
ಧಾರವಾಹಿ 26
ಆವತ್ತು ದುರ್ಗಕ್ಕ ತಮ್ಮನ್ನು ಉಗ್ರವಾಗಿ ಶಪಿಸಿ ಹೋದ ಮೇಲೆ ಪ್ರೇಮ ಮತ್ತು ತೋಮನನ್ನು ಶಾಪದ ಭಯವೂ, ಆಘಾತವೂ ಒಟ್ಟೊಟ್ಟಿಗೆ ಭಾದಿಸಲಾರಂಭಿಸಿ ಇಬ್ಬರೂ ಕೆಲವು ದಿನಗಳ ಕಾಲ ಹತಾಶರಾಗಿ ಕುಳಿತರು. ಆದರೆ ಕಾಲ ಸರಿದಂತೆ ಅವರ ನೋವು ಮಾಸುತ್ತ ಬಂದಿತು. ಆದ್ದರಿಂದ ಆವತ್ತೊಂದು ಬೆಳಿಗ್ಗೆ ತಮ್ಮ ಜಡತ್ವನ್ನು ಕೊಡವಿ ಎದ್ದವರು ಅಂದಿನಿoದ ಸಮಾಜದ ಯಾವುದೇ ಕಟ್ಟುಪಾಡು ಮತ್ತದರ ಶಾಸ್ತç ಸಂಪ್ರದಾಯಗಳ ಕುರಿತು ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ತಮ್ಮಿಷ್ಟದಂತೆಯೇ ಗಾಂಧರ್ವ ವಿವಾಹದ ಮಾದರಿಯಲ್ಲಿ ಒಂದಾಗಿ ಬಾಳತೊಡಗಿದರು. ಆಗ ಪ್ರೇಮಾಳ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಕೂಸಿಗೆ ನಾಲ್ಕು ತಿಂಗಳು ತುಂಬುತ್ತಿತ್ತು. ತೋಮ ತನ್ನನ್ನು ನಂಬಿ ಬಂದ ಸಂಗಾತಿಯನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ತನ್ನ ದುಡಿತದ ಬಹುಪಾಲನ್ನು ತಂದು ಹೆಂಡತಿಯ ಮಡಿಲಿಗೆ ಸುರಿದು ಅವಳಲ್ಲಿ ಸಂತೋಷ, ಭದ್ರತೆಯನ್ನು ತುಂಬುತ್ತಿದ್ದ. ತಿಂಗಳಿಗೊoದು ಬಾರಿ ಅವಳನ್ನು ದೂರದ ಶಿವಕಂಡಿಕೆಯ ಪೇಟೆಗೆ ಕರೆದೊಯ್ಯುತ್ತಿದ್ದ. ಆವರೆಗೆ ಶಿವಕಂಡಿಕೆಯನ್ನೇ ನೋಡಿರದ ಪ್ರೇಮಾಳಿಗೆ ಆ ಪಟ್ಟಣದ ಬಹುಮಹಡಿ ಕಟ್ಟಡಗಳು, ಅರಮನೆಯಂಥ ಸೌಧಗಳು, ಬಂಗಲೆಗಳು ಹಾಗೂ ವಿವಿಧ ದೇವಾನುದೇವತೆಗಳ ದೇವಸ್ಥಾನಗಳನ್ನು ಕಂಡವಳಿಗೆ ಮುಗ್ಧ ವಿಸ್ಮಯ ಮೂಡುತ್ತಿತ್ತು. ಅಲ್ಲಿನ ಬಹುಪ್ರಾಚೀನವಾದ ಬ್ರಹ್ಮಲಿಂಗೇಶ್ವರ ದೇವಸ್ಥಾನವನ್ನು ನೋಡಿದವಳಲ್ಲಿ ನಿರ್ಮಲ ಭಯಭಕ್ತಿ ಸ್ಫುರಿಸಿತ್ತು. ಶಿವಕಂಡಿಕೆಯಲ್ಲಿ ಬುಧವಾರ ಮತ್ತು ಭಾನುವಾರ ನಡೆಯುತ್ತಿದ್ದ ದೊಡ್ಡ ಮಟ್ಟದ ಸಂತೆಗಳoತೂ ಪ್ರೇಮಾಳನ್ನು ಸೂರೆಗೊಳ್ಳೂತ್ತಿದ್ದವು. ಅಲ್ಲಿ ದೊರೆಯುತ್ತಿದ್ದ ಮಣ್ಣಿನ ಬಳೆಗಳು, ರೋಲ್ಡ್ಗೋಲ್ಡ್ ಓಲೆ, ಜುಮ್ಕಿ, ನತ್ತುಗಳು ಮತ್ತು ವಿವಿಧ ರೂಪದ ಮಣಿಸರಗಳನ್ನು ತೋಮ ಅವಳಿಗೆ ಪ್ರೀತಿಯಿಂದ ಕೊಡಿಸುತ್ತ ಖುಷಿಪಡಿಸುತ್ತಿದ್ದ.
