
ಬಿಸಿಲ ಧಗೆಯಿಂದ ಬೇಸತ್ತು ಹೋಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊನೆಗೂ ವರ್ಷಧಾರೆಯಾಗಿದ್ದು, ಇಂದು ಸಂಜೆ ಸುರಿದ ಮಾರ್ಚ್ ತಿಂಗಳ ಮೊದಲ ಮಳೆಯಿಂದಾಗಿ ನಗರದ ತಾಪಮಾನ ಇಳಿಕೆಯಾಗಿದೆ.
ಸಂಜೆ 6 ಗಂಟೆಗೆ ಬೆಂಗಳೂರಿನ ಹಲವು ಕಡೆ ಮಳೆ ಆರಂಭವಾಗಿದ್ದು, ಶಾಂತಿ ನಗರ, ಕಾಪೋರೇಷನ್, ಕೆ ಆರ್ ಮಾರ್ಕೆಟ್, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆಯಾಗಿದೆ . ಇಂದು ಸುರಿದ ಮಳೆಯಿಂದ ಬೆಂಗಳೂರಿನ ತಾಪಮಾನ ಕುಸಿತವಾಗಿದ್ದು, ಬೇಸಿಗೆಯ ಮೊದಲ ಮಳೆಯಾಗಿದ್ದರಿಂದ ಬಿಸಿಲಿನಿಂದ ಕಂಗೆಟ್ಟಿದ ಜನರಿಗೆ ತಂಪನೆಯ ವಾತಾವರಣ ನಿರ್ಮಾಣವಾಗಿದೆ.
ರಾಜ್ಯದಲ್ಲಿ ತಾಪಮಾನ ಏರಿಕೆಯ ನಡುವೆಯೇ ಮಾರ್ಚ್ 14ರ ವರೆಗೆ ಮುಂಗಾರು ಪೂರ್ವ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಾರ್ಚ್ 14ರ ತನಕ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.