
ಶೋಭಾ ಎಸ್.ಶೆಟ್ಟಿ ನೆಲ್ಲಿದಡಿಗುತ್ತು
ಕಲೆಯ ಸೆಲೆಗೆ ಬೀಡಾಗಿ, ಕಲೆಯ ನೆಲೆಗೆ ಭೂಮಿಕೆಯಾಗಿ, ಕಲೆಯ ಉಳಿವಿಗೆ ವೇದಿಕೆಯಾಗಿ, ಕಲೆಯ ಬೆಳವಣಿಗೆಗೆ ಪ್ರೋತ್ಸಾಹದಾಯಕವಾಗಿ, ಕಲೆಯನ್ನು ಅರಳಿಸುವ ಪ್ರತಿಭಾಕಾರರಿಗೆ ರಂಗಭೂಮಿಯಾಗಿ, ಕಲೆಗೆ ಪ್ರಾಧಾನ್ಯತೆಯನ್ನು ನೀಡಿ ಅದರಲ್ಲೂ ತುಳುವರ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಪರಂಪರೆಯ ಬೇರಿಗೆ ಆಚಾರ, ವಿಚಾರಗಳ ಬಂಧವನ್ನು ಬೆಸೆದು ಅನ್ಯಭಾಷಿಕರ ನಡುವೆ ತುಳುನಾಡಿನ ತೇರನ್ನು ಎಳೆದು ಸಂಭ್ರಮದ ಆಚರಣೆಯ ತೋರಣದೊಂದಿಗೆ ಅಲಂಕರಣದ ಚಿತ್ತಾರವನ್ನು ಪಡಿಮೂಡಿಸುವ ಸದುದ್ಧೇಶದಿಂದ ಪ್ರಬುದ್ಧ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಶೆಟ್ಟಿ ತೋನ್ಸೆಯವರ ವಿಶಿಷ್ಟ ಪರಿಕಲ್ಪನೆಯೊಂದಿಗೆ 1979ರಲ್ಲಿ ವಿಶೇಷವಾಗಿ ಉದಿಸಿದ ಕಲ್ಪನೆಯ ಕೂಸೇ ಈ ಕಲಾಜಗತ್ತು ಎಂಬ ನಾಮಾಂಕಿತ ಸಂಸ್ಥೆ.
ಕಲಾಜಗತ್ತು ಹೆಸರಿಗೆ ತಕ್ಕಂತೆ ಕಲೆಯ ಆರಾಧನೆಗೆ, ಕಲಾ ಪೋಷಣೆಗೆ ವಿಶಾಲ ಹೃದಯದ ವಿಶ್ವಕೋಶವಾಗಿದ್ದು ಪ್ರತಿಭಾವಂತರಿಗೆ ಆಸರೆಯ ವೃಕ್ಷವಾಗಿ , ಸಂಸ್ಕಾರದ ಹೆಮ್ಮರವಾಗಿ ಆನೇಕ ಮಜಲುಗಳಲ್ಲಿ ಗೋಚರಿಸಿ ತನ್ನದೇ ಆದ ಛಾಪನ್ನು ಮೂಡಿಸಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆಯೆಂದರೂ ತಪ್ಪಾಗಲಾರದು.

