
ಚಿತ್ರ: ಧನಂಜಯ ಪೂಜಾರಿ, ವರದಿ: ಇನ್ನಂಜೆ ಜಯರಾಮ್
ಮುಂಬಯಿ. ಡಿ. 6:
ಭಾಂಡೂಪ್ ಪಶ್ಚಿಮದ ಶ್ರೀ ವಿಂಪಲೇಶ್ವರ ಮಹಾದೇವ ಮಂದಿರದಲ್ಲಿ ಶ್ರೀ ಶನೀಶ್ವರ ಭಕ್ತವೃಂದ ಮಿತ್ರ ಮಂಡಳಿಯ ವತಿಯಿಂದ ಆಯೋಜಿಸಲಾಗಿದ್ದ 47ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮತ್ತು ಶ್ರೀ ಶನೀಶ್ವರ ದೇವರ ಮಹಾಪೂಜೆಯ ಸಂದರ್ಭದಲ್ಲಿ, ಯಕ್ಷಗಾನ ಕಲಾವಿದೆ ಹಾಗೂ ಅರ್ಥಧಾರಿ ನಾಗೇಶ್ ಸುವರ್ಣ ಎರ್ಮಾಳ್ ಅವರಿಗೆ ವಿಶೇಷ ಗೌರವ ಸನ್ಮಾನವನ್ನು ಅರ್ಪಿಸಲಾಯಿತು.

ಡಿ. 6ರ ಶನಿವಾರದಂದು ನಡೆದ ಮಹಾಪೂಜೆಯಲ್ಲಿ, ನಾಗೇಶ್ ಸುವರ್ಣ ಅವರು ಚಿನ್ಮಯ ದಾಸರ ‘ಶ್ರೀ ಶನಿದೇವರ ಮಹಾತ್ಮ’ ಗ್ರಂಥದ ಪದ್ಯಗಳಿಗೆ ತುಳುವಿನಲ್ಲಿ ಅರ್ಥ ಬರೆದು ಸಾರಸ್ವತ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ ಈ ಸನ್ಮಾನವನ್ನು ಮಾಡಲಾಯಿತು.

ಸನ್ಮಾನ ಸ್ವೀಕರಿಸಿದ ನಾಗೇಶ್ ಸುವರ್ಣ ಎರ್ಮಾಳ್ ಅವರು ಸಮಿತಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ, “ಈ ಗೌರವಕ್ಕೆ ನಾನು ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ಈ ಗ್ರಂಥವನ್ನು ಬರೆಯಲು ಆರಂಭಿಸಿದಾಗ, ನನ್ನ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ, ಗ್ರಂಥವು ಅರ್ಧದಲ್ಲಿಯೇ ನಿಂತುಹೋಗುತ್ತದೆಯೇ ಎಂಬ ಭಯ ಕಾಡುತ್ತಿತ್ತು. ಆದರೆ, ಆ ಶನೀಶ್ವರ ದೇವರ ಕೃಪೆಯಿಂದಾಗಿ ನನ್ನ ಆರೋಗ್ಯವು ಸುಧಾರಿಸಿತು ಮತ್ತು ಈ ಗ್ರಂಥವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು. ಈ ಗ್ರಂಥವು ನವರಾತ್ರಿ ಸಂದರ್ಭದಲ್ಲಿ ಡೊಂಬಿವಲಿಯಲ್ಲಿ ಬಿಡುಗಡೆಗೊಂಡಿದೆ. ಚಿನ್ಮಯ ದಾಸರ ‘ಶ್ರೀ ಶನಿದೇವರ ಮಹಾತ್ಮ’ ಗ್ರಂಥದ ಪದ್ಯಗಳನ್ನು ತುಳು ಭಾಷೆಯಲ್ಲಿ ಸರಳವಾಗಿ ಅರ್ಥೈಸುವ ರೀತಿಯಲ್ಲಿ ಬರೆಯಲಾಗಿದೆ. ನನ್ನ ಈ ಕಾರ್ಯವನ್ನು ಗುರುತಿಸಿ, ನನ್ನನ್ನು ಗೌರವಿಸಿದ ಈ ಭಕ್ತವೃಂದ ಮಿತ್ರ ಮಂಡಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು,” ಎಂದು ನುಡಿದರು.
ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಜರುಗಿದ ಶ್ರೀ ಶನೀಶ್ವರ ಮಹಾಪೂಜೆಯಲ್ಲಿ ನಗರದ ಹಲವು ಸಮಿತಿಗಳ ಅರ್ಥಧಾರಿಗಳು ಪಾಲ್ಗೊಂಡಿದ್ದರು. ಮಂಡಳಿಯ ಪದಾಧಿಕಾರಿಗಳು ಅವರ ಉಪಸ್ಥಿತಿಯಲ್ಲಿ ಈ ಸನ್ಮಾನ ಕಾರ್ಯಕ್ರಮ ನೆರವೇರಿತು. ಸಾವಿರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.




