ತೆ ಹಸಿವು ಕಾಣಿಸಿಕೊಂಡಾಗ ಎದ್ದು ತೂರಾಡುತ್ತ ಒಳಗೆ ಹೋದ. ಮುಂಜಾನೆ ಮಾಡಿಟ್ಟಿದ್ದ ಸಪ್ಪೆ ಗಂಜಿಯಿತ್ತು. ಅಲುಮೀನಿಯಂ ಬಟ್ಟಲಿಗೆ ಅದನ್ನು ಬಗ್ಗಿಸಿಕೊಂಡ. ಸಿಗಡಿ ಚಟ್ನಿಯನ್ನು ಅದಕ್ಕೆ ಸುರುವಿ ಕಲಸಿಕೊಂಡು ಎರಡು ಬಟ್ಟಲುಂಡು ತೇಗಿದ. ಕಂಟ್ರಿ ಸಾರಾಯಿಯಿಂದ ಮಂಡೆ ಭಾರವಾದಂತೆ ಗಂಜಿಯಿoದ ಹೊಟ್ಟೆಯೂ ತುಂಬಿತು. ಎಂಜಲು ಬಟ್ಟಲನ್ನು ಕಾಲಿನಿಂದ ದೂರ ತಳ್ಳಿದವನು ಅಲ್ಲೇ ಬಿದ್ದುಕೊಂಡ. ಕುಡಿದು ಮತ್ತೇರಿ ಉದ್ರಿಕ್ತನಾದವನು ಕೆಲಹೊತ್ತು ಅಶೋಕನನ್ನು ಅವಾಚ್ಯವಾಗಿ ಬೈಯ್ಯುತ್ತ ನಿದ್ರೆಗೆ ಜಾರಿದ.


*
ಗಲಾಟೆ ನಡೆದ ರಾತ್ರಿಯಿಂದ ಪ್ರೇಮಾಳ ಮನೆಯಲ್ಲಿ ಸ್ಮಶಾನ ಮೌನ ಆವರಿಸಿತ್ತು. ಅಂಗರ ಮತ್ತು ಅಶೋಕರಿಬ್ಬರೂ ಮನೆಬಿಟ್ಟು ಕದಲಲಿಲ್ಲ. ಅಶೋಕ ದಿನವಿಡೀ ಮುಸುಕೆಳೆದು ಮಲಗಿದರೆ ಅಂಗರ ತೋಟ ಸುತ್ತುತ್ತಲೋ ತನ್ನ ಅಂಕದ ಕೋಳಿಗಳ ಆರೈಕೆಯಲ್ಲೋ ದಿನ ಕಳೆದ. ಇತ್ತ ತಾಯಿಗೆ ಮಗಳ ಮೇಲೂ ಮಗಳಿಗೆ ಸ್ವತಃ ತನ್ನ ಮೇಲೂ ಜಿಗುಪ್ಸೆ ಮೂಡಿತ್ತು. ಇಬ್ಬರೂ ಉಪವಾಸವಿದ್ದು ಬಿಟ್ಟಿದ್ದರು. ಆದರೆ ಎರಡನೆಯ ದಿನ ತುಸು ಸ್ಥಿಮಿತಕ್ಕೆ ಬಂದ ದುರ್ಗಕ್ಕ ಗಂಡ, ಮಕ್ಕಳಿಗಾಗಿ ತನ್ನ ಹತಾಶೆಯನ್ನು ಬದಿಗೊತ್ತಿ ಎದ್ದು ಹೋಗಿ ಅನ್ನಕ್ಕೆ ನೀರಿಟ್ಟಳು. ಅಂಗರ ಹಿಂದೆಲ್ಲ ದಿನಪೂರ್ತಿ ಕುಡಿಯುವ ಚಟವಿದ್ದವನಾದರೂ ಮದುವೆಯಾದ ನಂತರ ಶಿಸ್ತು ಮತ್ತು ಗೌರವದಿಂದ ಬಾಳುತ್ತ ಸಂಜೆಯ ಹೊತ್ತು ಮಾತ್ರ ಒಂದಿಷ್ಟು ಕುಡಿಯುವ ನಿಯಮವಿಟ್ಟುಕೊಂಡು ಹೆಂಡತಿ ಮಕ್ಕಳೊಂದಿಗೆ ಸಂತೋಷದಿoದ ಬದುಕುವುದನ್ನು ರೂಢಿಸಿಕೊಂಡಿದ್ದ. ಆದರೆ ಇಂದು ತನ್ನ ಮನೆಯ ಮಗಳೇ ಕೆಟ್ಟು ನಿಂತಿರುವ ಚಿಂತೆ ಅವನನ್ನು ತೀವ್ರ ಕುಗ್ಗಿಸಿಬಿಟ್ಟಿತ್ತು. ಅಷ್ಟಲ್ಲದೇ ಆ ಸುದ್ದಿಯು ಅದು ಹೇಗೋ ಊರಿಡೀ ಹಬ್ಬಿಯೂಬಿಟ್ಟಿತ್ತು. ಹಾಗಾಗಿ ಅಂಗರನ ಹತ್ತಿರದ ಗೆಳೆಯರಾದ ಸಂಜೀವ ಮತ್ತು ಪಿಜಿನರು ಆವತ್ತು ಅವನ ಮನೆಗೆ ಬಂದು ಅವನಿಗೆ ಸಮಾಧಾನ ಹೇಳಲು ಮುಂದಾಗಿ, ‘ನೋಡು ಅಂಗರಾ, ಆದದ್ದು ಆಗಿ ಹೋಯ್ತು. ಇನ್ನು ಮೂಲೆಯಲ್ಲಿ ಕುಳಿತುಕೊಂಡು ಮಂಡೆ ಹಾಳು ಮಾಡಿಕೊಂಡರೆ ಹೋದ ಮಾನ ಮತ್ತೆ ಬರುತ್ತದಾ ಹೇಳು? ಈಗಿನ ಹೆಣ್ಣುಮಕ್ಕಳು ನಮ್ಮ ಕಾಲದ ಹೆಣ್ಣು ಮಕ್ಕಳಂತಲ್ಲ. ಅವಳನ್ನು ನೀನು ಚಿಕ್ಕಂದಿನಿoದಲೇ ತಗ್ಗಿ ಬಗ್ಗಿಸಿ ಬೆಳೆಸಬೇಕಿತ್ತು. ಆ ತೋಮ ಎಲ್ಲಿಂದ ಬಂದವನು, ಎಂಥವನು, ಯಾವ ಜಾತಿಯವನು ಎಂದು ಯಾವುದನ್ನೂ ತಿಳಿದುಕೊಳ್ಳದೆ ಮನೆಯೊಳಗೆ ಬಿಟ್ಟುಕೊಂಡದ್ದು ನಿನ್ನದೇ ತಪ್ಪಲ್ಲವಾ! ಇನ್ನು ಚಿಂತೆಪಟ್ಟರೆ ಪ್ರಯೋಜನವೇನು? ಏಳು, ಮುಂದೆ ಏನು ಮಾಡಬೇಕೆನ್ನುವುದನ್ನು ಯೋಚಿಸುವ. ಅವಳನ್ನು ಕೂಡಲೇ ‘ಶುದ್ಧ’ ಮಾಡಿಸಿ ದೂರದ ಯಾವುದಾದರೂ ಗಂಡು ಹುಡುಕಿ ಮದುವೆ ಮಾಡಿ ಸಾಗ ಹಾಕಿಬಿಡು. ನಿನ್ನ ಮನೆತನದ ಗೌರವದೊಂದಿಗೆ ತನ್ನ ಮಾನವನ್ನೂ ಲೆಕ್ಕಿಸದೆ ಸೊಕ್ಕಿನಿಂದ ಯಾವನಿಗೋ ಸೆರಗು ಹಾಸಿದವಳಿಗೆ ಅದೇ ಸರಿಯಾದ ಮದ್ದು!’ ಎಂದು ಒರಟಾಗಿ ಹೇಳಿದ ನಂತರ ದುರ್ಗಕ್ಕ ನೀಡಿದ ಚಹಾ ಕುಡಿದು ಎಲೆಯಡಿಕೆ ತಿಂದು ಹೊರಟು ಹೋದರು. ಆನಂತರ ಇನ್ನೂ ಕೆಲವು ಸ್ನೇಹಿತರು ಬಂದವರು, ‘ನೀವೆಂಥದು ಅಂಗರಣ್ಣ, ಇಷ್ಟಕ್ಕೆಲ್ಲ ತಲೆಬಿಸಿ ಮಾಡಿಕೊಳ್ಳುವುದಾ…? ಅವಳನ್ನು ಯಾರು ಹಾಳು ಮಾಡಿದನೋ ಅವನ ಕೊರಳಿಗೇ ಕಟ್ಟಿ ಓಡಿಸಿಬಿಡುವುದಲ್ಲವಾ…?’ ಎಂಬ ಉಪಾಯವನ್ನೂ ಸೂಚಿಸಿ ಹೋದರು.


