
ಸಹಸ್ರಾರು ಸಂಖ್ಯೆಯಲ್ಲಿ ಡಾ. ಆರ್.ಕೆ. ಶೆಟ್ಟಿಯಂತವರ ಅವಶ್ಯಕತೆ ನಮ್ಮ ಸಮಾಜಕ್ಕೆ ಇದೆ – ಪ್ರವೀಣ್ ಭೋಜ ಶೆಟ್ಟಿ.
ಮುಂಬಯಿ , ಜೂ. 16 : ಬಂಟ ಸಮಾಜದ ಯಾವುದೇ ಬಂಟರು ಸಮಸ್ಯೆಯಲ್ಲಿದ್ದರೆ ಅವರು ಬಂಟರ ಸಂಘದಲ್ಲಿ ಸಹಾಯ ಕೇಳುವುದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ ಅದು ಬಂಟರ ಹಕ್ಕು ಅಲ್ಲದಿದ್ದರೂ , ಬಂಟರಿಗೆ ಸಿಗುವ ಸವಲತ್ತುಗಳನ್ನು ಪಡೆಯುವುದು. ಈ ಮಾತು ಹೇಳಲು ಕಾರಣ ಏನೆಂದರೆ, ಎಂದಿನವರೆಗೆ ಪಡೆದು ಕೊಳ್ಳುವವರು ಇದ್ದಾರೆಯೋ , ಅಂದಿನ ವರೆಗೆ ಕೊಡುವವರ ಅಸ್ತಿತ್ವ ಮಾತ್ರ . ಎಂದು ತೆಗೆದು ಕೊಳ್ಳುವವರು ಇರುವುದಿಲ್ಲವೋ,ಅಂದು ಕೊಡುವವರ ಅಸ್ತಿತ್ವವೇ ಇರುವುದಿಲ್ಲ ಎಂದು ಬಂಟರ ಸಂಘ ಮುಂಬಯಿ ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ತಿಳಿಸಿದರು.

ಮೀರಾ ರೋಡ್ ಪೂರ್ವ ದಿ. ಲತಾ ಮಂಗೇಶ್ಕರ್ ನಾಟ್ಯ ಸಭಾಗೃಹದಲ್ಲಿ ಜರಗಿದ ಬಂಟರ ಸಂಘ ಮುಂಬಯಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ನೇತೃತ್ವದಲ್ಲಿ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಆರ್ಥಿಕ ಧನ ಸಹಾಯ ಡಾ.ಆರ್. ಕೆ. ಶೆಟ್ಟಿ ಪ್ರಾಯೋಜಿತ ” ಸಂಜೀವಿನಿ ” ಜೊತೆ ಸೇರಿ ಆರಂಭವಾದ ಟಾಟಾ ಐಐಎಸ್ – ಸಂಜೀವಿನಿ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮಾಜದ ಬಗ್ಗೆ ಕಾಳಜಿ ಇರುವ ಡಾ. ಆರ್. ಕೆ . ಶೆಟ್ಟಿ ಯಂತಹ ವ್ಯಕ್ತಿತ್ವದ ವ್ಯಕ್ತಿಗಳು ಸಹಸ್ರಾರು ಸಂಖ್ಯೆಯಲ್ಲಿ ನಮ್ಮ ಸಮಾಜದಲ್ಲಿ ಹುಟ್ಟಬೇಕು . ಇಂದು ಆರ್.ಕೆ. ಶೆಟ್ಟಿಯವರು ನಾಲ್ಕು ಜನ ಬಂಟ ಬಂಧುಗಳಿಗೆ ದೊಡ್ಡ ಪ್ರಮಾಣದ ನೆರವು ನೀಡಿದ್ದಾರೆ . ಅದು ಸಹಾಯ ಎನ್ನುವುದಕ್ಕಿಂತ , ಗೌರವ ಎನ್ನ ಬಹುದು . ಬಂಟರ ಸಂಘದಿಂದ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಗೆ ಅತಿ ಹೆಚ್ಚು ಸಹಾಯಧನ ಸಿಗುತ್ತಿದೆ . ಇಲ್ಲಿ ಅತೀ ಹೆಚ್ಚು ಬಂಟರು ಇದ್ದಾರೆ , ಅವರೆಲ್ಲರನ್ನೂ ಸಂಘದ ಸದಸ್ಯ ನೊಂದವಣಿ ಮಾಡಬೇಕು . ಸದಸ್ಯರು ಹೆಚ್ಚಾದಾಗ ಸಂಸ್ಥೆ ಬೆಳೆಯುತ್ತದೆ . ಯಾವುದೇ ಕಾಯಿಲೆಗೆ ಔಷಧಿ ಬೇಕಾದಲ್ಲಿ ನಮ್ಮ ಬಂಟರ ಸಂಘದ ಉಪಾಧ್ಯಕ್ಷರಾದ ಮಹೇಶ್ ಶೆಟ್ಟಿಯವರ ಆರೋಗ್ಯಂ ಎನ್ನುವ ಸ್ಕೀಮ್ನ ಪ್ರಯೋಜನ ಪಡೆಯಬಹುದು. ಬಂಟರ ಸಂಘದಲ್ಲಿ ಯಾವುದೇ ಸಹಾಯ ಪಡೆಯಲು ಅಂಜಿಕೆ ಬೇಡ . ಬಂಟರ ಸಂಘ ಇರುವುದೇ ಬಂಟರಿಗಾಗಿ , ಬಂಟರ ಸಂಘದಲ್ಲಿ ಹೆಚ್ಚಿನ ಎಲ್ಲಾ ಸವಲತ್ತುಗಳಿವೆ . ಅದನ್ನು ಬಂಟರು ಪಡೆಯುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮೀರಾ ರೋಡ್ ಶಾಸಕ ನರೇಂದ್ರ ಮೆಹ್ತಾ ಮಾತನಾಡಿ, ಸೃಷ್ಟಿಕರ್ತ ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಏನಾದರೂ ಬರೆದುಕೊಂಡು ಕಳುಹಿಸಿರುತ್ತಾನೆ. ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಶ್ಯಕತೆಗೆ ಸಹಾಯ ಮಾಡಲು ಯಾರನ್ನಾ ದರೂ ಬರೆದು ಕಳುಹಿಸಿರುತ್ತಾರೆ. ನಾವೆಲ್ಲರೂ ಈ ಮಾಯನಗರಿಯಲ್ಲಿ ಬದುಕು ಕಟ್ಟಿಕೊಂಡಿದ್ದೇವೆ . ಇಲ್ಲಿ ಎಲ್ಲಾ ವರ್ಗದ ಜನರಿದ್ದಾರೆ . ಕೆಲವರಿಗೆ ಲಕ್ಷ್ಮಿಯ ಕೃಪೆ ಇದ್ದರೆ , ಇನ್ನೂ ಕೆಲವರಿಗೆ ಶಾರಧೆಯ ಕೃಪೆ ಇರುತ್ತದೆ . ಕೆಲವರಿಗೆ ಬೇರೆ ಬೇರೆ ರೀತಿಯ ಕೃಪೆ ಇರಬಹುದು ಆದರೆ ನಮಗೆ ಸರಿಯಾದ ಜೀವನ ಸಿಕ್ಕಿದೆ ನಾವು ಸರಿಯಾದ ದಾರಿಯಲ್ಲಿ ಗುರಿ ಮುಟ್ಟ ಬೇಕು . ಮೊದಲು ಬಂಟರ ಸಂಘಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ತಮ್ಮ ಸಮಾಜದ ಸದಸ್ಯರನ್ನು ತಮ್ಮ ಮನೆಯ ಸದಸ್ಯರೆಂದು ಭಾವಿಸಿ , ಅವರ ಅಗತ್ಯತೆಗಳನ್ನು ಪೂರ್ಣಗೊಳಿಸುವ ನಿಮಗೆಲ್ಲರಿಗೂ ಅಭಿನಂದನೆಗಳು. ಇಂದು ಬಂಟರ ಸಂಘದಿಂದ ಸಹಾಯ ಪಡೆಯುವ ನೀವೆಲ್ಲರೂ ಮುಂದಿನ ದಿನಗಳಲ್ಲಿ ನೀವು ಸಹ ನಿಮ್ಮ ಸಮಾಜಕ್ಕೆ ಸಹಾಯ ಮಾಡುವಂತಾಗಲಿ ಎಂದು ಹಾರೈಸುತ್ತೇನೆ. ಪ್ರತಿಯೊಂದು ಸಮಾಜ ಅವರವರ ಸಮಾಜದ ಸದಸ್ಯರನ್ನು ಅಭಿವೃದ್ಧಿ ಪಡಿಸಿದರೆ ನಮ್ಮ ದೇಶ ಇನ್ನಷ್ಟು ಅಭಿವೃದ್ಧಿ ಪಡೆದ ದೇಶ ಆಗಬಹುದು. ಸಮಾಜ ಇದ್ದರೆ ನಮ್ಮ ಅಸ್ತಿತ್ವ ಇದೆ . ಸಮಾಜ ಇಲ್ಲದಿದ್ದರೆ ನಮ್ಮ ಅಸ್ತಿತ್ವ ಇಲ್ಲ . ನಾವು ಜಾಗೃತರಾಗದಿದ್ದರೆ ಮುಂದಿನ ಜನಾಂಗ ಇಂಟರ್ನೆಟ್ , ಮೊಬೈಲ್ನಲ್ಲಿ ಇದ್ದು , ನಮ್ಮ ಪರಂಪರೆ , ಸಂಸ್ಕೃತಿ ತಿಳಿಯದೆ ಹೋಗ ಬಹುದು ಹಾಗಾಗಿ ನಮ್ಮ ಸಮಾಜವನ್ನು