
ತುಳುನಾಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮುಂಬಯಿಗರ ಕಾರ್ಯ ಶ್ಲಾಘನೀಯ- ಉದಯ್ ಎಮ್. ಶೆಟ್ಟಿ
ಚಿತ್ರ, ವರದಿ,: ಉಮೇಶ್ ಕೆ.ಅಂಚನ್.
ಹಿಂದಿನ ಕಷ್ಟಕಾಲದ ಸಮಯ ಹಾಗೂ ವಿಪರೀತ ಮಳೆಯ ಕಾರಣದಿಂದ ಜನರಿಗೆ ಆಟಿ ತಿಂಗಳ ಜೀವನ ಸುಖಕರವಾಗಿರಲಿಲ್ಲ. ಆ ಸಮಯದಲ್ಲಿ ಜನರು ಪ್ರಾಕೃತಿಕವಾಗಿ ಲಭಿಸುವ ತಿಂಡಿತಿನಿಸುಗಳನ್ನು ಉಪಯೋಗಿಸುತ್ತಿದ್ದರು. ಆಗ ಇಂದಿನ ಯಾವುದೇ ಸೌಲಭ್ಯ ಇರಲಿಲ್ಲ. ಇಂದು ನಾವು ಆ ದಿನವನ್ನು ನೆನೆಪಿಸುವ ಹಾಗೂ ಇಂದಿನ ಪೀಳಿಗೆಗೆ ತಿಳಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಹೊಟ್ಟೆಪಾಡಿಗಾಗಿ ಜನ್ಮಭೂಮಿ ಯಿಂದ ಕರ್ಮಭೂಮಿಯಾದ ಮುಂಬಯಿಗೆ ಬಂದು ತುಳುನಾಡ ಸಂಸ್ಕೃತಿಯೆಲ್ಲವನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿರುವ ಮುಂಬಯಿಗರ ಕಾರ್ಯ ಶ್ಲಾಘನೀಯ ಎಂದು ಬಂಟ್ಸ್ ಫೋರಮ್ ಮೀರಾ ಭಾಯಂದರ್ ಇದರ ಅದ್ಯಕ್ಷ ಉದಯ್ ಎಮ್.ಶೆಟ್ಟಿ ಮಲಾರ್ ಬೀಡು ಹೇಳಿದರು.
ಅವರು ಶನಿವಾರ ಜು.27ರಂದು ಭಾಯಂದರ್ ಪೂರ್ವದ ಕ್ರೌನ್ ಬಿಜಿನೆಸ್ ಹೋಟೇಲಿನ ಅಶ್ವಿನಿ ಬ್ಯಾಂಕ್ವೆಟ್ ಸಭಾಗ್ರಹದಲ್ಲಿ ಬಂಟ್ಸ್ ಫೋರಮ್ ಮೀರಾ ಭಾಯಂದರ್ ವತಿಯಿಂದ ಆಯೋಜಿಸಿದ್ದ ‘ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಸುನಿತಾ ಶೆಟ್ಟಿಯವರು ಕಾರ್ಗಿಲ್ ವಿಜಯೋತ್ಸವದ ಬಗ್ಗೆ ಮಾತನಾಡಿ ಯುದ್ದದಲ್ಲಿ ವೀರ ಮರಣ ಹೊಂದಿದ ಸೈನಿಕರಿಗೆ ನುಡಿನಮನ ಸಲ್ಲಿಸಿದರು.

ಅತಿಥಿಯಾಗಿ ಆಗಮಿಸಿದ್ದ ಲೇಖಕಿ ಲತಾ ಸಂತೋಷ್ ಶೆಟ್ಟಿ ಮಾತನಾಡಿ ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷದ ಹಿನ್ನೆಲೆಯಲ್ಲಿ ಭಾರತ ಸರಕಾರ ದೆಹಲಿಯ ಕೆಂಪು ಕೋಟೆಯಲ್ಲಿ ಜನವರಿ ತಿಂಗಳಲ್ಲಿ ಯುದ್ದದಲ್ಲಿ ವೀರ ಮರಣ ಹೊಂದಿದ ಕುಟುಂಬದವರ ಒಟ್ಟಿನಲ್ಲಿ ಹಮ್ಮಿಗೊಂಡ ರಜತ ಕಳಸ ಯಾತ್ರೆಯಲ್ಲಿ ಭಾಗವಹಿಸಲು ತನಗೆ ಸಿಕ್ಕಿದ ಅವಕಾಶವನ್ನು ನೆನಪಿಸಿ ಕೊಂಡರು. ಆಟಿ ತಿಂಗಳ ದಿನಾಚರಣೆಗೆ ಭಾಗವಹಿಸಲು ಸಿಕ್ಕಿದ ಅವಕಾಶಕ್ಕೆ ಸಂತಸ ವ್ಯಕ್ತಪಡಿಸಿದರು.
