
ಧಾರವಾಹಿ 41
ಹೀಗಿದ್ದ ಲಕ್ಷ್ಮಣ ಕೊನೆಗೊಮ್ಮೆ ತೋಟದ ಕೆಲಸಕ್ಕೆ ಹೋಗುವುದನ್ನೂ ನಿಲ್ಲಿಸಿಬಿಟ್ಟ. ಮರಳಿ ಮನೆಯಲ್ಲಿ ಕುಳಿತು ಬೀಡಿಕಟ್ಟತೊಡಗಿದ. ಆದರೆ ಅದರಿಂದ ಬರುವ ಆದಾಯವು ಅವನಿಗೆ ಮೂಗಿನ ಮಟ್ಟ ಕುಡಿಯಲು ಸಾಕಾಗುತ್ತಿರಲಿಲ್ಲ. ಹಾಗಾಗಿ ಹೆಂಡತಿಗೆ ತಿಳಿಯದಂತೆ ಆಂಥೋನಿಯೊಡನೆ ಮಾತಾಡಿ ತಿಂಗಳಿಗೊಮ್ಮೆ ತೀರಿಸುವ ಸಾಲದ ಖಾತೆಯನ್ನು ತೆರೆದ. ಒಂದೆರಡು ತಿಂಗಳು ಅದೂ ಸರಿಯಾಗಿಯೇ ನಡೆಯಿತು. ಆದರೆ ಆರಂಭದಲ್ಲಿ ಲಕ್ಷ್ಮಣನನ್ನು ಓಲೈಸಲೆಂದೇ ಆಂಥೋನಿಯು ಅವನಿಗೆ ಸುರಿಸುರಿದು ಕೊಡುತ್ತಿದ್ದನಾದರೂ ಬರಬರುತ್ತ ಇವನ ಕುಡಿತದ ರೀತಿಯನ್ನೂ, ಮುಂದೆ ಅದು ಕಾಣಬಹುದಾದ ಘೋರ ದುರಂತವನ್ನೂ ಯೋಚಿಸಿದನಿಗೆ, ಇವನು ಹೀಗೆಯೇ ಕುಡಿದನೆಂದರೆ ಕರುಳು, ಕಿಡ್ನಿಗಳು ತೂತುಬಿದ್ದು ಯಾವುದಕ್ಕೂ ಪ್ರಯೋಜನವಿಲ್ಲದಂತಾಗುವುದು ಗ್ಯಾರಂಟಿ! ಹಾಗಾಗಿ ಸುಖಾಸುಮ್ಮನೆ ಸುರಿಸುರಿದು ಕೊಟ್ಟು ನನ್ನ ಮಾಲು ಮತ್ತು ದುಡ್ಡು ಎರಡನ್ನೂ ದಂಡ ಮಾಡಿಕೊಳ್ಳುವುದು ಬೇಡ ಎಂದೆನ್ನಿಬಿಟ್ಟಿತು. ಅಂದಿನಿoದ ಅವನಿಗೆ ಗಂಗಸರ ಕೊಡುವುದನ್ನು ನಿಲ್ಲಿಸಿಬಿಟ್ಟ ಮತ್ತು ಕೊಟ್ಟ ಸಾಲದ ವಸೂಲಿಗೂ ಮುಂದಾದ. ಆದರೆ ಆಂಥೋನಿಯ ಆರು ತಿಂಗಳ ಸಾಲ ತೀರಿಸುವಷ್ಟು ಹಣ ಲಕ್ಷ್ಮಣನಲ್ಲೆಲ್ಲಿತ್ತು? ಅವನು ಆಂಥೋನಿಯ ಚಿರಿಪಿರಿಗೂ, ಆ ನಂತರದ ಧಮಕಿಗೂ ಹೆದರಿದವನು, ತಾನು ಜೈಲಿನಲ್ಲಿ ದುಡಿದು ಮಗಳಿಗೆ ಮಾಡಿಸಿ ಹಾಕಿದ್ದ ಬೆಂಡೋಲೆಗಳನ್ನು ಕಿತ್ತುಕೊಳ್ಳಲೇ ಮುಂದಾದ. ಸರೋಜ ಅದನ್ನು ಪ್ರತಿಭಟಿಸಿದಾಗ ಅವನು ಕುಪಿತನಾಗಿ ಅವಳನ್ನು ಹೊಡೆದು ಬಡಿದು ಮಗಳಿಂದ ಕಿವಿಯೋಲೆಗಳನ್ನು ಕಿತ್ತುಕೊಂಡು ಶಿವಕಂಡಿಕೆಯ ಬಸ್ಸು ಹತ್ತಿದ.
ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬೀದಿಯ ನಾಗೇಶ್ ಶೇಟ್‌ನ ಚಿನ್ನದಂಗಡಿಯಲ್ಲಿ ಅದನ್ನು ಮಾರಿದವನು ನೇರವಾಗಿ ಆಂಥೋನಿಯ ಮನೆಗೆ ನಡೆದ. ಅವನೆದುರು ಹೊಸ ಹೊಸ ನೋಟುಗಳನ್ನು ಎಣಿಸೆಣಿಸಿ ಉಡಾಫೆಯಿಂದ ಬಿಸಾಕಿದ. ಇವನ ಅಹಂಕಾರವನ್ನು ಕಂಡ ಅವನಿಗೆ ಸಿಟ್ಟು ನೆತ್ತಿಗೇರಿತು. ಆದರೂ ಸುಮ್ಮನಿದ್ದ. ಆಂಥೋನಿಯ ಮೌನವನ್ನು ಇವನು ತನ್ನ ಗೆಲುವೆಂದುಕೊoಡವನು ಉಳಿದ ದುಡ್ಡಿನಿಂದ ಅಲ್ಲೇ ಕುಳಿತು ಚೆನ್ನಾಗಿ ಕುಡಿದು ಮರಳಿ ಅವನ ಮೇಲೆ ಹರಿಹಾಯ್ದ. ಆಂಥೋನಿಯ ತಾಳ್ಮೆ ಕಟ್ಟೆಯೊಡೆಯಿತು. ‘ರಂ…ಮಗನೇ…! ಇಷ್ಟು ಸಮಯ ನನ್ನ ಮೂತ್ರ ಕುಡಿದಂತೆಯೇ ನನ್ನ ಸಾರಾಯಿ ಕುಡಿದವನು ನೀನು, ಈಗ ಸೊಕ್ಕಿನ ಮಾತಾಡ್ತೀಯಾ…? ಇನ್ನು ಮುಂದೆ ಯಾವತ್ತಾದರೂ ಬಂದು ಕಡ ಕೇಳಬೇಕು…? ಆವತ್ತು ನಿನ್ನ ಸೊಂಟ ಮುರಿಯಲಿಕ್ಕುಂಟು ಮಗನೇ, ತೊಲಗು ಇಲ್ಲಿಂದ!’ ಎಂದು ಬೈದು ಕೆನ್ನೆಗೆರಡು ಭಾರಿಸಿ ದೂರಕ್ಕೆ ತಳ್ಳಿದ. ಅದರಿಂದ ಲಕ್ಷ್ಮಣನೂ ಸೆಟೆದುಕೊಂಡವನು, ‘ಹೇ…! ಹೋಗನಾ ಬೇವರ್ಸಿ…! ಈ ಗಂಗರಬೀಡಿನಲ್ಲಿ ನಿನ್ನಂತೆ ಗಂಗಸರ ಬೇಯಿಸುವವರು ನಾಯಿ ಸಂತೆ ಇದ್ದಾರನಾ. ನನಗೇ ಹೊಡೆದೆಯಲ್ಲ? ನಿನ್ನನ್ನು ಒಂದು ಕೈ ನೋಡಿಕೊಳ್ಳದಿದ್ದರೆ ನಾನು ಲಕ್ಷ್ಮಣನೇ ಅಲ್ಲ ಬಿಡು! ಒಮ್ಮೆ ನಿನ್ನಂಥವನನ್ನೇ ಕೊಚ್ಚಿ ಹಾಕಿ ಜೈಲಿಗೆ ಹೋಗಿ ಬಂದವನಿಗೆ ಇನ್ನೊಂದು ಸಲ ಹೋಗಿ ಬರುವುದೇನೂ ದೊಡ್ಡ ವಿಷಯವಲ್ಲವಾ…?’ ಎಂದಬ್ಬರಿಸಿ ಕಾಲು ಕೆರೆದು ಜಗಳಕ್ಕೆ ನಿಂತ.
ಆಹೊತ್ತು ಲಕ್ಷ್ಮಣನ ದುರಾದೃಷ್ಟವೋ ಎಂಬoತೆ ಮನೆಯ ಹಿಂದೆ ಮಣ್ಣಿನ ಮಡಕೆಗೆ ಕೊಳೆತ ಹಣ್ಣುಹಂಪಲುಗಳನ್ನು ತುಂಬಿಸುತ್ತ ಹೊಸ ಕಂಟ್ರಿಗೆ ತಯಾರಿ ನಡೆಸುತ್ತಿದ್ದಂಥ ತಾಮಸನ ಕಿವಿಗೆ ಅವನ ಬೈಗುಳಗಳು ರಪರಪನೇ ಅಪ್ಪಳಿಸಿಬಿಟ್ಟವು. ಅವನು ಕೆಂಡಾಮoಡಲನಾಗಿ ಧಾವಿಸಿ ಬಂದವನು, ‘ಬೋ…ಮಗನೇ ಯಾರನ್ನೋ ನೀನು ಕೊಚ್ಚುವುದು…?’ ಎನ್ನುತ್ತ ಲಕ್ಷ್ಮಣನನ್ನು ಹಿಡಿದು ನೆಲಕ್ಕೆ ಕೆಡವಿ ಯದ್ವಾತದ್ವ ತುಳಿಯತೊಡಗಿದ. ಆಗ ಅಲ್ಲಿ ಕುಡಿಯಲು ಬಂದಿದ್ದ ಐದಾರು ಮಂದಿ ಗಂಡಸರೂ ಇದ್ದರು. ಅವರೆಲ್ಲ ಕೂಡಿ ಲಕ್ಷ್ಮಣನನ್ನು ರಕ್ಷಿಸಬಹುದಿತ್ತು. ಆದರೆ ಅಂಥ ವೇಳೆಯಲ್ಲಿ ತಾಮಸನನ್ನು ತಡೆಯುವುದೂ ಒಂದೇ, ಮದವೇರಿದ ಗೂಳಿಯನ್ನು ಹಿಡಿಯುವುದು ಒಂದೇ! ಎಂದು ಅವರೆಲ್ಲರಿಗೂ ಚೆನ್ನಾಗಿ ಅನುಭವಕ್ಕೆ ಬಂದಿತ್ತು. ಹಾಗಾಗಿ ಎಲ್ಲರೂ ತಮಾಷೆ ನೋಡುತ್ತ ಕುಳಿತುಬಿಟ್ಟರು. ಆದರೆ ಲಕ್ಷ್ಮಣನ ಅದೃಷ್ಟವು ಶೀನನಾಯ್ಕನ ರೂಪದಲ್ಲಿ ತಾಳೆಮರದ ಬುಡದಲ್ಲಿ ಕುಳಿತು ಕುಡಿಯುತ್ತಿತ್ತು. ಅವನು ತಾಮಸನ ಉಗ್ರರೂಪವನ್ನು ಕಂಡವನು, ‘ಹೋಯ್…! ಪರ್ಬುಗಳೇ, ಸಾಕು, ಸಾಕು ಮಾರಾಯ್ರೆ ಬಿಟ್ಟುಬಿಡಿ ಅವನನ್ನು. ನಿಮ್ಮ ಪೆಟ್ಟಿಗೆಲ್ಲಾದರೂ ಸತ್ತುಗಿತ್ತು ಹೋದನೆಂದರೆ ಆಮೇಲೆ ನಾವೆಲ್ಲರೂ ಜೈಲಿಗೆ ಹೋಗಬೇಕಾದೀತು…!’ ಎಂದು ಒದರಿದ. ತಾಮಸನಿಗೆ ಆ ಮಾತು ನಾಟಲಿಲ್ಲವಾದರೂ ಆಂಥೋನಿಯನ್ನು ಚುಚ್ಚಿತು. ಅವನು ಕೂಡಲೇ ತಮ್ಮನನ್ನು ಎಳೆದೊಯ್ದು ಒಳಗೆ ಬಿಟ್ಟು ಬಂದ. ಅಷ್ಟೊತ್ತಿಗಾಗಲೇ ಲಕ್ಷ್ಮಣನ ಮೂಗು ಬಾಯಿಯಿಂದ ರಕ್ತ ವಸರುತ್ತಿತ್ತು. ಅವನು ನೋವಿನಿಂದ ನರಳುತ್ತ ಎದ್ದು ಮೈ ಕೈ ಕೊಡವಿಕೊಂಡವನು ತುಟಿಪಿಟಿಕ್ ಎನ್ನದೆ ಮನೆಯತ್ತ ನಡೆದ.
ಗಂಡನ ಅವಸ್ಥೆಯನ್ನು ಕಂಡ ಸರೋಜ ದಂಗಾಗಿಬಿಟ್ಟಳು. ‘ಅಯ್ಯಯ್ಯೋ ದೇವ್ರೇ…! ಏನಾಯ್ತು ಮಾರಾಯ್ರೇ, ಏನಿದು ಮೂಗು ಬಾಯಿಯಲ್ಲಿ ರಕ್ತ…! ಯಾರು ನಿಮ್ಮನ್ನು ಈ ತರ ಹೊಡೆದದ್ದು? ನಿಮ್ಮ ದಮ್ಮಯ್ಯ ಮಾರಾಯ್ರೇ…! ಒಮ್ಮೆ ನಿಮ್ಮ ಈ ಅನಿಷ್ಟ ಚಟವನ್ನು ಬಿಟ್ಟು ಬಿಡಿ…!’ ಎಂದು ಹತಾಶೆಯಿಂದ ಅಳುತ್ತ ಒಳಗೆ ಧಾವಿಸಿ ಹೋಗಿ ಬಟ್ಟೆಯನ್ನು ತಂದು ಅವನ ಮುಖವನ್ನು ಒರೆಸಲು ಮುಂದಾದಳು. ಆದರೆ ಅದಾಗಲೇ ‘ಆಂಥೋನಿ ಬ್ರದರ್ಸ್’ ನಿಂದ ಸಿಕ್ಕಾಪಟ್ಟೆ ಒದೆ ತಿಂದು ಅವಮಾನದಿಂದ ಕುದಿಯುತ್ತ ಬಂದಿದ್ದ ಲಕ್ಷ್ಮಣನಿಗೆ, ‘ನಿಮ್ಮ ಅನಿಷ್ಟ ಚಟವನ್ನು ಬಿಟ್ಟು ಬಿಡಿ ಮಾರಾಯ್ರೇ…!’ ಎಂಬ ಹೆಂಡತಿಯ ಮಾತುಗಳು ಇನ್ನಷ್ಟು ಕೆರಳಿಸಿಬಿಟ್ಟವು. ಮರುಕ್ಷಣ ಅವನು ರಪ್ಪನೆ ಸರೋಜಾಳ ಜುಟ್ಟು ಹಿಡಿದುಕೊಂಡವನು ಆಂಥೋನಿ, ತಾಮಸರು ತನಗೆ ಹೇಗೇಗೆಲ್ಲ ಹೊಡೆದಿದ್ದರೋ ತಾನೂ ಅವಳಿಗೆ ಅದೇ ರೀತಿ ಹೊಡೆಯತೊಡಗಿದ. ಅದನ್ನು ಕಂಡ ಪ್ರಮೀಳ ಜೋರಾಗಿ ಕಿರಿಚುತ್ತ ಬಂದು ಅಮ್ಮನನ್ನು ಬಿಡಿಸಲು ಪ್ರಯತ್ನಿಸಿದಾಗ ಅವಳಿಗೂ ನಾಲ್ಕೆöÊದೇಟು ಬಡಿದ. ಅತ್ತ ಇವರ ಬೊಬ್ಬೆ, ಅರಚಾಟವು ಪ್ರೇಮ, ತೋಮನಿಗೂ ಕೇಳಿಸಿದ್ದರಿಂದ ಅವರಿಬ್ಬರೂ ದಡಬಡನೇ ಹೊರಗೆ ಬಂದು ಇವರ ಜಗಳ ಬಿಡಿಸಲು ಮುಂದಾದರು. ಆಗ ಲಕ್ಷ್ಮಣನ ಕೋಪವು ತೋಮನ ಮೇಲೂ ತಿರುಗಿತು. ಅವನಿಗೂ ಝಾಡಿಸಿದ. ಮತ್ತೆ ನೋಡುವುದೇನು? ಗಂಡಸರಿಬ್ಬರ ನಡುವೆ ಹೊಸ ಕದನಕ್ಕೆ ಶುರುವಿಟ್ಟುಕೊಂಡಿತು. ಈಗ ಅವರನ್ನು ಬಿಡಿಸುವ ಜವಾಬ್ದಾರಿ ಹೆಂಡತಿ ಮಕ್ಕಳ ಮೇಲೆ ಬಿತ್ತು. ಕೆರಳಿದ ಚಿಂಪಾಜಿಗಳoತೆ ಅದುಮಿ, ಪರಚಿ, ತುಳಿದು ಹೊಡೆದಾಡುತ್ತಿದ್ದವರ ನಡುವೆ ಸರೋಜ ಕಷ್ಟಪಟ್ಟು ನುಸುಳಿ ಬಿಡಿಸಲು ಪ್ರಯತ್ನಿಸುತ್ತಿದ್ದರೆ, ಪ್ರೇಮ ಕೊತ್ತಳಿಗೆ ಹುಡುಕುವುದರಲ್ಲಿ ಮಗ್ನಳಾಗಿದ್ದಳು. ಆದರೆ ಅಂಥ ಪರಿಸ್ಥಿತಿಯಲ್ಲೂ ತೋಮನ ದೃಷ್ಟಿಗೆ ಅದು ಬಿದ್ದುಬಿಟ್ಟಿತು. ಅವನು ತಕ್ಷಣ ಲಕ್ಷ್ಮಣನಿಂದ ಬಿಡಿಸಿಕೊಂಡವನು ತೆಪ್ಪಗೆ ತನ್ನ ಶೆಡ್ಡಿನತ್ತ ನಡೆದರೆ, ಲಕ್ಷ್ಮಣನ ಕುಟುಂಬವೂ ತಮ್ಮ ಸೂರು ಸೇರಿಕೊಂಡಿತು.
ತಮ್ಮ ಜೀವನವೂ ಇಂದಲ್ಲ ನಾಳೆ ಒಳ್ಳೆಯ ಸ್ಥಿತಿಗೆ ಬರುತ್ತದೆ. ಆದಷ್ಟು ಬೇಗ ಸ್ವಂತದೊoದು ಮನೆಯನ್ನು ಕಟ್ಟಿಕೊಳ್ಳಬೇಕು. ಅದಾದ ನಂತರ ಮಕ್ಕಳೊಂದಿಗೆ ತಮ್ಮವರನ್ನು ನೋಡಲು ಹುಟ್ಟೂರಿಗೆ ಹೋಗಬೇಕು. ಹೆತ್ತವರಿಂದ ನಾವು ದೂರವಾಗಿ ಅದೆಷ್ಟು ಕಾಲವಾಯಿತು! ಅಮ್ಮ, ಅಪ್ಪ, ಅಣ್ಣ, ಅತ್ತಿಗೆ, ಚಿಕ್ಕಪ್ಪ ಮತ್ತು ಮಾವಂದಿರೆಲ್ಲ ಹೇಗಿದ್ದಾರೋ…? ಅವರಲ್ಲೀಗ ಯಾರಿದ್ದಾರೋ ಯಾರಿಲ್ಲವೋ…? ಮೊದಮೊದಲು