29 C
Mumbai
March 6, 2026
Mumbai News Kannada
ಮುಂಬಯಿ

ಗೋರೆಗಾಂವ್ ಕರ್ನಾಟಕ ಸಂಘದ ಗ್ರಂಥಾಯನ ವಿಭಾಗ’:ಜಯಲಕ್ಷ್ಮೀ ಎಸ್ ಜೋಕಟ್ಟೆಯವರ ಕವಿತೆಗಳು’ ಮತ್ತು ‘ಮುಂಬೈ ಕನ್ನಡ ಗದ್ಯ ವಾಹಿನಿ’ ಕೃತಿಗಳ ಬಿಡುಗಡೆ





ಸಹೃದಯ ಬರಹಗಾರರಿಂದ ಸದಾ ಉತ್ತಮ ಕೃತಿಗಳು ಹೊರಬರುತ್ತವೆ– ಪೇಟೆಮನೆ ಪ್ರಕಾಶ್ ಶೆಟ್ಟಿ

ಮುಂಬಯಿ, ಫೆ.4: ಗೋರೆಗಾಂವ್ ಕರ್ನಾಟಕ ಸಂಘ ಮುಂಬೈ ಇದರ ಗ್ರಂಥಾಯನ ವಿಭಾಗ’ದ ಆಶ್ರಯದಲ್ಲಿ ಶನಿವಾರ ಜ.31 ರಂದು ಎರಡು ಕೃತಿಗಳು ಬಿಡುಗಡೆಗೊಂಡವು. ಅಂದು ಜಯಲಕ್ಷ್ಮೀ ಎಸ್ ಜೋಕಟ್ಟೆಯವರ ಕವಿತೆಗಳು’ ( ಸಂಪಾದಕ: ಶ್ರೀನಿವಾಸ ಜೋಕಟ್ಟೆ,)ಮತ್ತು ಡಾ. ದುರ್ಗಪ್ಪ ಯ. ಕೋಟಿಯವರ್ ಅವರ ಪಿ ಎಚ್ ಡಿ ಸಂಶೋಧ‌ನಾಗ್ರಂಥ ‘ಮುಂಬೈ ಕನ್ನಡ ಗದ್ಯ ವಾಹಿನಿ’ ಬಿಡುಗಡೆ ಗೊಂಡಿತು.


ಗೋರೆಗಾಂವ್ ಪಶ್ಚಿಮದ ಅಂಬಾಬಾಯಿ ದೇವಸ್ಥಾನದ ಹತ್ತಿರ,
ಆರೆ ರೋಡ್ ಇಲ್ಲಿರುವ ಕೇಶವ ಗೋರೆ ಸ್ಮಾರಕ ಟ್ರಸ್ಟ್ ನ ಎರಡನೇ ಮಹಡಿಯಲ್ಲಿ ಜರಗಿದ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಿತಾ ಸುರೇಶ್ ನಾಯಕ್ (ಉಪಾಧ್ಯಕ್ಷರು: ಗೋರೆಗಾಂವ್ ಕರ್ನಾಟಕ ಸಂಘ) ವಹಿಸಿದ್ದರು.


