28.8 C
Karnataka
April 3, 2025
ಪ್ರಕಟಣೆ

ಅಜ್ದೆಪಾಡ ಶ್ರೀ ಅಯ್ಯಪ್ಪ ದೇವಸ್ಥಾನ ಡೊಂಬಿವಲಿಯಲ್ಲಿ 3ನೇ ಸಹಸ್ರ ಕಲಶ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಸಂಭ್ರಮ



(ಲೇಖನ✍️ ವಿದ್ವಾನ್ ರಾಮಚಂದ್ರ ಬಾಯರ್(9870072184)ಪ್ರಧಾನ ಅರ್ಚಕರು ಅಯ್ಯಪ್ಪ ದೇವಾಲಯ ಡೊಂಬಿವಿಲಿ.)

ಜಗನ್ನಿಯಾಮಕ ಭಗವಂತನ ಸಂಕಲ್ಪದಂತೆ ಲೋಕಕಲ್ಯಾಣಕ್ಕಾಗಿ ಧರ್ಮಶಾಸ್ತ್ರನಾಗಿ ಕಲಿಯುಗ ವರದನಾಗಿ ಹರಿಹರ ಪುತ್ರನಾಗಿ ಅವತರಿಸಿದ ಶ್ರೀ ಅಯ್ಯಪ್ಪ ಸ್ವಾಮಿಯು ತನ್ನ ದಿವ್ಯ ಲೀಲೆಯಿಂದ ಧರ್ಮರಕ್ಷಕನಾಗಿ ಭಕ್ತ ಜನಪ್ರಿಯನಾಗಿ ನೆಲೆಸಿರುವ ಪುಣ್ಯ ಕ್ಷೇತ್ರವೇ ಕೇರಳದ ಶಬರಿಮಲೆ. ಶಬರಿಮಲೆಯು ದೇವರನಾಡೆಂದೇ ಖ್ಯಾತಿಯನ್ನು ಪಡೆದ ಕೇರಳ ರಾಜ್ಯದಲ್ಲಿದೆ. ಶ್ರೀಮನ್ನಾರಾಯಣನು ವಾಮನ ಅವತಾರದಲ್ಲಿ ಅವತರಿಸಿದಂತಹ ಸ್ಥಳ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯ ಮಹಿಮೆಯು ಅಪಾರವಾದುದು.

ಇಂದು ಭಕ್ತಾಕರ್ಷಣೀಯವಾಗಿ ಲೋಕ ಪ್ರಸಿದ್ದಿಯಿಂದ ಮೆರೆಯುತ್ತಿರುವ ಶ್ರೀ ಶಬರಿಮಲೆಯ ಪೂರ್ವ ಹಿನ್ನೆಲೆಯನ್ನು ಅವಲೋಕಿಸಿದಾಗ ಪಂದಳದ ರಾಜ ಕೇತಕೀವರ್ಮನ ಅಪೇಕ್ಷೆಯಂತೆ ಮಣುಕಂಠ ಸ್ವಾಮಿಯು ತನ್ನ ದೇವಾಲಯವನ್ನು ನಿರ್ಮಿಸಲು ಯೋಗ್ಯವಾದ ಸ್ಥಳವನ್ನು ಸೂಚಿಸಲೆಂದೇ ಬಿಟ್ಟ ಬಾಣವು ಬಿದ್ದ ಸ್ಥಳವೇ ಶಬರಿಗಿರಿ ಈ ಶಬರಿಗಿರಿಯು ತ್ರೇತಾಯುಗದಲ್ಲಿ ಶ್ರೀರಾಮನ ಪರಮ ಭಕ್ತೆಯಾದ ಶಬರಿಯು ಶ್ರೀ ರಾಮನ ಬರುವಿಕೆಗಾಗಿ ಕಾಯುತ್ತಾ ತಪಸ್ಸು ಮಾಡಿರುವ ಪುಣ್ಯ ಸ್ಥಳ. ಶಬರಿಯ ತಪೋ ಪ್ರಭಾವದಿಂದ ಪುಣ್ಯ ಭರಿತವಾದ ಈ ತಪೋಭೂಮಿಯು ಮಣಿಕಂಠ ಸ್ವಾಮಿಯ ಪಾದ ಸ್ಪರ್ಶದಿಂದ ಮತ್ತಷ್ಟು ಪಾವಿತ್ರತೆಯನ್ನು ಪಡೆದು ಮುಂದಕ್ಕೆ ಇಂದಿನ ಪುಣ್ಯ ಕ್ಷೇತ್ರವಾದ ಶಬರಿಮಲೆಯಾಗಿ ಲೋಕ ಪ್ರಸಿದ್ದಿಯನ್ನು ಪಡೆಯಿತೆಂಬ ಪ್ರತೀತಿ. ಶ್ರೀ ಕ್ಷೇತ್ರದ ಹಿನ್ನೆಲೆಯ ಪ್ರಕಾರ ಗಂಧರ್ವ ಕನ್ಯೆಯೋರ್ವಳು ತಾನುಗೈದ ಅಪರಾದದಿಂದ ಮುನಿಶಾಪಕ್ಕೆ ಗುರಿಯಾಗಿ ಧರೆಯ ಮೇಲೆ ಮಹಿಷಿ ರೂಪದಿಂದ ಜನ್ಮತಾಳಿ ಮಧಾಂದತೆಯಿಂದ ದೇವತೆಗಳನ್ನು ದೃತಿಗೆಡಿಸಿ ತನ್ನವರ ಸಾವಿಗೆ ಕಾರಣರಾದ ದೇವತೆಗಳ ಮೇಲಿನ ಸೇಡನ್ನು ತೀರಿಸಿಕೊಳ್ಳಲು ಉಗ್ರ ತಪಸ್ಸನ್ನು ಅಚರಿಸಿ ಬ್ರಹ್ಮದೇವನನ್ನು ಒಲಿಸಿ ಕೊಂಡು ಹರಿ ಹಾಗೂ ಹರನಿಂದ ಹುಟ್ಟಿದ ಮಗನಲ್ಲದೆ ನನಗೆ ಇನ್ಯಾರಿಂದಲೂ ಮೃತ್ಯು ಬರಕೂಡದೆಂಬ ವರಪಡೆದು ದುರುಳ ಪ್ರವೃತ್ತಿಯಿಂದ ವಿಜೃಂಭಿಸುತ್ತಾಳೆ. ಮಹಿಷಿಯ ಬಾಧೆಯಿಂದ ಬಳಲಿ ಕಂಗೆಟ್ಟ ದೇವತೆಗಳನ್ನು ಸಂತೈಸಿದ ಬ್ರಹ್ಮೇವನು. ಮಹಿಷಿಯ ವಧೆಯ ಕುರಿತು ಯೋಚಿಸಿ ಕಾರ್ಯ ಪ್ರವರ್ತನಾಗುವೆನೆಂಬ ಭರವಸೆಯನ್ನು ನೀಡುತ್ತಾನೆ.ಹೀಗೆ ಕಾಲ ಉರುಳಿದಂತೆ ಲೋಕ ಕಂಟಕಿಯಾದ ಮಹಿಷಿಗೆ ಅವಳ ವರವೇ ಅವಳಿಗೆ ಮೃತ್ಯುವಾಗಿ ಪರಿಣಮಿಸಿ ಹರಿಹರನ ಪುತ್ರನ ಅವತಾರಕ್ಕೆ ಕಾರಣವಾಗುತ್ತದೆ ಲೋಕ ಭಾರವನ್ನು ನೀಗಿಸಲು ಮಹಾವಿಷ್ಣು ತಾಳಿರುವ ಮೋಹಿನಿ ರೂಪಕ್ಕೆ ಆಕರ್ಷಿತನಾದ ಪರಮೇಶ್ವರನು ಮೋಹಿನಿಯನ್ನು ಕೂಡಲು ಜನಿಸಿದ ಮಗುವೇ ಹರಿಹರ.
ಹೀಗೆ ಲೋಕ ಕಲ್ಯಾಣಕ್ಕಾಗಿ ಜಗತ್ತನ್ನು ಆಪತ್ತಿನಿಂದ ಪಾರು ಮಾಡಲು ಹರಿಹರ ಪುತ್ರನಾಗಿ ಅವತಾರವೆತ್ತಿದ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯನ್ನು ಆರಾಧಿಸುತ್ತಾ ತಾವು ಜೀವನ ಸಾಗಿಸಲು ಭದ್ರವಾಗಿ ತಳವುರಿದಲ್ಲೂ ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದಾರೆ ಎಂಬುದಕ್ಕೆ ಮುಂಬೈಯ ಮಹಾನಗರದಲ್ಲಿ ನಮ್ಮವರಿಂದ ಅಲ್ಲಲ್ಲಿ ಹುಟ್ಟಿಕೊಂಡ ಶ್ರೀ ಅಯ್ಯಪ್ಪ ಮಂದಿರಗಳು ಭಜನಾ ಮಂಡಳಿಗಳು ಸಾಕ್ಷಿ.
ಪರಿಶುದ್ಧವಾದ ಸಮರ್ಪಣಾ ಭಾವದಿಂದ ಅರ್ಪಿಸಿದ ಸೇವೆಯು ಭಗವಂತನಿಗೆ ಸಲ್ಲುತ್ತದೆ ಇಂತಹ ಭಕ್ತಿಯ ಪಥದಲ್ಲಿ ಮೆರೆಯುತ್ತಿರುವ ಅಜೇಪಾಡ ಶ್ರೀ ಅಯ್ಯಪ್ಪ ಮಂದಿರದ ಹುಟ್ಟು ಬೆಳವಣಿಗೆಗೆ ಕಾರಣ ರಾದವರೆಲ್ಲರ ನಿಷ್ಠಾವಂತ ಸೇವೆಯು ಅವಿಸ್ಮರಣೀಯ.
ದೇವರನ್ನು ಶ್ರದ್ದಾ ಭಕ್ತಿಯಿಂದ ಆರಾಧಿಸುವ ಭಕ್ತರೆಲ್ಲರ ಹೃದಯಂತರಾಳದಲ್ಲಿ ದೇವರು ನೆಲೆಯಾಗುತ್ತಾರೆ ಎಂಬುದು ನಮ್ಮ ಧರ್ಮದ ನಂಬಿಕೆ. ದೇವಾಲಯವೆಂಬುದು ಒಂದು ಗ್ರಾಮದ ಹೃದಯವಿದ್ದಂತೆ ಎಲ್ಲೆಲ್ಲಿ ವಿಶೇಷತೆಗಳು ಕಾಣಿಸಿಕೊಳ್ಳುತ್ತವೆಯೋ ಅಲ್ಲೆಲ್ಲ ಭಗವಂತನ ದಿವ್ಯ ಸಾನಿಧ್ಯವಿರುತ್ತದೆಯಂತೆ .ಅಂತಹ ಒಂದು ಕಾರ್ಣಿಕವಾದ ಪುಣ್ಯಕ್ಷೇತ್ರ ಅಜ್ದೆಪಾಡ ಶ್ರೀ ಅಯ್ಯಪ್ಪ ದೇವಸ್ಥಾನ. ಅಜ್ಜೆಪಾಡದ ಶ್ರೀ ಅಯ್ಯಪ್ಪ ದೇವಸ್ಥಾನವು ಸುಮಾರು 40 ವರ್ಷಗಳ ಭವ್ಯ ಇತಿಹಾಸ ಇರುವ ದೇವಸ್ಥಾನ. ಹಲವಾರು ವರ್ಷಗಳ ಹಿಂದೆ ಬೆರಳೆಣಿಕೆಯ ಭಕ್ತರು ಸೇರಿ ಶ್ರೀ ಅಯ್ಯಪ್ಪ ಸ್ವಾಮಿಯ ಭಾವಚಿತ್ರವನ್ನು ಇಟ್ಟು ಷರಣು ಘೋಷದೊಂದಿಗೆ ಪೂಜಿಸಲ್ಪಡುತ್ತಿದ್ದ ಗುಡಿಯು ಇಂದು ಭಕ್ತರ ಮೊರೆ ಯನ್ನು ಆಲಿಸುವ ಇಷ್ಟ ಪ್ರದಾಯಕ ಶ್ರೀ ಅಯ್ಯಪ್ಪ ದೇವರ ಭವ್ಯ ದೇವಸ್ಥಾನವಾಗಿ ಡೊಂಬಿವಲಿಯ ಅಜ್ದೆಪಾಡದಲ್ಲಿ ವಿಜೃಂಬಿ ಸುತ್ತಿದೆ. ಕಲಿಯುಗ ವರದನಾದ ಶ್ರೀ ಅಯ್ಯಪ್ಪ ದೇವರು ಪರಿವಾರ ದೇವರುಗಳ ಸಮೇತ ಈ ಕ್ಷೇತ್ರದಲ್ಲಿ ಭಕ್ತವತ್ಸಲನಾಗಿ ಬರುವಂತಹ ಭಕ್ತರ ಮನೋಕಾಮನೆಗಳನ್ನು ನೆರವೇರಿಸುತ್ತಾ ಬಂದಿರುವುದು ಸತ್ಯ ಸಂಗತಿ. ಅಗಣಿತ ಮಹಿಮನು ಸಕಲ ಅಂತರ್ಯಾಮಿಯಾದ ಶ್ರೀ ಅಯ್ಯಪ್ಪ ಸ್ವಾಮಿಯ ಲೀಲೆಯನ್ನು ಬಲ್ಲವರಾರು ?.
ಭಕ್ತಿಯ ಪಥದಲ್ಲಿ ಮೆರೆಯುತ್ತಿರುವ ಅಜ್ದೆಪಾಡ ಶ್ರೀ ಅಯ್ಯಪ್ಪ ಮಂದಿರದ ಹುಟ್ಟು ಬೆಳವಣಿಗೆಗೆ ಕಾರಣ ರಾದವರೆಲ್ಲರ ನಿಷ್ಠಾವಂತ ಸೇವೆಯು ಅವಿಸ್ಮರಣೀಯ. ದೇವರನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುವ ಭಕ್ತರೆಲ್ಲರ ಹೃದಯಂತರಾಳದಲ್ಲಿ ದೇವರು ನೆಲೆಯಾಗುತ್ತಾರೆ ಎಂಬುದು ನಮ್ಮ ಹಿಂದೂ ಧರ್ಮದ ನಂಬಿಕೆ. ದೇವಾಲಯವೆಂಬುದು ಒಂದು ಗ್ರಾಮದ ಹೃದಯವಿದ್ದಂತೆ ಎಲ್ಲೆಲ್ಲಿ ವಿಶೇಷತೆಗಳು ಕಾಣಿಸಿಕೊಳ್ಳುತ್ತವೆಯೋ ಅಲ್ಲೆಲ್ಲ ಭಗವಂತನ ದಿವ್ಯ ಸಾನಿಧ್ಯವಿರುತ್ತದೆಯಂತೆ ಅಂತಹ ಒಂದು ಕಾರ್ಣಿಕವಾದ ಪುಣ್ಯ ಕ್ಷೇತ್ರ ಥಾಣೆ ಜಿಲ್ಲೆಯ ಡೊಂಬಿವಲಿ ನಗರದಲ್ಲಿದೆ ಎನ್ನಲು ಅಭಿಮಾನವಾಗುತ್ತಿದೆ.