ಶಿವಕಂಡಿಕೆಗೆ ಹೋದಾಗಲೆಲ್ಲ ತೋಮದಂಪತಿ ಮೊದಲಿಗೆ ಮಹಾಲಿಂಗೇಶ್ವರ ದೇವಾಸ್ಥಾನಕ್ಕೆ ಹೋಗಿ ಹಣ್ಣುಕಾಯಿ ಮಾಡಿಸಿದ ನಂತರ ದೇವಸ್ಥಾನದಲ್ಲೇ ಮಧ್ಯಾಹ್ನದ ಪ್ರಸಾದವನ್ನು ಸ್ವೀಕರಿಸುತ್ತಿದ್ದರು. ಪ್ರೇಮಾಳಿಗೆ ದೇವಸ್ಥಾನದ ಭೋಜನ ಬಹಳ ಪ್ರಿಯವಾಗುತ್ತಿತ್ತು. ಆದ್ದರಿಂದ ಪ್ರತಿ ಬಾರಿ ಉಂಡಾಗಲೂ ಆ ರುಚಿಕಟ್ಟಾದ ಊಟದ ಬಗ್ಗೆಯೂ, ಘಮಘಮಿಸುವ ಸಾರಿನ ಬಗ್ಗೆಯೂ ಗಂಡನೊoದಿಗೆ ಹಾಡಿ ಹೊಗಳುತ್ತ ಉಂಡ ಎಷ್ಟೋ ಹೊತ್ತಿನ ನಂತರವೂ ತನ್ನ ಕೈಯನ್ನು ಗಂಡನ ಒರಟು ಮೂಗಿನ ಹೊಳ್ಳೆಗಳ ಮೇಲೆ ಒತ್ತಿಟ್ಟು ಪರಿಮಳ ತೋರಿಸುತ್ತ ಆನಂದಿಸುವ ಮುಗ್ಧ ಮನಸ್ಸಿನವಳಾಗಿದ್ದಳು. ಸಿನೇಮಾವೆಂದರೂ ಅವಳಿಗೆ ಬಹಳ ಇಷ್ಟವಿತ್ತು. ತೋಮ ಅವಳನ್ನು ಆಗಾಗ ಕರೆದುಕೊಂಡು ಹೋಗಿ ಕನ್ನಡ ಮತ್ತು ಯುವಜೋಡಿಯನ್ನು ಪುಳಕಿತಗೊಳಿಸುವಂಥ ತಮಿಳು, ಮಲಯಾಳಿ ಚಿತ್ರಗಳನ್ನು ತೋರಿಸುತ್ತಿದ್ದ. ಆದರೆ ಅಂಥ ಸಿನೇಮಾ ನೋಡಲು ಅವನು ಹೆಂಡತಿಯನ್ನು ಬೇಕೆಂದೇ ಸಂಜೆಯ ದೇಖಾವೆಗೆ ಕರೆದೊಯ್ಯುತ್ತಿದ್ದ. ಸಿನೇಮಾ ಮುಗಿಯುವಾಗ ರಾತ್ರಿ ಒಂಬತ್ತು ದಾಟುತ್ತಿತ್ತು. ಕೊನೆಯ ಬಸ್ಸು ಹತ್ತಿ ಗಂಗರಬೀಡಿಗೆ ಬಂದಿಳಿವ ನವಜೋಡಿಯು ತಮ್ಮ ಶೆಡ್ಡಿನತ್ತ ಹೋಗುವ ಮೈಲು ದೂರದ ಕುರುಚಲು ಹಾಡಿ ಗುಡ್ಡಗಳ ನಡುವಿನ ಹಾದಿಯಲ್ಲಿ ಸರಸವಾಡುತ್ತ ಸಾಗುತ್ತಿದ್ದರು. ಆದರೆ ಅಂಥ ಸಿನೇಮಾಗಳಿಗೆ ಬರುವ ಗಂಡಸರೆಲ್ಲ ತನ್ನನ್ನು ಜೊಲ್ಲು ಸುರಿಸಿಕೊಂಡು ನೋಡುತ್ತಿದ್ದುದು ಪ್ರೇಮಾಳಿಗೆ ಅಸಹ್ಯ, ಮುಜುಗರವನ್ನು ತರಿಸುತ್ತಿತ್ತು. ಹಾಗಾಗಿ ಒಮ್ಮೆ ಅದನ್ನೆಲ್ಲ ಯೋಚಿಸಿದವಳು ಆನಂತರ ಗಂಡ ಅಂಥ ಚಿತ್ರಗಳನ್ನು ನೋಡಲು ಕರೆದಾಗಲೆಲ್ಲ ಆ ವಿಷಯವನ್ನು ತಿಳಿಸುತ್ತ ನಿರಾಕರಿಸತೊಡಗಿದಳು. ಅದರಿಂದ ತೋಮನಿಗೆ ಬೇಸರವಾಯಿತಾದರೂ ತನ್ನ ಪ್ರಿಯತಮೆಗೆ ಪರಪುರುಷರ ಬಗ್ಗೆ ಇರುವ ಉದಾಸೀನವನ್ನೂ ಅವನು ಮೆಚ್ಚಿಕೊಂಡ.
ತೋಮ ದಂಪತಿ ಅಕ್ಕಪಕ್ಕದ ಊರುಗಳಲ್ಲಿ ನಡೆಯುತ್ತಿದ್ದ ತುಳು ನಾಟಕ, ಯಕ್ಷಗಾನ ಮತ್ತು ಕೋಲಗಳಿಗೂ ಹೋಗುತ್ತಿದ್ದರು. ಪುಕ್ಕಟೆಯ ಬಯಲಾಟವಿರಲಿ, ಟಿಕೇಟಿನ ಟೆಂಟಿನಾಟವೇ ಇರಲಿ ತೋಮ ಯಾವುದನ್ನೂ ಬಿಡುತ್ತಿರಲಿಲ್ಲ. ಹಿಂದೆಲ್ಲ ಒಂಟಿಯಾಗಿ ಹೋಗುತ್ತಿದ್ದವನು ಈಗ ಜಂಟಿಯಾಗಿದ್ದ. ಪ್ರೇಮಾಳಿಗೂ ಯಕ್ಷಗಾನವೆಂದರೆ ಇಷ್ಟ. ಗಂಡನೊoದಿಗೆ ಕುಳಿತು ಇಡೀ ಆಟವನ್ನು ಬೆಳಗ್ಗಿನವರೆಗೆ ನೋಡಿ ಆನಂದಿಸುತ್ತಿದ್ದಳು. ಆಟದ ನಡುವೆ ಚಳಿ ಹೆಚ್ಚಿದಾಗ ಅಥವಾ ತನ್ನ ಹೆಂಡತಿಗೆ ಕಣ್ಣು ಕೂರಲು ಶುರುವಾದಾಗ ತೋಮ ಅವಳನ್ನೆಬ್ಬಿಸಿ ಹೊರಗೆ ಕರೆದೊಯ್ದು, ಕಾಳಪ್ಪ ಕಾಮತರ ಟೆಂಟಿನ ಹೊಟೇಲಿನಲ್ಲಿ ಹಬೆಯಾಡುವ ಚಹಾದೊಂದಿಗೆ ಬಿಸಿಬಿಸಿ ಗೆಣಸಿನ ಪೋಡಿ, ಗೋಳಿಬಜೆ, ಬನ್ಸು ಮತ್ತು ಇಡ್ಲಿಯನ್ನು ತಿನ್ನಿಸುತ್ತಿದ್ದ. ಇದರಿಂದ ಪ್ರೇಮಾಳಿಗೆ ತೋಮ ಬಹಳ ಬೇಗನೇ ಆತ್ಮೀಯನಾಗಿಬಿಟ್ಟ. ಇಂಥ ಒಬ್ಬ ಒಳ್ಳೆಯ ಮನುಷ್ಯನನ್ನು ತಾನು ಗಂಡನನ್ನಾಗಿ ಪಡೆದದ್ದು ತನ್ನ ಪೂರ್ವ ಜನ್ಮದ ಪುಣ್ಯವೇ ಸರಿ! ಎಂದುಕೊoಡು ಅವಳು ಹೆಮ್ಮೆಯಿಂದ ಬೀಗುತ್ತಿದ್ದಳು.
