
ಮುಂಬೈನಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಿತ “SEIKO KAI” ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್-2026 ರಲ್ಲಿ ಥಾಣೆಯ ವಿದ್ಯಾರ್ಥಿನಿ ಆರೋಹಿ ಎ. ಪೂಜಾರಿ(ಖುಷಿ) ಅದ್ಭುತ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಜನವರಿ 18, 2026 ರಂದು ಥಾಣೆಯಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ – 2026ರಲ್ಲಿ ಥಾಣೆ ಪಶ್ಚಿಮ ನವೋದಯ ಇಂಗ್ಲಿಷ್ ಶಾಲೆಯನ್ನು ಪ್ರತಿನಿಧಿಸಿದ ಆರೋಹಿ ಪೂಜಾರಿ ಇವರು 11 ವರ್ಷದೊಳಗಿನ ವಯೋಮಿತಿಯ ವಿಭಾಗದಲ್ಲಿ ತಮ್ಮ ಅತ್ಯುತ್ತಮ ಕರಾಟೆ ಕೌಶಲಗಳನ್ನು ಪ್ರದರ್ಶಿಸಿದರು. ಇವರು ಕಠಿಣ ಸ್ಪರ್ಧೆಯ ನಡುವೆಯೂ ಒಂದು ಚಿನ್ನದ ಪದಕ ಹಾಗೂ ಒಂದು ಕಂಚಿನ ಪದಕವನ್ನು ಮುಡಿಗೇರಿಸಿಕೊಂಡು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇವರು ಥಾಣೆ ಪಶ್ಚಿಮ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಶಿವಪ್ರಸಾದ್ ಪೂಜಾರಿ ಪುತ್ತೂರು ಮತ್ತು ಶ್ರೀಮತಿ ಆಶಾ ಪೂಜಾರಿ ಬಜಗೋಳಿ ದಂಪತಿಗಳ ಪುತ್ರಿ. ನವೋದಯ ಕನ್ನಡ ಸೇವಾ ಸಂಘದ ನವೋದಯ ಇಂಗ್ಲಿಷ್ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ.
ಆರೋಹಿಯ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಚಾಮುಂಡೇಶ್ವರಿ ಕ್ಷೇತ್ರದ ಗಣ್ಯರು ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. “ಚಿಕ್ಕ ವಯಸ್ಸಿನಲ್ಲೇ ರಾಜ್ಯ ಮಟ್ಟದಲ್ಲಿ ಇಂತಹ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ,” ಎಂದು ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.




