
ಹಳೆ ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಸದಸ್ಯರಾಗಬೇಕು: ವಾಸುದೇವ ಸಾಲಿಯಾನ್
ಮುಂಬಯಿ, ಅಕ್ಟೋಬರ್ 6: ವಿಜಯ ಕಾಲೇಜು ಮೂಲ್ಕಿ ಇದರ ಜಾಗತಿಕ ಹಳೆ ವಿದ್ಯಾರ್ಥಿ ಸಂಘ, ಮುಂಬಯಿ ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ ೨೯ರಂದು ಗೊರೆಗಾಂವ್ ಪೂರ್ವದಲ್ಲಿರುವ ನೆಸ್ಕೋದಲ್ಲಿರುವ ಬೈರೌಟ್ ಹೋಟೆಲ್‌ನಲ್ಲಿ ನಡೆಯಿತು.
ಸಭೆಯಲ್ಲಿ ಹಿಂದಿನ ವರ್ಷದ ವರದಿಯನ್ನು ಉಪಾಧ್ಯಕ್ಷರಾದ ಅಡ್ವೋಕೇಟ್ ಶೇಖರ್ ಭಂಡಾರಿ ಅವರು ಮಂಡಿಸಿ, ಅನುಮೋದನೆಯನ್ನು ಪಡೆಯಲಾಯಿತು.
ಲೆಕ್ಕಪತ್ರವನ್ನು ಖಜಾಂಚಿ ಸಿ.ಎ. ರೋಹಿತಾಕ್ಷ ದೇವಾಡಿಗ ಅವರು ವಾಚಿಸಿದರು.
ಸಂಘದ ಲೆಕ್ಕಪರಿಶೋಧಕರಾಗಿ, ೨೦೨೫-೨೬ನೇ ಸಾಲಿಗೆ ಮಹೇಶ್ ಖರಡ್ಕರ್ ಮತ್ತು ಕಂಪನಿ ಅವರನ್ನು ಪುನರಾಯ್ಕೆ ಮಾಡಲಾಯಿತು.
ಅಧ್ಯಕ್ಷರಾದ ವಾಸುದೇವ ಸಾಲಿಯಾನ್ ಅವರು ಸಂಘದ ಚಟುವಟಿಕೆಗಳ ಕುರಿತು ಸದಸ್ಯರಿಗೆ ತಮ್ಮ ಅನಿಸಿಕೆಯನ್ನು ತಿಳಿಸಿದರು. ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ಉನ್ನತ ಸ್ಥಾನಮಾನದಲ್ಲಿದ್ದು, ತಾವು ಕಲಿತ ಕಾಲೇಜನ್ನು ಸದಾ ನೆನಪಿಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ. ಕಾಲೇಜಿನ ಅಭಿವೃದ್ಧಿಗಾಗಿ ಮತ್ತು ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುವ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಹಳೆ ವಿದ್ಯಾರ್ಥಿ ಸಂಘವು ಅಪಾರ ಸಹಕಾರ ನೀಡುತ್ತಿದೆ. ಎಲ್ಲ ಹಳೆ ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಸದಸ್ಯರಾಗಿ ಋಣಮುಕ್ತರಾಗಬೇಕು ಎಂದು ಅವರು ಕರೆ ನೀಡಿದರು.
ವಂದನಾರ್ಪಣೆಯೊಂದಿಗೆ ಸಭೆಯ ಕಾರ್ಯಕ್ರಮ ಮುಕ್ತಾಯವಾಯಿತು.