ಶ್ರೀನಿವಾಸ ಜೋಕಟ್ಟೆ ಸಂಪಾದಿತ ‘ಜಯಲಕ್ಷ್ಮೀ ಎಸ್ ಜೋಕಟ್ಟೆಯವರ ಕವಿತೆಗಳು’ ಕೃತಿಯನ್ನು ಪೇಟೆಮನೆ ಪ್ರಕಾಶ್ ಶೆಟ್ಟಿ ಬಿಡುಗಡೆಗೊಳಿಸಿ ಮಾತನಾಡುತ್ತಾ ಜೋಕಟ್ಟೆಯವರು ಬರವಣಿಗೆಯನ್ನು ನಿಲ್ಲಿಸದೆ ನಿರಂತರ ಮುಂದುವರಿಸುತ್ತಿರಲಿ.ಅವರು ಸಹೃದಯ ಬರಹಗಾರರು. ಬರಹಗಾರರಲ್ಲಿ ಸಹೃದಯತೆ ಇದ್ದಾಗಲೇ ಉತ್ತಮ ಲೇಖನಗಳು ಅವರಿಂದ ಮೂಡಿಬರುತ್ತವೆ. ಶ್ರೀನಿವಾಸ ಜೋಕಟ್ಟೆ ಅವರು ತಮ್ಮ ದಿವಂಗತ ಬಾಳಸಂಗಾತಿ ಜಯಲಕ್ಷ್ಮೀಯವರ ಕವಿತೆಗಳನ್ನು ಸಂಗ್ರಹಿಸಿ ಇದೀಗ ಸಂಕಲನ ರೂಪದಲ್ಲಿ ಪ್ರಕಟಿಸಿರುವುದು ಮೆಚ್ಚುಗೆಯ ಸಂಗತಿ. ಈ‌ ಮೂಲಕ ಜಯಲಕ್ಷ್ಮೀಯವರ ಕವಿತೆಗಳನ್ನು ಜನಮಾನಸಕ್ಕೆ ಮುಟ್ಟಿಸುವ ಅರ್ಥಪೂರ್ಣ ಕೆಲಸವನ್ನು ಮಾಡಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರು.


‘ಜಯಲಕ್ಷ್ಮೀ ಜೋಕಟ್ಟೆಯವರ ಕವಿತೆಗಳು’ ಕೃತಿ‌ಪರಿಚಯಿಸಿದ ರಂಗನಟ ಸುರೇಂದ್ರಕುಮಾರ್ ಮಾರ್ನಾಡ್ ಮಾತನಾಡುತ್ತಾ ಹೊಯ್ಸಳ ರಾಜ ವಿಷ್ಣುವರ್ಧನನು ಮಡದಿ ಶಾಂತಲಾಳ ನೃತ್ಯಭಂಗಿಗೆ ಮನಸೋತವರು. ಆಕೆಯ ನೆನಪು ಶಾಶ್ವತ ಇರಲೆಂದು ನೃತ್ಯದ ಭಂಗಿಗಳ ಮೂರ್ತಿಗಳನ್ನು ಕೆತ್ತಿಸಿದ್ದು ದೇವಾಲಯಗಳನ್ನೂ ಕಟ್ಟಿಸಿದ್ದ. ಇಂದೂ ನಾವು ಅವುಗಳನ್ನು ಗಮನಿಸಬಹುದು. ಅಂತೆಯೇ ಇಂದು ಜಯಲಕ್ಷ್ಮೀಯವರ ನೆನಪಿಗಾಗಿ‌ ಜೋಕಟ್ಟೆಯವರು ಅವರ ಕವಿತೆಗಳ ಗೋಪುರವನ್ನು ನಮಗಾಗಿ ಕಟ್ಟಿಕೊಟ್ಟಿದ್ದಾರೆ.ಈ ಕವಿತೆಗಳ ಮೂಲಕ ನಮ್ಮ ಜೊತೆ ಜಯಲಕ್ಷ್ಮೀಯವರು ಸದಾ ಜೀವಂತವಾಗಿದ್ದಾರೆ. ಇಲ್ಲಿ ಕೇವಲ ಕವಿತೆಗಳು‌ ಮಾತ್ರವಲ್ಲ, ಜಯಲಕ್ಷ್ಮೀಯವರ ಕುರಿತಂತೆ ಜೋಗಿ, ಕಾಯ್ಕಿಣಿ, ಉಪಾಧ್ಯ ಸರ್,ಡಾ. ಜನಾರ್ಧನ್ ಭಟ್…. ರಂಗಮಿತ್ರರು ಕವಯಿತ್ರಿಯರು…. ಹೀಗೆ ಆಪ್ತರ ಮನದಾಳದ ಮಾತುಗಳೂ ಇವೆ. ಕವನಗಳಿಗೆ ಸಂತೋಷ್ ಸಸಿಹಿತ್ಲು ಅವರ ಅರ್ಥಪೂರ್ಣ ಚಿತ್ರಗಳಿವೆ.
ಮೂರನೇ ಭಾಗದಲ್ಲಿ ಜಯಲಕ್ಷ್ಮೀ ಜೋಕಟ್ಟೆ ದಂಪತಿಯ ಕೆಲವು ಅಪರೂಪದ ಚಿತ್ರಸಂಚಯವೂ ಇದ್ದು ಗಮನಾರ್ಹವೆನಿಸಿದೆ. ಇನ್ನೂ ವಿಶೇಷವೆಂದರೆ ಅರ್ಪಣೆಯನ್ನು ಪುಟ್ಟ ಬಾಲಕಿ ಶ್ರೀಲಕ್ಷ್ಮೀ ಆಚಾರ್ಯರಿಗೆ ಮಾಡಿರುವುದು ಎಂದರು.