ಕಲಾಜಗತ್ತು ಸಂಸ್ಥೆಯ ಸಂಸ್ಥಾಪಕರಾದ ವಿಜಯ್ ಕುಮಾರ್ ಶೆಟ್ಟಿಯವರು ತುಳು ರಂಗಭೂಮಿ ಕಂಡಂತಹ ಒಬ್ಬ ಶ್ರೇಷ್ಠ ವಿಭಿನ್ನ ಶೈಲಿಯ, ವಿನೂತನ ಪರಿಕಲ್ಪನೆಯ ಸಂಘಟಕ, ನಿರ್ದೇಶಕ, ಖ್ಯಾತ ಕಲಾವಿದ. ಇವರ ಬಹುಮುಖ ಪ್ರತಿಭೆಗೆ ಅರ್ಹವಾಗಿಯೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಕಿರೀಟವು ಇವರ ಮುಡಿಗೇರಿ ತುಳು ಕನ್ನಡಿಗರ ಹೆಮ್ಮೆಗೆ ಕಾರಣೀಭೂತರಾಗಿರುವುದು ನಿಜಕ್ಕೂ ಸಂತಸದ ವಿಷಯ.ಅಷ್ಟೇ ಅಲ್ಲದೇ ತನ್ನ ಅರವತ್ತನೆಯ ಹುಟ್ಟು ಹಬ್ಬದ ಸಂಭ್ರಮಾಚರಣೆಯ ಸನ್ನಿವೇಶದಲ್ಲಿ ವಿಭಿನ್ನವಾದ ಅರವತ್ತು ಪಾತ್ರಗಳನ್ನು ನಿರ್ವಹಿಸಿ , ಪಾತ್ರಕ್ಕೆ ತಕ್ಕಂತೆ ವೇಷಭೂಷಣ, ಹೊಂದಿಕೊಳ್ಳುವ ಪ್ರಸಾಧನ, ಹೀಗೆ ವಿಶಿಷ್ಟ ಪರಿಕಲ್ಪನೆಯೊಂದಿಗೆ ನಟನೆಯನ್ನು ಪ್ರದರ್ಶಿಸಿ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಗಿನ್ನೆಸ್ ದಾಖಲೆಯನ್ನು ಮಾಡಿರುವ ಅಪರೂಪದ ವ್ಯಕ್ತಿತ್ವವನ್ನು ಹೊಂದಿರುವ ಅಸಾಮಾನ್ಯ ವ್ಯಕ್ತಿ. ಸುಂದರ , ರಮಣೀಯ ಹಸಿರು ನಿಸರ್ಗದ ಮಧ್ಯೆ ಕಂಗೊಳಿಸುವ ತೋನ್ಸೆಯ ಕೋಡಿ ಕಂಡಾಳ ಕೋಡ್ದಬ್ಬು ದೈವದಗುತ್ತು ಬರ್ಕೆ ಮನೆತನದಲ್ಲಿ ಜನಿಸಿರುವ ವಿಜಯ್ ಕುಮಾರ್ ಶೆಟ್ಟಿಯವರು ತನ್ನ ಹನ್ನೆರಡನೆಯ ವಯಸ್ಸಿನಲ್ಲಿಯೇ ರಾಷ್ಟ್ರಪ್ರಶಸ್ತಿ ವಿಜೇತ ಗುರು ಕಾಂತಪ್ಪ ಮಾಸ್ತರ್ , ಜಯಂತ್ ಕುಮಾರ್ , ಗೋಪಾಲಕೃಷ್ಣ ರಾವ್, ಇವರಲ್ಲಿ ಯಕ್ಷಗಾನ ,ನಾಟಕ ರಂಗದ ಪ್ರತಿ ವಿಭಾಗದಲ್ಲಿಯೂ ತರಬೇತಿಯನ್ನು