
ನವಿ ಮುಂಬೈ: ಇಲ್ಲಿನ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸಾನ್ಪಾಡದ ವಾರ್ಡ್ ಸಂಖ್ಯೆ 19ರಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕನ್ನಡಿಗ ಮೂಲದ ಶೈಲಾ ಜೆ. ಪಾಟೀಲ್ ಕುಲಾಲ್ ಅವರು ಭರ್ಜರಿ ಜಯ ದಾಖಲಿಸಿ ನಗರಸೇವಕಿಯಾಗಿ ಆಯ್ಕೆಯಾಗಿದ್ದಾರೆ.

ಸಾನ್ಪಾಡ ಪರಿಸರದಲ್ಲಿ ಸಮಾಜ ಸೇವೆಯ ಮೂಲಕ ಮನೆಮಾತಾಗಿರುವ ಶೈಲಾ ಕುಲಾಲ್ ಅವರು, ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು, ಸಿಂದೆ ಬಣದ ಶಿವಸೇನೆಯ ಪ್ರಬಲ ಅಭ್ಯರ್ಥಿಯನ್ನು ಸುಮಾರು 3,000 ಮತಗಳ ಬೃಹತ್ ಅಂತರದಿಂದ ಸೋಲಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ, ಇವರು ಸೋಲಿಸಿದ ಅಭ್ಯರ್ಥಿಯು ಈ ಹಿಂದೆ ಸತತ ಮೂರು ಬಾರಿ ಗೆಲುವು ಸಾಧಿಸಿದ್ದರು.
ಶೈಲಾ ಕುಲಾಲ್ ಅವರು ನಂದಳಿಕೆಯ ರಮೇಶ್ ಬಂಗೇರ ಹಾಗೂ ಕಡಂದಲೆಯ ವಸಂತಿ ಆರ್. ಬಂಗೇರ ದಂಪತಿಯ ಪುತ್ರಿ. ಕನ್ನಡಿಗರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ತಮ್ಮ ಸೇವಾ ಮನೋಭಾವದ ಮೂಲಕ ಅವರು ಮತದಾರರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯೋತ್ಸವದ ಹಿನ್ನೆಲೆಯಲ್ಲಿ ಮುಂಬೈ ಕುಲಾಲ ಸಂಘದ ವತಿಯಿಂದ ಇತ್ತೀಚೆಗೆ ಶೈಲಾ ಕುಲಾಲ್ ಅವರನ್ನು ಅಭಿನಂದಿಸಲಾಯಿತು. ಸಂಘದ ಗೌರವಾಧ್ಯಕ್ಷರಾದ ದೇವದಾಸ್ ಎಲ್. ಕುಲಾಲ್, ಅಧ್ಯಕ್ಷರಾದ ರಘು ಎ. ಮೂಲ್ಯ ಹಾಗೂ ಜೊತೆ ಕಾರ್ಯದರ್ಶಿ ಲಕ್ಷ್ಮಣ್ ಸಿ. ಮೂಲ್ಯ ಅವರು ವಿಜೇತ ಅಭ್ಯರ್ಥಿಯನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಶೈಲಾ ಕುಲಾಲ್ ಅವರ ತಾಯಿ ವಸಂತಿ ಬಂಗೇರ ಉಪಸ್ಥಿತರಿದ್ದರು.