ದುರ್ಗಪ್ಪ ಯ. ಕೋಟಿಯವರ್ ಕೃತಿ ‘ಮುಂಬೈ ಕನ್ನಡ ಗದ್ಯ ವಾಹಿನಿ’ಯನ್ನು ಡಾ. ಈಶ್ವರ ಅಲೆವೂರು ಬಿಡುಗಡೆ ಗೊಳಿಸಿ ಮಾತನಾಡುತ್ತಾ
ದುರ್ಗಪ್ಪ ಯ. ಕೋಟಿಯವರ್
ಮೊದಲಿಗೆ ಸಾಹಿತ್ಯದ ಮೂಲಕ ‘ಮುಂಬಯಿಯಲ್ಲಿ ಕನ್ನಡದ ಡಿಂಡಿಮ’ ಕೃತಿಯನ್ನು ಪ್ರಕಟಿಸಿದರು.ಇದೀಗ ‘ಮುಂಬಯಿ ಕನ್ನಡ ಗದ್ಯ ವಾಹಿನಿ” ಎಂಬ ಸಾಹಿತ್ಯದ ಚರಿತ್ರೆ’ಯನ್ನು ಬಗೆದು ಅದರ ಗುಣವಿಶೇಷತೆ, ಅಗಾಧತೆಯನ್ನು ತೆರೆದಿಟ್ಟಿದ್ದಾರೆ. ಇಲ್ಲಿ ಅವರು ಮುಂಬಯಿಯ ಕನ್ನಡ ಗದ್ಯ ಸಾಹಿತ್ಯವನ್ನು ವಿಭಿನ್ನ ನೆಲೆಯಲ್ಲಿ ಗುರುತಿಸಿ, ವಿಭಜಿಸಿ ಅರ್ಥಪೂರ್ಣ ಭಾಷ್ಯ ಬರೆದಿದ್ದಾರೆ. ಸಾಹಿತ್ಯಾಭ್ಯಾಷಿಗಳಿಗೆ ಇದೊಂದು ಉಪಯುಕ್ತ ಆಕರ ಗ್ರಂಥವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.


ಕೃತಿ ಪರಿಚಯವನ್ನು ಮಾಡಿದ ಸುರೇಖಾ ಹರಿಪ್ರಸಾದ್ ಶೆಟ್ಟಿ ಮಾತನಾಡುತ್ತಾ ಮುಂಬೈ ಕನ್ನಡ ಗದ್ಯ ಸಾಹಿತ್ಯದ ಇತಿಹಾಸ ಮತ್ತು ವೈಶಿಷ್ಟ್ಯವನ್ನು ಸ್ಥೂಲವಾಗಿ ಕಟ್ಟಿಕೊಡುವ’ಮುಂಬಯಿ ಕನ್ನಡ ಗದ್ಯ ವಾಹಿನಿ ಕೃತಿಯಲ್ಲಿ ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರಗಳಾದ ಸಂಶೋಧನೆ, ವಿಮರ್ಶೆ , ಅಂಕಣ ಬರಹ ಹಾಗೂ ಸಂಕೀರ್ಣ ಬರಹಗಳ ಬಹುತೇಕ ಮುಖ್ಯ ಕೃತಿಗಳನ್ನು ದಾಖಲಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ.ಕನ್ನಡ ಭಾಷೆ, ಸಾಹಿತ್ಯ , ಸಂಸ್ಕೃತಿಗಳ ಮೇಲಿನ ಅನನ್ಯವಾದ ಅಭಿಮಾನವೇ ಮುಂಬೈ ಸಾಹಿತಿಗಳು ಸತತವಾಗಿ ಕನ್ನಡ ಸಾಹಿತ್ಯದ ಓದು ಬರಹಗಳಲ್ಲಿ ತೊಡಗಿಸಿಕೊಳ್ಳಲು ಕಾರಣವೆನ್ನುವುದನ್ನು ಗುರುತಿಸಿ ಕನ್ನಡ ವಾಙ್ಮಯಕ್ಕೆ ಮುಂಬೈ ಸಾಹಿತಿಗಳು ನೀಡಿರುವ ಕಾಣಿಕೆಯನ್ನು ಇದರಲ್ಲಿ ದಾಖಲಿಸಲಾಗಿದೆ ಎಂದರು.