ಪಡೆದು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಜನಪ್ರಿಯತೆಯನ್ನು ಪಡೆದಿರುವುದು ಅವರ ಪ್ರತಿಭೆಗೆ ಅರ್ಹವಾಗಿಯೇ ಸಿಕ್ಕಿದ ಗೌರವ , ಸನ್ಮಾನ. ಇವರು 40 ಕ್ಕಿಂತಲೂ ಹೆಚ್ಚು ನಾಟಕಗಳನ್ನು ರಚಿಸಿ ವಿನೂತನ ಶೈಲಿಯಲ್ಲಿ ನಿರ್ದೇಶಿಸಿ ಕಲಾವಿದರಿಗೆ ಅಭಿನಯದ ಜೊತೆಗೆ ಪಾತ್ರದ ಒಳಹೊಕ್ಕು ಲೀಲಾಜಾಲವಾಗಿ ನಟಿಸುವ ಸಮೃದ್ಧ ತರಬೇತಿಯನ್ನು ನೀಡಿ ಪ್ರತಿಶತ ಸಿದ್ಧಗೊಳಿಸಿ, ಪ್ರಬುದ್ದ ಕಲಾವಿದರನ್ನಾಗಿಸಿ , ಜನಮೆಚ್ಚುಗೆಯ ಕರತಾಡನದ ಸದ್ದಿನೊಂದಿಗೆ ವಿಜೃಂಭಿಸುವಲ್ಲಿ ಸಫಲರಾಗಿಸುತ್ತಾ ಅಭೂತಪೂರ್ವ ಯಶಸ್ಸಿಗೆ ಕಾರಣೀಕರ್ತರಾಗುವ ಮೇರು ವ್ಯಕ್ತಿತ್ವ ಇವರದ್ದು. ಅವರ ನಾಟಕಗಳಲ್ಲಿ ವಾಸ್ತವದ ಛಾಯೆಯು ಅಧಿಕವಾಗಿದ್ದು ಕಲ್ಪನೆಯ ಪರಿಛಾಯೆಯು ಸ್ವಲ್ಪಮಟ್ಟಿಗೆ ಪಡಿಮೂಡಿ ಎಲ್ಲಾ ವಯೋಮಾನದವರನ್ನು ಆಕರ್ಷಿಸುವಲ್ಲಿ ಯಶವನ್ನು ಪಡೆದು ಅದ್ಬುತ ಜಯಭೇರಿ ಯನ್ನು ಬಾರಿಸುತ್ತಾ ಮುನ್ನಡೆಯುತ್ತಿದೆ ಎಂದರೂ ಅತಿಶಯೋಕ್ತಿಯ ಮಾತಲ್ಲ. ಇವರು ರಚಿಸಿರುವ ಶಿವಸುಂದರ, ಎಚ್ಚಮ್ಮ ನಾಯಕ, ನೀರ್ ಕಡ್ತುಂಡ, ಏರ್ ಅಪರಾಧಿ, ಇವುಗಳು ಅವರು ವಿದ್ಯಾರ್ಥಿಯಾಗಿದ್ದಾಗಲೇ ಅವರ ಕಲ್ಪನಾಲಹರಿಯಿಂದ ಹೊರಹೊಮ್ಮಿದ ವಿಚಾರಭರಿತ ನಾಟಕಗಳು..!!ಎಳವೆಯಲ್ಲಿಯೇ ನಾಟಕರಂಗಕ್ಕೆ ಧುಮುಕಿ , ರಂಗ ಪ್ರವಾಹದಲ್ಲಿ ಈಜಿ, ಸುಲಲಿತವಾಗಿ ಗೆಲುವಿನ ದಡವನ್ನು ಸೇರಿದ ವಿಜಯ್ ಕುಮಾರ್ ರವರು ಯಶದ ಉತ್ತುಂಗ ಶಿಖರ ಏರಿದ ನಂತರ ಹಿಂತಿರುಗಿ ನೋಡಿದವರಲ್ಲ.
