
ಉಡುಪಿ: ಕಾರ್ಕಳ – ಬೈಲೂರು – ಕಣಜಾರು–ಪಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ ಸೇವೆಯನ್ನು ಕಳೆದ ಗುರುವಾರದಿಂದ 08 -01 -2026 ರಿಂದ ದಿಢೀರ್ ಸ್ಥಗಿತಗೊಳಿಸಿರುವುದನ್ನು ಪ್ರತಿಭಟಿಸಿ, ಪಳ್ಳಿ ಮತ್ತು ನಿಂಜೂರು ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾ ದಂಡಾಧಿಕಾರಿಗಳಾದ ಅಬೀದ್ ಗದ್ಯಾಳ ಅವರಿಗೆ ಗ್ರಾಮಸ್ಥರು ಅಹವಾಲು ಸಲ್ಲಿಸಿದರು.
ಸಂಕಷ್ಟದಲ್ಲಿ ವಿದ್ಯಾರ್ಥಿಗಳು ಮತ್ತು ಮಹಿಳೆಯರು :
ಈ ಮಾರ್ಗದಲ್ಲಿ ಸಂಚರಿಸುವ ಸರ್ಕಾರಿ ಬಸ್ಸನ್ನೇ ನಂಬಿಕೊಂಡಿದ್ದ ವಿದ್ಯಾರ್ಥಿಗಳು, ಉದ್ಯೋಗಸ್ಥರು ಮತ್ತು ವೃದ್ಧರು ಬಸ್ ಸ್ಥಗಿತದಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಖಾಸಗಿ ಬಸ್‌ಗಳಲ್ಲಿ ಜಾಗವಿಲ್ಲದೆ ಬಾಗಿಲಲ್ಲಿ ನೇತಾಡಿಕೊಂಡು ಪ್ರಯಾಣಿಸುವಂತಾಗಿದೆ. ಸರ್ಕಾರದ ಉಚಿತ ಬಸ್ ಯೋಜನೆಯ ಲಾಭ ಪಡೆಯುತ್ತಿದ್ದ ಮಹಿಳೆಯರಿಗೂ ಈಗ ಆರ್ಥಿಕ ಹೊರೆ ಮತ್ತು ಸಂಚಾರದ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪ್ರಮುಖ ಬೇಡಿಕೆಗಳು:
ಸ್ಥಗಿತಗೊಂಡಿರುವ ಕಾರ್ಕಳ – ಪಳ್ಳಿ – ಉಡುಪಿ ಸರ್ಕಾರಿ ಬಸ್ ಸಂಚಾರವನ್ನು ತಕ್ಷಣವೇ ಪುನಾರಂಭಿಸಬೇಕು.
ಸಾರ್ವಜನಿಕ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿರಂತರ ಸೇವೆ ಖಾತರಿಪಡಿಸಬೇಕು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಘುನಾಥ ಶೆಟ್ಟಿ ಪಳ್ಳಿ, ದಿನಕರ್ ಶೆಟ್ಟಿ ನಿಂಜೂರು, ವಿಶ್ವನಾಥ ಭಂಡಾರಿ, ಫಿಲೋಮಿನ ಮೆಂಡೋನ್ಸಾ, ಸಂತೋಷ್ ಶೆಟ್ಟಿ, ದಿಲೀಪ್ ಹೆಗ್ಡೆ, ವಿಲ್ಸನ್ ಲೋಬೋ, ನೆಲ್ಸನ್ ಡಿಸೋಜ, ಪ್ರವೀಣ್ ಶೆಟ್ಟಿ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿಗಳು, ಈ ಕುರಿತು ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ವರದಿ: ಚಂದ್ರಹಾಸ ಮೆಂಡನ್