ಅವರನ್ನೆಲ್ಲ ಬಿಟ್ಟು ಬಂದು ದೊಡ್ಡ ತಪ್ಪು ಮಾಡಿದೆವೇನೋ ಎಂದೆನ್ನಿಸಿ ಅವರನ್ನು ನೆನೆಯಲೂ ಮನಸ್ಸು ಹಿಂಜರಿಯುತ್ತಿತ್ತು. ಆದರೆ ಈಗ ಅವರೆಲ್ಲರೂ ಹಿಂದಿನದ್ದನ್ನು ಮರೆತಿರಬಹುದು. ಹೌದು ಖಂಡಿತವಾಗಿಯೂ ಮರೆತಿರುತ್ತಾರೆ. ಇನ್ನು ಮುಂದೆ ನಾವು ಹೋದರೂ ನಮ್ಮನ್ನು ತಿರಸ್ಕರಿಸಲಾರರು ಎಂದುಕೊಳ್ಳುತ್ತ ಸರೋಜ ನೆಮ್ಮದಿಪಡುತ್ತಿದ್ದಳು. ಆದರೆ ಈಗಿನ ದಟ್ಟ ದಾರಿದ್ರö್ಯದ ಅವಸ್ಥೆಯಲ್ಲಿ ಹೋದರೆ ಒಪ್ಪಿಕೊಳ್ಳಲಾರರು. ಹೋಗುವುದಿದ್ದರೆ ಒಂದೊಳ್ಳೆಯ ಸ್ಥಿತಿಗೆ ಬಂದ ನಂತರವೇ! ಅದು ನೆರವೇರಬೇಕಾದರೆ ನಾವಿಬ್ಬರೂ ಚೆನ್ನಾಗಿ ದುಡಿದು ಸಂಪಾದಿಸಬೇಕು ಎಂದೂ ಯೋಚಿಸುತ್ತ ಭಾವುಕಳಾಗಿ ಕಣ್ಣೀರಿಡುತ್ತಿದ್ದವಳು ಓ, ದೇವರೇ…! ಆ ಕಾಲವಿನ್ನು ಯಾವಾಗ ಬರುತ್ತದೋ…? ಎಂದು ಚಡಿಪಡಿಸುತ್ತ ದೂರದ ಆಸೆಯನ್ನಿಟ್ಟುಕೊಂಡಿದ್ದಳು. ಆದರೆ ಲಕ್ಷ್ಮಣ ತನ್ನ ನಾಮರ್ದತನವನ್ನು ಯಾವತ್ತಿನಿಂದ ಸಾಬೀತು ಪಡಿಸತೊಡಗಿದನೋ ಆವತ್ತಿನಿಂದ ಅವಳ ಆಸೆ, ಕನಸುಗಳೆಲ್ಲವೂ ನುಚ್ಚುನೂರಾಗಿ ದುಃಖ, ಹತಾಶೆ ಅವಳನ್ನು ಕಾಡತೊಡಗಿತು. ಹಾಗಾಗಿ ಬರಬರುತ್ತ ಅವಳಲ್ಲೂ ಸಾಂಸಾರಿಕ ಜೀವನದ ಮೇಲೆ ಜಿಗುಪ್ಸೆ ಮೂಡತೊಡಗಿತು. ಅಂದಿನಿoದ ಮಗಳಿಗಾಗಿ ಮಾತ್ರವೇ ಎಂಬoತೆ ನಿಸ್ಸಾರವಾಗಿ ಬದುಕತೊಡಗಿದಳು. ಇತ್ತ ಮುಂಬೈಗೆ ಹೋದ ಶಾರದಾ ಆರಂಭದ ಕೆಲವು ಕಾಲ ತಪ್ಪದೆ ಊರಿಗೆ ಬರಲು ಹಂಬಲಿಸುತ್ತಿದ್ದಳು. ಮಾರ್ಗರೆಟ್ ತಾನು ಬರುವಾಗ ಅವಳನ್ನೂ ಕರೆದು ತರುತ್ತಿದ್ದಳು. ಆದರೆ ಅಪ್ಪ ಅಮ್ಮನ ನಿರಂತರ ಜಗಳ, ಮುನಿಸು ಮತ್ತು ಮನೆಯ ಪರಿಸ್ಥಿತಿಯು ತೀರಾ ಹದಗೆಟ್ಟಿದ್ದನ್ನು ಕಾಣುತ್ತ ಬಂದವಳಿಗೆ ಊರಿನ ಆಸೆಯು ನಿಧಾನವಾಗಿ ಕಮರಿ ಹೋಯಿತು. ಮುಂದೆ ಮಾರ್ಗರೆಟ್ ಬಂದರೂ ಅವಳು ಯಾವುದಾದರೊಂದು ಕುಂಟು ನೆಪ ಹೇಳಿ ತಪ್ಪಿಸತೊಡಗಿದಳು. ಮಗಳ ಅಂಥ ಧೋರಣೆಯು ಕೂಡಾ ಸರೋಜಾಳನ್ನು ಮತ್ತಷ್ಟು ಕುಸಿಯುವಂತೆ ಮಾಡಿತು.