ಸದೃಢಗೊಳಿಸಬೇಕು . ಧಾರ್ಮಿಕ , ಸಾಮಾಜಿಕ , ಶಿಕ್ಷಣ ಕ್ಷೇತ್ರಗಳಲ್ಲಿ ಬಂಟ ಸಮಾಜ ಬಹಳ ಮುಂದೆ ಇದೆ , ಸಹಾಯ ನೀಡುವುದರಲ್ಲೂ ಬಂಟ ಸಮಾಜ ಮುಂದೆ ಇದೆ ಎಂದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಬಂಟರ ಸಂಘ ಮುಂಬಯಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಡಾ. ದಿವಾಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮ ಬಹಳ ಅರ್ಥಪೂರ್ಣ ಕಾರ್ಯಕ್ರಮ. ಬಂಟರ ಸಂಘದಲ್ಲಿ ಸುಧಾಕರ ಹೆಗ್ಡೆಯವರ ಅಧ್ಯಕ್ಷಾ ವಧಿಯಲಿ ನಲವತ್ತು ಲಕ್ಷ ಮೊತ್ತದಲ್ಲಿ ಆರಂಭವಾದ ಈ ಕಾರ್ಯಕ್ರಮ ಇಂದು ರೂ. 1.80 ಕೋಟಿ ನೀಡುತ್ತಿದ್ದೇವೆ ಎಂದು ಹೇಳಲು ಬಹಳ ಸಂತೋಷವಾಗುತ್ತದೆ. ಹಾಗೆಯೇ ಒಂದು ರೀತಿಯಲ್ಲಿ ಆರ್ಥಿಕವಾಗಿ ನಮ್ಮ ಸಮಾಜದ ಜನ ಇಷ್ಟು ಹಿಂದೆ ಇದ್ದಾರೆ ಎನ್ನುವುದು ಬಹಳ ಬೇಸರದ ಸಂಗತಿ. ನಮ್ಮ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರ ಉತ್ತಮ ಯೋಚನೆ ಮತ್ತು ಅದನ್ನು ಈಡೇರಿಸುವ ಯೋಜನೆ ಇದೆ . ಆರ್ಥಿಕ ಧನ ಸಹಾಯ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಬೇಕು ಹಾಗೂ ವಿದ್ಯಾಭ್ಯಾಸಕ್ಕೆ ಹೆಚ್ಚು ಹಣ ನೀಡಬೇಕೆಂಬ ಉದ್ದೇಶ ಇದೆ . ಇದರ ಹಿಂದೆ ಸಂಘದ ಪದಾಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ನಮ್ಮ ಸಮಾಜದ ಯಾವುದೇ ಮಕ್ಕಳು ವಿದ್ಯಾಭ್ಯಾಸ ದಿಂದ ವಂಚಿತರಾಗಬಾರದು ಎಂಬುದೇ ನಮ್ಮ ಧ್ಯೇಯ . ಬಡವನಾಗಿ ಹುಟ್ಟಿದ್ದರೆ ತಪ್ಪಿಲ್ಲ , ಬಡವನಾಗಿ ಸಾಯುವುದು ತಪ್ಪು. ಸಂಪತ್ತು ಬರುತ್ತದೆ , ಹೋಗುತ್ತದೆ . ನಮ್ಮಲ್ಲಿ ಶಾಶ್ವತವಾಗಿ ಉಳಿಯುವುದು ನಾವು ಕಲಿತ ವಿದ್ಯೆ ಮಾತ್ರ . ಇದಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಗಮನ ನೀಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡದೆ , ಉತ್ತಮ ವಿದ್ಯೆ ಕಲಿತು ಈ ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ. ದಾನಿಗಳ ನೆರವಿನಿಂದ ಇಂತಹ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲು ಸಾಧ್ಯವಾಗಿದೆ ಎಂದರು.
ಟಾಟಾ ಐಎಸ್ಎಸ್ – ಸಂಜೀವಿನಿ ಯೋಜನೆಗೆ ಚಾಲನೆ ನೀಡಿದ ಮೀರಾ – ಭಾಯಂದರ್ ಪರಿಸರದ ಪ್ರಸಿದ್ಧ ವೈದ್ಯ , ಸಾಯಿ ಬಾಬಾ ಆಸ್ಪತ್ರೆಯ ಸಿಎಂಡಿ ಡಾ. ಎನ್. ಎ . ಹೆಗ್ಡೆ ಮಾತನಾಡಿ ಸ್ಕಾಲರ್ಶಿಪ್ ಪಡೆದ ಮಕ್ಕಳಲ್ಲಿ ಒಂದು ಛಲ ಇರುತ್ತದೆ.ನಾವು ಸಮಾಜದಲ್ಲಿ ಮುಂದೆ ಬರಬೇಕು , ಒಬ್ಬ ಉತ್ತಮ ವ್ಯಕ್ತಿಯಾಗಬೇಕೆಂದು. ಅನ್ನ ನೀಡಿದರೆ ಒಂದು ಹೊತ್ತಿನ ಹೊಟ್ಟೆ ತುಂಬ ಬಹುದು . ಅದೇ ವಿದ್ಯೆ ನೀಡಿದರೆ ಬದುಕು ಕಟ್ಟಿಕೊಳ್ಳ ಬಹುದು, ಹಾಗಾಗಿ ವಿದ್ಯೆಯೇ ಬಹಳ ದೊಡ್ಡ ಆಸ್ತಿ. ಹೆತ್ತವರ ಒತ್ತಾಯಕ್ಕೆ ಓದುವುದಲ್ಲ , ನಾವು ಆಸಕ್ತಿ ವಹಿಸಿ ಕಲಿಯಬೇಕು , ಆಗ ಮಾತ್ರ ಶಿಕ್ಷಣದ ಮೌಲ್ಯ ತಿಳಿಯುವುದು . ಬಂಟರ ಸಂಘ ಸಮಾಜದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುತ್ತಿದೆ. ಇದರ ಪ್ರಯೋಜನ ಪಡೆದ ವಿದ್ಯಾರ್ಥಿಗಳು ಮುಂದೆ ಕಲಿತು , ಉತ್ತಮ ಸ್ಥಾನ ಪಡೆದು ಬಂಟರ ಮುಂದಿನ ಜನಾಂಗದ ಮಕ್ಕಳಿಗೆ ಸಹಾಯ ಮಾಡುವಂತಾಗಲಿ . ಕೇವಲ ಹಣ ಸಂಪಾದನೆ ಮಾಡುವ ಉದ್ದೇಶ ಇರಬಾರದು. ಹಣದ ಜೊತೆಗೆ ಸಮಾಜ ಸೇವೆ ಮಾಡಿ ಪುಣ್ಯ ಪಡೆದುಕೊಳ್ಳಬೇಕು . ಬಂಟರ ಸಂಘ ನೀಡುವ ಆರ್ಥಿಕ ಧನ ಸಹಾಯವನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿ . ಶಿಕ್ಷಣಕ್ಕೆ ನನ್ನ ಸಹಾಯ ಸದಾ ಇದೆ ಎಂದರು.
ಮುಖ್ಯ ಅತಿಥಿಗಳಾಗಿ ಶುಭಾ ರಂಭ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಅರವಿಂದ ಎ. ಶೆಟ್ಟಿ , ವಿಶಾಲ್ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಇದರ ಎಂಡಿ ಭಾಸ್ಕರ್ ಶೆಟ್ಟಿ ಕಾಶಿ ಮೀರಾ , ದೀಪಕ್ ಆಸ್ಪತ್ರೆಯ ಸಿಎಂಡಿ ಡಾ. ಭಾಸ್ಕರ್ ಶೆಟ್ಟಿ , ಮಾನವ ಸೇವಾ ಸಂಘ ಅಧ್ಯಕ್ಷ ಡಾ. ಹರೀಶ್ ಶೆಟ್ಟಿಯವರು ಉಪಸ್ಥಿತರಿದ್ದು ಶುಭ ಹಾರೈಸಿದರು.
. ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದ ಗುತ್ತು ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯದರ್ಶಿ ಸುಶ್ಮಿತಾ ಶೆಟ್ಟಿ , ಕೋಶಾಧಿಕಾರಿ ಅಮಿತಾ ಬಿ. ಶೆಟ್ಟಿ ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು. ಈ ಸಂದರ್ಭದಲ್ಲಿ ಮೀರಾ ರೋಡ್ ಶಾಸಕ ನರೇಂದ್ರ ಮೆಹ್ತಾ ಹಾಗೂ ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದ ಗುತ್ತು ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ , ಶಾಸಕ ನರೇಂದ್ರ ಎಲ್. ಮೆಹ್ತಾ, ಶುಭಾ ರಂಭ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್
ನಿರ್ದೇಶಕರಾದ ಅರವಿಂದ್ ಶೆಟ್ಟಿ,
ವಿಶಾಲ್ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಇದರ ಎಂಡಿ ಭಾಸ್ಕರ್ ಶೆಟ್ಟಿ ಕಾಶಿಮೀರ, ಸಾಯಿ ಕೃಪಾ ಆಸ್ಪತ್ರೆ ಮತ್ತು ಪಾಲಿಕ್ಲಿನಿಕ್ ಭಾಯಂದರ್ ಸಿಎಂಡಿ .ಡಾ. ಎನ್. ಎ. ಹೆಗ್ಡೆ, ದೀಪಕ್ ಆಸ್ಪತ್ರೆಯ ಸಿಎಂಡಿ ಡಾ. ಭಾಸ್ಕರ್ ಶೆಟ್ಟಿ, ಡಾ. ಹರೀಶ್ ಶೆಟ್ಟಿ , ಬಂಟರ ಸಂಘದ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿ , ಗೌರವ ಪ್ರದಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ ,ಗೌರವ ಕೋಶಾಧಿಕಾರಿ

ಸಿಎ ರಮೇಶ್ ಬಿ. ಶೆಟ್ಟಿ ,ಜೊತೆ ಕಾರ್ಯದರ್ಶಿ ಗಿರೀಶ್ ಆರ್. ಶೆಟ್ಟಿ ತೆಳ್ಳಾರ್ , ಜೊತೆ ಕೋಶಾಧಿಕಾರಿ ಶಶಿಧರ್ ಕೆ. ಶೆಟ್ಟಿ ಇನ್ನಂಜೆ , ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ಡಾ. ದಿವಾಕರ ಶೆಟ್ಟಿ , ಉಪಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ , ಕಾರ್ಯದರ್ಶಿ. ಎಫ್. ಉತ್ತಮ್ ಶೆಟ್ಟಿ , ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ , ಪ್ರಾದೇಶಿಕ ಸಮಿತಿಯ ಸಂಚಾಲಕ ಶಿವ ಪ್ರಸಾದ್ ಶೆಟ್ಟಿ ಮಾಣಿಗುತ್ತು ,
