
9 ಹ್ಯಾಂಡ್ಸ್ ಶಿಕ್ಷಣಕ್ಕೆ ನೀಡುತ್ತಿರುವ ಆದ್ಯತೆ ಪ್ರಶಂಶನಿಯ – ದಿಲೀಪ್ ಮೂಲ್ಕಿ
ಮುಂಬಯಿ ಜು 26. ಆರ್ಥಿಕವಾಗಿ ಹಿಂದುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಘನ ಉದ್ದೇಶದಿಂದ ಆರಂಭಗೊಂಡ ನೈನ್ ಹ್ಯಾಂಡ್ಸ್ ಫೌಂಡೇಶನ್ ವತಿಯಿಂದ ಈ ಬಾರಿಯ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಜುಲೈ 7ರಂದು ಅಂಧೇರಿ ಪಶ್ಚಿಮ ಮೊಗವೀರ ವ್ಯವಸ್ಥಾಪಕ ಮಂಡಳಿಯ ಎಜುಕೇಶನ್ ಕ್ಯಾಂಪಸ್ ನಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡ,ಮೊಗವೀರ ವ್ಯವಸ್ಥಾಪಕ ಮಂಡಳಿಯ ಗೌರವ ಕಾರ್ಯದರ್ಶಿ ದಿಲೀಪ್ ಮೂಲ್ಕಿ ತನ್ನ ಅಭಿಪ್ರಾಯ ತಿಳಿಸುತ್ತಾ “ಇಂದಿನ ದಿನಗಳಲ್ಲಿ ಚಾರಿಟೇಬಲ್ ಟ್ರಸ್ಟ್ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಸಂಸ್ಥೆಯಲ್ಲಿ ಇರುವವರು ಎಲ್ಲರೂ ಸಮಾಜಿಕ ಕಾರ್ಯಕರು, ಅವರು ನೈನ್ ಹ್ಯಾಂಡ್ಸ್ ನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ಮೊಗವೀರ ವ್ಯವಸ್ಥಾಪಕ ಮಂಡಳಿಯೂ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ವಿದ್ಯಾರ್ಥಿವೇತನ ಪಡ ಕೊಳ್ಳಲು, ವಿದ್ಯಾರ್ಥಿಗಳೆ ಬರಬೇಕು, ಹೆತ್ತವರು ಬರುವುದು ಸರಿಯಲ್ಲ, ನೈನ್ ಹ್ಯಾಂಡ್ಸ್ ಶಿಕ್ಷಣಕ್ಕೆ ನೀಡುತ್ತಿರುವ ಆದ್ಯತೆ ಪ್ರಶಂಸನೀಯ ಎಂದರು.
ಮೊಗವೀರ ಬ್ಯಾಂಕ್ ನ ಮಾಜಿ ಕಾರ್ಯಧ್ಯಕ್ಷ ಡಿ. ಡಿ. ಕರ್ಕೇರ ಮಾತನಾಡುತ್ತಾ “ನೈನ್ ಹ್ಯಾಂಡ್ಸ್ ಫೌಂಡೇಶನ್ 2017ರಲ್ಲಿ ಪ್ರಾರಂಭವಾಗಿದ್ದು, ಇದಕ್ಕೆ ಮೂಲ ಕಾರಣಕರ್ತ ಸುಧಾಕರ ಕರ್ಕೇರ ಎಂದು ತಿಳಿದುಕೊಂಡೆ, ಅವರ ಹಾಗೂ ಅವರ ಗೆಳೆಯರ ಯೋಜನೆಯನ್ನು ಖಂಡಿತ ನಾವೆಲ್ಲಾ ಅಭಿನಂದಿಸಬೇಕು. ಅಂದು 9 ಜನರಿಂದ ಆರಂಭವಾದ ಸಂಸ್ಥೆಯಲ್ಲಿ, ಈಗ 160 ಸದಸ್ಯರು