ಆಂಥೋನಿ ಸಹೋದರೊಂದಿಗಿನ ಜಗಳದ ಬಳಿಕ ಲಕ್ಷ್ಮಣನು ಗಂಗರಬೀಡಿನ ಪೇಟೆಯ ಸಮೀಪದ ಸಣ್ಣ ಕರಿಮಾರು ಹಾಡಿಯೊಳಗಿನ ಫೆಲಿಕ್ಸ್ ಪರ್ಬುವಿನ ಮನೆಗೆ ಸಾರಾಯಿ ಕುಡಿಯಲು ಹೋಗತೊಡಗಿದ. ಆಂಥೋನಿಯ ಮನೆಯಲ್ಲಿ ನಡೆದ ಗಲಾಟೆಯನ್ನೂ ಅವನ ಜೈಲು ಪ್ರಕರಣವನ್ನೂ ಫೆಲಿಕ್ಸನ ತಾಯಿ ವಿನ್ಸಿಬಾಯಿ ತನ್ನ ಮಗನಿಗೆ ಮೊದಲೇ ತಿಳಿಸಿದ್ದರೊಂದಿಗೆ ಅವನಿಗೆ ಸಾರಾಯಿ ಸಾಲ ಕೊಡದಂತೆ ತಾಕೀತು ಮಾಡಿದ್ದಳು. ಹೀಗಾಗಿ ಕೈಯಲ್ಲಿ ಕಾಸಿದ್ದರೆ ಮಾತ್ರ ಹೊಟ್ಟೆಗೆ ಪರಮಾತ್ಮ ಎಂಬ ಸ್ಥಿತಿ ಲಕ್ಷ್ಮಣನದ್ದಾಗಿತ್ತು. ಜೊತೆಗೆ ಅವನು ಹೊರಗಡೆ ದುಡಿಯುವ ಹುಮ್ಮಸ್ಸನ್ನೆಂದೋ ಕಳೆದುಕೊಂಡಿದ್ದವನು ಸುಮ್ಮನೆ ಮನೆಯಲ್ಲೇ ಕುಳಿತು ಬೀಡಿ ಕಟ್ಟುವ ಎಂದುಕೊoಡರೆ ಅವನ ಕುಡುಕ ಮನಸ್ಸು ಅದಕ್ಕೂ ಬಿಡುತ್ತಿರಲಿಲ್ಲ. ಹಾಗಾಗಿ ಹಲವು ಬಾರಿ ಹೆಂಡತಿಯನ್ನಾದರೂ ಕೇಳೋಣವೆಂದುಕೊಳ್ಳುತ್ತಿದ್ದ. ಆದರೆ ಅವಳ ದೃಷ್ಟಿಯಲ್ಲಿ ತಾನು ಯಾವತ್ತೋ ಬಿದ್ದುಬಿಟ್ಟಿದ್ದೇನೆ ಎಂಬರಿವು ಬರುತ್ತ ಸುಮ್ಮನಾಗುತ್ತಿದ್ದುದರೊಂದಿಗೆ ಕುಡಿತವಿಲ್ಲದೆ ಹುಚ್ಚನಂತಾಗಿದ್ದ. ಅದರಿಂದಾಗಿ, ಏನಾದರೂ ಮಾಡಿ ಕುಡಿಯಲೇಬೇಕು! ಎಂಬ ಸ್ಥಿತಿಗೆ ತಲುಪಿದವನನ್ನು ಅದೊಂದು ಸುಸಂದರ್ಭವು ಕೈಬೀಸಿ ಕರೆಯಿತು.
ಆ ತಿಂಗಳು ಶೆಟ್ಟರ ತೋಟದ ಜಾಯಿಕಾಯಿ ಕಟಾವಿನ ಕಾಲ ಆರಂಭವಾಗಿತ್ತು. ಜಾಯಿಕಾಯಿ ಮರಗಳೆಲ್ಲ ಯಥೇಚ್ಛ ಫಸಲು ತುಂಬಿಕೊoಡು ಬಾಗಿ ನಿಂತಿದ್ದವು. ಅದನ್ನು ಕಾಣುತ್ತಿದ್ದ ಶೆಟ್ಟರಿಗೋ ಆನಂದವೋ ಆನಂದವಾಗಿತ್ತು. ಅವರು ದಿನನಿತ್ಯ ತೋಟ ಸುತ್ತಾಡುತ್ತಿದ್ದವರು ಕಾಯಿ ತುಂಬಿದ ಮರಗಳನ್ನು ನೋಡಿ ಸಂತೃಪ್ತಿ ಪಡುತ್ತಿದ್ದರು. ಇತ್ತ ಲಕ್ಷ್ಮಣನ ದೃಷ್ಟಿಯೂ ಅದೇ ಮರಗಳ ಮೇಲೆ ಬಿದ್ದುದರಿಂದ ಅವನ ಕುಡಿತಕ್ಕೆ ದುಡ್ಡು ಹೊಂಚುವ ಆಸೆಯನ್ನು ಅದು ಪ್ರಚೋದಿಸುತ್ತಿತ್ತು. ಅವನು ಜಾಯಿಕಾಯಿಯ ಬೆಲೆಯನ್ನೂ, ಖರೀದಿಸುವ ಶಿವಕಂಡಿಕೆಯ ಅಂಗಡಿಯೊoದನ್ನೂ ಶೀನುನಾಯ್ಕನಿಂದ ಮೊದಲೇ ತಿಳಿದುಕೊಂಡಿದ್ದ. ಆದ್ದರಿಂದ ಆವತ್ತು ಬೇಕೆಂದೇ ತೋಟದ ಕೆಲಸಕ್ಕೆ ಹಾಜರಾದ. ಕೂಲಿಯಾಳನ್ನು ಕೆಲಸಕ್ಕೆ ಹಚ್ಚುತ್ತಿದ್ದ ಶೆಟ್ಟರಿಗೆ ಲಕ್ಷ್ಮಣನನ್ನು ಕಂಡು ಅಚ್ಚರಿಯಾದುದರೊಂದಿಗೆ ಜಿಗುಪ್ಸೆಯೂ ಮೂಡಿತು. ಬಡ್ಡೀಮಗನಿಗೆ ಕುಡಿಯಲು ಕಾಸು