ಡೊಂಬಿವಲಿ ನಗರದ ತುಳು- ಕನ್ನಡಿಗರು ಇತರರೊಂದಿಗೆ ಒಮ್ಮತದಿಂದ ಬದುಕುವುದರೊಂದಿಗೆ ಸಂಘ- ಸಂಸ್ಥೆ, ಭಜನಾ ಮಂದಿರ, ದೇವಸ್ಥಾನಗಳನ್ನು ನಿರ್ಮಿಸಿ ನಮ್ಮತನವನ್ನು ಉಳಿಸುವ ಕಾರ್ಯವನ್ನು ಮಾಡುತ್ತಾ ಡೊಂಬಿವಲಿ ನಗರವನ್ನು ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ನಗರವಾಗಿ ಮೆರೆಯುವಂತೆ ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ. ಮಹಾರಾಷ್ಟ್ರದ ತುಳುನಾಡೆಂದೇ ಖ್ಯಾತಿಯನ್ನು ಪಡೆದ ಡೊಂಬಿವಲಿಯ ಅಜ್ದೆಪಾಡ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ತನ್ನದೇ ಅದ ಹಿತಿಹಾಸವಿದೆ. ಸುಮಾರು 40 ವರ್ಷಗಳ ವರ್ಷಗಳ ಹಿಂದೆ ಬೆರಳೆಣಿಕೆಯ ಭಕ್ತರು ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಶ್ರೀ ಅಯ್ಯಪ್ಪ ಸ್ವಾಮಿಯ ಭಾವಚಿತ್ರವನ್ನು ಇಟ್ಟು ಪೂಜಿಸಲ್ಪಡುತ್ತಿದ್ದ ಗುಡಿಯು ಇಂದು ಅಸಂಖ್ಯಾತ ಭಕ್ತರ ಮೊರೆ ಯನ್ನು ಆಲಿಸುವ ಭಕ್ತರ ಇಷ್ಟ ಪ್ರದಾಯಕ ಶ್ರೀ ಅಯ್ಯಪ್ಪ ದೇವರ ಭವ್ಯ ದೇವಸ್ಥಾನವಾಗಿ ವಿಜೃಂಬಿ ಸುತ್ತಿದೆ. ಕಲಿಯುಗ ವರದನಾದ ಶ್ರೀ ಅಯ್ಯಪ್ಪ ದೇವರು ಪರಿವಾರ ದೇವರುಗಳ ಸಮೇತ ಈ ಕ್ಷೇತ್ರದಲ್ಲಿ ಭಕ್ತವತ್ಸಲನಾಗಿ ಬರುವಂತಹ ಭಕ್ತರ ಮನೋಕಾಮನೆಗಳನ್ನು ನೆರವೇರಿಸುತ್ತಾ ಬಂದಿರುವುದು ನಿತ್ಯಸತ್ಯ ಸಂಗತಿ. ಅಗಣಿತ ಮಹಿಮನು ಸಕಲ ಅಂತರ್ಯಾಮಿಯಾದ ಶ್ರೀ ಅಯ್ಯಪ್ಪ ಸ್ವಾಮಿಯ ಲೀಲೆಯನ್ನು ಬಲ್ಲವರಾರು ಸ್ವಾಮಿಯ ಲೀಲೆ ಅಗಾಧವಾದದ್ದು ಸ್ವಾಮಿಯು ಸತ್ಯ ಪರೀಕ್ಷಕನು ಸಹನಾ ವೀಕ್ಷಕಕನು. ಅವನ ಪರೀಕ್ಷೆಯಲ್ಲಿ ಗೆದ್ದವರೇ ಪುಣ್ಯಾತ್ಮರು ಇಂತಹ ಭಕ್ತರ ಭಕ್ತಿಭಾವ ಕಾರ್ಯ ನಿಷ್ಠೆಗೆ ಕರುಣಾಮಯನಾದ ಅಯ್ಯಪ್ಪ ಸ್ವಾಮಿಯ ಪೂರ್ಣಾನುಗ್ರಹ ಒದಗಿತೋ ಎಂಬಂತೆ ಹಿರಿಯರ ಆದರ್ಶನೀಯ ಮಾರ್ಗದರ್ಶನದಿಂದ ಊರ ಪರವೂರ ಭಕ್ತರ, ಕೊಡುಗೈ ದಾನಿಗಳ ಸಂಪೂರ್ಣ ಬೆಂಬಲ ಒದಗಿ ಬರಲು ಶ್ರೀ ಅಯ್ಯಪ್ಪ ಭಕ್ತ ಮಂಡಳಿಯ ಅವಿರತ ಪರಿಶ್ರಮ ಫಲವಾಗಿ 2000 ನೇ ಇಸವಿಯಲ್ಲಿ ಪರಿವಾರ ದೇವರುಗಳಾದ ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಶ್ರೀ ದುರ್ಗಾಪರಮೇಶ್ವರಿ ಹಾಗೂ ಶಿವನಿಗೆ ಪ್ರತ್ಯೇಕ ಸ್ಥಳವನ್ನು ನೀಡಿ ಶ್ರೀ ಅಯ್ಯಪ್ಪ ದೇವರ ಭವ್ಯ ದೇವಸ್ಥಾನ ನಿರ್ಮಾಣ ಗೊಂಡಿತು. ರತ್ನಾಕರ್ ಜಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮತ್ತು ಕಾರ್ಯಕಾರಿ ಮಂಡಳಿಯ ಸಂಪೂರ್ಣ ಸಹಕಾರದೊಂದಿಗೆ ಪ್ರಥಮ ಅಷ್ಟ ಬಂದ ಸಹಸ್ರ ಕಲಶ ಬ್ರಹ್ಮ ಕಲಶೋತ್ಸವ ವಿಜೃಂಭಣೆಯಿಂದ ಜರಗಿತು.
2012 ರಲ್ಲಿ ದೇವಸ್ಥಾನದ ಬದಿಯ 2000 ಸಾವಿರ ಚದರ ಅಡಿ ಜಾಗವನ್ನು ಖರೀದಿಸಿ ಸರ್ವ ಭಕ್ತರ ನೆರವಿನಿಂದ ಸುಂದರವಾದ ಸುಧರ್ಮ ಸಭಾಗೃಹವನ್ನು ನಿರ್ಮಿಸಿ ಸಮಾಜದ ಮಾದ್ಯಮ ವರ್ಗದ ಬಾಂಧವರಿಗೆ ಅನುಕೂಲವಾಗುವಂತೆ ಲೋಕಾರ್ಪಣೆಯಾಗಿರುವುರೊಂದಿಗೆ ಶ್ರೀ ನಾಗ ದೇವರ ಪ್ರತಿಷ್ಠಾಪನೆ ಗೈಯ್ಯಲಾಯಿತು ಅಂಬಿಕಾ ಪ್ರಭಾಕರ್ ಅರ್. ಶೆಟ್ಟಿಯವರ ಅಧ್ಯಕ್ಷತೆ ಹಾಗೂ ಕಾರ್ಯದರ್ಶಿಯಾಗಿ ಹೇಮಂತ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸಂಪೂರ್ಣ ಸಹಕಾರದೊಂದಿಗೆ ದ್ವಿತೀಯ ಸಹಸ್ರ ಕಲಶ ಅಷ್ಟಬಂದ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಿತು.
ಶ್ರೀ ಅಯ್ಯಪ್ಪ ಭಕ್ತ ಮಂಡಳಿಯ ಸಂಪೂರ್ಣ ಕೆಲಸ ಕಾರ್ಯಗಳು ಸದಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮತ್ತು ಕಾರ್ಯದರ್ಶಿ ಜಯರಾಮ ಶೆಟ್ಟಿಯವರ ಮುರ್ತುವರ್ಜಿಯಲ್ಲಿ ಕಾರ್ಯಕಾರಿ ಸಮಿತಿಯ ಹಾಗೂ ಪದಾಧಿಕಾರಿಗಳ ಸಂಪೂರ್ಣ ಸಹಕಾರದೊಂದಿಗೆ ನಡೆಯುತ್ತಿದ್ದು ಕ್ಷೇತ್ರದ ಪ್ರಧಾನ ಅರ್ಚಕರಾದ ರಾಮಚಂದ್ರ ಬಾಯರ್ ರವರ ಪೌರೋಹಿತ್ಯದಲ್ಲಿ ನಿತ್ಯ ಪೂಜೆ ಪುರಸ್ಕಾರಗಳು ನಡೆಯುತ್ತಿದೆ.
ಪ್ರತಿ ವರ್ಷ ವಾರ್ಷಿಕ ಮಹಾಪೂಜೆಯನ್ನ ಕ್ಷೇತ್ರದ ತಂತ್ರಿ ರಾಘವೇಂದ್ರ ಉಪಾಧ್ಯಾಯ ಉಚ್ಚಿಲ ಇವರ ನೇತೃತ್ವದಲ್ಲಿ ಹಾಗೂ ರಾಮಚಂದ್ರ ಬಾಯಾರ್ ರವರ ಪೌರೋಹಿತ್ಯದಲ್ಲಿ ಅಚ್ಚು ಕಟ್ಟಾಗಿ ನಡೆಯುತ್ತಿದ್ದು ಪ್ರತಿ ವರ್ಷ ನಾರಾಯಣ ಗುರುಸ್ವಾಮಿಯವರ ಮುಂದಾಳತ್ವದಲ್ಲಿ ಸುಮಾರು 200 ರಿಂದ 250 ಅಯ್ಯಪ್ಪ ಭಕ್ತರು ಮಾಲಾಧಾರಣೆ ಮಾಡುತ್ತಿದ್ದು ಮಾಲಾಧಾರಿ ಸ್ವಾಮಿಗಳಿಗೆ ತಂಗುವ ಹಾಗೂ ಉಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಅಡಳಿತ ಮಂಡಳಿ ಮಾಡುತ್ತಿದೆ.
ದೇವಸ್ಥಾನದ ಕಾರ್ಯಕಲಾಪ ಕೇವಲ ಧಾರ್ಮಿಕ ಕಾರ್ಯಕ್ಕೆ ಸೀಮಿತವಾಗಿರದೆ ಒರ್ವ ವಿದ್ಯಾರ್ಥಿ ಉತ್ತಮ ವಿದ್ಯಾರ್ಜನೆ ಗೈದರೆ ಒಂದು ಕುಟುಂಬ ಉದ್ದಾರವಾಗುತ್ತದೆ ಎಂಬ ನಿಟ್ಟಿನಲ್ಲಿ ಎಸ್.ಎಸ್.ಸಿ ವಿದ್ಯಾರ್ಥಿಗಳಿಗೆ ತಮ್ಮದೇ ಸಭಾಗೃಹದಲ್ಲಿ ಉಚಿತ ವಿದ್ಯಾಭ್ಯಾಸವನ್ನು ನೀಡಿ ಪ್ರೋತ್ಸಾಹ ನೀಡುವುದರೊಂದಿಗೆ ಪರಿಸರದ ಜನರಿಗೆ ಅಪತ್ಬಾಂಧವರಂತೆ ವೈದ್ಯಕೀಯ ನೆರವು, ತುರ್ತು ಹಣಕಾಸಿನ ಸಹಾಯ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಈ ವರ್ಷ 12 ವರ್ಷದ ಬಳಿಕ ಮೂರನೇ ಬಾರಿಗೆ ಬ್ರಹ್ಮ ಕಲಶೋತ್ಸವದ ನೂತನ ಸಮಿತಿ ರಚನೆಯಾಗಿದ್ದು ಕಲ್ಲಡ್ಕ ಕರುಣಾಕರ ಶೆಟ್ಟಿ ಅದ್ಯಕ್ಷರಾಗಿ ಹಾಗೂ ಕ ಹೇಮಂತ ಶೆಟ್ಟಿ ಕಾರ್ಯದರ್ಶಿಯಾಗಿ ಅಯ್ಕೆಯಾಗಿದ್ದು ಈ ಸಮಿತಿಯು ಕಾರ್ಯಕಾರಿ ಸಮಿತಿಯ ಸಂಪೂರ್ಣ ಸಹಕಾರದೊಂದಿಗೆ ಪುನಃ ಮೂರನೇ ಬಾರಿಗೆ ಅಷ್ಟ ಬಂದ ಸಹಸ್ರ ಕಲಶ ಬ್ರಹ್ಮಕಲಶೋತ್ಸವವನ್ನು ಇದೇ ಡಿಸೆಂಬರ್17-12-2024 ರಿಂದ ಡಿಸೆಂಬರ್ 24-12-2024 ರ ವರೆಗೆ ಜರಗಲಿದ್ದು ಇದರ ವೈದಿಕ ಕಾರ್ಯ ತಂತ್ರಿ ರಾಘವೇಂದ್ರ ಉಪಾಧ್ಯಾಯ ಉಚ್ಚಿಲ ಹಾಗೂ ರಾಮಚಂದ್ರ ಬಾಯರ್ ರವರ ಪೌರೋಹಿತ್ಯದಲ್ಲಿ ನಡೆಯಲಿದೆ.
ಮರಾಠಿ ಮಣ್ಣಿನಲ್ಲಿ ಪ್ರಪ್ರಥಮ ಬಾರಿ ನಿರಂತರ ಮೂರನೇ ಬಾರಿ ನಡೆಯಲಿರುವ ಅಷ್ಟ ಬಂದ ಸಹಸ್ರ ಕಲಶ ಬ್ರಹ್ಮಕಲಶೋತ್ಸವದ ಈ ಬೃಹತ್ ಧಾರ್ಮಿಕ ಕಾರ್ಯಕ್ರಮ ಕ್ಕೆ ಭಕ್ತ ಜನಸಾಗರ ಹರಿದು ಬರುವ ನಿರೀಕ್ಷೆ ಇದ್ದು ವಿಶೇಷ ವ್ಯವಸ್ಥೆಯನ್ನು ಮಾಡಲು ದೇವಸ್ಥಾನದ ಅಡಳಿತ ಮಂಡಳಿ , ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಪರಿಸರದ ಎಲ್ಲಾ ಸಂಘ- ಸಂಸ್ಥೆಗಳು ನಿರ್ಧರಿಸಿದೆ.
ಡಿಸೆಂಬರ್ 17 ರಂದು ಸಾಗರ್ಲಿಯ ಶ್ರೀ ಬಾಲಾಜಿ ದೇವಸ್ಥಾನದಿಂದ ಶ್ರೀ ಕ್ಷೇತ್ರ ಅಜ್ದೆಪಾಡಕ್ಕೆ ಡೊಂಬಿವಲಿಯ ಎಲ್ಲಾ ಸಂಘ- ಸಂಸ್ಥೆಯ ಹಾಗೂ ಮುಂಬಯಿ ಭಕ್ತರ ವತಿಯಿಂದ ವಿವಿಧ ವೇಷಭೂಷಣ ದೊಂದಿಗೆ ಹಸಿರು ಹೊರೆ ಕಾಣಿಕೆ ಸಮರ್ಪಣೆ ನಡೆಯಲಿದೆ ಹಾಗೂ ನಿರಂತರ ಐದು ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ಜರಗಲಿದ್ದು ಈ ಬೃಹತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಿ ಪುನೀತರಾಗ ಬೇಕೆಂದು ಕಾರ್ಯಕಾರಿ ಮಂಡಳಿಯ ವಿನಂತಿ

