
ಮುಂಬೈ ಸಾರಸ್ವತರ ಅತೀ ಹಿರಿಯ ಸಂಸ್ಥೆಯಾದ ರಾಜಾಪುರ ಸಾರಸ್ವತ ಸಂಘವು ತನ್ನ 75 ನೆಯ ವರ್ಷಾಚರಣೆಯ ಸಂಭ್ರಮದಲ್ಲಿದ್ದು ಅಮೃತಮಹೋತ್ಸವದ ಆರಂಭೋತ್ಸವವು ಇದೇ ಎಪ್ರಿಲ್ ತಾ.17 ರಾಮನವಮಿಯಂದು ಸಯಾನ್ ಜಿ ಎಸ್ ಬಿ ಸಭಾಗೃಹದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಬೆಂಗಳೂರು ರಾಜಾಪುರ ಸಾರಸ್ವತ ಸಮಾಜದ ಅಧ್ಯಕ್ಷ ಡಿ. ನಾಗೇಂದ್ರ ಕಾಮತ್ ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿ ಉತ್ಸವಕ್ಕೆ ಚಾಲನೆ ನೀಡಿದರು.
” ಬಾಲ್ಯಾವಸ್ಥೆಯಲ್ಲಿ ಮಾನವ ಬದುಕಿನಲ್ಲಿಯ ಕಷ್ಟಗಳನ್ನು ಪರಿಚಯಿಸಿದಾಗ ಮಕ್ಕಳಿಗೆ ಭವಿಷ್ಯದಲ್ಲಿ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ತಿಳುವಳಿಕೆ ಬರುವುದು. 75 ವರ್ಷಗಳ ಹಿಂದಿನ ದಿನಗಳಲ್ಲಿ ನಮ್ಮ ಹಿರಿಯರು ಪಟ್ಟ ಪರಿಶ್ರಮ ಹಾಗೂ ಸಾಧನೆಗಳು ಡಾಕ್ಯುಮೆಂಟರಿ ರೂಪದಲ್ಲಿ ದಾಖಲಾಗಬೇಕು ” ಎಂದು ಅವರು ಅಭಿಪ್ರಾಯ ಪಟ್ಟರು.

ಸಂಸ್ಥೆಯ ಮಾಜಿ ಅಧ್ಯಕ್ಷ ಮಾಧವ ವಿ.ಪ್ರಭು ” 1950 ರಲ್ಲಿ ಈ ಸಂಸ್ಥೆಯನ್ನು ಹುಟ್ಟುಹಾಕಿದ ಪೂರ್ವಜರನ್ನು ನೆನಪಿಸುತ್ತಾ ಅಂದಿನ ದಿನಗಳ ಸಾಮಾಜಿಕ ಪರಿಸ್ಥಿತಿ , ಬದುಕಿನ ಸಂಘರ್ಷಗಳು ಹಾಗೂ ಹಂತಹಂತವಾಗಿ ಸಂಸ್ಥೆಯು ಬೆಳೆದು ಬಂದ ಬಗೆ , ಪರೇಲ್ ನಲ್ಲಿ ಸ್ವಂತ ಕಟ್ಟಡವನ್ನು ಹೊಂದಿರುವುದು , ಮಹಿಳಾ ಹಾಗೂ ಯುವವಿಭಾಗಗಳ ಕಾರ್ಯಕ್ರಮಗಳ ಬಗ್ಗೆ ” ವಿವರಿಸಿದರು.
ಅತಿಥಿಗಳಾಗಿ ಆಗಮಿಸಿದ ಪದ್ಮ ಶ್ರೀ ಎಚ್. ಸದಾನಂದ ಕಾಮತ್ ” ಬದಲಾದ ಇಂದಿನ ಪರಿಸ್ಥಿತಿಯಲ್ಲಿ ಸಮಾಜದಲ್ಲಿನ ವಯೋವೃದ್ಧರಿಗೋಸ್ಕರ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿಒಂದು ದೊಡ್ಡ ಮೊತ್ತದ ಸಹಾಯ ನಿಧಿಯನ್ನು ಸ್ಥಾಪಿಸುವ ಅಗತ್ಯದ ಕುರಿತು ಸಲಹೆ ನೀಡಿದರು.
ವೇದಿಕೆಯಲ್ಲಿದ್ದ ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಎಸ್.ನಾಯಕ್ , ದೊಂಬಿವಿಲಿ ವರದಸಿದ್ಧಿವಿನಾಯಕ ಸೇವಾ ಮಂಡಲದ ಅಧ್ಯಕ್ಷ ಮಾಧವ ಪಿ.ನಾಯಕ್, ದಹಿಸರ್ ವಿಘ್ನಹರ್ತಾ ಮಹಾಗಣಪತಿ ಸೇವಾ ಮಂಡಲದ ಅಧ್ಯಕ್ಷ ರಮೇಶ್ ನಾಯಕ್ , ದುರ್ಗಾಪರಮೇಶ್ವರೀ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಉಪಾಧ್ಯಕ್ಷ ರವೀಂದ್ರ ಕಾಮತ್ ಸಂದರ್ಭೋಚಿತ ಮಾತುಗಳೊಂದಿಗೆ ಶುಭ ಹಾರೈಸಿದರು. ಶ್ರೀಮತಿ ಪೂಜಾ ಜೆ.ಕಾಮತ್ ಸಭೆಯ ಕಾರ್ಯಕ್ರಮ ನಿರೂಪಿಸಿದರು.
75 ವರ್ಷಗಳ ಹಿಂದಿನ ಸ್ಥಾಪಕ ಸದಸ್ಯರನ್ನು ನೆನಪಿಸಿ ಸಭೆಯು ಶೃದ್ಧಾಜಲಿಯನ್ನು ಅರ್ಪಿಸಿತು ಹಾಗೂ ಅವರ ಕುಟುಂಬ ಸದಸ್ಯರನ್ನು ವೇದಿಕೆಯಲ್ಲಿ ಆಮಂತ್ರಿಸಿ ಗೌರವಿಸಲಾಯಿತು.
ವೇದಮೂರ್ತಿ ಉಮೇಶ ಭಟ್ ಇವರ ನೇತೃತ್ವದಲ್ಲಿ ಬೆಳಿಗ್ಗೆ ಗಣಹೋಮ ಹಾಗೂ ಸತ್ಯನಾರಾಯಣ ಪೂಜೆಯು ಜರಗಿದ್ದು ಆನಂತರ ಮಹಿಳಾವಿಭಾಗದವರಿಂದ ಚೈತ್ರಗೌರೀ ಅರಶಿನಕುಂಕುಮ ಕಾರ್ಯಕ್ರಮ ಜರಗಿತು. ಮುಂಬೈ ಹಾಗೂ ಆಸುಪಾಸಿನ ವಿವಿಧ ಸ್ಥಳಗಳಿಂದ ಆಗಮಿಸಿದ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಮಾಧ್ಯಮ ವರದಿ : ಪಿ.ಆರ್.ರವಿಶಂಕರ್
8483980035