ವರ್ಷಕ್ಕೆ ಒಂದೋ ಎರಡೋ ಬಾರಿ ಗಂಗರಬೀಡಿಗೆ, ‘ಸೈಕಲ್ ಸರ್ಕಸ್’ ಎಂಬ ಸಾಹಸಕ್ರೀಡೆಯೊಂದು ಬರುತ್ತಿತ್ತು. ಆ ತಂಡವು ಚರ್ಚಿನ ಎದುರಿನ ವಿಶಾಲ ಮೈದಾನದಲ್ಲಿ ಆರೇಳು ದಿನಗಳ ಕಾಲ ಬೀಡುಬಿಟ್ಟು ಸೈಕಲ್ ಸರ್ಕಸ್ಸಿನ ಆಟದಲ್ಲಿ ಅನೇಕ ಬಗೆಯ ರೋಚಕ ಸಾಹಸಕ್ರೀಡೆಗಳನ್ನು ಪ್ರದರ್ಶಿಸುತ್ತಿತ್ತು. ಕನ್ನಡ ಹಿಂದಿ ಮತ್ತು ತಮಿಳು ಚಲನಚಿತ್ರಗಳ ಪ್ರಸಿದ್ಧ ಹಾಡುಗಳನ್ನು ಆನೆಯ ಕಿವಿಯಂಥ ಮೈಕುಗಳಲ್ಲಿ ಬಿತ್ತರಿಸುತ್ತ, ಚಂದದ ಯುವಕರಿಬ್ಬರು ಸ್ತ್ರೀ, ಪುರುಷರ ವೇಷ ಧರಿಸಿ ಆ ಹಾಡುಗಳ ತಾಳಕ್ಕೆ ತಕ್ಕಂತೆ ಮೋಹಕ ಹಾವಭಾವಗಳಿಂದ ಕುಣಿಯುತ್ತ ತಮ್ಮ ಕಲಾಭಿನಯವನ್ನು ಪ್ರದರ್ಶಿಸಿ ಎಲ್ಲರ ಮನಗೆಲ್ಲುತ್ತಿದ್ದರು. ಈ ಮನರಂಜನೆಗೂ ತೋಮ ದಂಪತಿ ತಪ್ಪದೆ ಹೋಗುತ್ತಿದ್ದರು. ಈ ಸರ್ಕಸ್ಸಿನಲ್ಲಿ ಸೈಕಲ್ ಸವಾರನ ಮುಖ್ಯ ಸಾಹಸಗಳಾದ ಟ್ಯೂಬ್‌ಲೈಟ್ ಒಡೆಯುವ ಆಟ, ಸವಾರನ ಎದೆಯ ಮೇಲೆ ಆಟೋರಿಕ್ಷಾ, ಕಾರು ಅಥವಾ ಜೀಪು ಹರಿಸುವ ರೋಚಕ ದೃಶ್ಯ ಮತ್ತು ಸವಾರನ ಎದೆಯ ಮೇಲೆ ಮಣಭಾರದ ಶಿಲೆಗಲ್ಲನ್ನಿಟ್ಟು ಮತ್ತೊಬ್ಬ ಸುತ್ತಿಗೆಯಿಂದ ಅದನ್ನು ಒಡೆದು ಪುಡಿಗಟ್ಟುವಂಥ ಹೊಟ್ಟೆ ಕಲಕುವ ಸಾಹಸವನ್ನೂ ಹಾಗೂ ಇಪ್ಪತ್ತು ಮೂವತ್ತು ಅಡಿಗಳಷ್ಟು ಎತ್ತರದಲ್ಲಿ ಅಟ್ಟಣಿಗೆ ನಿರ್ಮಿಸಿ ಅದರ ತುತ್ತತುದಿಯಲ್ಲಿ ಸೈಕಲ್ ಸರ್ಕಸ್ ಮಾಡುತ್ತ ಮೈ ಜುಂ! ಎನ್ನಿಸುವಂಥ ಸಾಹಸಕ್ರೀಡೆಗಳನ್ನು ಮಂತ್ರಮುಗ್ಧರಾಗಿ ನೋಡುವ ಹಳ್ಳಿಯ ಜನರಲ್ಲಿ ಪ್ರೇಮಾಳೂ ಒಬ್ಬಳಾಗಿದ್ದಳು.
