
ದುಬಾಯಿ : ಜಸ್ಮಿತಾ ವಿವೇಕಾನಂದ ಅವರು ತೀಯಾ ಫ್ಯಾಮಿಲಿ ಯುಎಇಯ ಮಹಿಳಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದೇಶ ವಿದೇಶದಲ್ಲಿ ತೀಯಾ ಸಮಾಜದ ಇತಿಹಾಸದಲ್ಲೇ ಮಹಿಳಾ ಅಧ್ಯಕ್ಷೆಯಾಗಿರುವುದು ಇದು ಪ್ರಥಮ ಎನ್ನಲಾಗಿದೆ. 2004 ರ ಫೆಬ್ರವರಿ ತಿಂಗಳಲ್ಲಿ ಸಮಾಜ ಸೇವಕ ದಿ. ಉಮೇಶ್ ನಂತೂರ್ (ಸ್ಥಾಪಕ ಅಧ್ಯಕ್ಷರು), ಬಿಸಜಾಕ್ಷಿ ಎಂ ಪಿ, ಮತ್ತು ಈಶ್ವರ್ ಐಲ್ , (ಸ್ಥಾಪಕ ಪ್ರಧಾನ ಕಾರ್ಯದರ್ಶಿ) ಇವರ ನೇತೃತ್ವದಲ್ಲಿ ಸದಾಶಿವ ಮಂಜೇಶ್ವರ, ಯೋಗೇಶ್ ಉಳ್ಳಾಲ್, ನಾಗೇಶ್ ಸುವರ್ಣ ಜಯಪ್ರಕಾಶ್ ಕುಂಜತ್ತೂರು, ಧರ್ಮೇಂದ್ರ ಬಂಗೇರ ಮೊದಲಾದವರೊಂದಿಗೆ ತೀಯಾ ಸಮುದಾಯದ ಪ್ರಥಮ ಸಾಗರೋತ್ತರ ಸಂಘಟನೆಯನ್ನು ಸ್ಥಾಪಿಸಿ ಹಲವಾರು ಸಮಾಜಪರ ಕಾರ್ಯವನ್ನು ನಡೆಸಿ ಸಮಾಜ ಬಾಂಧವರಿಗೆ ವಿದೇಶದಲ್ಲಿ ಮಾತ್ರವಲ್ಲದೆ ತವರೂರಲ್ಲಿಯೂ ವಿವಿಧ ರೀತಿಯಲ್ಲಿ ಸಹಕರಿಸುತ್ತಾ ಬಂದಿದೆ.
ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಅಧ್ಯಕ್ಷರಾದ ರಾಜೇಶ್ ಪಳ್ಳಿಕೆರೆ ಯವರ ಅಧ್ಯಕ್ಷತೆಯಲ್ಲಿ ಜರಗಿದ್ದು ಅಮರ್ ಉಮೇಶ್ ನಂತೂರ್ ಉಪಾಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದು, ಸಮಾಜ ಸೇವಕ ಪ್ರೇಮ್ ಜೀತ್ ನಾರಾಯಣ್ ಪ್ರಧಾನ ಕಾರ್ಯದರ್ಶಿಯಾಗಿ, ಶೋಭಿತಾ ಪ್ರೇಮ್ ಜೀತ್ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು ಶ್ರೀನಿವಾಸ್ ಕೋಟ್ಯಾನ್ ಕೋಶಾಧಿಕಾರಿಯಾಗಿ ಮತ್ತು ಮನೋಹರ ಕೋಟ್ಯಾನ್ ಜೊತೆ ಕೋಶಾಧಿಕಾರಿಯಾಗಿ ಪುನರಾಯ್ಕೆಯಾಗಿದ್ದಾರೆ.
ವೇದಿಕೆಯಲ್ಲಿ ಹಿರಿಯ ಸದಸ್ಯರಾದ ಬಿಸಜಾಕ್ಷಿ ಎಂ ಪಿ, ಸತೀಶ್ ಪಾಲನ್, ಜಗನ್ನಾಥ ಕೋಟ್ಯಾನ್, ರಾಜೀವ್ ಬಿಲ್ಲವ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾಜದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಬಿಸಜಾಕ್ಷಿ ಎಂ ಪಿ ಅವರು ಸಮಾಜದ ಬೆಳವಣಿಗೆಗೆ ರಾಜೇಶ್ ಪಳ್ಳಿಕೆರೆ ಮತ್ತು ತಂಡದ ನಾಯಕತ್ವವನ್ನು ಮೆಚ್ಚಿದರು.
ನಿರ್ಗಮನ ಅಧ್ಯಕ್ಷರಾದ ರಾಜೇಶ್ ಪಳ್ಳಿಕೆರೆ ಅವರು ಮಾತನಾಡಿ ತಮ್ಮ ಅವಧಿಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತಾ ಕೋವಿಡ್ ಸಂದರ್ಭದಲ್ಲಿ ಕಿಟ್‌ಗಳನ್ನು ಒದಗಿಸುವ ಮೂಲಕ ಸಮಾಜಕ್ಕೆ ಸಹಾಯ ಮಾಡಿದ ಎಲ್ಲರನ್ನು ನೆನಪಿಸಿ ಸಮಾಜದ ಪ್ರತಿಬಾವಂತರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಒಳಗೊಂಡ ವಾರ್ಷಿಕೋತ್ಸವವನ್ನು ಆ ಸಮಯದಲ್ಲಿ ಆನ್‌ಲೈನ್‌ನಲ್ಲಿ ಯಶಸ್ವಿಯಾಗಿ ನಡೆಸಿದ್ದೇವೆ. ನಂತರ ಮೊದಲಿನಂತೆ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿದ್ದೇವೆ ಎಂದರು.
ಶ್ರೀ ನಾರಾಯಣ ಗುರು ಸ್ವಾಮಿಗಳ ತತ್ವಾದರ್ಶಗಳ ಪ್ರಕಾರ ಸಮಾಜದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಇತರ ಸಮುದಾಯದ ಸಂಘಟನೆಗಳ ಸದಸ್ಯರ ಉಪಸ್ಥಿತಿಯೊಂದಿಗೆ ನಮ್ಮ ಚಟುವಟಿಕೆಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ನಡೆಯುವಂತಾಗಬೇಕು. ಈ ವರ್ಷ ಯುಎಇಯಲ್ಲಿ ತೀಯಾ ಸಮಾಜದ 20 ನೇ ವರ್ಷವಾಗಿರುವುದರಿಂದ, ನಮ್ಮ ಸಂಘಟನೆಯಿಂದ ವಿಶೇಷ ಚಟುವಟಿಕೆಗಳಿಗೆ ಯೋಜನೆ ನಡೆಸಬೇಕಾಗಿದೆ ಎಂದು ತೀಯಾ ಸಮುದಾಯದ ಸಂಘಟನೆಗಳ ಪ್ರಥಮ ಮಹಿಳಾ ಅಧ್ಯಕ್ಷೆ ಜಸ್ಮಿತಾ ವಿವೇಕಾನಂದ್ ತಿಳಿಸಿದರು.