
ಮುಂಬಯಿಯಲ್ಲಿ ನೆಲೆಸಿರುವ ಕಾಪು ಗ್ರಾಮದ ಮೊಗವೀರ ಮಹಿಳೆಯರನ್ನು ಸಂಘಟಿಸಿ ಅವರ ಹಾಗೂ ಅವರ ಹುಟ್ಟೂರಿನ ಸರ್ವತೋಮುಖ ಪ್ರಗತಿಗಾಗಿ ದುಡಿಯುವ ಸದುದ್ದೇಶದಿಂದ ಕೇವಲ ಮೂರು ತಿಂಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದಿರುವ ಕಾಪು ಮೊಗವೀರ ಮಹಿಳಾ ಮಂಡಳ, ಮುಂಬಯಿ ಇದರ ವತಿಯಿಂದ “ ಆಟಿದ ಕೂಟ” ಎಂಬ ಕಾರ್ಯಕ್ರಮವು ಆಗಷ್ಟ್ 15 ರಂದು ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ಜರಗಿತು.
ಸಂಜೆ ಗಂಟೆ 3-00 ರಿಂದ ಆರಂಭಗೊಂಡ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಮೊಗವೀರ ಮಹಾ ಸಭಾ ಮುಂಬಯಿ ಇದರ ಅಧ್ಯಕ್ಷರಾದ ಸತೀಶ್ ಕುಮಾರ್ ಎನ್ ಕರ್ಕೇರರು ವಹಿಸಿದ್ದು, ಲೇಖಕ ಹಾಗೂ ಮುಂಬಯಿ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್. ಕರ್ಕೇರರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಮಹಿಳಾ ಮಂಡಳಿಯ ಸದಸ್ಯೆಯರಾದ ಭಾಮಿನಿ ಮೆಂಡನ್, ಸರಿತಾ ಕೋಟ್ಯಾನ್, ಸುಹಾಸಿನಿ ಸುವರ್ಣ, ಅಮಿತಾ ಬಂಗೇರ ಮತ್ತು ಶೋಭಿತಾ ಕೋಟ್ಯಾನ್ ಇವರಿಂದ ಪ್ರಾರ್ಥನೆ ಮತ್ತು ಸ್ವಾತಂತ್ರೋತ್ಸವದ ನಿಮಿತ್ತ ಚಂದ್ರಿಕಾ ಸಾಲ್ಯಾನ್, ಜಾನಕಿ ಮೆಂಡನ್, ವಿನೋದಾ ಕೋಟ್ಯಾನ್, ರೋಹಿಣಿ ಕರುಣಾಕರ್, ತಾರ ಮೆಂಡನ್, ಹೇಮಾ ಕೋಟ್ಯಾನ್ ಮತ್ತು ಧನಲಕ್ಷ್ಮೀ ಸಾಲ್ಯಾನ್ ಇವರಿಂದ ದೇಶ ಭಕ್ತಿ ಗೀತೆಯ ಬಳಿಕ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು,
ಮೊದಲಾಗಿ ಮಹಿಳಾ ಮಂಡಳದ ಅಧ್ಯಕ್ಷೆ ತುಳಸಿ ಸದಾನಂದರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕಾಪು ಮೊಗವೀರ ಮಹಾ ಸಭಾ ಮುಂಬಯಿ ಇದರ ಸಂಪೂರ್ಣ ಸಹಕಾರದೊಂದಿಗೆ ಸ್ಥಾಪನೆಯಾದ ಮಹಿಳಾ ಮಂಡಳದ ವತಿಯಿಂದ ಏರ್ಪಡಿಸಲಾಗಿರುವ ಆಟಿದ ಕೂಟ ಕಾರ್ಯಕ್ರಮಕ್ಕೆ ಸದಸ್ಯೆಯರೆಲ್ಲರೂ ತಮ್ಮ ತುಂಬು ಹೃದಯದ ಸಹಕಾರವನ್ನು ನೀಡಿರುವ ಬಗ್ಗೆ ತಮ್ಮ ಸಂತೋಷ ವ್ಯಕ್ತಪಡಿಸಿದರು. ಇದು ಈ ಸಂಸ್ಣೆಯ ಭವಿಷ್ಯದ ಶುಭ ಸಂಕೇತ ಎಂದರು.