ಸೇರಿಕೊಂಡಿರುವುದು ಸಂತಸದ ವಿಷಯ. ನಮ್ಮ ಸಂವಿಧಾನದಲ್ಲಿ ಶಿಕ್ಷಣದ ಹಕ್ಕು ಇದೆ. ಸರಕಾರ 75 ವರ್ಷದಿಂದ ಈ ನಿಟ್ಟಿನಲ್ಲಿ ಕಾರ್ಯ ಪ್ರವತ್ತವಾಗಿದೆ, ಆದರೆ ಇಷ್ಟರ ತನಕ ಯಾವುದೇ ಸರಕಾರ ಎಲ್ಲರಿಗೂ ಶಿಕ್ಷಣ ನೀಡುವಲ್ಲಿ ವಿಫಲವಾಗಿದೆ. ಇಂತಹ ಸಮಯದಲ್ಲಿ ನೈನ್ ಹ್ಯಾಂಡ್ಸ್ ನಂತಹ ಸಂಸ್ಥೆಗಳು ಮುಂದೆ ಬಂದು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದು ನಿಜಕ್ಕೂ ಶ್ಲಾಘನೀಯ. ಇಂದು ಸಂಸ್ಥೆಯಿಂದ ಸಹಾಯ ಪಡೆದವರು, ಭವಿಷ್ಯದಲ್ಲಿ ಅವರು ಬಡ ಮಕ್ಕಳ ವಿದ್ಯಾರ್ಜನೆಗೆ ನೆರವಾಗಬೇಕು ಎಂದರು.
ಮೊಗವೀರ ಬ್ಯಾಂಕ್ ನ ಇನ್ನೋರ್ವ ಮಾಜಿ ಕಾರ್ಯಧ್ಯಕ್ಷ, ನ್ಯಾಯವಾದಿ ಡಿ. ಎಲ್. ಅಮೀನ್ ತನ್ನ ಅನಿಸಿಕೆ ತಿಳಿಸುತ್ತಾ “ನೈನ್ ಹ್ಯಾಂಡ್ಸ್ ನ ಸೇವಾ ಕಾರ್ಯಗಳನ್ನು ಮೆಚ್ಚಿ ನಾನು ಸಂಸ್ಥೆಯೊಂದಿಗೆ ಕೈಜೋಡಿಸಿದ್ದೇನೆ. ನೈನ್ ಹ್ಯಾಂಡ್ಸ್ ಇಷ್ಟರತನಕ 57 ಮಕ್ಕಳ ಶಿಕ್ಷಣ ಕ್ಕೆ ಸಹಾಯ ಮಾಡಿದ್ದು, ಸಂಸ್ಥೆಯಿಂದ ಆರ್ಥಿಕ ಸಹಾಯ ಪಡೆದವರು ಉತ್ತಮ ಅಂಕದಿಂದ ಉತ್ತಿರ್ಣರಾಗುತ್ತಿರುವುದು ಸಂತಸ ತಂದಿದೆ ಎಂದರು.
ಬಿಎಎಸ್ಎಫ್ ನ ಮಾಜಿ ನಿರ್ದೇಶಕ ಪ್ರದೀಪ್ ಚಂದನ್ ಮಾತನಾಡಿ “ನಾನು ಹಿಂದಿನಿಂದಲೂ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತಾ ಬಂದವ, ನೈನ್ ಹ್ಯಾಂಡ್ಸ್ ನ ಉದ್ದೇಶ ತಿಳಿದು ಸಂತೋಷವಾಯಿತು. ನೀವು ಮಾಡುವುದು ಪುಣ್ಯದ ಕೆಲಸ, ಮುಂದಕ್ಕೂ ಇದನ್ನು ಮುಂದುವರಿಸಿ, ನನ್ನಿಂದಾದಷ್ಟು ಸಹಾಯ ಮಾಡಲು ಸದಾ ಸಿದ್ದ. ವಿದ್ಯಾರ್ಥಿಗಳು ಯಾವಾಗಲೂ ತಮ್ಮ ವಿದ್ಯಾಬ್ಯಾಸದ ಕಡೆ ಗಮನ ಇಡಬೇಕು, ಟಿ. ವಿ, ಮೊಬೈಲ್ ಆದಷ್ಟು ಕಡಿಮೆ ಮಾಡಿ, ನೀವು ಜೀವನದಲ್ಲಿ ಸಫಲರಾಗಲು ಕಠಿಣ ಪರಿಶ್ರಮ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಹಿತ ವಚನ ನೀಡಿದರು.
