April 1, 2025
Uncategorized

ವಿವಶ…

ಧಾರವಾಹಿ 48
ಪೊಲೀಸು ಜೀಪು ಬಂದು ತೋಮನ ಶೆಡ್ಡಿನೆದುರು ನಿಂತಾಗ ಅಪರಾಹ್ನ ದಾಟಿತ್ತು. ಪ್ರೇಮ ತೋಟದ ಕೆಲಸ ಮುಗಿಸಿ ಆಗಷ್ಟೇ ಬಂದು ಕೈಕಾಲು ಮುಖ ತೊಳೆಯಲು ಬಚ್ಚಲಿಗೆ ಹೋಗಿದ್ದಳು. ಅಷ್ಟರಲ್ಲಿ ಅಂಗಳಕ್ಕೆ ಬಂದು ನಿಂತ ವಾಹನದ ಸದ್ದು ಕೇಳಿಸಿ ಗಡಿಬಿಡಿಯಿಂದ ಹೊರಗೆ ಬಂದಳು. ಸರೋಜ, ಲಕ್ಷ್ಮಣನೂ ಹೊರಗೆ ಬಂದರು. ಆದರೆ ಜೀಪನ್ನು ಕಂಡು ಬೆಚ್ಚಿ ತಂತಮ್ಮ ಹೊಸ್ತಿಲಲ್ಲೇ ತಟಸ್ಥರಾಗಿದ್ದುಬಿಟ್ಟರು.
‘ಇಲ್ಲಿ ತೋಮನ ಮನೆ ಯಾವುದು…?’ ಎಂದು ರಾಜಾರಾಮ ಜೀಪಿನಿಂದಿಳಿಯುತ್ತ ಕೇಳಿದ.
ಪ್ರೇಮಾಳಿಗೆ ಗಾಬರಿಯಾಯಿತು. ‘ಇದೇ ಸ್ವಾಮಿ…ಏನಾಯಿತು…?’ ಎಂದಳು ಅಳುಕುತ್ತ.
‘ನೀನು ಅವನಿಗೇನಾಗಬೇಕಮ್ಮಾ…?’ ಎಂದು ರಾಜಾರಾಮನ ಮರುಪ್ರಶ್ನೆ.
‘ಅವರು ನನ್ನ ಗಂಡ ಸ್ವಾಮೀ!’ ಎಂದ ಅವಳು ಮರುಕ್ಷಣ, ಅಯ್ಯೋ ದೇವರೇ…! ಈ ಮನುಷ್ಯ ಮತ್ತೇನು ಮಾಡಿಕೊಂಡನಾ…? ಈ ಶನಿ ಹಿಡಿದವನಿಂದ ಒಮ್ಮೆ ಬಿಡುಗಡೆ ಕೊಡಿಸಪ್ಪಾ ಪಂಜುರ್ಲಿಯೇ! ಎಂದು ಒಳಗೊಳಗೆ ಪ್ರಾರ್ಥಿಸುತ್ತ ಪೊಲೀಸರನ್ನು ಮಿಕಮಿಕ ನೋಡಿದಳು. ಅಷ್ಟು ಕೇಳಿದ ರಾಜಾರಾಮ, ವಿಷಯ ಹೇಗೆ ತಿಳಿಸುವುದೆಂದು ತೋಚದೆ ಚಡಪಡಿಸುತ್ತ ಸಾಹೇಬರ ಮುಖ ನೋಡಿದ. ‘ಧೈರ್ಯವಾಗಿ ಹೇಳು!’ ಎಂದು ಅವರ ಸನ್ನೆ ಸೂಚಿಸಿತು. ಆದ್ದರಿಂದ ಅವನು, ‘ನೀನು ಸ್ವಲ್ಪ ಮನಸ್ಸು ಗಟ್ಟಿ ಮಾಡ್ಕೊಬೇಕಮ್ಮಾ!’ ಎಂದವನು ಪೇದೆಗೂ ರಾಮನಾಯ್ಕನ ತಂಡಕ್ಕೂ ಹೆಣವನ್ನು ಇಳಿಸಲು ಸೂಚಿಸಿದ. ಅಷ್ಟೊತ್ತಿಗೆ ವಿಷಯ ತಮ್ಮದಲ್ಲವೆಂದು ತಿಳಿದ ಸರೋಜ, ಲಕ್ಷ್ಮಣ ಇಬ್ಬರೂ ನಿರಾಳರಾಗಿ ಮುಂದೆ ಬಂದರು. ಆದರೆ ತೋಮನ ಹೆಣವನ್ನು ಹೊತ್ತು ತರುವುದನ್ನು ಕಂಡವರಿಗೆ ಆಘಾತವಾಯಿತು. ಪ್ರೇಮ ಧೊಪ್ಪನೆ ಕುಸಿದು ಕುಳಿತಳು. ಆಗ ಸಾಹೇಬರು ಇಳಿದು ಬಂದವರು, ‘ನೋಡಮ್ಮಾ, ನಿನ್ನ ಗಂಡ ಮೂಗಿನ ಮಟ್ಟ ಕುಡಿದು ಅಪ್ಪುನಾಯ್ಕರ ತೆಂಗಿನ ಮರ ಹತ್ತಲು ಹೋಗಿ ಬಿದ್ದು ಸತ್ತಿದ್ದಾನೆ. ನಾವು ಮಹಜರು ಮಾಡಿ ಸಹಜ ಸಾವು ಅಂತ ದಾಖಲಿಸಿಕೊಂಡಿದ್ದೇವೆ. ನಿನಗೆ ಯಾರ ಮೇಲಾದರೂ ಅನುಮಾನ ಬಂದರೆ ನಾಳೆ ಬೆಳಿಗ್ಗೆ ಸ್ಟೇಷನಿಗೆ ಬಂದು ಕಂಪ್ಲೆoಟು ಕೊಡು!’ ಎಂದವರು ತಮ್ಮ ಕೆಲಸ ಮುಗಿಯಿತೆಂಬoತೆ ಚಾಲಕನಿಗೆ ಜೀಪು ತಿರುಗಿಸಲು ಹೇಳಿ ಹತ್ತಿಕೊಂಡರು. ಆದರೆ ಸಾಹೇಬರ ಮಾತು ಕೇಳಿದ ಅಪ್ಪುನಾಯ್ಕನ ಎದೆ ಮತ್ತೊಮ್ಮೆ ಧಸಕ್ ಎಂದಿತು. ರಾಮನಾಯ್ಕನೂ ಗಾಬರಿಯಿಂದ ರಾಜಾರಾಮನ ಮುಖವನ್ನು ನೋಡಿದ. ಅವನು, ‘ಏನೂ ಹೆದರಬೇಡಿ!’ ಎಂದು ಕಣ್ಣಲ್ಲೇ ಸೂಚಿಸಿ ನಗುತ್ತ ಜೀಪು ಹತ್ತಿದ.
