
ಸಂಘಟನೆಗೆ ಯುವಶಕ್ತಿಯ ಬಲ ಅತ್ಯಗತ್ಯ: ನೀಲೇಶ್ ಪೂಜಾರಿ ಪಲಿಮಾರ್ ಅವರ ಕರೆ
ಚಿತ್ರ ಮತ್ತು ವರದಿ: ಉಮೇಶ್ ಕೆ. ಅಂಚನ್.
ಮುಂಬಯಿ, ಅಕ್ಟೋಬರ್ 12:
ಸಂಘಟನೆಗೆ ಸದೃಢತೆ ಮತ್ತು ಹೊಸ ಆಯಾಮ ನೀಡಲು ಯುವಶಕ್ತಿಯ ಆವಶ್ಯಕತೆ ಬಹಳ ಮುಖ್ಯವಾಗಿದೆ ಎಂದು ಬಿಲ್ಲವರ ಅಸೋಸಿಯೇಶನ್‌ನ ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ನೀಲೇಶ್ ಪೂಜಾರಿ ಪಲಿಮಾರ್ ಅವರು ಕರೆ ನೀಡಿದರು. ಯುವಜನತೆಗೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ಅನೇಕ ಅವಕಾಶಗಳನ್ನು ಒದಗಿಸಿದ್ದು, ಇಂದಿನ ತರುಣ ಜನಾಂಗ ಇದರ ಸದುಪಯೋಗ ಪಡೆದು ಇತರರಿಗೂ ಮಾರ್ಗದರ್ಶನ ನೀಡಬೇಕು ಎಂದು ಅವರು ಪ್ರತಿಪಾದಿಸಿದರು.

ತಮ್ಮ ಅಮೂಲ್ಯ ಸಮಯವನ್ನು ವಿವಿಧ ಉದ್ಯಮ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಅದರ ಮೂಲಕ ಸಮಾಜ ಸೇವೆ ಮಾಡಬೇಕು. ಬಿಲ್ಲವರ ಅಸೋಸಿಯೇಶನ್ ಯುವ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಸಂಘಟನೆಯ ಬಲವರ್ಧನೆಗೆ ಮತ್ತು ಅಸೋಸಿಯೇಶನ್‌ನ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಸಾಕಾರಗೊಳಿಸಲು ಯುವ ವಿಭಾಗದ ಸಕ್ರಿಯ ಸಹಕಾರ ಅತಿ ಅಗತ್ಯ ಎಂದು ನೀಲೇಶ್ ಪೂಜಾರಿ ಪಲಿಮಾರ್ ಅವರು ಒತ್ತಿ ಹೇಳಿದರು.

ಅವರು ಅಕ್ಟೋಬರ್ 8 ರಂದು ಬಿಲ್ಲವರ ಅಸೋಸಿಯೇಶನ್‌ನ ಮೀರಾ ರೋಡ್ ಸ್ಥಳೀಯ ಕಚೇರಿಯು ಮೀರಾ ರೋಡ್ ಪೂರ್ವದಲ್ಲಿರುವ ಸುಂದರ ಸುರಭಿ ಹೋಟೆಲ್‌ನ ಸಭಾಂಗಣದಲ್ಲಿ ಆಯೋಜಿಸಿದ್ದ ಅದ್ದೂರಿ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರೇರಣಾದಾಯಕ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೀರಾ ರೋಡ್ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷರಾದ ಶ್ರೀ ಸುಭಾಶ್ಚಂದ್ರ ಕರ್ಕೇರಾ ಅವರು, ಯುವ ವಿಭಾಗದ ಸದಸ್ಯರು ಅಸೋಸಿಯೇಶನ್‌ನ ಪ್ರತಿಯೊಂದು ಕಾರ್ಯಕಲಾಪಗಳಲ್ಲಿ ತಪ್ಪದೇ ಭಾಗವಹಿಸುವ ಮೂಲಕ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸ್ಥಳೀಯ ಕಚೇರಿಯ ಉಪ ಕಾರ್ಯಾಧ್ಯಕ್ಷರಾದ ಶ್ರೀ ಎನ್.ಪಿ. ಕೋಟ್ಯಾನ್, ಕೋಶಾಧಿಕಾರಿಗಳಾದ ಶ್ರೀ ವಿಶ್ವನಾಥ್ ಮಾಬಿಯಾನ್, ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ಜಯಲಕ್ಷ್ಮೀ ಎಸ್. ಸಾಲ್ಯಾನ್ ಅವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಅಲ್ಲದೆ, ಕೇಂದ್ರ ಯುವಾಭ್ಯುದಯ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಯೋಗೇಶ್ ಪೂಜಾರಿ ಅವರು ಸಂಘಟನೆಗೆ ಅಗತ್ಯವಾದ ಕೆಲವೊಂದು ಸಲಹೆ-ಸೂಚನೆಗಳನ್ನು ನೀಡಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ಯುವ ವಿಭಾಗದ ಸದಸ್ಯರಾದ ಶ್ರೀಮತಿ ಮಿಥಾಲಿ ಪೂಜಾರಿ, ಶ್ರೀ ಹಿಮಾಂಶು ಅಮೀನ್, ಶ್ರೀ ಕಾರ್ತಿಕ್ ಪೂಜಾರಿ, ಮತ್ತು ಶ್ರೀ ನಿತೇಶ್ ಪೂಜಾರಿ ಸೇರಿದಂತೆ ಅನೇಕ ಯುವ ಮಿತ್ರರು ಈ ವೇದಿಕೆಯಲ್ಲಿ ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಬಿಲ್ಲವರ ಅಸೋಸಿಯೇಶನ್‌ನ ಜೊತೆ ಕೋಶಾಧಿಕಾರಿಗಳಾದ ಶ್ರೀ ಜಿ.ಕೆ. ಕೆಂಚನಕೆರೆ ಅವರು ಅತ್ಯಂತ ಅಚ್ಚುಕಟ್ಟಾಗಿ ನಿರೂಪಿಸಿದರು. ಸ್ಥಳೀಯ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಈ ಯಶಸ್ವಿ ಸ್ನೇಹ ಸಮ್ಮಿಲನದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು.




