





ಮಸ್ಕತ್ (ಓಮಾನ್): ಕರ್ನಾಟಕ ಜಾನಪದ ಪರಿಷತ್ತು ಮಸ್ಕತ್ (ಓಮಾನ್) ಘಟಕವನ್ನು ಶಿವಾನಂದ ಕೋಟ್ಯಾನ್ ಕಟಪಾಡಿ ಅವರ ಅಧ್ಯಕ್ಷತೆಯಲ್ಲಿ ಮಸ್ಕತ್ನ ಸ್ಟಾರ್ ಆಫ್ ಕೊಚ್ಚಿನ್ ಸಭಾಂಗಣದಲ್ಲಿ ಅದ್ದೂರಿಯಾಗಿ ಉದ್ಘಾಟಿಸಲಾಯಿತು.
ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಇದರ ಅಧ್ಯಕ್ಷರಾದ ಡಾ. ಹಿ. ಚಿ. ಬೋರಲಿಂಗಯ್ಯ ಅವರು ಘಟಕಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಓಮಾನ್ ದೇಶದ ಗಣ್ಯರು, ಕರ್ನಾಟಕ ಗಡಿ ಪ್ರಾಧಿಕಾರದ ಸದಸ್ಯರಾದ ಎ. ಆರ್. ಸುಬ್ಬಯ್ಯ ಕಟ್ಟೆ, ಮತ್ತು ಕಾಸರಗೋಡು ಗಡಿನಾಡು ಪ್ರಾಧಿಕಾರದ ಸದಸ್ಯರಾದ ಝೆಡ್. ಎ. ಕೆಯ್ಯರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಸ್ಕತ್ನ ಜಾನಪದ ಆಸಕ್ತರು, ಸ್ಥಳೀಯ ಕಲಾವಿದರು, ಹಾಗೂ ಗಾಯಕರಿಂದ ಹಲವು ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.



ಓಮಾನ್ ಕನ್ನಡ ಸಂಘದ ಅಧ್ಯಕ್ಷರಾದ ಮಂಜುನಾಥ ಸಂಗಟ್ಟಿ, ಎಸ್. ಕೆ. ಪೂಜಾರಿ, ಶಶಿಧರ ಶೆಟ್ಟಿ ಮಲ್ಲಾರ್ ಮತ್ತು ವಿವಿಧ ಸಂಘ ಹಾಗೂ ಕೂಟಗಳ ಪ್ರಮುಖರು ಹಾಗೂ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಬೋರಲಿಂಗಯ್ಯ ಅವರು, ಕರ್ನಾಟಕದ ವೈವಿಧ್ಯಮಯ ಜಾನಪದ ಸಂಸ್ಕೃತಿಯ ಮಹತ್ವವನ್ನು ವಿವರಿಸಿದರು. ಎಚ್. ಎಲ್. ನಾಗೇಗೌಡರ ನೇತೃತ್ವದಲ್ಲಿ ಸ್ಥಾಪನೆಯಾದ ಮತ್ತು ಯುನೆಸ್ಕೋ ಮಾನ್ಯತೆ ಪಡೆದಿರುವ ಜಾನಪದ ಲೋಕದ ಕುರಿತು ಮಾಹಿತಿಯನ್ನು ಹಂಚಿಕೊಂಡರು.




ಸ್ಥಳೀಯ ಅನಿವಾಸಿಗಳು ತಮ್ಮ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಘಟಕವನ್ನು ಸ್ಥಾಪಿಸಲಾಗಿದೆ. ನಮ್ಮ ನಾಡು-ನುಡಿಯ ಬಗ್ಗೆ ವಾರ್ಷಿಕವಾಗಿ ನಡೆಯುವ ವೈವಿಧ್ಯಮಯ ಕಾರ್ಯಕ್ರಮಗಳಿಂದ ಇಲ್ಲಿ ಘಟಕದ ಅವಶ್ಯಕತೆ ಇದೆ ಎಂದು ಮನಗಂಡು, ರಾಜ್ಯದಿಂದ ಆಗಮಿಸಿದ ಅತಿಥಿಗಳ ಸೂಚನೆ ಮತ್ತು ಮಾರ್ಗದರ್ಶನದಲ್ಲಿ ಘಟಕ ಸ್ಥಾಪಿಸಲಾಯಿತು ಎಂದು ನೂತನ ಘಟಕದ ಅಧ್ಯಕ್ಷರಾದ ಶಿವಾನಂದ ಕೋಟ್ಯಾನ್ ವಿವರಿಸಿದರು.
ಈ ಸಂದರ್ಭದಲ್ಲಿ ಮಸ್ಕತ್ನ ಸಾಮಾಜಿಕ ಕಾರ್ಯಕರ್ತರಾದ ಗಣೇಶ್ ಶೆಟ್ಟಿ ಮತ್ತು ಸತೀಶ್ ಪೂಜಾರಿ ಬರ್ಕ, ಹಾಗೂ ‘ಸ್ಕೂಲ್ ಲೀಡರ್’ ಚಲನಚಿತ್ರದ ನಿರ್ಮಾಪಕರಾದ ಕಟಪಾಡಿ ಸತ್ಯೇಂದ್ರ ಪೈ, ನಿರ್ದೇಶಕರಾದ ರಝಾಕ್ ಪೂತ್ತೂರು, ಪತ್ರಕರ್ತರಾದ ಪ್ರಕಾಶ್ ಸುವರ್ಣ, ‘ಮೂರು ಮುತ್ತು’ ಕಲಾವಿದರಾದ ನಾಗೇಶ್ ಕಾಮತ್, ಛಾಯಾಗ್ರಾಹಕರಾದ ಮೋಹನ್ ಪಡ್ರೆ, ಮತ್ತು ಯುವ ಜಾದುಗಾರರಾದ ಪ್ರಥಮ್ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಮಾಸ್ಟರ್ ಆಯುಷ್ ಮರಾಠೆ ಅವರ ಗಾಯನ ಮತ್ತು ಮಾಸ್ಟರ್ ಹರ್ಪಿಲ್ ಅಂಚನ್ ಅವರ ಜಾನಪದ ಕಥೆಯು ಮನಮೋಹಕವಾಗಿ ಮೂಡಿಬಂದವು. ಕಾರ್ಯಕ್ರಮದಲ್ಲಿ ಘಟಕದ ಕಾರ್ಯದರ್ಶಿ ಶ್ರೀಧರ್ ಶೆಟ್ಟಿ ವಂದನಾರ್ಪಣೆ ಮಾಡಿದರು. ಗೌರವ ಸಲಹೆಗಾರರಾದ ಯುವರಾಜ್ ಸಾಲ್ಯಾನ್, ಸುರೇಂದ್ರ ಅಮಿನ್, ಜೂಯಿಸನ್, ಅನಿಲ್ ಪೂತ್ತೂರು, ಬಾಲಕೃಷ್ಣ ಕೋಟ್ಯಾನ್ ಕಾಪು, ದಿನಕರ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಅಕ್ಷಯ ಮೂಡಬಿದ್ರೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.




