April 2, 2025
ಧಾರಾವಾಹಿ

ವಿವಶ..

ಧಾರವಾಹಿ 37


ಸಮರ್ಥ ಪುರುಷನೊಬ್ಬನನ್ನು ಆಕಸ್ಮಾತ್ತಾಗಿ ಬೇಜವಾಬ್ದಾರಿ ಮತ್ತು ಅಪ್ರಾಮಾಣಿಕತೆಗಳು ಮೆಟ್ಟಿಕೊಂಡವೆoದರೆ ಅವನನ್ನು ಬಹಳ ಬೇಗನೆ ಇತರ ಅನೈತಿಕ ಭೋಗಾಸಕ್ತಿಗಳೂ ಆವರಿಸಿಕೊಳ್ಳುತ್ತವೆ! ಎಂಬ ಮಾತಿನಂತೆ ತೋಮನ ಬದುಕೂ ಆಗಿಬಿಟ್ಟಿತು. ಮೊದಲೇ ಕುಡಿತದ ದಾಸನಾಗಿದ್ದವನಿಗೆ ಅದಕ್ಕೆ ಇಂಬು ನೀಡುವಂಥ ಮತ್ತೊಂದು ವಾಂಛೆಯೂ ಅಂಟಿಕೊoಡಿತು. ಊರ ಜನರನ್ನು ರೋಮಾಂಚನಗೊಳಿಸುವ ಆ ವಿಚಾರ ಅಕೇಶಿಯಾ ಮರದ ಬೀಜಗಳಂತೆ ಶೀಘ್ರವಾಗಿ ಊರಿಡೀ ಹರಡಿದ್ದರಿಂದ ಅನೇಕರು ಆ ಕುರಿತು ಸ್ವಾರಸ್ಯಕರವಾಗಿ ಗುಸುಗುಸು ಪಿಸುಪಿಸು ಮಾತುಕಥೆಯಲ್ಲಿ ತೊಡಗಿದರು. ಆದರೆ ಪ್ರೇಮ ತನ್ನ ಪೆದ್ದುತನದಿಂದಲೋ, ಗಂಡನ ಮೇಲಿನ ಗಟ್ಟಿ ನಂಬಿಕೆಯಿoದಲೋ ಅಥವಾ ಅದಾಗಲೇ ಸಂಸಾರದ ಮೇಲೆ ಅವಳಿಗೆ ಬಂದಿದ್ದ ಜಿಗುಪ್ಸೆಯಿಂದಲೋ ಅವನ ಮೇಲೆ ಅನುಮಾನವನ್ನೇ ಪಡದಿದ್ದವಳಿಗೆ ಮೊನ್ನೆ ಮೊನ್ನೆಯವರೆಗೆ ಅವನ ಆ ಕಿತಾಪತಿಯೂ ತಿಳಿಯಲೇಇಲ್ಲ! ಹಾಗಂತ ಆ ಸಂಗತಿ ಅಷ್ಟೊಂದು ಸಾಧಾರಣವಾದುದೇನೂ ಆಗಿರಲಿಲ್ಲ. ‘ತಾನು ಸುಮಾರು ವರ್ಷ ಸೌದಿ ಅರೇಬಿಯಾದಲ್ಲಿದ್ದವಳು!’ ಎಂದು ಹೇಳಿಕೊಳ್ಳುತ್ತಿದ್ದ ಮೇರಿ ಎಂಬವಳು ತನಗೆ ಪಿತ್ರಾರ್ಜಿತವಾಗಿ ಬಂದಿದ್ದ ಮೂರು ಎಕರೆ ತೆಂಗಿನ ತೋಟವನ್ನು ನೋಡಿಕೊಂಡು, ಹಿರಿಯರು ಬಾಳಿ ಬದುಕಿದ ಹಾಗೂ ತಾನು ಹುಟ್ಟಿ ಬೆಳೆದ ಹಳೆಯ ಮನೆಯಲ್ಲಿ ನೆಲೆಸುವ ಇಚ್ಛೆಯಿಂದ ಎರಡು ವರ್ಷಗಳ ಹಿಂದೆ ಗಂಗರಬೀಡಿಗೆ ಬಂದಿದ್ದಳು. ಆದರೆ ಇಲ್ಲಿಗೆ ಬಂದ ಮೇಲೆ ತೋಟವನ್ನು ನಿಭಾಯಿಸುವ ಅನುಭವವಾಗಲೀ, ಸಾಮರ್ಥ್ಯವಾಗಲೀ ತನಗಿಲ್ಲವೆಂಬುದನ್ನು ಕೂಡಲೇ ಮನಗಂಡ ಅವಳು ತೀವ್ರ ಚಿಂತೆಗೆ ಬಿದ್ದಳು. ಅವಳ ಸಹೋದರ ಡೆಲ್ಫಿನ್ನನು ತಂದೆ ತಾಯಿ ಗತಿಸುವವರೆಗೆ ಅವರ ಹದ್ದುಬಸ್ತಿನಲ್ಲಿದ್ದವನು ನಂತರ ನಿತ್ಯ ಕುಡುಕನೂ, ಬೇಜವಾಬ್ದಾರಿ ಮನುಷ್ಯನೂ ಆಗಿಬಿಟ್ಟಿದ್ದ. ಇವೆಲ್ಲ ಚಿಂತೆಯಲ್ಲಿದ್ದ ಮೇರಿಗೆ ಒಮ್ಮೆ ಅನಿರೀಕ್ಷಿತವಾಗಿ ತೋಮನ ಪರಿಚಯವಾಯಿತು.
ಕೃಷಿ ಕಾಯಕದ ಬಗ್ಗೆ ತೋಮನಿಗಿದ್ದ ಹುಟ್ಟು ಜ್ಞಾನ ಮತ್ತದಕ್ಕೆ ತಕ್ಕಂಥ ಅವನ ಹುಮ್ಮಸ್ಸು ಹಾಗೂ ಮುಖ್ಯವಾಗಿ ಅವನ ಆ ಹೊಳೆಯುವ ಕಪ್ಪಗಿನ ಕಟ್ಟುಮಸ್ತಾದ ದೇಹಸಿರಿ ಎಲ್ಲವೂ, ನೈಜ ಯೌವನವೀಗಷ್ಟೇ ಅರಳುವಂತಿದ್ದ ನಲವತ್ತರ ಹರೆಯದ, ಬೆಳ್ಳಗಿನ ಬೆಡಗಿ ಮೇರಿಗೆ ತುಂಬಾನೇ ಹಿಡಿಸಿಬಿಟ್ಟಿತು. ಹಾಗಾಗಿ ಕೆಲವೇ ದಿನಗಳಲ್ಲಿ ತೋಮ ಅವಳಿಗೆ ಆಪ್ತನಾಗಿಬಿಟ್ಟ. ತನ್ನ ಬರಡು ಜೀವನಕ್ಕೂ, ಕಾಯಕಲ್ಪವಿಲ್ಲದೆ ಒಣಗುತ್ತಿದ್ದ ತೋಟಕ್ಕೂ ತೋಮನೊಬ್ಬ ಬಲವಾದ ಆಸರೆಯಾಗಬಲ್ಲ ಎಂದೆಣಿಸಿದ ಮೇರಿಯು ತಿಳಿದೋ ತಿಳಿಯದೆಯೋ ಅವನಲ್ಲಿ ಅನುರಕ್ತಳಾಗಿಬಿಟ್ಟಳು. ಅದೇ ಹೊತ್ತಿಗೆ ತೋಮನಿಗೂ ಸಂಸಾರದ ಮೇಲೆ ಜಿಗುಪ್ಸೆ ಹುಟ್ಟಿದ್ದಕ್ಕೂ, ಕಾಯಕವೇ ಇಲ್ಲದೆ ಕೈಲಾಸ ಸುಖ ಕಾಲ ಬುಡಕ್ಕೇ ಬಂದಿದ್ದಕ್ಕೂ ಸರಿ ಹೋಗಿತ್ತು. ಅವನೂ ಮೇರಿಯ ಮೋಹದ ಬಲೆಗೆ ಬಿದ್ದ!