‘ಜಯಲಕ್ಷ್ಮೀ ಜೋಕಟ್ಟೆಯವರ ಕವಿತೆಗಳು’ ಕೃತಿಯ ಸಂಪಾದಕರಾದ ಶ್ರೀನಿವಾಸ ಜೋಕಟ್ಟೆಯವರು ಮಾತನಾಡುತ್ತಾ ಕವಿತೆಗಳ‌ನ್ನು ಬರೆಯುತ್ತಿದ್ದ ಜಯಲಕ್ಷ್ಮೀಯವರು ಅಂದು ಹುಬ್ಬಳ್ಳಿಯ ಸುನಂದಾ ಪ್ರಕಾಶ ಕಡಮೆ ಅವರಿಗೆ ಕಳುಹಿಸಿ ಅಭಿಪ್ರಾಯವನ್ನು ನಿರೀಕ್ಷಿಸುತ್ತಿದ್ದರು. ನಂತರ ಮಯೂರ, ಕರ್ಮವೀರದಂತಹ ಪತ್ರಿಕೆಗಳಿಗೂ ಕಳುಹಿಸಿದ್ದು ಅವರ ಕವಿತೆಗಳು ಪ್ರಕಟವಾಗುತ್ತಿತ್ತು.ಆದರೆ ಕೋವಿಡ್ ಕಾಲಾವಧಿಯ ನಂತರ ಅವರಿಗೆ ಸಾಹಿತ್ಯಕ್ಕಿಂತ ಬದುಕು ದೊಡ್ಡದು ಎಂದು ಭಾಸವಾಗಿ ಕವಿತಾ ರಚನೆಯಿಂದ ಹಿಂದೆ ಸರಿದಿದ್ದರು. ಸುನಂದಾ ಕಡಮೆ ಅವರು ಹಲವು‌ ವರ್ಷಗಳ ಹಿಂದಿನ‌ ಇಮೇಲ್ ಗಳನ್ನು ಡಿಲಿಟ್ ಮಾಡದೆ ಜಯಲಕ್ಷ್ಮೀಯವರ ಕವಿತೆಗಳನ್ನು ಇರಿಸಿಕೊಂಡಿದ್ದರಿಂದ
ಈ ಕವಿತಾ ಸಂಕಲನ ಕೇವಲ ಹದಿನೈದು ದಿನಗಳಲ್ಲೇ ಹೊರಬರಲು ಸಾಧ್ಯವಾಯ್ತು ಎಂದರು.


