April 1, 2025
ಧಾರಾವಾಹಿ

ವಿವಶ…

ಧಾರವಾಹಿ 47
ತೋಮ ತೆಂಗಿನ ಮರದಿಂದ ಬಿದ್ದ ಸುದ್ದಿಯನ್ನು ನೆರೆಕರೆಯವರಿಗೆ ತಿಳಿಸಲು ಹೊರಟ ಅಪ್ಪುನಾಯ್ಕನಿಗೆ ಪಕ್ಕನೆ ತನ್ನ ದೂರದ ಬಂಧು ರಾಮನಾಯ್ಕನ ನೆನಪಾಯಿತು. ಅವನ ಮನೆ ತನ್ನ ತೋಟದ ಪಕ್ಕದಲ್ಲಿಯೇ ಇದ್ದುದರಿಂದ ಅಲ್ಲಿಗೆ ಧಾವಿಸಿದ. ರಾಮನಾಯ್ಕನು ವಿಷಯ ತಿಳಿದವನು ಕೂಡಲೇ ತನ್ನ ನೆರೆಕರೆಯ ನಾಲ್ಕೆöÊದು ನಂಬಿಗಸ್ಥರನ್ನು ಕರೆದುಕೊಂಡು ಅಪ್ಪುನಾಯ್ಕನೊಂದಿಗೆ ಸ್ಥಳಕ್ಕೆ ಬಂದ. ತೋಮನು ನೆಲಕ್ಕಪ್ಪಳಿಸುತ್ತಲೇ ಅವನ ಪ್ರಾಣಪಕ್ಷಿ ಹಾರಿ ಹೋಗಿ ದೇಹವು ರಕ್ತದ ಮಡುವಿನಲ್ಲಿ ಬಿದ್ದಿತ್ತು. ಅದನ್ನು ಕಂಡ ರಾಮನಾಯ್ಕ, ‘ಓಹೋ ಇದು ಹೋಗಿಯಾಗಿದೆ!’ ಎಂದುಕೊoಡ. ಆದರೂ ಅವನ ನಾಡಿ ಬಡಿತ ಮತ್ತು ಉಸಿರಾಟವನ್ನು ಪರೀಕ್ಷಿಸಿದ. ದೇಹವನ್ನು ನಾಲ್ಕೆöÊದು ಬಾರಿ ಅಲ್ಲಾಡಿಸಿ, ಕುಲುಕಿ ನೋಡಿದ ನಂತರ ತೋಮ ಸತ್ತಿರುವುದನ್ನು ಎಲ್ಲರಿಗೂ ಖಚಿತಪಡಿಸಿದ. ಮರುಕ್ಷಣ ಅಪ್ಪುನಾಯ್ಕನಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಅವನು ಕೂಡಲೇ ಹೆಣವನ್ನು ತೋಮನ ಶೆಡ್ಡಿಗೆ ಸಾಗಿಸಲು ಅವಸರಿಸಿದ. ಆದರೆ ರಾಮನಾಯ್ಕ ವಿಷಯದ ಗಂಭೀರತೆಯನ್ನು ಅರಿತಿದ್ದ. ಹಾಗಾಗಿ, ‘ಮಾವ ಗಡಿಬಿಡಿ ಮಾಡಬೇಡಿ. ಇದು ಪೊಲೀಸು ಕೇಸು! ಅವರು ಬಂದು ಮಹಜರು ಮಾಡುವವರೆಗೆ ಹೆಣವನ್ನು ಯಾರೂ ಮುಟ್ಟುವಂತಿಲ್ಲ. ಮಂದೇನಾದರೂ ಹೆಚ್ಚುಕಮ್ಮಿಯಾದರೆ ಎಲ್ಲರೂ ಕಂಬಿ ಎಣಿಸಿಬೇಕಾಗುತ್ತದೆ!’ ಎಂದು ಎಚ್ಚರಿಸಿದ.
ಅಪ್ಪುನಾಯ್ಕ ಇನ್ನಷ್ಟು ಕಂಗಾಲಾದ. ಅದನ್ನು ಗಮನಿಸಿದ ರಾಮನಾಯ್ಕನು, ‘ನೀವೇನೂ ಹೆದರಬೇಡಿ ಮಾವ. ನಾನಿದ್ದೇನೆ!’ ಎಂದವನು ‘ನೋಡೀ ನಾವು ಪೊಲೀಸ್ ಸ್ಟೇಷನ್ನಿಗೆ ಹೋಗಿ ಬರುವತನಕ ಈ ಸುದ್ದಿಯನ್ನು ಯಾರಿಗೂ ತಿಳಿಸಬಾರದು!’ ಎಂದು ಎಲ್ಲರಿಗೂ ತಾಕೀತು ಮಾಡಿದ. ಬಳಿಕ ಕುಕ್ಕರಗಾಲಲ್ಲಿ ಕುಳಿತು ಶೂನ್ಯದತ್ತ ದಿಟ್ಟಿಸುತ್ತಿದ್ದ ಅಪ್ಪುನಾಯ್ಕನ ಬೆನ್ನು ತಟ್ಟುತ್ತ, ‘ಅಯ್ಯೋ ಮಾವಾ… ನೀವೆಂತದು ಇಷ್ಟೊಂದು ಹೆದರುವುದು…? ನಾವೇನು ಅವನನ್ನು ಕೊಲೆ ಮಾಡಿದ್ದೇವಾ? ಇದೊಂದು ಅಪಘಾತ ಅಷ್ಟೇ. ಏಳಿ, ಮನೆಗೆ ಹೋಗಿ ಸ್ವಲ್ಪ ದುಡ್ಡು ಹಿಡಿದುಕೊಳ್ಳಿ. ಮುಂದಿನದ್ದನ್ನು ನಾನು ನೋಡಿಕೊಳ್ಳುತ್ತೇನೆ!’ ಎಂದು ಗತ್ತಿನಿಂದ ಆಜ್ಞಾಪಿಸಿದ. ಅದರಿಂದ ತುಸು ಚೇತರಿಸಿಕೊಂಡ ಅಪ್ಪುನಾಯ್ಕನನ್ನೂ, ಇನ್ನಿಬ್ಬರನ್ನೂ ಕರೆದುಕೊಂಡು ಶಿವಕಂಡಿಕೆಯ ಪೊಲೀಸ್ ಸ್ಟೇಷನ್ನಿಗೆ ಹೊರಟ.
