
ಶೋಭಾ ಎಸ್.ಶೆಟ್ಟಿ ನೆಲ್ಲಿದಡಿಗುತ್ತು
ನವೋದಯ ಕನ್ನಡ ಸೇವಾ ಸಂಘ(ರಿ), ಥಾಣೆಯ ಆಯೋಜನೆಯಲ್ಲಿ ಹಾಗೂ ಮಹಿಳಾ ವಿಭಾಗದ ಸಹಯೋಗದೊಂದಿಗೆ ಭಜನಾ ಮಂಗಳೋತ್ಸವ ಕಾರ್ಯಕ್ರಮವು ಜನವರಿ 11, ಶನಿವಾರದಂದು ನವೋದಯ ಜ್ಯೂನಿಯರ್ ಕಾಲೇಜಿನ ಸಭಾಗೃಹದಲ್ಲಿ ಬಹಳ ಅದ್ದೂರಿಯಿಂದ ನೆರವೇರಿತು.
. ಈ ಭಜನಾ ಮಂಗಳೋತ್ಸವದ ಧಾರ್ಮಿಕ ಕಾರ್ಯಕ್ರಮಕ್ಕೆ ನವೋದಯ ಕನ್ನಡ ಸೇವಾ ಸಂಘದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಎಳತ್ತೂರುಗುತ್ತು ಅವರ ಶುಭಾಕಾಂಕ್ಷೆಯೊಂದಿಗೆ ಗೌರವ ಪ್ರಧಾನ ಕಾರ್ಯದರ್ಶಿ ಶಶಿಧರ್ ಕೆ.ಶೆಟ್ಟಿ, ಗೌರವ ಕೋಶಾಧಿಕಾರಿ ಸುನೀಲ್ ಶೆಟ್ಟಿ, ಉಪಾಧ್ಯಕ್ಷರಾದ ರವಿ ಹೆಗ್ಡೆ,ಜೊತೆ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ಜೊತೆ ಕೋಶಾಧಿಕಾರಿ ಕೀರ್ತಿ ಶೆಟ್ಟಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಯನಾ ಎಸ್. ಶೆಟ್ಟಿ ಇವರೆಲ್ಲರ ಉಪಸ್ಥಿತಿ ಯೊಂದಿಗೆ ದೀಪ ಪ್ರಜ್ವಲಿಸಿ ಚಾಲನೆ ನೀಡಲಾಯಿತು. ಮುಂಬಯಿ – ಥಾಣಾ ಪರಿಸರದ ಪ್ರಸಿದ್ಧ ಭಜನಾ ಮಂಡಳಿಯವರು ಇದರಲ್ಲಿ ಭಾಗವಹಿಸಿದ್ದರು.ಭ್ರಮಾರಾಂಬಿಕೆ ಭಜನಾ ಮಂಡಳಿ ಡೊಂಬಿವಿಲಿ ( ಪೂರ್ವ), ಶ್ರೀ ಮಹಾವಿಷ್ಣು ಭಜನಾ ಮಂಡಳಿ ಡೊಂಬಿವಿಲಿ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಜ್ದೆಪಾಡ ಡೊಂಬಿವಿಲಿ, ಶ್ರೀ ನಿತ್ಯಾನಂದ ಚಾಮುಂಡೇಶ್ವರಿ ದೇವಿ ಭಜನಾ ಮಂಡಳಿ ಸಾಕಿನಾಕ, ಶ್ರೀ ವಿಜಯ್ ಶೆಟ್ಟಿ ಮೂಡುಬೆಳ್ಳೆ ಬಳಗ ಮತ್ತು ನವೋದಯ ಕನ್ನಡ ಸೇವಾ ಸಂಘದ ಭಜನಾ ಮಂಡಳಿಯ ಸದಸ್ಯರು ಭಕ್ತಿಭಾವದಿಂದ ರಾಗ, ತಾಳ, ಲಯದ ಜೊತೆ ಸುಮಧುರ ಕಂಠದೊಂದಿಗೆ ತನ್ಮಯತೆಯಿಂದ ಭಜನೆಗಳನ್ನು ಹಾಡಿ ನೆರೆದ ಭಗವದ್ಭಕ್ತರನ್ನು ತಲ್ಲೀನರನ್ನಾಗಿಸಿ ಭಕ್ತಿರಸದಲ್ಲಿ ತೇಲಾಡಿಸಿದರು.