ಬೇಕಾದಾಗ ಮಾತ್ರ ಕಣ್ಣುಕಟ್ಟು ಮಾಡಲು ಕೆಲಸಕ್ಕೆ ಬರುತ್ತಾನೆ! ಎಂದುಕೊoಡವರು, ‘ಏನಾ ಲಕ್ಷ್ಮಣ ಅಮಾಸೆ, ಹುಣ್ಣಿಮೆಗೊಮ್ಮೆ ಕೆಲಸಕ್ಕೆ ಬರಲು ಇದೇನು ನಿನ್ನಪ್ಪನ ತೋಟವೆಂದುಕೊoಡೆಯಾ! ಎಷ್ಟು ಕಾಲವಾಯಿತನಾ ಕೆಲಸಕ್ಕೆ ಬಾರದೇ…? ಎಂಥ ದರಿದ್ರದವನಾಗಿಬಿಟ್ಟೆ ಮಾರಾಯಾ ನೀನು, ಥೂ! ಇಬ್ಬರು ಹೆಣ್ಣು ಮಕ್ಕಳು ಪ್ರಾಯಕ್ಕೆ ಬಂದು ನಿಂತಿದ್ದಾರೆ. ಅವರ ಬಗ್ಗೆಯಾದರೂ ಜವಾಬ್ದಾರಿ ಬೇಡವನಾ ನಿಂಗೆ? ಏನು ಮಾಡುವುದು ಹೇಳು…? ನಾನೂ ಅವುಗಳ ಮುಖ ನೋಡಿಕೊಂಡು ಸುಮ್ಮನಿರಬೇಕಷ್ಟೇ. ಇಲ್ಲದಿದ್ದರೆ ಯಾವತ್ತೋ ನಿನ್ನ ಕುಂಡೆಗೆ ಲಾತ್ ಕೊಟ್ಟು ಓಡಿಸಿಬಿಡುತ್ತಿದ್ದೆ!’ ಎಂದು ಕೆಕ್ಕರಿಸುತ್ತ ಗದರಿಸಿದರು.
ಲಕ್ಷ್ಮಣ, ಶೆಟ್ಟರೆದುರು ನಮ್ರವಾಗಿ ಕೈಕಟ್ಟಿ ನಿಂತಿದ್ದವನು ಕತ್ತನ್ನು ಎಡಕ್ಕೆ ವಾಲಿಸಿ ಮೂತಿಯ ಮೇಲೆ ದುರ್ಬಲ ನಗುವನ್ನು ತಂದುಕೊoಡು ಅನಾಥನಂತೆ ವರ್ತಿಸುತ್ತ ಅವರ ಬೈಗುಳಗಳನ್ನು ಕೇಳಿಸಿಕೊಂಡನೇ ಹೊರತು ತುಟಿ ಪಿಟಿಕ್ ಅನ್ನಲಿಲ್ಲ. ಶೆಟ್ಟರಿಗೂ ಕನಿಕರವಾಯಿತು. ಸಾಯಲಿ ಅತ್ಲಾಗೆ! ಎಂದುಕೊoಡವರು, ‘ಹ್ಞೂಂ, ಹೋಗು ಹೋಗು, ಕೆಲಸ ಮಾಡು. ನಿನಗೆ ಬುದ್ಧಿ ಹೇಳುವುದೂ, ಬೋರ್ಗಲ್ಲ ಮೇಲೆ ನೀರು ಸುರಿಯುವುದೂ ಎರಡೂ ಒಂದೇ!’ ಎಂದವರು ತೋಟದ ಇನ್ನೊಂದು ಪಾರ್ಶ್ವಕ್ಕೆ ಹೊರಟು ಹೋದರು. ಲಕ್ಷ್ಮಣ ಕೂಡಲೇ ಕೆಲಸಕ್ಕೆ ಶುರುವಿಟ್ಟುಕೊಂಡ. ತೆಂಗಿನ ತೆಪ್ಪರಿಗೆಗಳನ್ನು ಹೆಕ್ಕಿ ರಾಶಿ ಹಾಕಿದ. ಕೊತ್ತಳಿಗೆಗಳನ್ನು ಕಡಿದು ತೆಂಗಿನ ಮರಕ್ಕೆ ಆನಿಸಿ ಕಲಾತ್ಮಕವಾಗಿ ಪೇರಿಸಿಟ್ಟ. ಬಳಿಕ ಮೆಲ್ಲನೇ ಜಾಯಿಕಾಯಿ ಮರಗಳತ್ತ ಸಾಗಿದ. ಆ ಮರಗಳ ಬುಡಗಳನ್ನು ಬಿಡಿಸುವ ಕೆಲಸ ಅದಾಗಲೇ ಮುಗಿದಿತ್ತಾದರೂ ಮತ್ತೊಮ್ಮೆ ಬಿಡಿಸುವ ನಾಟಕವಾಡುತ್ತ ಒಂದೆರಡು ಸಮೃದ್ಧ ಮರಗಳನ್ನು ಗುರುತು ಹಾಕಿಕೊಂಡವನು ಸಂಜೆ ಕೆಲಸ ಮುಗಿಯುವ ಹೊತ್ತಿಗೆ ಸಾರಾಯಿ ಕುಡಿಕುಡಿದು ದುರ್ಬಲವಾಗಿದ್ದ ತನ್ನ ದೇಹದಿಂದಾಗಿ ಸೋತು ಸುಣ್ಣವಾಗಿದ್ದ. ಆದರೂ ಶೆಟ್ಟರೊಡನೆ ಅಂಗಲಾಚಿ ಇಪ್ಪತ್ತು ರೂಪಾಯಿಗಳನ್ನು ಮುಂಗಡ ಪಡೆದು ಧಾಪುಗಾಲಿಕ್ಕುತ್ತಾ ಹೋಗಿ ಸಾರಾಯಿ ಕುಡಿದು ಮನೆಗೆ ಬಂದವನು ಮತ್ತೆರಡು ದಿನ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದ.