ಇಷ್ಟು ಮಾತ್ರವಲ್ಲದೇ ಅಂಗರನಿಗೆ ತನ್ನ ಜಮೀನು ಮತ್ತದರ ಬೇಲಿಯ ವಿಷಯವಾಗಿ ದೂರದ ಸಂಬAಧಿಗಳಾದ ನೆರೆಮನೆಯ ವಾಸು ಮತ್ತವನ ಅಣ್ಣತಮ್ಮಂದಿರೊಡನೆ ದೀರ್ಘ ಕಾಲದ ವೈರತ್ವವಿತ್ತು. ಇಂದು ಅವರಿಗೂ ಅಂಗರನ ಮನೆಯ ಹೆಣ್ಣು ಕೆಟ್ಟು ನಿಂತ ಸುದ್ದಿಯು ಹಾಲು ಜೇನು ಚಪ್ಪರಿದಷ್ಟು ಖುಷಿಯಾಗಿತ್ತು. ಹಾಗಾಗಿ ವಾಸುವು ಆವತ್ತೊಮ್ಮೆ ತನ್ನ ತಮ್ಮನೊಡನೆ, ‘ಹೇ, ಇಲ್ನೋಡನಾ ನಿನಗೊಂದು ವಿಷಯ ಗೊತ್ತುಂಟಾ, ಅಂಗರನ ಮಗಳು ಆ ಗಂಡುಬೀರಿ ಪ್ರೇಮ ಇದ್ದಾಳಲ್ಲ ಅವಳು ಬಸುರಿಯಂತೆ ಮಾರಾಯಾ! ಅದು ತೋಮನ ಕೆಲಸವಂತೆ…!’ ಎಂದು ವ್ಯಂಗ್ಯವಾಡಿದ. ಅದಕ್ಕೆ ಸಹೋದರ, ‘ಅಯ್ಯೋ, ಬಿಡಣ್ಣಾ…! ಅದೆಲ್ಲ ನನಗೆ ಬಹಳ ಹಿಂದಿನಿAದಲೂ ಗೊತ್ತಿದ್ದ ಸಂಗತಿಯೇ. ನಿನಗೆ ಇನ್ನೊಂದು ವಿಷಯ ಗೊತ್ತುಂಟಾ, ಅವಳು ಬರೇ ತೋಮನೊಟ್ಟಿಗೆ ಮಾತ್ರ ಮಲಗಿದ್ದಲ್ಲ. ನಮ್ಮ ಹೆಡ್ಡಿ ಪರ್ಬುಗಳ ಮಕ್ಕಳೊಂದಿಗೂ ಆಗಾಗ ಹಾಡಿಯೊಳಗಿರುತ್ತಿದ್ದುದನ್ನು ನನ್ನ ಸ್ನೇಹಿತರೇ ಕೆಲವು ಸಲ ಕಂಡಿದ್ದಾರೆ. ಆದರೂ ನೀನೇನೇ ಹೇಳಣ್ಣಾ, ಅವಳು ಹಾಳಾಗುವುದಕ್ಕೆ ಕಾರಣ ಅಂಗರನೇ! ಅಲ್ಲಣ್ಣಾ ಅವನಿಗೆ ಚೂರಾದರೂ ಅಕ್ಕಲ್ ಬೇಡವ ಹೇಳು? ಪ್ರಾಯಕ್ಕೆ ಬಂದ ಹೆಣ್ಣೊಂದನ್ನು ಎಷ್ಟು ಕಾಲಾಂತ ಮನೆಯೊಳಗಿಟ್ಟುಕೊಳ್ಳುವುದು? ಅವಳು ಅಷ್ಟು ಸೊಕ್ಕುವವರೆಗೆ ಇವನ್ಯಾಕೆ ಸುಮ್ಮನಿದ್ದ…?’ ಎಂದು ತನಗೆಲ್ಲ ತಿಳಿದವನಂತೆ ಮಾತಾಡಿದ. ‘ಅದು ಹೌದು ಮಾರಾಯಾ. ಸರಿಯಾಗೇ ಹೇಳಿದೆ ನೀನು. ಅವಳು ಆಡಬಾರದ ಆಟವನ್ನೆಲ್ಲ ಆಡುತ್ತಿದ್ದುದು ಮನೆಯವರಿಗೆಲ್ಲ ಗೊತ್ತಿತ್ತು. ಆದರೆ ಅವಳು ಸಮಾ ದುಡಿದು ತರುತ್ತಿದ್ದಳಲ್ಲ ಅದು ಯಾರಿಗೆ ಕಹಿಯಾಗುತ್ತದೆ ಹೇಳು? ಇನ್ನು ಆ ಅಶೋಕನೊಬ್ಬನಿದ್ದಾನೆ…! ಅವನು ಬರೇ ಆಟ, ಕೋಲ, ಕೋಳಿಕಟ್ಟ ಅಂತೆಲ್ಲ ಮೈಮರೆಯುವ ಚಂಡಿ ಕಂಬಳಿ ಮನುಷ್ಯ! ಹಾಗಾಗಿ ಆ ಮನೆಯಲ್ಲಿ ಅವನನ್ನು ಯಾರು ಗೆಣ್ಪುವುದಿಲ್ಲ. ಈಗ ಇವಳ ಕಾರೋಬಾರೆಲ್ಲ ಮುಗಿದ ಮೇಲೆ ಆ ಪರದೇಶಿ ತೋಮನೊಬ್ಬ ಇವರ ಬಲೆಗೆ ಬಿದ್ದ ನೋಡು. ಭಾರೀ ಅಹಂಕಾರವಿತ್ತು ಆ ನಾಯಿಗಳಿಗೆ! ನಾವು ಸಂಬoಧಿಕರೆoಬುದನ್ನೂ ನೋಡದೆ ಒಂದು ಗೇಣು ಜಾಗಕ್ಕೂ ಹೇಗೆ ತಕರಾರೆಬ್ಬಿಸುತ್ತಿದ್ದರು? ಅದಕ್ಕೀಗ ದೇವರೇ ಸರಿಯಾಗಿ ಸೊಕ್ಕು ಮುರಿದು ಮೂಲೆಯಲ್ಲಿ ಕೂರಿಸಿಬಿಟ್ಟ. ಇನ್ನು ಈ ಊರಲ್ಲಿ ಅವರು ತಲೆಯೆತ್ತಿ ತಿರುಗಲಿಕ್ಕುಂಟಾ ಹೇಳು? ಛೀ! ನಾನಾಗಿದ್ದರೆ ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿಬಿಡುತ್ತಿದ್ದೆ. ಅದಕ್ಕೇ ಹಿರಿಯರು ಹೇಳುವುದು, ನೆತ್ತಿಗೆ ಹುಯ್ದ ನೀರು ಕಾಲ ಬುಡಕ್ಕೆ ಇಳಿಯಲೇಬೇಕು ಎಂದು!’ ಎಂದು ಅಣ್ಣನೂ ತನ್ನ ದ್ವೇಷವನ್ನು ಹೊರಗೆಡವಿದ. ಹೀಗೆ ಅಂಗರನ ಕುಟುಂಬಕ್ಕಾಗದವರಿoದ ಹೊಮ್ಮುತ್ತಿದ್ದ ನಂಜು, ಕುಹಕದ ಮಾತುಗಳು ಎರಡೇ ದಿನದಲ್ಲಿ ಊರಿಡೀ ಹರಿದಾಡುತ್ತ ಅಂಗರನ ಕುಟುಂಬದ ನೆಮ್ಮದಿಯನ್ನು ಮೂರಾಬಟ್ಟೆ ಮಾಡಿಬಿಟ್ಟವು.


