ಡಿ. 5ರಂದು ಮಧ್ಯಾಹ್ನ 1 ಗಂಟೆಗೆ ದಕ್ಷಿಣ ಮುಂಬೈನ ಅಜಾದ್ ಮೈದಾನದಲ್ಲಿ ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಬಿಜಿಪಿ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ್ ಬವಾಂಕುಲೆ ಇಂದು ಸಂಜೆ ಘೋಷಿಸಿದರು.
ಪ್ರಧಾನಿ ನರೇಂದ್ರ ಮೋದಿ, ಮತ್ತು ಕೇಂದ್ರ ಸಚಿವರು, ಉನ್ನತ ಬಿಜೆಪಿ ನಾಯಕರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಹಾರಾಷ್ಟ್ರದಲ್ಲಿ ನೂತನ ಮುಖ್ಯಮಂತ್ರಿಯ ಘೋಷಣೆಯಲ್ಲಿ ವಿಳಂಬ ಹಾಗೂ ಮುಂದಿನ ಸಂಪುಟದಲ್ಲಿ ಖಾತೆ ಹಂಚಿಕೆಯ ಗೊಂದಲದ ನಡುವೆಯೇ ಪ್ರಮಾಣ ವಚನ ಸ್ವೀಕಾರದ ಸ್ಥಳ ಮತ್ತು ದಿನಾಂಕವನ್ನು ಪ್ರಕಟಿಸಿದ್ದು ಅಚ್ಚರಿ ಮೂಡಿಸಿದೆ.
ಮುಂದಿನ ಮುಖ್ಯಮಂತ್ರಿಯ ಹೆಸರನ್ನು ಇನ್ನೂ ಪ್ರಕಟಿಸಿಲ್ಲ, ಆದರೂ ಕೇಸರಿ ಪಕ್ಷವು ರಾಜ್ಯದ ಉನ್ನತ ಹುದ್ದೆಗೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ನೇಮಿಸುವ ಸಾಧ್ಯತೆಯಿದೆ ಎಂಬುದು ಬಹುತೇಕ ಸ್ಪಷ್ಟವಾಗಿದೆ.
ಬಿಜೆಪಿ, ಶಿವಸೇನಾ (ಶಿಂಧೆ ) ಮತ್ತು ಎನ್ ಸಿ ಪಿ (ಅಜಿತ್ ಪವಾರ್ ) ಯನ್ನು ಒಳಗೊಂಡಿರುವ ಮಹಾಯುತಿ ಮೈತ್ರಿಕೂಟ 2024ರ ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಗೆದ್ದಿದ್ದು, ರಾಜ್ಯದ ಒಟ್ಟು 288 ವಿಧಾನಸಭಾ ಸ್ಥಾನಗಳ ಪೈಕಿ ಒಟ್ಟಾರೆಯಾಗಿ 230 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.
ಬಿಜೆಪಿ-132, ಶಿವಸೇನಾ ಶಿಂದೆ ಬಣ 57 ಮತ್ತು ಅಜಿತ್ ಪವಾರ್ ಅವರ ಎನ್ ಸಿ ಪಿ 41 ಸ್ಥಾನಗಳನ್ನು ಗಳಿಸಿದೆ.
