32 C
Mumbai
March 7, 2026
Mumbai News Kannada
ಮುಂಬಯಿ

ಜ್ಞಾನ ವಿಕಾಸ ಮಂಡಳದ ಮೆಹ್ತಾ ಕಾಲೇಜಿನಲ್ಲಿ ಗೀತಾ ಜಯಂತಿ ಕಾರ್ಯಕ್ರಮ





ವಿದ್ಯಾರ್ಥಿಗಳು ಭಗವದ್ಗೀತೆ ಅರ್ಥೈಸಿಕೊಳ್ಳಿ – ವಿ. ಎನ್. ಹೆಗಡೆ ಕರೆ

ಐರೋಲಿ: ಜ್ಞಾನ ವಿಕಾಸ ಮಂಡಳದ ಮೆಹ್ತಾ ಮಹಾವಿದ್ಯಾಲಯ, ಐರೋಳಿಯಲ್ಲಿ ಗೀತಾ ಜಯಂತಿ ಪ್ರಯುಕ್ತ ಶುಕ್ರವಾರ (೫/೧೨/೨೦೨೫) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

​ಕಾರ್ಯಕ್ರಮಕ್ಕೆ ಇಸ್ಕಾನ್ ವತಿಯಿಂದ ಆಗಮಿಸಿದ ಉಪನ್ಯಾಸಕ ಶ್ರೀ ಅಖಂಡ ಲೀಲಾಧರ ದಾಸ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, “ಭಗವದ್ಗೀತೆ ಸನಾತನ ಧರ್ಮದ ಶ್ರೇಷ್ಠ ಗ್ರಂಥವಾಗಿದೆ. ಇದನ್ನು ಓದುವುದರಿಂದ ಜೀವನದ ಹಲವಾರು ಸಮಸ್ಯೆಗಳು ಪರಿಹಾರವಾಗುತ್ತವೆ. ಸುಮಾರು ೫೫೦೦ ವರ್ಷಗಳ ಹಿಂದೆ ಶ್ರೀಕೃಷ್ಣನು ಕುರುಕ್ಷೇತ್ರದಲ್ಲಿ ಅರ್ಜುನನ ಮಾನಸಿಕ ಕ್ಲೇಶವನ್ನು ಭಗವದ್ಗೀತೆಯನ್ನು ಬೋಧಿಸಿ ಶಮನಗೊಳಿಸಿದನು” ಎಂದು ತಿಳಿಸಿದರು.

​ಅವರು ಭಗವದ್ಗೀತೆಯಲ್ಲಿನ ಕರ್ಮಯೋಗ, ಜ್ಞಾನಯೋಗ, ಧ್ಯಾನಯೋಗ ಮುಂತಾದ ಪ್ರತಿಯೊಂದು ಅಧ್ಯಾಯಗಳ ಹೆಸರುಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು. “ಕರ್ಮ ಪ್ರತಿಯೊಬ್ಬರು ಮಾಡಲೇಬೇಕು. ಕೇವಲ ಧ್ಯಾನದಿಂದ ಸಂತೋಷವಾಗಿರಲು ಸಾಧ್ಯವಿಲ್ಲ. ನಿಷ್ಕಾಮ ಕರ್ಮ ಮಾಡುವುದರಿಂದ ಒಳ್ಳೆಯ ಪ್ರತಿಫಲ ಪಡೆದು ಸಂತೋಷದಿಂದ ಇರಲು ಸಾಧ್ಯವಿದೆ” ಎಂದು ಹೇಳಿದರು. “ಜೀವನ ಇದು ನಿರಂತರ, ಆತ್ಮವೇ ಜೀವನ, ಆತ್ಮಕ್ಕೆ ನಾಶವಿಲ್ಲ” ಎಂದು ಹೇಳುತ್ತಾ, ಅವರು ಶಂಕರ ಭಗವತ್ಪಾದರು ಗೀತೆಯ ಬಗ್ಗೆ ಬರೆದ ವ್ಯಾಖ್ಯಾನವನ್ನು ಶ್ಲೋಕಗಳ ಮೂಲಕ ವಿವರಿಸಿದರು.

​ಜ್ಞಾನ ವಿಕಾಸ ಮಂಡಳದ ಅಧ್ಯಕ್ಷರಾದ ಶ್ರೀ ವಿ. ಎನ್. ಹೆಗಡೆಯವರು ಅತಿಥಿ ಶ್ರೀ ಅಖಂಡ ಲೀಲಾಧರ ದಾಸ್ ಅವರನ್ನು ಹೂಗುಚ್ಛ, ಶಾಲು ಹಾಗೂ ಶ್ರೀಕೃಷ್ಣನ ಮೂರ್ತಿಯನ್ನು ನೀಡಿ ಸನ್ಮಾನಿಸಿದರು.

​ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ವಿ. ಎನ್. ಹೆಗಡೆಯವರು, “ನಮ್ಮ ಸಂಸ್ಥೆಯು ಪ್ರತಿ ಬಾರಿಯೂ ಭಗವದ್ಗೀತೆಯ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಗೀತೆಯ ಮಹತ್ವವನ್ನು ತಿಳಿಸುತ್ತಿದೆ. ನಮ್ಮ ಸಂಸ್ಥೆ ಹಾಗೂ ಸ್ವರ್ಣವಲ್ಲಿ ಸೇವಾ ಸಮಿತಿ, ಮುಂಬಯಿ ಸಹಯೋಗದೊಂದಿಗೆ ಗೀತಾಜಯಂತಿ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ” ಎಂದು ತಿಳಿಸಿದರು. ಅಲ್ಲದೆ, ವಿದ್ಯಾರ್ಥಿಗಳು ಭಗವದ್ಗೀತೆಯನ್ನು ಓದಿ, ಅದರ ಸಾರವನ್ನು ಅರ್ಥೈಸಿಕೊಳ್ಳಲು ಕರೆ ನೀಡಿದರು.

​ಅತಿಥಿಗಳು ಹಾಗೂ ಗಣ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವರ್ಣವಲ್ಲಿ ಸೇವಾ ಸಮಿತಿಯ ಮಹಿಳಾ ಮಂಡಳಿಯು ಭಗವದ್ಗೀತೆಯ ಪುರುಷೋತ್ತಮ ಅಧ್ಯಾಯದ ಶ್ಲೋಕಗಳ ಸಾಮೂಹಿಕ ಪಾರಾಯಣವನ್ನು ನಡೆಸಿಕೊಟ್ಟರು.

​ಈ ಸಂದರ್ಭದಲ್ಲಿ ಸ್ವರ್ಣವಲ್ಲಿ ಸೇವಾ ಸಮಿತಿಯ ಉಪಾಧ್ಯಕ್ಷ C.A. ವಸಂತ ಭಟ್, ಪದಾಧಿಕಾರಿಗಳಾದ ಶ್ರೀ ಗಣೇಶ ಹೆಗಡೆ, ಶ್ರೀ ಅಶೋಕ ಹೆಗಡೆ, ಶ್ರೀ ಅನಂತ ಭಟ, ಶ್ರೀ ರಾಜಾರಾಮ ಹೆಗಡೆ, ಶ್ರೀಮತಿ ಹೇಮಾ ಹೆಗಡೆ, ಶ್ರೀ ಅಶೋಕ ನಾಯಕ, ಶ್ರೀ ಆರ್. ವಿ .ಜೋಶಿ ಹಾಗೂ ಇನ್ನಿತರ ಅನೇಕ ಗಣ್ಯರು ಉಪಸ್ಥಿತರಿದ್ದರು. ಜ್ಞಾನ ವಿಕಾಸ ಮಂಡಳದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ರಮೇಶ್ ಪಾಟೀಲ ಹಾಗೂ ಶ್ರೀ ಸತೀಶ್ ಖಿಲಾರಿ ಮತ್ತು ಪ್ರಾಚಾರ್ಯ ಡಾ. ಬಿ. ಆರ್. ದೇಶಪಾಂಡೆಯವರು ಗಣ್ಯರನ್ನು ಸನ್ಮಾನಿಸಿದರು.

​ಮೆಹ್ತಾ ಮಹಾವಿದ್ಯಾಲಯದ ಸಾಂಸ್ಕೃತಿಕ ವಿಭಾಗದ ವಿದ್ಯಾರ್ಥಿಗಳು, ಪ್ರಾಧ್ಯಾಪಕಿ ದಿವ್ಯಾ ಗೌತಮ್, ಡಾ. ರಶ್ಮಿ ಲೆಂಗಾಡೆ ಹಾಗೂ ಇನ್ನಿತರ ಪ್ರಾಧ್ಯಾಪಕರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿ ಗೀತೆಯ ಮಹತ್ವವನ್ನು ಮನತುಂಬಿಕೊಂಡರು.



Related posts

ಭಜನೆಯಿಂದ ಭಾವನಾತ್ಮಕ ಸಮಸ್ಯೆಗೆ ಪರಿಹಾರ: ಶ್ರೀ ನಾರಾಯಣಗುರು ಭಜನ ಮಂಡಳಿ ಮಲಾಡ್ ವಲಯಕ್ಕೆ ಸೂರ್ಯಕಾಂತ್ ಜೆ. ಸುವರ್ಣ ಚಾಲನೆ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ : ಗುರುಪೂರ್ಣಿಮೆ ಆಚರಣೆ

Mumbai News Desk

ಕಿಸನ್ ನಗರ ಶ್ರೀ ಅಯ್ಯಪ್ಪ ಸೇವ ಸಮಿತಿಯ 23 ನೇ ವಾರ್ಷಿಕ ಮಹಾಪೂಜೆ

Mumbai News Desk

ಜಿ ಎಸ್ ಬಿ ಸಭಾ, ಮುಲುಂಡ್, ಸಾಂಸ್ಕೃತಿಕ ಸ್ನೇಹ ಸಮ್ಮಿಲನ, ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಮಹಿಳಾ ವಿಭಾಗದ ವತಿಯಿಂದ ಅಷ್ಟ ವಿನಾಯಕ ದರ್ಶನ ಪ್ರವಾಸ.

Mumbai News Desk

ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈಯ 26ನೇ ವಾರ್ಷಿಕ ಉತ್ಸವ ಸಂಭ್ರಮ

Mumbai News Desk