
ಚಿತ್ರ: ಧನಂಜಯ ಪೂಜಾರಿ, ವರದಿ: ಇನ್ನಂಜೆ ಜಯರಾಮ್
ಮುಂಬೈ: ಮಹಾನಗರದ ಜಂಜಾಟದ ನಡುವೆಯೂ ಬೋರಿವಲಿ ಪೂರ್ವದ ಶ್ರೀಕೃಷ್ಣ ನಗರದ ನ್ಯಾನ್ಸಿ ಕಾಂಪ್ಲೆಕ್ಸ್ ಪರಿಸರದಲ್ಲಿ ಇತ್ತೀಚೆಗೆ ಆಧ್ಯಾತ್ಮಿಕತೆಯ ಅಲೆ ಎದ್ದಿತ್ತು. ಇಲ್ಲಿನ ನವೀಕೃತ ಶ್ರೀ ಜಗದೇಶ್ವರಿ ಅಮ್ಮನವರ ಮಂದಿರದಲ್ಲಿ ನಡೆದ ಪುನರ್ಪ್ರತಿಷ್ಠಾಪನೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವವು ಭಕ್ತಾದಿಗಳ ಅಪಾರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಸಪ್ತದಿನಗಳ ಕಾಲ ನಡೆದ ಈ ಧಾರ್ಮಿಕ ಮಹಾಯಾಗವು ಮುಂಬೈ ಕನ್ನಡಿಗರ ಭಕ್ತಿ ಮತ್ತು ಒಗ್ಗಟ್ಟಿಗೆ ಸಾಕ್ಷಿಯಾಯಿತು. ಫೆಬ್ರವರಿ 3ರಂದು ಚಾಲನೆಗೊಂಡ ಈ ಉತ್ಸವವು ಹಿರಿಯ ತಂತ್ರಿಗಳಾದ ಬ್ರಹ್ಮಶ್ರೀ ಕಳತ್ತೂರು ಉದಯ ತಂತ್ರಿಗಳ ಪೌರೋಹಿತ್ಯದಲ್ಲಿ, ವೇದಮೂರ್ತಿ ಪಕ್ಷಿಕೆರೆ ವಿಜಯ್ ಉಪಾಧ್ಯಾಯ ಹಾಗೂ ಸಂತೋಷ್ ಕುಮಾರ್ ಭಟ್ ಮುದ್ರಾಡಿ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಜರುಗಿತು.






ಉತ್ಸವದ ಅಂಗವಾಗಿ ದ್ವಾದಶ ನಾಳೀಕೇರ ಗಣಪತಿ ಯಾಗ, ನವಗ್ರಹ ಯಾಗ, ಭೂ ವರಾಹ ಹೋಮ ಹಾಗೂ ಬಿಂಬಶುದ್ಧಿ ಪ್ರಕ್ರಿಯೆಗಳು ನಡೆದವು. ಫೆಬ್ರವರಿ 5ರ ಸುಮುಹೂರ್ತದಲ್ಲಿ ಶ್ರೀ ಜಗದೇಶ್ವರಿ ಅಮ್ಮನವರು, ಮಹಾಗಣಪತಿ ಹಾಗೂ ನಾಗದೇವರ ಬಿಂಬ ಪ್ರತಿಷ್ಠಾಪನೆ ನಡೆಯುವ ಮೂಲಕ ಶಿಲಾಮಯ ಮೂರ್ತಿಗಳಿಗೆ ಪ್ರಾಣಕಳೆ ತುಂಬಲಾಯಿತು. ಫೆಬ್ರವರಿ 8ರ ಕುಂಭ ಲಗ್ನದಲ್ಲಿ ದೇವಿಗೆ ಬ್ರಹ್ಮಕಲಶಾಭಿಷೇಕ ನೆರವೇರುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲುಮುಟ್ಟಿತು. ನಂತರ ಮಹಾ ಚಂಡಿಕಾ ಯಾಗ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಅಚ್ಚುಕಟ್ಟಾಗಿ ಜರುಗಿತು. ಸಂಜೆ ಸತ್ಯನಾರಾಯಣ ಪೂಜೆ, ದುರ್ಗಾ ನಮಸ್ಕಾರ ಪೂಜೆ, ರಂಗ ಪೂಜೆ ನಡೆಯಿತು.




