ಮಹಾರಾಷ್ಟ್ರದಲ್ಲಿ ಗಣೇಶೋತ್ಸವವನ್ನು ಬಹಳ ವ್ಯಾಪಕವಾಗಿ, ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗಣಪತಿಯ ಮೆರವಣಿಗೆ ಎಂದರೆ ಅದರ ವೈಭವವೇ ಅದ್ಭುತ. ಅದರಲ್ಲೂ ಮುಂಬೈನಲ್ಲಿ ಗಣೇಶೋತ್ಸವ ಬೇರೆಯೇ ಮಟ್ಟದ್ದು. ಎಲ್ಲಾ ಗಣೇಶೋತ್ಸವಗಳೂ ಒಂದಕ್ಕಿಂತ ಒಂದು ಮಿಗಿಲು ಎನಿಸುವಂಥವು. ಲಾಲ್ಬಾಗ್ಚ ರಾಜ ಎಂದೇ ಸುಪ್ರಸಿದ್ಧಿ ಪಡೆದಿರುವ ಗಣೇಶೋತ್ಸವ ಮಂಡಲ ಜನರ ಸಂಭ್ರಮ, ಸಡಗರಕ್ಕೆ ಸಾಕ್ಷಿಯಾಗಿದೆ. ಪ್ರತೀ ವರ್ಷ ಲಾಲ್ಬಾಗ್ಚ ರಾಜನ ಉತ್ಸವ ಬಹಳ ಅದ್ಭುತವಾಗಿ ನಡೆಯುತ್ತದೆ. ಸಾವಿರ, ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದು ಹೋಗುತ್ತಾರೆ. ನಗದು ಹಣ, ಚಿನ್ನಾಭರಣ ಇತ್ಯಾದಿ ಕಾಣಿಕೆಗಳನ್ನು ಭಕ್ತರು ಈ ಗಣಪನಿಗೆ ಅರ್ಪಿಸಿ ಹೋಗುತ್ತಾರೆ. ಈ ಕಾಣಿಕೆಗಳ ಮೌಲ್ಯವೇ ಕೋಟಿಗಟ್ಟಲೆ ಇರುತ್ತದೆ. ಭಕ್ತರು ಕಾಣಿಕೆಯಾಗಿ ಸಲ್ಲಿಸಿರುವ ಆಭರಣಗಳಲ್ಲಿ ಕೆಲ ಭಾಗವನ್ನು ಹರಾಜಿನಲ್ಲಿ ಮಾರಲಾಗಿದೆ. ವರದಿ ಪ್ರಕಾರ ಈ ಹರಾಜಿನಲ್ಲಿ 2.35 ಕೋಟಿ ರೂ ಆದಾಯ ಸಿಕ್ಕಿದೆ.
ಸೆಪ್ಟೆಂಬರ್ 8ರಿಂದ 17ರವರೆಗೆ ಲಾಲ್ಬಾಗ್ಚ ರಾಜ ಗಣೇಶೋತ್ಸವ ನಡೆದಿತ್ತು. ಈ ವೇಳೆ ಪಂಡಾಲ್ನಲ್ಲಿ ಇರಿಸಲಾಗಿದ್ದ ದೊಡ್ಡ ಹುಂಡಿಯಲ್ಲಿ 4.15 ಕಿಲೋ ಚಿನ್ನ, 64.3 ಕಿಲೋ ಬೆಳ್ಳಿ ವಸ್ತುಗಳನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದರು. ಸಣ್ಣ ವಿಗ್ರಹಗಳು, ಕಿರೀಟಗಳು, ಕಡಗಗಳು ಹೀಗೆ ನಾನಾ ರೀತಿಯ ವಸ್ತುಗಳು ಇದರಲ್ಲಿವೆ.