ಗಂಡನ ಹೆಣವನ್ನು ಕಂಡ ಪ್ರೇಮಾಳಿಗೆ ವಿಪರೀತ ವೇದನೆಯಾಯಿತು. ಆದರೆ ಒಂದು ತೊಟ್ಟು ಕಣ್ಣೀರು ಮಾತ್ರ ಹರಿಯಲಿಲ್ಲ. ಅವಳ ವರ್ತನೆಯನ್ನು ಕಂಡ ಅಪ್ಪುನಾಯ್ಕ, ಅಯ್ಯೋ ದೇವರೇ…! ಇನ್ನು ಇವಳಿಂದ ಏನೇನು ದುರಾವಸ್ಥೆ ಕಾದಿದೆಯೋ…? ಎಂದುಕೊoಡು ಕಂಗಾಲಾದ. ಅಷ್ಟರಲ್ಲಿ ಪುಕ್ಕಟೆ ಸಿಕ್ಕಿದ ಹತ್ತು ಸಾವಿರಕ್ಕೆ ಇನ್ನಷ್ಟು ಶ್ರಮಿಸುವವನಂತೆ ಇಲ್ಲೂ ರಾಮನಾಯ್ಕನೇ ಮಾತಾಡಿದ. ‘ನೋಡು ಪ್ರೇಮ ನಾವು ಅವನನ್ನು ಬೊಂಡ ಕೊಯ್ಯಲು ನಿನ್ನೆ ಕರೆದಿದ್ದು! ಆದರೆ ಅವನು ಇವತ್ತು ಕುಡಿದು ಬಂದು ಮರ ಹತ್ತಲು ಮುಂದಾದ. ಮಾವ ಬಿಡಲಿಲ್ಲ. ಆದರೂ ಅವರ ಮಾತು ಕೇಳದೆ ಹತ್ತಿ ಬಿದ್ದುಬಿಟ್ಟು ಅನ್ಯಾಯವಾಗಿ ಪ್ರಾಣ ಕಳೆದುಕೊಂಡ!’ ಎಂದು ವಿಷಾದದಿಂದ ವಿವರಿಸಿದ. ಆದರೆ ಪ್ರೇಮ ಆಹೊತ್ತು ಅದ್ಯಾವುದಕ್ಕೂ ಪ್ರತಿಕ್ರಿಯಿಸುವ ಮನಸ್ಥಿತಿಯಲ್ಲಿರಲಿಲ್ಲ. ಗಂಡನ ಬಗ್ಗೆ ಅವಳ ಮನಸ್ಸು ಎಂದೋ ಕಲ್ಲಾಗಿದ್ದುದು ನಿನ್ನೆಯಿಂದ ಅವನೇ ಮುಂದುವರೆದುದರಿoದ ಸ್ವಲ್ಪ ಮೃದುವಾಗಿತ್ತು. ಆದರೆ ಇವತ್ತು ಅವನೇ ಇಲ್ಲವಾಗಿದ್ದ! ಆ ಹತಾಶೆಯು ಅವಳನ್ನು ಕ್ರೂರವಾಗಿ ಚುಚ್ಚುತ್ತಿತ್ತು. ಹಾಗಾಗಿ ನಿಸ್ತೇಜಳಾಗಿ ಕುಳಿತುಬಿಟ್ಟಳು. ಪ್ರೇಮಾಳ ಆ ರೀತಿಯ ಮೌನವನ್ನು ಕಂಡ ಅಪ್ಪುನಾಯ್ಕನಿಗೆ ಸ್ವಲ್ಪ ಧೈರ್ಯ ಬಂತು. ಅವನು ಮೆಲ್ಲನೆ ಅವಳ ಹತ್ತಿರ ಹೋಗಿ ಐದು ಸಾವಿರ ರೂಪಾಯಿಯನ್ನು ಅವಳ ಮಡಿಲಿಗೆ ಹಾಕಿದವನು, ‘ನೋಡಮ್ಮ ಪ್ರೇಮಾ, ನಾನು ಏನೂ ಕೂಡದ ಮುದುಕನಮ್ಮಾ. ನನ್ನಂಥವನನ್ನು ಕೋರ್ಟು ಕಛೇರಿ ಅಲೆಯುವಂತೆ ಮಾಡದೆ ನಿನ್ನ ತಂದೆಯೆoದೇ ಭಾವಿಸಿ ಕ್ಷಮಿಸಿಬಿಡಮ್ಮಾ! ಇನ್ನು ಹೆಚ್ಚಿಗೆ ದುಡ್ಡು ಬೇಕಿದ್ದರೆ ನಾಳೆ ನಾಡಿದ್ದರಲ್ಲಿ ಬಂದು ಕೇಳು ಕೊಡುತ್ತೇನೆ!’ ಎಂದವನು ಮುಂದೇನೂ ಹೇಳಲು ತೋಚದೆ ಸುಮ್ಮನೆ ನಿಂತುಕೊoಡ. ಆಗಲೂ ಪ್ರೇಮ ತನ್ನ ಮೌನ ಮುರಿಯಲಿಲ್ಲ. ಅವಳ ಕಣ್ಣುಗಳು ಶೂನ್ಯದತ್ತ ನೆಟ್ಟಿದ್ದವು.
ರಕ್ತದಿಂದ ತೊಯ್ದಿದ್ದ ತೋಮನ ಹೆಣವನ್ನು ಕಂಡ ಲಕ್ಷ್ಮಣನು ವಿಚಿತ್ರ ಜಡತ್ವಕ್ಕೆ ಬಿದ್ದು ಮರಗಟ್ಟಿ ನಿಂತಿದ್ದ. ಆದರೆ ಸರೋಜ ಎಚ್ಚೆತ್ತವಳು ಅವನಿಗೇನೋ ಸಂಜ್ಞೆ ಮಾಡಿದಳು. ಅದರಿಂದ ಅವನು ಶೆಟ್ಟರ ಬಂಗಲೆಯತ್ತ ಧಾವಿಸಿದ. ಆವತ್ತು ಶ್ರೀಧರ ಶೆಟ್ಟರು ಘಟ್ಟದಲ್ಲಿದ್ದರು. ಮನೆಯಲ್ಲಿ ಅವರ ಮಗ ಜಯಂತನೊಬ್ಬನೇ ಇದ್ದ. ಲಕ್ಷ್ಮಣ ಅವನಿಗೆ ವಿಷಯವನ್ನು ತಿಳಿಸಿ ಜೊತೆಯಲ್ಲೇ ಕರೆದುಕೊಂಡು ಬಂದ. ಜಯಂತ ಪ್ರೇಮಾಳ ಅಂಗಳದಲ್ಲಿ ನಿಂತುಕೊoಡು ರಾಮನಾಯ್ಕ ಮತ್ತು ಅಪ್ಪುನಾಯ್ಕರಿಂದ ಇನ್ನಷ್ಟು ‘ಸ್ಪಷ್ಟ’ ವಿಚಾರವನ್ನು ತಿಳಿದವನು ಶೆಡ್ಡಿನೊಳಗೆ ಹೊಕ್ಕು ಹೆಣವನ್ನು ವೀಕ್ಷಿಸಿದ. ಅಸಹ್ಯದಿಂದ ಅವನಿಗೆ ವಾಂತಿ ಬಂದoತಾಯಿತು. ರಪ್ಪನೆ ಹೊರಗೆ ಧಾವಿಸಿ ಬಂದವನು, ಥೂ! ಹಣೆಬರಹ ಕೆಟ್ಟವೆಲ್ಲಿಯಾದರೂ! ಎಲ್ಲವೂ ಕುಡಿಕುಡಿದೇ ಸತ್ತು ಹೋಗುತ್ತವೆ! ಎಂದು ಮನಸ್ಸಿನಲ್ಲೇ ಬೈದುಕೊಂಡ. ಆದರೆ ಒಂದಿಷ್ಟು ಕಾಲವಾದರೂ ತಮ್ಮ ಭೂಮಿಯಲ್ಲಿ ಬೆವರು ಸುರಿಸುತ್ತ ತಾವಿಂದು ಭರಪೂರ ಅನುಭವಿಸುವ ಸಿರಿವಂತಿಕೆಯ ಕಿರೀಟಕ್ಕೆ ಸಣ್ಣದಾದರೂ ಗೆಲುವಿನ ಗರಿಯೊಂದನ್ನು ತೊಡಿಸುವಲ್ಲಿ ಶ್ರಮಿಸುತ್ತಿದ್ದ ಆ ಬಡಪಾಯಿಯ ಸಾವು ಅವನಲ್ಲಿ ಯಾವ ತಳಮಳವನ್ನೂ ಸೃಷ್ಟಿಸಲಿಲ್ಲ!