ಚಂದ್ರಿಕಾ ಸಾಲ್ಯಾನ್ ಆಟಿ ತಿಂಗಳ ಮಹತ್ವದ ಬಗ್ಗೆ ಸವಿಸ್ತಾರವಾಗಿ ತಿಳಿಸುತ್ತಾ ಕೃಷಿಯನ್ನೇ ಅವಲಂಬಿಸಿರುವ ತುಳುವರ ಬದುಕಿನಲ್ಲಿ ಆಟಿ ತುಂಬಾ ಕಷ್ಟಕರವಾದ ತಿಂಗಳಾಗಿದ್ದು ಈ ತಿಂಗಳಲ್ಲಿ ,ಜನರು ಊಟಕ್ಕೂ ತೊಂದರೆ ಪಡಬೇಕಾದ ಪರಿಸ್ಥಿತಿ ಇತ್ತು ಎಂದರು. ಮದುವೆಯಾದ ಹೆಣ್ಣು ಆಟಿ ತಿಂಗಳಲ್ಲಿ ತನ್ನ ತವರು ಮನೆಗೆ ಮರಳಿ ಆರಾಮ ಪಡುತ್ತಿದ್ದಳು ಎಂದರು. ಆಟಿ ತಿಂಗಳ ಅಮವಾಸ್ಯೆಯಂದು ಹಾಲೆ ಮರದ ತೊಗಟೆಯಿಂದ ತಯಾರಿಸಿದ ಕಷಾಯವನ್ನು ಕುಡಿದರೆ ವರ್ಷವಿಡೀ ಯಾವುದೇ ಕಾಯಿಲೆಯ ಬಾಧೆ ಇರುವುದಿಲ್ಲ ಎಂಬ ನಂಬಿಕೆ ಇದೆ ಎಂದರು.
ಈ ಸಂದರ್ಭದಲ್ಲಿ ಕಾಪು ಮಹಿಳಾ ಮಂಡಳಿಯ ಸದಸ್ಯೆಯರ ಮಕ್ಕಳ ಪೈಕಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಗುಣಾಂಕಗಳನ್ನು ಪಡೆದ [92.20%) ಕುಮಾರಿ ಭವ್ಯಾ ಜಯಂತ್ ಸಾಲ್ಯಾನ್ ಮತ್ತು ಎಚ್ ಎಸ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ [92.33%)ಕುಮಾರಿ ವಿಧಿ ಅಮಿತ್ ಕೋಟ್ಯಾನ್ ಇವರನ್ನು ತಲಾ ರೂ.11,000/- ನಗದು ಪುರಸ್ಕಾರ ನೀಡಿ ಗೌರವಿಸಲಾಯ್ತು. ಪ್ರತೀ ವರ್ಷವೂ ತನ್ನ ತಾಯಿ ಶ್ರಿಮತಿ ಸೀತ ಎ. ಕರ್ಕೇರ ಸ್ಮರಣಾರ್ಥ ಈ ಎರಡು ನಗದು ಬಹುಮಾನಗಳನ್ನು ರತ್ನಾಕರ ಎ, ಕರ್ಕೇರರು ಪ್ರಾಯೋಜಿಸುತ್ತಿರುವ ಸಲುವಾಗಿ ಅವರ ಅನುಪಸ್ಥಿತಿಯಲ್ಲಿ ರತ್ನಾಕರ ಎ. ಕರ್ಕೇರರ ಸಹೋದರಿ ವಿಶಾಲಾಕ್ಷಿ ಕುಮಾರ್ರನ್ನು ಸನ್ಮಾನಿಸಲಾಯ್ತು. ಅಲ್ಲದೆ ಬಳಿಕ ಲೇಖಕ, ಕವಿ ಸೋಮನಾಥ ಎಸ್. ಕಕೇರರನ್ನು ಕೂಡಾ ಶಾಲು ಹೊದಿಸಿ ಫಲಪುಷ್ಪಗಳನ್ನು ನೀಡಿ ಗೌರವಿಸಲಾಯ್ತು.