ಉಪ ಕಾರ್ಯಧ್ಯಕ್ಷ : ಅರವಿಂದ ಎ. ಶೆಟ್ಟಿ ,ಕಾರ್ಯದರ್ಶಿ: ಬಾಬಾ ಪ್ರಸಾದ್ ಅರಸ ಕುತ್ಯಾರು , ಕೋಶಾಧಿಕಾರಿ: ಶಂಕರ್ ಶೆಟ್ಟಿ ಬೋಳ ,ಜೊತೆ ಕಾರ್ಯದರ್ಶಿ: ರಮೇಶ್ ಶೆಟ್ಟಿ ಸಿದ್ದಕಟ್ಟೆ , ಜೊತೆ ಕೋಶಾಧಿಕಾರಿ: ಜಗದೀಶ್ ಶೆಟ್ಟಿ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರು, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಶ್ರೀಮತಿ ವಸಂತಿ ಎಸ್. ಶೆಟ್ಟಿ , ಯುವ ವಿಭಾಗ ಕಾರ್ಯಧ್ಯಕ್ಷ ವರ್ಷಭ್ ಶೆಟ್ಟಿ , ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದ ಗುತ್ತು ,ಉಪ ಕಾರ್ಯಧ್ಯಕ್ಷ ದಾಮೋದರ ಶೆಟ್ಟಿ, ಕಾರ್ಯದರ್ಶಿ ಸುಶ್ಮಿತಾ ಶೆಟ್ಟಿ , ಕೋಶಾಧಿಕಾರಿ ಅಮಿತ ಬಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿ ಪ್ರಾರ್ಥನೆ ಗೈದರು, ಕಾರ್ಯಕ್ರಮವನ್ನು ಚಿತ್ರನಟ , ರಂಗ ನಿರ್ದೇಶಕ ಬಾಬಾ ಪ್ರಸಾದ್ ಅರಸ ಕುತ್ಯಾರು ನಿರೂಪಿಸಿ ವಂದಿಸಿದರು . ಕು. ಕುಶಿ ಶೆಟ್ಟಿ , ಅರೋಹಿ ಶೆಟ್ಟಿ , ಚೈತ್ರ ಶೆಟ್ಟಿ, ಅಂಕಿತ ಬಳಗದವರಿಂದ ನೃತ್ಯ ಕಾರ್ಯಕ್ರಮ ಹಾಗೂ ವೇಣು ಗೋಪಾಲ್ ಶೆಟ್ಟಿ , ಜಗದೀಶ್ ಶೆಟ್ಟಿ ಪಂಜಿನಡ್ಕ , ಕು. ಸುಧೀ ಪ್ತ ಶೆಟ್ಟಿಯವರಿಂದ ರಸಮಂಜರಿ ಕಾರ್ಯಕ್ರಮ ನೆರವೇರಿತು. ಬಂಟರ ಸಂಘ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು , ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
–++++——————–+

ಟಾಟಾ ಐಐಎಸ್ – ಸಂಜೀವಿನಿ* *ಬಂಟರಿಗೆ ಸಹಕಾರಿಯಾಗಿದೆ . – ಡಾ. ಆರ್.ಕೆ. ಶೆಟ್ಟಿ
ಬಂಟರ ಸಂಘದಲ್ಲಿ ಎರಡನೆ ಯ ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದೇನೆ . ನಾವು ಗಮನಿಸಿದಂತೆ ಪ್ರತಿಬಾರಿ ನಮ್ಮ ಸಮಾಜದ ಬಂಧುಗಳಿಂದ ಏನಾದರೂ ಸಹಾಯಕ್ಕೆ ಮನವಿ ಬರುತ್ತದೆ. ಅದರಲ್ಲಿ ಮೂರು ವಿಷಯ ಬಹಳ ಮುಖ್ಯವಾಗಿದೆ . ವಿದ್ಯಾಭ್ಯಾಸಕ್ಕೆ ಶಾಲೆಯ ಶುಲ್ಕ ಕಟ್ಟಲು , ಆಸ್ಪತ್ರೆಯ ಶುಲ್ಕ ಪಾವತಿ ಮಾಡಲು ಹಣ ಇಲ್ಲ , ಮೂರನೆಯದಾಗಿ ನಮ್ಮ ಯುವಕರ ಪದವಿ ಪಡೆದಾಗಿದೆ , ಅವರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ . ಬಂಟರ ಸಂಘ ಸಂಪೂರ್ಣ ಸಹಾಯ ಸಹಕಾರ ನೀಡಿದರರೂ , ಕೆಲವೊಮ್ಮೆ ಸಾಕಾಗುವುದಿಲ್ಲ . ಹಾಗಾಗಿ ನಾನು ಹಿಂದಿನ ವರ್ಷ ಸಂಜೀವಿನಿ ಸಂಸ್ಥೆಯನ್ನು ಆರಂಭಿಸಿ ಆರೋಗ್ಯ, ವಿದ್ಯಾಭ್ಯಾಸಕ್ಕೆ ಎಷ್ಟು