
ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ : ಪ್ರವೀಣ್ ಭೋಜ ಶೆಟ್ಟಿ
ಮುಂಬಯಿ, ಎ.20 : . ರಕ್ತದಾನ ಎನ್ನುವುದು ಅತ್ಯಂತ ಪವಿತ್ರವಾದ ದಾನ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ಆ ಕಾರಣದಿಂದಲೇ ರಕ್ತದಾನ ಎಂದರೆ ಜೀವದಾನ ಹಾಗೂ ಅದು ಒಂದು ಕೋಟಿ ದೇಣಿಗೆ ನೀಡುವ ದಾನಕ್ಕಿಂತ ಶ್ರೇಷ್ಠ ಎನ್ನುತ್ತೇವೆ ಎಂದು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ಪ್ರವೀಣ್ ಭೋಜ ಶೆಟ್ಟಿಯವರು ಹೇಳಿದರು.

ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ವತಿಯಿಂದ ಕಾರ್ಯಾಧ್ಯಕ್ಷರಾದ ಗುತ್ತಿನಾರ್ ರವೀಂದ್ರ ಶೆಟ್ಟಿ ಇವರ ನೇತೃತ್ವದಲ್ಲಿ ಮೀರಾ ರೋಡ್ ಪೂರ್ವದ ಕನಕಿಯ ರಸ್ತೆ , ಸಿನೇಮಾಕ್ಸ್ ಬಳಿ ಇರುವ ಶೆಹನಾಯಿ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸಂಘದ ಆರೋಗ್ಯ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಸ್ವರೂಪ್ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ ಹಾಗೂ ಪ್ರಾದೇಶಿಕ ಸಮಿತಿಯ ಆರೋಗ್ಯ ಸಮಿತಿ ಕಾರ್ಯಾಧ್ಯಕ್ಷೆ ಡಾ. ರಿಯಾ ಶೆಟ್ಟಿಯವರ ಉಸ್ತುವಾರಿಯಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸರಕಾರೇತರ ಸಂಸ್ಥೆಯಾದ ಥಿಂಕ್ ಫೌಂಡೇಶನ್ ಇದರ ಸಹಯೋಗದಲ್ಲಿ ಇತ್ತೀಚಿಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ , ದೀಪ ಬೆಳಗಿಸಿ ಉದ್ಘಾಟಿಸಿದ ಪ್ರವೀಣ್ ಭೋಜ ಶೆಟ್ಟಿಯವರು ಮಾತನಾಡಿ ರಕ್ತ ಒಂದು ಸಂಜೀವಿನಿ ಇದ್ದಂತೆ, ಅದಕ್ಕೆ ಪರ್ಯಾಯವಾದ ಬೇರೊಂದು ವಸ್ತುವಿಲ್ಲ . ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ನೀಡಿದರೆ ಅವರಿಗೂ ಉತ್ತಮ ಹಾಗೇಯೇ ಇನ್ನೂಬ್ಬರ ಜೀವವು ಉಳಿಯ ಬಹುದು. ರಕ್ತದಾನ ಮಾಡಿ ಜೀವ ಉಳಿಸಬಲ್ಲ ಉದಾರ ಮನಸ್ಸು ಪ್ರತಿಯೊಬ್ಬರಲ್ಲೂ ಇರಬೇಕು ಎಂದರು . ತಮ್ಮ ಮಾತನ್ನು ಮುಂದುವರಿಸುತ್ತಾ ಡಾ. ಭಾಸ್ಕರ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಉತ್ತಮ ರೀತಿಯಲ್ಲಿ ಆಯೋಜನೆ ಮಾಡಿದ್ದಾರೆ . ಇಂದು ಇಲ್ಲಿ ಇರುವ ಎಲ್ಲಾ ವೈದ್ಯರು ನಮ್ಮವರು , ನಮ್ಮ ಸಮಾಜದ ಒಳಿತಿಗಾಗಿ ಸಮಯವನ್ನು ನೀಡಿದ್ದಾರೆ , ಇದರ ಲಾಭವನ್ನು ಎಲ್ಲರೂ ಪಡೆಯಬೇಕು. ಬಂಟರ ಸಂಘ ಸಾಂಸ್ಕೃತಿಕ , ಸಾಮಾಜಿಕ, ಆರ್ಥಿಕ ಸಹಾಯದ ಜೊತೆಗೆ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಮತ್ತು ಸಹಾಯ ನೀಡುತ್ತಿದೆ . ಆರೋಗವೇ ಭಾಗ್ಯ , ಆರೋಗ್ಯಕ್ಕಿಂತ ಮೇಲಾಗಿ ಯಾವುದೋ ಇಲ್ಲ , ಆರೋಗ್ಯ ಇದ್ದರೆ ಎಲ್ಲವೂ ಇದೆ ಇಂತಹ ಸಂದರ್ಭದಲ್ಲಿ ದಾನಗಳಲ್ಲಿ ಶ್ರೇಷ್ಠ ದಾನವೆನಿಸಿಕೊಂಡ ರಕ್ತದಾನ ಶಿಬಿರವನ್ನು ಆಯೋಜಿಸಿದ ಪ್ರಾದೇಶಿಕ ಸಮಿತಿಗೆ ಅಭಿನಂದನೆ ಸಲ್ಲಿಸಿದರು.

