
ಥಾಣೆ ಪಶ್ಚಿಮ ಕಿಸನ್ ನಗರದ ಓದವ್ ಬಾಗ್ ನಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮಂದಿರವನ್ನು ಸ್ಥಾಪಿಸಿ, ಧಾರ್ಮಿಕ ಕಾರ್ಯದೊಂದಿಗೆ, ಸಾಮಾಜಿಕ, ಶೈಕ್ಷಣಿಕ ಸೇವೆಯಲ್ಲಿ ನಿರತವಾಗಿರುವ ಶ್ರೀ ಅಯ್ಯಪ್ಪ ಸೇವಾ ಸಮಿತಿಯು ಪ್ರತಿ ವರ್ಷ ಶ್ರೀ ಶನಿ ಮಹಾಪೂಜೆ ಯನ್ನು ಆಯೋಜಿಸುತ್ತಿದ್ದು, ಈ ಬಾರಿ ಫೆಬ್ರವರಿ 1 ರಂದು, ಶನಿವಾರ ಓಧವ್ ಬಾಗ್ ಮೈದಾನದಲ್ಲಿ ಜರಗಲಿದೆ.
ಅಂದು ಬೆಳಿಗ್ಗೆ 7ಗಂಟೆಗೆ ಗಣಹೋಮ ನಡೆದ ಬಳಿಕ 10.30ಕ್ಕೆ ದೇವಸ್ಥಾನದಿಂದ ಪೂಜಾ ಸ್ಥಳಕ್ಕೆ ಮೆರವಣಿಗೆ ಸಾಗಿ ಬರಲಿದೆ.
ಮಧ್ಯಾಹ್ನ 12 ಗಂಟೆಗೆ ಕಲಶ ಪ್ರತಿಷ್ಠಾಪನೆಯಾದ ಬಳಿಕ 1.30ಗಂಟೆಗೆ ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ ಕೋಟೆ ಮುಂಬಯಿ ಇವರಿಂದ ತಾಳ ಮದ್ದಳೆ ರೂಪದಲ್ಲಿ ಶನಿ ಗ್ರಂಥ ಪಾರಾಯಣ ನಡೆಯಲಿದೆ. ರಾತ್ರಿ 7.30 ಗಂಟೆಗೆ ಭಜನೆ, 8ಗಂಟೆಗೆ ಮಹಾ ಮಂಗಳಾರತಿಯಾದ ಬಳಿಕ ತೀರ್ಥ ಪ್ರಸಾದ, ಅನ್ನ ಮಹಾ ಪ್ರಸಾದ ವಿತರಣೆಯಾಗಲಿದೆ.
ಭಕ್ತಾದಿಗಳು ವಾರ್ಷಿಕ ಶ್ರೀ ಶನಿ ಮಹಾಪೂಜೆಯಲ್ಲಿ ಪಾಲ್ಗೊಂಡು ತೀರ್ಥ – ಪ್ರಸಾದ ಸ್ವೀಕರಿಸಿ ಶ್ರೀ ಶನಿ ದೇವರ ಕೃಪೆಗೆ ಪಾತ್ರರಾಗುವಂತೆ, ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಪದಾಧಿಕಾರಿಗಳು, ಆಡಳಿತ ಮಂಡಳಿಯ ಸದಸ್ಯರು, ಪೂಜಾ ಉಪ -ಸಮಿತಿ ಯುವ ವಿಭಾಗ ಮತ್ತು ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯರು ವಿನಂತಿಸಿದ್ದಾರೆ.