ರಾಮನಾಯ್ಕ ಠಾಣೆಗೆ ಅಡಿಯಿಡುವಾಗ ರೈಟರ್ ರಾಜಾರಾಮನು ಇನ್ಸ್ಪೆಕ್ಟರ್ ಸಾಹೇಬರ ಮೇಜು, ಕುರ್ಚಿಗಳನ್ನು ಒಪ್ಪ ಓರಣವಾಗಿಡುವುದರಲ್ಲಿ ಮಗ್ನನಾಗಿದ್ದ. ಅವನು ಎರಡು ವರ್ಷಗಳ ಹಿಂದೆ ಅನಂತೂರಿನಿoದ ವರ್ಗವಾಗಿ ಬಂದಿದ್ದವನು ಶಿವಕಂಡಿಕೆಯವನೇ ಆಗಿದ್ದರಿಂದಲೂ, ಬೇರೊಂದು ಕಾರಣದಿಂದಲೂ ರಾಮನಾಯ್ಕನಿಗೆ ಅವನ ಪರಿಚಯ ಬಹಳ ಚೆನ್ನಾಗಿತ್ತು. ಆದರೆ ಅಪ್ಪುನಾಯ್ಕ ನಡುಗುತ್ತ ಒಳಗಡಿಯಿಟ್ಟ. ‘ಓಹೋ, ರಾಮನಾಯ್ಕರು ಏನು ಅಪರೂಪಕ್ಕೆ ಈ ಕಡೆಗೇ…?’ ಎಂದು ರಾಜಾರಾಮ ಮಂದಹಾಸ ಬೀರುತ್ತ ಪ್ರಶ್ನಿಸಿದ. ರಾಮನಾಯ್ಕ ಸಾವಕಾಶವಾಗಿ ಒಳಗೆ ಬಂದು, ನಡೆದ ಘಟನೆಯನ್ನು ಸವಿವರವಾಗಿ ಅವನಿಗೆ ತಿಳಿಸಿದ. ಆದರೆ ರಾಜಾರಾಮ ಆ ವಿಷಯವನ್ನು ತನ್ನದೇ ದೃಷ್ಟಿಕೋನದಿಂದ ತುಸುಹೊತ್ತು ಮಥಿಸಿದ. ಆಗ ಅವನಿಗೆ, ‘ತೋಮ ಕುಡಿದಿದ್ದ!’ ಎಂಬ ಮಾತು ನಿರಾಶೆ ಮೂಡಿಸಿತು. ಹೊಡೆತ ಬಡಿತದಿಂದ ಆದ ಆಕಸ್ಮಿಕ ಸಾವು ಅಥವಾ ಕೊಲೆಯಾದರೂ ಆಗಿದ್ದರೆ ಏನಾದರೂ ಸಂಪಾದಿಸಬಹುದಿತ್ತಲ್ಲ…! ಎಂದುಕೊoಡವನು ತುಸು ತಣ್ಣಗಾದ. ಆದರೆ ‘ತೋಮ ಕುಡಿದಿದ್ದ!’ ಎಂಬುದನ್ನು ಮತ್ತೊಮ್ಮೆ ಜ್ಞಾಪಿಸಿಕೊಂಡವನಿಗೆ ಪಕ್ಕನೆ ಏನೋ ಹೊಳೆಯಿತು. ಮರುಕ್ಷಣ ತಟ್ಟನೆ ಗೆಲುವಾದವನು, ‘ಅಲ್ಲ ನಾಯ್ಕರೇ, ಯಾರಾದರೂ ಮೂಗಿನ ಮಟ್ಟ ಕುಡಿದವರನ್ನು ಮರ ಹತ್ತಲು ಬಿಡುತ್ತಾರಾ ಹೇಳಿ? ಕಾನೂನಿನ ಪ್ರಕಾರ ಅದು ಕೊಲೆಯೇ ಆಗುತ್ತದಲ್ಲ…!’ ಎಂದು ಅಡಿಗಣ್ಣಿಂದ ಅಪ್ಪುನಾಯ್ಕನತ್ತ ದಿಟ್ಟಿಸುತ್ತ ಅಂದ. ಅಷ್ಟು ಕೇಳಿದ ಅಪ್ಪುನಾಯ್ಕ ಕುಗ್ಗಿ ಹೋದ. ಆದರೆ ಮುಂಬೈಯಲ್ಲಿ ದೊಡ್ಡ ಮಟ್ಟದ ಲೇಡಿಸ್ ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನು ನಡೆಸುತ್ತಿದ್ದ ಖ್ಯಾತ ಉದ್ಯಮಿ ರಾಜಶೇಖರ ಶೆಟ್ಟರು ಆಗಷ್ಟೇ ಶಿವಕಂಡಿಕೆಯಲ್ಲೂ ಪ್ರಪ್ರಥಮವಾಗಿ ಸ್ಥಾಪಿಸಿದ್ದ, ‘ಅಮರೇಶ ಲೇಡಿಸ್ ಬಾರ್ ಅಂಡ್ ರೆಸ್ಟೋರೆಂಟ್’ ಎಂಬ ಭೋಗವಿಲಾಸದ ದಂಧೆಯಲ್ಲಿ ಪ್ರಮುಖ ಮ್ಯಾನೇಜರ್ ಹುದ್ದೆಯಲ್ಲಿದ್ದ ರಾಮನಾಯ್ಕನಿಗೆ ಶಿವಕಂಡಿಕೆಯ ಬಹುತೇಕ ಪೊಲೀಸರೊಡನೆ ಸಲುಗೆಯ ಸಂಬoಧವಿತ್ತು.
ಶೆಟ್ಟರ ಹೊಟೇಲಿಗೆ ಮಾಮೂಲಿ ವಸೂಲಿಗೂ, ಕುಡಿತಕ್ಕೂ ಗುಂಪು ಗುಂಪಾಗಿ ಆಗಮಿಸುತ್ತಿದ್ದ ಹಲವು ಪೊಲೀಸರನ್ನು ರಾಮನಾಯ್ಕ ಯಜಮಾನರ ಅಪ್ಪಣೆಯಂತೆ ಚೆನ್ನಾದ ಆದರಾತಿಥ್ಯದಿಂದ ಉಪಚರಿಸಿ ಕಳುಹಿಸುತ್ತಿದ್ದ. ಅಂಥ ಸಲುಗೆಯಿಂದಲೇ ಇವತ್ತು ರಾಜಾರಾಮನನ್ನು ಸ್ವಲ್ಪ ಮರೆಗೆ ಕರೆದವನು ವ್ಯವಹಾರ ಕುದುರಿಸಲು ಪ್ರಯತ್ನಿಸಿದ. ‘ನೋಡಿ ರಾಜಣ್ಣ, ಅಪ್ಪುನಾಯ್ಕರು ನನ್ನ ಹತ್ತಿರದ ಸಂಬoಧಿ ಮಾತ್ರವಲ್ಲದೇ ಮಕ್ಕಳು ಮರಿ ಯಾರೂ ಇಲ್ಲದಂಥ ಮುದುಕ ಪಾಪ! ಅಂಥವರನ್ನು ಕೊಲೆ ಗಿಲೆ ಅಂತ ಹೆದರಿಸುವುದು ಸರಿಯಾ ಹೇಳಿ? ಬೇರೇನಾದರೂ ಪರಿಹಾರವಿದ್ದರೆ ನನಗೆ ತಿಳಿಸಿ ಅವರನ್ನು ಕಾಪಾಡಬೇಕು ನೀವು!’ ಎಂದ ಮೃದುವಾಗಿ. ಆದರೆ ರಾಜಾರಾಮ ತನ್ನ ಇಪ್ಪತ್ತು ವರ್ಷಗಳ ಸರ್ವೀಸಿನಲ್ಲಿ ಇಂಥ ಅದೆಷ್ಟು ಕೇಸುಗಳನ್ನು ಕಂಡಿದ್ದನೋ ಮತ್ತು ಅವುಗಳಲ್ಲಿ ಅದೆಷ್ಟನ್ನು ವ್ಯವಸ್ಥಿತವಾಗಿ ನಿಭಾಯಿಸಿದ್ದನೋ ಎಂಬುದು ರಾಮನಾಯ್ಕನಿಗೇನು ಗೊತ್ತು? ಆದ್ದರಿಂದ ಅವನು ರಾಮನಾಯ್ಕನ ಮಾತಿಗೆ ಕನಿಕರಗೊಂಡoತೆ ನಟಿಸುತ್ತ, ‘ಓಹೋ ಹೌದಾ ನಾಯ್ಕರೇ…! ಹಾಗಾದರೆ ಸರಿ. ಏನಾದರೂ ಮಾಡುವ. ಆದರೂ ಕಾನೂನು, ಕೋರ್ಟು ಅಂತ ಒಂದಿದೆಯಲ್ಲ ಮಾರಾಯ್ರೇ! ಅದಕ್ಕೆ ನಾವು ಸರಿಯಾದ ಮಾಹಿತಿ, ಪುರಾವೆಗಳನ್ನೂ ಒದಗಿಸಬೇಕಾಗುತ್ತದಲ್ಲ. ಇಲ್ಲವಾದರೆ ನಾಳೆ ಅದು ನಮ್ಮನ್ನೂ ಪ್ರಶ್ನಿಸದೆ ಬಿಡುವುದಿಲ್ಲ! ಯಾವುದಕ್ಕೂ ಸಾಹೇಬರು ಬಂದುಕೊಳ್ಳಲಿ. ನಾನೇ ಖುದ್ದ್ ಆಗಿ ಅವರಿಗೆ ಈ ವಿಷಯದ ಬಗ್ಗೆ ಶಿಫಾರಸು ಮಾಡುತ್ತೇನೆ. ನೀವು ನಮಗೆ ಬೇಕಾದವರಲ್ಲ ಮಾರಾಯ್ರೇ. ನಿಮ್ಮನ್ನು ಬಿಡಲಿಕ್ಕಾಗುತ್ತದಾ? ಇಂಥ ಕೇಸುಗಳಿಗೆಲ್ಲ ನಮ್ಮ ಹಿಂದಿನ ಸಂಕಪ್ಪ ಸಾಹೇಬರೇ ಫಿಟ್ ಇದ್ದರು ನೋಡಿ. ಅವರ ಬಗ್ಗೆ ನಿಮಗೂ ಗೊತ್ತುಂಟಲ್ಲವಾ. ಬೆಣ್ಣೆಯಂಥ ಮನುಷ್ಯ. ಆದರೆ ಅವರು ಇತ್ತೀಚೆಗಷ್ಟೇ ವರ್ಗವಾಗಿ ಹೋದರು. ಈಗಿನ ಸಾಹೇಬರು ತಮಿಳುನಾಡಿನವರಂತೆ. ಬಹಳ ಕಠೋರ ಮನುಷ್ಯ. ಬೇಗನೆ ಯಾವುದಕ್ಕೂ ಜಗ್ಗುವ ಆಸಾಮಿಯಲ್ಲ. ಆದರೂ ಅವರದ್ದೊಂದು ವೀಕ್‌ನೆಸ್ ಇದೆ. ಇಬ್ಬರು ಹೆಂಡಿರ ದೊಡ್ಡ ಸಂಸಾರ ಅವರದ್ದು. ಹಾಗಾಗಿ ಅವರಿಗೆ ದಿನನಿತ್ಯ ಸಾವಿರ ತರಲೆ ತಾಪತ್ರಯಗಳು! ಅದಕ್ಕೆ ನೀವು ಸ್ವಲ್ಪ ಅವರ ಕೈಬಿಸಿ ಮಾಡಿ ನೋಡಿ. ಖಂಡಿತಾ ಕೆಲಸವಾಗುತ್ತದೆ!’ ಎಂದು ರಾಜಾರಾಮನು ಸಾಗುವಾನಿ ಮರದ ವಿಶಾಲ ಮೇಜನ್ನು ತಿಕ್ಕಿ ತಿಕ್ಕಿ ಒರೆಸುತ್ತ ರಾಮನಾಯ್ಕನಿಗೆ ಸಲಹೆ ನೀಡಿದ. ‘ಓಹೋ… ಹೌದಾ ರಾಮಣ್ಣಾ? ಅದು ಆಗಬಹುದು. ಆ ವ್ಯವಸ್ಥೆಯನ್ನು ನಾನು ಮಾಡಿಸುತ್ತೇನೆ!’ ಎಂದು ರಾಮನಾಯ್ಕ ಭರವಸೆಯಿತ್ತ. ಅಷ್ಟರಲ್ಲಿ ಇನ್ಸ್ಪೆಕ್ಟರ್ ಮುನಿಸ್ವಾಮಿಯವರ ಆಗಮನವಾಯಿತು.
ಸಾಹೇಬರನ್ನು ಕಂಡ ಪೇದೆಗಳೂ, ರಾಜಾರಾಮನೂ ಅಲ್ಲಿನವರೆಲ್ಲ ಬೆಚ್ಚಿ ಬೀಳುವಂತೆ ಅವರಿಗೊಂದು ಸೆಲ್ಯೂಟ್ ಹೊಡೆದು ಬದಿಗೆ ಸರಿದು ನಿಂತರು. ಅದಕ್ಕೆ ತಕ್ಕನಾಗಿ ಅವರೂ ತಮ್ಮ ದಪ್ಪ ಕೊರಳನ್ನಾಡಿಸುತ್ತ ಕೋಣೆಗೆ ನಡೆದು ಆಸೀನರಾದರು. ಅದನ್ನು ಗಮನಿಸಿದ ರಾಜಾರಾಮನು ನರಿಯಂಥ ನಮ್ರತೆಯಿಂದ ಅವರ ಕೋಣೆ ಹೊಕ್ಕವನು, ‘ಸಾರ್ ಒಂದು ಕೇಸು ಬಂದಿದೆ. ಮರದಿಂದ ಬಿದ್ದು ಸತ್ತದ್ದಂತೆ…!’ ಎನ್ನುತ್ತ ಅವರನ್ನು ದಿಟ್ಟಿಸಿ ನೋಡಿ ಎಂಥದ್ದೋ ಭಾವವನ್ನು ಸೂಸುತ್ತ ನಕ್ಕ. ಸಾಹೇಬರು ಅವನ ಮಾತು ಮತ್ತು ನಗುವನ್ನು ಅರ್ಥೈಯಿಸಿಕೊಂಡವರು ತಟ್ಟನೆ ಹುಬ್ಬುಗಂಟಿಕ್ಕಿ ಅಪ್ಪುನಾಯ್ಕನ ಬಳಗವನ್ನು ಒಳಗೆ ಕರೆಯಲು ಸೂಚಿಸಿದರು. ಅಪ್ಪುನಾಯ್ಕ ಕಂಪಿಸುತ್ತ ರಾಜಾರಾಮನೊಂದಿಗೆ ಬಂದು ಸಾಹೇಬರ ಮುಂದೆ ನಿಂತುಕೊoಡ. ಆಗ ರಾಜಾರಾಮ, ರಾಮನಾಯ್ಕ ತನಗೆ ಹೇಳಿದ ಕಥೆಯನ್ನು ಸಾಹೇಬರಿಗೆ ವಿವರಿಸಿದ. ಅಷ್ಟು ಕೇಳಿದ ಸಾಹೇಬರು, ‘ಅಲ್ರೀ, ನೀವೆಲ್ಲ ಎಂಥ ಕೆಲಸ ಮಾಡಿದ್ದೀರಿ ಅಂತ ಗೊತ್ತಿದ್ಯೇನ್ರೀ ನಿಮ್ಗೆ…? ಯಾವನೋ ಕುಡುಕನನ್ನು ಮರ ಹತ್ತಿಸಿ ಸಾಯಿಸಿಬಿಟ್ರಲ್ಲರೀ ಬುದ್ಧಿ ಬೇಡವೇನ್ರೀ!’ ಎಂದು ಕೆಟ್ಟದಾಗಿ ಗದರಿಸಿದರು. ಮೊದಲೇ ಮುದಿತನದಿಂದ ಕುಬ್ಜನಾಗಿದ್ದ ಅಪ್ಪುನಾಯ್ಕ ಇನ್ನಷ್ಟು ಮುದುರಿದವನು, ‘ಅ…ಅ…ಅದು ಸಾಹೇಬರೇ ಅವನು ಎಷ್ಟು ಕುಡಿದರೂ ಗಟ್ಟಿಮುಟ್ಟಾದ ಆಳು! ಯಾವತ್ತೂ ಕುಡಿದುಕೊಂಡೇ ಕೆಲಸ ಮಾಡುವವನು. ಬೇಕಿದ್ದರೆ ನಮ್ಮೂರಿನ ಯಾರನ್ನಾದರೂ ವಿಚಾರಿಸಿ ನೋಡಿ. ಆದರೆ ಇವತ್ತು ನನ್ನ ಗ್ರಾಚಾರವೇ ಕೆಟ್ಟಿತು. ಅದಕ್ಕೇ ಹೀಗಾಯಿತು. ನೀವು ನನ್ನ ಪಾಲಿನ ದೇವರು ಅಂತ ಭಾವಿಸಿದ್ದೇನೆ ಸಾಹೇಬರೇ. ಹೇಗಾದರೂ ಮಾಡಿ ಈ ಸಂಕಷ್ಟದಿoದ ನನ್ನನ್ನು ಪಾರುಮಾಡಬೇಕು ತಾವು!’ ಎಂದು ಬಾಗಿ ಕೈಮುಗಿದ. ಆಹೊತ್ತು ಅವನ ಪೇಲವ ಕಣ್ಣುಗಳಲ್ಲಿ ನೀರು ತೊಟ್ಟಿಕ್ಕಿತು.
ಹಣ್ಣು ಹಣ್ಣು ಮುದುಕನೊಬ್ಬ ತಮ್ಮೆದುರು ನಿಂತು ಕಣ್ಣೀರಿಟ್ಟಿದ್ದನ್ನು ಕಂಡ ಸಾಹೇಬರಿಗ್ಯಾಕೋ ಇರುಸುಮುರುಸಾಯಿತು. ಹಾಗಾಗಿ, ‘ಸರಿ, ಸರಿ. ಅಳಬೇಡಿ. ಲೋ ರಾಜಾರಾಮಾ ಇವರನ್ನು ಹೊರಗೆ ಕರೆದೊಯ್ದು ಕೂರಿಸೋ…!’ ಎಂದವರು, ‘ಓಹೋ ರಾಮನಾಯ್ಕ್ ನೀನೇನಯ್ಯ ಇಲ್ಲೀ…?’ ಎಂದು ಅವನನ್ನು ಆಗಷ್ಟೇ ಗಮನಿಸಿದವರಂತೆ ನಕ್ಕು ಪ್ರಶ್ನಿಸಿದರು. ರಾಮನಾಯ್ಕ ಒಮ್ಮೆಲೆ ಉಬ್ಬಿದವನು ರಪ್ಪನೆ ತನ್ನ ಹಿಂದಿದ್ದ ಸಂಗಡಿಗರತ್ತ ತಿರುಗಿ ತನ್ನ ಪ್ರಭಾವವನ್ನು ಕಣ್ಣಿನಲ್ಲೇ ಅವರಿಗೆ ಸೂಚಿಸುತ್ತ ಹೊರಗೆ ಹೋಗುವಂತೆ ಸನ್ನೆ ಮಾಡಿದ. ಬಳಿಕ, ‘ಏನಿಲ್ಲ ಸಾರ್ ಅಪ್ಪುನಾಯ್ಕ ನನ್ನ ಮಾವ. ತುಂಬಾ ಒಳ್ಳೆಯ ಮನುಷ್ಯ ಸಾರ್. ತಾವು ಅವರ ಮೇಲೆ ಕರುಣೆ ತೋರಿಸಬೇಕು. ರಾಜಾರಾಮಣ್ಣ ಎಲ್ಲ ಹೇಳಿದ್ದಾರೆ. ತಮ್ಮ ಇಚ್ಛೆ ಏನಿದೆಯೋ ಅದನ್ನು ಚಾಚೂತಪ್ಪದೆ ಹೊಂದಿಸುವ ಜವಾಬ್ದಾರಿ ನನ್ನದು!’ ಎಂದು ಭಯಮಿಶ್ರಿತ ಗೌರವ ಸೂಸುತ್ತ ವಿನಂತಿಸಿದ.
‘ಸರಿ, ಸರಿ. ಅದನ್ನೆಲ್ಲ ಆಮೇಲೆ ನೋಡಿಕೊಳ್ಳೋಣ. ಈಗ ಹಣವೆಲ್ಲಿದೆ…?’ ಎಂದು ಬಾಯಿ ತಪ್ಪಿ ಅಂದವರು, ‘ಥತ್! ಹಾಳಾದ್ದು!’ ಎಂದು ತಲೆಕೊಡವಿಕೊಂಡು, ‘ಹೆಣವೆಲ್ಲಿದೆ…?’ ಎಂದರು ಗಂಭೀರವಾಗಿ.
‘ಅದು ಬಿದ್ದಲ್ಲೇ ಇದೆ ಸಾರ್. ನಾವ್ಯಾರೂ ಮುಟ್ಟಲಿಲ್ಲ!’
‘ಹೌದಾ ಸರಿ. ಊರಲ್ಲಿ ಸುದ್ದಿ ಮಾಡಿದ್ದೀರಾ…?’
‘ಇಲ್ಲ, ಇಲ್ಲ ಸಾರ್. ಯಾರೀಗೂ ಗೊತ್ತು ಮಾಡಿಲ್ಲ!’
‘ಒಳ್ಳೆಯದಾಯ್ತು, ಹೊರಡೋಣ!’ ಎಂದ ಸಾಹೇಬರು ಎಲ್ಲರನ್ನೂ ಜೀಪು ಹತ್ತಿಸಿಕೊಂಡು ತೋಮನ ಸಾವಿನ ಮಹಜರಿಗೆ ಹೊರಟರು.