*
ಪ್ರೇಮಾಳ ಮನೆಯಲ್ಲಿ ನಡೆದ ಗಲಾಟೆಯ ನಂತರ ತೋಮ ಎರಡು ದಿನ ಹೊರಗೆಲ್ಲೂ ಹೋಗದೆ ಮನೆಯಲ್ಲೇ ಉಳಿದ. ಅಶೋಕ ಹೊಡೆದಿದ್ದ ಪೆಟ್ಟುಗಳಿಂದ ಅವನ ಕಿಬ್ಬೊಟ್ಟೆ, ಬೆನ್ನು ಮತ್ತು ಮೈಕೈಯೆಲ್ಲ ಗುದ್ದಿ ಇಟ್ಟಂಥ ನೋವು ಕಾಡುತ್ತಿತ್ತು. ಮೂರನೆಯ ಮುಂಜಾನೆ ಕೋಳಿ ಕೂಗುವ ಮುನ್ನ ಎಚ್ಚರವಾಗಿ ಎದ್ದು ಮೈಮುರಿದ. ಆಗ ಮೈಕೈ ನೋವು ಸ್ವಲ್ಪ ಕಡಿಮೆಯಾಗಿರುವುದು ಅವನ ಗಮನಕ್ಕೆ ಬಂತು. ಅದರೊಂದಿಗೆ ಅವನೊಳಗೆ ಕೆಟ್ಟ ಕೋಪವೂ ಕುದಿಯಿತು. ಆದ್ದರಿಂದ, ಆ ಮಗ್ಗಾ, ಇನ್ನೊಮ್ಮೆ ನನ್ನ ಕೈಗೆ ಸಿಗಬೇಕು…! ಅವನಿಗೊಂದು ಗತಿ ಕಾಣಿಸದಿದ್ದರೆ ನಾನು ತೋಮನೇ ಅಲ್ಲ! ಎಂದುಕೊoಡು ಹಲ್ಲು ಕಡಿದವನು ಎದ್ದು ಹೋಗಿ ಒಂದಷ್ಟು ಒಣ ಮಡಲಿನ ಒಲಿಗಳನ್ನು ಸುಲಿದು ತಂದು ಒಂದೆರಡು ಕೊತ್ತಳಿಗೆ ತುಂಡುಗಳೊoದಿಗೆ ಅವನ್ನು ಒಲೆಗೆ ತುರುಕಿಸಿ ಬೆಂಕಿ ಹಚ್ಚಿದವನು ಹಾಲು ಹಾಕದ ಕಪ್ಪು ಚಹಾ ತಯಾರಿಸಿದ. ಅದನ್ನು ಲೋಟಕ್ಕೆ ಬಗ್ಗಿಸಿಕೊಂಡು ಹೀರುತ್ತ ಹೊರಗೆ ಬಂದವನು ಬೀಡಿ ಸೇದುತ್ತ ಪೂರ್ಣ ಬೆಳಕು ಹರಿಯುವವರೆಗೆ ಬಾಲ ಸುಟ್ಟ ಬೆಕ್ಕಿನಂತೆ ಅಂಗಳವಿಡೀ ಅಡ್ಡಾಡಿದ. ಅಷ್ಟೊತ್ತಿಗೆ ಹೊಟ್ಟೆ ಹಸಿಯತೊಡಗಿತು. ಅದರೊಂದಿಗೆ ಪ್ರೇಮಾಳನ್ನು ನೋಡುವ ಆತುರವೂ ಕಾಡಿತು. ಕೂಡಲೇ ಹೆಡ್ಡಿ ಪರ್ಬುಗಳ ಮನೆಯತ್ತ ದಾಪುಗಾಲಿಕ್ಕಿದ. ಅವರ ತೋಟ ಹೊಕ್ಕವನು ಕಣ್ಣೆದುರಿಗೆ ಸಿಕ್ಕಿದ, ಹಿಂದಿನ ರಾತ್ರಿ ಉದುರಿ ಬಿದ್ದಿದ್ದ ಕೆಲವು ಒಣಕಾಯಿಗಳನ್ನೂ ಮಡಲು, ತೆಪ್ಪರಿಗೆಗಳನ್ನೂ ಹೆಕ್ಕಿ ಹೊತ್ತೊಯ್ದು ಅವರ ಅಂಗಳದಲ್ಲಿ ರಾಶಿ ಹಾಕಿ ಸ್ವಲ್ಪಹೊತ್ತು ಅಲ್ಲೇ ಓಡಾಡುತ್ತ ತನ್ನ ಪ್ರೇಯಸಿಯನ್ನು ಅರಸಿದ. ಆದರೆ ಅವಳ ಸುಳಿವಿರಲಿಲ್ಲ. ಹಾಗಾದರೆ ಅವಳಿಂದು ಕೆಲಸಕ್ಕೆ ಬಂದಿಲ್ಲವೇ…? ಎಂದುಕೊAಡು ಒಳಗೊಳಗೇ ಚಡಪಡಿಸಿದ.
ತೋಮ ತನ್ನ ನೆರೆನಕರೆಯವರ ಮತ್ತು ಊರವರ ಯಾವ ಕೆಲಸಕಾರ್ಯಗಳನ್ನೂ ತನ್ನದೇ ಎಂಬಷ್ಟು ಮುತುವರ್ಜಿಯಿಂದ ಮಾಡುವವನು. ಹಾಗಾಗಿ ಹೆಲನಾಬಾಯಿಗೂ ಅವನ ಮೇಲೆ ವಿಶೇಷ ಅಭಿಮಾನ ಮೂಡಲು ಕಾರಣವಾಗಿತ್ತು. ಅವರಿಂದು ಮನೆಯಿಂದ ಹೊರಗೆ ಬರುವ ಹೊತ್ತಿಗೆ ತೋಮನ ಕೆಲಸವನ್ನು ಕಂಡವರಿಗೆ ಹಿಗ್ಗಾಯಿತು. ‘ಓಹೋ, ತೋಮನಾ…ಬಾರನಾ ಕುಳಿತುಕೋ. ತಿಂಡಿ ಮಾಡಿದ್ದೇನೆ. ತಿಂದುಕೊAಡು ಹೋಗು…!’ ಎಂದು ಅಕ್ಕರೆಯಿಂದ ಕರೆದರು. ತೋಮನೂ ಮುಖ್ಯವಾಗಿ ಅದಕ್ಕೇ ಬಂದವನಲ್ಲವೇ? ಆದರೂ ಅವರೆದುರು ಸ್ವಲ್ಪ ಸಂಕೋಚ ಪ್ರದರ್ಶಿಸುತ್ತ, ‘ಅಯ್ಯೋ, ಇಷ್ಟು ಬೇಗ ಯಾಕೆ ಬಾಯಮ್ಮಾ…?’ ಎನ್ನುತ್ತಲೇ ತಣ್ಣಗೆ ಹೋಗಿ ಪಡಸಾಲೆಯಲ್ಲಿ ಕುಳಿತುಕೊಂಡ.