ಉತ್ಸವದ ಮತ್ತೊಂದು ಅವಿಸ್ಮರಣೀಯ ಕ್ಷಣವೆಂದರೆ ಅದು ವೈಭವದ ಶೋಭಾಯಾತ್ರೆ. ನಾಸಿಕ್ ಡೋಲು, ಲೆಜಿಮ್ ಮೇಳ, ಯಕ್ಷಗಾನ ವೇಷಧಾರಿಗಳು ಹಾಗೂ ತುಳುನಾಡಿನ ಹೆಮ್ಮೆಯ ಹುಲಿವೇಷ ಕುಣಿತದ ಅಬ್ಬರಕ್ಕೆ ಬೋರಿವಲಿಯ ರಸ್ತೆಗಳೇ ಸ್ತಬ್ದವಾಗಿದ್ದವು. ನೂರಾರು ಸುಮಂಗಲೆಯರು ಕಲಶ ಹಿಡಿದು ಸಾಗಿದ್ದು ಸಾಕ್ಷಾತ್ ದೇವಿಯೇ ಧರೆಗಿಳಿದು ಬಂದಂತೆ ಭಾಸವಾಯಿತು.






ಚೆಂಡೆ ವಾದ್ಯದಲ್ಲಿ ನಗರದ ಖ್ಯಾತ ಸೆಕ್ಸೋಪೋನ್ ವಾದಕ ಹರೀಶ್ ಸಾಲ್ಯಾನ್ ಮತ್ತು ಬಳಗದವರು ಸಹಕರಿಸಿದರು.

ಈ ಸಂಭ್ರಮಕ್ಕೆ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಭೇಟಿ ನೀಡಿ ಆಶೀರ್ವಚನ ನೀಡಿದರು. “ಸಮಾಜದ ಸ್ವಾಸ್ಥ್ಯ ಕಾಪಾಡಲು ಇಂತಹ ಶ್ರದ್ಧಾ ಕೇಂದ್ರಗಳ ಅಗತ್ಯವಿದೆ” ಎಂದು ಶ್ರೀಗಳು ಪ್ರತಿಪಾದಿಸಿದರು.

ದೇವಸ್ಥಾನದ ಆವರಣದಲ್ಲಿ ಪ್ರತಿದಿನವೂ ಭಜನಾ ಸಂಧ್ಯಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪುಷ್ಪಾ ಜಿ. ಬಂಗೇರ ಅವರ ಉಸ್ತುವಾರಿಯಲ್ಲಿ ಎಂಟು ಪ್ರಮುಖ ಭಜನಾ ತಂಡಗಳಿಂದ ‘ಕುಣಿತ ಭಜನೆ’ ಜರುಗಿತು. ರತ್ನಾಕರ ಅಂಚನ್, ಸೋಮನಾಥ ಡಿ. ಕೋಟ್ಯಾನ್ ಹಾಗೂ ತಂಡದವರಿಂದ ಶನಿ ಗ್ರಂಥ ಪಾರಾಯಣ ನಡೆಯಿತು.


