April 2, 2025
ಧಾರಾವಾಹಿ

ವಿವಶ..

ಧಾರವಾಹಿ 22
ಲಕ್ಷ್ಮಣ, ಸರೋಜಾಳ ದಾಂಪತ್ಯವು ಅಕ್ಕಯಕ್ಕನ ಮನೆಯಲ್ಲಿ ಆರಂಭವಾದ ಮರುವರ್ಷವೇ ಅವರಿಗೆ ಹೆಣ್ಣು ಮಗುವೊಂದು ಜನಿಸಿತು. ಅಕ್ಕಯಕ್ಕನೇ ಮಗುವಿಗೆ ಶಾರದಾ ಎಂದು ಹೆಸರಿಟ್ಟಳು. ಮರಳಿ ನಾಲ್ಕನೆಯ ವರ್ಷಕ್ಕೆ ಎರಡನೆಯ ಮಗಳು ಪ್ರಮೀಳಾ ಜನಿಸಿದಳು. ಈ ಎರಡು ಹೆರಿಗೆಯಲ್ಲೂ ಸರೋಜ ತನ್ನ ಸೊಸೆಯೇ ಎಂಬಷ್ಟು ಮುತುವರ್ಜಿಯಿಂದ ಅಕ್ಕಯಕ್ಕ ಅವಳ ಲಾಲನೆ ಪಾಲನೆ ಮಾಡುತ್ತ ಹೆರಿಗೆ ಮತ್ತು ಬಾಣಂತನದ ಜವಾಬ್ದಾರಿಗಳನ್ನೂ ವಹಿಸಿಕೊಂಡಳು. ಆದ್ದರಿಂದ ಸರೋಜಾಳಿಗೆ ಅವಳು ತನ್ನ ಹೆತ್ತವಳಿಗಿಂತಲೂ ಮಿಗಿಲಾಗಿಬಿಟ್ಟಿದ್ದಳು. ಅಷ್ಟಲ್ಲದೇ ಬೆಳೆಯುತ್ತಿರುವ ಹೆಣ್ಣು ಮಕ್ಕಳಿಗೂ ಅಕ್ಕಯಕ್ಕ ಅಜ್ಜಿಯ ಸ್ಥಾನವನ್ನು ತುಂಬುತ್ತಿದ್ದಳು. ಆ ಮಕ್ಕಳು ಕೂಡಾ ಹಗಲಿಡೀ ತಮ್ಮ ಆಟೋಟದಿಂದ ಹಿಡಿದು ರಾತ್ರಿ ಮಲಗುವಾಗ ಅವಳಿಂದ ಬಣ್ಣಬಣ್ಣದ ರೋಚಕ ಕಥೆಗಳನ್ನು ಹೇಳಿಸಿಕೊಂಡು ಜೊತೆಯಲ್ಲಿ ಮಲಗುವವರೆಗೂ ಹಚ್ಚಿಕೊಂಡಿದ್ದುವು. ಹೀಗಾಗಿ ಲಕ್ಷ್ಮಣ ಮತ್ತು ಸರೋಜ ತಮ್ಮ ಆರು ವರ್ಷಗಳ ಸಾಂಸಾರಿಕ ಬದುಕನ್ನು ಸುಲಲಿತವಾಗಿ ನಿಭಾಯಿಸಿಕೊಂಡು ಬಂದರು.
ಚೌಳುಕೇರಿಯಲ್ಲೇ ಸ್ವಂತದೊoದು ನೆಲೆ ಮಾಡಿಕೊಳ್ಳಲು ಬಯಸಿದ್ದ ಲಕ್ಷ್ಮಣ ದಂಪತಿ ತಮಗೆ ಬಿಡುವು ದೊರೆತಾಗಲೆಲ್ಲ ಊರಲ್ಲೆಲ್ಲಾದರೂ ಒಂದಿಷ್ಟು ಖಾಲಿ ಜಾಗ ಸಿಗಬಹುದೇನೋ ಎಂದು ಹುಡುಕಾಡುತ್ತಿದ್ದರು. ಅದರ ಖರೀದಿಗಾಗಿ ಇಬ್ಬರೂ ನಡುರಾತ್ರಿಯವರೆಗೂ ಬೀಡಿ ಕಟ್ಟುವ ಕಾಯಕದಲ್ಲೂ ತೊಡಗಿದ್ದರು. ಆದರೆ ಬಹಳ ಕಾಲದಿಂದಲೂ ಹಚ್ಚಹಸುರಾಗಿ ನಳನಳಿಸುತ್ತಿದ್ದ ಭೂಮಿಗೆ ಏಕಾಏಕಿ ಬರಗಾಲ ಬಡಿದರೆ ಏನಾಗುತ್ತದೋ ಹಾಗೆಯೇ ಲಕ್ಷ್ಮಣ ಸರೋಜಾಳ ಜೀವನದಲ್ಲೂ ತಟ್ಟನೆ ವಿಚಿತ್ರ ಬದಲಾವಣೆಯೊಂದು ಕಾಣಿಸಿಕೊಂಡಿತು. ಕೆಲವು ವರ್ಷಗಳ ಕಾಲ ಮನೆಯೊಳಗೆಯೇ ಕುಳಿತು ಸಂಸಾರ ನಿಭಾಯಿಸಲು ಹೆಣಗುತ್ತಿದ್ದ ಲಕ್ಷ್ಮಣ ಒಮ್ಮೆ ಇದ್ದಕ್ಕಿದ್ದಂತೆ ತನ್ನ ಲವಲವಿಕೆಯನ್ನು ಕಳೆದುಕೊಳ್ಳತೊಡಗಿದ. ಹಿಂದೆಲ್ಲ ಬೀಡಿಕಟ್ಟುವ ದುಡಿಮೆಯೊಂದಿಗೆ ಹೆಂಡತಿಗೆ ಸಹಾಯವಾಗಲೆಂದು ಒಂದಷ್ಟು ಉರುವಲು ತಂದು ಶೇಖರಿಸಿಡುವುದು. ವಾರದ ಸಂತೆಗೆ ಹೋಗಿ ಕಾಯಿಪಲ್ಯೆಗಳನ್ನೂ, ದಿನಸಿ ಸಾಮಾನುಗಳನ್ನೂ ಹೊತ್ತು ತರುತ್ತಿದ್ದುದರೊಂದಿಗೆ ಮಕ್ಕಳ ಬೇಕುಬೇಡಗಳನ್ನೂ ಸದಾ ನಿಭಾಯಿಸುತ್ತಿದ್ದವನು ಈಗೀಗ ಆ ಕುರಿತು ಒಂದು ತೆರನಾದ ನಿರ್ಲಕ್ಷ್ಯವನ್ನು ತಳೆಯತೊಡಗಿದ್ದ. ಹೆಣ್ಣು ಯಾವತ್ತಿದ್ದರೂ ಗಂಡಿನ ಅಡಿಯಾಳಾಗಿಯೇ ಇರಬೇಕಾದವಳು. ಅವಳು ಗಂಡಸಿನ ಅವಶ್ಯಕತೆಗಳನ್ನಷ್ಟೇ ಪೂರೈಸಲು ಹುಟ್ಟಿದವಳು. ಅದನ್ನು ಹೊರತುಪಡಿಸಿ ಅವಳಿಗೆ ಬೇರೊಂದು ಸ್ವಂತ ಅಸ್ತಿತ್ವ ಇಲ್ಲ! ಎಂದು ತನಗೆ ರಕ್ತಗತವಾಗಿ ಬಂದಿದ್ದ ಪುರುಷಪ್ರಧಾನ ಧೋರಣೆಯೊಂದು ಅವನ ಬಾಹ್ಯ ಭಾವನೆ, ಯೋಚನೆಗಳಿಗೆ ನಿಲುಕದೆಯೇ ಸರೋಜಾಳೊಡನೆ ಅವನು ತಾತ್ಸಾರವಾಗಿ ವರ್ತಿಸುವಂತೆಯೂ, ಮಕ್ಕಳ ಮೇಲೆ ಅಸಡ್ಡೆ ತೋರುವಂತೆಯೂ ಮಾಡತೊಡಗಿತ್ತು. ಇಂಥ ಮನಸ್ಥಿತಿಯು ಅವನೊಳಗೆ ಕಾರ್ಯರೂಪಕ್ಕಿಳಿದ ನಂತರ ಅವನು ಬೀಡಿಕಟ್ಟುವ ದುಡಿಮೆಯನೊಂದನ್ನುಳಿದು ಉಳಿದೆಲ್ಲ ಜವಾಬ್ದಾರಿಯನ್ನೂ ಒಂದೊoದಾಗಿ ಸರೋಜಾಳ ಮೇಲೆ ಹೊರಿಸುತ್ತ ಬಂದು ತಾನು ನಿಶ್ಚಿಂತನಾಗಿ ಇರತೊಡಗಿದ.
ಇತ್ತ ಮನೆಯ ಜವಾಬ್ದಾರಿಯೊಂದಿಗೆ ಗಂಡ ಮತ್ತು ಮಕ್ಕಳ ಪಾಲನೆ ಪೋಷಣೆಯನ್ನೂ ನಿಭಾಯಿಸುತ್ತ ಬರುತ್ತಿದ್ದ ಸರೋಜಾಳೂ ಹೈರಾಣಾಗಿದ್ದಳು. ಇನ್ನೊಂದೆಡೆ ಎರಡೂ ಹೆಣ್ಣು ಮಕ್ಕಳು ಬೇರೆ! ಅವರ ಭವಿಷ್ಯದ ಚಿಂತೆಯೂ ಅವಳನ್ನು ಕಾಡುತ್ತಿತ್ತು. ಇಂದಿನ ದಿನ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಒಂದೆರಡು ಸಾವಿರ ಬೀಡಿ ಚುರುಟಿದರೆ ಮಾತ್ರ ನಾಳೆಗೆ ಅನ್ನ ಉಂಟು, ಇಲ್ಲದಿದ್ದರಿಲ್ಲ! ಎಂಬoತಿರುವ ಪರಿಸ್ಥಿತಿಯಲ್ಲಿ ಮಕ್ಕಳ ಭವಿಷ್ಯವನ್ನು ರೂಪಿಸುವುದಾದರೂ ಹೇಗೆ? ಎಂದು ಅವಳು ಆಗಾಗ ಚಿಂತೆಗೀಡಾಗುತ್ತಿದ್ದಳು. ಆದರೆ ಬೇರೆ ಕೆಲಸವನ್ನಾದರೂ ಮಾಡಿ ಒಂದಿಷ್ಟು ಹೆಚ್ಚಿಗೆ ಸಂಪಾದಿಸುವ ಎಂದರೆ ತನಗೂ ಗಂಡನಿಗೂ ಕೂಲಿ ಕೆಲಸವೊಂದನ್ನು ಬಿಟ್ಟು ಬೇರೇನು ಗೊತ್ತಿದೆ? ಒಂದೆರಡು ಮನೆಗಳ ಕಸಮುಸುರೆಯನ್ನಾದರೂ ತಿಕ್ಕಿ ಗಳಿಸುವ ಎಂದರೆ ಈ ಹಳ್ಳಿಕೊಂಪೆಯಲ್ಲಿ ಶ್ರೀಮಂತರ ಮನೆಗಳೇ ಇಲ್ಲವಲ್ಲ! ಎಂದುಕೊoಡು ನಿರಾಶಳಾಗುತ್ತಿದ್ದಳು. ಆಗೆಲ್ಲ, ಕಡಿದರೆ ನಾಲ್ಕಾಳಾಗುವಂಥ ಗಟ್ಟಿಗ ಗಂಡ ಹೆಣ್ಣು ಹೆಂಗಸಿನoತೆ ಜೀವಮಾನವಿಡೀ ಮನೆಯೊಳಗೆಯೇ ಕುಳಿತು ಬೀಡಿ ತಿರುವುತ್ತಿದ್ದಾನಲ್ಲ! ಎಂದು ತಳಮಳಗೊಳ್ಳುತ್ತಿದ್ದವಳಲ್ಲಿ ಅವನ ಮೇಲೆ ಅಸಡ್ಡೆಯೂ ಮೂಡುತ್ತಿತ್ತು. ಆದ್ದರಿಂದ ತನ್ನ ಗಂಡ ಯಾವುದಾದರೊಂದು ಹೆಚ್ಚು ಆದಾಯ ತರುವಂಥ ದುಡಿಮೆಯನ್ನು ಹಿಡಿಯಬೇಕು. ಜೊತೆಗೆ ತಾನೂ ದುಡಿಯಬೇಕು. ಆಗ ಮಾತ್ರ ಮನೆಯ ಪರಿಸ್ಥಿತಿ ಸುಧಾರಿಸುವುದರೊಂದಿಗೆ ತಾವು ಕಟ್ಟಿಕೊಂಡ ಕನಸುಗಳೂ ನನಸಾದಾವು ಎಂದುಕೊಳ್ಳುತ್ತ ಅಂಥ ಕಾಲವನ್ನು ಭರವಸೆಯಿಂದ ಕಾಯುತ್ತ ದಿನ ಕಳೆಯುತ್ತಿದ್ದಳು.