ಅಧ್ಯಕ್ಷತೆ ವಹಿಸಿದ ಸತೀಶ್ ಕುಮಾರ್ ಎನ್.ಕರ್ಕೇರರು ಶೈಕ್ಷಣಿಕ ಪರೀಕ್ಷೆಯಲ್ಲಿ ಅತ್ಯಧಿಕ ಗುಣಾಂಕಗಳನ್ನ ಪಡೆದು ತೇರ್ಗಡೆಯಾಗಿ ತಮ್ಮ ಹೆತ್ತವರು ಹಾಗೂ ಊರಿಗೆ ಗೌರವ ತಂದಿರುವ ಇಬ್ಬರೂ ವಿದ್ಯಾರ್ಥಿನಿಯರನ್ನು ಅಭಿನಂದಿಸಿ ಅವರಿಗೆ ಉಜ್ವಲ ಭವಿಷ್ಯವನ್ನು ಹಾರೆ,ಸಿದರು. . ಅವರು ಮುಂದುವರಿಯುತ್ತಾ ಆಟಿದ ಕೂಟವನ್ನು ಅಚ್ಚುಕಟ್ಟಾಗಿ ಏರ್ಪಡಿಸಿದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ತಕ್ತಿಪಡಿಸಿ ಮಹಿಳಾ ಮಂಡಳಿಯ ಸದಸ್ಯೆಯರು ಮಾಡುವ ಎಲ್ಲಾ ಉತ್ತಮ ಕೆಲಸಗಳಿಗೆ ಮಹಾ ಸಭಾದ ಸಂಪೂರ್ಣ ಬೆಂಬಲ ಇದೆ ಎಂದರು.
ಮುಖ್ಯ ಅತಿಥಿ ಸೋಮನಾಥ ಎಸ್. ಕಕೇರರು ಮಾತನಾಡುತ್ತಾ ನಾವು ಹೊಟ್ಟೆಯ ಪಾಡಿಗಾಗಿ ನಮ್ಮ ಹುಟ್ಟೂರನ್ನು ಬಿಟ್ಟು ದೂರದ ಮುಂಬಯಿಗೆ ಬಂದಿದ್ದರೂ ನಮ್ಮ ಜೊತೆಯಲ್ಲಿ ತುಳುನಾಡಿನ ಆಚಾರ ವಿಚಾರಗಳನ್ನೂ ತಂದು ಅವನ್ನು ಇಲ್ಲಿ ಪ್ರೋತ್ಸಾಹಿಸಿ ಇಂದಿನ ಜನಾಂಗಕ್ಕೆ ಪರಿಚಯಿಸುತ್ತಿರುವುದಕ್ಕೆ ತಮ್ಮ ಸಂತೋಷ ವ್ಯಕ್ತಪಡಿಸಿದರು. ನೀಲಾಧರ ಸಾಲ್ಯಾನ್, ರೋಹಿಣಿ ಕರುಣಾಕರ್, ಹೇಮಾ ಕೋಟ್ಯಾನ್, ತಾರಾ ಮೆಂಡನ್, ಪ್ರತಿಮಾ ಭಾಸ್ಕರ್ ಮತ್ತು ಭಾಮಿನಿ ಮೆಂಡನ್ ವೇದಿಕೆಯಲ್ಲಿದ್ದರು. ರೂಪೇಶ್ ಸುವರ್ಣ, ಉಮೇಶ್ ಕರ್ಕೇರ, ಮೋಹನ್ ಮೆಂಡನ್, ಭಾಸ್ಕರ ತಿಂಗಳಾಯ, ಡಿ.ಎಲ್.ಅಮೀನ್, ನೇತಾಜಿ ಕರ್ಕೇರ, ಕೃಷ್ಣ ಮೆಂಡನ್, ರಮೇಶ್ ಕರ್ಕೇರ, ವಸಂತ ಕುಂದರ್, ಪ್ರವೀಣ್ ಕೋಟ್ಯಾನ್ ಮತ್ತು ದುಶ್ಯಂತ ಸುವರ್ಣರು ವಿಶೇಷ ಆಮಂತ್ರಿತರಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೊನೆಯಲ್ಲಿ ತುಳಸಿ ಸದಾನಂದ ವಂದನಾರ್ಪಣೆಗೈದರು. ನೆರೆದವರೆಲ್ಲರಿಗೂ ಆಟಿ ತಿಂಗಳ ವಿಶೇಷ ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು.
ವರದಿ : ಸೋಮನಾಥ ಎಸ್.ಕರ್ಕೇರ, 9819321196