ಪೊಲೀಸ್ ಜೀಪು ಅಪ್ಪುನಾಯ್ಕನ ಮನೆಗೆ ತಲುಪುವ ಹೊತ್ತಿಗೆ ಮಧ್ಯಾಹ್ನ ಸಮೀಪಿಸಿತ್ತು. ಅಲ್ಲಿ ತೋಮನ ಹೆಣವು ಹೇಗೆ ಬಿದ್ದಿತ್ತೋ ಹಾಗೆಯೇ ಇತ್ತು. ಹೆಣದ ತಲೆ ಒಡೆದು ಹರಿದಿದ್ದ ರಕ್ತವು ಕಪ್ಪಾಗಿ ಡಾಂಬರು ಚೆಲ್ಲಿದಂತೆ ಹೆಪ್ಪುಗಟ್ಟಿತ್ತು. ಸಾವಿರಾರು ದೊಡ್ಡ ನೊಣಗಳು ಅದನ್ನು ಮುತ್ತಿಕೊಂಡು ಮೊಟ್ಟೆಗಳನ್ನಿಡುವ ಧಾವಂತದಲ್ಲಿ ಹೆಣದ ಸುತ್ತಲೂ ಗ್ಞೂಂಗುಟ್ಟುತ್ತ ಹಾರಾಡುತ್ತಿದ್ದವು. ಅವುಗಳ ರೆಕ್ಕೆಗಳ ಸಾಮೂಹಿಕ ಸದ್ದು ನೀರಸ ಮೌನವನ್ನು ಸೀಳಿ ಧ್ವನಿಸುತ್ತಿತ್ತು. ಹೆಣದ ಸ್ವಲ್ಪ ದೂರದಲ್ಲಿ ಸಂಪಿ ಮತ್ತು ರಾಮನಾಯ್ಕನ ತಾಯಿ ಅಮ್ಮು ಕುಳಿತುಕೊಂಡು ಎಂಥದೋ ವಿಷಾದದ ಮಾತುಕತೆಯಲ್ಲಿ ತೊಡಗಿದ್ದರು. ಸಂಪಿ ನಡುನಡುವೆ ಕಂಗಿನ ಹಾಳೆಯೊಂದರಿoದ ನೊಣಗಳನ್ನು ಓಡಿಸುತ್ತ ಇದ್ದಳು. ಅಷ್ಟರಲ್ಲಿ ಪೊಲೀಸು ಜೀಪು ತಮ್ಮ ತೋಟ ಪ್ರವೇಶಿಸಿದ್ದನ್ನು ಕಂಡವಳಿಗೆ ತೀವ್ರ ಭಯವೆದ್ದಿತು. ಹಿಂದೆ ಕೆಲವು ಬಾರಿ ಅಬಕಾರಿ ಅಧಿಕಾರಿಗಳು ಮನೆಗೆ ನುಗ್ಗಿ ಸಾರಾಯಿ ಜಾಲಾಡಿಸುತ್ತ ಕೈಗೆ ಸಿಕ್ಕಿದ್ದನ್ನೂ, ಒಂದಿಷ್ಟು ದುಡ್ಡನ್ನೂ ಕಿತ್ತುಕೊಂಡು ಕೇಸು ದಾಖಲಿಸುವಲ್ಲಿ ವಿನಾಯಿತಿ ತೋರುತ್ತಿದ್ದುದು ಇತ್ತಾದರೂ ಈವರೆಗೆ ಅವಳ ಕುಟುಂಬವು ಪೊಲೀಸರ ರಗಳೆಗೆ ಸಿಲುಕಿದ್ದಿಲ್ಲ. ಹಾಗಾಗಿ, ‘ದೇವರೇ ಇವರೂ ಬಂದುಬಿಟ್ಟರಾ…? ಇನ್ನೇನಾಗುವುದೋ…? ಓ, ಮಹಿಷಮರ್ದಿನಿಯಮ್ಮಾ…! ನಿನ್ನ ಸೇವೆಗೆಂದೇ ಅಲ್ಲವಾ ನಾವು ಅವನನ್ನು ಮರ ಹತ್ತಿಸಿದ್ದು! ಈಗ ನೀನೇ ಕೈಬಿಟ್ಟರೆ ನಮ್ಮ ಗತಿ ಯಾರು ತಾಯೀ…? ಕಾಪಾಡಮ್ಮಾ!’ ಎಂದು ಅಳುತ್ತ ಬೇಡಿಕೊಂಡಳು.
ಸಾಹೇಬರು ಜೀಪಿನಿಂದ ಇಳಿದು ಬಂದವರು ನಿಯಮದಂತೆ ತೋಮನ ಹೆಣದ ಮುಂದೆ ಟೋಪಿ ಕಳಚಿ ಕಂಕುಲಕ್ಕೆ ಸಿಲುಕಿಸಿಕೊಂಡು ಕ್ಷಣಕಾಲ ಮೌನ ಗೌರವಾರ್ಪಣೆ ಸಲ್ಲಿಸಿದರು. ರೈಟರ್ ರಾಜಾರಾಮನೂ, ಪೇದೆಯೂ ಸಾಹೇಬರನ್ನು ಅನುಸರಿಸಿದರು. ಸಾಹೇಬರು ರಾಜಾರಾಮನನ್ನು ಕರೆದು ಮಹಜರಿಗೆ ಸೂಚಿಸಿದರು. ರಾಮನಾಯ್ಕನು ಕುರ್ಚಿ ತಂದು ಅವರನ್ನು ಕುಳ್ಳಿರಿಸಿದ. ಅವನ ಸಂಗಡಿಗರಲ್ಲೊಬ್ಬ ತೆಂಗಿನ ಮರ ಹತ್ತಿ ಸೀಯಾಳ ಕೊಯ್ಯಲು ಮುಂದಾದ. ಅದನ್ನು ಗಮನಿಸಿದ ಸಾಹೇಬರು, ‘ಹೇ, ಹೇ…! ಸ್ವಲ್ಪ ಸಣ್ಣ ಮರ ಹತ್ತೋ ಮಾರಾಯಾ…! ಆಮೇಲೆ ನೀನೂ ಬಿದ್ದು ಸತ್ತರೆ ಅಪ್ಪುನಾಯ್ಕನೊಂದಿಗೆ ನಮ್ಮ ಕಥೆನೂ ಅಷ್ಟೇ ಮತ್ತೇ!’ ಎಂದು ರಾಜಾರಾಮ ಮತ್ತು ತಮ್ಮ ಪೇದೆ ಮಾತ್ರ ಕೇಳಿಸುವಂತೆ ಹಾಸ್ಯ ಮಾಡಿ ನಕ್ಕರು. ಅದಕ್ಕವರೂ ಕಳ್ಳನಗೆ ಬೀರುತ್ತ ಸಾಹೇಬರ ತಮಾಷೆಗೊಂದು ಮೌಲ್ಯ ತಂದುಕೊಟ್ಟರು. ಆದರೆ ಸಾಹೇಬರ ಸಂದರ್ಭೋಚಿತವಲ್ಲದ ಆ ಹಾಸ್ಯವು ಬೊಂಡ ಕೊಯ್ಯುವವನನ್ನು ನೋಯಿಸಿತು. ಆದರೆ ಅವನು ಪೊಲೀಸರ ಭಯದಿಂದ ಸಣ್ಣಗೆ ಹಲ್ಲು ಕಿರಿಯುತ್ತ ಮರ ಹತ್ತಿದವನು ಕೆಲವು ಸೀಯಾಳಗಳನ್ನು ಕೊಯ್ದು ತಂದು ಮೂವರಿಗೂ ಅಭಿಷೇಕ ಮಾಡಿದ. ಮುಂದಿನ ಅರ್ಧಗಂಟೆಯಲ್ಲಿ ಮಹಜರು ಮುಗಿಯಿತು. ಸಾಹೇಬರು ಉಳಿದವರನ್ನು ಆಚೆಗೆ ಕಳುಹಿಸುವಂತೆ ಆಜ್ಞಾಪಿಸಿ ಅಪ್ಪುನಾಯ್ಕನನ್ನೂ, ರಾಮನಾಯ್ಕನನ್ನೂ ಹತ್ತಿರ ಕರೆದರು. ‘ನೋಡಿ ನಾಯ್ಕರೇ, ಹೆಣದ ಬಾಯಿಯಲ್ಲಿ ಸಾರಾಯಿ ವಾಸನೆ ಇನ್ನೂ ಆರಿಲ್ಲ. ಆದ್ದರಿಂದ ಅವನು ಮರ ಹತ್ತುವ ಕೆಲವೇ ಹೊತ್ತಿನ ಮುಂಚೆ ಮೂಗಿನ ಮಟ್ಟ ಕುಡಿದಿದ್ದ ಅಂತ ಸಾಬೀತಾಗುತ್ತದೆ. ಮಹಜರ್‌ನಲ್ಲೂ ನಾವು ಹಾಗೇ ದಾಖಲಿಸಬೇಕಾಗುತ್ತದೆ!’ ಎಂದು ಗಂಭೀರವಾಗಿ ಹೇಳಿ ಅಪ್ಪುನಾಯ್ಕನನ್ನು ದಿಟ್ಟಿಸಿ ನೋಡಿ ಮತ್ತೇನೋ ಯೋಚನೆಗೆ ಬಿದ್ದರು.
ಅಷ್ಟು ಕೇಳಿದ ಅಪ್ಪುನಾಯ್ಕನಿಗೆ ತೀವ್ರ ಚಿಂತೆಗಿಟ್ಟುಕೊoಡಿತು. ಅವನು ದೈನ್ಯದಿಂದ ರಾಮನಾಯ್ಕನನ್ನು ದಿಟ್ಟಿಸಿದ. ಅವನು ಕಣ್ಣಿನಲ್ಲೇ ಸುಮ್ಮನಿರುವಂತೆ ಸನ್ನೆ ಮಾಡಿದವನು ಮೆಲುದನಿಯಲ್ಲಿ, ‘ಸಾಹೇಬರೇ ದಯವಿಟ್ಟು ಹಾಗೆ ಬರೆಯಬೇಡಿ. ಪಾಪದ ಮುದುಕ ಇನ್ನೆಷ್ಟು ಕಾಲ ಬದುಕಿಯಾನು? ಅವನ ಉಳಿದ ನಾಲ್ಕು ದಿವಸವನ್ನು ಜೈಲಿನಲ್ಲಿ ಕೊಳೆಸುವುದು ಸರಿಯಾ ಹೇಳಿ? ತಾವು ದೊಡ್ಡವರು. ಅವರನ್ನು ಕಾಪಾಡುವುದು ಬಿಡುವುದು ತಮ್ಮ ಕೈಯಲ್ಲೇ ಇದೆ. ದಯೆ ತೋರಿಸಬೇಕು!’ ಎಂದು ಹೇಳಿ ನಮ್ರವಾಗಿ ಕೈಕಟ್ಟಿ ನಿಂತ. ಅವನ ಮಾತು ಸಾಹೇಬರಿಗೂ ಹೌದೆನಿಸಿತು. ಸ್ವಲ್ಪಹೊತ್ತು ಯೋಚಿಸಿದವರು, ‘ನೋಡಿ ರಾಜಾರಾಮ್, ಇದು ಕೆಲಸದ ವೇಳೆಯಲ್ಲಿ ನಡೆದ ಆಕಸ್ಮಿಕ ಸಾವು ಅಂತ ಬರೆಯಿರಿ!’ ಎಂದು ಆಜ್ಞಾಪಿಸಿದರು. ಅಷ್ಟು ಕೇಳಿದ ಅಪ್ಪುನಾಯ್ಕನ ಮುಖದಲ್ಲಿ ಮರಳಿ ಜೀವಕಳೆ ತುಂಬಿದರೆ ರಾಮನಾಯ್ಕನ ಮುಖ ಗೆಲುವಿನಿಂದ ಹೊಳೆಯಿತು. ಮಹಜರು ಮತ್ತದರ ಬರವಣಿಗೆಯ ಕೆಲಸ ಮುಗಿಯುತ್ತ ರಾಮನಾಯ್ಕನು ಮುಂದಿನ ವ್ಯವಹಾರಕ್ಕೆ ಸಾಹೇಬರನ್ನೂ, ರಾಜಾರಾಮನನ್ನೂ ಅಪ್ಪುನಾಯ್ಕನ ಮನೆಗೆ ಕರೆದೊಯ್ದ. ಇತ್ತ ತನಗೂ ಒಂದಿಷ್ಟು ಸಿಗುವುದೆಂಬ ಆಸೆಯಲ್ಲಿದ್ದ ಪೇದೆಯೊಬ್ಬ ಹೆಣ ಕಾಯುತ್ತ ಕುಳಿತ. ಸಾಹೇಬರನ್ನು ಅಪ್ಪುನಾಯ್ಕನ ಮನೆಯಂಗಳದಲ್ಲಿ ಕುಳ್ಳಿರಿಸಿದ ರಾಮನಾಯ್ಕನು