
ಮೀರಾ – ಭಾಯಂದರ್ ಶಾಖೆಯ ಬಗ್ಗೆ :
ಮೊಗವೀರರು ಕರಾವಳಿಯ ಕಡಲತಡಿಯಲ್ಲಿ ವಾಸವಾಗಿದ್ದುಕೊಂಡು ನೂರಾರು ವರ್ಷಗಳ ಹಿಂದೆಯೇ ಮಾಯನಗರಿ ಮುಂಬೈಗೆ ಆಗಮಿಸಿ ದಿನದಲ್ಲಿ ದುಡಿದು ರಾತ್ರಿ ಶಾಲೆಯಲ್ಲಿ ಕಲಿತು ಸಂಘಟಿಕರಾಗಿದ್ದರು. ಅವರೆಲ್ಲರ ಪೈಕಿ ಕಾಡಿಪಟ್ಣ ಶ್ರೀ ಚಂದು ಮಾಸ್ಟರ್ ರವರ ನೇತೃತ್ವದಲ್ಲಿ 1902 ರಲ್ಲಿ ಸ್ಥಾಪನೆಗೊಂಡ ಮೊಗವೀರ ವ್ಯವಸ್ಥಾಪಕ ಮಂಡಳಿ ಅಂದು ಅವರು ಹಾಕಿದ ಭದ್ರಬುನಾದಿಯಿಂದಾಗಿ ಹಾಗೂ ಅವರ ಮುಂದಾಲೋಚನೆಯ ಫಲವಾಗಿ ಇಂದು ಮಂಡಳಿಯು ಹೆಮ್ಮರವಾಗಿ ಬೆಳೆದು ಲಕ್ಷಾಂತರ ಮಂದಿಗೆ ವಿದ್ಯಾ ದಾನ ನೀಡಿ, ಸಂಕಷ್ಟದಲ್ಲಿರುವವರಿಗೆ ಆರ್ಥಿಕ ಸಹಾಯ ಮಾಡಿ, ಅಂಧೇರಿಯಲ್ಲಿ ಭವ್ಯವಾದ ವಿದ್ಯಾ ಸಂಕುಲನವನ್ನು ಸ್ಥಾಪಿಸಿ ಶೈಕ್ಷಣಿಕ ಹಾಗೂ ಸಾಮಾಜಿಕ ರಂಗದಲ್ಲಿ ಕಣನೀಯ ಸಾಧನೆ ಮಾಡಿರುತ್ತದೆ.
ಈ ಸಂಕುಲದಲ್ಲಿ ಕೇಜಿಯಿಂದ ಪಿಜಿ ತನಕ ಶೈಕ್ಷಣಿಕ ಕೋರ್ಸ್ಗಳು ಲಭ್ಯವಾಗಿದ್ದು ಪರಿಸರದ ತುಳು ಕನ್ನಡಿಗರಿಗೆ ಮೈನಾರಿಟಿ ಕೋಟದಲ್ಲಿ ಈ ಮುಖಾಂತರ ರಿಯಾಯತಿಯೊಂದಿಗೆ ಎಲ್ಲರಿಗೂ ಗುಣಮಟ್ಟದ ವಿದ್ಯೆಯನ್ನು ನೀಡುತ್ತಾ ಬಂದಿರುತ್ತದೆ.
ಈ ಎಲ್ಲಾ ಸವಲತ್ತುಗಳು ಉಪನಗರದಲ್ಲಿರುವ ನಮ್ಮ ಜನರಿಗೆ ದೊರಕುವಂತಾಗಲಿ ಎಂದು 2011ರಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಭಜನಾ ಸಮಿತಿಯ ಪವಿತ್ರ ಜಾಗದಲ್ಲಿ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಮೀರಾ – ಭಾಯಂದರ್ ಶಾಖೆಯು ಸ್ಥಾಪನೆಗೊಂಡಿತು.
