
ಭಾವೈಕ್ಯದ ಮನಸ್ಸುಗಳ ಬೆಸುಗೆಯಿಂದ ಸಂಘಟನೆಗೆ ಬಲ: ಕರುಣಾಕರ ಜಿ ಅಮೀನ್
ಚಿತ್ರ, ವರದಿ : ರಮೇಶ್ ಉದ್ಯಾವರ
ವಸಯಿ. ಆ. 14: ಸ್ನೇಹ ಸೌಹಾರ್ದತೆಯ ಬದುಕು ಕುಟುಂಬ ಜೀವನಕ್ಕೆ ಮೂಲ ಮಂತ್ರವಾಗಿದ್ದು, ಆ ಚಿಂತನೆಯ ಮೂಲಕ ಸಮಾಜವನ್ನು ಒಗ್ಗಟ್ಟಿಸಿ ಅದರ ಏಳಿಗೆಗಾಗಿ ಶ್ರಮಿಸುವ ಮನೋಭಾವ ಸದಸ್ಯ ಭಾಂದವರಲ್ಲಿ ಬೆಳೆಯಬೇಕು. ಭಾವೈಕ್ಯದ ಮನಸುಗಳು ಒಂದಾದಾಗ ಸಂಘಟನೆ ಶಕ್ತಿಗೆ ಪ್ರೇರಣೆ ದೊರೆಯುವುದು. ಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತವನ್ನು ಪಾಲಿಸುವ ಮೂಲಕ ಸಮಾಜದ ಉನ್ನತಿಗೆ ಶ್ರಮಿಸೋಣ ಸಮಾಜ ಬಾಂಧವರ ಹಿತ ದೃಷ್ಟಿಯಿಂದ ಸದಾ ಕ್ರಿಯಾಶೀಲರಾಗಿ ಜನಪರ ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದು ಬಿಲ್ಲವರ ಎಸೋಷಿಯೇಷನ್ ಮುಂಬೈ ಇದರ ವಸಯಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಕರುಣಾಕರ ಜಿ ಅಮೀನ್ ಕರೆ ನೀಡಿದರು.

ವಸಯಿ ಪಶ್ಚಿಮದ ಧನರಾಜ್ ಪ್ಯಾಲೇಸ್ ಸ್ಥಳೀಯ ಕಚೇರಿಯ ಆಶ್ರಯದಲ್ಲಿ ಆಗಸ್ಟ್ 11ರಂದು ಜರುಗಿದ ಮಹಿಳಾ ಸದಸ್ಯರ ತುಳುನಾಡ ಹಿನ್ನಲೆಯ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು ತುಳುನಾಡಿನ ಹಿರಿಯರು ಜೀವಿಸಿದ ಕಾಯಕ ಬದುಕು ಆಚಾರ ವಿಚಾರ ಸಂಪ್ರದಾಯ ಸೊಪ್ಪು ತರಕಾರಿಗಳ ಆಯುರ್ವೇದ ಸತ್ವ ಹಾಗೂ ಆರೋಗ್ಯ ಭಾಗ್ಯದ ಬಗ್ಗೆ ಬೆಳಕು ಚೆಲ್ಲಿದರು
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕಾರ್ಯಾಧ್ಯಕ್ಷ, ಉದ್ಯಮಿ ಕೆ ಬಿ ಪೂಜಾರಿ ಆಧುನಿಕ ಮಕ್ಕಳಿಗೆ ಇತಿಹಾಸದ ಜ್ಞಾನವಿದ್ದರೂ ಪಾಲಕರ ಬದುಕನ್ನು ಅರ್ಥೈಸುವಲ್ಲಿ ವಿಫಲರಾಗಿದ್ದಾರೆ ಮಕ್ಕಳಿಗೆ ನಾವು ಜೀವನ ಮೌಲ್ಯವನ್ನು ಕಳಿಸುವ ಅವಶ್ಯಕತೆ ಇದ್ದು ಹಿರಿಯರ ಬದುಕಿನಲ್ಲಿ ಅನ್ನವೇ ಸಾಕ್ಷಾತ್ ಬ್ರಹ್ಮವಾಗಿತ್ತು ಎಂಬ ಮಹತ್ವದ ಅರಿವನ್ನು ತಿಳಿಸುವ ಅವಶ್ಯಕತೆ ಇದೆ ಮಕ್ಕಳಿಗೂ ಬದುಕಿನಲ್ಲಿ ಸುಖ ಕಷ್ಟದ ತಿಳುವಳಿಕೆ ಅಗತ್ಯವಿದ್ದು ಇಂತಹ ಸಾಮಾಜಿಕ ನೈತಿಕತೆಯ ಕಾರ್ಯಕ್ರಮಗಳು ಯುವ ಜನಾಂಗ ಮತ್ತು ಮಕ್ಕಳಲ್ಲಿ ಪ್ರಭಾವ ಬೀರಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಥಳೀಯ ಕಚೇರಿಯ ಕಾರ್ಯದರ್ಶಿ, ಲೋಹಿತಾಕ್ಷ ಅಂಚನ್ ತುಳು ಸಾಂಪ್ರದಾಯಿಕ ಕಾರ್ಯಕ್ರಮದ ಬಗ್ಗೆ ಹಿನ್ನಲೆಯನ್ನು ತಿಳಿಸುವ ಮೂಲಕ ಹಿರಿಯರು ಕಟ್ಟಿಕೊಂಡ ಬದುಕಿನ ಚಿತ್ರಣವನ್ನು ಯುವಜನಾಂಗ ಮತ್ತು ಮಕ್ಕಳಿಗೆ ತಿಳಿಸುವ ಕೈಂಕರ್ಯ ನಮ್ಮಿಂದಾಗಬೇಕಾಗಿದೆ ಎಂದು ಹೇಳಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಸರ್ವ ಮಹಿಳಾ ಸದಸ್ಯರನ್ನು ಕಾರ್ಯಕಾರಿ ಸಮಿತಿಯ ಸಹಕಾರವನ್ನು ಅಭಿನಂದಿಸಿ ಕೆಲವೊಂದು ಜನಪ್ರಿಯ ಕನ್ನಡ ಹಾಡನ್ನು ಹಾಡುವ ಮೂಲಕ ಸದಸ್ಯರನ್ನು ರಂಜಿಸಿದರು.
ಮಹಿಳಾ ಸದಸ್ಯರಲ್ಲಿ ರೇಖಾ ಸುವರ್ಣ ಹಳ್ಳಿಯಲ್ಲಿನ ಪ್ರಕೃತಿಯ ದೌರ್ಜನ್ಯ ಫಲವತ್ತಾದ ಕೃಷಿ ಭೂಮಿಗಳ ನಾಶ ಮತ್ತು ಅದರಿಂದ ಭವಿಷ್ಯದಲ್ಲಿ ಆಗುವ ಅನಾಹುತದ ಬಗ್ಗೆ ಮನದಟ್ಟು ಮಾಡಿದರು. ನಳಿನಿ ಪೂಜಾರಿ ವಿವಿಧ ತಿಂಡಿ ತಿನಸಗಳ ಆರೋಗ್ಯ ಸತ್ವದ ಬಗ್ಗೆ ವಿವರಿಸಿದರು. ಮಹಿಳಾ ಸದಸ್ಯರು ವಿವಿಧ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಗೌರವಾಧ್ಯಕ್ಷ ಆರ್ ಜಿ ಕೂಳೂರು ಉಪಕಾರ್ಯಾಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್ ರವೀಂದ್ರ ಪೂಜಾರಿ ಕೋಶಾಧಿಕಾರಿ ನಾಗೇಶ್ ಎ ಪೂಜಾರಿ ಅತಿಥಿಯಾಗಿ ರಾಜು ಶೆಟ್ಟಿ ಉಪಸ್ಥಿತರಿದ್ದರು ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀ ನಾರಾಯಣ ಗುರುಗಳ ಪ್ರತಿಬಿಂಬಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು ಬಳಿಕ ಮಹಿಳಾ ವಿಭಾಗದ ಸದಸ್ಯರು ತಯಾರಿಸಿ ತಂದ ಆಟಿ ತಿಂಗಳ ವಿವಿಧ ತಿನಿಸುಗಳೊಂದಿಗೆ ಪ್ರೀತಿ ಭೋಜನ ಜರಗಿತು.
ಚಿತ್ರ, ವರದಿ: ರಮೇಶ್ ಉದ್ಯಾವರ