
ದೇವಸ್ಥಾನ ಸುವರ್ಣ ಮಹೋತ್ಸವ ಸಮಾರಂಭವು ಸುವರ್ಣಾಕ್ಷರದಲ್ಲಿ ಬರೆಯುವಂತಾಗಲಿ – ಶ್ರೀನಿವಾಸ್ ಸಾಫಲ್ಯ ,
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ : ಸುಮಾರು 50 ವರುಷಗಳ ಹಿಂದೆ ಮಲಾಡ್ ಪರಿಸರದಲ್ಲಿ ನೆಲೆಸಿರುವ ತುಳು ಕನ್ನಡಿಗರು ಮಲಾಡ್ ಪೂರ್ವ ಲಕ್ಷ್ಮಣ ನಗರ ಕುರಾರ್ ವಿಲೇಜ್ ನಲ್ಲಿ ಸ್ಥಾಪಿಸಿದ ಧಾರ್ಮಿಕ ಸಂಸ್ಥೆ ಮಲಾಡ್ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನ ಸುವರ್ಣ ಮಹೋತ್ಸವ ಸಮಾರಂಭವು ಎ. 7 ರಂದು ದಹಿಸರ್ ಪೂರ್ವ ಲತಾ ಮಂಗೇಶ್ಕರ್ ಸಭಾಗೃಹದಲ್ಲಿ ದಿನ ಪೂರ್ತಿ ನಡೆಯಲಿದ್ದು ಸುವರ್ಣ ಮಹೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಮಾ. 13ರಂದು ಸಂಜೆ ಶ್ರೀ ಕ್ಷೇತ್ರದಲ್ಲಿ ಅತಿಥಿಗಳು, ದೇವಸ್ಥಾನ ಸಮಿತಿಯ ಹಾಗೂ ಸುವರ್ಣ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಸದಸ್ಯರುಗಳು ಮತ್ತು ಉಪಸಮಿತಿಗಳ ಉಪಸ್ಥಿತಿಯಲ್ಲಿ ಬಿಡುಗಡೆ ಗೊಳಿಸಿದರು.

ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಅಧ್ಯರಾದ ಶ್ರೀನಿವಾಸ್ ಸಾಫಲ್ಯ ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ ಕಳೆದ ಐವತ್ತು ವರ್ಷಗಳಿಂದ ನಮ್ಮೀ ಕ್ಷೇತ್ರವು ಒಂದು ಧರ್ಮ ಕ್ಷೇತ್ರವಾಗಿ, ಒಂದು ಭಕ್ತಿ ಕೇಂದ್ರವಾಗಿ ಬೆಳೆದದ್ದು ಮಾತ್ರವಲ್ಲದೆ ಅಸಹಾಯಕ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಸಹಕಾರ ಹಾಗೂ ದೇಶದ ವಿವಿಧಡೆ ಇರುವ ಹಲವಾರು ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿ ನಡೆಯುತ್ತಿರುವಂತಹ ಧಾರ್ಮಿಕ ವಿಧಿ ವಿಧಾನಗಳನ್ನು ತಿಳಿಯುದರೊಂದಿಗೆ ಶನೀಶ್ವರ ದೇವಸ್ಥಾನ ಒಂದು ಹೆಜ್ಜೆ ಮುನ್ನಡೆಯುತ್ತದೆ ಎನ್ನಲು ಸಂತೋಷವಾಗುತ್ತದೆ. ನಮ್ಮಿ ಕ್ಷೇತ್ರವು ಕಳೆದ ಐದು ದಶಕಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯನ್ನು ನಡೆಸಿ ಇದೀಗ ಸುವರ್ಣ ಮಹೋತ್ಸವವನ್ನು ನಡೆಸುತ್ತಿದ್ದು ನಮ್ಮ ಪೂರ್ವಜರ ಎಲ್ಲಾ ಮಾಜಿ ಅಧ್ಯಕ್ಷರುಗಳ ಹಾಗೂ ಮೊದಲಿನ ಎಲ್ಲಾ ಕಾರ್ಯಕಾರಿ ಸಮಿತಿಯವರ ಕೊಡುಗೆ ಅಪಾರ. ಶ್ರೀ ಕ್ಷೇತ್ರದ ಸುವರ್ಣ ಮಹೋತ್ಸವದ ಅಂಗವಾಗಿ ಕಳೆದ ಏ. 13 ರಿಂದ ಒಂದು ವರ್ಷಗಳ ಕಾಲ 18 ಧಾರ್ಮಿಕ ಕಾರ್ಯವನ್ನು ಮುಂಬೈಯಲ್ಲಿ ಮಾತ್ರವಲ್ಲ ದೇಶದ ಇತರ ಭಾಗಗಳಲ್ಲಿರುವ ಧಾರ್ಮಿಕ ಕ್ಷೇತ್ರಗಳಲ್ಲಿ ಹಮ್ಮಿಕೊಂಡಿದ್ದೇವೆ. ನಿಮ್ಮೆಲ್ಲರ ಸಹಕಾರದೊಂದಿಗೆ ಸುವರ್ಣ ಮಹೋತ್ಸವ ಸಮಾರಂಭ ವಿಭಿನ್ನ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು ಈ ಕಾರ್ಯಕ್ರಮವು ಸುವರ್ಣಾಕ್ಷರದಲ್ಲಿ ಬರೆಯುವಂತಾಗಲಿ ಎಂದು ಎಲ್ಲರ ಕೊಡುಗೆಯನ್ನು ಸ್ಮರಿಸುತ್ತಾ ಶುಭ ಹಾರೈಸಿದರು.

