
ಆನಂದಮಯ ಕೋಶ ಜಾಗೃತಿಯಾದಾಗ ನಿತ್ಯಾನಂದ ಪ್ರಾಪ್ತಿಯಾಗುವುದು: ಒಡಿಯೂರು ಶ್ರೀ
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ ಜು 26.ಭಗವಂತನ ಅನುಸಂಧಾನ ಸಾಧ್ಯವಾಗುವುದು ಭಜನೆಯಿಂದ. ಮಾಯೆಯಿಂದ ಹೊರಗಡೆ ಬರುವುದಕ್ಕೆ ಇದು ಸಹಕಾರಿ. ಯಾವ ಸಮಯದಲ್ಲೂ ನಾಮಸಂಕೀರ್ತನೆ ಮಾಡಬಹುದು. ಅಧ್ಯಾತ್ಮದಲ್ಲಿ ತೊಡಗಿಸಿಕೊಳ್ಳುವುದೆಂದರೆ ಸಜ್ಜನರ ಸಹವಾಸ, ಸದ್ವಿಚಾರದಲ್ಲಿ ತೊಡಗಿಸಿಕೊಳ್ಳುವುದೇ ಆಗಿದೆ. ಪ್ರತಿಯೊಬ್ಬರ ಹೆಸರಿನಲ್ಲೂ, ಎಲ್ಲರೊಳಗೂ ‘ರಾಮ’ ಇದ್ದಾನೆ. ಶಿವನೇ ತನ್ನ ಭಾಮೆಗೆ ರಾಮಮಂತ್ರದ ಮಹಿಮೆಯನ್ನು ತಿಳಿಸಿದ. ರಾಮನು ಶಿವಪೂಜೆಯನ್ನೇ ರಾಮೇಶ್ವರದಲ್ಲಿ ಮಾಡಿದ.ಹಾಗಾಗಿ ನಮ್ಮೊಳಗೂ ಭೇದ ಇರಕೂಡದು. ನಾವು ನೋಡುವ ದೃಷ್ಟಿಯಲ್ಲಿ ಬೇರೆ ಬೇರೆ ಇರಬಹುದು. ಆದರೆ ಸದ್ಭಾವನೆ ಇದ್ದಾಗ ಭಗವಂತನ ಅನುಗ್ರಹವಾಗುವುದು, ಆನಂದಮಯ ಕೋಶ ಜಾಗೃತಿಯಾದಾಗ ನಿತ್ಯಾನಂದ ಪ್ರಾಪ್ತಿಯಾಗುವುದು. ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನದ ಮಾತುಗಳಾಡಿದರು ಜುಲೈ 25ರಂದು ಸಯನ್ ನ ಶ್ರೀ ನಿತ್ಯಾನಂದ ಸಭಾಗ್ರಹದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು. ವರ್ತಮಾನದಲ್ಲಿ ಸತ್ಕಾರ್ಯ ಮಾಡಿದಾಗ ಭವಿಷ್ಯದಲ್ಲಿ ಬದುಕು ಸಾರ್ಥಕತೆಯನ್ನು ಪಡೆಯಬಹುದು. ಪರೋಪಕಾರದ ಜೀವನ ನಮ್ಮದಾಗಲಿ. ಶರೀರ ನಮಗೆ ಪುನಃ ಪಡೆಯುವುದಕ್ಕೆ ಸಾಧ್ಯವಿಲ್ಲ. ಆದುದರಿಂದ ಈಗಲೇ ಶರೀರವನ್ನು ಸದ್ಬಳಕೆ ಮಾಡಿಕೊಳ್ಳೋಣ ಎಂದು ಶ್ರೀಗಳು ನುಡಿದರು.

ಸಾಧ್ವಿ ಶ್ರೀ ಶ್ರೀಮಾತಾನಂದಮಯೀಯವರು ಭಕ್ತಿಗಾನದ ಮೂಲಕ ಅನುಗ್ರಹಿಸಿದರು.
ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಘಟಕದ ಅಧ್ಯಕ್ಷ ದಾಮೋದರ ಎಸ್. ಶೆಟ್ಟಿ ಮತ್ತು ಪದಾಧಿಕಾರಿಗಳು, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಮುಂಬೈ ಘಟಕಾಧ್ಯಕ್ಷೆ ಶ್ವೆತಾ ಚಂದ್ರಹಾಸ ಎಂ.ರೈ ಮತ್ತು ಪದಾಧಿಕಾರಿಗಳು, ಬಳಗದ ಹಿರಿಯ ಸದಸ್ಯರಾದ ವಾಮಯ್ಯ ಬಿ.ಶೆಟ್ಟಿ ದಂಪತಿಗಳು, ಉದ್ಯಮಿ ಐಕಳ ವಿಶ್ವನಾಥ ಶೆಟ್ಟಿ, ಲಕ್ಷ್ಮಿ ಕ್ಯಾಟರರ್ಸ್ ನ ಮ್ಹಾಲಕ ಸತೀಶ್ ಶೆಟ್ಟಿ , ಉದ್ಯಮಿ ಜಯಂತ್ ಪಕ್ಕಳ ಉಪ ಸ್ಥಿತರಿದ್ದರು.

ಡೊಂಬಿವಲಿ ದಿನೇಶ್ ಶೆಟ್ಟಿ ದಂಪತಿಗಳು ಶ್ರೀ ಗುರುಪಾದುಕಾರಾಧನೆಗೈದರು.
ಬಳಗದ ಪ್ರಧಾನ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಕೆ.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ನವಿಮುಂಬೈ ಮೋಹನದಾಸ ರೈ ಮತ್ತು ಬಳಗದವರಿಂದ ನಾಮಸಂಕೀರ್ತನೆ ಸಂಪನ್ನಗೊಂಡಿತು.