



ಮಹಿಳೆಯರು ಸಂಸಾರದ ಜವಾಬ್ದಾರಿಯ ಜೊತೆ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಾಳಜಿ ವಹಿಸಬೇಕು- ಸುಶೀಲಾ ಸತೀಶ್ ಅಮೀನ್
ಚಿತ್ರ, ವರದಿ: ಉಮೇಶ್ ಕೆ. ಅಂಚನ್.
ಮುಂಬಯಿ, ಫೆ. 10: ಹಳದಿ ಕುಂಕುಮ ಆಚರಣೆಯಂತಹ ಈ ಶುಭ ಸಂಧರ್ಭವು ಮಹಿಳೆಯರೊಂದಿಗಿರುವ ದೈವಿಕ ಶಕ್ತಿಯನ್ನು ಗೌರವಿಸಲು ಸಿಗುವ ಒಂದು ಸುಂದರ ಅವಕಾಶ. ಜಾತಿ ಮತ, ಬಡವ ಶ್ರೀಮಂತನೆಂಬ ಬೇದ ಭಾವವಿಲ್ಲದೆ ನಮ್ಮೊಳಗಿರುವ ಒಗ್ಗಟ್ಟನ್ನು ಪರಸ್ಪರ ಗಟ್ಟಿ ಮಾಡಿಸಿಕೊಳ್ಳಲು ಮತ್ತು ಜನರಿಂದ ಜನರನ್ನು ಬೆರೆಸಲು ಇಂತಹ ಕಾರ್ಯಕ್ರಮಗಳು ಎಡೆ ಮಾಡಿಕೊಡುತ್ತದೆ. ಮಹಿಳೆ ಮನೆಯಲ್ಲಿ ಕಂಬವಿದ್ದಂತೆ ಅನ್ನುವ ಮಾತಿನಂತೆ ಎಲ್ಲಾ ಕ್ಷೇತ್ರದಲ್ಲೂ ಉನ್ನತಿಯ ಪದಕ್ಕೇರುತ್ತಿರುವ ಮಹಿಳೆಯರು ತಮ್ಮ ಸಾಂಸಾರಿಕ ಬದುಕಲ್ಲಿ ಸಮತೋಲನವನ್ನು ಕಾಪಾಡಿಕೊಂಡು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೂ ಗಮನ ಕೊಡುತ್ತಿರಬೇಕು. ಬದುಕೊಂದು ದಿನನಿತ್ಯ ಹೊಸ ಹೊಸ ವಿಷಯಗಳನ್ನು ಕಲಿಯುವ ಪಾಠ ಶಾಲೆ ಅನ್ನುವಂತೆ ಸಮಾಜದಲ್ಲಿ ಬದಲಾಗುತ್ತಿರುವ ತಾಂತ್ರಿಕ ಪರಿವರ್ತನೆಗಳೊಂದಿಗೆ ನಮ್ಮ ವಿಚಾರ ಮತ್ತು ವ್ಯವಹಾರಗಳಲ್ಲೂ ಹೊಸತನವನ್ನು ಮೈಗೂಡಿಸಿಕೊಳ್ಳಬೇಕು. ಸಮಯದೊಂದಿಗೆ ನಮ್ಮ ಸ್ವಭಾವದಲ್ಲೂ ಶಾಂತಿ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಂಡು ಮನಸ್ಸಿನ ಸುಖ ಶಾಂತಿ ನೆಮ್ಮದಿಗೆ ಮೊದಲ ಆದ್ಯತೆ ಕೊಡುತ್ತಿರಬೇಕು ಎಂದು ಲೇಖಕಿ ಸುಶೀಲ ಸತೀಶ್ ಅಮೀನ್ ಕೊಡವೂರು ಹೇಳಿದರು.