ತೋಮ, ತನ್ನನ್ನು ಸಂಪೂರ್ಣವಾಗಿ ಮೇರಿಗೆ ಅರ್ಪಿಸಿಕೊಂಡ ಬಳಿಕ ಹೆಂಡತಿಗೆ ಹೆದರಿಯೋ ಅಥವಾ ಮಗಳ ನೆನಪಾಗಿಯೋ ಮೊದಮೊದಲು ದಿನಾ ನಡುರಾತ್ರಿಗಾದರೂ ಮನೆಗೆ ಮರುಳುವ ಅಭ್ಯಾಸವಿಟ್ಟುಕೊಂಡಿದ್ದ. ಆದರೆ ಬರಬರುತ್ತ ಆ ಕ್ರಮವು ಎರಡು, ಮೂರು ದಿನಕ್ಕೊಮ್ಮೆ ಸಾಗಿದ್ದು ಕೊನೆಗೆ ವಾರಕ್ಕೊಮ್ಮೆಯೂ ಬಂದರೆ ಬಂದ ಇಲ್ಲದಿದ್ದರಿಲ್ಲ ಎಂಬoತಾಯಿತು. ಗಂಡನ ಈ ನಡವಳಿಕೆಯನ್ನು ಗಮನಿಸುತ್ತಿದ್ದರೂ ಉದಾಸೀನಳಾಗಿದ್ದ ಪ್ರೇಮಾಳಿಗೆ ಯಾಕೋ ಒಮ್ಮೆ ಸ್ತ್ರೀಸಹಜ ಅನುಮಾನವೊಂದು ಹೆಡೆಯೆತ್ತಿತು. ಜೊತೆಗೆ ತನ್ನ ಗಂಡ ಮತ್ತು ಮೇರಿಯ ನಡುವಿನ ಸಲುಗೆಯ ಸಂಗತಿ ಸರೋಜಾಳಿಂದ ಅವಳ ಕಿವಿಗೂ ಬಿದ್ದಾಗ ಸಿಡಿಲೆರಗಿದಂತಾಯಿತು. ಅದಕ್ಕೆ ಸರಿಯಾಗಿ ಗಂಡನೂ ಈಚೀಚೆಗೆ ತನ್ನ ಮೇಲೆ ತೋರುತ್ತಿದ್ದ ನಿರಾಸಕ್ತಿ, ವಿನಾಕಾರಣ ಕೋಪ ಹಾಗು ಅವನು ಈಚೆಗೆ ತನ್ನೊಂದಿಗೆ ದೈಹಿಕವಾಗಿ ಅನ್ಯೋನ್ಯವಾಗಿರದೆ ವರ್ಷವೇ ಕಳೆಯಿತು! ಎಂದುಕೊoಡವಳಿಗೆ ಒಮ್ಮೆಲೇ ತನ್ನ ತಪ್ಪಿನರಿವಾಗಿ ಮೈನಡುಗಿತು. ದುಃಖ ಉಮ್ಮಳಿಸಿ ಬಂದು ತುಂಬಾ ಹೊತ್ತು ಅತ್ತಳು. ಬಳಿಕ, ಈ ಹಾಳು ಗಂಡಸರನ್ನು ಯಾವತ್ತೂ ನಂಬುವoತಿಲ್ಲ. ಇನ್ನಾದರೂ ಇವರ ಮೂಗಿನ ದಾರವನ್ನು ತಾನು ಹಿಡಿದುಕೊಳ್ಳಲೇಬೇಕು ಎಂದು ನಿರ್ಧರಿಸಿದಳು. ಆದರೆ ಅವಳಿಗೆ ತನ್ನ ಗಂಡನ ಕರಾಮತ್ತನ್ನು ಕಣ್ಣಾರೆ ಕಾಣುವ ಭಾಗ್ಯವೇ ದೊರಕಿಬಿಟ್ಟಿತು. ಆವತ್ತು ಸಂಜೆ ಮಗಳೊಂದಿಗೆ ಅಂಬರಬೆಟ್ಟಿನ ಮಾರುಕಟ್ಟೆಗೆ ಮೀನು ತರಲೆಂದು ಹೋಗಿದ್ದವಳ ದುರಾದೃಷ್ಟವು ಅಲ್ಲಿಯೇ ಹೊಂಚು ಹಾಕಿ ಕುಳಿತಿತ್ತು!
ಪ್ರೇಮ ಅಂಬರಬೆಟ್ಟಿನಲ್ಲಿ ಬಸ್ಸಿನಿಂದ ಇಳಿದು ಶ್ವೇತಾಳ ಕೈ ಹಿಡಿದುಕೊಂಡು ರಸ್ತೆ ದಾಟಿ ಮಾರ್ಕೆಟಿನತ್ತ ನಡೆಯುತ್ತಿದ್ದಳು. ಅದೇ ಹೊತ್ತಿಗೆ ಮಾರ್ಕೆಟಿನ ಎದುರಿಗೆ ರಿಕ್ಷಾವೊಂದು ಬಂದು ನಿಂತಿತು. ನವಪ್ರೇಮಿಗಳಂತೆ ರಿಕ್ಷಾದಿಂದ ಇಳಿದ ತೋಮ ಮತ್ತು ಮೇರಿ ಸುತ್ತಲಿನ ಪರಿವೆಯೇ ತಮಗಿಲ್ಲವೆಂಬoತೆ ಸಲ್ಲಾಪವಾಡುತ್ತ ಮಾರ್ಕೆಟ್ ಹೊಕ್ಕರು. ಆದರೆ ಶ್ವೇತಾ ಅದನ್ನು ಕಂಡವಳು, ‘ಅಮ್ಮಾ, ಅಮ್ಮಾ… ಅಲ್ನೋಡಮ್ಮಾ ಪಪ್ಪಾ…!’ ಎಂದು ಅವನತ್ತ ಓಡಲನುವಾದಳು. ಆಗ ಪ್ರೇಮಳೂ ನೋಡಿದವಳು ಮಗಳನ್ನು ತಟ್ಟನೆ ತಡೆದು, ಹತ್ತಿರದ ಅಂಗಡಿಯೊoದರ ಮರೆಗೆ ಕರೆದೊಯ್ದು ನಿಂತು ಗಮನಿಸತೊಡಗಿದಳು. ಇತ್ತ ಮಾರ್ಕೆಟ್ ಹೊಕ್ಕ ಹೊಸ ಜೋಡಿಯು ಮೀನು ಮಾರುವ ಮಹಿಳೆಯರಿಂದ ಯದ್ವಾತದ್ವ ಚೌಕಾಶಿ ಮಾಡುತ್ತ ಸಾಗಿದ್ದು ಒಂದಷ್ಟು ಅಂಜಲ್, ಬೊಂಡಾಸ್ ಮತ್ತು ಬಂಗುಡೆಗಳನ್ನು ಕೊಂಡು ಮರಳಿ ಸರಸದಿಂದ ನಗುತ್ತ ಬಂದವರು ಅದೇ ಆಟೋ ಹತ್ತಿ ಪರ‍್ರನೆ ಹಾರಿ ಹೋದರು. ಅದನ್ನು ಕಂಡ ಪ್ರೇಮಾಳ ಹೃದಯ ಹಿಂಡಿತು. ತುಟಿ ಕಚ್ಚಿ ದುಃಖ ನುಂಗಿಕೊoಡಳು. ಇತ್ತ ಅಳುಮೋರೆ ಮಾಡಿ ನಿಂತಿದ್ದ ಮಗಳನ್ನೆಳೆದುಕೊಂಡು, ಜೀವಚ್ಛವವಾಗಿ ಮಾರ್ಕೆಟ್ ಹೊಕ್ಕಳು. ತೋಚಿದ ಒಂದಿಷ್ಟು ಪುಡಿ ಮೀನುಗಳನ್ನು ಕೊಂಡು ಮನೆಗೆ ಮರಳಿದವಳು ತಲೆಗೆ ಕೈಹೊತ್ತು ಕುಳಿತು ಅಳತೊಡಗಿದಳು. ಅಮ್ಮನ ಅಳುವಿನ ಅರ್ಥವನ್ನು ಗ್ರಹಿಸಿದ ಮಗಳು ಅಮ್ಮನನ್ನು ಸಾಂತ್ವನಿಸಲು ಪ್ರಯತ್ನಿಸಿದಳು. ಆದರೂ ಅವಳ ದುಃಖ ನಿಲ್ಲದಿದ್ದಾಗ ತಾನೂ ಕುಳಿತು ಅತ್ತಳು. ಅದನ್ನು ಕಂಡ ಪ್ರೇಮ ಒತ್ತಾಯಪೂರ್ವಕವಾಗಿ ತನ್ನನ್ನು ಸಮಾಧಾನಿಸಿಕೊಂಡಳು.
ಆದರೆ ಆವತ್ತೊಂದು ವಿಶೇಷ ನಡೆಯಿತು. ಬಹಳ ದಿನಗಳಿಂದ ಮನೆಯತ್ತ ತಲೆ ಹಾಕದಿದ್ದ ತೋಮನು ಅಂದು ಸೂರ್ಯ ಮುಳುಗುವ ಹೊತ್ತಿಗೆ ದೊಡ್ಡ ನಾಲ್ಕು ಬಂಗುಡೆಗಳನ್ನು ಹಿಡಿದುಕೊಂಡು ಏನೂ ಅರಿಯದವನಂತೆ ಮನೆಗೆ ಬಂದ. ಗಂಡನ ತಲೆ ಕಂಡ ಪ್ರೇಮಾಳಿಗೆ ಮೈಯೆಲ್ಲ ಉರಿಯಿತು. ಅವುಡುಗಟ್ಟಿ ಕುಳಿತಳು. ತೋಮ ಒಳಗೆ ಬಂದವನು ಹೆಂಡತಿಯೆದುರಿಗೆ ಮೀನಿನ ಚೀಲವನ್ನಿಟ್ಟ. ಬಳಿಕ ಸರೋಜಾಳ ಮನೆಯಲ್ಲಿದ್ದ ಮಗಳನ್ನು ಕರೆದು ಒಂದು ಕಟ್ಟು ಕಾರದಕಡ್ಡಿಯನ್ನು ಅವಳ ಕೈಗಿತ್ತವನು ಅಷ್ಟೇ ತರಾತುರಿಯಲ್ಲಿ ಹೊರಡಲನುವಾದ. ಪ್ರೇಮಾಳ ಸಹನೆ ತಪ್ಪಿತು. ‘ಓಯ್, ಎಲ್ಲಿಗೆ ಹೊರಡುವುದು…? ನಾನೂ ಕೆಲವು ಸಮಯದಿಂದ ನೋಡುತ್ತಿದ್ದೇನೆ. ರಾತ್ರಿಯೆಲ್ಲ ಎಲ್ಲೆಲ್ಲೋ ಇದ್ದು ಯಾವಾಗಲೋ ಮನೆಗೆ ಬರುತ್ತೀರಲ್ಲ ನಿಮಗೆ ಮನೆ ಮಠ, ಹೆಂಡತಿ ಮಕ್ಕಳು ಅಂತ ಯಾರೂ ಇಲ್ಲವಾ…?’ ಎಂದು ಗುಡುಗಿದಳು. ಆದರೆ ತಾನು ಯಾವಾಗೊಮ್ಮೆ ಮೇರಿಯ ಮನೆಗೆ ಹೋಗಿ ಫಾರೀನ್ ವಿಸ್ಕಿ ಹೀರುತ್ತ ಅವಳು ಬಡಿಸುವ ರುಚಿಕಟ್ಟಾದ ಬೊಂಡಾಸ್ ಸುಕ್ಕ ತಿಂದು ಮನ್ಮಥಲೀಲೆಯಲ್ಲಿ ತೊಡಗುವೆನೋ…? ಎಂಬ ಆತುರದಲ್ಲಿದ್ದ ತೋಮನನ್ನು ಹೆಂಡತಿಯ ರೋಷದ ಮಾತು ರೊಚ್ಚಿಗೆಬ್ಬಿಸಿಬಿಟ್ಟಿತು. ಆದರೆ ಅದರೊಂದಿಗೆ ತಾನೀಗ ತಾಳ್ಮೆಗೆಟ್ಟೆನೆಂದರೆ ತನ್ನ ಕೆಲಸವೂ ಕೆಟ್ಟೀತು ಎಂದು ಕೂಡಾ ಯೋಚಿಸಿದವನು, ‘ನಿನ್ನದೆಂಥದು ಮಾರಾಯ್ತೀ ಹೊಸ ಚಿರಿಪಿರಿ…? ಅಲ್ಲಿ ನಾರಾಯಣ ಶೆಟ್ಟರ ಅಂಗಳದಲ್ಲಿ ತೆಂಗಿನ ಕಾಯಿಗಳ ರಾಶಿ ಬಿದ್ದಿದೆ. ಅವನ್ನೆಲ್ಲ ಇವತ್ತು ರಾತ್ರಿ ಬೆಳಗಾಗುವುದರೊಳಗೆ ಸುಲಿದುಕೊಡಬೇಕೆಂಬ ಮಂಡೆಬಿಸಿಯಲ್ಲಿ ನಾನಿದ್ದರೆ ನಿನ್ನದೊಂದು ವಿಚಿತ್ರ ಪ್ರಶ್ನೆ!’ ಎಂದು ಅಸಹನೆ ನಟಿಸುತ್ತ ಅಂದವನು ಹಿಂದಿರುಗಿ ನೋಡದೆ ಹೊರಟೇ ಹೋದ. ಆದರೆ ನೇರವಾಗಿ ಹೋದರೆ ತನ್ನ ಹೆಂಡತಿಗೆ ಅನುಮಾನ ಬರಬಹುದೆಂದುಕೊoಡು ಮೇರಿಯ ಮನೆಯ ವಿರುದ್ಧ ದಿಕ್ಕಿನಲ್ಲಿರುವ ನಾರಾಯಣ ಶೆಟ್ಟರ ಮನೆಯ ದಾರಿಯನ್ನೇ ಹಿಡಿದು ಅವರ ಹಿತ್ತಲಿನಿಂದಾಗಿ ಬಿರಬಿರನೇ ಮೇರಿಯ ಮನೆಯತ್ತ ಹೆಜ್ಜೆ ಹಾಕಿದ.
ಆದರೆ ಪ್ರೇಮ ತೋಮನ ನಡೆನುಡಿಯಲ್ಲಿದ್ದ ಕಪಟವನ್ನು ತಟ್ಟನೆ ಗ್ರಹಿಸಿದವಳು ನಿರಾಶೆಯಿಂದ ಕುಸಿದಳು. ಮರುಕ್ಷಣ ಗಂಡನ ಮೇಲೆ ಅವಳಿಗೆ ಕೋಪ ಒತ್ತರಿಸಿ ಬಂತು. ಇವತ್ತು ಅದೇನೇ ಆಗಲಿ. ಇವನ ಕಳ್ಳಾಟವನ್ನು ಪತ್ತೆಹಚ್ಚದೆ ಬಿಡುವುದಿಲ್ಲ ಎಂದೂ ನಿರ್ಧರಿಸಿದಳು. ಆದರೆ ಮಗಳಿಗೆ ಅವಳಪ್ಪನ ಲಂಪಟತನ ತಿಳಿಯುವುದು ಬೇಡವೆಂಬ ಎಚ್ಚರವೂ ಮೂಡಿದ್ದರಿಂದ ಅಂದು ರಾತ್ರಿ ಸುಮಾರು ಒಂಬತ್ತರ ಹೊತ್ತಿಗೆ ಮಗಳನ್ನು ಸರೋಜಾಳ ಮನೆಯಲ್ಲಿ ಬಿಟ್ಟು ಅವಳ ಮಗಳು ಪ್ರಮೀಳಾಳನ್ನು ಕರೆದುಕೊಂಡು ಮೇರಿಯ ಮನೆಯತ್ತ ಹೊರಟಳು. ಮೇರಿಯ ಮನೆಯಲ್ಲೊಂದು ರಾಕ್ಷಸನಂತಿದ್ದ ನಾಯಿ ಇದ್ದುದು ಅವಳಿಗೆ ಗೊತ್ತಿತ್ತು. ಆದ್ದರಿಂದ ಕರ್ಮಾರಿನ ಗಟ್ಟಿ ದೊಣ್ಣೆಯೊಂದನ್ನು ಹಿಡಿದುಕೊಂಡೇ ನಡೆದಳು. ಹೋಗುತ್ತ ಪ್ರಮೀಳಾಳೊಡನೆ, ‘ಪಮ್ಮೂ ನಾನಲ್ಲಿ ಒಂದು ಕಡೆ ಮರೆಯಲ್ಲಿ ನಿಂತುಕೊಳ್ಳುತ್ತೇನೆ. ನೀನು ಹೋಗಿ ಮೇರಿಯ ಮನೆಯ ಬಾಗಿಲು ತಟ್ಟಿ ತೋಮ ಮಾಮನನ್ನು ಹೊರಗೆ ಕರೆಯಬೇಕು ಆಯ್ತಾ…?’ ಎಂದಳು. ಆದರೆ ಅಷ್ಟು ಕೇಳಿದ ಪ್ರಮೀಳಾಳಿಗೆ ಜೋರು ಭಯವಾಯಿತು. ಆದರೆ ಏನೆಲ್ಲ ನಡೆಯುತ್ತದೋ ನೋಡಬೇಕು! ಎಂಬ ಕುತೂಹಲವೂ ಹುಟ್ಟಿದ್ದರಿಂದ ಧೈರ್ಯ ತಂದುಕೊoಡವಳು, ‘ಆಯ್ತು ಪ್ರೇಮಕ್ಕಾ…!’ ಎಂದುತ್ತರಿಸಿ ಅರ್ಧಚಂದ್ರನ ಮಬ್ಬು ಬೆಳಕಿನ ಗುಡ್ಡೆಯ ಹಾದಿಯಲ್ಲಿ ಪ್ರೇಮಾಳೊಂದಿಗೆ ಹೆಜ್ಜೆ ಹಾಕಿದಳು.