‘ಬೇಗ ಎಲ್ಲಿ ಮಾರಾಯಾ? ಎಲ್ಲರಿಗೆ ಮಾಡುವ ಹೊತ್ತಿಗೆ ಮಾಡಿದ್ದೇನಷ್ಟೆ. ನೀನೂ ತಿನ್ನುವಿಯಂತೆ!’ ಎಂದ ಅವರು ಬಟ್ಟಲು ತುಂಬಾ ಘಮಘಮಿವ ಉಪ್ಪಿಟ್ಟು ಮತ್ತು ಕಾಫಿ ತಂದು ಅವನ ಮುಂದಿರಿಸಿ, ‘ತಗೋ ಗಡಿಬಿಡಿ ಮಾಡದೆ ತಿನ್ನು…!’ ಎಂದವರು ಮತ್ತೇನೋ ಕೆಲಸದ ಮೇಲೆ ಒಳಗೆ ಹೋದರು. ತೋಮ ಸಾವಕಾಶವಾಗಿ ಉಪ್ಪಿಟ್ಟು ತಿಂದವನು ಹದವಾಗಿ ಬೆಚ್ಚಗಿದ್ದ ಕಾಫಿಯನ್ನು ಗಟಗಟನೆ ಕುಡಿದ. ಆದರೆ ಅವನ ಕಣ್ಣುಗಳು ಮಾತ್ರ ಪ್ರೇಮಾಳನ್ನು ಹುಡುಕುತ್ತಿದ್ದವು.
ಅಷ್ಟೊತ್ತಿಗೆ ಕೆಂಪಗಿನ ಮೈಬಣ್ಣದ, ಡೊಳ್ಳು ಹೊಟ್ಟೆಯ ಅರವತ್ತೆöÊದರ ಹರೆಯದ ಹೆಡ್ಡಿ ಪರ್ಬುಗಳು ತಮ್ಮ ಅಸ್ತವ್ಯಸ್ತಗೊಂಡಿದ್ದ ಹುರಿಮೀಸೆಯನ್ನು ನೀವಿ ಸುಸ್ಥಿತಿಗೆ ತರುತ್ತ ಹೊರಗೆ ಬಂದರು. ತೋಮನನ್ನು ಕಂಡವರು, ‘ಓಹೋ, ತೋಮಾ ಹೇಗಿದ್ದಿ ಮಾರಾಯಾ…? ಕೆಲವು ದಿನಗಳಿಂದ ಪತ್ತೆನೇ ಇಲ್ಲ ನಿನ್ನದು…!’ ಎಂದವರು ಅಲ್ಲೇ ತುಸುದೂರದಲ್ಲಿ ಕುಳಿತು ತಮ್ಮ ತೋಟದ ಕೆಲಸದ ಬಗ್ಗೆಯೂ, ಕೋಳಿ ಅಂಕದ ಕುರಿತೂ ಅವನೊಡನೆ ಒಂದಷ್ಟು ಹರಟಿದವರು ಎದ್ದು ಅಂಗಳಕ್ಕಿಳಿದರು. ಮಾವಿನ ಮರವೊಂದರತ್ತ ನಡೆದು ಅದರ ಬಾಗಿದ ರೆಂಬೆಯೊoದರಿoದ ಎರಡು ಬಲಿತ ಎಲೆಗಳನ್ನು ಕಿತ್ತು ಅವುಗಳ ತೊಟ್ಟು ಚಿವುಟಿ ನಾಡಿಯನ್ನು ಉದ್ದನೆ ಸುಲಿದು ಉಳಿದ ಭಾಗವನ್ನು ದುಂಡಗೆ ಸುತ್ತಿ ಹಲ್ಲುಜ್ಜುತ್ತ ತೋಟ ಸುತ್ತಲು ಹೊರಟು ಹೋದರು. ಪರ್ಬುಗಳು ಕಣ್ಮರೆಯಾಗುವುದನ್ನೇ ಕಾಯುತ್ತಿದ್ದ ತೋಮ ಕೂಡಲೇ, ‘ಬಾಯಮ್ಮಾ ಓ ಬಾಯಮ್ಮಾ…ಸ್ವಲ್ಪ ಹೊರಗೆ ಬನ್ನಿ ಮಾರಾಯ್ರೇ…!’ ಎಂದು ಮೆಲುವಾಗಿ ಕರೆದ. ಹೆಲೆನಾಬಾಯಿ ಕೊಟ್ಟಿಗೆಯಲ್ಲಿ ಹಸುಗಳಿಗೆ ಮೇವು ಹಾಕುತ್ತಿದ್ದವರು, ‘ಹ್ಞಾಂ, ಬಂದೆ ಮಾರಾಯಾ ಇರು…!’ ಎಂದುತ್ತರಿಸಿದರಾದರೂ ತಮ್ಮ ಕೆಲಸ ಮುಗಿಸಿಯೇ ಬಂದವರು, ‘ಹ್ಞೂಂ! ಏನು ಹೇಳು ಮಾರಾಯಾ?’ ಎಂದು ಆಯಾಸದ ಉಸಿರು ದಬ್ಬುತ್ತ ಅಂದರು. ತೋಮನು ತನ್ನ ವಿಷಯಕ್ಕೆ ಪೀಠಿಕೆ ಹಾಕುವ ಗೋಜಿಗೆಲ್ಲ ಹೋಗಲಿಲ್ಲ. ಬದಲಿಗೆ ನೇರವಾಗಿ, ‘ಬಾಯಮ್ಮಾ, ಪ್ರೇಮ ಇವತ್ತು ಕೆಲಸಕ್ಕೆ ಬಂದಿಲ್ಲವಾ…?’ ಎಂದು ಪ್ರಶ್ನಿಸಿದ.