ಅವರು ಫೆ. 9 ರಂದು ಭಾಯಂದರ್ ಪೂರ್ವದ ಆರ್. ಎನ್. ಪಿ ಪಾರ್ಕ್ ಪ್ರಥಮೇಶ್ ಸಭಾಗ್ರಹದಲ್ಲಿ ಅಯ್ಯಪ್ಪ ಆರಾಧನಾ ಭಕ್ತ ಮಂಡಲದ ಸಹಸಂಸ್ಥೆಯಾದ ಆರಾಧನಾ ಫ್ರೆಂಡ್ಸ್ ಆಯೋಜಿಸಿದ್ದ ಹಳದಿಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅತಿಥಿಯಾಗಿ ಆಗಮಿಸಿದ್ದ ಲೇಖಕಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ತನ್ನ ಅನಿಸಿಕೆಯನ್ನು ವ್ಯಕ್ತ ಪಡಿಸುತ್ತಾ ಶಾಸ್ತ್ರದಲ್ಲಿ ಅರಸಿನವು ಬಂಗಾರಕ್ಕಿಂತಲೂ ಶ್ರೇಷ್ಠ ಎನ್ನಲಾಗಿದೆ. ಸಮುದ್ರ ಮಂಥನಕಾಲದಲ್ಲಿ ಮಹಾಲಕ್ಷ್ಮಿಯ ಜೊತೆಗೆ ಧನ, ಕನಕ, ಸಿರಿ ಸಂಪತ್ತುಗಳೊಂದಿಗೆ ಹಳದಿ,ಕುಂಕುಮ ,ಹೂ, ಬಳೆಗಳು ಬಂತು ಎಂಬ ನಂಬಿಕೆಯ ಕಥೆಗಳಿವೆ. ಹಳದಿ ಬಣ್ಣ ಜ್ಣಾನದ ಸಂಕೇತವಾಗಿದ್ದು ಈ ಬಣ್ಣ ಶ್ರಿಮನ್ನಾರಾಯಣನಿಗೆ ಅತ್ಯಂತ ಪ್ರೀಯವಾದ ಬಣ್ಣವಂತೆ. ಶ್ರೀಕೃಷ್ಣ ಯಾವಾಗಲೂ ಹಳದಿ ಬಣ್ಣದ ಬಟ್ಟೆಯನ್ನೆ ತೊಡುತ್ತಿದ್ದನಂತೆ.ಯಾವುದೇ ಶುಭ ಕಾರ್ಯಕ್ಕೆ ಕುಳಿತು ಕೊಳ್ಳುವಾಗ ಸ್ತ್ರೀ ಮತ್ತು ಪುರುಷರಿಬ್ಬರ ಹಣೆಯಲ್ಲಿ ಕುಂಕುಮ ಇರಬೇಕು ಎಂಬ ನಿಯಮವಿದೆ. ಕುಂಕುಮ ಎಂದ ತಕ್ಷಣ ನೆನಪಿಗೆ ಬರುವುದು ಕೆಂಪು ಬಣ್ಣ ಇದು ರಕ್ತದ ಸಂಕೇತ. ಇಂದು ಆರೋಗ್ಯದಾಯಕ ಸೌಂಧರ್ಯ ವರ್ಧಕ, ಸಂಸ್ಕ್ರತಿ ಸಂಪ್ರದಾಯದ ಅರಸಿನ ಕುಂಕುಮವನ್ನು ಅತಿ ವಿರಳವಾಗಿ ಬಳಸಿ ಕೃತಕ ಸೌಂದರ್ಯ ಸಾಧನಗಳನ್ನು ನಾವು ದಾರಾಳಾವಾಗಿ ಬಳಸುತ್ತೇವೆ. ಇದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ನಮ್ಮೋಳಗೆ ಮೂಡಬೇಕು.
ಮಹಿಳೆಯರು ಯಾವುದಕ್ಕೂ ಅಂಜದೆ, ಅಳುಕದೆ ಮುನ್ನಡೆಯಿರಿ, ನಮಗೆ ನಾವೇ ಶಿಲ್ಪಿಗಳಾಗೋಣ. ಇಂದು ಮಹಿಳೆಯರು ಕಾಲಿರಿಸದ ಕಾರ್ಯಕ್ಷೇತ್ರವೇ ಇಲ್ಲ.ಎಲ್ಲಾ ಕ್ಷೇತ್ರಗಳಲ್ಲಿ ಮಿಂಚಿ, ಮಿನುಗುತ್ತಿದ್ದಾರೆ. ಇನ್ನೋಬ್ಬರಿಗೆ ತಮ್ಮನ್ನು ಹೋಲಿಸಿಕೊಂಡು ಮರುಗದಿರಿ.ಎಲ್ಲರ ಮಾತನ್ನು ಆಲಿಸಿ ಆದರೆ ಆಯ್ಕೆ ನಮ್ಮದೆ ಆಗಿರಲಿ. ಸಮಯಕ್ಕೆ ಮಹತ್ವ ನೀಡಿ ಎಲ್ಲರಿಗೂ ಶುಭವಾಗಲಿ ಎಂದರು.
ಬಂಟರ ಸಂಘದ ಮೀರಾಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾದ್ಯಕ್ಷೆ ವಸಂತಿ ಶೆಟ್ಟಿ ಮಾತನಾಡಿ ಕುಂಕುಮವು ಸ್ತ್ರೀಯರ ಮಾಂಗಲ್ಯದ ಸಂಕೇತ ಹಾಗೂ ಹಳದಿಯು ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಸಂಪ್ರದಾಯವನ್ನು ಮರೆಯದೆ ಸಮಾಜದ ಕಹಿ ಮಾತಿಗೆ ಕಿವಿಗೊಡನೆ ಸಿಕ್ಕ ಸಮಯದಲ್ಲಿ ಸಮಾಜ ಸೇವೆಯಲ್ಲಿ ಭಾಗಿಯಾಗೋಣ ಎಂದರು.