ರಾಜಾರಾಮನನ್ನು ಕರೆದುಕೊಂಡು ಹಿತ್ತಲಿಗೆ ಹೋಗಿ ವ್ಯವಹಾರ ಕುದುರಿಸತೊಡಗಿದ. ಸ್ವಲ್ಪಹೊತ್ತಿನ ಇಬ್ಬರ ಗಂಭೀರ ಚರ್ಚೆ ಮತ್ತು ಚೌಕಾಶಿಯ ನಂತರ ಸಾಹೇಬರಿಗೆ ಹದಿನೈದು ಸಾವಿರ ಹಾಗು ತನಗೂ ಪೇದೆಗೂ ಎರಡೂವರೆ, ಎರಡೂವರೆ ಸಾವಿರ; ಒಟ್ಟು ಇಪ್ಪತ್ತು ಸಾವಿರವೆಂದು ಒಪ್ಪಂದವಾಯಿತು. ಅದಕ್ಕೊಪ್ಪಿದ ರಾಮನಾಯ್ಕನು ಅಪ್ಪುನಾಯ್ಕನ ಮನೆಯೊಳಗೆ ಹೋಗಿ ನಿಂತುಕೊoಡು ಸಾಹೇಬರೊಂದಿಗೆ ಮಾತಾಡುತ್ತಿದ್ದ ಅವನನ್ನು ಧ್ವನಿಯೆತ್ತಿ ಕರೆದ. ಅಪ್ಪುನಾಯ್ಕ ಕೂಡಲೇ ಎದ್ದು ಬಂದ.
‘ನಿಮ್ಮ ಈ ಕಿತಾಪತಿಯಿಂದ ನನಗಂತೂ ಸಾಕಾಗಿ ಹೋಯ್ತು ಮಾವ! ನಿಮಗೊಂದು ಊರಲ್ಲಿ ಬೇರೆ ಯಾರೂ ಸಿಗಲಿಲ್ಲಾಂತ ಆ ಕುಡ್ಚೆಲನನ್ನು ಮರ ಹತ್ತಿಸಿ ಎಲ್ಲರನ್ನೂ ಲಗಾಡಿ ತೆಗೆದುಬಿಟ್ಟಿರಿ!’ ಎಂದು ಜಿಗುಪ್ಸೆಯಿಂದ ಮಾತಾಡಿದ. ಅಷ್ಟು ಕೇಳಿದ ಅಪ್ಪುನಾಯ್ಕ ಅವಕ್ಕಾದರೂ ಸಂಭಾಳಿಸಿಕೊoಡು, ‘ಏನು ಮಾಡುವುದು ಮಾರಾಯಾ…! ಎಲ್ಲಾ ನನ್ನ ಕರ್ಮ. ಇಲ್ಲದಿದ್ದರೆ ಇನ್ನೂ ಇನ್ನೂ ನನಗ್ಯಾಕೆ ಬೇಕಿತ್ತು ಈ ತೋಟ, ಸಾವು ಸುಡುಗಾಡೆಲ್ಲ!’ ಎಂದು ತಾನೂ ಬೇಸರದಿಂದ ಅಂದವನು, ‘ಹೌದೂ…ಆ ಪೊಲೀಸು ಏನಂದ?’ ಎಂದ ಕುತೂಹಲದಿಂದ. ಅದನ್ನೇ ನಿರೀಕ್ಷಿಸುತ್ತಿದ್ದ ರಾಮನಾಯ್ಕನು, ‘ನಿಮ್ಮನ್ನು ಹೇಗಾದರೂ ಬಚಾವ್ ಮಾಡಬೇಕಲ್ಲ ಮಾವ. ಅದಕ್ಕೆ ಹೇಗ್ಹೇಗೋ ಮಾಡಿ ಅಂತೂ ಕೆಲಸ ಮುಗಿಸಿದೆ. ಆದರೆ ಭರ್ತಿ ಮೂವತ್ತು ಸಾವಿರ ಕೇಳುತ್ತಿದ್ದಾರೆ!’ ಎಂದು ಅವನ ಪ್ರತಿಕ್ರಿಯೆಗೆ ಕಾದ.
‘ಓ, ದೇವರೇ…! ಮೂವತ್ತು ಸಾವಿರವಾ…? ಅಷ್ಟೊಂದು ದುಡ್ಡು ನನ್ನಲ್ಲೆಲ್ಲುಂಟು ಮಾರಾಯಾ..?’ ಎಂದು ಅಪ್ಪುನಾಯ್ಕ ಉದ್ಘರಿಸಿದ.
‘ಅರೆರೇ…! ಸ್ವಲ್ಪ ಮೆತ್ತಗೆ ಮಾತಾಡಿ ಮಾವಾ…!’ ಎಂದು ಕಣ್ಣಗಲಿಸಿ ಅಂದ ರಾಮ ನಾಯ್ಕ, ‘ನಾನು ಹೇಳುವುದನ್ನು ಗಮನವಿಟ್ಟು ಕೇಳಿ. ಅವರು ಕೇಳಿದ್ದು ಮೂವತ್ತಲ್ಲ, ಬರೋಬ್ಬರಿ ಐವತ್ತು ಸಾವಿರ. ಆದರೆ ನಾನು ಒಪ್ಪಲಿಲ್ಲ. ಸಿಕ್ಕಾಪಟ್ಟೆ ಚೌಕಾಶಿ ಮಾಡಿದ ಮೇಲೆ ಅವನು ಮೂವತ್ತಕ್ಕೆ ಬಂದು ನಿಂತ. ನಿಮಗೆ ಅಷ್ಟೂ ಆಗುವುದಿಲ್ಲವೆಂದರೆ ಮತ್ತೆ ನಿಮ್ಮಿಷ್ಟ!’ ಎಂದವನು ನಿಷ್ಠುರದಿಂದ ಎತ್ತಲೋ ನೋಡುತ್ತ ನಿಂತ. ಅವರು ಕೇಳಿದ್ದು ಮೂವತ್ತಲ್ಲ, ಐವತ್ತು! ಆದರೆ ಅದು ಮತ್ತೆ ಮೂವತ್ತಕ್ಕೆ ಬಂದಿಳಿದದ್ದನ್ನು ತಿಳಿದ ಅಪ್ಪುನಾಯ್ಕನಿಗೆ ಕೆಲವುಕ್ಷಣ ಎಲ್ಲವೂ ಅಯೋಮಯವಾಗಿ ಕಂಡಿತಾದರೂ ಮರಳಿ ಮೂವತ್ತೇ ವಾಸಿಯೆನಿಸಿತು. ಆಗ ಅವನ ಏರಿದ ಬಿಪಿ ಮೆಲ್ಲನೆ ತಗ್ಗಿತು. ಆದದ್ದಾಯಿತು. ಸತ್ತು ಹೋಗಲಿ ಆಚೆಗೆ! ಇನ್ನು ಮುಂದೆ ಕೇಸು, ಕೋರ್ಟು ಕಛೇರಿ ಅಂತ ಅಲೆಯುವುದಕ್ಕಿಲ್ಲವಲ್ಲ. ಮಹಿಷಮರ್ಧಿನಿಯಮ್ಮನಿಗೆ ಬೊಂಡ ಸೇವೆ ನೀಡುತ್ತೇವೆಂದು ಹರಕೆ ಹೊತ್ತದ್ದಕ್ಕೆ ಅವಳೇ ಕಾಪಾಡಿದಳು ಎಂದುಕೊoಡರಾಯ್ತು. ದುಡ್ಡು ಇವತ್ತು ಬರುತ್ತದೆ, ನಾಳೆ ಹೋಗುತ್ತದೆ. ಇಂಥ ಮುದಿಕಾಲದಲ್ಲಿ ನೆಮ್ಮದಿ ಕಳೆದುಕೊಂಡರೆ ತಿರುಗಿ ಬರುತ್ತದಾ? ಎಂದು ಸಮಾಧಾನಗೊಂಡವನು, ‘ಆಯ್ತು ಮಾರಾಯ ಕೊಡುತ್ತೇನೆ. ಆದರೆ ಈಗ ಅಷ್ಟೊಂದು ಹಣ ನನ್ನ ಹತ್ತಿರವಿಲ್ಲ. ನಾಳೆ ಬ್ಯಾಂಕಿಗೆ ಹೋಗಿ ಬಂದು ಕೊಡುತ್ತೇನೆ. ಇಷ್ಟೆಲ್ಲ ಉಪಕಾರ ಮಾಡಿದ ನೀನೇ ಇದಕ್ಕೂ ಅವರನ್ನು ಒಪ್ಪಿಸಬೇಕು!’ ಎಂದು ದೂರದ ಅಳಿಯನನ್ನು ಕೇಳಿಕೊಂಡ. ಆದರೆ ಅವನು ತನ್ನದೊಂದು ಸಣ್ಣ ಮಧ್ಯಸ್ತಿಕೆಗೂ ಹತ್ತು ಸಾವಿರ ಸಲೀಸಾಗಿ ಹೊಡೆದಿದ್ದವನು, ಒಂದೊಳ್ಳೆಯ ಚಿನ್ನದ ಚೈನು ಮಾಡಿಸಬೇಕೆಂದು ಎಷ್ಟು ಕಾಲದಿಂದ ಆಸೆ ಪಟ್ಟಿದ್ದೆ. ಇವತ್ತು ಅದಕ್ಕೆ ಕಾಲ ಕೂಡಿ ಬಂತು. ನಾಳೆಯೇ ಮೂರು ಪವನಿನ ಚೈನು ಮಾಡಿಸಲು ಹಾಕಬೇಕು ಎಂದು ಯೋಚಿಸಿ ಹಿಗ್ಗುತ್ತ, ‘ಆಯ್ತು ಮಾವ ನೀವೇನೂ ಚಿಂತಿಸಬೇಡಿ. ಸಾಹೇಬರ ಹತ್ರ ನಾನೇ ಮಾತಾಡುತ್ತೇನೆ!’ ಎಂದು ಗೆಲುವಿನಿಂದ ನಗುತ್ತ ಹೊರಗೆ ಹೋಗಿ ರಾಜಾರಾಮನಿಗೆ ವಿಷಯ ತಿಳಿಸಿದ. ಅಷ್ಟು ಕೇಳಿದ ಅವನಿಗೆ ಖುಷಿಯಾದರೂ ದುಡ್ಡು ನಾಳೆ ಸಿಗುತ್ತದೆ ಎಂದಾಕ್ಷಣ ಸ್ವಲ್ಪ ನಿರಾಶೆಯಾಯಿತು. ಆದರೆ ಜನ ಎಂಥ ಖದೀಮರನ್ನಾದರೂ ವಂಚಿಸಬಹುದು. ಪೊಲೀಸರಿಗೆ ಮೋಸ ಮಾಡುವುದು ಅಷ್ಟು ಸುಲಭವಲ್ಲ. ಅದರಲ್ಲೂ ಇಂಥ ಬೆಪ್ಪುತಕ್ಕಡಿ ಕೇಸುಗಳು ಹಣದ ವಿಚಾರದಲ್ಲಿ ಹಂಡ್ರೆಡ್ ಪರ್ಸೆಂಟ್ ಪರ್‌ಫೆಕ್ಟ್ ಆಗಿರುತ್ತವೆ. ಇಲ್ಲದಿದ್ದರೆ ನಾವೂ ಬಿಡಬೇಕಲ್ಲ! ಎಂದುಕೊoಡವನು ಸಾಹೇಬರನ್ನೂ ಒಪ್ಪಿಸಿದ. ಮಾತುಕತೆಯೆಲ್ಲ ಮುಗಿದ ಬಳಿಕ ರಾಮನಾಯ್ಕನ ಸಂಗಡಿಗರು ಜೀಪಿನೊಳಗೆ ಗೋಣಿಚೀಲವನ್ನು ಹಾಸಿ ಹೆಣವನ್ನು ಹೊತ್ತೊಯ್ದು ತುರುಕಿಸಿದರು. ಜೀಪು ದಟ್ಟವಾದ ಹೊಗೆಯುಗುಳುತ್ತ, ಮಣ್ಣಿನ ರಸ್ತೆಯ ಕೆಂಪು ಧೂಳನ್ನೂ ಎಬ್ಬಿಸುತ್ತ ತೋಮನ ಶೆಡ್ಡಿನತ್ತ ಓಡಿತು.
(ಮುಂದುವರೆಯುವುದು)

Related posts

ವಿವಶ…..

Chandrahas

ವಿವಶ…

Mumbai News Desk

ವಿವಶ..

Mumbai News Desk

ವಿವಶ…..

Chandrahas

ವಿವಶ…

Mumbai News Desk

ವಿವಶ..

Mumbai News Desk