ಅಂದಿನ ರೋಚಕ ಆಟದ ನಂತರ ತೋಮ ತನ್ನ ಹೆಂಡತಿಯ ಹೆಸರಿನಲ್ಲಿ ಹತ್ತೋ, ಇಪ್ಪತ್ತೋ ರೂಪಾಯಿಗಳನ್ನು ಸೈಕಲ್ ಸವಾರನಿಗೆ ಮೆಚ್ಚುಗೆಯಿಂದ ಕೊಡುತ್ತ, ‘ಪ್ರೇಮ ಪನ್ಪಿನ ಒಂಜಕ್ಕೆ ಮಲ್ಲ ಮನಸ್ಸ್ ಮಲ್ತ್ದ್ ಪತ್ತ್ ರೂಪಾಯಿ ಕೊರ್ದ್ ಸಹಾಕಾರ ಮಲ್ತೆರ್. ಆರೆಗ್ ಮಾತರ‍್ಲಾ ಒಂಜಿ ಜೋರಾಯಿನ ತಾಟಿ ಬೊಟ್ಟೊಡು ಪಂಡ್ದ್ ಕೇನೊಂಬ…! (ಪ್ರೇಮ ಅನ್ನುವ ಒಬ್ಬಕ್ಕ ದೊಡ್ಡ ಮನಸ್ಸು ಮಾಡಿ ಹತ್ತು ರೂಪಾಯಿ ನೀಡಿ ಸಹಕರಿಸಿದರು. ಅವರಿಗೆ ಎಲ್ಲರೂ ಒಂದು ಜೋರಾದ ಚಪ್ಪಾಳೆ ನೀಡಬೇಕೆಂದು ವಿನಂತಿ…!)’ ಎಂದು ತುಳುವಿನಲ್ಲಿ, ಅವನಿಂದಲೇ ಮೈಕ್‌ನ ಮೂಲಕ ಕೂಗಿ ಹೇಳಿಸಿ ಅವಳನ್ನು ರೋಮಾಂಚನಗೊಳಿಸುತ್ತಿದ್ದ. ಸೈಕಲ್ ಸವಾರನ ಚಿತ್ರವಿಚಿತ್ರ ಕಸರತ್ತುಗಳನ್ನು ಕಾಣುತ್ತಿದ್ದ ಪ್ರೇಮಾಳಿಗೆ ಆಹೊತ್ತು ಅವನ ಮೇಲೆ ಅಗಾಧ ಮೆಚ್ಚುಗೆಯೋ, ಹೆಂಗರುಳಿನ ಕನಿಕರವೋ ಅಥವಾ ಸ್ತ್ರೀಸಹಜ ಮೋಹವೋ ಮೂಡುತ್ತಿದ್ದುದುಂಟು. ಹಾಗಾಗಿ ಅವೆಲ್ಲದರ ಝಳಕ್ಕು ಕೆಲವು ದಿನಗಳ ಕಾಲ ಅವಳ ಮೈಮನಸ್ಸುಗಳನ್ನು ಆವರಿಸಿಕೊಂಡು ಸೈಕಲ್ ಸವಾರನೊಬ್ಬ ವೀರಪುರುಷನಾಗಿ ಸುಳಿದಾಡುತ್ತಿದ್ದ. ಪ್ರೇಮಾಳಂಥದ್ದೇ ಸೆಳೆತಕ್ಕೆ ಬಲಿಯಾಗುತ್ತಿದ್ದ ಕೆಲವು ಹುಡುಗಿಯರು ಹಾಗೂ ತನ್ನ ಗಂಡನಿoದ ರೋಸಿ ಹೋದವಳೊಬ್ಬಳು ಸೈಕಲ್ ಸವಾರನೊಂದಿಗೂ ಮತ್ತು ಗಂಡು, ಹೆಣ್ಣಿನ ವೇಷ ಧರಿಸಿ ಮನರಂಜಿಸುತ್ತಿದ್ದoಥ ಯುವಕರ ಮೇಲೆಯೂ ಮೋಹಗೊಂಡು ಅವರೊಂದಿಗೇ ಓಡಿ ಹೋದ ಘಟನೆಗಳೂ ಗಂಗರಬೀಡಿನಲ್ಲಿ ನಡೆದದ್ದುಂಟು. ಆದರೂ ತಮಗೆ ಅದ್ಭುತ ಮನರಂಜನೆ ನೀಡಲೆಂದೇ ಪ್ರತಿವರ್ಷ ಆಗಮಿಸುತ್ತಿದ್ದ ಇಂಥ ಬಡ ಸೈಕಲ್ ಸರ್ಕಸ್ ಕಲಾವಿದ ತಂಡಗಳನ್ನು ಊರವರು ಆದರದಿಂದಲೇ ಸ್ವಾಗತಿಸಿ ತಮ್ಮ ಶಕ್ತಾö್ಯನುಸಾರ ತನು, ಮನ, ಧನಾದಿಗಳಿಂದ ಅವರನ್ನು ಪ್ರೋತ್ಸಾಹಿಸಿ ಕಳುಹಿಸುತ್ತಿದ್ದುದು ಅಚ್ಚರಿಯ ಸಂಗತಿಯಾಗಿತ್ತು.
ಗಂಗರಬೀಡಿನ ಗುತ್ತಿನ ಮನೆಯ ಪುರುಷೋತ್ತಮ ಶೆಟ್ಟರ ಬಾಕಿಮಾರು ಗದ್ದೆಯಲ್ಲಿ ವರ್ಷಂಪ್ರತಿ ಜರುಗುವ ಕಂಬಳಕ್ರೀಡೆಯೂ ಜನಾಕರ್ಷಣೀಯವಾಗಿರುತ್ತಿತ್ತು. ತೋಮ ದಂಪತಿ ಅಲ್ಲಿಗೂ ಹೋಗಿ ದಿನವಿಡೀ ಸುತ್ತಾಡಿ ಕೋಣಗಳ ಓಟ, ಸ್ಪರ್ಧೆ ಮತ್ತು ಜನಜಾತ್ರೆಯಲ್ಲಿ ಬೆರೆತು ಸಂಭ್ರಮಿಸುತ್ತಿದ್ದರು. ಬಿಸಿಲಿನ ಝಳಕ್ಕೆ ಬಾಯಾರಿದಾಗ ಹಾಲೈಸ್‌ಕ್ರೀಮ್, ಬಿಸ್ಕೆಟ್ ಐಸ್‌ಕ್ರೀಮ್ ಮತ್ತು ಐಸ್‌ಕ್ಯಾಂಡಿಗಳoಥ ತಿನಿಸುಗಳು ಅವರ ಗಮನ ಸೆಳೆಯುತ್ತಿದ್ದವು. ಅವನ್ನು ಕೊಂಡು, ಕಂಬಳದ ಗದ್ದೆಗೆ ಎದುರಾಗಿ ಸುಮಾರು ದೂರದಲ್ಲಿರುವ ಬಾಕಿಮಾರು ಕಂಬಳದಷ್ಟೇ ಪುರಾತನವಾದ ಗೋಸಂಪಿಗೆ ಮರವೊಂದರ ಅಡಿಗೆ ಹೋಗಿ ಕುಳಿತು ಸವಿಯುತ್ತ ಮಜವಾಗಿ ಕಾಲ ಕಳೆಯುತ್ತಿದ್ದರು. ಕಂಬಳ ಮುಗಿದು ಹಿಂದಿರುಗುವಾಗ ಜಿಲೇಬಿ, ಮಿಠಾಯಿ, ಮಂಡಕ್ಕಿ ಮತ್ತು ಕಂಬಳದ ವಿಶೇಷವಾದ ಬೋಳೆಗೆಣಸು, ತೊಪ್ಪೆಗೆಣಸುಗಳಿಂದ ತುಂಬಿದ ಚೀಲವೊಂದು ಅವರ ಶೆಡ್ಡನ್ನು ಸೇರುತ್ತಿತ್ತು. ಆ ತಿಂಡಿ, ತಿನಿಸುಗಳು ಮುಂದಿನ ಮೂರು, ನಾಲ್ಕು ದಿನಗಳ ಕಾಲ ಅವರ ಬೆಳಗ್ಗಿನ ಉಪಾಹಾರವಾಗಿ ಮುಗಿಯುತ್ತಿದ್ದವು.