ಬಳಿಕ ವೇದಿಕೆಯ ಗಣ್ಯರು ಸಂಸ್ಥೆಯ ವತಿಯಿಂದ ಆರ್ಥಿಕವಾಗಿ ದುರ್ಬಲರಾಗಿರುವ 1 ನೇ ಕ್ಲಾಸಿನಿಂದ 10 ನೇ ಕ್ಲಾಸಿನವರೆಗೆ ಕಲಿಯುತ್ತಿರುವ ಒಟ್ಟು 12 ವಿದ್ಯಾರ್ಥಿಗಳಿಗೆ 2024-25 ನೇ ವರ್ಷದ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಭರಿಸುವ ಚೆಕ್ಕನ್ನು ವಿದ್ಯಾರ್ಥಿಗಳಿಗೆ -ಪೋಷಕರಿಗೆ ಹಸ್ತಾಂತರಿಸಿದರು . ಈ ಬಾರಿ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕ, ಸಮವಸ್ತ್ರ, ಮತ್ತು ಪುಸ್ತಕಕ್ಕಾಗಿ 4 ಲಕ್ಷ 28 ಸಾವಿರ ರೂಪಾಯಿ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೈನ್ ಹ್ಯಾಂಡ್ಸ್ ನ ಉಪಾಧ್ಯಕ್ಷರಾದ ತುಕಾರಾಂ ಮಾತನಾಡುತ್ತಾ “9 ಜನ ಗೆಳೆಯರು ಸೇರಿ ನಾವು ಮಾಡುವ ಅನವಶ್ಯಕ ವೆಚ್ಚವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವ್ಯಯಿಸುವ ಎಂಬ ಉದ್ದೇಶದಿಂದ ನೈನ್ ಹ್ಯಾಂಡ್ ಫೌಂಡೇಶನ್ ಸ್ಥಾಪನೆ ಮಾಡಲಾಯಿತು. ಇಂದಿನ ದಿನ 160 ಸದಸ್ಯರು ನಮ್ಮೊಂದಿಗೆ ಸೇರಿಕೊಂಡಿದ್ದಾರೆ.ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಕಾರ್ಯದಲ್ಲಿ ಸದಸ್ಯರು, ಟ್ರಸ್ಟಿಗಳು ಮಕ್ಕಳ ಶಾಲೆಗೆ , ಅವರ ಮನೆಗೆ ಭೇಟಿ ನೀಡಿ, ಅವರು ವಿದ್ಯಾರ್ಥಿವೇತನಕ್ಕೆ ಅರ್ಹರೆ ಎಂದೆಲ್ಲ ವಿಷಯ ಪರಿಶೀಲನೆ ಮಾಡಿ ಬಹಳ ಕೆಲಸ ಮಾಡಿದ್ದಾರೆ. ಟ್ರಷ್ಟಿ ಮುಕೇಶ್ ಬಂಗೇರ ಅವರು ಸದಸ್ಯರ ವರ್ಷದ ದೇಣಿಗೆ ಸಂಗ್ರಹಿಸುವಲ್ಲಿ ಶ್ರಮಿಸಿದ್ದಾರೆ. ಇದೇ ರೀತಿ ನಮ್ಮ ಸಂಸ್ಥೆ ಎಲ್ಲರ ಸಹಕಾರದಿಂದ ಬಲಿಷ್ಠಗೊಳ್ಳಲಿ ಎಂದರು.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಟ್ರಷ್ಟಿ ಹರೀಶ್ ಪುತ್ರನ್, 9 ಹ್ಯಾಂಡ್ಸ್ ನ ಸದಸ್ಯರುಗಳಾದ ಪ್ರಕಾಶ್ ಕಾಂಚನ್, ನಾರಾಯಣ ತಿಂಗಳಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
9 ಹ್ಯಾಂಡ್ಸ್ ನ ಟ್ರಷ್ಟಿ ಹರೀಶ್ ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರೆ, ಕಾರ್ಯದರ್ಶಿ ದೇವರಾಜ್ ಅಮೀನ್ ಧನ್ಯವಾದ ಸಮರ್ಪಿಸಿದರು.