ದಿವ್ಯ ಸಾಗರ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮುದ್ರಾಡಿ ದಿವಾಕರ್ ಶೆಟ್ಟಿ, ರೋನಕ್ ಕಿಚ್ಚ ನ್ ಎಕ್ವಿಪ್ಮೆಂಟ್ಸ್ ಪ್ರೈ. ಲಿಮಿಟೆಡ್ ಇದರ ಆಡಳಿತ ನಿರ್ದೇಶಕ ಶಂಕರ್ ಶೆಟ್ಟಿ ಮತ್ತು ನಿರ್ದೇಶಕಿಶೋಭಾ ಶಂಕರ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶೋಭಾ ಶಂಕರ್ ಶೆಟ್ಟಿಯವರು ಮಾತನಾಡುತ್ತಾ ಶನಿ ದೇವರು ನ್ಯಾಯ ದೇವರು ಎನ್ನುತ್ತಾರೆ. ನಮ್ಮ ಕೆಲಸ ಯಾವ ರೀತಿಯಲ್ಲಾದರೂ ಇರಲಿ ಅದಕ್ಕೆ ಪ್ರತಿಫಲ ನೀಡುವವರು. ನಮ್ಮೆಲ್ಲರ ಕರ್ಮ ಒಳ್ಳೆಯದಾಗಿದ್ದಕಾರಣ ಶನಿ ದೇವರು ನಮ್ಮನ್ನು ಈ ಸ್ಥಳಕ್ಕೆ ಬರುವಂತೆ ಮಾಡಿದ್ದಾರೆ. ಸಮಿತಿಯಲ್ಲಿ ಮಹಿಳೆಯರೂ ಕ್ರೀಯಾಶೀಲರಾಗಿದ್ದರೆ ಹಾಗೂ ಸಮಿತಿಯು ಧಾರ್ಮಿಕ ಕಾರ್ಯದೊಂದಿಗೆ ಶೈಕ್ಷಣೆಕ ನೆರವೂ ನೀಡುತ್ತಿದೆ ಎನ್ನುತ್ತಾ ಶುಭ ಕೋರಿದರು.

ಮುದ್ರಾಡಿ ದಿವಾಕರ್ ಶೆಟ್ಟಿ ಯವರು ಈ ಸಂದರ್ಭದಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಸುವರ್ಣ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ನನಗೆ ನೀಡಿದಂತಹ ಜವಾಬ್ದಾರಿಯನ್ನು ನಾನು ಉತ್ತಮ ರೀತಿಯಲ್ಲಿ ನಿರ್ವಹಿಸುವೆನು. ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ ರೊಂದಿಗೆ ನಾವೆಲ್ಲರೂ ಸೇರಿ ಸುವರ್ಣ ಮಹೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ನಡೆಸೋಣ ಎಂದರು.
ಪೂಜಾ ಸಮಿತಿಯ ಹಿರಿಯ ಸದಸ್ಯ ನಾರಾಯಣ ಶೆಟ್ಟಿ, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ್ ಎಸ್ ಸಾಲ್ಯಾನ್, ಪೂಜಾ ಸಮಿತಿಯ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಉಪಾಧ್ಯಕ್ಷರುಗಳಾದ ವಿಶ್ವನಾಥ್ ಶೆಟ್ಟಿ ಪೇತ್ರಿ ಮತ್ತು ರಮೇಶ್ ಆಚಾರ್ಯ, ಗೌ. ಕೋಶಾಧಿಕಾರಿ ಹರೀಶ್ ಜೆ. ಸಾಲಿಯಾನ್, ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶೀತಲ್ ಕೋಟ್ಯಾನ್ ಯವರು ಅತಿಥಿಗಳನ್ನು ಗೌರವಿಸಿದರು..
ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ರಾಘವೇಂದ್ರ ತುಂಗಾ ಭಟ್ ಅವರಿಂದ ವಿಶೇಷ ಪೂಜೆ ನಡೆಯಿತು. ವಿಶ್ವನಾಥ್ ಶೆಟ್ಟಿ ಪೇತ್ರಿ ಕಾರ್ಯಕ್ರಮವನ್ನು ನಿರ್ವಹಿಸಿದರು.