18 ಮೆಟ್ಟಿಲುಗಳ ಮಹಿಮೆಯು ವರ್ಣನಾತೀತ
ದೇವರಿಂದ ವ್ಯಕ್ತಿಯನ್ನು ವಿಮುಖವಾಗಿಸುವ ಮಾಯೆಯ ಮೋಡಿಗಳಾಗಿ ಬಂಧಿಸುವ ಕಾಮ ಕ್ರೋಧ, ಲೋಭ.ಮೋಹ, ಮದ, ಮತ್ಸರ, ಅಹಂಕಾರ, ಮಮಕಾರ, ಸಂಶಯಗಳೆಂಬ ಪ್ರವೃತ್ತಿ ಯನ್ನು ನಿಗ್ರಹಿಸಿ ತಾಳ್ಮೆ, ಪ್ರೀತಿ, ಕ್ಷಮೆ ನಿಸ್ವಾರ್ಥತೆ, ಕರ್ತವ್ಯ ಪರತೆ, ಧರ್ಮ, ಅರ್ಥ, ಕಾಮ ಮೋಕ್ಷಗಳನ್ನು ಪಡೆಯಲು ಮಾತ್ರವಲ್ಲದೆ ಆಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಮೃತ್ಯುವಿನಿಂದ ಮುಕ್ತಿಯೆಡೆಗೆ ಸಾಗುವ ದಾರಿಗೆ ಜ್ಞಾನ ದೀವಿಗೆಯಾಗಿ ಬದುಕಿಗೆ ಪೂರ್ಣಾರ್ಥವನ್ನು ಕೊಡುವ ಹದಿನೆಂಟು ಮೆಟ್ಟಲುಗಳು. ಒಂದೊಂದು ಮೆಟ್ಟಲೇರಿದಂತೆ ಒಂದೊಂದು ಸಿದ್ಧಿಗಳು ಸಿದ್ಧಿಸುತ್ತದೆ. ಹೀಗೆ 18 ವರ್ಷಗಳ ಪರಿಯಂತ 18 ಸಿದ್ದಿಗಳು ಪ್ರಾಪ್ತವಾಗಿ ಸ್ವಾಮಿಯ ಪರಮ ಭಕ್ತರಾಗಿ ಅನುಗ್ರಹ ನಿಗ್ರಹ ಕಾರಕನಾದ ಸ್ವಾಮಿಯ ಸನ್ನಿಧಾನದಲ್ಲಿ ಶಾಶ್ವತದ ಸದ್ಧತಿಯನ್ನು ಪಡೆಯುವರೆಂಬ ನಂಬಿಕೆಯ ಸಂಕೇತವೇ ಪೂರ್ಣಭರಿತವಾದ ಈ18 ಮೆಟ್ಟಲು

ಮುಂಬಯಿಯ ಸನಿಹ ಡೊಂಬಿವಿಲಿಯ ಪೂರ್ವದ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಅಷ್ಟಬಂಧ ಸಹಸ್ರ ಕಲಶ ಸಹಿತ ಬ್ರಹ್ಮಕಲಶ ಉತ್ಸವವು ಇದೀಗ ಮೂರನೇ ಬಾರಿಗೆ ನೆರವೇರಲಿದೆ. ( ಈ ಹಿಂದೆ 2000 ಮತ್ತು 2012 ರಲ್ಲಿ ನೆರವೇರಿತ್ತು )

ಬ್ರಹ್ಮಕಲಶ, ಅಷ್ಟಬಂಧ,ದೇವಾಲಯದ ವಿಚಾರದ ವಿಷಯ ಒಂದಿಷ್ಟು ಮೊದಲು ತಿಳಿಯೋಣ.

ಹನ್ನೆರಡು ವರ್ಷಕ್ಕೊಮ್ಮೆ ದೇವಾಲಯದಲ್ಲಿ ಬ್ರಹ್ಮಕಲಶ ನಡೆಸುವುದು ಬಹಳ ಪ್ರಸಿದ್ಧ ಸಂಪ್ರದಾಯ. ಯಾಕೆ ಹನ್ನೆರಡು? ಯಾಕೆಂದರೆ ಖಗೋಳದಲ್ಲಿ ಗುರುಗ್ರಹಕ್ಕೆ ಒಂದು ರಾಶಿಯಿಂದ ಇನ್ನೊಂದು ರಾಶಿ ತಲುಪಲು ಒಂದು ವರ್ಷ ಬೇಕು, ಹೀಗೆ ಹನ್ನೆರಡು ವರ್ಷಕ್ಕೆ ತಾನಿದ್ದ ರಾಶಿಗೆ ಬರುವ ಕಾರಣ ಶಾಸ್ತ್ರದಲ್ಲಿ ಇದನ್ನು ಬೃಹಸ್ಪತಿ ಸಂವತ್ಸರ ಎಂದು ಕರೆದಿದ್ದಾರೆ. ಗುರುಸಂವತ್ಸರ ಪೂರ್ಣವಾದಾಗ ದೇವರಿಗೆ ಬ್ರಹ್ಮಕಲಶ.

ಬ್ರಹ್ಮಕಲಶ ಎಂಬ ಹೆಸರೇಕೆ? ಕಲಶಮಂಡಲದ ಸ್ಥಾನವನ್ನು ವಾಸ್ತುವಿನ ಹೆಸರಿಂದ ಗುರುತಿಸುವ ಕಾರಣ ಕಲಶಮಂಡಲದ ನಡುಮಧ್ಯಭಾಗ ಬ್ರಹ್ಮಸ್ಥಾನ; ಅದರ ಜಾಗದ ಪ್ರಧಾನ ಕಲಶ ಬ್ರಹ್ಮಕಲಶ ಹಾಗೂ ಬ್ರಹ್ಮ ಶಬ್ದದ ಅರ್ಥ ‘ಪೂರ್ಣ’ ಎಂದು,
ಕಲಶದಲ್ಲಿ ಸಕಲಕಲಾವಾಚ್ಯನಾದ, ಪ್ರಣವಸ್ವರೂಪಿಯಾದ, ಷಡ್ಗುಣಪೂರ್ಣನಾದ ಭಗವತ್ತತ್ವವನ್ನು ಆವಾಹಿಸುವ ಕಾರಣ ಆ ಕಲಶ ಬ್ರಹ್ಮಕಲಶ.