ವಸುಂಧರ, ಭೂತದ ಇಲ್ಲ್, ಈ ನಲಿಕೆ ದಾಯೆಗ್, ಊರ್ದ ಮಾರಿ, ಪಗರಿದ ಮಂಚ, ಪಾಪದ ಪುದೆ, ಕೋಡೆ ಅಂಚ ಇನಿ ಎಂಚ, ಮೋಕ್ಷ, ಗುಬ್ಬಚ್ಚಿ, ಬರ್ಸ, ಬೊಲ್ಲ, ತೆಡಿಲ್, ಎನಡ್ದಾವಂದ್, ಒರಿಯೇ ಮಗೆ, ಈ ಬಾಲೆ ನಮ್ಮವು, ತೂ ತುಡರ್, ಬಾಂಬುಯೇ ಬಾಂಬು, ಜೋಕುಲ್ ದೇವೆರ್, ಪತ್ತಾದ್ ಪದ್ರಾಡ್, ಹೀಗೆ ನಲವತ್ತಕ್ಕೂ ಹೆಚ್ಚು ನಾಟಕದ ರಚನಾಕಾರರಾಗಿ, ಅಭಿನಯಕಾರರಾಗಿ, ನಿರ್ದೇಶಕರಾಗಿ, ರಂಗ ತಜ್ಞ ರಾಗಿ, ಪ್ರತಿಭಾ ಅನ್ವೇಷಕರಾಗಿ, ರಂಗಭೂಮಿಯ ಆಸ್ತಿಯಾಗಿ, ತುಂಬಿದ ಕಣಜವಾಗಿ , ತನ್ನಲ್ಲಿರುವ ಜ್ಞಾನವನ್ನು ಪರರಿಗೆ ನೀಡಬೇಕೆನ್ನುವ ತುಡಿತವನ್ನು ಹೊಂದಿರುವ ಇವರು ಸುಮಾರು 45 ವರ್ಷಗಳಿಂದ ಬೆವರನ್ನು ಪನ್ನೀರಾಗಿಸಿ ಕಲಾಜಗತ್ತು ಸಮೂಹ ಸಂಸ್ಥೆಗಳೆಂಬ ಕೂಡು ಕುಟುಂಬವನ್ನು ನಿರ್ಮಿಸಿದ ಇವರು ನಿರಂತರ ಕ್ರಿಯಾಶೀಲರಾಗಿ , ಸದಸ್ಯರನ್ನು ಸಕ್ರಿಯರನ್ನಾಗಿಸಿ ಪರಿಶ್ರಮದಿಂದ ಅಂದಿನಿಂದ ಇಂದಿನವರೆಗೂ ಸಮಚಿತ್ತದಿಂದ , ಕಾರ್ಯಕ್ಷಮತೆ, ಕಾರ್ಯವೈಖರಿ,,ಪರಿಶ್ರಮ, ದೃಢತೆಯಿಂದ ಗೆಲುವಿನ ಮೆಟ್ಟಿಲುಗಳನ್ನು ಹಂತಹಂತವಾಗಿ ಏರುತ್ತಾ ಸಾಗಿ ಇಂದು ಸಾಧಕರ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿ ಗೋಚರಿಸುತ್ತಿರುವುದು ಅಭಿನಂದನೀಯ ವಿಚಾರವಾಗಿದೆ.ಅವರೇ ಹೇಳುವಂತೆ ಅವರು ಹುಟ್ಟಿ ಬೆಳೆದ ಮಣ್ಣಿನ ಪರಿಮಳ, ಮನೆಯ ಶ್ರೇಷ್ಠತೆಯೇ ಅವರನ್ನು ಉಚ್ಛ ಶ್ರೇಣಿಯಲ್ಲಿ ನಿಲ್ಲುವಂತೆ ಮಾಡಿದೆ ಎಂದು ವಿನಮ್ರವಾಗಿ ತುಳುನಾಡಿನ ಹಿರಿಮೆಯನ್ನು ತಿಳಿಸುತ್ತಾರೆ.