ಅವರಿಬ್ಬರು ಮೇರಿಯ ತೋಟಕ್ಕೆ ಅಡಿಯಿಡುತ್ತಲೇ ಪ್ರೇಮಾಳ ನಿರೀಕ್ಷೆಯಂತೆ ಸೊಕ್ಕಿದ ಕಾಟು ನಾಯಿಯೊಂದು ಅವರ ಮೇಲೆ ನುಗ್ಗಿ ಬಂತು. ಅದರ ಉಗ್ರಾವತಾರವನ್ನು ಕಂಡ ಪ್ರಮೀಳಾಳಿಗೆ ದಿಕ್ಕು ತೋಚದಾಗಿ, ‘ಅಯ್ಯಮ್ಮಾ..!’ ಎಂದರುಚುತ್ತ ಪ್ರೇಮಾಳ ಹಿಂದೆ ಅವಿತು ತಕಪಕಾ ಕುಣಿಯತೊಡಗಿದಳು. ಮರುಕ್ಷಣ ಪ್ರೇಮಾಳ ಕೈಯಲ್ಲಿದ್ದ ದೊಣ್ಣೆಯು ವೇಗವಾಗಿ ಮೇಲೆದ್ದು ನಾಯಿಯ ದಪ್ಪ ಮುಸುಡಿಗೆ ಒಂದೇಟು ಅಪ್ಪಳಿಸಿಬಿಟ್ಟಿತು. ಅದು, ‘ಕುಂಯ್ಯೋ…! ಕುರ‍್ರೋ..! ಆಕ್ಷ್…ಆಕ್ಷ್…ಆಕ್ಷ್…!’ ಎಂದು ಕರ್ಣಕಠೋರವಾಗಿ ಅರಚುತ್ತ, ಸೀನುತ್ತ ಎತ್ತಲೋ ಓಡಿ ಹೋಯಿತು. ಬಳಿಕ ಪ್ರೇಮ, ಪ್ರಮೀಳಾಳನ್ನು ಸಂತೈಸಿ ಮೇರಿಯ ಮನೆಯ ಬಾಗಿಲು ಬಡಿಯಲು ಸೂಚಿಸಿದಳು. ನಾಯಿಯ ಭಯದಿಂದ ಇನ್ನೂ ಪೂರ್ತಿ ಹೊರಗೆ ಬಾರದಿದ್ದ ಹುಡುಗಿ ಅಳುಕುತ್ತ ಹೋಗಿ ನಾಲ್ಕೆದು ಬಾರಿ ಬಾಗಿಲು ಬಡಿದಳು. ಸುಮಾರು ಹೊತ್ತಿನ ನಂತರ ಮೇರಿಯ ತಲೆ ಬಾಗಿಲಿನ ಮಬ್ಬು ಬಲ್ಬೊಂದು ಛಕ್ಕನೆ ಹೊತ್ತಿಕೊಂಡಿತು. ಅದರ ಬೆನ್ನಿಗೆ ಕದವೂ ನಿಧಾನವಾಗಿ ತೆರೆಯಿತು.
ಮೇರಿ ಮೊಣಕಾಲುದ್ದದ ನಿಲುವಂಗಿ ತೊಟ್ಟು, ಅಸ್ತವ್ಯಸ್ತಗೊಂಡಿದ್ದ ತನ್ನ ಗುಂಗುರು ಕೂದಲನ್ನು ಉದಾಸೀನದಿಂದ ಹಿಂದೆ ಸರಿಸುತ್ತ ಯಾವುದೋ ಮತ್ತಿನಲ್ಲಿದ್ದಂತೆ ಹೊರಗೆ ಬಂದವಳು ಪ್ರಮೀಳಾಳನ್ನು ಕಂಡು ಅವಕ್ಕಾದಳು. ‘ಏನಾ, ಏನು ಬೇಕಿತ್ತು…?’ ಎಂದು ಆತಂಕ ಹತ್ತಿಕ್ಕುತ್ತ ಪ್ರಶ್ನಿಸಿದಳು. ಅಷ್ಟರಲ್ಲಿ ಅವಳ ಹಿಂದೆ ಬರೇ ಚಡ್ಡಿಯಲ್ಲಿದ್ದ ತೋಮನೂ ಕಾಣಿಸಿಕೊಂಡ. ಅವನು ಕೂಡಾ ಪ್ರಮೀಳಾಳನ್ನು ಕಂಡವನು ದಂಗಾಗಿ ಸರಕ್ಕನೆ ಮೇರಿಯ ಹಿಂದೆ ಸರಿದು ನಿಂತ. ಆದರೆ ಮೇರಿಯ ಸೆರಗಿನ ಮರೆಯಲ್ಲಿ ತನ್ನ ಗಂಡನನ್ನು ಕಂಡ ಪ್ರೇಮ ನಿಸ್ತೇಜಳಾದಳು. ಅಂದರೆ ಸರೋಜಕ್ಕನ ಮಾತು ಮತ್ತು ತನ್ನೆಣಿಕೆ ಎರಡೂ ನಿಜವೇ ಎಂದಾಯಿತು. ಅಯ್ಯೋ ದೇವರೇ…! ಅವರು ನನ್ನ ಒಳ್ಳೆಯದಕ್ಕೆಂದೇ ಅಂದು ಈ ವಿಷಯವನ್ನು ಮನಮುಟ್ಟುವಂತೆ ಹೇಳಿದರು. ಆದರೆ ನಾನೊಬ್ಬಳು ಪೆದ್ದಿ ತಾತ್ಸಾರ ಮಾಡಿಬಿಟ್ಟೆ. ಗಂಡ ಅನ್ನುವ ಈ ಪ್ರಾಣಿ ದಾರಿ ತಪ್ಪಿಯಾಗಿದೆ. ಇನ್ನೇನು ಮಾಡುವುದಪ್ಪಾ ದೇವರೇ…? ಎಂದು ಮರುಗಿದವಳಿಗೆ ದುಃಖ ಒತ್ತರಿಸಿ ಬಂತು. ಆದರೆ ಅದನ್ನು ಮೀರಿದ ರೋಷವೊಂದು ಕೇಕೇ ಹಾಕಿತು.