ಕೊನೆಯ ದಿನ ನಾಗೇಶ್ ಪೊಳಲಿ ನಿರ್ದೇಶನದ ‘ಶಾಂಭವಿ ವಿಜಯ’ ಯಕ್ಷಗಾನ ಬಯಲಾಟ ಕಲಾಭಿಮಾನಿಗಳ ಮನಗೆದ್ದಿತು. ದೇವಸ್ಥಾನದ ಹಿರಿಯ ಸದಸ್ಯ ಸೋಮನಾಥ ಡಿ. ಕೋಟ್ಯಾನ್ ಶಾಂತಿ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶೇಖರ್ ಎಂ. ಕೋಟ್ಯಾನ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಿಜಿಎಸ್ ಗ್ರೂಪ್ನ ಈಶ್ವರ್ದೇವ್ ಶುಕ್ಲ ದಂಪತಿಗಳು ಯಜಮಾನಿಕೆ ವಹಿಸಿದ್ದರು. ಮಾಜಿ ಸಂಸದ ಗೋಪಾಲ ಶೆಟ್ಟಿ, ಪ್ರವೀಣ್ ದಾರೆಕರ್, ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಹರೀಶ್ ಜಿ. ಅಮೀನ್ ಹಾಗೂ ಎನ್.ಟಿ. ಪೂಜಾರಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಟ್ರಸ್ಟ್ನ ಕಾರ್ಯದರ್ಶಿ ರವೀಂದ್ರ ಆರ್. ಮೆಂಡನ್, ಕೋಶಾಧಿಕಾರಿ ಚೇತನ್ ಎಚ್. ಪೂಜಾರಿ ಹಾಗೂ ಸಮಿತಿಯ ಸದಸ್ಯರಾದ ರಾಜೇಶ್ ಪೂಜಾರಿ, ಅರುಣ ಮೊಯ್ಲಿ, ರೋಹಿತ್ ಸುವರ್ಣ, ಪುಷ್ಪ ಜಿ ಬಂಗೇರ, ಸಂತೋಷ್ ಶ್ರೀಯಾನ್, ಸುಧೀರ್ ಕೋಟ್ಯಾನ್, ವಿಜಯ ಕರ್ಕೇರ, ದಯಾನಂದ ಸಾಲ್ಯಾನ್, ಉಮಾನಂದ ತಿಂಗಳಾಯ, ರತ್ನಾಕರ ಅಂಚನ್, ನಾರಾಯಣ ಜತ್ತನ್, ಸಂದೇಶ್ ಕರ್ಕೇರ, ಶಂಕರ್ ಕರ್ಕೇರ, ಶೈಲೇಶ್ ಕೋಟ್ಯಾನ್, ಚಿರಾಗ್ ತಣ್ಣೀರುಬಾವಿ, ಚೇತನ್ ಪೂಜಾರಿ, ಶೋಭಾ ಪೂಜಾರಿ ಮತ್ತಿತರರು ಸಮಾರಂಭದ ಯಶಸ್ಸಿಗೆ ಶ್ರಮಿಸಿದರು.

”ಯಾವುದೇ ಹಣಬಲಕ್ಕಿಂತ ಭಕ್ತರ ಭಕ್ತಿಯೇ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣ. ದೇವಿಯ ಅನುಗ್ರಹದಿಂದ ಐದು ದಶಕಗಳ ಈ ಕ್ಷೇತ್ರ ಇಂದು ನೂತನವಾಗಿ ಕಂಗೊಳಿಸುತ್ತಿದೆ” ಎಂದು ಅಧ್ಯಕ್ಷ ಶೇಖರ್ ಕೋಟ್ಯಾನ್ ತಿಳಿಸಿದರು.

ಉತ್ಸವದ ಪ್ರತಿ ದಿನವೂ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸೇವಾ ಸೇತುವಿನ ಸದಸ್ಯರು ಮತ್ತು ಸ್ವಯಂಸೇವಕರು ಯಾವುದೇ ಲೋಪವಾಗದಂತೆ ಭಕ್ತರಿಗೆ ಅನ್ನಪ್ರಸಾದ ವಿತರಿಸಿ ಸೇವೆಯ ಸಾರ್ಥಕತೆ ಮೆರೆದರು. ಸೋಮವಾರ ನಡೆದ ಮಹಾಸಂಪ್ರೋಕ್ಷಣೆ ಹಾಗೂ ಮಂಗಳ ಗಣಪತಿ ಯಾಗದೊಂದಿಗೆ ಈ ಸಪ್ತದಿನಗಳ ಧಾರ್ಮಿಕ ಸಂಭ್ರಮಕ್ಕೆ ಮಂಗಲ ಹಾಡಲಾಯಿತು.

ಬೋರಿವಲಿಯ ಶ್ರೀ ಜಗದೇಶ್ವರಿ ಅಮ್ಮನವರ ಈ ನೂತನ ಮಂದಿರವು ಮುಂದಿನ ದಿನಗಳಲ್ಲಿ ಮುಂಬಯಿ ಕನ್ನಡಿಗರ ಪಾಲಿನ ಸಮೃದ್ಧ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿ ಬೆಳಗುವುದರಲ್ಲಿ ಸಂಶಯವಿಲ್ಲ.




