ಸರಿಯಾದ ಈಜು ಕಲಿಯದೆ ದಿನಂಪ್ರತಿ ಮಕ್ಕಳು ಯುವಜನರು ಸಾವನ್ನಪ್ಪುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಹಿರಿಯ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಈಜು ಕಲಿಯಲು ಅವಕಾಶ ಒದಗಿಸಬೇಕು ಎಂದು ಖ್ಯಾತ ಮುಳುಗುತಜ್ಞ, ಜೀವ ರಕ್ಷಕ ಈಶ್ವರ್ ಮಲ್ಪೆ ಸಲಹೆ ನೀಡಿದರು.
ಮಂಗಳೂರಿನ ಹೆಸರಾಂತ ಸಾಮಾಜಿಕ ಸಂಘಟನೆ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಇದರ ಹತ್ತನೇ ವರ್ಷದ ಮೂಲತ್ವ ವಿಶ್ವ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಮುಂದುವರಿದು ಮಾತನಾಡಿದ ಅವರು ಮಿಲಿಟರಿ ಸೇರುವುದು ತನ್ನ ಬಾಲ್ಯದ ಕನಸಾಗಿತ್ತು ಶಾಲೆಯಲ್ಲಿ ಎನ್ ಸಿ ಸಿ ಕೂಡ ಸೇರಿಕೊಂಡಿದ್ದೆ, ಆದರೆ ಮನೆಯಲ್ಲಿನ ಪರಿಸ್ಥಿತಿ ಮತ್ತು ಅಮ್ಮನನ್ನು ಕಾಡಿದ ಕಾಯಿಲೆಯಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ, ತನಗೆ ಗೊತ್ತಿರೋದು ಈಜು ಮಾತ್ರ ಆದ್ದರಿಂದಲೇ ಸಮಾಜಕ್ಕೆ ಕೈಲಾದ ಸೇವೆ ಮಾಡುತ್ತಾ ಬಂದಿದ್ದೇನೆ. ಇಲ್ಲಿಯ ತನಕ ನೀರಿನಲ್ಲಿ ಬಿದ್ದ ಸುಮಾರು 80ಕ್ಕೂ ಅಧಿಕ ಜೀವಗಳನ್ನು ರಕ್ಷಿಸಿದ್ದೇನೆ, ಒಂದು ಸಾವಿರಕ್ಕೂ ಅಧಿಕ ಮೃತ ದೇಹಗಳನ್ನು ನೀರಿನಿಂದ ಮೇಲೆತ್ತಿದ್ದೇನೆ. ತನ್ನ ಮೂರು ಮಕ್ಕಳಲ್ಲಿ ಓರ್ವ ವ್ರತಪಟ್ಟಿದ್ದು, ಇನ್ನಿಬ್ಬರು ವಿಶೇಷ ಚೇತನ ಮಕ್ಕಳಾಗಿದ್ದಾರೆ, ಸಮಾಜದ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ವೈಯಕ್ತಿಕ ಜೀವನದ ನೋವುಗಳನ್ನು ಮರೆಯಲು ಪ್ರಯತ್ನಿಸುತ್ತೇನೆ ಎಂದು ಈಶ್ವರ ಮಲ್ಪೆ ನುಡಿದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಮಂಗಳೂರು ಮೀನುಗಾರಿಕೆ ಕಾಲೇಜ್ ಡೀನ್ ಡಾ.ಎಚ್ ಆಂಜನೇಯಪ್ಪ ಮಾತನಾಡುತ್ತಾ ವಿವಿಧ ಹಾಗೂ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅರ್ಹ ಜನರನ್ನು ಗುರುತಿಸಿ ಪ್ರಶಸ್ತಿಯನ್ನು ಸೂಕ್ತ ನಗದು ಬಹುಮಾನದೊಂದಿಗೆ ಪ್ರಧಾನಿಸುತ್ತಾ ಬಂದಿರುವ ಮೂಲತ್ವ ಫೌಂಡೇಶನ್ ನ ಕಾರ್ಯ ಅಭಿನಂದನೀಯ ಎಂದರು.
ಈಶ್ವರ್ ಮಲ್ಪೆ ಅವರಿಗೆ ಮೂಲತ್ವ ವಿಶ್ವ ಪ್ರಶಸ್ತಿಯೊಂದಿಗೆ ಒಂದು ಲಕ್ಷ ನಗದು ನೀಡಿ ಗೌರವಿಸಲಾಯಿತು. ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ, ಹಿರಿಯ ಕಲಾವಿದ ವಾಲ್ಟರ್ ನಂದಳಿಕೆ, ಉಚ್ಚಿಲ ಮೊಗವೀರ ಮಹಾಸಭಾದ ಉಪಾಧ್ಯಕ್ಷ ಮೋಹನ್ ಬೆಂಗ್ರೆ ಉಪಸ್ಥಿತರಿದ್ದರು.
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಪ್ರಕಾಶ್ ಮೂಲತ್ವ ಪ್ರಸ್ತಾವನೆಗೈದರು. ಸ್ಪರ್ಧೆಯ ತೀರ್ಪುಗಾರರಲ್ಲೊಬ್ಬರಾದ ಪ್ರೊ. ರಾಜ್ ಮೋಹನ್ ರಾವ್ ಪ್ರಶಸ್ತಿ ಪತ್ರ ವಾಚಿಸಿದರು. ಟ್ರಸ್ಟಿಗಳಾದ ಕಲ್ಪನಾ ಪಿ ಕೋಟ್ಯಾನ್, ಶ್ರೀಮತಿ ಶೈನಿ, ಲಕ್ಷ್ಮೀಶ ಪಿ ಕೋಟ್ಯಾನ್ ಉಪಸ್ಥಿತರಿದ್ದರು.
