
ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ನಡೆದ 11ನೇ ವರ್ಷದ ಶರನ್ನವರಾತ್ರಿ ಮಹೋತ್ಸವವು ಶ್ರದ್ಧೆ ಭಕ್ತಿಯಿಂದ ಸಂಪನ್ನಗೊಂಡಿತು. ಯಕ್ಷಕಲಾ ಸಂಸ್ಥೆ ಮತ್ತು ಶ್ರೀ ಜಗದಂಬಾ ಚಾರಿಟೇಬಲ್ ಟ್ರಸ್ಟ್ (ರಿ.) ಅವರ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ಈ ಮಹೋತ್ಸವವು ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯೊಂದಿಗೆ ಭಕ್ತರ ಮನ ಸೆಳೆಯಿತು.






ಪ್ರತಿದಿನ ಪಂಚಾಮೃತಾಭಿಷೇಕ, ಅಲಂಕಾರ ಸೇವೆ, ಹೂವಿನ ಪೂಜೆ, ದೀಪಾರಾಧನೆ, ಕುಂಕುಮಾರ್ಚನೆ, ಕರ್ಪೂರಾರತಿ, ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಿತು. ಆಮಂತ್ರಿತ ಭಜನಾ ಮಂಡಳಿಗಳಿಂದ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಭಜನಾಮೃತ ಸೇವೆ ನೆರವೇರಿತು. ದುರ್ಗಾ ನಮಸ್ಕಾರ ಪೂಜೆ ಪ್ರತಿದಿನ ಸಂಜೆ ನಡೆಯಿತು.





ಮಹೋತ್ಸವದ ಅಂಗವಾಗಿ ಸೆ. 22ರಂದು ಮಹಾಗಣಪತಿ ಹೋಮ ಹಾಗೂ ತೋರಣ ಮುಹೂರ್ತ, ಸೆ. 23ರಂದು ರಂಗಪೂಜೆ, ಸೆ. 24ರಂದು ಮಹಿಳಾ ವಿಭಾಗದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸೆ. 25ರಂದು ಮಹಾಪೂಜೆ, ಸೆ. 26ರಂದು ರಂಗಪೂಜೆ ಹಾಗೂ ಧನಂಜಯ ಮೂಳೂರ್ ನಿರ್ದೇಶನದಲ್ಲಿ ಗಣೇಶ್ ಎರ್ಮಾಳು ಅವರ ಕಥೆಯ ಆಧಾರದ ಮೇಲೆ ‘ಬುರ್ದುಪೊವೋಚಿ’ ತುಳು ಹಾಸ್ಯನಾಟಕ ಪ್ರದರ್ಶನ ನಡೆಯಿತು. ಸೆ. 27ರಂದು ಯುವ ವಿಭಾಗದ ಸಾಂಸ್ಕೃತಿಕ ಕಾರ್ಯಕ್ರಮ, ಸೆ. 28ರಂದು ಭ್ರಾಮರಿ ಕಲಾ ತಂಡದ ‘ಭಕ್ತಿ ರಸಮಂಜರಿ’ ಹಾಗೂ ಅಜೆಕಾರು ಕಲಾಭಿಮಾನಿ ಬಳಗದಿಂದ ‘ಯಕ್ಷಗಾನ ಬಯಲಾಟ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ’ ಕಾರ್ಯಕ್ರಮಗಳನ್ನು ಭಕ್ತರು ಉತ್ಸಾಹದಿಂದ ವೀಕ್ಷಿಸಿದರು. ಆ ದಿನ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಶೆಟ್ಟಿ ಅವರನ್ನು ಹಾಗೋ ಯಕ್ಷಗಾನದ ಪ್ರಾಯೋಜಕರನ್ನು ಗೌರವಿಸಲಾಯಿತು, ಮತ್ತು ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಯಿತು. ಸೆ. 30ರಂದು ಮಹಾಪೂಜೆ, ಅ. 1ರಂದು ದುರ್ಗಾ ಹೋಮ (ಸಂಪೂರ್ಣ ಆಹುತಿ) ನೆರವೇರಿತು.

ಈ ಸಂದರ್ಭದಲ್ಲಿ ದೇವಾಡಿಗ ಸಂಘ ಡೊಂಬಿವಲಿ ವಲಯ, ಬಂಟ್ಸ್ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ,
ಸಾಯಿನಾಥ್ ಮಿತ್ರ ಮಂಡಳಿ, ರಜಕ ಸಂಘ ಡೊಂಬಿವಲಿ ವಿಭಾಗ ಹಸಿರು ಹೊರ ಕಾಣಿಕೆಯನ್ನು ಮಂದಿರಕ್ಕೆ ಸಮರ್ಪಿಸಿದರು.

ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರಧಾನ ಅರ್ಚಕರಾದ ಶ್ರೀ ಸುಬ್ರಮಣ್ಯ ಭಟ್ (ಮೀರಾ ರೋಡ್) ಮತ್ತು ಶ್ರೀ ಜಗದೀಶ ಭಟ್ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು.

ಮಹೋತ್ಸವ ಯಶಸ್ವಿಗೊಳಿಸಲು ಅಧ್ಯಕ್ಷರಾದ ಶ್ರೀ ದಿವಾಕರ್ ಜಿ. ರೈ, ಉಪಾಧ್ಯಕ್ಷರುಗಳಾದ ಶ್ರೀ ರವೀಂದ್ರ ವೈ. ಶೆಟ್ಟಿ, ಶ್ರೀ ದಿನೇಶ್ ಜಿ. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಶ್ ಸಿ. ಕೋಟ್ಯಾನ್, ಗೌರವ ಕೋಶಾಧಿಕಾರಿ ಶ್ರೀ ಸಂತೋಷ್ ಎಂ. ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀ ಸಚಿನ್ ಪೂಜಾರಿ, ಜೊತೆ ಕೋಶಾಧಿಕಾರಿ ಶ್ರೀ ಹರೀಶ್ ಕೋಟ್ಯಾನ್, ಸಾಂಸ್ಕೃತಿಕ ಸಮಿತಿಯ ವಿಜಯ್ ಶೆಟ್ಟಿ ಸಜೀಪ ಗುತ್ತು, ಸಲಹೆಗಾರರು, ಪೂಜಾ ವಿಭಾಗ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಎಲ್ಲಾ ಸದಸ್ಯರು ಶ್ರಮವಹಿಸಿದ್ದರು.

ಭಕ್ತಾದಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಶ್ರೀ ಜಗದಂಬಾ ಮಂದಿರದ ಈ ವರ್ಷದ ಶರನ್ನವರಾತ್ರಿ ಮಹೋತ್ಸವವು ಧಾರ್ಮಿಕ ಶ್ರದ್ಧೆ ಮತ್ತು ಸಾಂಸ್ಕೃತಿಕ ಸೊಬಗಿನಿಂದ ಸಮಾರೋಪಗೊಂಡಿತು.