ಭಜನೆಯಿದ್ದಲ್ಲಿ ವಿಭಜನೆಯಿಲ್ಲ. ಭಜನೆ, ಕೀರ್ತನೆಯ ಸುಶ್ರಾವ್ಯ ದ್ವನಿಯು ಕಿವಿಯ ಒಳಹೊಕ್ಕು , ಮನಸ್ಸಿನಲ್ಲಿ ಧನಾತ್ಮಕ ಶಕ್ತಿಗಳನ್ನು ಒಟ್ಟುಗೂಡಿಸಿ ನಕರಾತ್ಮಕ ಯೋಚನೆಗಳನ್ನು ಹೊರಗೊಡಹಿ ಚಿತ್ತವನ್ನು ಆಹ್ಲಾದಗೊಳಿಸಿ ಹುರುಪುಗೊಳಿಸುತ್ತದೆ ಎಂಬುವುದಕ್ಕೆ ಅಂದು ನೆರೆದ ಭಗವದ್ಭಕ್ತರೇ ಸಾಕ್ಷಿ. ತದನಂತರ ಸಾಯಂಕಾಲ ನವೋದಯ ಇಂಗ್ಲಿಷ್ ಹೈಸ್ಕೂಲಿನ ಮಕ್ಕಳು, ಯುವ ವಿಭಾಗ , ಮತ್ತು ಮಹಿಳಾ ವಿಭಾಗದವರಿಂದ ಪ್ರದರ್ಶನಗೊಂಡ ಕುಣಿತ ಭಜನೆಯು ಎಲ್ಲರ ಹೃನ್ಮನಗಳನ್ನು ತಣಿಸಿ ಹಬ್ಬದ ವಾತಾವರಣವನ್ನು ನಿರ್ಮಿಸಿತ್ತು. ಕೋಶಾಧಿಕಾರಿ ಸುನೀಲ್ ಶೆಟ್ಟಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಂಗಳಾರತಿ ನಡೆಯಿತು. ಶಶಿಧರ್ ಶೆಟ್ಟಿಯವರು ಮಾತನಾಡುತ್ತಾ, “ಭಜನಾ ಮಂಗಳೋತ್ಸವ ಕಾರ್ಯಕ್ರಮವುಬ ಬಹಳ ಉತ್ತಮ ರೀತಿಯಲ್ಲಿ ಜರಗಿತು. ಇದು ಯಶಸ್ವಿಯಾಗಿ ನಡೆಯಲು ಸಹಕರಿಸಿದ ಆಡಳಿತ ಮಂಡಳಿ, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ,ಯುವ ವಿಭಾಗಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು. ನವೋದಯ ಶಾಲೆಯ ಶಿಕ್ಷಕರು ಮಕ್ಕಳನ್ನು ಕುಣಿತ ಭಜನೆಗೆ ಉತ್ತಮ ರೀತಿಯಲ್ಲಿ ತಯಾರುಗೊಳಿಸಿದ ಶಿಕ್ಷಕ ವೃಂದದವರಿಗೆ ಮತ್ತು ಭಜನಾ ಮಂಗಳೋತ್ಸವದಲ್ಲಿ ಪಾಲ್ಗೊಂಡ ಎಲ್ಲಾ ಭಜನಾ ಮಂಡಳಿಯವರಿಗೆ ದುರ್ಗಾ ಸರಸ್ವತಿಯ ಕೃಪೆಯಿರಲಿ” ಎಂದು ಶುಭ ಹಾರೈಸಿದರು. ಈ ಧಾರ್ಮಿಕ ಉತ್ಸವದಲ್ಲಿ ನವೋದಯ ಕಾಲೇಜಿನ ಪ್ರಾಂಶುಪಾಲೆ ಲತಾ ಮುರಳಿ, ಹೈಸ್ಕೂಲ್ ನ ಮುಖ್ಯೋಪಾಧ್ಯಾಯಿನಿ ಕುಸುಮ ಸಾಲ್ಯಾನ್, ಶಿಕ್ಷಕ – ಶಿಕ್ಷಕೇತರ ವೃಂದ, ಮಹಿಳಾ ವಿಭಾಗದ ಕಾರ್ಯದರ್ಶಿ ಸುಗಂಧಿ ಹೆಗ್ಡೆ, ಕೋಶಾಧಿಕಾರಿ ರೇಣುಕಾ ದೇವಾಡಿಗ ಮತ್ತು ಸರ್ವ ಸದಸ್ಯರು, ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೇಯಸ್ ಹೆಗ್ಡೆ ಮತ್ತು ಸದಸ್ಯರು ಉಪಸ್ಥಿತರಿದ್ದರು. ಮಾಧ್ಯಮ ಮತ್ತು ಸಂವಹನ ಸಮಿತಿಯ ಮನೋಜ್ ಶೆಟ್ಟಿ ನಕ್ರೆ ಧನ್ಯವಾದ ಸಮರ್ಪಣೆ ಮಾಡಿದರು.
ನಂತರ ನವೋದಯ ಕಾಲೇಜಿನ ಸಭಾಂಗಣದಿಂದ ದುರ್ಗಾ ಸರಸ್ವತಿಯ ಭಾವಬಿಂಬವನ್ನು ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆಯ ಮೂಲಕ ನವೋದಯ ಸದನಕ್ಕೆ ಬಂದು ಅಲ್ಲಿ ಸ್ಥಾಪನೆಗೊಂಡಿರುವ ಭಜನಾ ಮಂದಿರದಲ್ಲಿ ಆರತಿಯನ್ನು ಬೆಳಗಿ ಭಗವದ್ಭಕ್ತರಿಗೆ ತೀರ್ಥ ಪ್ರಸಾದವನ್ನು ಹಂಚಿ ಶಾರದಾಂಬೆಯ ಕೃಪಾಕಟಾಕ್ಷಕ್ಕೆ , ಅನುಗ್ರಹಕ್ಕೆ ಪಾತ್ರರಾಗಿಸಿ ಸರ್ವರ ಒಳಿತಿಗೆ ಪ್ರಾರ್ಥಿಸುತ್ತಾ ಈ ಭಜನಾ ಮಂಗಳೋತ್ಸವವು ಧಾರ್ಮಿಕ ಸದ್ಭಾವನೆಯೊಂದಿಗೆ ಸಂಪನ್ನಗೊಂಡಿತು.