
ಕಳೆದ 12 ವರ್ಷಗಳಿಂದ ಪೊವಯಿಯ ಎಸ್ ಎಂ ಶೆಟ್ಟಿ ಹೈಸ್ಕೂಲ್ ಮತ್ತು ಜ್ಯೂನಿಯರ್ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದು, ಅದೇ ಸಮಯದಲ್ಲಿ ಮುಂಬಯಿ ಕನ್ನಡ ಸಂಘವು ಕನ್ನಡೇತರರಿಗಾಗಿ ನಡೆಸುತ್ತಿದ್ದ ಕನ್ನಡ ತರಗತಿಗಳಲ್ಲಿಯೂ, 8 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಇದೀಗ ಚೆಂಬೂರು ಕರ್ನಾಟಕ ಹೈಸ್ಕೂಲ್ ಮತ್ತು ಜ್ಯೂನಿಯರ್ ಕಾಲೇಜಿನಲ್ಲಿ ಉಪ ಪ್ರಾಂಶುಪಾಲೆಯಾಗಿ ನಿಯುಕ್ತಿಗೊಂಡ ಸಲುವಾಗಿ ಅರ್ಚನಾ ಪೂಜಾರಿಯವರನ್ನು ದಿನಾಂಕ 18-1 2025 ರಂದು ಮಾಟುಂಗಾ ಪೂರ್ವಾದ ಮುಂಬಯಿ ಕನ್ನಡ ಸಂಘದ ವತಿಯಿಂದ ಸಂಘದ ಕಾರ್ಯಾಲಯದಲ್ಲಿ ಸನ್ಮಾನಿಸಲಾಯಿತು. ಅರ್ಚನಾ ಪೂಜಾರಿಯವರನ್ನು ಮುಂಬಯಿ ಕನ್ನಡ ಸಂಘದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ರಜನಿ ವಿ ಪೈ ಅವರು ಶಾಲು ಹೊಂದಿಸಿ ಪುಷ್ಪಗುಚ್ಛ ನೀಡಿ ಗೌರವಿಸಿದರು.
ಆರಂಭದಲ್ಲಿ ಸಂಘದ ಅಧ್ಯಕ್ಷರಾದ ಗುರುರಾಜ್ ಎಸ್ ನಾಯಕ್ ಸ್ವಾಗತಿಸಿ, ಎಂಟು ವರ್ಷಗಳಿಂದ ಅರ್ಚನಾ ಪೂಜಾರಿ ಅವರು ಸಂಘದ ಕನ್ನಡ ತರಗತಿಗಳಲ್ಲಿ ಶಿಕ್ಷಕಿಯಾಗಿ ಯಾವುದೇ ಪ್ರತಿಫಲಾಪ್ರೇಕ್ಷೆ ಇಲ್ಲದೆ ದುಡಿದು ಸಂಘಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.

ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್ ಕರ್ಕೇರ ಅವರು ಶಿಕ್ಷಕಿಯಾಗಿ, ರಂಗ ಹಾಗೂ ಟಿವಿ ಸೀರಿಯಲ್ ನಟಿಯಾಗಿ, ಲೇಖಕಿಯಾಗಿ, ವಾಗ್ಮಿಯಾಗಿ ಬಹುಮುಖ ಪ್ರತಿಭಾ ಸಂಪನ್ನೆ ಯಾಗಿರುವ ಅರ್ಚನಾ ಪೂಜಾರಿಯವರ ಕಿರು ಪರಿಚಯ ಮಾಡಿದರು.
ಈ ಸಂದರ್ಭದಲ್ಲಿ ರಜನಿ ಪೈ ಅವರ ಮಾತನಾಡುತ್ತಾ ಮುಂಬಯಿ ಕನ್ನಡ ಸಂಘದ ಹಿಂದೆ ಯಾವುದೋ ಒಂದು ಮಹಾನ್ ಶಕ್ತಿ ಇದೆ, ಹಾಗಾಗಿ ಇಲ್ಲಿ ಸೇವೆ ಸಲ್ಲಿಸುವವರು ಜೀವನದಲ್ಲಿ ಯಶಸ್ಸಿನ ದಾರಿಯಲ್ಲಿ ಸಾಗುತ್ತಿದ್ದಾರೆ, ಅದಕ್ಕೆ ನಾನೇ ಒಂದು ಉತ್ತಮ ಉದಾಹರಣೆ ಎಂದು ತನಗೂ ಹಾಗೂ ಮುಂಬಯಿ ಕನ್ನಡ ಸಂಘಕ್ಕೂ ಇರುವ ನಂಟಿನ ಬಗ್ಗೆ ವಿವರಿಸಿದರು.
ಸನ್ಮಾನಕ್ಕೆ ಉತ್ತರಿಸುತ್ತಾ ಅರ್ಚನಾ ಪೂಜಾರಿಯವರು “ಶಿಕ್ಷಣ ಕ್ಷೇತ್ರವು ನನ್ನ ಅಚ್ಚುಮೆಚ್ಚಿನದಾಗಿದೆ, ಇಲ್ಲಿ ಸೇವೆ ಸಲ್ಲಿಸುವುದು ನನಗೆ ತುಂಬಾ ಸಮಾಧಾನ ನೀಡುತ್ತಿದೆ. ನಾನಿಂದು ಉಪ ಪ್ರಾಂಶುಪಾಲೆಯ ಸ್ಥಾನಕ್ಕೆ ಏರಿರುವುದಕ್ಕೆ ಗುರುಗಳಾಗಿದ್ದ ಡಾ. ಸಂಜೀವ ಶೆಟ್ಟಿ ಮತ್ತು ಡಾ. ಎಸ್ ಕೆ ಭವಾನಿಯವರ ಆಶೀರ್ವಾದ ಮತ್ತು ಪ್ರೋತ್ಸಾಹವೇ ಮುಖ್ಯ ಕಾರಣ. ಅವರು ಹಾಕಿ ಕೊಟ್ಟಿರುವ ದಾರಿಯಲ್ಲೇ ನಾನಿಂದು ಸಾಗುತ್ತಿದ್ದೇನೆ. ಜೀವನದಲ್ಲಿ ಪ್ರಾಮಾಣಿಕವಾಗಿ ಕಠಿಣ ಪರಿಶ್ರಮ ಮಾಡಿದವರಿಗೆ ಇಂದಲ್ಲ ನಾಳೆ ಉತ್ತಮ ಪ್ರತಿಫಲ ಸಿಕ್ಕೆ ಸಿಗುತ್ತದೆ ಇದು ನನ್ನ ಅನುಭವದ ಮಾತು. ಮುಂಬೈ ಕನ್ನಡ ಸಂಘದ ವತಿಯಿಂದ ನನಗೆ ಏರ್ಪಡಿಸಲಾದ ಸನ್ಮಾನದಿಂದ ನಾನು ಪುಳಕಿತಗೊಂಡಿದ್ದೇನೆ, ಸಂಘದ ಸದಸ್ಯರ ಆಶೀರ್ವಾದ ಸದಾ ನನ್ನ ಮೇಲಿರಲಿ” ಎಂದರು.
ಕೊನೆಗೆ ವಂದನಾರ್ಪಣೆಗೈಯಲಾಗಿ, ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ವರದಿ : ಸೋಮನಾಥ ಎಸ್ ಕರ್ಕೇರ, 9819321186