ಇನ್ನು ಬ್ರಹ್ಮಕಲಶದ ಮುಖ್ಯ ಕಾರಣ ಹಾಗೂ ಅದರ ಪ್ರಯೋಜನವನ್ನು ತಂತ್ರಸಮುಚ್ಛಯದ ಎಂಟನೇ ಪಟಲದಲ್ಲಿ ಹೀಗೆ ನಿರೂಪಿಸಿದ್ದಾರೆ. “ವಿಶುದ್ಧಿಸಾನಿಧ್ಯಸಮೃದ್ಧಿಕಾರಕಂ” ಅಂದರೆ ದೇವರನ್ನು ವಿಧ್ಯುಕ್ತ ಪ್ರತಿಷ್ಠಾಪಿಸಿ ನಂತರದ ನಾಕನೇ ದಿನದಂದು ಲೋಕಾನುಗ್ರಹ ಕಾರಣಕ್ಕೆ,ದೇವರ ಸ್ಥಿರ ಸಾನಿಧ್ಯವೃದ್ಧಿಗಾಗಿ ಪ್ರಜೆಗಳು ಕಪಟದ್ವೇಷರಹಿತರಾಗಿ ಧರ್ಮಪ್ರಜ್ಞೆಯಿಂದ ಹರ್ಷೋಲ್ಲಾಸದಿಂದ ಇರಲು, ರಾಷ್ಟ್ರಕ್ಷೇಮದ ಉದ್ದಿಶ್ಯ ಪರಿಶುದ್ಧ ಕರ್ಮಾಂಗಗಳಿಂದ ಕೂಡಿದ ಬ್ರಹ್ಮಕಲಶವನ್ನು ದೇವರಿಗೆ ಅಭಿಷೇಕ ಮಾಡಬೇಕು.
ಈ ಒಂದು ಕರ್ತವ್ಯವಾದ ನಂತರವೂ ನಿತ್ಯ ಅರ್ಚಕರ ಕರ್ಮನಿಷ್ಠೆ, ವೇದಮಂತ್ರ ಘೋಷ, ನಿಯಮಾನುಸರಣೆ, ವಾರ್ಷಿಕಉತ್ಸವಗಳು, ಅನ್ನದಾನ ಈ ಐದು ದೇವಾಲಯದಲ್ಲಿ ಅನೂಚಾನವಾಗಿ ನಡೆದಾಗ ಬಿಂಬೋಪಾಧಿಯಲ್ಲಿ ದೇವರು ಸದಾಸನ್ನಿಹಿತರಾಗಿ ಸರ್ವರನ್ನೂ ರಕ್ಷಿಸುತ್ತಾರೆ.
ಬ್ರಹ್ಮಕಲಶೋತ್ಸವವು ಕನಿಷ್ಠ ೫ ದಿನಗಳ ಕಾರ್ಯಕ್ರಮಗಳಿಂದ ಕೂಡಿರುತ್ತದೆ. ಈ ೫ ಅಥವಾ ೭ ದಿನದಲ್ಲಿ ಭೂಶುಧ್ಯಾದಿ ಸಪ್ತಶುದ್ಧಿ, ಅಂಕುರಾರ್ಪಣವಿಧಿ, ಪ್ರಾಸಾದಶುದ್ಧಿ, ರಾಕ್ಷೋಘ್ನ, ವಾಸ್ತು, ಬಿಂಬಶುದ್ಧಿ, ಸಾಮಾನ್ಯ ವಿಶೇಷ ಹೋಮ, ಶಾಂತಿ ಹೋಮ,ಅಷ್ಟಬಂಧ ಪ್ರತಿಷ್ಠೆ, ತತ್ವ ಹೋಮ, ಮಂಟಪ ಸಂಸ್ಕಾರ, ಕಲಶ ಮಂಡಲರಚನೆ, ಬ್ರಹ್ಮ ದ್ರವ್ಯ ಪರಿಕಲಶಗಳಲ್ಲಿ ೨೫ ಸ್ನಪನದ್ರವ್ಯ ಪೂರಣ, ಪರಿಕಲಶ ದ್ರವ್ಯಕಲಶ ಬ್ರಹ್ಮಕಲಶ ಅಭಿಷೇಕ, ನ್ಯಾಸ, ಅರ್ಚನೆ , ಉತ್ಸವ, ಭೂತಬಲಿ,ಶಯ್ಯೆ,ಯಾತ್ರಾಹೋಮ, ಅವಭೃಥ ಸ್ನಾನ, ಸಂಪ್ರೋಕ್ಷಣ ಶುದ್ಧಿ ,
ಇವೇ ಮೊದಲಾದ ನಿಗಮಾಗಮ ವಿಧಿಗಳು ನಡೆಸಲ್ಪಡುತ್ತವೆ.

ಅಷ್ಟಬಂಧ

ಶಂಖ,ರಾಳ,ಅಣಲೇಕಾಯಿ,ಅರಗು,ಹತ್ತಿ,ಕಲ್ಲಿನಹುಡಿ,ಮರಳು,ನೆಲ್ಲಿಕಾಯಿಹುಡಿ ಈ ಎಂಟು ದ್ರವ್ಯಗಳ ವಿಶಿಷ್ಟ ಮಿಶ್ರಣವನ್ನು ಅಷ್ಟಬಂಧ ಎನ್ನುತ್ತಾರೆ.ಆಯಾ ದೇವರ ನವಶಕ್ತಿಗಳನ್ನು ಪೂಜಿಸಿ ಈ ಲೇಪನವನ್ನು ಪೀಠ ಬಿಂಬಗಳ ನಡುವೆ ಲೇಪಿಸಬೇಕು.
ದೇವರ ಪೀಠ ಮತ್ತು ದೇವರ ಪ್ರತಿಮೆಯ ನಡುವೆ ಹಾಕುವ ಅಷ್ಟಬಂಧವು ಗರ್ಭಗೃಹದಲ್ಲಿ ದೇವರ ಸ್ಥಿರತೆಯನ್ನು ಭದ್ರಗೊಳಿಸುತ್ತದೆ. ಆದರೆ ೧೨ ವರುಷದ ನಂತರ ಅಷ್ಟಬಂಧವು ಶಿಥಿಲವಾಗುವ ಕಾರಣ ಪುನಃ ರತ್ನಾದಿಗಳನ್ನು ಅಷ್ಟಬಂಧವನ್ನು ಹಾಕಿ ದೇವರ ಸಾನಿಧ್ಯ ವೃದ್ಧಿಗಾಗಿ ಬ್ರಹ್ಮಕಲಶ ಅಭಿಷೇಕ ನಡೆಸುವುದು ಶಿಷ್ಟ ಜನರ ಸಂಪ್ರದಾಯ.
ಪೀಠವು ಪ್ರಕೃತಿ ಸ್ವರೂಪ ಮತ್ತು ದೇವರ ಮೂರ್ತಿ ಪುರುಷ ಸ್ವರೂಪ. ಹೀಗೆ ಅಷ್ಟಬಂಧ ಲೇಪನದಿಂದ ಪ್ರಕೃತಿಪುರುಷ ಸಂಯೋಗ ಉಂಟಾಗಿ ಭಕ್ತರಿಗೆ ಬೇಕಾದ ಅನುಗ್ರಹ ಶಕ್ತಿ ಉಂಟಾಗುವುದು.
ಪೀಠ ಎಂಬುದು ಭೂಮಿ ಅಂತಯೇ ಬಿಂಬ ಅಂತರಿಕ್ಷ ಎಂಬ ಶಾಸ್ತ್ರೀಯ ಚಿಂತನೆ ಇದೆ. ಈ ನಿಟ್ಟಿನಲ್ಲಿ ಭೂಮ್ಯಾಕಾಶಕ್ಕೂ ಮೀರಿದ ಮಹಾಚೈತನ್ಯ ವಿಶ್ವದೆಲ್ಲಡೆ ವ್ಯಾಪಿಸಿದ ಮತ್ತು ನಮ್ಮ ಹೃದಯಾಕಾಶದಲ್ಲೂ ಇರುವ ಅಣೋರಣೀಯಾನ್, ಮಹತೋಮಹೀಯಾನ್ ಎಂಬಿತ್ಯಾದಿ ಭಾವನೆಗಳು ಇದರಲ್ಲಿ ಅಡಗಿವೆ.