‘ಹ್ಞೂಂ. ಆದ್ದದ್ದು ಆಗಿ ಹೋಯ್ತು. ಇನ್ನು ಯೋಚಿಸಿ ಪ್ರಯೋಜನವಿಲ್ಲ. ಅವನು ಕುಡಿಯುವ ಚಟಕ್ಕೆ ಬಿದ್ದ ಮೇಲೆ ತೋಟದ ಕೆಲಸಕ್ಕೂ ಬರುವುದನ್ನು ನಿಲ್ಲಿಸಿದ್ದ. ಆಗಲೇ ಅವನನ್ನು ಮನೆಯಿಂದ ಹೊರಗೆ ಹಾಕುವ ಅಂತ ಅಪ್ಪನಿಗೆ ಸುಮಾರು ಸಲ ಹೇಳಿದೆ. ಆದರೆ ಅವರು ಪಾಪ ಪುಣ್ಯ ನೋಡುವ ಮನುಷ್ಯರು. ಪ್ರೇಮಾಳ ಮುಖ ನೋಡಿಕೊಂಡು ಸುಮ್ಮನಿದ್ದರು. ಇವತ್ತು ನೋಡಿದರೆ ನಮ್ಮ ಜಾಗದಲ್ಲೇ ಸತ್ತು ಹೋದ!’ ಎಂದು ಜಿಗುಪ್ಸೆಯಿಂದ ಅಂದವನು, ‘ಅವನ ಹಣೆಬರಹ ಹಾಗಿರುವಾಗ ಯಾರೇನು ಮಾಡುವುದಕ್ಕಾಗುತ್ತದೆ ಬಿಡಿ. ಇಲ್ಲೇ ಎದುರಿನ ಗುಡ್ಡೆಯಲ್ಲಿ ಹೆಣ ಸುಡುವ ವ್ಯವಸ್ಥೆ ಮಾಡಿ. ತೋಟದಲ್ಲಿ ಕಟ್ಟಿಗೆಯಿದೆ. ಬೇಕಾದಷ್ಟು ಕೊಂಡು ಹೋಗಿ. ಮತ್ತೇನಾದರೂ ಬೇಕಿದ್ದರೆ ಮನೆಗೆ ಬನ್ನಿ!’ ಎಂದು ನೆರೆದವರತ್ತ ನೋಡಿ ಗತ್ತಿನಿಂದ ಅಂದು ಹೊರಟು ಹೋದ.
ತೋಮನ ಸಾವು ಲಕ್ಷ್ಮಣನನ್ನು ಕಂಗೆಡಿಸಿತ್ತು. ಇಷ್ಟರವರೆಗೆ ಕುಡಿದು ಗಲಾಟೆ ಮಾಡಿಕೊಳ್ಳುವ ನೆಪದಲ್ಲಾದರೂ ಎರಡು ಕುಟುಂಬಗಳ ನಡುವೆ ಬಾಂಧವ್ಯವಿತ್ತು. ಅಷ್ಟು ಮಾತ್ರವಲ್ಲದೇ ಒಂದಷ್ಟು ಕಾಲದ ಹಿಂದೆ ತಾವಿಬ್ಬರೂ ಆತ್ಮೀಯ ಸ್ನೇಹಿತರಾಗಿದ್ದುದರ ನೆನಪೂ ಅವನನ್ನು ಕಾಡಿತು. ಆದ್ದರಿಂದ ತನ್ನೊಳಗೆ ಮೂಡಿದ್ದು ದುಃಖವೋ, ಜಿಗುಪ್ಸೆಯೋ ತಿಳಿಯಲಾಗದೆ ಗರಬಡಿದಂತೆ ನಿಂತಿದ್ದ. ಈಗಲೂ ಸರೋಜಾಳೇ ಅವನ ಸಮೀಪ ಬಂದು ಮುಂದಿನ ಕಾರ್ಯವನ್ನು ನೆನಪಿಸಿದಳು. ಕೂಡಲೇ ತೋಟದ ಮತ್ತೊಂದು ಪಾರ್ಶ್ವದ ಶೀನುನಾಯ್ಕನಲ್ಲಿಗೆ ಧಾವಿಸಿದವನು ಅವನಿಗೂ ವಿಷಯ ತಿಳಿದ. ಅವನೂ ಅವಕ್ಕಾಗಿ ಚೀಂಕುವಿನೊoದಿಗೆ ಓಡೋಡಿ ಬಂದ. ಅಷ್ಟೊತ್ತಿಗೆ ಹೆಲೆನಾಬಾಯಿಗೂ ವಿಷಯ ತಿಳಿದು ಅವರೂ ಶ್ವೇತಾಳೊಂದಿಗೆ ಬಂದಿದ್ದರು. ಶ್ವೇತಾ ಅಪ್ಪನ ಹೆಣವನ್ನು ನೋಡಲಾಗದೆ ಜೋರಾಗಿ ಅಳುತ್ತ ಅಮ್ಮನನ್ನು ತಬ್ಬಿಕೊಂಡಾಗ ಹೆಲೆನಾಬಾಯಿಯ ಕಣ್ಣಾಲಿಗಳು ತುಂಬಿದವು. ಆಗಲೂ ಪ್ರೇಮಾಳ ಕಣ್ಣಲ್ಲಿ ನೀರು ಕಾಣಿಸಲಿಲ್ಲ. ಬಳಿಕ ಶೀನುನಾಯ್ಕನ ಮಾರ್ಗದರ್ಶನದಲ್ಲಿ ಶೆಡ್ಡಿನೆದುರಿನ ಗುಡ್ಡೆಯಲ್ಲಿ ಚಿತೆಯನ್ನು ತಯಾರಿಸುವ ಹೊತ್ತಿಗೆ ಸುತ್ತಮುತ್ತಲಿನ ಒಂದಷ್ಟು ಜನರಿಗೂ ಸುದ್ದಿ ತಿಳಿದು ಅವರೂ ಬಂದು ಸೇರಿದರು. ಅವರ ನಡುವೆ ಯಾರೋ ಒಬ್ಬರು, ‘ಅಲ್ಲ ಮಾರಾಯ್ರೇ, ತೋಮನಿಗೆ ಯಾರೂ ರಕ್ತ ಸಂಬoಧಿಗಳಿಲ್ಲವಾ? ಇದ್ದರೆ ಅವರಿಗೆ ತಿಳಿಸಬೇಕಿತ್ತಲ್ಲವಾ…?’ ಎಂದರು. ಅಷ್ಟು ಕೇಳಿದ ಪ್ರೇಮಾಳಿಗೆ ಕೋಪ ಉಕ್ಕಿತು. ‘ರಕ್ತ ಸಂಬoಧಿಗಳಾ…? ಅವನೇ ಯಾರೆಂದು ತಿಳಿಯಲು ನನಗಿಷ್ಟರ ತನಕ ಸಾಧ್ಯವಾಗಿಲ್ಲ. ಅಂಥದ್ದರಲ್ಲಿ ಅವನ ಸಂಬoಧಿಕರು ಯರ‍್ಯಾರು? ಮತ್ತು ಅವರೆಲ್ಲಿದ್ದಾರೆ ಅಂತ ಹೇಗೆ ತಿಳಿಯಬೇಕು!’ ಎಂದು ಸಿಡುಕಿದಳು. ಆಗ ಆ ಧ್ವನಿ ಉಡುಗಿದ್ದರೊಂದಿಗೆ, ‘ಸರಿ, ಸರಿ. ಹಾಗಾದರೆ ಅದನ್ನೆಲ್ಲ ಬಿಡಿ! ಹೆಣ ಮೀಯಿಸುವ ಕಾರ್ಯ ನಡೆಯಲಿ!’ ಎಂದು ಇನ್ಯಾವುದೋ ಹಿರಿಯ ಧ್ವನಿಯೊಂದು ಸೂಚಿಸಿತು. ಅಷ್ಟೊತ್ತಿಗೆ ಸರೋಜ ಬಿಸಿ ನೀರು ತಂದಿಟ್ಟಳು. ರಾಮನಾಯ್ಕನ ಸಂಗಡಿಗರೂ ಲಕ್ಷ್ಮಣನೂ ತೋಮನ ಹೆಣವನ್ನು ಮೀಯಿಸುವ ಶಾಸ್ತçವನ್ನು ಮುಗಿಸಿದರು. ಈ ನಡುವೆ ಅಪ್ಪುನಾಯ್ಕ ಯಾವುದಕ್ಕೋ ಗಡಿಬಿಡಿಯಿಂದ ಮನೆಯತ್ತ ಓಡಿದ್ದವನು ತನ್ನದೊಂದು ಬಿಳಿಯ ಹೊಸ ಲುಂಗಿ, ಹೂವಿನ ಹಾರ ಮತ್ತು ಒಂದಿಷ್ಟು ಊದುಕಡ್ಡಿಗಳನ್ನು ಹಿಡಿದುಕೊಂಡು ಹಿಂದಿರುಗಿದ. ಹೆಣಕ್ಕೆ ಬಿಳಿ ಲುಂಗಿಯನ್ನು ಹೊದೆಸಿ ಹೂವಿನ ಹಾರದಿಂದ ಅದನ್ನು ಸಿಂಗರಿಸಿ ಊದುಕಡ್ಡಿ ಹಚ್ಚಿಟ್ಟು ಸುತ್ತಲಿನ ಪರಿಸರವನ್ನು ಪರಿಮಳಯುಕ್ತಗೊಳಿಸಲಾಯಿತು.
ಇಷ್ಟಾದ ನಂತರ ತೋಮನ ಹೆಣವು ಮಗಳ ಅಳು, ಆಕ್ರಂದನದೊoದಿಗೆ ಹೊತ್ತೊಯ್ಯಲ್ಪಟ್ಟು ಎದುರಿನ ಗುಡ್ಡೆಯ ಮೇಲಿನ ಚಿತೆಯೇರಿ ಮೈಚೆಲ್ಲಿ ಮಲಗಿತು. ತೋಮನ ಕಡೆಯಿಂದ ಯಾರೂ ಗಂಡಸರಿಲ್ಲದ ಕಾರಣ ಲಕ್ಷ್ಮಣನೇ ಚಿತೆಗೆ ಬೆಂಕಿ ಹಚ್ಚಿದ. ಅಷ್ಟಾಗುವ ಹೊತ್ತಿಗೆ ಜನರೆಲ್ಲ ಸ್ವಲ್ಪ ದೂರ ಹೋಗಿ ಕುಳಿತುಕೊಂಡು ಬೀಡಿ ಸೇದುತ್ತ ಮಾತುಕತೆಯಲ್ಲಿ ತೊಡಗಿದರು. ಅವರ ಚರ್ಚೆಯ ವಿಚಾರ ಸಹಜವಾಗಿಯೇ ತೋಮನ ಕುರಿತಾಗಿತ್ತು. ತೋಮ ಗಂಗರಬೀಡಿಗೆ ಯಾವತ್ತು ಬಂದು ನೆಲೆಸಿದ. ಊರವರೊಡನೆ ಅವನು ಹೇಗೆಲ್ಲ ಬೆರೆತು ಬಾಳಿದ. ಅವನ ಗುಣ ಸ್ವಭಾವ ಎಂಥದ್ದು? ಎಂಬುದರಿoದ ಹಿಡಿದು, ಅವನ ಪರೋಪಕಾರಿ ಗುಣವನ್ನೂ, ಒಂದಿಷ್ಟು ಕೆಟ್ಟತನವನ್ನೂ ತಮಗೆ ತಿಳಿದಷ್ಟು, ತೋಚಿದಷ್ಟು ಒಬ್ಬೊಬ್ಬರಾಗಿ ಮಾತಾಡಿಕೊಳ್ಳುತ್ತ ನಡುನಡುವೆ ವಿಶೇಷ ಹೊಗಳಿಕೆಯೂ, ತೆಗಳಿಕೆಯೂ ಅವುಗಳೊಂದಿಗೆ ವಿಷಾದವೂ ಬೆರೆತ ಸಂಭಾಷಣೆಯು ತುಸುಹೊತ್ತು ಲೋಕಾಭಿರಾಮವಾಗಿ ಸಾಗಿತು. ಆದರೆ ಕೊನೆಯಲ್ಲಿ ತೋಮ ತುಂಬಾ ಒಳ್ಳೆಯವನು. ಪಾಪ! ಎಲ್ಲಿಂದಲೋ ಬಂದವನಾದರೂ ಸಾಯುವವರೆಗೆ ನಮ್ಮೂರಿನವನಾಗಿ ನಮ್ಮೆಲ್ಲರ ಸುಖ ದುಃಖಗಳಲ್ಲಿ ಭಾಗಿಯಾಗಿ ಎಲ್ಲರೊಡನೆ ಬೆರೆತು ಬಾಳಿದ. ಅವನ ಋಣ ಇಲ್ಲೇ ಮುಗಿಯಬೇಕೆಂದು ವಿಧಿ ಲಿಖಿತವಿತ್ತೋ ಏನೋ? ಹಾಗಾಗಿ ಇಲ್ಲೇ ಮಣ್ಣಾದ. ಎಲ್ಲವೂ ದೇವರಿಚ್ಛೆ!’ ಎಂದು ಹಿರಿಯರೊಬ್ಬರು ವಿಷಾದದಿಂದ ಅನ್ನುತ್ತಿದ್ದಂತೆಯೇ ಕಾಟದಲ್ಲಿ ಸುಡುತ್ತಿದ್ದ ತೋಮನ ಹೆಣದ ತಲೆ ಬುರುಡೆಯು ‘ಫಟ್!’ ಎಂದು ಒಡೆದ ಸದ್ದು ಕೇಳಿಸಿತು. ಅಲ್ಲಿಗೆ ಅವರ ಮಾತುಕತೆಗೂ ತೆರೆಬಿದ್ದು ಹೆಣ ಸುಡುವವರೆಗೆ ಚಿತೆಯ ಬೆಂಕಿಯನ್ನು ಜೋಪಾನ ಮಾಡಿದವರು ಅದು ಪೂರ್ತಿ ಸುಟ್ಟು ಬೂದಿಯಾಗುತ್ತಲೇ ಎಲ್ಲರೂ ಎದ್ದು ತಂತಮ್ಮ ಲುಂಗಿ, ಬೈರಾಸುಗಳನ್ನು ಕೊಡವಿಕೊಂಡು ಅಲ್ಲಿ ಯಾವೊಂದು ವಿಶೇಷವೂ ನಡೆದಿಲ್ಲವೆಂಬoತೆ ಹೊರಟು ಹೋದರು.

ಇತ್ತ ತೋಮನ ಪ್ರೇಯಸಿ ಮೇರಿಗೆ ಅವನ ಸಾವಿನ ಸುದ್ದಿ ಕೇಳಿ ಸಿಡಿಲೆರಗಿದಂತಾಗಿತ್ತು. ಆವತ್ತು ತೋಮನೇ, ‘ಮೇರಿ ವೇಶ್ಯೆಯರ ಗಲ್ಲಿಯಲ್ಲಿ ದಂಧೆ ಮಾಡುತ್ತಿದ್ದವಳು. ಆದರೂ ತನಗೆ ಸುಳ್ಳು ಹೇಳಿ ವಂಚಿಸಿದಳು!’ ಎಂಬ ಕಾರಣವನ್ನೂ ಮತ್ತವಳ ಮೇಲಿನ ದೈಹಿಕಾಕರ್ಷಣೆಯನ್ನೂ ಕಳೆದುಕೊಂಡು ಅವಳ ಮೇಲೆ ಹೇಸಿಗೆ ಪಟ್ಟುಕೊಂಡು ದೂರವಾಗಿದ್ದರಿಂದಲೇ ಅವಳು ಕೂಡಾ ಅವನಿಂದ ದೂರ ಉಳಿಯಲು ಮನಸ್ಸು ಮಾಡಿದ್ದಳು. ಆದರೆ ಅವಳು ಒಂದು ಕಾಲದಲ್ಲಿ ವೇಶ್ಯಾವೃತ್ತಿ ಮಾಡುತ್ತಿದ್ದುದು ಹೌದಾದರೂ ತನ್ನೂರಿಗೆ ಬಂದು ತೋಮನ ಪರಿಚಯವಾದಂದಿನಿoದ ಇನ್ನೊಬ್ಬ ಗಂಡಸನ್ನು ಅವಳು ಕಣ್ಣೆತ್ತಿಯೂ ನೋಡದೆ ಕೇವಲ ತೋಮನನ್ನೇ ಬಯಸಲಾರಂಭಿಸಿದ್ದಳು. ಹೆಣ್ಣೊಬ್ಬಳು ಯಾವತ್ತು ತಾನು ಮನಸಾರೆ ಪ್ರೀತಿಸಿದ ಗಂಡಿಗೆ ತನ್ನ ಮೈಮನಸ್ಸುಗಳನ್ನು ಅರ್ಪಿಸಿಕೊಳ್ಳುತ್ತಾಳೋ ಅವಳು ಮತ್ತೆಂದೂ ಅವನನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ! ಎಂಬುದಕ್ಕೆ ಮೇರಿಯೇ ಸಾಕ್ಷಿಯಾಗಿದ್ದಳು. ಅವಳು ತೋಮನಿಂದ ದೈಹಿಕವಾಗಿ ದೂರವಾಗಿದ್ದರೂ, ಅವನ ಸಾಂಗತ್ಯದ ಮಧುರ ಸವಿಕ್ಷಣಗಳನ್ನು ಮರೆತಿರಲಿಲ್ಲ. ತೋಮನಿಂದ ಪರಿತ್ಯಕ್ತಳಾದ ಮೇಲೆ ಅವಳಿಗೆ ಬೇರೆ ಯಾರ ಸಂಗವನ್ನು ಮಾಡುವ ಮನಸ್ಸೂ ಇರಲಿಲ್ಲ. ತನ್ನ ಹೃದಯದಲ್ಲಿ ತೋಮನ ಸ್ಥಾನವನ್ನು ಬೇರೆ ಯಾರೂ ತುಂಬಲು ಸಾಧ್ಯವಿಲ್ಲವೆನ್ನುವ ವಾಸ್ತವದ ಅರಿವು ಅವಳಿಗಿತ್ತು. ಇಂದು ತೋಮನ ಸಾವಿನ ಸುದ್ದಿ ಕೇಳಿದೊಡನೆ ಅವನನ್ನೊಮ್ಮೆ ಕೊನೆಯ ಬಾರಿ ನೋಡಲೆಂದು ಅವನ ಮನೆಯ ಒಂದಷ್ಟು ದೂರದ ಎತ್ತರದ ದಿಣ್ಣೆಯ ಮೇಲೆ ಬಂದು ನಿಂತಳು. ಆದರೆ ಅದಾಗಲೇ ತೋಮನ ದೇಹವು ಚಿತೆಯೇರಿ ಧಗಧಗನೆ ಉರಿಯುತ್ತಿತ್ತು. ತಾನು ಪ್ರೀತಿಸಿದ ಜೀವವು ಚಿತಾಗ್ನಿಯಲ್ಲಿ ಭಸ್ಮವಾಗುತ್ತ ದಟ್ಟ ಹೊಗೆಯಾಗಿ ಆಕಾಶಕ್ಕೇರುತ್ತಿದ್ದುದನ್ನು ಕಂಡವಳಿಗೆ ತೋಮನೊಂದಿಗೆ ತಾನು ಒಡನಾಡಿದ ಪ್ರತಿಯೊಂದು ನೆನಪುಗಳೂ ಚಿತ್ರಪಟಗಳಂತೆ ಕಣ್ಣೆದುರಿಗೆ ಬಂದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಚಿತೆಯು ಪೂರ್ತಿ ಸುಟ್ಟು ಎಲ್ಲರೂ ನಿರ್ಗಮಿಸಿದ ಮೇಲೂ ಅವಳು ನಿಂತಲ್ಲಿಯೇ ಕುಸಿದು ಭಾವಶೂನ್ಯಳಾಗಿದ್ದಳು. ಇತ್ತ ವಿಷಯವನ್ನು ತಿಳಿದ ಡೆಲ್ಫಿನ್ನನು ಅಕ್ಕ ಮನೆಯಲ್ಲಿ ಇಲ್ಲದಿದ್ದುದ್ದನ್ನು ಕಂಡು ಹುಡುಕಲಾರಂಭಿಸಿದ. ಅಲ್ಲೇ ಎದುರು ಕಾಣುತ್ತಿರುವ ದಿಣ್ಣೆಯತ್ತ ಬಂದವನಿಗೆ ಅಲ್ಲಿ ತನ್ನಿರುವನ್ನೇ ಮರೆತು ಕುಳಿತಿದ್ದ ಅಕ್ಕನನ್ನು ಕಂಡು ಮನಸ್ಸು ಮರುಗಿತು. ಅವನು ದಾಪುಗಾಲಿಕ್ಕುತ್ತ ಬಂದು ಅವಳನ್ನು ಬಲವಂತದಿoದ ಎಬ್ಬಿಸಿಕೊಂಡು ಸಾಂತ್ವನಿಸುತ್ತ ಮನೆಗೆ ಕರೆದೊಯ್ದ.