ಸಾಧ್ಯವೋ ಅಷ್ಟು ಸಂಜೀವಿನಿ ಸಂಸ್ಥೆಯ ಮೂಲಕ ಸಹಾಯ ನೀಡಿದ್ದೇವೆ . ನಮ್ಮವರು ವಿದ್ಯಾವಂತರಾದ ನಂತರವೂ ಯಾಕೆ ಕೆಲಸ ಸಿಗುವುದಿಲ್ಲ ? ಯಾಕೆಂದರೆ ಅವರಿಗೆ ಕೆಲಸ ಮಾಡಲು ಸೂಕ್ತ ಅನುಭವ ಇಲ್ಲ , ಇಂದು ಎಲ್ಲಿಯೂ ಕೆಲಸ ಕೇಳಿದರು ಮೊದಲು ಕೇಳುವುದು ಅನುಭವ ಇದೆಯೇ ಎಂದು. ಹಾಗಾಗಿ ಅವರಿಗೆ ಕೆಲಸ ಸಿಗುವುದಿಲ್ಲ. ಇದರ ಬಗ್ಗೆ ಗಮನ ಹರಿಸಿದ ಭಾರತ ಸರ್ಕಾರ ಕೆಲಸದ ಬಗ್ಗೆ ಮಾಹಿತಿ ಪಡೆಯಲು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ‘ಸ್ಕಿಲ್ ಇಂಡಿಯಾ’ ಎನ್ನುವ ಯೋಜನೆ ರಾಷ್ಟ್ರ ಮಟ್ಟದಲ್ಲಿ ಚಾಲನೆ ನೀಡಿ , ಪ್ರತಿಯೊಂದು ರಾಜ್ಯಕ್ಕೆ ಈ ಯೋಜನೆ ನೀಡಿದ್ದಾರೆ. ಮಹಾರಾಷ್ಟ್ರ ರಾಜ್ಯ ಸರ್ಕಾರ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ ಡೆವಲಪ್ಮೆಂಟ್ ಯೋಜನೆಯನ್ನು ಟಾಟಾ ಟ್ರಸ್ಟ್ ಜೊತೆ ಸೇರಿ ನಡೆಸುತ್ತಿದೆ. ಹನ್ನೆರಡನೆಯ ತರಗತಿ ಪಾಸಾ ದ , ಪದವಿ ಪಡೆದ ವಿದ್ಯಾರ್ಥಿಗಳಿಗೆ, ಯಾವ ವಿಷಯದಲ್ಲಿ ಪದವಿ ಪಡೆದಿದ್ದಾರೆ , ಯಾವ ವಿಷಯದಲ್ಲಿ ಆಸಕ್ತಿ ಇದೆ , ಆ ವಿಷಯದಲ್ಲಿ ತರಬೇತಿ ನೀಡಿ , ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುತ್ತಾರೆ. ಇದು ನಮ್ಮ ಸಮಾಜದವರಿಗೆ ಪ್ರಯೋಜನವಾಗಲೆಂದು ನಾನು ಟಾಟಾ ಟ್ರಸ್ಟ್ ಸಂಸ್ಥೆಯಲ್ಲಿ ವಿನಂತಿಸಿದೆ . ಅವರು ನಮ್ಮ ಸಂಜೀವಿನಿ ಟ್ರಸ್ಟ್ ನ ಕಾರ್ಯಚಟುವಟಿಕೆಗಳನ್ನು ಗಮನಿಸಿ , ಇಂದು ಟಾಟಾ ಐಐಎಸ್ – ಸಂಜೀವಿನಿ ಯೋಜನೆ ನಮ್ಮ ಎಲ್ಲಾ ಬಂಟರಿಗೆ ಸಹಕಾರಿಯಾಗಲಿದೆ ಎಂದು ಹೇಳಲು ಸಂತೋಷವಾಗುತ್ತದೆ. ತರಬೇತಿ ಶುಲ್ಕ ರೂಪಾಯಿ ಹನ್ನೆರಡು ಸಾವಿರದಿಂದ ರೂ. ಐವತ್ತು ಸಾವಿರದಷ್ಟು ನಿಗದಿ ಮಾಡಿದ್ದಾರೆ . ಈ ಶುಲ್ಕವನ್ನು ಸಂಜೀವಿನಿ ಟ್ರಸ್ಟ್ ನೀಡಲಿದೆ. ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಜೊತೆಗೆ ಭಾರತದ ಪ್ರಸಿದ್ಧ ಕಂಪೆನಿಗಳಲ್ಲಿ ಉದ್ಯೋಗಾವಕಾಶ ಇದೆ. ಯಾರಿಗೆ ಆಸಕ್ತಿ ಇದೆ ಅವರು ನಿಮ್ಮ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರನ್ನು ಸಂಪರ್ಕಿಸಿ ಎಂದು ಬಂಟರ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ ತಿಳಿಸಿದರು.