ಈ ಬ್ರಹ್ಮಕಲಶದಲ್ಲಿ ನಡೆಯುವ ಅನ್ನದಾನಕ್ಕೆ ಇನ್ನಿಲ್ಲದ ಮಹತ್ವವನ್ನು ನೀಡಿದ್ದಾರೆ. ಆಚಾರ್ಯ ಮಧ್ವರು ತಮ್ಮ ತಂತ್ರಸಾರ ಸಂಗ್ರಹದಲ್ಲಿ (3.107)”ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನ್ನಪ್ರಸಾದ ಕಡ್ಡಾಯ “ ಎಂಬುದಾಗಿ ಸಾರಿದ್ದಾರೆ.
ಹಾಗೆಯೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಾಲಯದ ಪರಿಸರದಲ್ಲಿ ನಡೆಯಬೇಕು. ನಾಟ್ಯ,ನೃತ್ಯ, ಸಂಗೀತ,ಸಂಕೀರ್ತನೆ,ವೀಣಾ ನಾದನ, ಪಂಚವಾದ್ಯ ಮತ್ತು ದೇವರ ಮಹಿಮೆಯನ್ನು ಸಾರುವ ಅನೇಕ ಕಲಾಪ್ರಕಾರಗಳನ್ನು ವ್ಯವಸ್ಥೆಗೊಳಿಸಬೇಕು.

ದೇವಾಲಯಗಳು ಶಾಸ್ತ್ರಚೋದಿತ ಧರ್ಮಕರ್ಮಗಳನ್ನು ನಡೆಸುವ ಅಲೌಕಿಕ
ಸ್ಥಳಗಳಾಗಿ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಆಸರೆಯಾಗಿ ವೇದ ಪರಂಪರೆಯನ್ನು ಭೋಧಿಸುವ ಗುರುಕುಲಗಳಾಗಿ ಸಮಾಜದಲ್ಲಿ ಸಾತ್ವಿಕಪ್ರಜ್ಞೆಯನ್ನು ಪ್ರಚೋದಿಸುವ ಮಾರ್ಗದರ್ಶಕಗಳಾಗಿ ಶಿಲ್ಪಿಗಳಿಗೆ, ಚಿತ್ರಕಾರರಿಗೆ,ನೇಕಾರ, ಕುಂಬಾರ ಮೊದಲಾದ ನಾನಾ ಕಲಾಕಾರರಿಗೆ ಸ್ಫೂರ್ತಿಯ ಜೊತೆಗೆ ಉದ್ಯೋಗಕೇಂದ್ರಗಳಾಗಿ, ಜನರ ಹಸಿವನ್ನು ನೀಗಿಸುವ ಭೋಜನ ಶಾಲೆಗಳಾಗಿ,ಅಶಾಂತಿಯಿಂದ ಕಂಗಾಲಾದ ಜನರಿಗೆ ವಾತ್ಸಲ್ಯತಾಣವಾಗಿ, ಮತ್ತೆ ಮುಖ್ಯವಾಗಿ
ನಮ್ಮಲ್ಲಿ ವಿನಮ್ರತೆ, ಸೌಹಾರ್ದ, ಸಾಮರಸ್ಯ,ಪ್ರೇಮಭಾವ, ನಿಸ್ವಾರ್ಥ, ತ್ಯಾಗಶೀಲತೆ ಮುಂತಾದ ಸದ್ಗುಣಗಳನ್ನು ಜಾಗೃತಗೊಳಿಸುವ ಗುಣನಿಧಿಗಳಾಗಿ
ದೇವಸ್ಥಾನಗಳು ಕಂಗೊಳಿಸುತ್ತವೆ.
ಇಂತಹ ದೇವಾಲಯಗಳಿಗೆ ಪ್ರಾಮುಖ್ಯತೆ ನೀಡದೆ ಹೋದಲ್ಲಿ ಚಾರಿತ್ರ್ಯಹೀನ ಸಮಾಜ ನಿರ್ಮಾಣವಾಗಬಹುದು.
ಎಪ್ಪತ್ತರ ದಶಕದಲ್ಲಿ ಉದ್ಯೋಗ ನಿಮಿತ್ತ ಮುಂಬಯಿಗೆ ಬಂದ ತುಳುಕನ್ನಡಿಗರು ಡೊಂಬಿವಿಲಿಯಲ್ಲಿ ಅಯ್ಯಪ್ಪ ದೇವಸ್ಥಾನ ನಿರ್ಮಾಣ ಮಾಡಿದರು; ಕರ್ಮಭೂಮಿಯಲ್ಲಿ ಅರ್ಥಪ್ರಧಾನವಾದ ಜೀವನಕ್ಕಿಂತಲೂ ಧರ್ಮಪ್ರಧಾನ ಎಂದು ಧರ್ಮಶಾಸ್ತನಾದ ಅಯ್ಯಪ್ಪನಿಗೆ ಭವ್ಯ ಗುಡಿಯನ್ನು ಕಟ್ಟಿದರು( ಪ್ರತಿಷ್ಠೆ 2000 ಇಸವಿಯ ಮಾಘ
ಶುದ್ಧ ಪೂರ್ಣಿಮಾ).ಕರ್ಮಭೂಮಿಯನ್ನು ಧರ್ಮಭೂಮಿಯನ್ನಾಗಿಸುವಲ್ಲಿ ಯಶಸ್ವಿಯಾದರು.ಕೇವಲ ತುಳುಕನ್ನಡಿಗರಿಂದಲೇ ನಿರ್ಮಾಣವಾದ ಮುಂಬಯಿಯ ಪ್ರಥಮ ಅಯ್ಯಪ್ಪ ದೇವಾಲಯವಿದು.
ಇಲ್ಲಿ ಸುಧರ್ಮಾಎಂಬ ಕಲ್ಯಾಣ ಸಭಾಗೃಹ, ಪೂಜಾ ಯಾಗಾದಿಗಳನ್ನು ಕ್ರಮಬದ್ಧವಾಗಿ ನಡೆಸಲು ಯಾಗಶಾಲೆಯು ಇದೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಇತ್ಯಾದಿ ಅನೇಕ ಅಪಾರ ಕಾರ್ಯಕ್ರಮಗಳು ಇಲ್ಲಿ ನಿರಂತರವಾಗಿ
ಜರಗುತ್ತಿದೆ.
ಈ 24ವರ್ಷಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಅದೆಷ್ಟೋ ಜನರಿಗೆ ಈ ದೇವಾಲಯಮುಖೇನ ಇಲ್ಲಿಯ ಆಡಳಿತ ಮಂಡಳಿ ಸಹಾಯ ನೀಡಿದೆ.
ಅಯ್ಯಪ್ಪ ದೇವರ ಅನುಗ್ರಹ ಪಡೆದ ಭಕ್ತ ಜನರಿಂದ ದೇವರಿಗೆ ಚಿನ್ನದ ಮುಖಕವಚ, ಚಿನ್ನದ ಬೃಹತ್ ತುಳಸಿಮಣಿಮಾಲೆ, ರಜತ ಪಲ್ಲಕ್ಕಿ ,ಪ್ರಭಾವಳಿ ಇತ್ಯಾದಿ ನಾನಾಅಮೂಲ್ಯ ವಸ್ತುಗಳು ದೇವರ ಭಂಡಾರ ಸೇರಿದೆ.
ಪ್ರತಿವರ್ಷವೂ ಡಿಸೆಂಬರ್ ತಿಂಗಳಲ್ಲಿ ನಡೆಯುವ ಉತ್ಸವದಲ್ಲಿ 15000
ಕ್ಕೂ ಅಧಿಕ ಜನರು ಅನ್ನಸಂತರ್ಪಣೆಯಲ್ಲಿ ಭಾಗವಹಿಸುವುದು ಇಲ್ಲಿಯ ವಿಶೇಷ ಕಾರಣಿಕವಾಗಿದೆ.
ತಮಗೆಲ್ಲರಿಗೂ ತಿಳಿದಂತೆ ಇದೇ ಬರುವ 18.12.2024 ರಿಂದ ಆರಂಭಗೊಂಡು24.12.2024 ರ ಪರ್ಯಂತ ಮುಂಬಯಿಯ ತುಳು ಕನ್ನಡಿಗರ ಪ್ರಸಿದ್ಧ ಶ್ರೀ ಅಯ್ಯಪ್ಪ ಮಂದಿರ ಡೊಂಬಿವಿಲಿ ಪೂರ್ವದ ಅಜ್ಡೆಪಾಡದಲ್ಲಿ ಸಹಸ್ರ ಕಲಶ ಸಹಿತ ಬ್ರಹ್ಮಕಲಶೋತ್ಸವ ಜರಗಲಿದೆ,
ಹನ್ನೆರಡು ವರುಷಗಳಿಗೊಮ್ಮೆ ನಡೆಯುವ ಈ ಅಭೂತಪೂರ್ವ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಾವೆಲ್ಲರೂ ಬಂಧುಮಿತ್ರರ ಸಹಿತರಾಗಿ ದೇವರ ದರ್ಶನ ಹಾಗೂ ಅನ್ನಪ್ರಸಾದವನ್ನು ಸ್ವೀಕರಿಸಿ ಧನ್ಯರಾಗಬೇಕಾಗಿ ವಿನೀತರಾಗಿ ಪ್ರಾರ್ಥಿಸುತ್ತೇವೆ.
ಭಕ್ತರ ಸರ್ವವಿಧ ಇಷ್ಟಾರ್ಥಗಳನ್ನು ಅನುಗ್ರಹಿಸುವ ; ಲೌಕಿಕ ಮತ್ತು ಅಲೌಕಿಕ ಸಂಪತ್ತನ್ನು ನೀಡಲೆಂದು ಅಯ್ಯಪ್ಪ ದೇವರು ಜ್ಞಾನ ಮುದ್ರೆಯನ್ನು ಧರಿಸಿದ್ದಾರೆ. ಯೋಗಾರೂಢನಾದ ಸ್ವಾಮಿಯು ನಮ್ಮ ಜೀವನದಲ್ಲಿ ಬರುವ ಎಲ್ಲಾ ದ್ವಂದ್ವಗಳನ್ನು ನಿಭಾಯಿಸಲು ಬೇಕಾದ ಶಕ್ತಿಯನ್ನು ಕೊಟ್ಟು ರಕ್ಷಿಸುತ್ತಾನೆ.