‘ಇಲ್ಲ ಮಾರಾಯಾ. ಅವಳು ಬರದೆ ಮೂರು ದಿನವಾಯ್ತು. ಮೊನ್ನೆ ಬೆಳಗ್ಗೆ ದುರ್ಗಿ ಬಂದಿದ್ದಳು. ಮಗಳಿಗೆ ಮೈ ಹುಷಾರಿಲ್ಲ. ನಾಲ್ಕು ದಿನ ಕೆಲಸಕ್ಕೆ ಬರುವುದಿಲ್ಲ ಅಂತ ಹೇಳಿ ಹೋದಳು!’ ಎಂದು ತನಗೆ ವಿಷಯ ಗೊತ್ತಿದ್ದರೂ ತೋರ್ಪಡಿಸದೆ ಅಂದರು.


‘ಓಹೋ, ಹೌದಾ…!’ ಎಂದ ತೋಮ ಕೆಲವುಕ್ಷಣ ಏನೋ ಚಿಂತೆಗೆ ಬಿದ್ದವನು ಬಳಿಕ, ‘ನನಗೊಂದು ಉಪಕಾರ ಮಾಡುತ್ತೀರಾ ಬಾಯಮ್ಮಾ…?’ಎಂದ ದೈನ್ಯದಿಂದ.
‘ಏನು ಹೇಳು ಮಾರಾಯ?’ ಎಂದರು ಅವರೂ ಕಾಳಜಿಯಿಂದ.
‘ಮೊನ್ನೆ ರಾತ್ರಿ ಅಶೋಕನಿಗೂ ನಂಗೂ ಒಂದು ಸಣ್ಣ ವಿಚಾರಕ್ಕೆ ದೊಡ್ಡ ಲಡಾಯಿ ಆಯ್ತು ಬಾಯಮ್ಮಾ. ಹಾಗಾಗಿ ಇನ್ನು ನಾನವನ ಮನೆ ಬಾಗಿಲಿಗೆ ಕಾಲಿಡುವುದಿಲ್ಲ ಅಂತ ನಿರ್ಧರಿಸಿದ್ದೇನೆ! ನೀವು ಯಾರೊಡನೆಯಾದರೂ ಪ್ರೇಮಾಳಿಗೆ ಹೇಳಿ ಕಳುಹಿಸಿ ಅವಳನ್ನಿಲ್ಲಿಗೆ ಕರೆಯಿಸಬಹುದಾ…? ನಂಗೆ ಅವಳ ಜೊತೆ ಸ್ವಲ್ಪ ಮಾತಾಡಲಿಕ್ಕುಂಟು ಬಾಯಮ್ಮಾ!’ ಎಂದ ಮೃದುವಾಗಿ.
‘ಅಷ್ಟೇನಾ? ಆಯ್ತು ಮಾರಾಯಾ ಕರೆಯಿಸುತ್ತೇನೆ. ಆದರೂ ತೋಮ ನಿನಗೊಂದು ಮಾತು ಹೇಳುತ್ತೇನೆ, ಪ್ರೇಮ ತುಂಬಾ ಒಳ್ಳೆಯ ಹುಡುಗಿ ಮಾರಾಯಾ. ನಿಮ್ಮಿಬ್ಬರ ಸಂಬoಧದ ಬಗ್ಗೆ ಅವಳು ನನ್ನೊಡನೆ ಎಲ್ಲವನ್ನೂ ಹೇಳಿದ್ದಾಳೆ. ಹಾಗಾಗಿ ನಿಮ್ಮ ನಡುವೆ ಅದೆಂಥ ತಪ್ಪು ನಡೆದಿದ್ದರೂ ಈಗ ಅದು ದೊಡ್ಡ ವಿಚಾರವಲ್ಲ. ಇಂಥ ಸಮಯದಲ್ಲಿ ನೀನೂ ಅವಳ ಕೈಬಿಟ್ಟೆಯೆಂದರೆ ಆಮೇಲೆ ಅವಳ ಮನೆಯ ಗಂಡಸರು ಅವಳನ್ನು ಜೀವನಪೂರ್ತಿ ದುಡಿಸಿಕೊಂಡು ಸಾಯಿಸ್ತಾರೆಯೇ ಹೊರತು ಅವಳ ಜೀವನಕ್ಕೊಂದು ಗಂಡಿನಾಸರೆ ಮಾಡಿಸುವಂಥ ಜವಾಬ್ದಾರಿ ಅವಳ ಅಪ್ಪನಿಗೂ ಇಲ್ಲ, ತಮ್ಮನಿಗೂ ಇಲ್ಲ. ಆ ದುರ್ಗಿಯೊಬ್ಬಳು ಪಾಪದ ಹೆಂಗಸು. ಅವಳೇನು ಮಾಡಿಯಾಳು ಹೇಳು? ಪ್ರೇಮ ನಿನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾಳೆ ಮಾರಾಯಾ. ಅವಳನ್ನು ನಡು ನೀರಿನಲ್ಲಿ ಕೈ ಬಿಡಬೇಡ!’ ಎಂದು ಬಾಯಮ್ಮ ತೋಮನ ಮನಮುಟ್ಟುವಂತೆ ಅಂದರು.