————-
ಮೀರಾ – ಭಾಯಂದರ್ ಪರಿಸರದ ಸಮಾಜ ಬಾಂಧವರು ವೈದ್ಯಕೀಯ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲ ಉದ್ದೇಶ:ಗುತ್ತಿನಾರ್ ರವೀಂದ್ರ ಶೆಟ್ಟಿ
ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು ಬಳಿಕ ಮಾತನಾಡಿ ಈ ಪ್ರದೇಶದಲ್ಲಿ ಮಧ್ಯಮ ವರ್ಗದ ಬಂಟ ಸಮಾಜದ ಬಂಧುಗಳು ವಾಸ್ತವಿರುವುದು. ಅವರಿಗೆ ವೈದ್ಯಕೀಯ ಮತ್ತು ಶಿಕ್ಷಣದ. ಸಹಾಯ ಹಸ್ತ ಅಗತ್ಯ ಬೇಕಾಗಿರುವುದು. ಬಂಟರ ಸಂಘ ಮತ್ತು ಪರಿಸರದ ಸಮಾಜದ ದಾನಿಗಳು ಹೆಚ್ಚಿನ ಸಹಕಾರವನ್ನು ನೀಡುತ್ತಿದ್ದಾರೆ ಅದರಿಂದ ಸ್ವಲ್ಪ ಮಟ್ಟಿಗೆ ಅವರಿಗೆ ಸಾಯವಾಗುತ್ತದೆ.ಮೀರಾ – ಭಾಯಂದರ್ ನ ಬಡತದಲ್ಲಿರುವ ಬಂಟ ಸಮಾಜದ ಬಂಧುಗಳು
ವೈದ್ಯಕೀಯ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲ ಉದ್ದೇಶವೇ ನಮ್ಮದು ಎಂದು ನುಡಿದರು.
——-
ಸಮಾಜದ ಯಾರಿಗೂ ಕಷ್ಟ ಬಂದರೂ ಅದು ನಮ್ಮ ಕಷ್ಟವೆಂದು ನಾಯಕರು ಯೋಚಿಸಿದರೆ ಸಮಾಜದಲ್ಲಿ ಯಾರು ಕಷ್ಟದಲ್ಲಿ ಇರಲು ಸಾಧ್ಯವಿಲ್ಲ.:ಐಕಳ ಹರೀಶ್ ಶೆಟ್ಟಿ
ದೀಪಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಬಂಟರ ಸಂಘದ ಇತಿಹಾಸದಲ್ಲಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮ ಒಂದು ಬಹಳ ಉತ್ತಮ ಕಾರ್ಯಕ್ರಮ . ವರ್ಷದಿಂದ ವರ್ಷಕ್ಕೆ ನಮ್ಮ ಸಮಾಜದ ಮಕ್ಕಳಿಗೆ ಸಹಾಯ ನೀಡುವುದರಿಂದ , ಆ ಮಕ್ಕಳು ಉತ್ತಮ ಅಂಕಗಳನ್ನು ಪಡೆದು ಉನ್ನತ ಸ್ಥಾನದಲ್ಲಿ ಇದ್ದಾರೆ . ಎಲ್ಲಿಯೂ ಹೋದರು ನಮ್ಮ ಬಂಟರ ಮಕ್ಕಳು ಎಂಬ ಅಭಿಮಾನ ಬರುತ್ತದೆ. ಡಾ. ಆರ್.ಕೆ. ಶೆಟ್ಟಿಯವರ ಸಹಕಾರದಿಂದ ನಾಲ್ಕು ಬಂಟ ಕುಟುಂಬಕ್ಕೆ ಆರ್ಥಿಕ ಧನ ಸಹಾಯ ನೀಡಿದ್ದೇವೆ. ಯಾರಿಗೂ ಕಷ್ಟ ಬಂದರೂ ,ಅದು ನಮ್ಮ ಕಷ್ಟವೆಂದು ನಾಯಕರು ಯೋಚಿಸಿದರೆ , ಈ ಸಮಾಜದಲ್ಲಿ ಯಾರು ಕಷ್ಟದಲ್ಲಿ ಇರಲು ಸಾಧ್ಯವಿಲ್ಲ. ನಮ್ಮ ದಾನಿಗಳಿಂದಾಗಿ ಇಂತಹ ಕಾರ್ಯಕ್ರಮ ಮಾಡಲು ಸಾಧ್ಯವಾಗುತ್ತಿದೆ ಎಂದರು .
—–
B. Dinesh Kulal
Mob.: 9821868674