. ಸುಮಾರು 22 ವರ್ಷಗಳ ಹಿಂದೆ ವಿಜಯ್ ಕುಮಾರ್ ಶೆಟ್ಟಿಯವರ ಪರಿಕಲ್ಪನೆಯಲ್ಲಿ ಕಲಾಜಗತ್ತು ಸಂಸ್ಥೆಯ ಭಾಗವಾಗಿ ಮಕ್ಕಳ ಬಾಳ ಭವಿಷ್ಯ ಉಜ್ವಲವಾಗಬೇಕು, ಅವರಿಗೆ ಎಳವೆಯಲ್ಲಿಯೇ ನಾಡು, ನುಡಿ, ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯ, ನೈತಿಕ ಮೌಲ್ಯಗಳನ್ನು ತಿಳಿಸಬೇಕು ಎಂಬ ಸದುದ್ಧೇಶದಿಂದ ಪ್ರಕಾಶ್ ಭಂಡಾರಿ ಮತ್ತು ಸುರೇಂದ್ರಕುಮಾರ್ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಚಿಣ್ಣರಬಿಂಬವೆಂಬ ಸಂಸ್ಥೆಯನ್ನು ಕೂಡಾ ಸ್ಥಾಪಿಸಿದರು. ನಂತರ ಅಮ್ಮ ಚಾವಡಿ ಎಂಬ ವಿಭಾಗವನ್ನು ಹುಟ್ಟು ಹಾಕಿ ಪ್ರತಿಭೆಗೆ ವೇದಿಕೆಯನ್ನು ನೀಡಿ ಆನೇಕ ಕಲಾವಿದರನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಮರಾಠಿ ಮಣ್ಣಿನಲ್ಲಿ ತೌಳವ ತಾಯಿಯ ಆರಾಧಕರಾಗಿ ಅಸ್ಮಿತೆಯನ್ನು ಉಳಿಸಿ ಬೆಳೆಸಿ ವಿಜಯದ ಸರಮಾಲೆಯನ್ನು ತನ್ನ ಕೊರಳಲ್ಲಿ ಧರಿಸಿಕೊಂಡರು ಎಂದು ಹೇಳಲು ಹೃದಯ ಪುಳಕಗೊಳ್ಳುತ್ತಿದೆ. ವಿಜಯ್ ಕುಮಾರ್ ಶೆಟ್ಟಿಯವರು ತಮ್ಮ ಹಿತೈಷಿಗಳು, ಹಿತಚಿಂತಕರು, ಮಾರ್ಗದರ್ಶಕರು ಹಾಗೂ ಪದಾಧಿಕಾರಿಗಳ ಜೊತೆಗೂಡಿ ಅನವರತ ತುಳು ಕನ್ನಡ ಸೇವೆಯಲ್ಲಿ ತೊಡಗಿದ್ದು ನಂತರ ತುಳುನಾಡಿನ ಸೊಗಡನ್ನು ಮಹಾರಾಷ್ಟ್ರದಾದ್ಯಂತ ಪಸರಿಸಬೇಕು ಎಂಬ ಅಭಿಲಾಷೆಯಿಂದ ಪ್ರಪ್ರಥಮವಾಗಿ 2008ರಲ್ಲಿ ದಾದರ್ ನ ಕಾಮ್ಗಾರಿ ಕ್ರೀಡಾಂಗಣದಲ್ಲಿ “ಬೊಂಬಾಯಿಡ್ ತುಳುನಾಡ್” ಎಂಬ ವಿಶಿಷ್ಟ ಪ್ರಕಾರದ ಸಂಯೋಜನೆಯ ತುಳು ಉತ್ಸವದ ಪರ್ವವನ್ನು ಆಯೋಜಿಸಿದ್ದರು. ಕಾರ್ಯಕ್ರಮದ ಅದ್ಬುತ ಪರಿಕಲ್ಪನೆಯು ನೆರೆದಿದ್ದ ವೀಕ್ಷಕರನ್ನು ರೋಮಾಂಚನಗೊಳಿಸಿದ್ದುದರಲ್ಲಿಎರಡು ಮಾತಿಲ್ಲವೆಂದೇ ಹೇಳಬಹುದು. ತುಳುನಾಡನ್ನೇ ಮುಂಬಯಿಯಲ್ಲಿ ಸೃಷ್ಟಿಸಿ ಆ ಐದು ದಿವಸ ತುಳುಮಯವನ್ನಾಗಿಸಿದ್ದು ಇಂದಿಗೂ ಮರೆಯಲಾಗದ ನೆನಪು . ಆ ಆಹ್ಲಾದತೆಯನ್ನು ನೆನಪಿಸುವ ತುಣುಕುಗಳು ಮನಃಪಟಲದಲ್ಲಿ ಅಚ್ಚಾಗಿರುವುದಕ್ಕೆ ಅಂದಿನ ಉತ್ಸವಕ್ಕೆ ನಮ್ಮ ಉಪಸ್ಥಿತಿಯೇ ಕಾರಣ. ತುಳುನಾಡಿನ ಪ್ರಸಿದ್ಧ ಜಾನಪದ ಕಲೆಯಾದ ಕಂಬಳವನ್ನು ಮುಂಬಯಿಯ ಕಾಂಕ್ರೀಟ್ ನೆಲದಲ್ಲಿ ಗದ್ದೆಯನ್ನು ಸೃಷ್ಟಿಸಿ , ನೀರನ್ನು ಸೇಖರಿಸಿ , ಎರಡು ಬದಿಯಲ್ಲೂ ಕೃತಕ ಸಾಲು ವೃಕ್ಷಗಳನ್ನು ನೆಟ್ಟು ವೀಕ್ಷಕರಿಗೆ ನೈಜತೆಯ ಅನುಭಾವವನ್ನು ಮೂಡಿಸಿ ಜೋಡು ಕೋಣಗಳ ಓಟಗಾರಿಕೆಯು ಹರ್ಷೋದ್ಗಾರವನ್ನು ಅವಿರ್ಭವಿಸುವಂತೆ ಮಾಡಿರುವುದರ ಜೊತೆಗೆ “ಮನಸ್ಸಿದ್ದರೆ ಮಾರ್ಗ”, ಸಾಧಿಸಿದರೆ ಸಬಲವನ್ನೂ ನುಂಗಬಹುದು” ಎಂಬ ಉಕ್ತಿಯನ್ನು ನಿಜ ಮಾಡಿದ ಹೆಗ್ಗಳಿಕೆ ನಿಜಕ್ಕೂ ವಿಜಯ್ ಕುಮಾರ್ ಶೆಟ್ಟಿಯವರದ್ದಾಗಿದೆ. ಅಲ್ಲದೇ ದೈವಾರಾಧನೆ, ಭೂತರಾಧನೆ, ನಾಗಾರಾಧನೆಯ ಸೊಗಡಿನ ಚಿತ್ರಣ, ಕೋಳಿ ಅಂಕ, ಯಕ್ಷಗಾನ , ನಾಟಕ, ಗುತ್ತಿನ ಮನೆ, ಬಾವಿಯ ಅಳವಡಿಕೆ, ಕೃಷಿಗೆ ಸಂಬಂಧಿಸಿದ ಕಾರ್ಯ, ಪರಿಕರಗಳನ್ನು ಸಂಯೋಜಿಸಿರುವ ಪರಿ, ಬಟ್ಟೆ ನೇಯ್ಗೆ, ಚಾಪೆ ನೇಯ್ಗೆ, ಹಳೆಯ ವಸ್ತುಗಳ ಪ್ರದರ್ಶನ ಅಮೋಘವಾಗಿದ್ದು ಕಲಾಜಗತ್ತಿನ ಸೃಷ್ಟಿ ಗೆ ಸಾರ್ಥಕ್ಯದ ಭಾವವನ್ನು ತಂದುಕೊಟ್ಟಿರುವುದರಲ್ಲಿ ಸಂಶಯವಿಲ್ಲ. ತುಳುನಾಡಿನ ವಿವಿಧ ರುಚಿಶುಚಿಯಾದ ತಿಂಡಿ ತಿನಸುಗಳು, ಮುಂಬಯಿಯ ತುಳುವರಿಗೆ ತುಳುನಾಡನ್ನು ನೆನಪಿಸಿದರೆ ಇಲ್ಲಿಯೇ ಹುಟ್ಟಿ ಬೆಳೆದವರಿಗೆ ನಮ್ಮ ಮಾತೃ ನೆಲದ ಸಂಪ್ರದಾಯದ ತಿನಿಸುಗಳು ಬಾಯಿ ಚಪ್ಪರಿಸುವಂತೆ ಮಾಡಿತ್ತು.

ಎರಡನೆಯ ಅವಧಿಗೆ ಆಯೋಜಿಸಿದ “ಬೊಂಬಾಯಿಡ್ ತುಳುನಾಡ್” ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಅಡೆ ತಡೆಗಳಿದ್ದು ಏಳು- ಬೀಳುಗಳನ್ನು ಕಂಡರೂ ಅವೆಲ್ಲಾ ನಿವಾರಣೆಗೊಂಡು ಕೊನೆಗೆ ಅದ್ಭುತ ಯಶಸ್ಸನ್ನು ಕಂಡು ಜನಮಾನಸದಲ್ಲಿ ಅಚ್ಚಳಿಯದೆ ಉಳಿದು ಕಲಾಜಗತ್ತು ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿರುವುದು ಶ್ಲಾಘನೀಯ..!!