‘ಏನಾ ಬೇ…ರಂಡೆ…! ನಿನ್ನ ತೀಟೆ ತೀರಿಸಿಕೊಳ್ಳಲು ನನ್ನ ಗಂಡನೇ ಬೇಕಿತ್ತನಾ ನಿಂಗೆ…? ಹೀಗೆ ಎಷ್ಟು ಸಂಸಾರಗಳನ್ನು ಮುಕ್ಕಿ ತಿಂದಿದ್ದಿ ಮೂರುಕಾಸಿನವಳೇ…? ಮರ್ಯಾದೆಯಿಂದ ಅವನನ್ನು ಹೊರಗಡೆ ಕಳುಹಿಸುತ್ತೀಯಾ ಇಲ್ಲ ಮೆಟ್ಟಿನಲ್ಲಿ ಹೊಡೆಯಬೇಕಾ…?’ ಎಂದು ತಿದಿಯಂತೆ ಉಸಿರು ದಬ್ಬುತ್ತ ಅಂದ ಪ್ರೇಮ ರಪ್ಪನೆ ಚಪ್ಪಲಿ ತೆಗೆದು ಮೇರಿಯತ್ತ ನುಗ್ಗಿದವಳು ಅವಳನ್ನು ಹಿಡಿದುಕೊಂಡು ರಪರಪನೆ ಬಾರಿಸತೊಡಗಿದಳು. ಅಷ್ಟಕ್ಕೆ ಮೇರಿ ಕಕ್ಕಾಬಿಕ್ಕಿಯಾಗಿದ್ದರೊಂದಿಗೆ ಮಿಂಚಿನ ವೇಗದಲ್ಲಿ ಬೀಳುತ್ತಿದ್ದ ಏಟುಗಳನ್ನು ಸಹಿಸಲಾಗದೆ ಜೋರಾಗಿ ಚೀರಿಕೊಂಡಳು. ನಂತರ ಅವಳಿಗೂ ತಾಳ್ಮೆ ತಪ್ಪಿತು. ತಾನೂ ಪ್ರೇಮಾಳ ಜುಟ್ಟು ಹಿಡಿದುಕೊಂಡಳು. ಆದರೆ ಪ್ರೇಮಾಳ ಗಡಸು ದೇಹದ ಮುಂದೆ ಮೇರಿಯ ಕೋಮಲ ಶರೀರವು ತರಗೆಲೆಯಂತೆ ನಲುಗಿಬಿಟ್ಟಿತು. ‘ಯಾ ಮಾಯೀ…!’ ಎಂದು ಅರಚುವ ತನಕ ತೋಮ ಬಾಗಿಲ ಮರೆಯಲ್ಲೇ ನಿಂತುಕೊoಡು ಕಂಪಿಸುತ್ತಿದ್ದವನು ಬಳಿಕ ವಿಧಿಯಿಲ್ಲದೆ ಅವರ ನಡುವೆ ನುಗ್ಗಿ ಹೆಂಡತಿಯನ್ನು ಕಿತ್ತೆಳೆದು ನೆಲಕ್ಕೆ ಕೆಡವಿ ವೀರಾವೇಶದಿಂದ ತುಳಿಯತೊಡಗಿದ. ಆದರೆ ಪ್ರೇಮ ಅದಾಗಲೇ ರಣಚಂಡಿಯಾಗಿದ್ದಳು. ಅವಳ ರೋಷ ರಪ್ಪನೆ ಗಂಡನ ಮೇಲೂ ತಿರುಗಿತು. ಅವನನ್ನು ತಳ್ಳಿ ಎದ್ದಳು. ಅದಕ್ಕೆ ಸರಿಯಾಗಿ ಕರಿಮಾರು ದೊಣ್ಣೆಯೂ ಅವಳ ಪಕ್ಕದಲ್ಲೇ ಬಿದ್ದಿತ್ತು. ಅದನ್ನೆತ್ತಿಕೊಂಡು ಗಂಡನ ಕಾಲಗಂಟುಗಳಿಗೆ ಬೀಸಿ ಬೀಸಿ ನಾಲ್ಕೇಟು ಕೊಟ್ಟಳು. ಒಂದೆರಡು ಬಲವಾದೇಟು ಬೀಳುತ್ತಲೇ ತೋಮ, ‘ಅಯ್ಯಯ್ಯಮ್ಮಾ…, ಸತ್ತೆನಲ್ಲಪ್ಪಾ! ಈ ರಂಡೆ ಕೊಂದೇ ಬಿಟ್ಟಳು ನನ್ನ್ನ…!’ ಎಂದು ಬೊಬ್ಬಿಡುತ್ತ ನೆಲಕ್ಕುರುಳಿದ.
ಪ್ರೇಮಾಳ ರೌದ್ರವತಾರವು ಮೇರಿಯನ್ನು ಕಂಗೆಡಿಸಿಬಿಟ್ಟಿತು. ಅವಳು ಒಳಗೆ ಓಡಲೆತ್ನಿಸಿದಳು. ಆದರೆ ಪ್ರೇಮ ಅವಳ ಬೆನ್ನುಹತ್ತಿ ಜುಟ್ಟು ಹಿಡಿದವಳು ತನ್ನ ಗಂಡನಿಗೆ ಬಾರಿಸಿದಂತೆಯೇ ಬಾರಿಸಬೇಕೆಂಬಷ್ಟರಲ್ಲಿ, ಭಯದಿಂದ ಮರಗಟ್ಟಿದ್ದ ಪ್ರಮೀಳಾ ತಟ್ಟನೆ ಎಚ್ಚೆತ್ತು ಧಾವಿಸಿ ಬಂದು ಪ್ರೇಮಾಳ ನಡುವನ್ನು ಬಿಗಿಯಾಗಿ ಅಪ್ಪಿಕೊಂಡು, ‘ನಿಮ್ಮ ದಮ್ಮಯ್ಯ ಪ್ರೇಮಕ್ಕಾ. ಬಿಟ್ಟು ಬಿಡಿ ಅವರನ್ನು…! ಸಾಕು, ಸಾಕು ಮನೆಗೆ ಹೋಗುವ…!’ ಎಂದಳುತ್ತ ಅಂಗಲಾಚಿದಳು. ಆಗ ಪ್ರೇಮ ತುಸು ಸ್ಥಿಮಿತಕ್ಕೆ ಬಂದವಳು ಮೇರಿಯನ್ನು ದೂರಕ್ಕೆ ತಳ್ಳಿ ಹುಡುಗಿಯನ್ನು ತಬ್ಬಿಕೊಂಡು, ‘ಇಲ್ಲಮ್ಮಾ, ಹೆದರಬೇಡ. ಆಯ್ತು ಹೋಗುವ!’ ಎಂದು ಸಂತೈಸಿ ಮತ್ತೆ ಮೇರಿಯತ್ತ ತಿರುಗಿ, ‘ನೋಡನಾ ನಾಯಿರಂಡೆ…! ಇವತ್ತೇ ಕೊನೆ! ಇನ್ನೊಮ್ಮೆ ನನ್ನ ಗಂಡನೆಲ್ಲಾದರೂ ನಿನ್ನ ಮನೆಯ ಆಸುಪಾಸಿನಲ್ಲಿ ಕಾಣಿಸಿಕೊಂಡನಾ ಆವತ್ತೇ ನಿಮ್ಮಿಬ್ಬರನ್ನೂ ಬಡಿದು ಸಾಯಿಸುವುದು ಖಂಡಿತಾ!’ ಎಂದು ಅಬ್ಬರಿಸಿದಳು. ಬಳಿಕ ನೋವಿನಿಂದ ಹೊರಳಾಡುತ್ತಿದ್ದ ಗಂಡನನ್ನು ಕಿಡಿ ಕಾರುವ ಕಣ್ಣುಗಳಿಂದ ದಿಟ್ಟಿಸಿದವಳು ಪ್ರಮೀಳಾಳ ಕೈ ಹಿಡಿದುಕೊಂಡು ಸರಸರನೆ ಮನೆಯತ್ತ ದಾಪುಗಾಲಿಕ್ಕಿದಳು.
ಪ್ರೇಮಾಳ ಕೆದರಿದ ಕೂದಲು ಮತ್ತು ಹರಿದ ಬಟ್ಟೆಬರೆಗಳನ್ನು ಕಂಡ ಸರೋಜ, ಲಕ್ಷ್ಮಣರು ಗಾಬರಿಯಾದರು. ಪ್ರೇಮ ಸೀದಾ ಸರೋಜಾಳ ಮನೆಯನ್ನು ಹೊಕ್ಕವಳು ತನ್ನ ಮಗಳನ್ನು ತಬ್ಬಿಕೊಂಡು ಗೋಳೋ ಎಂದು ಅತ್ತಳು. ಅಮ್ಮನ ಅಳುವನ್ನು ಕಂಡು ಶ್ವೇತಾಳೂ ಅಳತೊಡಗಿದಳು. ಅದನ್ನು ಕಂಡ ಸರೋಜಾಳ ಕಣ್ಣಾಲಿಗಳೂ ತೇವಗೊಂಡವು. ಅವಳು ಪ್ರೇಮಾಳ ಪಕ್ಕದಲ್ಲಿ ಕುಳಿತು ಸಮಾಧಾನಿಸಲೆತ್ನಿಸಿದಳು. ಇತ್ತ ಮಗಳಿಂದ ವಿಷಯ ತಿಳಿದ ಲಕ್ಷ್ಮಣನೂ ಸಪ್ಪಗಾದ. ತೋಮನ ಕಥೆ ಅವನಿಗೂ ತಿಳಿದಿತ್ತು. ಹಾಗಾಗಿ, ‘ಈ ವಿಷಯ ನಮಗೆಲ್ಲ ಮೊದಲೇ ಗೊತ್ತಿತ್ತು ಪ್ರೇಮ. ಆವತ್ತು ಸರೋಜಾಳೊಡನೆ ನಿನಗೆ ತಿಳಿಸಲು ನಾನೇ ಹೇಳಿದ್ದು. ಆದರೆ ನೀನದನ್ನು ತಲೆಗೆ ಹಾಕಿಕೊಳ್ಳಲಿಲ್ಲ. ಅವನನ್ನು ನೀನು ಅಷ್ಟೊಂದು ನಂಬಬಾರದಿತ್ತು. ಆ ಮೇರಿ ಇದ್ದಾಳಲ್ಲ ಅವಳು ಸೌದಿಯಲ್ಲಿ ಇದ್ದವಳೂ ಅಲ್ಲ, ದುಬೈಯಲ್ಲೂ ಅಲ್ಲ. ಅವಳು ಬೊಂಬಾಯಿಯ ‘ಜಮುನಾ ಮೆನ್ಷನ್’ ಎಂಬ ಶ್ರೀಮಂತ ಗಲ್ಲಿಯಲ್ಲಿ ದಂಧೆ ಮಾಡುತ್ತಿದ್ದವಳಂತೆ! ಅಂಬರಬೆಟ್ಟಿನ ರಾಜೀವ ಶೆಟ್ಟರ ಮಗ ಬಲರಾಮ ಅಲ್ಲಿಯೇ ಹೊಟೇಲು ಮಾಡಿಕೊಂಡಿರುವವನು. ಅವನು ಆವತ್ತೊಮ್ಮೆ ಸುಬ್ರಾಯ ಭಟ್ಟರ ಹೊಟೇಲಿನಲ್ಲಿ ಕುಳಿತುಕೊಂಡು ಇವಳ ಕತೆಯನ್ನೆಲ್ಲ ಅವರ ಹತ್ತಿರ ರಂಗಾಗಿ ಹೇಳುತ್ತಿದ್ದುದನ್ನು ನಾನೂ ಕೇಳಿಸಿಕೊಂಡಿದ್ದೆ!’ ಎಂದು ಲಕ್ಷ್ಮಣ ಸಾಕ್ಷಿ ಸಮೇತ ಸತ್ಯವನ್ನು ಬಿಚ್ಚಿಟ್ಟ. ಆದರೆ ಅದನ್ನು ಕೇಳಿದ ಪ್ರೇಮಾಳಲ್ಲಿ ಯಾವ ಭಾವಾವೇಶವೂ ಹುಟ್ಟಲಿಲ್ಲ. ಬದಲಿಗೆ, ಇಂದಿಗೆ ತನ್ನ ಬದುಕು ಸರ್ವನಾಶವಾಯಿತು ಎಂದು ಅವಳು ಬಲವಾಗಿ ನಿರ್ಧರಿಸಿಬಿಟ್ಟಳು. ಹಾಗಾಗಿ ತಾನು ಬರೇ ಕಾಮದ ಹಸಿವಿಗೆ ಬಲಿಬಿದ್ದು ಅದನ್ನೇ ಪ್ರೀತಿಯೆಂದು ಭ್ರಮಿಸಿ ಈ ವಂಚಕನನ್ನು ನಂಬಿ ಹೆತ್ತವರನ್ನೂ, ಅಪಾರ ಬಂಧು ಬಳಗವನ್ನೂ ಧಿಕ್ಕರಿಸಿ ಬಂದು ದೊಡ್ಡ ತಪ್ಪು ಮಾಡಿಬಿಟ್ಟೆ! ಎಂದು ಪಶ್ಚಾತ್ತಾಪ ಪಡುತ್ತ ನಿರಂತರ ಹತಾಶೆಯಿಂದ ನರಳತೊಡಗಿದಳು.
ಮೇರಿಯ ಸಹೋದರ ಡೆಲ್ಫಿನ್ ಆವತ್ತು ನಡುರಾತ್ರಿಯ ಹೊತ್ತಿಗೆ ಮತ್ತನಾಗಿ ತೂರಾಡುತ್ತ ಮನೆಗೆ ಬಂದವನು ಜಗುಲಿಯಲ್ಲಯೇ ಬಿದ್ದುಕೊಂಡ. ಅಷ್ಟೊತ್ತಿಗೆ ಮೇರಿ ಹೊರಗೆ ಬಂದವಳು ಅವನೆದುರು ಕುಳಿತುಕೊಂಡು ತನಗೂ, ತೋಮನಿಗೂ ಪ್ರೇಮಾಳಿಂದ ನಡೆದ ‘ದೊಣ್ಣೆ ಸೇವೆ’ಯನ್ನು ದುಃಖದಿಂದ ವಿವರಿಸಿ ಜೋರಾಗಿ ಅತ್ತಳು. ಅಕ್ಕನ ದುಃಖವನ್ನೂ, ತೋಮನ ನರಳಾಟವನ್ನೂ ಕಂಡ ಡೆಲ್ಫಿನ್ ಪ್ರೇಮಾಳ ಮೇಲೆ ಕಿಡಿಕಿಡಿಯಾದ. ‘ಥೂ! ನಮ್ಮ ಮೇಲೆಯೇ ಕೈ ಮಾಡುವಷ್ಟು ಕೊಬ್ಬು ಬಂದುಬಿಟ್ಟಿತಾ ಆ ರಂಡೆಗೆ! ಅವಳನ್ನೀಗಲೇ ಕೊಚ್ಚಿ ಹಾಕಿ ಬರುತ್ತೇನೆ!’ ಎಂದು ಕೂಗಾಡುತ್ತ, ತೇಲಾಡುತ್ತ ಒಳಗೆ ಹೋದವನು ಬಡ್ಡು ಕತ್ತಿಯೊಂದನ್ನು ತಂದು ಬಟ್ಟೆ ಒಗೆಯುವ ಕಲ್ಲಿನಲ್ಲದಕ್ಕೆ ರೋಷದಿಂದ ಸಾಣೆ ಹಾಕತೊಡಗಿದ. ಮೇರಿಗೆ ಗಾಬರಿಯಾಯಿತು. ‘ಹೇ, ಡೆಲ್ಫಿ… ಈಗ ಹೋಗಬೇಡ ಮಾರಾಯಾ. ಆ ರಾಕ್ಷಸಿ ನಿನ್ನನ್ನೂ ಬಡಿದು ಸಾಯಿಸಿಯಾಳು! ಅವಳನ್ನು ನಾಳೆ ನೋಡಿಕೊಳ್ಳುವ. ಈಗ ನಮ್ಮ ಮೈಕೈ ನೋವಿಗೆ ಶಾಖ ಕೊಡಲು ಸ್ವಲ್ಪ ಬಿಸಿನೀರು ಕಾಯಿಸಿಕೊಂಡು ಬಾ…!’ ಎಂದು ನರಳುತ್ತ ಅಂದಳು. ತಾನೆಷ್ಟೇ ಕುಡಿದರೂ ಅಕ್ಕನಿಗೆಂದೂ ಎದುರಾಡದ ಸಹೋದರ ‘ಥತ್!’ ಎಂದು ಕತ್ತಿಯನ್ನು ಮೂಲೆಗೆಸೆದು ಪ್ರೇಮಾಳನ್ನು ಮತ್ತೊಂದಷ್ಟು ಬೈಯ್ಯುತ್ತ ಒಳಗೆ ನಡೆದ.
(ಮುಂದುವರೆಯುವುದು)

Related posts

ವಿವಶ..

Mumbai News Desk

ವಿವಶ…

Mumbai News Desk

ವಿವಶ..

Mumbai News Desk

ವಿವಶ..

Mumbai News Desk

ವಿವಶ…

Mumbai News Desk

ವಿವಶ ..

Mumbai News Desk