ಪ್ರಾರಂಭದಲ್ಲಿ ಶಾಖೆ ಸದಸ್ಯರಿಗೆ ಶಾರಿರಿಕವಾಗಿ ಬಲಾಢ್ಯರಾಗಿರಬೇಕೆಂಬ ಉದ್ದೇಶದಿಂದ ಹಲವಾರು ಕ್ರೀಡಾಪಟುಗಳನ್ನು ನೀಯೋಜಿಸಿ, ಅದರಲ್ಲೂ ಪುರಾತನವಾದ ಜಾನಪದ ಕ್ರೀಡೆಗಳನ್ನು ಜನತೆಗೆ ಪರಿಚಯಿಸಿ ಹಾಗೆಯೇ ಆರೋಗ್ಯ ವಿಷಯದಲ್ಲೂ ಗಮನಹರಿಸಿ ಆಗಾಗ ಆರೋಗ್ಯ ಶಿಬಿರಗಳ ನಡೆಸಿ ವಿದ್ಯಾರ್ಥಿಗಳ ಹೆಚ್ಚಿನ ವ್ಯಾಸಂಗದ ಅನುಕೂಲತೆಗಾಗಿ ವಿದ್ಯಾ ತರಭೇತಿ ಶಿಬಿರಗಳನ್ನು ನುರಿತ ಸದಸ್ಯರಿಂದ ಏರ್ಪಡಿಸಿ ಮಹಾಮಾರಿ ಕರೋನ ಹಾವಳಿ ಸಂದರ್ಭದಲ್ಲಿ ಪ್ರಧಾನ ಸಭೆಯ ಮೂಲಕ ನೆರವನ್ನು ತರಿಸಿ ಪರಿಸರದ ಜನರಿಗೆ ವಿತರಿಸಿ ಜನಸೇವೆಯನ್ನು ಮಾಡುತ್ತಾ ಬಂದಿರುತ್ತದೆ. ಧಾರ್ಮಿಕ ಕ್ಷೇತ್ರದಲ್ಲಿ ಶಾಖೆಯು ಲೋಕ ಕಲ್ಯಾಣಕ್ಕಾಗಿ ಮನೆಮನೆಯಲ್ಲೂ ಭಜನೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಶಾಖೆಯಲ್ಲಿ ಭಜನಾ ತರಬೇತಿ ತರಗತಿಯನ್ನು ಆರಂಭಿಸಿ ನುರಿತರಿಂದ ಭಜನೆಗಳನ್ನು ಕಲಿಸಲಾಗುತ್ತದೆ.
2022ರಲ್ಲಿ ಭಾಯಂದರ್ ಪೂರ್ವದ ಗೋಲ್ದನ್ next ಸೆಕ್ಟರ್ ಐದರಲ್ಲಿರುವ ಸ್ವಂತ ಜಾಗಕ್ಕೆ ಸ್ಥಳಾಂತರಗೊಂಡು 2023 ರಂದು ಇಂಟರ್ನ್ಯಾಷನಲ್ ಅಂಕೂರ್ ಸ್ಕೂಲ್ ಅನ್ನು ಸ್ಥಾಪಿಸಿ ಪ್ಲೇ ಗ್ರೂಪ್ ನಿಂದ ಸೀನಿಯರ್ ಕೆಜಿ ವರೆಗೆ CBSE ಬೋರ್ಡ್ ತರಗತಿಗಳನ್ನು ತೆರೆದು ಪ್ರಸ್ತುತ ದ್ವಿತೀಯ ವರ್ಷದಲ್ಲಿ 20ಕಿಂತ ಹೆಚ್ಚಿನ ದಾಖಲಾತಿಯನ್ನು ಪಡೆದಿರುತ್ತದೆ. ಈ ತರಗತಿಗಳು ಇಂಟರ್ನ್ಯಾಷನಲ್ ಅಂಕುರ್ ಸ್ಕೂಲ್ ಅಂಗ ಸಂಸ್ಥೆಯಾಗಿದ್ದು ಇಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಆಧುನಿಕ ಸೌಲಭ್ಯಗಳೊಂದಿಗೆ ದೊರಕುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ.
ಶಾಖೆಯ ಈ ನರ್ಸರಿ ಶಾಲೆಯನ್ನು ಇನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಲುವಾಗಿ ಈ ಯೋಜನೆಯನ್ನು ವಿಸ್ತರಿಸಿ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಯೋಜನೆ ಹಾಕಿದ್ದು, ಅದಕ್ಕಾಗಿ ಹೊಸ ಕಟ್ಟಡದ ಅವಶ್ಯಕತೆ ಇದ್ದು, ನಿಧಿ ಸಂಗ್ರಹಣೆ ಮಾಡುವ ಶಾಖೆಯ ಈ ಯೋಜನೆಗೆ ದಾನಿಗಳು ಸ್ವಜಾತಿ ಭಾಂದವರು ಮಂಡಳಿಯ ಸದಸ್ಯರು ಮತ್ತು ತುಳು ಕನ್ನಡಿಗರು ಸಹಕರಿಸಬೇಕೆಂದು ವಿನಂತಿಸಲಾಗಿದೆ.