ಆದರೆ ಲಕ್ಷ್ಮಣನಿಗೆ ತನ್ನ ನೀರಸ ಬದುಕಿನ ಮೇಲೆ ಅದಾಗಲೇ ಬೇಸರ ಬಂದಿದ್ದುದರಿoದ ಈಗೀಗ ಅವನಿಗೆ ಬೀಡಿಕಟ್ಟುವುದರಲ್ಲೂ ಉಮೇದು ಕಡಿಮೆಯಾಗಿತ್ತು. ಅದೇ ಕಾರಣಕ್ಕೆ ಆಗಾಗ ಜಿಗುಪ್ಸೆಗೊಳಗಾಗುತ್ತಿದ್ದವನು ಅದರಿಂದ ಹೊರಬರಲು ಬೇರೊಂದು ಮಾರ್ಗೋಪಾಯವನ್ನೂ ಕಂಡುಕೊoಡ. ಶನಿವಾರ ಬೀಡಿಯ ಮಜೂರಿ ಕೈಸೇರುತ್ತಲೇ ಮೆತ್ತಗೆ ಚೌಳುಕೇರಿಯ ಸಣ್ಣದೊಂದು ಗಡಂಗಿಗೆ ಹೋಗಿ ಬರುವ ಅಭ್ಯಾಸವನ್ನಾರಂಭಿಸಿದ! ಅಂದೊoದು ದಿನ ರಾತ್ರಿ ತನ್ನ ಗಂಡ ಕುಡಿದು ತೂರಾಡುತ್ತ ಬಂದುದನ್ನು ಕಂಡ ಸರೋಜ ದಂಗಾಗಿಬಿಟ್ಟಳು. ಇಷ್ಟರವರೆಗೆ ಅವನಿಗೆ ಬೀಡಿ ಸೇದುವುದೊಂದನ್ನು ಬಿಟ್ಟರೆ ಬೇರೆ ದುರಭ್ಯಾಸವಿಲ್ಲದಿದ್ದುದು ಅವಳಿಗೆ ಅವನ ಮೇಲೆ ಗಟ್ಟಿ ಭರವಸೆಯೊಂದಿತ್ತು. ಆದರೆ ಇಂದು ಅವನು ಕುಡಿತಕ್ಕೂ ಬಿದ್ದುದು ಅವಳನ್ನು ದುಃಖದ ಮಡುವಿಗೆ ತಳ್ಳಿತು. ಗಂಡನ ಮೇಲೆ ತೀವ್ರ ಅಸಮಾಧಾನಗೊಂಡು ಚೆನ್ನಾಗಿ ಬೈದುಬಿಟ್ಟಳು. ಆದರೆ ಲಕ್ಷ್ಮಣನೂ ಹೆಂಡತಿಯ ಬೈಗುಳ, ಗೋಳಾಟ ಮತ್ತು ಬುದ್ಧಿವಾದಗಳನ್ನೆಲ್ಲ ಮೌನವಾಗಿ ಕೇಳಿದವನು ಸ್ವಲ್ಪಹೊತ್ತಿನ ಬಳಿಕ ತನ್ನ ತಪ್ಪಿನರಿವಾಗಿ ಪಶ್ಚಾತ್ತಾಪಪಟ್ಟವನಂತೆ ಅವಳೆದುರು ಕಣ್ಣೀರು ಸುರಿಸಿದ.
ಗಂಡನ ಅಳು ಸರೋಜಾಳನ್ನು ಕರಗಿಸಿತು. ಪಾಪ! ಅವರಿಗೆ ತಮ್ಮ ತಪ್ಪಿನರಿವಾಗಿದೆ. ಯಾರೋ ಹಾಳಾದವರು ಒತ್ತಾಯದಿಂದ ಕುಡಿಸಿರಬೇಕು. ಇನ್ನುಮುಂದೆ ಕುಡಿಯಲಾರರು ಎಂದುಕೊoಡು ಶಾಂತಳಾದಳು. ಆದರೂ ಮರುದಿನ ಮುಂಜಾನೆ ತಡವಾಗೆದ್ದ ಗಂಡನನ್ನು ಮತ್ತೊಮ್ಮೆ ಆಕ್ಷೇಪಿಸಿದಳು. ಆದರೆ ಹಿಂದಿನ ದಿನದ ಮದಿರೆಯ ಸುಖವನ್ನು ತಣ್ಣಗೆ ಮೆಲುಕು ಹಾಕುತ್ತಿದ್ದ ಲಕ್ಷ್ಮಣನಿಗೆ ಈಗ ಮಡದಿಯ ಬುದ್ಧಿಮಾತು ಕಿರಿಕಿರಿಯೆನಿಸಿತು. ‘ಥೂ! ನೀನೆಂಥದು ಮಾರಾಯ್ತೀ ಹೀಗೆ ಪೀಡಿಸುವುದು! ನಾನೇನು ದಿನಾ ಕುಡಿದು ಬರುತ್ತೇನಾ? ಏನೋ ಕೆಲವು ಕಾಲದಿಂದ ಮನಸ್ಸಿಗೆ ಬೇಸರವಾಗಿತ್ತು. ಅದನ್ನು ಮರೆಯಲು ಸ್ವಲ್ಪ ಕುಡಿದೆನಷ್ಟೇ. ನಾನು ದುಡಿಯುವ ಗಂಡಸು! ವಾರದ ಕೊನೆಯಲ್ಲಿ ಒಂದಿಷ್ಟು ಕುಡಿದರೆ ಮಹಾ ತಪ್ಪೇನು? ನಾನು ಹೇಗೆ ಬದುಕಿದರೂ ನಿಮ್ಮನ್ನು ಬೀದಿಗೆ ಹಾಕುವುದಿಲ್ಲ. ಅದರ ಬಗ್ಗೆ ಹೆದರಬೇಡ. ಮನೆಯೊಳಗೆ ಕುಳಿತು ಕುಳಿತು ನನಗೂ ಸಾಕಾಗಿಬಿಟ್ಟಿದೆ. ಒಂದು ದಿನವಾದರೂ ನೆಮ್ಮದಿಯಿಂದಿರಲು ಬಿಡು ಮಾರಾಯ್ತೀ. ನಿನ್ನ ದಮ್ಮಯ್ಯ…!’ ಎಂದು ದೈನ್ಯದಿಂದ ಹೇಳುತ್ತ ಅವಳ ಬಾಯಿ ಮುಚ್ಚಿಸಿದ. ಆದ್ದರಿಂದ ಅವಳು ಕೂಡಾ, ವಾರದಲ್ಲಿ ಒಂದು ದಿನ ಅಲ್ಲವಾ. ಕುಡಿದರೆ ಕುಡಿಯಲಿ. ಅದು ಅಭ್ಯಾಸವಾಗದಂತೆ ನೋಡಿಕೊಂಡರಾಯ್ತು! ಎಂದು ಬೇರೆ ವಿಧಿಯಿಲ್ಲದೆ ಆ ವಿಷಯವನ್ನು ಅಲ್ಲಿಗೆ ಬಿಟ್ಟು ಸುಮ್ಮನಾದಳು.