ಬಂಟರ ಸಂಘ ಮುಂಬಯಿ ಇದರ ಆರೋಗ್ಯ ಸಮಿತಿಯ ಕಾರ್ಯಾಧ್ಯಕ್ಷ ಡಾ. ಸ್ವರೂಪ್ ಹೆಗ್ಡೆ ಮಾತನಾಡಿ ಇಂದಿನ ದಿನಗಳಲ್ಲಿ ರಕ್ತದಾನದ ಬಹಳ ಅಗತ್ಯವಿದೆ. ರಕ್ತದಾನ ಮಾಡುವವರು ಕಡಿಮೆ ಇದ್ದಾರೆ , ರಕ್ತ ಪಡೆಯುವರ ಅಗತ್ಯತೆ ಜಾಸ್ತಿ ಇದೆ. ರಕ್ತದಾನದಿಂದ ಯಾವುದೇ ಸಮಸ್ಯೆಯಿಲ್ಲ . ಸಾಧ್ಯವಾದರೆ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಕನಿಷ್ಠ ವರ್ಷಕ್ಕೊಮ್ಮೆ ರಕ್ತದಾನ ಮಾಡಿ ಎಂದರು .
ಮುಖ್ಯ ಅತಿಥಿಯಾಗಿದ್ದ ಮೀರಾ ಭಾಯಂದರ್ ಪರಿಸರದ ಪ್ರಸಿದ್ಧ ವೈದ್ಯ ದೀಪಕ್ ಹಾಸ್ಪಿಟಲ್ ಸಿಎಂಡಿ ಡಾ. ಭಾಸ್ಕರ್ ಶೆಟ್ಟಿಯವರು ಮಾತನಾಡಿ ನಮ್ಮ ಸಮಾಜಕ್ಕೆ ನಾವು ಬೇರೆ- ಬೇರೆ ರೀತಿಯಲ್ಲಿ ದಾನದ ರೂಪದಲ್ಲಿ ದೇಣಿಗೆಯನ್ನು ನೀಡುತ್ತೇವೆ , ಇದರಲ್ಲಿ ಮಹತ್ವದ ದಾನವೆಂದರೆ ರಕ್ತದಾನ . ತುರ್ತುಚಿಕಿತ್ಸೆಯ ಸಮಯದಲ್ಲಿ ರಕ್ತದಾನಿಗಳ ರಕ್ತವನ್ನೇ ರೋಗಿಗಳು ಅವಲಂಬಿಸಿರುತ್ತಾರೆ. ಏಕೆಂದರೆ ಅನಿರೀಕ್ಷಿತ ಅಪಘಾತಗಳು, ತುರ್ತು ಶಸ್ತ್ರಚಿಕಿತ್ಸೆಗಳ ಸಮಯದಲ್ಲಿ, ರಕ್ತದಾನಿಗಳಿಂದ ರಕ್ತದ ಆವಶ್ಯಕತೆ ಇರುತ್ತದೆ.
ರಕ್ತದಾನದ ಮಹತ್ವದ ಹಾಗೂ ಅಗತ್ಯತೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದರ ಜೊತೆಗೆ ಚರ್ಮ ರೋಗದ ಬಗ್ಗೆ ಹಾಗೂ ಮೂಳೆ ರೋಗದ ಬಗ್ಗೆ ಉಚಿತ ತಪಾಸಣೆ ಆಯೋಜಿಸಲಾಗಿದ್ದು ಇದರ ಬಗ್ಗೆ ಮಾಹಿತಿ ನೀಡಿದರು. ಯಾವುದೇ ರೋಗದ ಬಗ್ಗೆ ನಿರ್ಲಕ್ಷ್ಯ ಮಾಡದಿರಿ , ಉತ್ತಮ ಆಹಾರ ಪದ್ದತಿಯೊಂದಿಗೆ ಆರೋಗ್ಯದ ಕಡೆ ಗಮನ ಹರಸಿ ಎಂದರು.