‘ಮುಂಬಯಿ‌ ಕನ್ನಡ ಗದ್ಯವಾಹಿನಿ’ ಕೃತಿಯ ಲೇಖಕರಾದ ಡಾ.ದುರ್ಗಪ್ಪ ಯ.ಕೋಟಿಯವರ್ ಮಾತನಾಡುತ್ತಾ ಮುಂಬಯಿ ವಿವಿ ಕನ್ನಡ ವಿಭಾಗದ ನನ್ನ ಗುರುಗಳಾದ ಡಾ. ಜಿ.ಎನ್. ಉಪಾಧ್ಯ ಅವರು ನನ್ನ ಬರಹಕ್ಕೆ ಬೆಂಬಲವಾಗಿ ನಿಂತವರು. ‘ಮುಂಬಯಿ ಕನ್ನಡ ಗದ್ಯ ಸಾಹಿತ್ಯದ’ ಕುರಿತು ಪಿಎಚ್.ಡಿ ಅಧ್ಯಯನ ಮಾಡಲು ಅವಕಾಶ ಮಾಡಿಕೊಟ್ಟರು. ಪಿಎಚ್.ಡಿ ಅಧ್ಯಯನಕ್ಕೆ ಬೇಕಾದ ಎಲ್ಲ ಆಕರ ಗ್ರಂಥಗಳನ್ನು ನೀಡಿ ಮಾರ್ಗದರ್ಶನವನ್ನೂ ಅವರು ನೀಡಿದ್ದರು. ಅವರ ಪ್ರೋತ್ಸಾಹದಿಂದ ಪ್ರಸ್ತುತ ಕೃತಿ ಮುದ್ರಣ ಕಾಣುವಂತಾಗಿದೆ. ಮುಂಬಯಿ ಕನ್ನಡ ಗದ್ಯ ಸಾಹಿತ್ಯಕ್ಕೆ ಒಂದೂವರೆ ಶತಮಾನದ ಇತಿಹಾಸವಿದೆ. ಕನ್ನಡ ಸಾಹಿತ್ಯ ಚರಿತ್ರೆಗೆ ಮುಂಬಯಿಯ ಲೇಖಕರು ಅಪೂರ್ವ ಕಾಣಿಕೆ ಸಲ್ಲಿಸಿದ್ದಾರೆ. ಮುಂಬಯಿಯ ಸಂಕೀರ್ಣ ನಗರ ಜೀವನವನ್ನು ನಾಡಿನ ಓದುಗರಿಗೆ ಪರಿಚಯಿಸಿದ ಹಿರಿಮೆ ಮುಂಬಯಿಯ ಕನ್ನಡ ಲೇಖಕರಿಗೆ ಸಲ್ಲುತ್ತದೆ. ಸಂಶೋಧನೆ, ವಿಮರ್ಶೆ, ಅಂಕಣ ಬರೆಹ, ಹರಟೆ, ಲಲಿತ ಪ್ರಬಂಧ, ವ್ಯಕ್ತಿಚಿತ್ರಣ, ಆತ್ಮಚರಿತ್ರೆ, ಪ್ರವಾಸ ಸಾಹಿತ್ಯ, ಅಭಿನಂದನ ಗ್ರಂಥಗಳು, ಸಂಪಾದಿತ ಕೃತಿಗಳನ್ನು ಮಾತ್ರ ಈ ಗ್ರಂಥದಲ್ಲಿದೆ ಎಂದರು.

ನಿರೂಪಣೆಯನ್ನು ಕವಿ ರಂಗಕರ್ಮಿ ಸಾ. ದಯಾ‌ ಮಾಡಿದರು. ಗ್ರಂಥಾಯನ ಸದಸ್ಯರಾದ ಶೋಭಾ ದಿವಾಕರ್ ಹಾಗೂ ಚಂದ್ರಕಲಾ ಶಿಂಪಿ ಪ್ರಾರ್ಥನೆ ಹಾಡಿದರು.ಪ್ರಾಸ್ತಾವಿಕ ಮಾತುಗಳನ್ನು ಗ್ರಂಥಾಯನ ನಿರ್ದೇಶಕಿ ಶೈಲಾ ಎಸ್. ನಾಯಕ್ ನುಡಿದರು. ಸಂಘದ ಗೌರವ ಪ್ರ. ಕಾರ್ಯದರ್ಶಿ ಶಾಂತಾ ಎನ್. ಶೆಟ್ಟಿ ಅವರು ಸಂಘದ ಕುರಿತು ಮಾತನಾಡಿದರು. ಗ್ರಂಥಾಯನ ಸಂಚಾಲಕಿ ಯಶೋದಾ ಆರ್. ಶೆಟ್ಟಿ ವಂದಿಸಿದರು.