ಮೂರನೆಯ ದಿನ ಸಂಜೆ ಸರೋಜಾಳ ಬೀಡಿಯ ಮೊರದಿಂದ ಹತ್ತು ರೂಪಾಯಿ ಕದ್ದು ಸ್ವಲ್ಪವೇ ಕುಡಿದು ರಾತ್ರಿ ಬಂದು ಮಲಗಿದವನು ನಿದ್ದೆಗೆಟ್ಟು ಹೊರಳಾಡುತ್ತ ನಡುರಾತ್ರಿಯಲ್ಲಿ ಎದ್ದು ಕುಳಿತ. ಹೆಂಡತಿ, ಮಗಳು ಗಾಢ ನಿದ್ರೆಯಲ್ಲಿರುವುದನ್ನು ಖಚಿತಪಡಿಸಿಕೊಂಡ. ದೊಡ್ಡ ಗೋಣಿ ಚೀಲವೊಂದನ್ನು ಬಗಲಿಗೇರಿಸಿಕೊಂಡು ಶೆಡ್ಡಿನ ಹಿಂದಿನ ತೋಟದ ಬೇಲಿಯಿಂದಾಗಿ ಗುಳ್ಳೆನರಿಯಂತೆ ಒಳಗೆ ನುಸುಳಿದ. ಇವನನ್ನು ಕಂಡ ಇರುಳು ಹಕ್ಕಿಗಳು ವಿಚಿತ್ರವಾಗಿ ಅರಚುತ್ತ ಹಾರಿ ಹೋದವು. ಯಾವುದನ್ನೂ ಲೆಕ್ಕಿಸದೆ ಮುಂದೆ ಸಾಗಿದ. ಮೊದಲೇ ಗುರುತು ಹಾಕಿಟ್ಟಿದ್ದ ಮರಗಳನ್ನು ಆ ದಟ್ಟ ಕತ್ತಲಲ್ಲಿ ಸರಸರನೆ ಹತ್ತಿದ. ಕೈಗೆ ಸಿಕ್ಕಿದ ದೊಡ್ಡ ಗಾತ್ರದ ಕಾಯಿಗಳನ್ನು ರಪರಪನೆ ಕೊಯ್ದು ಚೀಲಕ್ಕೆ ತುಂಬಿಸಿಕೊoಡು ಬೇಗಬೇಗನೇ ಮರವಿಳಿದ. ಚೀಲವನ್ನು ಹೊತ್ತು ತಂದು ಶೆಡ್ಡಿನ ಹಿಂಬದಿಯ ಸೌದೆರಾಶಿಯೊಳಗೆ ಅವಿತಿಟ್ಟು ಗೆಲುವಿನ ಉಸಿರು ದಬ್ಬುತ್ತ ಹೋಗಿ ಮಲಗಿಕೊಂಡ. ತನ್ನ ಗಂಡ ಬೆಳಿಗ್ಗೆ ಬೇಗನೆದ್ದು ಬೀಡಿ ಸೇದುತ್ತ ಬಾಲಸುಟ್ಟ ಬೆಕ್ಕಿನಂತೆ ಅಂಗಳದಲ್ಲಿ ಓಡಾಡುತ್ತಿದ್ದುದನ್ನು ಕಂಡ ಸರೋಜಾಳಿಗೆ ತಟ್ಟನೆ ಅನುಮಾನ ಕಾಡಿತು. ಹಾಗಂತ ಮಾತಾಡಿಸಲು ಹೋದರೆ ಜಗಳಕ್ಕೇ ನಿಂತಾನು ಎಂದುಕೊoಡು ಸುಮ್ಮನಾಗಿ ಮನೆಗೆಲಸವನ್ನು ಮುಗಿಸಿದವಳು ಹಿಂದಿನ ದಿನ ಕಟ್ಟಿಟ್ಟಿದ್ದ ಬೀಡಿಯನ್ನು ಹಿಡಿದುಕೊಂಡು ಬ್ರಾಂಚಿಗೆ ಹೊರಟು ಹೋದಳು. ಲಕ್ಷ್ಮಣ ಅದನ್ನೇ ಕಾಯುತ್ತಿದ್ದವನು ಕೂಡಲೇ ಜಾಯಿಕಾಯಿ ಚೀಲವನ್ನು ಹೊತ್ತುಕೊಂಡು ಅಡ್ಡ ದಾರಿಯಿಂದ ಶಿವಕಂಡಿಕೆ ಪೇಟೆಯತ್ತ ಧಾವಿಸಿದ.
(ಮುಂದುವರೆಯುವುದು)