ಹೀಗೆ ಮುಂದಿನ ಶನಿವಾರವೂ ಬಂತು. ಲಕ್ಷ್ಮಣ ಆ ದಿನವನ್ನು ಚಾತಕಪಕ್ಷಿಯಂತೆ ಕಾಯುತ್ತಿದ್ದವನು, ಸಂಜೆಯಾಗುತ್ತಲೇ ಮೆತ್ತಗೆ ಗಡಂಗಿನತ್ತ ಹೊರಟ. ಒಂದು ತೊಟ್ಟೆ ಸಾರಾಯಿ ಕೊಂಡ. ತೊಟ್ಟೆಯ ತುದಿಯನ್ನು ಹಲ್ಲಿನಿಂದ ಕಚ್ಚಿ ಕಿತ್ತು ಗಟಗಟನೆ ಗಂಡಲಿಗಿಳಿಸಿದ. ಚಕ್ಕುಲಿಯೊಂದನ್ನು ಪುಡಿಮಾಡಿ ಬಾಯಿಗೆಸೆದುಕೊಂಡು ಕರುಕುರು ಜಗಿಯುತ್ತ ಅಲ್ಲೇ ಸ್ವಲ್ಪಹೊತ್ತು ಕುಳಿತ. ಅಷ್ಟರಲ್ಲಿ ಅಲ್ಲಿಗೆ ವಿಶೇಷ ವ್ಯಕ್ತಿಯೊಬ್ಬರು ಆಗಮಿಸುತ್ತ ಅವನ ಗಮನವನ್ನು ಸೆಳೆದರು. ಅವರು ಪೈಂಟಿoಗ್ ಕಾಂಟ್ರಕ್ಟರ್ ಉಸ್ಮಾನ್ ಸಾಹೇಬರು. ಅವರು ತಮ್ಮಿಬ್ಬರು ಎಡಗೈ, ಬಲಗೈ ಭಂಟರಾದ ರe಼Áಕ್, ಇಸ್ಮಾಯಿಲ್‌ರೊಂದಿಗೆ ಗಡಂಗಿನ ಸಮೀಪವಿದ್ದ ವಿಶಾಲವಾದ ಆಲದ ಮರದ ಕಟ್ಟೆಯ ಮೇಲೆ ಬಂದು ಕುಳಿತರು. ಎರಡು ಕೈಗಳ ಎಂಟು ಬೆರಳುಗಳಿಗೆ ಬಣ್ಣಬಣ್ಣದ ಹರಳಿನ ಎರಡೆರಡು ಬೆಳ್ಳಿಯುಂಗುರ, ಫಳಫಳ ಹೊಳೆಯುವ ಚಿನ್ನದ ರ‍್ಯಾಡೋ ವಾಚು ಹಾಗು ಬೆಳ್ಳಿಯ, ದಪ್ಪನೆಯ ಬ್ರಾಸ್ಲೆಟ್ ಧರಿಸಿದ್ದ ಸಾಹೇಬರು ಅದಕ್ಕೊಪ್ಪುವ ಹಾಲು ಬಿಳುಪಿನ ಪ್ಯಾಂಟು ಮತ್ತು ಥಳಥಳಿಸುವ ಅದೇ ಬಣ್ಣದ ಮೈಸೂರು ಸಿಲ್ಕ್ ಶರ್ಟ್ನ್ನೂ ಬಿಳಿಯ ಚಪ್ಪಲಿಯನ್ನೂ ತೊಟ್ಟುಕೊಂಡು ಎದೆಯ ಭಾಗದ ಎರಡು ಗುಂಡಿಗಳನ್ನು ತೆರೆದು ಕರಿ ಕೂದಲು ತುಂಬಿದ ಎದೆಯನ್ನು ಹದವಾಗಿ ನೀವಿಕೊಳ್ಳುತ್ತ ಶ್ರೀಮಂತಿಕೆಯ ದರ್ದು ದೌಲತ್ತುಗಳ ಪ್ರತಿರೂಪದಂತೆ ಕಾಣುತ್ತಿದ್ದರು. ತಮ್ಮ ಕೈಯಲ್ಲಿದ್ದ ದೊಡ್ಡ ಬ್ಯಾಗೊಂದನ್ನು ಬಿಚ್ಚಿ ಒಂದಷ್ಟು ನೋಟಿನ ಕಂತೆಗಳನ್ನು ತೆಗೆದು ಕಟ್ಟೆಯ ಮೇಲಿಟ್ಟವರು ತಮ್ಮ ಸುತ್ತ ನೆರೆದ ಹತ್ತಿಪ್ಪತ್ತು ಕೂಲಿಯಾಳುಗಳಿಗೆ ವಾರದ ಮಜೂರಿಯ ಬಟವಾಡೆಯಲ್ಲಿ ತೊಡಗಿದರು. ಸಾಹೇಬರ ದಢೂತಿ ದೇಹವನ್ನೂ, ಕಣ್ಣು ಕೋರೈಸುವ ಅವರ ಸಿರಿವಂತಿಕೆಯನ್ನೂ ಕಂಡ ಲಕ್ಷ್ಮಣನಿಗೆ ಅವರ ಮೇಲೆ ತಟ್ಟನೆ ಗೌರವಾದರಗಳು ಮೂಡಿಬಿಟ್ಟವು. ತಮ್ಮ ನೌಕರರಿಗೆ ಅವರು ನಗುನಗುತ್ತ ಎಣಿಸೆಣಿಸಿ ಕೊಡುತ್ತಿದ್ದ ಹೊಸ ಹೊಸ ನೋಟುಗಳನ್ನು ಕಂಡವನು ಇನ್ನೂ ದಂಗಾಗಿಬಿಟ್ಟ. ತಾನೂ ಒಬ್ಬ ಗಂಡಸಾಗಿ ಇಷ್ಟು ವರ್ಷ ಯಾರದ್ದೋ ಗುಡಿಸಲಲ್ಲಿ ಬಾಡಿಗೆಗಿದ್ದುಕೊಂಡು ಬೀಡಿಕಟ್ಟಿ ಸಂಪಾದಿಸುತ್ತಿದ್ದ ಜುಜುಬಿ ಹಣದ ಮೇಲೆ ಅವನಿಗೆ ಆ ಕ್ಷಣವೇ ತಿರಸ್ಕಾರ ಹುಟ್ಟಿಬಿಟ್ಟಿತು. ಛೇ! ಛೇ! ತಾನು ಇಷ್ಟು ವರ್ಷ ಮನೆಯೊಳಗೆ ಕುಳಿತು ಕಾಲಾಹರಣ ಮಾಡಿಬಿಟ್ಟೆನಲ್ಲ, ನನ್ನದೂ ಒಂದು ಜನ್ಮವಾ ಥೂ!’ ಎಂದು ಉಗಿದುಕೊಂಡವನು, ಇನ್ನು ಮುಂದೆ ಅದೇನೇ ಆಗಲಿ ಇದೇ ಸಾಹುಕಾರರೊಡನೆ ಕೆಲಸಕ್ಕೆ ಸೇರಿಕೊಂಡು ತಾನೂ ಎಲ್ಲರಂತೆ ಸಂಪಾದಿಸಬೇಕು!’ ಎಂದು ನಿರ್ಧರಿಸಿಬಿಟ್ಟ.