ಅತಿಥಿ, ಯುವ ರಾಜಕೀಯ ನೇತಾರೆ ಆಕಾಂಕ್ಷ ಶೆಟ್ಟಿ ವೀರ್ಕರ್ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು.
ಆರಾಧನಾ ಫ್ರೆಂಡ್ಸ್ ಇದರ ಕಾರ್ಯಾದ್ಯಕ್ಷೆ ಪ್ರೇಮ ಮಾಧವ ಹೆಗ್ಡೆಯವರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಮಹಿಳೆಯರಿಗೆ ಹಾಗೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭಜನಾಗುರು ಶ್ರೀಧರ್ ಶೆಟ್ಟಿ ಮತ್ತು ತಬುಲಾ ವಾದಕ ಶ್ರೇಯಸ್ ಶೆಟ್ಟಿಯವರನ್ನು ಗೌರವಿಸಲಾಯಿತು. ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು.
ಸುಶೀಲಾ ಶೆಟ್ಟಿ, ಶಕುಂತಳಾ ಸಾಲ್ಯಾನ್, ಶಶಿಕಲಾ ಶೆಟ್ಟಿ ಪ್ರಾರ್ಥನೆ ಗೈದರು. ಆರಾಧನಾ ಫ್ರೆಂಡ್ಸಿನ ಕಾರ್ಯದರ್ಶಿ ಉಷಾ ಅಂಚನ್ ಸ್ವಾಗತಿಸಿದರು. ಸಾಂಸ್ಕೃತಿಕ ವಿಭಾಗದ ಕಾರ್ಯಾದ್ಯಕ್ಷೆ ಶೋಭಾ ಸುಧಾಕರ್ ಶೆಟ್ಟಿ ವಂದಿಸಿದರು. ಸದಸ್ಯೆಯರಿಂದ ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ಸ್ವಾಮಿಗಳ ಶಬರಿಮಲೆ ಯಾತ್ರೆಯ ಪ್ರಸಾದ ವಿತರಣೆ, ಪ್ರೀತಿ ಭೋಜನ ನಡೆಯಿತು.
ವೇದಿಕೆಯಲ್ಲಿ ಆರಾಧನಾ ಫ್ರೆಂಡ್ಸ್ ನ ಗೌರವಾದ್ಯಕ್ಷರಾದ ಸುಮಿತ್ರಾ ಕರ್ಕೇರ, ವನಿತಾ ಹೆಗ್ಡೆ, ಶೖಲಜಾ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರಮಿಳಾ ಶೆಟ್ಟಿ, ಉಪಸ್ಥಿತರಿದ್ದರು.
ಆರಂಭದಲ್ಲಿ ಅಯ್ಯಪ್ಪ ಆರಾಧನಾ ಗುರುಸ್ವಾಮಿ ಸುಧಾಕರ ಪೂಜಾರಿ ದೀಪ ಪ್ರಜ್ವಲಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಯ್ಯಪ್ಪ ಆರಾಧನಾ ಮಂಡಲದ ಗೌರವಾದ್ಯಕ್ಷರಾದ ಅಶೋಕ್ ಶೆಟ್ಟಿ, ಪ್ರಮೋದ್ ಕೋಟ್ಯಾನ್, ಕಾರ್ಯದರ್ಶಿ ನವೀನ್ ಸುವರ್ಣ, ಜತೆ ಕಾರ್ಯದರ್ಶಿ ನಿತಿನ್ ಶೆಟ್ಟಿ, ಕೋಶಾಧಿಕಾರಿ ನವೀನ್ ಶೆಟ್ಟಿ, ಜತೆ ಕೋಶಾಧಿಕಾರಿ ನಾರಾಯಣ ಸುವರ್ಣ, ಕರುಣಾಕರ ಮೂಲ್ಯ ಆರಾಧನಾ ಫ್ರೆಂಡ್ಸ್ ನ ಕೋಶಾಧಿಕಾರಿ ಶ್ರೀದೇವಿ ಶೆಟ್ಟಿ, ಉಪಾದ್ಯಕ್ಷೆ ಸುನಿಲಾ ಸುವರ್ಣ, ಜೊತೆ ಕೋಶಾಧಿಕಾರಿ ಆಶಾ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಉಪಕಾರ್ಯಾದ್ಯಕ್ಷೆ ಶೋಭಾ ಸಾಧು ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದ್ದರು.