ಮುಕೇಶ್ ಅಂಬಾನಿ ಅವರ ಕೊನೆಯ ಮಗ ಹಾಗೂ ನವವಿವಾಹಿತ ಅನಂತ ಅಂಬಾನಿ 20 ಕಿಲೋ ತೂಕದ ಚಿನ್ನದ ಕಿರೀಟವನ್ನು ಲಾಲ್ಬಾಗ್ಚ ರಾಜನಿಗೆ ಅರ್ಪಿಸಿದ್ದರು. 16 ಕೋಟಿ ರೂ ಮೌಲ್ಯದ ಈ ಸ್ವರ್ಣ ಕಿರೀಟ ಖಾಯಂ ಆಗಿ ಉಳಿಯಲಿದೆ. ಇದು ಪ್ರತೀ ವರ್ಷವೂ ನಿರ್ಮಾಣವಾಗುವ ಲಾಲ್ಬಾಗ್ಚ ರಾಜ ಗಣಪನ ಶಿರದ ಮೇಲೆ ರಾರಾಜಿಸಲಿದೆ. ಇದು ಬಿಟ್ಟರೆ ಉಳಿದ ಭಕ್ತರ ಚಿನ್ನ, ಬೆಳ್ಳಿ ಕಾಣಿಕೆಗಳನ್ನು ಹರಾಜಿನಲ್ಲಿ ಮಾರಲಾಗುತ್ತಿದೆ.
11 ದಿನಗಳ ಲಾಲ್ಬಾಗ್ಚ ರಾಜ ಗಣೇಶೋತ್ಸವದಲ್ಲಿ ಬರೋಬ್ಬರಿ 5.65 ಕೋಟಿ ರೂ ಮೊತ್ತದ ನಗದು ಹಣವೂ ಹುಂಡಿಯಲ್ಲಿ ಬಿದ್ದಿದೆ. ಶನಿವಾರ ಹರಾಜಿನಲ್ಲಿ ಮಾರಲಾಗಿರುವ ವಸ್ತುಗಳೂ ಸೇರಿದಂತೆ ಇಲ್ಲಿಯವರೆಗೆ ಎಂಟು ಕೋಟಿ ರೂ ಮೊತ್ತದ ಆದಾಯ ಸಿಕ್ಕಿದೆ. ಇನ್ನೂ ಹಲವು ಚಿನ್ನ, ಬೆಳ್ಳಿ ಕಾಣಿಕೆಗಳನ್ನು ಮಾರುವುದು ಬಾಕಿ ಇದೆ.
2023ರಲ್ಲಿ ನಡೆದ ಗಣೇಶೋತ್ಸವದಲ್ಲಿ ಲಾಲ್ಬಾಗ್ಚ ರಾಜನಿಗೆ ಜನರು ಕೊಟ್ಟಿದ್ದ ಚಿನ್ನದ ಕಾಣಿಕೆಗಳು 3.2 ಕಿಲೋನಷ್ಟಿದ್ದವು. ಎಂಟು ದಿನದಲ್ಲಿ 51.6 ಕಿಲೋ ಬೆಳ್ಳಿ ವಸ್ತುಗಳನ್ನು ಭಕ್ತರು ಕೊಟ್ಟಿದ್ದರು. ಒಂದು ಕಿಲೋ ಚಿನ್ನದ ಸರ, 100 ಗ್ರಾಮ್ ಚಿನ್ನದ ಗಟ್ಟಿಯೂ ಕಾಣಿಕೆಗಳ ಪೈಕಿ ಇದ್ದವು.
2008ರಲ್ಲಿ ಲಾಲ್ಬಾಗ್ಚ ರಾಜ ಗಣೇಶೋತ್ಸವದ ಅಮೃತ ಮಹೋತ್ಸವ ಆಗಿತ್ತು. ಅಂದರೆ 75ನೇ ವಾರ್ಷಿಕೋತ್ಸವ ನಡೆದಿತ್ತು. ಆಗ ಭಕ್ತರು ಕೊಟ್ಟ ಕಾಣಿಕೆಗಳನ್ನು ಹರಾಜು ಹಾಕಿ ಮಾರಿದ ಬಳಿಕ 11.5 ಕೋಟಿ ರೂ ಆದಾಯ ಸಿಕ್ಕಿತ್ತು. ಈವರೆಗೆ ಅತಿಹೆಚ್ಚು ಆದಾಯ ಬಂದಿದ್ದು ಆ ವರ್ಷವೇ.