
ಕಳೆದ ಎಂಟು ದಶಕಗಳಿಗೂ ಹೆಚ್ಚು ಕಾಲದಿಂದ ಮುಂಬಯಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಜರಗಿಸುತ್ತಾ ನ್ನಡದ ಪರಿಚಾರಿಕೆಯಲ್ಲಿ ತೊಡಗಿಕೊಂಡಿದ್ದು ಮುಂಬಯಿ ಕನ್ನಡಿಗರ ಗೌರವಾದರಗಳಿಗೆ ಪಾತ್ರವಾಗಿರುವ ಮಾಟುಂಗಾ [ಪೂರ್ವ]ದ ಮುಂಬಯಿ ಕನ್ನಡ ಸಂಘದವು ಕಳೆದ ಅನೇಕ ವರ್ಷಗಳಿಂದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಈ ವರ್ಷ ಈ ಕಾರ್ಯಕ್ರಮವನ್ನು ಇದೇ ಬರುವ ಶನಿವಾರ ಡಿಸೆಂಬರ್ 21 ರಂದು ಸಂಜೆ ಗಂಟೆ 5.30 ಕ್ಕೆ ಮಾಟುಂಗಾದ ಮೈಸೂರು ಅಸೋಸಿಯೇಷನ್‌ನ ತಳ ಮಹಡಿಯಲ್ಲಿ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಖಾಲ್ಕಾ ಕಾಲೇಜು ಕನ್ನಡ ಪ್ರೇಮಿ ಮಂಡಳಿ ದತ್ತಿ ನಿಧಿಯ ಉಪನ್ಯಾಸಕರಾಗಿ ಲೇಖಕಿ, ಕವಯಿತ್ರಿ ಗಾಯತ್ರಿ ನಾಗೇಶ್ ಇವರು “ಮುಂಬಯಿಯಲ್ಲಿ ಕನ್ನಡದ ಭವಿಷ್ಯ” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ದಿ. ಜಿ.ವಿ.ರಂಗಸ್ವಾಮಿ ದತ್ತಿ ನಿಧಿಯ ಉಪನ್ಯಾಸಕರಾಗಿ ಹಿರಿಯ ರಂಗ ನಟ, ನಿರ್ದೇಶಕ, ಲೇಖಕ ಹಾಗೂ ಯಕ್ಷಗಾನ ಕಲಾವಿದ ಉಡುಪಿ ಗುಣಪಾಲ ಇವರು ” ರಂಗಭೂಮಿ- ಕಲಾವೈಭವ” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಂಗ ಕಲಾವಿದೆ, ಕವಯಿತ್ರಿ, ಸಂಘಟಕಿ ಹಾಗೂ ಖಾರ್ಘರ್ ಕರ್ನಾಟಕ ಸಂಘದ ಗೌರವ ಅಧ್ಯಕ್ಷೆ, ಎಸ್.ನಳಿನಾ ಪ್ರಸಾದ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಗುರುರಾಜ ಎಸ್.ನಾಯಕ್ ಅಧ್ಯಕ್ಷತೆ ವಹಿಸಲಿದ್ದು ಸಂಘದ ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್.ಕರ್ಕೇರರು ಕಾರ್ಯಕ್ರಮದ ನಿರ್ವಹಣೆ ಮಾಡುತ್ತಾರೆ. ಸಾಹಿತ್ಯಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಬೇಕೆಂದು ಸಂಘದ ಜೊತೆ ಕಾರ್ಯದರ್ಶಿ ಮಲ್ಲಿಕಾರ್ಜುನ ಬಡಿಗೇರರು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ 9819321186 ಈ ನಂಬ್ರವನ್ನು ಸಂಪರ್ಕಿಸಬಹುದಾಗಿದೆ.
-ಸೋಮನಾಥ ಎಸ್. ಕರ್ಕೇರ, ಮುಂಬಯಿ