ಪ್ರೇಮಾಳ ಬದುಕಿಗೆ ಬಹಳ ವರ್ಷಗಳ ನಂತರ ಹೊಸ ತಿರುವು ದೊರಕಿತ್ತು. ಗಂಡನೆoಬ ಪುರುಷನಿಂದ ಬಂಧಮುಕ್ತಳಾದ ಅವಳೀಗ ನೆಮ್ಮದಿಯಿಂದ ಬದುಕುತ್ತಿದ್ದಳು. ಆದರೆ ಸುದೀರ್ಘ ಕಾಲದಿಂದ ಜೊತೆಯಾಗಿದ್ದು, ಅದರಲ್ಲಿ ಸ್ವಲ್ಪ ಸಮಯವಾದರೂ ತನ್ನ ಸುಖ ದುಃಖಗಳನ್ನು ಹಂಚಿಕೊoಡಿದ್ದ ಹತ್ತಿರದ ಜೀವವೊಂದು ಏಕಾಏಕಿ ಕಣ್ಮರೆಯಾದ ನೋವೂ ಅವಳನ್ನು ಅಷ್ಟೇ ಬಾಧಿಸುತ್ತಿತ್ತು. ಆಗೆಲ್ಲ ತನ್ನ ಜೀವನ ಇಲ್ಲಿಯವೆರೆಗೆ ನಡೆದು ಬಂದ ದಾರಿಯನ್ನೂ, ಅದರಲ್ಲಿ ತಾನು ಅನುಭವಿಸಿದ ನೋವು ನಲಿವುಗಳನ್ನೂ ಸ್ಮರಿಸುತ್ತಿದ್ದವಳಿಗೆ ಕೇವಲ ಸೋಲು ಮತ್ತು ಹತಾಶೆಯ ಅಲೆಗಳೇ ಬಂದಪ್ಪಳಿಸುತ್ತಿದ್ದವು. ಅಂಥ ಯೋಚನೆಗಳು ಮುತ್ತಿಕೊಂಡಾಗಲೆಲ್ಲ ಅವಳ ಮನಸ್ಸು ಗಂಡನ ವಿರುದ್ಧವೇ ದಂಗೆ ಏಳುತ್ತಿತ್ತು. ಅವನು ನನಗೇನು ಒಳ್ಳೆಯದು ಮಾಡಿದ ಅಂತ ನಾನವನ ಸಾವಿಗೆ ಕೊರಗಬೇಕು? ಅವನೊಂದಿಗೆ ಬದುಕು ಕಟ್ಟಿಕೊಳ್ಳಲು ನಾನಾವತ್ತು ಅದೆಷ್ಟು ಆಸೆ, ವಿಶ್ವಾಸದಿಂದ ಬಂದಿದ್ದೆ! ಆದರೆ ಆ ಮನುಷ್ಯ ಅದನ್ನೆಲ್ಲ ಹಾಳುಧೂಳು ಮಾಡಿ ಹೋಗಿಬಿಟ್ಟನಲ್ಲ! ಅವನು ತಾನು ಕಟ್ಟಿಕೊಂಡ ಸಂಸಾರವನ್ನಾದರೂ ಸ್ವಂತದೊoದು ಗೂಡಿನಲ್ಲಿ ಬಾಳಿಸುವ ಮನಸ್ಸು ಮಾಡಿದ್ದುಂಟಾ? ಆ ಯೋಗ್ಯತೆಯಾದರೂ ಅವನಿಗೆಲ್ಲಿತ್ತು! ಇಷ್ಟೆಲ್ಲ ಸಾಲದೆಂಬುದಕ್ಕೆ ನನ್ನ ಹೆತ್ತವರನ್ನೂ ನಾನು ಕಣ್ಣೆತ್ತಿ ನೋಡಬಾರದು ಅಂತ ಕೂಡಾ ತಾಕೀತು ಮಾಡಿದ್ದನಲ್ಲ! ನಾನೊಬ್ಬಳು ಪೆದ್ದಿ. ಗಂಡನೇ ಸರ್ವಸ್ವ. ಅವನ ಮುಂದೆ ಹೆತ್ತವರು, ಒಡಹುಟ್ಟಿದವರು, ಬಂಧುಬಳಗವೆಲ್ಲ ಯಾವ ಲೆಕ್ಕಕ್ಕೆ? ಎಂದು ಮೂರ್ಖಳಂತೆ ಯೋಚಿಸಿಬಿಟ್ಟೆ. ಆದರೆ ಅದಕ್ಕೆ ಪ್ರತಿಯಾಗಿ ಅವನಿಂದ ನನಗೇನು ಸಿಕ್ಕಿತು? ನನ್ನದು ಹಾಗಿರಲಿ, ಅವನು ತನ್ನ ಮಗಳ ಬಗ್ಗೆಯಾದರೂ ಯೋಚಿಸಿದನಾ? ಅವಳನ್ನೂ ಯರ‍್ಯಾರದ್ದೋ ಹಂಗಿನಲ್ಲಿ ಹಾಕಿದವನು ಇದ್ದರೆಷ್ಟು ಬಿಟ್ಟರೆಷ್ಟು! ಎಂದು ಆಕ್ರೋಶದಿಂದ ಅಂದುಕೊಳ್ಳುತ್ತಿದ್ದ ಪ್ರೇಮ ಗಂಡನ ಮೇಲೆ ಮತ್ತಷ್ಟು ತಿರಸ್ಕಾರವನ್ನೇ ತಳೆಯುತ್ತಿದ್ದಳು. ಆದರೆ ಮರುಗಳಿಗೆಯಲ್ಲಿ ಅವಳ ಯೋಚನಾ ಲಹರಿಯು ಬೇರೊಂದು ತಿರುವಿನಲ್ಲೂ ಸಾಗುತ್ತಿತ್ತು. ಅವನು ದಾರಿ ತಪ್ಪಿದ. ನನಗೆ ಮೋಸ ಮಾಡಿದ ಅದೆಲ್ಲವೂ ಸರಿ. ಆದರೆ ನಾನಾದರೂ ಮಾಡಿದ್ದೇನು? ಅವನನ್ನು ಪ್ರೀತಿಯಿಂದ ತಿದ್ದಿ ತೀಡಿ ಸರಿದಾರಿಗೆ ತಂದು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ನಾನ್ಯಾಕೆ ಪ್ರಯತ್ನಿಸಲಿಲ್ಲ! ನಾವಿಬ್ಬರು ಜೊತೆಯಾದ ಆರಂಭದಲ್ಲಿ ನನಗೆ ಅವನ ಮೇಲಿದ್ದ ಆ ಅಗಾಧ ಪ್ರೀತಿ, ಮಮತೆ ಅದು ಹೇಗೆ ಬತ್ತಿ ಹೋಯಿತು? ಸಂಸಾರವನ್ನು ಕಾಪಾಡುವಲ್ಲಿ ನನ್ನ ಪಾತ್ರವೂ ಬಹಳ ಮುಖ್ಯವೇ ಆಗಿತ್ತಲ್ಲವಾ? ನಾನೇಕೆ ಆ ವಿಷಯದಲ್ಲಿ ನಿರಾಸಕ್ತಳಾಗಿಬಿಟ್ಟೆ. ಮಗಳ ಜವಾಬ್ದಾರಿಯನ್ನಾದರೂ ನಾನು ಹೊರಬೇಕಿತ್ತು. ಅದನ್ನೂ ಮಾಡಲಿಲ್ಲವಲ್ಲ? ಎಂದುಕೊಳ್ಳುವವಳು, ಬಹುಶಃ ಅದಕ್ಕೂ ಕಾರಣವಿರಬಹುದು. ಒಂದು ಮುಂಜಾನೆದ್ದು ದುಡಿಯಲು ಹೋದೆನೆಂದರೆ ಮತ್ತೆ ಹೊತ್ತು ಕಂತುವ ಹೊತ್ತಿಗೆ ಸೋತು ಸುಣ್ಣವಾಗಿ ಬರುತ್ತಿದ್ದವಳಲ್ಲಿ ಗಂಡ, ಮಗಳ ಬೇಕು ಬೇಡಗಳನ್ನು ಪೂರೈಸುವ ತ್ರಾಣ, ಉತ್ಸಾಹವಾದರೂ ಎಲ್ಲಿರುತ್ತಿತ್ತು? ಆಗೆಲ್ಲ ಯಾರೂ ಮತ್ತು ಯಾವುದೂ ಬೇಡವಾಗಿ ಬಿಡುತ್ತಿತ್ತು. ಅದಕ್ಕೆ ತಕ್ಕಂತೆ ಮಗಳು ಕೂಡಾ ಅಪ್ಪ ಅಮ್ಮನನ್ನು ಬಿಟ್ಟು ಬಾಯಮ್ಮನನ್ನೇ ನೆಚ್ಚಿಕೊಂಡಳಲ್ಲ! ಹಾಗಾಗಿ ನನಗೂ ಅವಳನ್ನು ಅವರಿಂದ ದೂರ ಮಾಡಲು ಮನಸ್ಸಾಗಲಿಲ್ಲ. ಅಷ್ಟಲ್ಲದೇ ನನಗೂ ಅದೇ ಅನುಕೂಲವಾಗಿತ್ತೇನೋ! ಎಂದುಕೊಳ್ಳುತ್ತ ತನ್ನ ದೌರ್ಬಲ್ಯವನ್ನೂ ಒಪ್ಪಿಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದಳು.