ಉಸ್ಮಾನ್ ಸಾಹೇಬರು ಸುಮಾರು ನಲವತೈದರ ಆಸುಪಾಸಿನ, ಸದಾ ಹಸನ್ಮುಖಿಯಾದ ಮನುಷ್ಯ. ಮನೆ, ಕಟ್ಟಡಗಳಿಗೆ ಸುಣ್ಣಬಣ್ಣ ಬಳಿಯುವ ಸಾಹೇಬರ ಗುತ್ತಿಗೆದಾರಿಕೆಯು ಕುದುರುಬೆಟ್ಟಿನಿಂದ ಹಿಡಿದು ಶಿವಕಂಡಿಕೆಯವರೆಗೂ ಹಬ್ಬಿತ್ತು. ಅದರೊಂದಿಗೆ ದೊಡ್ಡಮಟ್ಟದ ಮರದ ವ್ಯಾಪಾರವೂ ಇವರ ಇನ್ನೊಂದು ಮುಖ್ಯ ಉದ್ದಿಮೆಯಾಗಿತ್ತು. ಸಾಹೇಬರು ಅದೆಷ್ಟು ಶ್ರೀಮಂತರೋ ಅಷ್ಟೇ ದಯಾಮಯಿ ವ್ಯಕ್ತಿ ಕೂಡಾ! ಎಂದು ಹೆಸರು ಮಾಡಿದ್ದರು. ಕಾರಣ ಅವರು ತಮ್ಮ ಜಾತಿ, ಮತಬಾಂಧವರಿಗೆ ಮಾತ್ರವೇ ಅಲ್ಲದೇ ಇತರೆಲ್ಲ ಜಾತಿಯ ಬಡಬಗ್ಗರಿಗೂ ಮೇಲಾಗಿ ಅನಾಥ ಮತ್ತು ಬಡ ಹೆಣ್ಣುಮಕ್ಕಳಿಗೆ ಮದುವೆ, ಮುಂಜಿ ಮಾಡಿಸುವಲ್ಲಿಯೂ ಹಾಗೂ ರೋಗರುಜಿನಗಳಿಂದ ನರಳುವಂಥ ನತದೃಷ್ಟರಿಗೂ ನಾನಾ ರೀತಿಯಿಂದ ಉಪಕಾರ ಮಾಡುವಲ್ಲಿ ಅವರ ಅಂತಃಕರಣವು ಸದಾ ಮಿಡಿಯುತ್ತಿರುತ್ತದೆ! ಆ ನಿಟ್ಟಿನಲ್ಲಿ ಅವರೊಬ್ಬ ಕೊಡುಗೈ ದಾನಿಯೇ ಸರಿ! ಎಂದು ಊರ ಅನೇಕರು ಆಗಾಗ ಹಾಡಿ ಹೊಗಳುತ್ತಿರುತ್ತಾರೆ.
ಇಂಥ ಸಾಹೇಬರ ದೊಡ್ಡತನವನ್ನು ಪದೇಪದೇ ಕಾಣುತ್ತಿದ್ದುದರಿಂದಲೋ ಅಥವಾ ಬೇರೆ ಇನ್ಯಾವ ಕಾರಣದಿಂದಲೋ ಪೊಲೀಸ್ ಇಲಾಖೆಯಿಂದ ಹಿಡಿದು ಅರಣ್ಯ ಇಲಾಖೆಯವರೆಗೂ ಅವರಿಗೆ ಬಹಳ ಒಳ್ಳೆಯ ಪ್ರಭಾವವಿತ್ತು. ಆದ್ದರಿಂದ ಊರಿನಲ್ಲಿ ಆಗಾಗ ನಡೆಯುವಂಥ ಸಣ್ಣಪುಟ್ಟ ಗಲಾಟೆ ಗದ್ದಲಗಳು ಮತ್ತು ಅನಾಪೇಕ್ಷಿತ ವ್ಯಾಜ್ಯ, ತಕರಾರುಗಳೆಲ್ಲ ಪೊಲೀಸ್‌ಠಾಣೆ, ಕೋರ್ಟು ಕಛೇರಿ ಹತ್ತಲು ಹೋಗದೆ ಉನ್ಮಾನ್ ಸಾಹೇಬರ ಸಮ್ಮುಖದಲ್ಲಿಯೇ ಇತ್ಯಾರ್ಥವಾಗುವುದೂ ಇತ್ತು. ಆದರೆ ಉಸ್ಮಾನ್ ಸಾಹೇಬರಿಗೆ ತಮ್ಮೂರು ಚೌಳುಕೇರಿಯಲ್ಲಿ ಆಗದವರೂ ಸಾಕಷ್ಟು ಜನರಿದ್ದಾರೆ. ಅಂಥವರು ತಮಗೆ ಪುರುಸೋತ್ತಾದಾಗಲೆಲ್ಲ ಅಲ್ಲಲ್ಲಿ ಕುಳಿತು ಹರಟುತ್ತ, ‘ಅಯ್ಯೋ…ಉಸ್ಮಾನ್ ಸಾಹೇಬನೊಬ್ಬ ಪ್ರಾಮಾಣಿಕ ಮರದ ವ್ಯಾಪಾರಿಯಲ್ಲ ಬಿಡಿ ಮಾರಾಯ್ರೇ! ಅವನು ಸುತ್ತಮುತ್ತಲಿನ ಗಂಧದ ಮರಗಳನ್ನೂ ಮತ್ತಿತರ ಬೆಲೆಬಾಳುವ ಮರಮಟ್ಟಗಳನ್ನೂ ಕದ್ದು ಕಡಿದು ಮಾರಿ ದುಡ್ಡು ಮಾಡುವವನು. ಹಾಗಾಗಿಯೇ ಅವನು ಮನಬಂದAತೆ ದಾನಧರ್ಮ ಮಾಡುತ್ತಿರುವುದು ಮತ್ತದರಿಂದಲೇ ದೊಡ್ಡ ದೊಡ್ಡ ಅಧಿಕಾರಿಗಳ ಅಭಯಹಸ್ತವೂ ಅವನಿಗಿರುವುದು!’ ಎಂದು ಮಾತಾಡಿಕೊಳ್ಳುತ್ತ ಅದನ್ನೇ ಬಿಸಿಬಿಸಿ ಸುದ್ದಿಯಾಗಿ ಹರಡುತ್ತಿದ್ದರು. ಇಂಥ ಮಾತುಗಳು ಹಿಂದೊಮ್ಮೆ ಲಕ್ಷö್ಮಣನ ಕಿವಿಗೂ ಬಿದ್ದಿದ್ದವು. ಆದರೆ ಊರ ಶೇಖಡಾ ಎಪ್ಪತ್ತರಷ್ಟು ಮಂದಿ ಸಾಹೇಬರ ಅಭಿಮಾನಿಗಳಾಗಿದ್ದರು. ಆದಕಾರಣ ಅವನು ಅದರ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗದೆ, ತಾನು ಆದಷ್ಟುಬೇಗ ಅವರನ್ನು ಭೇಟಿಯಾಗಿ ಕೆಲಸವನ್ನು ಗಿಟ್ಟಿಸಿಕೊಳ್ಳಲು ಮನಸ್ಸು ಮಾಡಿದ.
ಆವತ್ತು ಆದಿತ್ಯವಾರ. ಅಂದು ಬೆಳಿಗ್ಗೆ ಲಕ್ಷ್ಮಣ ಎಂದಿಗಿoತಲೂ ಬೇಗನೆದ್ದ. ನಿತ್ಯಕರ್ಮ ಮುಗಿಸಿ ಬೀಡಿಗೆ ಎಲೆಗಳನ್ನು ಕತ್ತರಿಸಿ ಒದ್ದೆ ಬಟ್ಟೆಯಲ್ಲದನ್ನು ಸುತ್ತಿ ಮೆತ್ತಗಾಗಲಿಟ್ಟ. ಬಳಿಕ ಉಪಹಾರ ಸೇವಿಸಲು ಕುಳಿತು, ‘ಸರೂ, ನಾನು ಸ್ವಲ್ಪ ಉಸ್ಮಾನ್ ಸಾಹೇಬರ ಮನೆಗೆ ಹೋಗಿ ಬರುತ್ತೇನೆ ಮಾರಾಯ್ತಿ. ಅವರಲ್ಲಿ ಪೈಂಟಿoಗ್ ಕೆಲಸವೇನಾದರೂ ಸಿಗುತ್ತದಾ ನೋಡಬೇಕು!’ ಎಂದ ಮೃದುವಾಗಿ. ಅವನ ಮಾತು ಕೇಳಿ ಸರೋಜಾಳಿಗೆ ಬಹಳ ಖುಷಿಯಾಯಿತು. ಅವಳಿಗೂ ಅಕ್ಕಯಕ್ಕನಿಂದ ಅಕ್ಕಿ, ಸೀಮೆಯೆಣ್ಣೆ ಮತ್ತು ಒಣಮೀನು ಎಂದೆಲ್ಲ ಸಾಲ ಪಡೆಪಡೆದು ಸಾಕಾಗಿ ಹೋಗಿತ್ತು. ಆ ತಾಯಿ, ತಾನು ಕೇಳಿದಾಗಲೆಲ್ಲ ಬೇಸರವಿಲ್ಲದೆ ಕೊಡುತ್ತಾರೆ. ಆದರೂ ಈಗೀಗ ತಾನವರಿಗೆ ಸದರವಾಗುತ್ತಿದ್ದೇನೇನೋ ಎಂಬ ಭಾವ ಅವಳನ್ನು ಕಾಡುತ್ತಿತ್ತು. ಹಾಗಾಗಿ ಗಂಡನ ಇಂದಿನ ನಿರ್ಧಾರ ಅವಳಲ್ಲೂ ಹೊಸ ಭರವಸೆಯನ್ನು ಮೂಡಿಸಿತು. ‘ಆಯ್ತು ಮಾರಾಯ್ರೇ ಹೋಗಿ ಬನ್ನಿ. ದೇವರು ಇನ್ನು ಮೇಲಾದರೂ ನಮ್ಮ ಮೇಲೆ ಕರುಣೆ ತೋರಿಸಲಿ!’ ಎಂದು ಆರ್ದ್ರಳಾಗಿ ಅಂದಳು. ಲಕ್ಷ್ಮಣನಿಗೂ ಅವಳ ಮಾತು ಉತ್ಸಾಹ ತುಂಬಿತು. ಉಪಹಾರ ಮಾಡೆದ್ದವನು ಸುಮಾರಾದ ಲುಂಗಿಯೊoದನ್ನು ಉಟ್ಟುಕೊಂಡು, ಹೊಲಿಸಿದಂದಿನಿoದ ಇಸ್ತಿç ಕಾಣಿಸದೆ ಸುಕ್ಕುಗಟ್ಟಿದ್ದ ಎರಡು ಅಂಗಿಗಳಲ್ಲಿ ಒಂದನ್ನು ಕೊಡವಿ ಧರಿಸಿಕೊಂಡ. ಕುತ್ತಿಗೆಯ ಬೆವರು ಸೋಕಿ ಅಂಗಿಯ ಕೊರಳಪಟ್ಟಿ ಹಾಳಾಗದಂತೆ ಕರವಸ್ತçವೊಂದನ್ನು ಉದ್ದನೆ ಮಡಚಿ ಇರಿಸಿಕೊಂಡು ಹೊರಟ.
