
ಕರ್ನಾಟಕ ಸಂಘ ಪನ್ವೆಲ್ ನ ವತಿಯಿಂದ ಪ್ರತಿ ವರ್ಷದಂತ್ತೆ, ಈ ವರ್ಷವೂ ಗಣೇಶ ಹಬ್ಬದ ಆಚರಣೆ ಬಹಳ ವಿಜೃಂಭಣೆ ಯಿಂದ ಸಂಪನ್ನ ಗೊಂಡಿತು .
ಸಪ್ಟೆಂಬರ್ 7ರಂದು ಬೆಳಿಗ್ಗೆ 10 ಗಂಟೆಗೆ ಗಣ ಹೋಮ ಪೂಜಾ ವಿಧಿಯೊಂದಿಗೆ ಶ್ರೀ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು .ಸಂಘದ ಸದಸ್ಯರು ಹಾಗೂ ಪರಿಸರದ ಗಣೇಶ ಭಕ್ತರು ದೇವರ ದರ್ಶನ ಪಡೆದು ಕೃತಾರ್ಥರಾದರು .ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಪೂಜಾ ವಿಧಿ ವಿಧಾನಗಳು ಸತತ ಏಳು ದಿನವೂ ನಡೆಯಿತು. ಸಂಜೆಯ ವೇಳೆಗೆ ಪರಿಸರದ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮವು ಜರುಗಿತು. ಪೂಜಾ ಸೇವಾರ್ಥಿಗಳಿಗೆ ಪ್ರಸಾದದೊಂದಿಗೆ ಸಂಘದ ವತಿಯಿಂದ ಅವರನ್ನು ಗೌರವಿಸಲಾಯಿತು.




ತಾರೀಕು 12/09 /24 ರಂದು ಗುರುವಾರ ಸತ್ಯನಾರಾಯಣ ಮಹಾಪೂಜೆ ಹಾಗೂ ಮಾತಾಕಿ ಚೌಕಿ ಧಾರ್ಮಿಕ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆದು ಸೇರಿದ ಭಕ್ತಾದಿಗಳೆಲ್ಲರನ್ನು ಭಾವ ಪರವಶರನ್ನಾಗಿ ಮಾಡಿತು. ಪ್ರೀತಿ ಟಂಡನ್ ಮತ್ತು ತಂಡದವರಿಂದ ನಡೆದ ಮಾತಾ ಕಿ ಚೌಕಿ ಧಾರ್ಮಿಕ ಕಾರ್ಯದಲ್ಲಿ ಸೇರಿದ ಭಕ್ತಾದಿಗಳು ಭಾವ ಪರವಶರಾಗಿ ಸನಾತನ ಹಿಂದೂ ಸಂಸ್ಕೃತಿಯ ಉನ್ನತಿಗೆ ತಮ್ಮ ಕೊಡುಗೆ ಎಂಬಂತೆ ಭಕ್ತಿ ಪೂರ್ವಕವಾಗಿ ಸಹಕರಿಸಿದರು. ಸತ್ಯನಾರಾಯಣ ಪೂಜಾ ವಿಧಿ ವಿಧಾನವನ್ನು ಶ್ರೀ ವೇದಮೂರ್ತಿ ಗುರುಪ್ರಸಾದ್ ಭಟ್, ಅರ್ಚಕರು ಶ್ರೀ ಮೂಕಾಂಬಿಕ ಮಂದಿರ ಘನ್ಸೋಲಿ ಇವರು ನಡೆಸಿಕೊಟ್ಟರು.ಪರಿಸರದ ಹೋಟೆಲ್ ಉದ್ಯಮಿಗಳು, ಕನ್ನಡ ಬಾಂಧವರು ಮತ್ತು ಇತರ ಭಾಷೆಯ ಭಕ್ತ ಜನರು ಯಾವುದೇ ಜಾತಿ ಮತ ಭೇದವಿಲ್ಲದೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿ ಅನ್ನ ಸಂತರ್ಪಣ ಕಾರ್ಯದಲ್ಲಿಯೂ ಸಹಭಾಗಿಗಳಾಗಿ ಶ್ರೀ ಗಣೇಶ ದೇವರ ಕೃಪೆಗೆ ಪಾತ್ರರಾದರು. ಸತ್ಯನಾರಾಯಣ ಪೂಜೆಯ ನಂತರ ಸುಮಾರು 500 ಕ್ಕಿಂತಲೂ ಹೆಚ್ಚು ಭಕ್ತಾದಿಗಳು ಅನ್ನಪ್ರಸಾದವನ್ನು ಸ್ವೀಕರಿಸಿದರು.