ಹೀಗೆ ಈ ಗಂಧರ್ವ ಜೋಡಿಯು ಆಗಿನ ಕಾಲದ ಹಳ್ಳಿಯ ಮನರಂಜನೆಗಳನ್ನೆಲ್ಲ ತಪ್ಪದೆ ಆಸ್ವಾದಿಸುತ್ತ ಅನ್ಯೋನ್ಯವಾಗಿ ಬಾಳತೊಡಗಿದರು. ತೋಮ ಬಾಲ್ಯದಿಂದಲೂ ಅನಾಥನಾಗಿ ಬೆಳೆದು ಪ್ರೀತಿ, ಮಮತೆಯಿಂದ ವಂಚಿತನಾದವನು. ಇಂದು ಪರಿಶುದ್ಧ ಪ್ರೇಮ ಸ್ವರೂಪಿಯಾದ ಹೆಣ್ಣೊಬ್ಬಳು ಅವನ ಬಾಳಿನಲ್ಲಿ ಬಂದುದು ಅವನ ಮೈಮನಸ್ಸು ಮತ್ತು ನೀರಸವಾದ ಶೆಡ್ಡಿನೊಳಗೆ ನವಚೈತನ್ಯವು ತುಂಬಿದoತೆ ಭಾಸವಾಗುತ್ತಿತ್ತು. ಹಾಗಾಗಿ ಅವನು, ಇನ್ನು ಮುಂದೆ ತನ್ನ ಪ್ರೇಯಸಿಯ ಖುಷಿಗಾದರೂ ತಾನು ಚೆನ್ನಾಗಿ ಬದುಕಬೇಕು ಎಂದು ನಿಶ್ಚಯಿಸಿದ್ದ. ಪ್ರೇಮ ಅವನ ಬಾಳಿನಲ್ಲಿ ಬರುವ ಮುಂಚೆ ವಾರದಲ್ಲಿ ಮೂರು ನಾಲ್ಕು ದಿನ ಕಂಠಪೂರ್ತಿ ಕುಡಿದು ತೂರಾಡುತ್ತ ಮನೆಯ ದಾರಿ ಹಿಡಿಯುತ್ತಿದ್ದವನು, ಅವಳು ಬಂದ ನಂತರ ತನ್ನ ಬೇಕಾಬಿಟ್ಟಿ ಜೀವನವನ್ನು ತಿದ್ದಿಕೊಳ್ಳಲಾರಂಭಿಸಿದ್ದ. ಸಂಜೆ ಕೂಲಿ ಮುಗಿಸಿ ಮರಳುವ ಹೊತ್ತಿಗೆ ಹೆಲೆನಾಬಾಯಿಯಿಂದಲೋ, ಹುಚ್ಚ ಹೆನ್ರಿ ಪರ್ಬುವಿನಿಂದಲೋ ಒಂದು ಚೊಂಬು ಸಾರಾಯಿಯನ್ನು ಕೊಂಡು ತಂದು ಮನೆಯಲ್ಲೇ ಕುಡಿಯುತ್ತಿದ್ದ. ಪ್ರೇಮ ಪ್ರೀತಿಯಿಂದ ಮಾಡಿ ಬಡಿಸುತ್ತಿದ್ದ ಮೀನಿನ ಸಾರು ಅಥವಾ ರಾಧಾಕೃಷ್ಟ ಶೆಟ್ಟರ ಕೋಳಿ ಫಾರ್ಮ್ನಲ್ಲಿ ಅಗ್ಗಕ್ಕೆ ಸಿಗುವ ಕೋಳಿಯ ಲಿವರ್ ಮತ್ತು ರೆಕ್ಕೆಪುಕ್ಕಗಳಿಂದಲೂ ಅದರ ಕಾಲುಗಳ ಮಾಂಸದಿoದಲೂ ಅವಳು ತಯಾರಿಸುತ್ತಿದ್ದ ರುಚಿಕಟ್ಟಾದ ಪದಾರ್ಥವನ್ನು ಕುಚ್ಚಲಕ್ಕಿ ಅನ್ನದೊಂದಿಗೆ ಪಟ್ಟಾಗಿ ಹೊಡೆದು ಸುಖ ನಿದ್ರೆಗೆ ಜಾರುತ್ತಿದ್ದ.
ಇಂಥ ತೋಮನು ತನಗೆ ಒಲಿದವಳಿಗೆ ಮಾತ್ರವಲ್ಲದೇ ಊರಿನ ಸಕಲ ಜೀತಕಾರ್ಯಗಳಲ್ಲೂ ಪ್ರಮುಖನಾಗಿದ್ದ. ಯಾರದೇ ಮನೆ, ತೋಟದ ಬಾವಿ ತೋಡಲು, ಗುಡಿಸಲು ಕಟ್ಟಲು, ಹಂಚಿನಮನೆ ನಿರ್ಮಿಸಲು, ಕಲ್ಲಿನ ಗೋಡೆ ಏರಿಸಲು, ಕಲ್ಲು, ಮಣ್ಣು ಹೊರಲು, ಬಾವಿಗೆ ಬಿದ್ದ ಕೊಡಪಾನ, ಕೋಳಿ, ನಾಯಿ, ಬೆಕ್ಕುಗಳನ್ನು ಮೇಲೆತ್ತಲು ತೆಂಗಿನಕಾಯಿ, ಮಾವಿನಹಣ್ಣು, ಗೇರುಹಣ್ಣು ಮತ್ತು ತರಕಾರಿಗಳನ್ನು ಕೊಯ್ದು ಮಾರಾಟ ಮಾಡಿ ಬರುವ ತನಕದ ಊರಿನವರ ಸರ್ವ ಕೆಲಸಕಾರ್ಯಗಳನ್ನೂ ವಹಿಸಿಕೊಂಡು ಮುತುವರ್ಜಿಯಿಂದ ದುಡಿಯುತ್ತಿದ್ದ. ಆದರೂ ಅದೆಂಥ ಕಡಿದು ಕಟ್ಟೆ ಹಾಕುವ ಘನಕಾರ್ಯವಿದ್ದರೂ ಕತ್ತಲಾಗುತ್ತಲೇ ಹೆಂಡತಿಯ ನೆನಪು ಅವನನ್ನು ಬೆಂಬಿಡದೆ ಕಾಡುತ್ತ ಬೇರೆಲ್ಲೂ ಕಾಲಾಹರಣ ಮಾಡಲು ಬಿಡದೆ ಶೆಡ್ಡಿನತ್ತ ಸೆಳೆಯುತ್ತಿತ್ತು. ಪ್ರೇಮಾಳೂ ಸುಮ್ಮನೆ ಕೂರುವ ಸ್ವಭಾವದವಳಲ್ಲ. ಶೆಟ್ಟರ ತೋಟಕ್ಕೂ, ಹೆಲನಾಬಾಯಿಯ ಮನೆಗೆಲಸಕ್ಕೂ ಹೋಗುತ್ತ ದುಡಿಯುತ್ತಿದ್ದಳು.
(ಮುಂದುವರೆಯುವುದು)