ರಕ್ತದಾನ ಶಿಬಿರ ಆಯೋಜಿಸಲು ಸಹಕರಿಸಿದ ಥಿಂಕ್ ಫೌಂಡೇಶನ್ ಇದರ ವಿಜಯ್ ಶೆಟ್ಟಿ ಮಾತನಾಡಿ ಮುಂಬಯಿ ಮಹಾನಗರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಕ್ಕಳು ತಲಸ್ಸೇಮಿಯಾ (ಅನುವಂಶಿಕ ನ್ಯೂನತೆ) ಕಾಯಿಲೆಗೆ ಬಳಲುತ್ತಿರುವ ರೋಗಿಗಳಿಗೆ ಜೀವನಪರ್ಯಂತ ರಕ್ತದಾನಿಗಳಿಂದ ರಕ್ತದ ಆವಶ್ಯಕತೆ ಇರುತ್ತದೆ. ಇದಲ್ಲದೆ ಕ್ಯಾನ್ಸರ್ ರೋಗಿಗಳಿಗೆ, ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ಸಮಯದಲ್ಲಿ ರಕ್ತದ ಆವಶ್ಯಕತೆ ಹೆಚ್ಚಾಗಿ ಇರುತ್ತದೆ. ದೇವರು ನಮಗೆ ನಮ್ಮ ದೇಹದಲ್ಲಿ ನಮಗೆ ಬೇಕಾಗುವುದಕ್ಕಿಂತ ಸ್ವಲ್ಪ ಜಾಸ್ತಿಯಾಗಿ ರಕ್ತ ನೀಡಿದ್ದಾರೆ . ಅದು ಇನ್ನೊಬ್ಬರ ಅವಶ್ಯಕತೆಗೆ , ಜೀವ ಉಳಿಸಲು ಸಹಕರಿಸೋಣ ಎಂದರು.
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರೆ, ಪ್ರಾದೇಶಿಕ ಸಮಿತಿಯ ಆರೋಗ್ಯ ಸಮಿತಿ ಕಾರ್ಯಾಧ್ಯಕ್ಷೆ ಡಾ. ರಿಯಾ ಶೆಟ್ಟಿಯವರು ಸರ್ವರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಶ್ರೀ ಗಿರೀಶ್ ಶೆಟ್ಟಿ ತೆಳ್ಳಾರ್, ಬಂಟರ ಸಂಘದ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಶ್ರೀಮತಿ ಚಿತ್ರಾ ಆರ್ ಶೆಟ್ಟಿ, ಡಾ. ಭಾಸ್ಕರ್ ಶೆಟ್ಟಿ, ಡಾ. ಎನ್.ಎ. ಹೆಗ್ಡೆ, ಡಾ. ಪ್ರಾರ್ಥಸ್ವಿನಿ ಶೆಟ್ಟಿ, ಥಿಂಕ್ ಫೌಂಡೇಶನ್ ಇದರ ವಿಜಯ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಂಚಾಲಕ ಶಿವಪ್ರಸಾದ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಅರವಿಂದ ಎ. ಶೆಟ್ಟಿ, ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಕುತ್ಯಾರು , ಕೋಶಾಧಿಕಾರಿ ಶಂಕರ್ ಶೆಟ್ಟಿ ಬೋಳ , ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ , ಜೊತೆ ಕೋಶಾಧಿಕಾರಿ ಜಗದೀಶ್ ಶೆಟ್ಟಿ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ವಸಂತಿ ಎಸ್. ಶೆಟ್ಟಿ , ಯುವ ವಿಭಾಗದ ಕಾರ್ಯಾಧ್ಯಕ್ಷ ವರ್ಷಭ್ ಕೆ. ಶೆಟ್ಟಿ ಕುಕ್ಕುಂದೂರ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಮಹಿಳಾ ವಿಭಾಗ , ಯುವ ವಿಭಾಗ ಹಾಗೂ ಸಮಿತಿಯ ಸದಸ್ಯರು ಸಹಕರಿಸಿದರು. ಶಿಬಿರದಲ್ಲಿ 450 ಕ್ಕೂ ಹೆಚ್ಚು ಸದಸ್ಯರು ಹೆಸರು ನೊಂದವಣಿ ಮಾಡಿದರು. ಇದರಲ್ಲಿ 300 ಸದಸ್ಯರು ಎಲುಬಿನ ತಪಾಸಣೆ , 150 ಸದಸ್ಯರು ಚರ್ಮ ರೋಗದ ಬಗ್ಗೆ ತಪಾಸಣೆ ಮಾಡಿಸಿಕೊಂಡರು . 140 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಕಾರ್ಯಕ್ರಮವನ್ನು ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿಯಾದ ಬಾಬಾ ಪ್ರಸಾದ್ ಅರಸ ಕುತ್ಯಾರು ನಿರೂಪಿಸಿ ವಂದಿಸಿದರೆ, ವಿಜಯ್ ಶೆಟ್ಟಿ ಮೂಡುಬೆಳ್ಳೆ ಪ್ರಾರ್ಥನೆಗೈದರು.