ಅಧ್ಯಕ್ಷರಾದ ಸಂತೋಷ್ ಕರ್ಕೇರ, ಉಪಾಧ್ಯಕ್ಷ ತುಕಾರಾಂ ಸಾಲ್ಯಾನ್, ಕಾರ್ಯದರ್ಶಿ ದೇವರಾಜ್ ಅಮೀನ್, ಟ್ರಷ್ಟಿಗಳಾದ ಸುಧಾಕರ ಕರ್ಕೇರ, ಹರೀಶ್ ಶ್ರೀಯನ್, ಪರೇಶ್ ಅಮೀನ್, ಮುಕೇಶ್ ಬಂಗೇರ, ಕುಮಾರ ಮೆಂಡನ್, ತಾರಾನಾಥ್ ಮೆಂಡನ್, ಹೇಮರಾಜ್ ಕಾಂಚನ್ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಈ ಸಂಧರ್ಭ ಸಂಸ್ಥೆಯ ಸದಸ್ಯರುಗಳಾದ ಪ್ರಕಾಶ್ ಕಾಂಚನ್, ನ್ಯಾಯವಾದಿ ಡಿ. ಎಲ್. ಅಮೀನ್, ಡಿ. ಡಿ. ಕರ್ಕೇರ ” 9 ಹ್ಯಾಂಡ್ಸ್ ನ ಸೇವಾ ಕಾರ್ಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ನಮ್ಮ ಪ್ರತಿನಿಧಿಗೆ ತಿಳಿಸಿದರು.
ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಬ್ಯಾಸವನ್ನು ಹಣಕಾಸಿನ ಕೊರತೆ ಇಲ್ಲದೆ ಸುಗಮವಾಗಿ ಮುಂದುವರಿಸಿಕೊಂಡು ಹೋಗುವ ಸಲುವಾಗಿ ಅವರಿಗೆ ಸಹಾಯ ಹಸ್ತವನ್ನು ನೀಡುವ ಏಕ ಮಾತ್ರ ಉದ್ದೇಶದಿಂದ 2017ರಲ್ಲಿ ಆರಂಭವಾದ 9 ಹ್ಯಾಂಡ್ಸ್ 2017 ರಿಂದ 2024 ರ ತನಕ ಒಟ್ಟು 57 ವಿದ್ಯಾರ್ಥಿಗಳಿಗೆ ಒಟ್ಟು 16 ಲಕ್ಷಕ್ಕೂ ಮಿಕ್ಕಿ ಆರ್ಥಿಕ ಸಹಾಯ ಮಾಡಿದ್ದು ಉಲ್ಲೇಖನಿಯಾ.
9 ಜನರಿಂದ ಆರಂಭವಾದ ಸಂಸ್ಥೆಯಲ್ಲಿ ಈಗ ಒಟ್ಟು 160 ಸದಸ್ಯರು ಕಾರ್ಯನಿರವಹಿಸುತ್ತಿದ್ದು, ಪ್ರತಿ ತಿಂಗಳು 500 ರೂಪಾಯಿಯಂತೆ, ವರ್ಷಕ್ಕೆ 6000 ರೂಪಾಯಿಯನ್ನು ಸದಸ್ಯರು ವಂತಿಗೆ ನೀಡುತ್ತಿದ್ದು, ಈ ಹಣವನ್ನು ಬಡ ಮಕ್ಕಳ ವಿದ್ಯಾರ್ಜನೆಗೆ ಸಂಸ್ಥೆ ವ್ಯಯಿಸುತ್ತಿದೆ.
ಸಂಸ್ಥೆಯು ತನ್ನ ಸಮಾಜ ಕಲ್ಯಾಣ ಕಾರ್ಯಕ್ಷೇತ್ರದಲ್ಲಿ ಯಶಸ್ವಿಯಾಗಲಿ ಮತ್ತು ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂಬುದೇ ನಮ್ಮ ಅಭಿಲಾಷೆ.