. ಮೂರನೆಯ ಅವಧಿಯ ಕಾರ್ಯಕ್ರಮದ ಸಮಯದಲ್ಲಿ ಕಲಾಜಗತ್ತು ಅತ್ಯಂತ ಪ್ರಬಲವಾಗಿ ಶಕ್ತಗೊಂಡಿದ್ದು ಹಿಂದಿನ ಯೋಜನೆಗಿಂತಲೂ ಹಲವು ಹೊಸತುಗಳ ಮೂಲಕ ಭಿನ್ನವಾಗಿ ಗೋಚರಿಸಿ ಹೊಸ ಆಯಾಮದಲ್ಲಿ ನವ ಯೋಚನೆಯಲ್ಲಿ ಜನವರಿ 17 ಶುಕ್ರವಾರ ಮತ್ತು 18 ಶನಿವಾರ ಕುರ್ಲಾ ಬಂಟರ ಭವನದ ಸಭಾಂಗಣ, ಹೊರಾಂಗಣ, ಆವರಣದಲ್ಲೂ ಬ್ರಹತ್ ಮಟ್ಟದ ತುಳು ಉತ್ಸವ “ಬೊಂಬಾಯಿಡ್ ತುಳುನಾಡು” ಜರಗಲಿದ್ದು ತುಳುನಾಡಿನ ವೈಭವವನ್ನು ಪ್ರದರ್ಶಿಸುವ ವಿಜೃಂಭಣೆಯ ಪರ್ವವು ಜರಗಲಿದೆ. ನಾಲ್ಕೈದು ವೇದಿಕೆಗಳ ಮುಖಾಂತರ ಪ್ರತಿ ಕ್ಷೇತ್ರದ ಪ್ರತಿಭಾನ್ವಿತರಿಂದಲೂ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಹಿತ್ಯಕವಾಗಿ ಕಾರ್ಯಕ್ರಮಗಳು ನಡೆದು ಕಲಾಸಕ್ತರನ್ನು ರಂಜಿಸಿ ಹೊಸ ಲೋಕಕ್ಕೆ ಕೊಂಡೊಯ್ಯಲಿವೆ. ಅಧಿಕ ಪ್ರಮಾಣದಲ್ಲಿ ತುಳುನಾಡಿನ ಹಳೆಯ ಪರಿಕರಗಳು ಪ್ರದರ್ಶನಗೊಳ್ಳುವುದರ ಜೊತೆಗೆ ಯುವ ಜನಾಂಗ ಮತ್ತು ಮಕ್ಕಳು ನೋಡಿರದ, ಕಂಡಿರದ ಸಾಮಾಗ್ರಿಗಳು ಕಣ್ಣೆದುರು ಪ್ರತ್ಯಕ್ಷವಾಗಿ ರೋಮಾಂಚನಗೊಳಿಸಿ ನಮ್ಮ ಹಿರಿಯರು ಬಳಸುತ್ತಿರುವ ವಸ್ತುಗಳನ್ನು ನೋಡಿ ಹುಬ್ಬೇರಿಸುವಂತೆ ಮಾಡಿ ಬೆರಗುಗೊಳಿಸುವುದರಲ್ಲಿ ಉತ್ಪ್ರೇಕ್ಷೆಯಿಲ್ಲ.