09/02/25ಕ್ಕೆ ಶಾಖೆಯ ವಾರ್ಷಿಕೋತ್ಸವ :
ಶಾಖೆಯ ವಾರ್ಷಿಕೋತ್ಸವ ಸಮಾರಂಭವು ತಾರೀಕು 9-2-2025 ರಂದು ಆದಿತ್ಯವಾರ ಸಂಜೆ ಗಂಟೆ 4ಕ್ಕೆ ಸರಿಯಾಗಿ ಮೀರಾರೋಡಿನ ಕನಾಕಿಯ ರಸ್ತೆಯಲ್ಲಿರುವ ಶೆಹನಾಯಿ ಸಭಾಂಗಣದಲ್ಲಿ ಜರಗಲಿದ್ದು, ಅಧ್ಯಕ್ಷ ಸ್ಥಾನವನ್ನು ಮಂಡಳಿ ಅಧ್ಯಕ್ಷರಾದ ಶ್ರೀ ಎಚ್ ಅರುಣ್ ಕುಮಾರ್ ರವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಡುಪಿಯ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಸಂಸ್ಥಾಪಕ ನಾಡೋಜ ಡಾಕ್ಟರ್ ಜಿ ಶಂಕರ್, ಅತಿಥಿಗಳಾಗಿ ಉಚ್ಚಿಲ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಶ್ರೀ ಜಯ ಸಿ ಕೋಟ್ಯಾನ್, ದಿವ್ಯ ಶಿಪ್ಪಿಂಗ್ ಅಂಡ್ ಕ್ಲಿಯರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮುಂಬೈ ಇದರ ವ್ಯವಸ್ಥಾಪಕ ನಿರ್ದೇಶಕ ಶ್ರೀ ವೇದ ಪ್ರಕಾಶ್ ಶ್ರಿಯನ್, ಮೊಗವೀರ ಕೋ ಆಪರೇಟಿವ್ ಬ್ಯಾಂಕ್ ನ ಕಾರ್ಯಧ್ಯಕ್ಷರಾದ ಶ್ರೀ ಭಾಸ್ಕರ್ ಸಾಲಿಯನ್, ಮೊಗವೀರ ವ್ಯವಸ್ಥಾಪಕ ಮಂಡಳಿಯ ಟ್ರಸ್ಟೀ ಶ್ರೀ ಅಜಿತ್ ಸುವರ್ಣ, ಮೀರಾ-ಬಾಯದರ್ ಶಾಖೆಯ ಸಂಯೋಜಕ ಸುರೇಶ್ ಕುಂದರ್, ಸಮಾಜ ಸೇವಕ ಶ್ರೀ ಪ್ರಜ್ವಲ್ ದೇವರಾಜ್ ಸಾಲಿಯಾನ್, ಗೂಗಲ್ ಸಂಸ್ಥೆಯ ಹಿರಿಯ ಪ್ರಬಂಧಕ ಶ್ರೀ ಅಮಾಯೇ ಸುವರ್ಣ ರವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಶಾಖೆಯ ಮಹಿಳಾ ವಿಭಾಗದವರಿಂದ ಹಳದಿ ಕುಂಕುಮ ಜರಗಿ ನಂತರ ವಿವಿಧ ನೃತ್ಯಗಳನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಪವರ್ ಲಿಫ್ಟಿಂಗ್ ಚಾಂಪಿಯನ್ ನಲ್ಲಿ ಚಿನ್ನದ ಪದಕ ವಿಜೇತ ಜಿಮ್ ಮಾಲೀಕರಾದ ಶ್ರೀ ಮೋಹನ್ ಎನ್ ಪುತ್ರನ್ ರವರಿಗೆ ಮಂಡಳಿಯ ವತಿಯಿಂದ ಸನ್ಮಾನ, ಮೀರಾ ಬಾಯಂದರ್ ಶಾಖೆಯ ಸದಸ್ಯರಿಂದ ತುಳು ನಾಟಕ ಹಾಗೂ ಇತರ ಮನೋರಂಜನ ಕಾರ್ಯಕ್ರಮಗಳು ಜರಗಲಿದ್ದು ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಮಂಡಳಿಯ ಸದಸ್ಯರು ಸ್ವಜಾತಿ ಬಾಂಧವರು ತುಳು ಕನ್ನಡಿಗರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡುವಂತೆ ಹಾಗೂ ಎಂವಿಎಂ ಅಂಕುರ್ ಇಂಟರ್ನ್ಯಾಷನಲ್ ನರ್ಸರಿ ಶಾಲೆಗೆ ಪೂರ್ಣ ರೀತಿಯ ಸಹಕಾರವನ್ನು ನೀಡಿ ಸಹಕರಿಸಬೇಕೆಂದು ಶಾಖಾ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಕಟ್ಟಡ ನಿಧಿ ಸಂಗ್ರಹಣ ಸಮಿತಿಯ ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.