ಬಳಿಕ ಅವಳ ಯೋಚನೆ ಇನ್ನೊಂದು ಮಜಲಿನಲ್ಲಿ ಸಾಗುತ್ತಿತ್ತು. ನನ್ನ ಹೆತ್ತವರಿಗಾದರೂ ನನ್ನ ಮೇಲೆ ಕರುಣೆ ಯಾಕೆ ಬರಲಿಲ್ಲ? ಮಗಳ ಬದುಕು ಹೊಣೆಗೇಡಿಯೊಬ್ಬನ ಕೈಗೆ ಸಿಲುಕಿ ಹಾಳಾಗಿ ಹೋಗುತ್ತಿದ್ದುದು ಅವರಿಗೂ ತಿಳಿಯುತ್ತಿಲ್ಲವಾ. ಒಂದೇ ಒಂದು ದಿನವಾದರೂ ಅರ‍್ಯಾಕೆ ಆ ಬಗ್ಗೆ ವಿಚಾರಿಸುವ ಮನಸ್ಸು ಮಾಡಲಿಲ್ಲ? ಕಳೆದ ಹದಿನೆಂಟು ವರ್ಷಗಳಲ್ಲಿ ಅಪ್ಪ, ಅಮ್ಮನನ್ನು ತಾನು ನೋಡಿದ್ದು ಎರಡೇ ಎರಡು ಬಾರಿ. ಒಮ್ಮೆ ದೇವಸ್ಥಾನದಲ್ಲಿ ಹೂವಿನ ಪೂಜೆಯ ದಿವಸ. ಮತ್ತೊಮ್ಮೆ ಮೀನು ಮಾರುಕಟ್ಟೆಯಲ್ಲಿ. ಆ ಎರಡು ಭೇಟಿಯಲ್ಲೂ ಅರ‍್ಯಾರೂ ನನ್ನೊಡನೆ ಮಾತಾಡಲೇ ಇಲ್ಲ ಮಾತ್ರವಲ್ಲ ಕಣ್ಣೆತ್ತಿಯೂ ನೋಡಲಿಲ್ಲ. ನಾನಾದರೂ ಮಾತಾಡಿಸುತ್ತೇನೆ ಎಂಬಷ್ಟರಲ್ಲಿ ನಾನು ಅವರ ಹಿಂದಿನ ಜನ್ಮದ ಶತ್ರುವೇನೋ ಎಂಬoತೆ ಕಿಡಿ ಕಾರುತ್ತ ಹೊರಟು ಹೋಗಿದ್ದರಲ್ಲ! ಹಾಗಾದರೆ ಜಗತ್ತಿನಲ್ಲಿ ಯಾರೂ ಮಾಡದಿರುವಂಥ ತಪ್ಪಾದರೂ ನಾನೇನು ಮಾಡಿದ್ದೇನೆ? ಎಂದುಕೊoಡು ಕಠೋರವಾಗುವವಳಲ್ಲಿ ಕಣ್ಣೀರು ಕಟ್ಟೆಯೊಡೆಯುತ್ತಿತ್ತು. ಅತ್ತು ಅತ್ತು ಸ್ವಲ್ಪ ಶಾಂತವಾದ ನಂತರ ಮತ್ತೆ ಯೋಚನೆಗೆ ಬೀಳುವವಳು, ಯಾರಿಗೆ ಗೊತ್ತು ಬಹುಶಃ ಅವರು ಅಂದು ತಮಗಾದ ಅವಮಾನದಿಂದ ಕರುಳ ಸಂಬoಧವನ್ನೇ ಕಡಿದುಕೊಂಡಿರಬಹುದು ಅಥವಾ ತಮ್ಮ ಶಾಪ, ಶಪಥಗಳಿಗೆ ಕಟ್ಟುಬಿದ್ದು ದ್ವೇಷವನ್ನೇ ಮುಂದುವರೆಸುತ್ತಿರಲೂಬಹುದು. ಒಡಹುಟ್ಟಿದ ತಮ್ಮನೂ ಒಂದೆರಡು ಬಾರಿ ಎಲ್ಲೋ ಎದುರು ಸಿಕ್ಕಿದ್ದ. ಆದರೆ ನನ್ನನ್ನು ಕಂಡವನು ಹೆಡೆ ಮೆಟ್ಟಿದ ಸರ್ಪದಂತೆ ಬುಸುಗುಟ್ಟುತ್ತ ಹೊರಟು ಹೋದ. ಇಷ್ಟಾದ ಬಳಿಕ ಅವರೆಲ್ಲ ಸಮೀಪವಿದ್ದರೂ ನನಗೆ ನೋಡಲಾಗಲಿಲ್ಲ. ನೋಡುವ ಅವಕಾಶವನ್ನು ಆ ಪಂಜುರ್ಲಿಯೇ ಕಿತ್ತುಕೊಂಡನೋ ಅಥವಾ ಅಮ್ಮ ಆವತ್ತು ನೆಲಕ್ಕೆ ಕೈ ಬಡಿದು ಹಾಕಿದ ಶಾಪವೇ ನನ್ನ ಕುಟುಂಬಕ್ಕೆ ತಟ್ಟಿತೋ? ತಟ್ಟಿರಲೂಬಹುದು. ಬಹುದೇನು? ತಟ್ಟಿಯೇ ಬಿಟ್ಟಿದೆಯಲ್ಲ! ಎಂದುಕೊoಡು ತಿರಸ್ಕಾರದ ಉಸಿರು ದಬ್ಬುತ್ತಾಳೆ. ಆನಂತರ ಮತ್ತೆ ಯೋಚಿಸುತ್ತ, ಅದೇನೇ ಇರಲಿ. ನಾನೀಗ ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಂಡಾಯಿತಲ್ಲ. ಇನ್ನು ಯಾರ ಮತ್ತು ಯಾವುದರ ಹೆದರಿಕೆ ನನಗೆ? ಇನ್ನು ಮುಂದೆ ಕಾಲಕ್ಕೆ ತಕ್ಕಂತೆ ಕೋಲ ಕಟ್ಟುತ್ತ ಹೋಗುವುದಷ್ಟೇ ಜೀವನ. ಇಲ್ಲಿ ಎಲ್ಲರ ಆಟವೂ ಒಂದಲ್ಲ ಒಂದು ದಿನ ಮುಗಿಯಲೇಬೇಕಲ್ಲ. ಅವರಲ್ಲಿ ನಾನೂ ಒಬ್ಬಳು ಎಂದುಕೊoಡರಾಯ್ತು! ಎಂದೆಲ್ಲ ಅಂದುಕೊಳ್ಳುತ್ತಿದ್ದ ಪ್ರೇಮಾಳಿಗೆ ಕೊನೆಯಲ್ಲಿ ತನ್ನ ಜೀವನದ ಮೇಲೆ ಜಿಗುಪ್ಸೆಯೇ ಮೆಲುಗೈ ಸಾಧಿಸುತ್ತಿತ್ತು. ಆದ್ದರಿಂದ ಅವಳು ಈಚೀಚೆಗೆ ತನ್ನ ಸುತ್ತಮುತ್ತಲಿನ ಎಲ್ಲಾ ಆಗುಹೋಗುಗಳಿಗೂ ನಿರಾಸಕ್ತಳಾಗಿ ಜೀವನದ ಗಹನವಾದ ಸತ್ಯವೊಂದರ ದರ್ಶನವಾದವಳಂತೆ ನಿರ್ಲಿಪ್ತಳಾಗಿ ಬದುಕತೊಡಗಿದ್ದಳು. ಇಂಥವಳನ್ನು ಆಂಥೋನಿ ಮತ್ತು ತಾಮಸರ ಸಾರಾಯಿ ನಶೆಯು ಆದಷ್ಟು ಸುಖವಾಗಿಡಲು ಪ್ರಯತ್ನಿಸುತ್ತಿತ್ತು. ಹಾಗಾಗಿ ಇಡೀ ದಿನ ಮೂಗಿನ ಮಟ್ಟ ಕುಡಿಯುತ್ತ, ಎಲೆಯಡಿಕೆ ಜಗಿಯುತ್ತ ಎಡೆಬಿಡದೆ ನಶ್ಯವನ್ನೂ ಮೂಗಿಗೇರಿಸಿಕೊಳ್ಳುತ್ತಿದ್ದ ಅವಳೀಗ ನಡುವಯಸ್ಸಿನವಳಾಗಿದ್ದರೂ ಅರವತ್ತರ ಮುದುಕಿಯಂತೆ ಕಾಣುತ್ತಿದ್ದಳು.
ಇತ್ತ ಅಮ್ಮನ ಅವಸ್ಥೆಯನ್ನು ಕಾಣುತ್ತ ಬರುತ್ತಿದ್ದ ಶ್ವೇತಾ ಮತ್ತು ಹೆಲನಾಬಾಯಿ ಬಹಳವೇ ನೊಂದುಕೊಳ್ಳುತ್ತಿದ್ದವರು ಅವಳಿಗೆ ಸಾಕಷ್ಟು ಬಾರಿ ಬುದ್ಧಿವಾದವನ್ನೂ ಹೇಳುತ್ತ ಸರಿದಾರಿಗೆ ತರಲು ಪ್ರಯತ್ನಿಸುತ್ತಿದ್ದರು. ಆದರೆ ಅದ್ಯಾವುದರಿಂದಲೂ ಪ್ರಯೋಜನವನ್ನು ಕಾಣದೆ ನಿರಾಶರಾಗಿದ್ದರು. ಅವಳು ಕೂಡಾ ಯಾರನ್ನೂ ಲೆಕ್ಕಿಸುವ, ಗೌರವಿಸುವ ಮತ್ತು ನಯ ವಿನಯಗಳಂಥ ಭಾವನೆ, ವರ್ತನೆಗಳನ್ನೆಲ್ಲ ಯಾವತ್ತೋ ತೊರೆದು ಬಿಟ್ಟಿದ್ದಳಲ್ಲದೇ ತಾನೊಂದು ಹೆಣ್ಣು ಎಂಬುದನ್ನೂ ಮರೆತವಳಂತೆಯೇ ಬದುಕುತ್ತಿದ್ದಳು. ಹಾಗಾಗಿ ಅವಳು ಆರಿಸಿಕೊಂಡಿದ್ದ ಸ್ವೇಚ್ಛಾಚಾರದ ಜೀವನವು ಅವಳಿಗೆ ಪೂರ್ಣ ಸುಖವನ್ನೂ ಮನಶ್ಶಾಂತಿಯನ್ನೂ ಕೊಡುತ್ತಿತ್ತು. ತನ್ನ ಸಾರಾಯಿ ಖರ್ಚಿಗೆ ಎಷ್ಟು ಬೇಕೋ ಅಷ್ಟನ್ನು ಶೆಟ್ಟರ ತೋಟದಲ್ಲೋ, ಅಕ್ಕಪಕ್ಕದ ಕಿರಿಸ್ತಾನರ ಮನೆಗಳಲ್ಲೋ ಅಥವಾ ದೇವಸ್ಥಾನದಲ್ಲೋ ಅಥವಾ ಕೆಲವು ಬ್ರಾಹ್ಮಣರ ಮನೆಗಳಲ್ಲೋ ಹೊರಗಿನ ಚಾಕರಿ ಮಾಡುತ್ತ ಸಂಪಾದಿಸಿ ಕುಡಿಯುತ್ತಿದ್ದಳು. ಕೆಲವೊಮ್ಮೆ ದುಡಿಯಲು ಮನಸ್ಸಾಗದಿದ್ದರೆ ನೆರೆಕರೆಯವರಿಂದ ಅಥವಾ ತನ್ನ ಸ್ಥಿತಿಗೆ ಅನುಕಂಪ ತೋರುವವರಿಂದಲೇ ಕಾಡಿ ಬೇಡಿ, ಸಾಲಸೋಲವನ್ನಾದರೂ ಮಾಡಿ ಕುಡಿದು ತೂರಾಡುವ ಮಟ್ಟಕ್ಕೆ ಬಂದು ತಲುಪಿದ್ದಳು.
(ಮುಂದುವರೆಯುವುದು)