ಈ ಕಾರ್ಯಕ್ರಮದಲ್ಲಿ ಸಂಸ್ಕೃತಿಯ ರೂಪವಿದೆ, ಸಂಸ್ಕಾರದ ಅನುರೂಪವಿದೆ. ಜಾನಪದ ಕಲೆಗಳಾದ ಜಾನಪದ ಹಾಡು, ಜಾನಪದ ನೃತ್ಯ , ಯಕ್ಷಗಾನಗಳ ದಿವ್ಯ ದರ್ಶನದ ಅಲಂಕರಣವಿದೆ. ನಾಟಕಗಳ ಅಭಿವ್ಯಕ್ತಿಯಲ್ಲಿ ಸಂಬಂಧಗಳ ಸೆಲೆಯ ಹೂರಣವಿದೆ. ನೀತಿ, ಸಂದೇಶವನ್ನು ಸಾರುವ ಪ್ರಕ್ರಿಯೆಯು ಆರೋಹಣದ ಸ್ತರದಲ್ಲಿದೆ. ಧಾರ್ಮಿಕತೆಯಲ್ಲಿ ಭಕ್ತಿರಸದ ತೋರಣವಿದೆ. ಸಾಧಕರ ಸನ್ಮಾನ ಪ್ರಕ್ರಿಯೆಯಲ್ಲಿ ನಾವೀನ್ಯತೆಯ ಆಭೂಷಣವಿದೆ. ತುಳುನಾಡಿನ ಖಾದ್ಯಗಳಲ್ಲಿ ಜಿಹ್ವೆಯನ್ನು ತಣಿಸುವ ರಸದೌತಣವಿದೆ. ಸಾಗುವಳಿದಾರರ ಶ್ರಮದಲ್ಲಿ ಉದರ ತುಂಬಿಸುವ, ಪರರ ಹಿತಾಸಕ್ತಿಯ ಸ್ಪೂರ್ತಿಯ ಪ್ರೇರಣೆಯಿದೆ. ವೇದಿಕೆಯು ಕಲಾವಿದರ ಪ್ರತಿಭೆಯ ಅನಾವರಣಕ್ಕೆ ಸಿದ್ಧಗೊಂಡಿದೆ. ಬಂಟರ ಸಂಘದ ಮುಖ್ಯ ಸಭಾಂಗಣ, ಹೊರಾಂಗಣ , ವಿಷ್ಣುಮೂರ್ತಿ ಮಂದಿರದ ಆವರಣ ತುಳುಮಾತೆಯ ಸ್ವಾಗತಕ್ಕೆ ಸಜ್ಜುಗೊಂಡಿದೆ. ಹಲವಾರು ಕರಗಳ ಜೋಡಣೆಯ ಪ್ರತಿಫಲವಾಗಿ ಈ ತುಳು ಉತ್ಸವವು ಸುಸೂತ್ರವಾಗಿ ನಡೆಯಲಿದೆ. ಇದರ ತಯಾರಿಯು ಕಲಾಜಗತ್ತು ಸಮೂಹ ಸಂಸ್ಥೆ ಯ ಸ್ಥಾಪಕರಾದ ವಿಜಯ್ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ಪೂರ್ವಭಾವಿ ಸಬೆಗಳು ನಡೆಯುತ್ತಿದ್ದು ವಿದ್ವಾಂಸರ, ಪರಿಣತರ, ಕಲಾ ಪೋಷಕರ, ಸಂಘಟಕರ, ಸಲಹೆ ,ಸಹಯೋಗಗಳು ಉನ್ನತ ಮಟ್ಟದ ಕಾರ್ಯಕ್ರಮ ವು ನಡೆಯುವಲ್ಲಿ ಸಹಕಾರವನ್ನು ನೀಡುತ್ತಿವೆ..ಈ ಅತ್ಯದ್ಭುತ ಪರಿಕಲ್ಪನೆಯ ತುಳು ಉತ್ಸವಕ್ಕೆ ತುಳು ಕನ್ನಡಿಗರು ಅಧಿಕತಮವಾಗಿ ಸೇರಬೇಕೆಂದು ಕಲಾಜಗತ್ತಿನ ವಿಜಯ್ ಕುಮಾರ್ ಶೆಟ್ಟಿ, ಸುರೇಂದ್ರ ಕುಮಾರ್ ಹೆಗ್ಡೆ, ಜಯಶ್ರೀ ಕೃಷ್ಣ ಶೆಟ್ಟಿ, ದಯಾಸಾಗರ್ ಚೌಟ, ಕೃಷ್ಣರಾಜ್ ಸುವರ್ಣ ಮತ್ತು ಎಲ್ಲಾ ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.