‘ಹೌದು, ಹೌದು ಬಾಯಮ್ಮಾ, ನೀವು ಹೇಳುವುದು ಸರಿ. ನಾನೂ ಅದನ್ನೇ ಯೋಚಿಸುತ್ತಿದ್ದೆ. ಅದೇ ವಿಷಯ ಮಾತಾಡಲು ಮೊನ್ನೆ ನಾನವಳ ಮನೆಗೂ ಹೋಗಿದ್ದುದು. ಆದರೆ ಆ ಅಶೋಕ ಹುಚ್ಚು ನಾಯಿಗಳಂತೆ ವರ್ತಿಸಿದ. ನಾನೇನು ಮಾಡಲಿ ಹೇಳಿ? ಯಾವುದಕ್ಕೂ ಒಮ್ಮೆ ನಾನವಳೊಡನೆ ಮಾತಾಡಬೇಕು. ಕರೆಯಿಸುತ್ತೀರಾ…?’ ಎಂದು ಮತ್ತೊಮ್ಮೆ ಕೇಳಿದ. ಅದಕ್ಕೊಪ್ಪಿದ ಹೆಲೆನಾಬಾಯಿ ಕೂಡಲೇ ತಮ್ಮ ಕೆಲಸದಾಕೆ ಜಲಜಾಳನ್ನು ಕರೆದು, ‘ನೋಡನಾ ಜಲಜಾ, ಪ್ರೇಮಾಳ ಮನೆಗೆ ಹೋಗಿ, ಬಾಯಮ್ಮಾ ಕರೆದರೆಂದು ಹೇಳಿ ಅವಳನ್ನು ನಿನ್ನ ಜೊತೆಯಲ್ಲೇ ಕರೆದುಕೊಂಡು ಬಾ, ಹೋಗು!’ ಎಂದು ಆಜ್ಞಾಪಿಸಿದರು.
ಜಲಜ ತಕ್ಷಣ ಹೋಗಿ ಪ್ರೇಮಾಳ ಸಂಗಡವೇ ಹಿಂದಿರುಗಿದಳು. ತೋಮನನ್ನು ಕಂಡ ಪ್ರೇಮಾಳ ಗಂಟಲುಬ್ಬಿ ಬಂತು. ಬಾಯಮ್ಮನೂ, ಜಲಜಳೂ ಅದನ್ನು ಗಮನಿಸಿದ್ದರಿಂದ ಜಲಜ ತನ್ನ ಕೆಲಸಕ್ಕೆ ಹೊರಟು ಹೋದರೆ ಬಾಯಮ್ಮ, ‘ಪ್ರೇಮಾ ಚಿಂತೆ ಮಾಡಬೇಡಮ್ಮಾ. ತಾಳ್ಮೆಯಿಂದ ಕುಳಿತು ಮಾತಾಡಿಕೊಳ್ಳಿ. ಎಲ್ಲಾ ಸರಿಹೋಗುತ್ತದೆ. ನನಗೆ ಒಳಗೆ ಸ್ವಲ್ಪ ಕೆಲಸವಿದೆ. ಮುಗಿಸಿ ಬರುತ್ತೇನೆ!’ ಎಂದು ಆಪ್ತವಾಗಿ ಅಂದು ಒಳಗೆ ನಡೆದರು. ತೋಮ, ತನ್ನ ಪ್ರಿಯತಮೆಯನ್ನೊಮ್ಮೆ ಆರ್ದ್ರನಾಗಿ ದಿಟ್ಟಿಸಿದ. ಅವಳ ಮುಖ ಮತ್ತು ಕಣ್ಣುಗಳು ಊದಿಕೊಂಡಿದ್ದವು. ಅದನ್ನು ಕಂಡವನ ಹೃದಯ ನೋವಿನಿಂದ ಹಿಂಡಿತು. ಇವಳನ್ನು ಯಾರು ಹೊಡೆದಿರಬಹುದು? ಎಂಬ ಯೋಚನೆ ಕಾಡಿತು. ರಪ್ಪನೆ ಅಲ್ಲಿಂದೆದ್ದು ತೋಟದತ್ತ ಹೆಜ್ಜೆ ಹಾಕಿದ. ಪ್ರೇಮಾಳೂ ಅವನನ್ನು ಹಿಂಬಾಲಿಸಿದಳು. ಸುಮಾರು ದೂರದ ತೋಟದ ಒಂದು ಪಾರ್ಶ್ವದಲ್ಲಿ ಚಪ್ಪರದಂತೆ ವಿಶಾಲವಾಗಿ ಹರಡಿಕೊಂಡು ದಟ್ಟ ನೆರಳು ನೀಡುತ್ತಿದ್ದ ತೋತಾಪುರಿ ಮಾವಿನ ಮರದಡಿಗೆ ಹೋದ ತೋಮ ಅದರ ಬುಡದಲ್ಲಿ ಕುಳಿತ. ಪ್ರೇಮಾಳೂ ಅವನಿಗೆದುರಾಗಿ ಕುಳಿತಳು. ತೋಮ ಮತ್ತೊಮ್ಮೆ ಅವಳನ್ನು ದೀರ್ಘವಾಗಿ ದಿಟ್ಟಿಸಿದ. ಅವಳ ಎಡಗಣ್ಣಿನ ಸುತ್ತ ಕಪ್ಪು ಚಾಯೆಯೆದ್ದು ಊದಿಕೊಂಡಿತ್ತು. ತುಟಿ ಒಡೆದು ಗಾಯ ಎದ್ದು ಕಾಣುತ್ತಿತ್ತು. ‘ಇದೇನು ಪ್ರೇಮಾ ನಿನ್ನ ಅವಸ್ಥೆ…? ಈ ನಮೂನೆ ಯಾರು ಹೊಡೆದದ್ದು ನಿನಗೆ…?’ ಎಂದು ರೋಷದಿಂದ ಪ್ರಶ್ನಿಸಿದ. ಆಗ ಪ್ರೇಮಾಳ ದುಃಖ ಕಟ್ಟೆಯೊಡೆಯಿತು. ಒಂದೇ ಸಮನೆ ಅತ್ತಳು. ತೋಮ ಇನ್ನಷ್ಟು ಅಧೀರನಾದವನು, ‘ಅಳಬೇಡ ಮಾರಾಯ್ತೀ…! ಏನಾಯ್ತು ಹೇಳು!’ ಎಂದ ಮೃದುವಾಗಿ. ಆಗ ತುಸು ಸುಧಾರಿಸಿಕೊಂಡ ಪ್ರೇಮ, ಅಂದು ರಾತ್ರಿ ಅಶೋಕನಿಗೂ ತೋಮನಿಗೂ ಗಲಾಟೆಯಾದ ನಂತರದ ಮನೆಯಲ್ಲಿ ನಡೆದ ವಿದ್ಯಾಮಾನವನ್ನು ವಿವರಿಸಿದಳು. ಅಷ್ಟು ಕೇಳಿದ ತೋಮನಿಗೆ ಅಶೋಕನನ್ನು ಕೊಂದು ಹಾಕುವಷ್ಟು ಕೋಪ ಉಕ್ಕಿತು. ಉಸಿರು ಬಿಗಿಹಿಡಿದು ಸುಮ್ಮನೆ ಕುಳಿತ. ಅಷ್ಟರಲ್ಲಿ ಪ್ರೇಮ, ‘ನೋಡೀ ಮಾರಾಯ್ರೇ, ನಾನೊಂದು ಮಾತು ಹೇಳುತ್ತೇನೆ. ಸರಿಯಾಗಿ ಕೇಳಿಸಿಕೊಳ್ಳಿ. ನಾನು ಹುಟ್ಟಿರುವುದೇ ನಿಮಗಾಗಿ! ಇನ್ನು ಮುಂದೆ ನಾನು ಬದುಕಿದರೂ, ಸತ್ತರೂ ಅದು ನಿಮ್ಮ ಜೊತೆಯಲ್ಲೇ! ನಿಮ್ಮನ್ನು ಪಡೆಯಲು ಅದೆಂಥ ನೋವು, ಅವಮಾನಗಳೆದುರಾದರೂ ಸಹಿಸಿಕೊಳ್ಳಬಲ್ಲೆ! ಹಾಗೆಯೇ ನಮ್ಮಿಬ್ಬರಿಂದಾಗಿ ನನ್ನ ಮನೆಯವರ ಮಾನಮರ್ಯಾದೆಯೂ ಹಾಳಾಗಬಾರದು. ನಿಮ್ಮನ್ನು ನಂಬಿದ ಮೇಲೆಯೇ ನಾನು ನನ್ನನ್ನು ನಿಮಗರ್ಪಿಸಿಕೊಂಡಿದ್ದು! ದಯವಿಟ್ಟು ನನ್ನ ಕೈ ಬಿಡಬೇಡಿ. ನೀವು ಯಾವತ್ತು ಕರೆದರೂ ನಿಮ್ಮೊಂದಿಗೆ ಬರಲು ಸಿದ್ಧಳಿದ್ದೇನೆ!’ ಎಂದು ದೃಢವಾಗಿ ನುಡಿದಳು.
ತೋಮನ ನಿಲುವೂ ಅದೇ ಆಗಿತ್ತು. ಅವನು ಕೂಡಲೇ,‘ಯಾವತ್ತು ಅಂದರೆ ಏನರ್ಥ…? ಈ ಕೂಡಲೇ ನನ್ನ ಶೆಡ್ಡಿಗೆ ಬಂದುಬಿಡು. ಆಮೇಲೆ ನಮ್ಮನ್ನು ಯಾರೇನು ಮಾಡುತ್ತಾರೋ ನಾನು ನೋಡಿಕೊಳ್ಳುತ್ತೇನೆ. ನಿನ್ನನ್ನು ಬಿಟ್ಟು ಬದುಕುವ ಶಕ್ತಿ ನನಗೂ ಇಲ್ಲ ಪ್ರೇಮಾ! ನೀನು ಸಿಗದಿದ್ದರೆ ಈ ಊರನ್ನೇ ಬಿಟ್ಟು ದೇಶಾಂತರ ಹೋಗಿ ಬಿಡುತ್ತೇನೆ. ಇದನ್ನೆಲ್ಲ ಯೋಚಿಸಿಯೇ ನಿನ್ನನ್ನು ಕರೆಯಿಸಿರುವುದು ನಾನು!’ ಎಂದ ಆವೇಶದಿಂದ. ‘ಈ ಕೂಡಲೇ ಬಂದುಬಿಡು!’ ಎಂಬ ಪ್ರಿಯಕರನ ಮಾತು ಪ್ರೇಮಾಳಲ್ಲಿ ಬಹಳ ನಿರಾಳತೆಯನ್ನು ಮೂಡಿಸಿದ್ದರೊಂದಿಗೆ ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಪುಟ್ಟ ಜೀವವೊಂದು ನಿಂತ ನಿಲುವಿನಲ್ಲೇ ಅವನನ್ನು ಹಿಂಬಾಲಿಸು! ಎಂದAತಾಯಿತು. ಆದರೆ ಮರುಕ್ಷಣ ಅವಳನ್ನು ಭಯವೂ ಕಾಡಿತು. ಅದನ್ನು ಹತ್ತಿಕ್ಕಿಕೊಂಡವಳು, ‘ಆಯ್ತು. ಬರುತ್ತೇನೆ. ಆದರೆ ಇವತ್ತು ಬೇಡ. ನಾಳೆ ಬೆಳಿಗ್ಗೆ ಬಂದು ಬಿಡುತ್ತೇನೆ!’ ಎಂದು ತೋಮನನ್ನು ಪ್ರೀತಿಯಿಂದ ದಿಟ್ಟಿಸಿದಳು. ಆಗ ಅವನೂ ಸಮಾಧಾನಗೊಂಡ. ಅಷ್ಟೊತ್ತಿಗೆ ಬಾಯಮ್ಮನೂ ಅವರತ್ತ ಬಂದರು. ಪ್ರೇಮಿಗಳಿಬ್ಬರೂ ತಮ್ಮ ದುಗುಡವನ್ನು ಮರೆತು ನಗುತ್ತಿದ್ದುದನ್ನು ಕಂಡ ಅವರಿಗೂ ನೆಮ್ಮದಿಯಾಯಿತು.


(ಮುಂದುವರೆಯುವುದು)

Related posts

ವಿವಶ….

Chandrahas

ವಿವಶ…

Chandrahas

ವಿವಶ….

Chandrahas

ವಿವಶ ..

Mumbai News Desk

ವಿವಶ..

Mumbai News Desk

ವಿವಶ..

Mumbai News Desk