ಅಧ್ಯಕ್ಷತೆ ವಹಿಸಿದ ಗೋರೆಗಾಂವ್ ಕರ್ನಾಟಕ ಸಂಘದ ಉಪಾಧ್ಯಕ್ಷೆ ಸರಿತಾ ಸುರೇಶ್ ನಾಯಕ್ ಮಾತನಾಡುತ್ತಾ ಶೈಕ್ಷಣಿಕ ಪ್ರವಾಸದಲ್ಲಿ ನನಗೆ ಜಯಲಕ್ಷ್ಮೀಯವರ ಪರಿಚಯವಾಗಿತ್ತು. ಆದರೆ ಅವರು ಕವಯತ್ರಿ ಎಂದು ಆ ಸಮಯ ತಿಳಿದಿರಲಿಲ್ಲ. ಪ್ರವಾಸದ ಸಂದರ್ಭದಲ್ಲಿ ಅವರ ವ್ಯಕ್ತಿತ್ವಕ್ಕೆ ನಾನು ಆಕರ್ಷಿತಳಾಗಿದ್ದೆ.ಸಂಘದ ವಿಚಾರಭಾರತಿ ನಾಡಹಬ್ಬ ಕಾರ್ಯಕ್ರಮಗಳಿಗೂ ಅವರು ಬರುತ್ತಿದ್ದರು. ಇಂದು ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ಅವರ ಚೊಚ್ಚಲ ಕವಿತಾ ಸಂಕಲನ ಬಿಡುಗಡೆಗೊಂಡಿರುವುದು ಅದು ಜಯಲಕ್ಷ್ಮೀಯವರಿಗೆ ನೀಡಿರುವ ಗೌರವವಾಗಿದೆ ಎಂದು ತಿಳಿಯುವೆ. ಇದರ ಜೊತೆಗೆ ದುರ್ಗಪ್ಪ ಕೋಟಿಯವರ್ ಅವರ ಮುಂಬೈ ಕನ್ನಡ ಗದ್ಯ ವಾಹಿನಿ ಕೃತಿಯೂ ಬಿಡುಗಡೆಗೊಂಡಿರುವುದು ಸಂಘಕ್ಕೆ ಹೆಮ್ಮೆ ಮತ್ತು ಸಂತೋಷವಾಗಿದೆ ಎಂದರು.



Related posts

ಬಂಟರ ಸಂಘ ಮುಂಬಯಿ ; ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿ ಯುವ ವಿಭಾಗದ ವತಿಯಿಂದ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಚಂದನ್ ಗೌಡ ಶೇ.89.80  ಅಂಕ.

Mumbai News Desk

ಮುಂಬೈ ಮೇಯರ್ ಗಾದಿ ಯಾರಿಗೆ? ಬಿಜೆಪಿ ‘ದೊಡ್ಡಣ್ಣ’ನಾದರೂ ಶಿಂಧೆ ಪಟ್ಟು; ಜನವರಿ 28ರ ಮತದಾನದತ್ತ ಎಲ್ಲರ ಚಿತ್ತ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಭವ್ಯ ಶಿವನಂದ್ ಪೂಜಾರಿಗೆ ಶೇ 92.00 ಅಂಕ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯಿಂದ ರಕ್ತದಾನ ಶಿಭಿರ,

Mumbai News Desk

ಘೋಡ್ ಬಂದರ್ ರೋಡ್ ಕನ್ನಡ ಅಸೋಶಿಯೇಶನ್ ಅನಾಥ ಮಕ್ಕಳ ನಿರ್ವಹಣಾ ಕೇಂದ್ರಕ್ಕೆ ಭೇಟಿ ಮತ್ತು ವಿದ್ಯಾರ್ಥಿ ದತ್ತು ಸ್ವೀಕಾರ ಕಾರ್ಯಕ್ರಮ

Mumbai News Desk