ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಏಳು ಜನರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.ರೇಣುಕಾ ಸ್ವಾಮಿ ಕೊಲೆ ಕೇಸ್ ಆರೋಪಿಗಳಾದ ನಟ ದರ್ಶನ್ ತೂಗುದೀಪ, ಪವಿತ್ರ ಗೌಡ ಸೇರಿದಂತೆ ಏಳು ಮಂದಿಗೆ ಕರ್ನಾಟಕ ಹೈಕೋರ್ಟ್ ರೆಗ್ಯುಲರ್ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಚಿಕಿತ್ಸೆಯಲ್ಲಿದ್ದ ನಟನಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ನ್ಯಾಯಮೂರ್ತಿ ಎಸ್ ವಿಶ್ವಜೀತ್ ಶೆಟ್ಟಿ ಅವರ ಏಕ ಸದಸ್ಯ ಪೀಠವು ಅರ್ಜಿಗಳಿಗೆ ಸಂಬಂಧಿಸಿದ ಬಹುನಿರೀಕ್ಷಿತ ಆದೇಶವನ್ನು ಶುಕ್ರವಾರ ಪ್ರಕಟಿಸಿದೆ. ದರ್ಶನ್, ಪವಿತ್ರ ಗೌಡ, ಆರ್ ನಾಗರಾಜು, ಎಂ ಲಕ್ಷ್ಮಣ್, ಅನು ಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗ, ಪ್ರದೋಷ್ ಗೆ ಜಾಮೀನು ಮಂಜೂರು ಮಾಡಿದೆ.
ನಟ ದರ್ಶನ್ ಜುಲೈ 11ರಂದು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಪ್ರಸ್ತುತ ಅವರು ಅನಾರೋಗ್ಯದ ಕಾರಣ ನೀಡಿ ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದಿದ್ದಾರೆ, ಈಗ ಅವರಿಗೆ ಜಾಮೀನು ಮಂಜೂರಾಗಿದ್ದು ತಾತ್ಕಾಲಿಕ ನಿರಾಳತೆ ದೊರಕಿದೆ .
ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಾಲ್ವರಿಗೆ ಈ ಹಿಂದೆಯೇ ಜಾಮೀನು ದೊರೆತಿತ್ತು, ಇಂದು ಏಳು ಮಂದಿಗೆ ಜಾಮೀನು ದೊರೆತಿದೆ, ಆ ಮೂಲಕ ಈ ಪ್ರಕರಣದ 11 ಆರೋಪಿಗಳಿಗೆ ಜಾಮೀನು ದೊರೆತಂತಾಗಿದೆ. ಜಾಮೀನಿನಿಂದ ದರ್ಶನ್ ಗೆ ನಿರಾಳತೆ ದೊರೆತಿದ್ದು ಅವರ ಮೇಲೆ ಈಗ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಬೇಕಾದ ಒತ್ತಡವು ತೊಲಗಿದೆ, ಮಾತ್ರವಲ್ಲದೆ ನಿಂತಿರುವ ಸಿನಿಮಾಗಳ ಚಿತ್ರಿಕರಣಕ್ಕೂ ಅವರು ತೆರಳಬಹುದಾಗಿದೆ.