ಕೊಲ್ಪೆ ಧನಂಜಯ ಶೆಟ್ಟಿ ದಂಪತಿ, ರಾಜೇಶ್ ಶೆಟ್ಟಿ ಪಯ್ಯರ್ ದಂಪತಿ, ಅಂಜಲಿ ಜೋಶಿ ದಂಪತಿ ಮತ್ತು ರೇಷ್ಮಾ ರವಿ ಶೆಟ್ಟಿ ದಂಪತಿ ಪೂಜಾ ವಿಧಿ ವಿಧಾನಗಳ ಸಂಕಲ್ಪ ಪೂಜಾ ವಿಧಿ ನೆರವೇರಿಸಿದರು.
ಸಂಘದ ಕಾರ್ಯಾಧ್ಯಕ್ಷ ಸಂತೋಷ್ ಜಿ ಶೆಟ್ಟಿ ದಂಪತಿ, ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ ದಂಪತಿ ನಿತ್ಯ ಪೂಜೆಯಲ್ಲಿ ಪಾಲ್ಗೊಂಡಿರುವರು .ಸಂಘದ ಆಡಳಿತ ಮಂಡಳಿ ಸಮಿತಿ, ಸಲಹಾ ಸಮಿತಿ , ಉಪಸಮಿತಿಯ ಎಲ್ಲಾ ಸದಸ್ಯರು ಹಾಗು ಮಹಿಳಾ ವಿಬಾಗದ ಪದಾಧಿಕಾರಿಗಳು ಮತ್ತು ಸದಸ್ಯರು ತಮ್ಮ ಸೇವಾ ಪೂಜೆಯನ್ನು ನೀಡಿ ಪ್ರಸಾದ ಹಾಗೂ ಸಂಘದ ಗೌರವಾರ್ಪಣೆಯನ್ನು ಸ್ವೀಕರಿಸಿದರು.
ಒಟ್ಟಿನಲ್ಲಿ ಹೇಳುವುದಾದರೆ ಏಳು ದಿನಗಳ ಕಾಲ ಸಂಘವು ಒಂದು ಧಾರ್ಮಿಕ ಕೇಂದ್ರವೆಂಬಂತೆ ಮೂಡಿಬಂದಿತ್ತು. ಈ ಧಾರ್ಮಿಕ ಕಾರ್ಯಕ್ಕೆ ಸಹಕರಿಸಿದ ಎಲ್ಲಾ ದಾನಿಗಳನ್ನು ಹಾಗೂ ಪೋಷಕರನ್ನು ಹಾಗೂ ಸತತ ಏಳು ದಿನ ಸ್ವಯಂಸೇವಕರಾಗಿ ದುಡಿದ ಪ್ರತಿಯೊಬ್ಬ ಸದಸ್ಯರನ್ನು ಗೌರವಿಸುವುದರ ಜೊತೆಗೆ ಅವರ ತನು ಮನ ಧನದ ಸಹಕಾರಕ್ಕೆ ಆಡಳಿತ ಮಂಡಳಿಯು ಮನಪೂರ್ವಕ ಧನ್ಯವಾದಗಳು ನೀಡಿರುತ್ತದೆ .
ತಾರೀಕು 13ರಂದು ಸಂಜೆ ಗಣೇಶ ಮೂರ್ತಿಯ ವಿಸರ್ಜನೆ ಮಾಡುವ ಮೂಲಕ
ಸದಸ್ಯರೆಲ್ಲರ ಹಾಗೂ ಪರಿಸರದ ಜನರ ಸಮ್ಮುಖದಲ್ಲಿ ಬಹಳ ಶಿಸ್ತು ಬದ್ಧವಾಗಿ ಮಾಡುವ ಮೂಲಕ ಏಳು ದಿನದ ಧಾರ್ಮಿಕ ಜಾತ್ರೆಗೆ ಮಂಗಳ ಹಾಡಲಾಯಿತು. ಆಡಳಿತ ಮಂಡಳಿಯವರು ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಭಕ್ತಾದಿಯನ್ನು ಅಭಿನಂದಿಸುತ್ತ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬ ಭಕ್ತಾದಿಗಳಿಗೂ ಕೃತಜ್ಞತೆ ಸಲ್ಲಿಸುತ್ತಾ ಮುಂದೆಯೂ ಈ ತರದ ಸಹಕಾರ ಪ್ರೋತ್ಸಾಹ ಸಂಘದ ಪ್ರತಿಯೊಂದು ಕಾರ್ಯಕ್ರಮಕ್ಕೂ ಸಿಗುವಂತಾಗಲಿ ಎಂದು ಆಶಿಸಿದರು.