ಸುಮಾರು ಅರ್ಧ ಗಂಟೆಯಲ್ಲಿ ಲಕ್ಷ್ಮಣ ಚೌಳುಕೇರಿ ಮತ್ತು ನಾಲ್ಮುಖಪೇಟೆಯ ನಡುವೆಯಿದ್ದ ಮಲ್ಲಕಳ ಹೊಳೆಯ ಸಮೀಪದ ಸೇತುವೆಯ ಪಕ್ಕದ ಉಸ್ಮಾನ್ ಸಾಹೇಬರ ಮನೆಯೆದುರು ಬಂದು ನಿಂತ. ಸಾಹೇಬರ ಎತ್ತರದ ಸೌಧವನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿದವನು ಅದರ ಭವ್ಯತೆಗೆ ಮೂಕನಾದ! ಒಂದೂವರೆ ಆಳೆತ್ತರದ ಬೆಳ್ಳಗಿನ, ಜೈಲಿನ ಗೋಡೆಯಂಥ ಆವರಣದೊಳಗೆ ತಲೆಯೆತ್ತಿ ನಿಂತಿದ್ದ ಹಾಲು ಬಿಳುಪಿನ ಪುಟ್ಟ ಅರಮನೆಯಂಥ ಮಹಲು ಅವನ ಮನಸೂರೆಗೊಂಡಿತು. ದೊಡ್ಡ ಗೇಟಿನ ಮಣಭಾರದ ಚಿಲಕವನ್ನು ವಿನಯದಿಂದ ಎತ್ತಿ ತೆಗೆದು ಒಳಗಡಿಯಿಟ್ಟ. ಐದಾರು ಗಜಗಳಷ್ಟು ದೂರವಿದ್ದ ಮನೆಯ ವಿಶಾಲ ವರಾಂಡದಲ್ಲಿ ಬಿಳಿಯ ಮುಂಡು ಮತ್ತು ಸಣ್ಣ ತೂತಿನ ಬನಿಯನ್ ಧರಿಸಿ, ಸಾಗುವಾನಿ ಮರದ ಕೆತ್ತನೆಯ ಆರಾಮ ಕುರ್ಚಿಯ ಮೇಲೆ ಮೈಚೆಲ್ಲಿ ಕುಳಿತಿದ್ದ ಸಾಹೇಬರು ಹಿಂದಿನ ದಿನದ ಪತ್ರಿಕೆಯೊಂದನ್ನು ಓದುತ್ತಿದ್ದರು. ಅವರನ್ನು ಕಂಡ ಲಕ್ಷ್ಮಣ ಮೊದಲಿಗೆ ತುಸು ಅಳುಕಿದ. ಆದರೂ ಧೈರ್ಯ ತಂದುಕೊoಡು, ‘ನಮಸ್ಕಾರ ಸಾಹೇಬರೇ…!’ ಎಂದು ತಲೆ ಬಾಗಿ ವಂದಿಸಿದ. ಸಾಹೇಬರು ಪಕ್ಕನೆ ತಲೆಯೆತ್ತಿದವರು ಹೊಸಬನನ್ನು ಗುರಾಯಿಸಿ ದಿಟ್ಟಿಸಿದರು. ಆದರೂ ಗುರುತು ಹತ್ತಲಿಲ್ಲ. ಮರುಕ್ಷಣ ತಮ್ಮ ವ್ಯವಹಾರಗಳಿಗೆ ಸಂಬoಧಿಸಿ ಬೆನ್ನು ಹತ್ತಿದ ಬೇತಾಳನಂತೆ ಕಾಡುತ್ತಿದ್ದ ಕೆಟ್ಟ ಭಯವೊಂದು ತಟ್ಟನೆ ಅವರ ಮುನ್ನೆಲೆಗೆ ಬಂತು. ಪತ್ರಿಕೆಯನ್ನು ಮಡಚಿಡುತ್ತ, ‘ನಮಸ್ಕಾರ. ಯಾರು ನೀನು? ಏನು ಬೇಕಾಗಿತ್ತು…? ಎನ್ನುತ್ತ ಅವನನ್ನು ಮತ್ತಷ್ಟು ನಿರುಕಿಸಿದರು.
‘ನಾನು ಲಕ್ಷ್ಮಣ ಅಂತ. ಇಲ್ಲೇ ಚೌಳುಕೇರಿಯಲ್ಲಿದ್ದೇನೆ ಸಾಹೇಬರೇ…!’ ಎಂದ ಅವನು ಮುಂದೆ ಮಾತಾಡಬೇಕೆಂಬಷ್ಟರಲ್ಲಿ, ‘ಓಹೋ, ಹೌದಾ ಏನು ಬಂದಿದ್ದು…?’ ಎಂದು ಸಾಹೇಬರು ಅದೇ ಸಂಶಯದಿoದ ಪ್ರಶ್ನಿಸಿದರು.
‘ಏನಿಲ್ಲ… ನಿಮ್ಮಲ್ಲಿ ಪೈಂಟಿoಗ್ ಕೆಲಸವೇನಾದರೂ ಸಿಗಬಹುದೇನೋ ಅಂತ ಬಂದೆ!’ ಎಂದ ನಮ್ರವಾಗಿ.