.

Related posts

ಬಿಲ್ಲವರ ಅಸೋಸಿಯೇಷನ್, ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಮಹಿಳಾ ವಿಭಾಗದ ವತಿಯಿಂದ ಹರಶಿನ ಕುಂಕುಮ ಕಾರ್ಯಕ್ರಮ

Mumbai News Desk

ಮುಂಬಯಿ ಬಿಲ್ಲವರ ಹಿತಚಿಂತಕರು ಮತ್ತು ಜಯ ಸಿ ಸುವರ್ಣ ಅಭಿಮಾನಿಗಳ ವತಿಯಿಂದ ಪತ್ರಕರ್ತ,ವಾಗ್ಮಿ ,ದಿನೇಶ್ ಮಟ್ಟು ಅವರಿಗೆ ಗೌರವ.

Mumbai News Desk

ಭವೀಶ್ ಎಂ ಶೆಟ್ಟಿ ಗೆ 90 .60 ಅಂಕ .

Mumbai News Desk

“ಮಿಸ್ಟರ್ ಮದಿಮಯೆ” ಕರಾವಳಿಯಾದ್ಯಂತ  ತೆರೆಗೆ

Mumbai News Desk

ಶ್ರೀ ಸಾಯಿ ಈಶ್ವರ್ ಗುರೂಜಿ ಅವರಿಂದ ಉಡುಪಿ ಜಿಲ್ಲೆಯ ಕರಸೇವಕರಿಗೆ ಸನ್ಮಾನ.

Mumbai News Desk

ಶ್ರೀ ಧರ್ಮಶಾಸ್ತ ಭಕ್ತವೃಂದ ದೋಲ್ಗೊಟ್ಟು, ಕೆಲ್ಲಪುತ್ತಿಗೆ ಜ 4 ಮತ್ತು 5, ರಂದು 22ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಅನ್ನಸಂತರ್ಪಣೆ”

Mumbai News Desk