ದೇವರ ಮಾಹಾತ್ಮ್ಯವನ್ನು ತಿಳಿದು , ಪ್ರಾಚೀನ ಸಂಪ್ರದಾಯಾನುಸಾರ ಭಗವತ್ಪ್ರೀತಿಗಾಗಿ ಹಾಗೂ ವಿಶ್ವಕಲ್ಯಾಣಕ್ಕಾಗಿ ನಡೆಯುವ ಈ ಪುಣ್ಯಪ್ರದ ಕರ್ತವ್ಯದಲ್ಲಿ ಯಾವುದೇ ರೀತಿಯ ಧನರೂಪದ ಅಥವಾ ವಸ್ತುರೂಪದ ಸೇವೆಯನ್ನು ಮಹನೀಯರಿಂದ ಅಪೇಕ್ಷಿಸುತ್ತೇವೆ.

ಸನಾತನ ಧರ್ಮದ ರಕ್ಷಣೆಯನ್ನು , ಭಕ್ತರ ಹಿತರಕ್ಷಣೆಯನ್ನು ಶ್ರೀಸ್ವಾಮಿಯು ಈ ಬ್ರಹ್ಮಕಲಶವೆಂಬ ಪರಿಶುದ್ಧ ಕರ್ಮಾಂಗಗಳಿಂದ ಲೋಕಕ್ಕೆಅನುಗ್ರಹಿಸಲಿ🙏
ಭಕ್ತಜನರ ಸಹಕಾರದಿಂದ ಶೋಭಿಸುವ ಈ ದಿವ್ಯ ಕಾರ್ಯಕ್ರಮಕ್ಕೆ ನಿಮ್ಮದಾದ ದೇಣಿಗೆಯನ್ನು ಅರ್ಪಿಸಲು ದೇವಾಲಯದ ಕಛೇರಿಯನ್ನು ಸಂಪರ್ಕಿಸಬಹುದು.

ಬ್ರಹ್ಮಕಲಶಕ್ಕೆ ಹಾರ್ದಿಕವಾಗಿ ಸರ್ವರನ್ನು ಆಮಂತ್ರಿಸಿ ಸ್ವಾಗತಿಸುವ

ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ
ಅಯ್ಯಪ್ಪ ದೇವಾಲಯ Azdepada ಡೊಂಬಿವಿಲಿ ಪೂರ್ವ.

Related posts

ಶ್ರೀ ಮಹಿಷಮರ್ಧಿನಿ ದೇವಸ್ಥಾನ ಬೊರಿವಿಲಿ 35ನೇ ವಾರ್ಷಿಕ ಶರನ್ನವರಾತ್ರಿ ಉತ್ಸವ.

Mumbai News Desk

ಅಕ್ಟೊಬರ್  29 ರಂದು ಭಾನುವಾರ   ಆಲ್ ಅಮೇರಿಕಾ ತುಳುಕೂಟ ದ  ”ತುಳು  ಉಚ್ಚಯ 2023”  ಉತ್ಸವ ಕಾರ್ಯಕ್ರಮ 

Mumbai News Desk

ಜ.6 ರಂದು ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಅವರ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಶಂಕರಪುರ ಇದರ 38ನೇ ವರ್ಷದ ವಾರ್ಷಿಕ ಮಹಾಪೂಜೆ

Mumbai News Desk

ಜು 27: ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದ ವತಿಯಿಂದ ಆಟಿಡೊಂಜಿ ದಿನ, ತುಳು ನಾಟಕ,

Mumbai News Desk

ಅಖಿಲ ಕರ್ನಾಟಕ ಜೈನ ಸಂಘ, ಮುಂಬೈ ನ.26ಕ್ಕೆ ರಜತ ಮಹೋತ್ಸವ ಸಮಾರಂಭ

Mumbai News Desk

ನ.18 ರಂದು ವಿಕ್ರೋಲಿ ಯಲ್ಲಿ “ಪುದರ್ ದಿದಾಂಡ್!!!!”

Mumbai News Desk