ಇನ್ನೋರ್ವ ಅತಿಥಿ ಪ್ರತಿಘ್ಯ ಶೆಟ್ಟಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ ಇಂತಹ ಕಾರ್ಯಕ್ರಮಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದಲ್ಲಿ ಅವರಿಗೆ ನಮ್ಮ ಸಂಸ್ಕೃತಿಯನ್ನು ತಿಳಿಸಲು ಸುಲಭವಾಗುತ್ತದೆ. ಮಕ್ಕಳಿಗೆ ಅರ್ಥವಾಗುವಂತಹ ಹಾಗೂ ದೇಶ ಭಕ್ತಿಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹಾಗೂ ಮನೆಯಲ್ಲಿ ನಮ್ಮಮಾತೃ ಭಾಷೆಯನ್ನೇ ಕಲಿಸಬೇಕು ಎಂದು ಹೇಳಿ ಕಾರ್ಯಕ್ರಮದ ಆಯೋಜಕರಿಗೆ ಅಭಿನಂದಿಸಿದರು.

ಬಂಟರ ಸಂಘದ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಶೆಟ್ಟಿಯವರು ಆಟಿ ತಿಂಗಳ ಮಹತ್ವದ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಅತಿಥಿ ಸ್ವರ್ಣಲತಾ ಅರುಣೋದಯ ರೈ, ಸಂಸ್ಥೆಯ ಮಾಜಿ ಅಧ್ಯಕ್ಷ ಚಂದ್ರಹಾಸ್ ಕೆ .ಶೆಟ್ಟಿ ಇನ್ನ, ಉಪಾಧ್ಯಕ್ಷ ದಿವಾಕರ್ ಶೆಟ್ಟಿ ಶಿರ್ಲಾಲ್, ಕಾರ್ಯದರ್ಶಿ ಸತೀಶ್ ಶೆಟ್ಟಿ ಮುಂಡ್ಕೂರು, ಸಂಚಾಲಕ ಅನಿಲ್ ಆರ್.ಶೆಟ್ಟಿ ಎಲ್ಲೂರು ಒಡಿಪರಗುತ್ತು, ಕೋಶಾಧಿಕಾರಿ ಹರೀಶ್ ಶೆಟ್ಟಿ ಕಾಪು, ಜತೆ ಕಾರ್ಯದರ್ಶಿ ಶರ್ಮಿಳಾ ಕೆ . ಶೆಟ್ಟಿ ಕಾಪು, ಜತೆ ಕೋಶಾಧಿಕಾರಿ ಮಧುಕರ್ ಶೆಟ್ಟಿ ಅಜೆಕಾರು, ಯುವ ವಿಭಾಗದ ಕಾರ್ಯಾಧ್ಯಕ್ಷ ನಟರಾಜ್ ಡಿ.ಶೆಟ್ಟಿ ಉಪಸ್ಥಿತರಿದ್ದರು.
ಆರಂಭದಲ್ಲಿ ಸಂಸ್ಥೆಯ ಸದಸ್ಯೆಯರಿಂದ ಜಾನಪದ ನೃತ್ಯ, ವಿಜಯ್ ಶೆಟ್ಟಿ ಮೂಡುಬೆಳ್ಳೆಯವರ ಸಂಗೀತ ರಸಮಂಜರಿ ,ಸದಸ್ಯರ ಮಕ್ಕಳಿಂದ ಆಟಿಕಡಂಜ ನೃತ್ಯ ಹಾಗೂ ಅಶೋಕ್ ವಳದೂರು ರಚಿಸಿ ನಿರ್ದೇಶಿಸಿರುವ ತುಳು ಕಿರುನಾಟಕ ”ಮೂಜಿನೇ ಇಲ್ಲ್” ಪ್ರದರ್ಶನ ಗೊಂಡಿತು.ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು ಅತಿಥಿಗಳನ್ನು ಹಾಗೂ ಉಚಿತವಾಗಿ ಸಭಾಗ್ರಹವನ್ನು ಒದಗಿಸಿದ ಅಶ್ವಿನಿ ಬ್ಯಾಂಕ್ವೆಟ್ ಸಭಾಗ್ರಹದ ಸಂಚಾಲಕರಾದ ಚಂದ್ರಹಾಸ್ ಕೆ ಶೆಟ್ಟಿ, ಅನಿಲ್ ಆರ್.ಶೆಟ್ಟಿ, ಹರೀಶ್ ಶೆಟ್ಟಿ ಹಾಗೂ ರಮೇಶ್ ಶೆಟ್ಟಿಯವರನ್ನು ಸತ್ಕರಿಸಲಾಯಿತು .ಮಹಳಾ ವಿಭಾಗದ ಸದಸ್ಯೆಯರಿಂದ ಆಟಿ ತಿಂಗಳಲ್ಲಿ ಸಿಗುವ ಖಾದ್ಯ ಪದಾರ್ಥಗಳೊಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಖವಾಣಿ ಡಿ. ಶೆಟ್ಟಿ ಸ್ವಾಗತಿಸಿದರು. ಭಜನಾ ವಿಭಾಗದ ಕಾರ್ಯಾಧ್ಯಕ್ಷೆ ನವೀನಾ ಜೆ.ಭಂಡಾರಿ ವಂದಿಸಿದರು. ಕಾರ್ಯಕ್ರಮವನ್ನು ಬಾಬಾ ಪ್ರಸಾದ್ ಅರಸ ಕುತ್ಯಾರು ನಿರೂಪಿಸಿದರು.