‘ಓಹೋ, ಅಷ್ಟೇನಾ…!’ ಎಂದ ಸಾಹೇಬರಿಗೆ, ಮೂವತ್ತೈದರ ಹರೆಯದ ಕಟ್ಟುಮಸ್ತಾದ ಯುವಕ ಲಕ್ಷ್ಮಣನ ಮೇಲಿನ್ನೂ ಪೂರ್ತಿ ನಂಬಿಕೆ ಹುಟ್ಟಲಿಲ್ಲವಾದ್ದರಿಂದ ಇನ್ನಷ್ಟು ವಿಚಾರಿಸುವ ಯೋಚನೆಯಿಂದ, ‘ಪೈಂಟಿoಗ್ ಕೆಲಸಕ್ಕೀಗ ಜನ ಇದ್ದಾರಲ್ಲ ಮಾರಾಯಾ…! ಬೇರೇನು ಕೆಲಸ ಬರುತ್ತದೆ ನಿನಗೆ…?’ ಎಂದು ತಮ್ಮ ಅನುಮಾನವನ್ನು ಮುಂದಿಟ್ಟುಕೊoಡೇ ಕೇಳಿದರು.
‘ತೋಟ ಮತ್ತು ಹೊಲಗದ್ದೆಯ ಕೆಲಸಗಳೆಲ್ಲ ಗೊತ್ತಿವೆ ಸಾಹೇಬರೇ…!’ ಎಂದ ಲಕ್ಷ್ಮಣ ಹುರುಪಿನಿಂದ. ಅವನ ನಡೆನುಡಿಯಲ್ಲಿದ್ದ ಪ್ರಾಮಾಣಿಕತೆ ಮತ್ತು ವಿನಯವನ್ನು ಕಂಡ ಸಾಹೇಬರಿಗೆ, ‘ಓಹೋ, ಇವನು ಕೆಲಸಕ್ಕಾಗಿಯೇ ಬಂದವನು. ಪಾಪ ಸಂಶಯಪಟ್ಟುಬಿಟ್ಟೆ…!’ ಎಂದುಕೊoಡವರಿಗೆ ತಮ್ಮ ಮರದ ವ್ಯವಹಾರಕ್ಕೂ ಇಂಥವನೊಬ್ಬನ ಅಗತ್ಯವಿದೆ ಎಂದನ್ನಿಸಿತು. ಆದ್ದರಿಂದ, ‘ನಿನಗೆ ಮರ ಕಡಿಯುವ ಮತ್ತದನ್ನು ತುಂಡು ಹಾಕುವ ಕೆಲಸವೇನಾದರೂ ಗೊತ್ತಿದೆಯಾ ಮಾರಾಯಾ?’ ಎಂದರು ಮೃದುವಾಗಿ.
ಲಕ್ಷ್ಮಣ ಕೂಡಲೇ, ‘ಹೌದು ಹೌದು, ಸಾಹೇಬರೇ ಗೊತ್ತಿದೆ!’ ಎಂದುತ್ತರಿಸಿದ.
‘ಆದರೂ ಕೆಲಸ ಸ್ವಲ್ಪ ಕಷ್ಟ ಉಂಟು ಮಾರಾಯಾ. ಮೋಸವಿಲ್ಲದೆ ದುಡಿಯುತ್ತಿಯಾದರೆ ನಾಳೆಯಿಂದ ಬಂದುಬಿಡು. ಶಿವಪುರಲ್ಲೊಂದು ಮರ ವಹಿಸಿಕೊಂಡಿದ್ದೇವೆ. ನಾಲ್ಕು ದಿವಸದ ಕೆಲಸವಾದೀತು. ಬರುವಾಗ ಮನೆಯಲ್ಲಿ ತಿಳಿಸಿಯೇ ಬಾ. ಕೆಲಸ ನೋಡಿಕೊಂಡು ಸಂಬಳ ಕೊಡುತ್ತೇವೆ!’ ಎಂದರು ಗಂಭೀರವಾಗಿ. ಇತ್ತ ಲಕ್ಷ್ಮಣನಿಗೆ ತನ್ನ ಊರಲ್ಲಿ ಸಾಕಷ್ಟು ಬಾರಿ ಮಾವ ಮತ್ತು ಚಿಕ್ಕಪ್ಪರೊಂದಿಗೆ ಮರಗಳನ್ನು ಕಡಿದು ತುಂಡು ಹಾಕಿ ಲಾರಿ, ಟೆಂಪೊಗಳಿಗೆ ಲೋಡು ಮಾಡಿದ್ದ ಅನುಭವವಿತ್ತು. ಆದ್ದರಿಂದ ಕೆಲಸ ಸಿಕ್ಕಿದ್ದರಿಂದಲೂ, ಹಲವು ವರ್ಷಗಳ ನಂತರ ದೂರದೂರಿಗೆ ಪ್ರಯಾಣ ಬೆಳೆಸುವ ಭಾಗ್ಯ ಒದಗಿದ್ದರಿಂದಲೂ ಅವನು ಆನಂದತುoದಿಲನಾಗಿ ಒಪ್ಪಿಕೊಂಡ.
(ಮುoದುವರೆಯುವುದು)

Related posts

ವಿವಶ…

Mumbai News Desk

ವಿವಶ….

Mumbai News Desk

ವಿವಶ…..

Chandrahas

ವಿವಶ….

Chandrahas

ವಿವಶ..

Mumbai News Desk

ವಿವಶ ..

Mumbai News Desk